ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಚಿನ್ನದ ಕಂಠದ ಗಾಯಕ ಮನ್ನಾಡೇ

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಭಾರತೀಯ ಸಿನಿಮಾರಂಗದ ಮೇರು ಗಾಯಕ ಮನ್ನಾಡೇ ಜನ್ಮದಿನವಿಂದು (ಮೇ 1). ಶ್ರೇಷ್ಠ ಹಿನ್ನೆಲೆ ಗಾಯನದ ಮೂಲಕ ಅವರು ಚಿತ್ರರಸಿಕರ ಮನಸ್ಸಿನಲ್ಲಿ ನೆಲೆಯಾಗಿದ್ದಾರೆ. ಕನ್ನಡದ ಎಂಟು ಗೀತೆಗಳಿಗೆ ದನಿಯಾಗಿರುವ ಮನ್ನಾಡೇ ಬೆಂಗಳೂರಿನಲ್ಲಿ ನೆಲೆಸಿದ್ದರು. ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ ತಾವು ಹತ್ತಿರದಿಂದ ಕಂಡ ಗಾಯಕನನ್ನು ಸ್ಮರಿಸಿದ್ದಾರೆ.

ನನ್ನ ಬದುಕಿನಲ್ಲಿ ಮಧುರವಾದ ನೆನಪುಗಳನ್ನು ಉಳಿಸಿ ಹೋದ ಹಿರಿಯರಲ್ಲಿ ಮನ್ನಾಡೇ ಪ್ರಮುಖರು. ಬೆಂಗಳೂರಿನ ಕಲ್ಯಾಣ ನಗರದ ಅವರ ಮನೆ ‘ಶ್ರೀರಿತು ಗೋಕುಲಂ’ಗೆ ನಾನು ಅನೇಕ ಸಲ ಹೋಗಿದ್ದೇನೆ. ಅವರ ಒಡನಾಟದ ಸವಿಯನ್ನು ಅನುಭವಿಸಿದ್ದೇನೆ. ಅವರ ಕೊನೆಯ ಸಂದರ್ಶನ ಮಾಡಿದ ಭಾಗ್ಯ ಕೂಡ ನನ್ನದು. ಸುಮಾರು ಆರು ವರ್ಷಗಳ ಅವರ ಜೊತೆಗಿನ ನಿಕಟಒಡನಾಟದಲ್ಲಿ ಎಂದಿಗೂ ಅವರು ಮೇರುಗಾಯಕ ಎನ್ನಿಸಲೇ ಇಲ್ಲ. ಸರಳಾತಿ ಸರಳರಾಗಿಯೇ ಗೋಚರಿಸಿದ್ದರು.

ಉತ್ತರ ಕೋಲ್ಕತ್ತಾದ ಸಿಮ್ಲಾ ಸ್ಟ್ರೀಟ್‍ನ ಪೂರ್ಣಚಂದ್ರ – ಮಹಾಮಾಯಿ ದಂಪತಿಗಳ ಪುತ್ರನಾಗಿ ಮನ್ನಾಡೆ ಜನಿಸಿದ್ದು 1919ರ ಮೇ 1ರಂದು. ಅವರ ನಿಜವಾದ ಹೆಸರು ಪ್ರಬೋಧ್‍ಚಂದ್ರ. ಮನೆಯವರು ಪ್ರೀತಿಯಿಂದ ಕರೆದ ಹೆಸರು ‘ಮನ್ನ’ಅದನ್ನೇ ಮನ್ನಾಡೇ ತಮ್ಮ ಹೆಸರನ್ನಾಗಿಸಿಕೊಂಡರು. ಆಕಸ್ಮಿಕ ಅಂಧತ್ವ ಪಡೆದು ಸಂಗೀತವನ್ನೇ ತಮ್ಮ ಉಸಿರನ್ನಾಗಿಸಿ ಕೊಂಡಿದ್ದ ಚಿಕ್ಕಪ್ಪ ಕೃಷ್ಣಚಂದ್ರಡೇ ಅವರ ಸಂಗೀತದ ಗುರುಗಳು. ಅವರನ್ನೇ ಹಿಂಬಾಲಸಿ 1942ರಲ್ಲಿ ಮುಂಬೈಗೆ ಬಂದರು. ಎಸ್.ಡಿ.ಬರ್ಮನ್‍ ಅವರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಅವರೇ ‘ಮಷಾಲ್’ಚಿತ್ರದಲ್ಲಿ ಅವಕಾಶ ನೀಡಿದರು. ಆದರೆ ಮನ್ನಾಡೇಯವರನ್ನು ಹಿಂದಿ ಚಿತ್ರರಂಗ ಗುರುತಿಸಿದ್ದು ‘ಶ್ರೀ420’ ಚಿತ್ರದ ಲತಾ ಮಂಗೇಶ್ಕರ್‍ಅವರ ಜೊತೆ ಹಾಡಿದ ಯುಗಳ ಗೀತೆ ‘ಪ್ಯಾರ್ ಹುವಾ ಇಕ್‍ರಾರ್ ಹುವಾ’ ಮೂಲಕ. ಮುಂದೆ ಸಾಲು ಸಾಲು ಯಶಸ್ವಿ ಗೀತೆಗಳು. ಲತಾ ಅವರೊಂದಿಗೆ 113 ಯುಗಳ ಗೀತೆ ಹಾಡಿದ ಮನ್ನಾಡೇ ಆಶಾ ಭೋಂಸ್ಲೆಯವರೊಂದಿಗೆ 128 ಯುಗಳ ಗೀತೆಗಳನ್ನು ಹಾಡಿದ್ದಾರೆ.

ಮಹಮದ್‍ ರಫಿಯವರೊಡನೆ 58 ಗೀತೆಗಳನ್ನು ಹಾಡಿದ ವಿಶಿಷ್ಟ ದಾಖಲೆ ಅವರದ್ದು. ರಫಿ ಒಮ್ಮೆ ಪತ್ರಕರ್ತರೊಂದಿಗೆ ಮಾತನಾಡುವಾಗ ‘ನೀವು ನನ್ನ ಗೀತೆಗಳನ್ನು ಕೇಳುತ್ತೀರಿ, ನಾನು ಮನ್ನಾಡೇ ಗೀತೆಗಳನ್ನು ಕೇಳುತ್ತೇನೆ’ಎಂದು ಹೇಳಿದ್ದುಂಟು. ಶಾಸ್ತ್ರೀಯ ಸಂಗೀತದ ಆಳವಾದ ಅರಿವನ್ನು ಹೊಂದಿದ್ದ ಮನ್ನಾಡೆಯವರ ಕುರಿತು ಶಂಕರ್ -ಜೈಕಿಷನ್‍ ಅವರಿಗೆ ಅಪಾರ ಪ್ರೀತಿ. ‘ಬಸಂತ್ ಬಹಾರ್’ಸಂಗೀತವನ್ನೇ ಆಧರಿಸಿದ್ದ ಚಿತ್ರ. ಇದರಲ್ಲಿ ‘ಕೇತಕೀ ಗುಲಾಬ್‌ ಜೂಹಿ’ಗೀತೆಯನ್ನು ಮನ್ನಾಡೇ ಭೀಮಸೇನ್‍ಜೋಷಿಯವರೊಡನೆ ಹಾಡ ಬೇಕಿತ್ತು. ಅದೊಂದು ಸ್ಪರ್ಧೆಯ ಹಾಡು. ನಾಯಕ ಭರತ್ ಭೂಷಣ್ ಭಾಗವನ್ನು ಹಾಡುತ್ತಿದ್ದ ಮನ್ನಾಡೇ ಈ ಸ್ಪರ್ಧೆಯಲ್ಲಿ ಗೆಲ್ಲಬೇಕಿತ್ತು. ವಿಷಯ ತಿಳಿದ ಮನ್ನಾಡೇ ಎರಡು ತಿಂಗಳು ಕಣ್ಮರೆಯಾಗಿ ಬಿಟ್ಟಿದ್ದರು. ಕೊನೆಗೆ ಭೀಮಸೇನ್‌ ಜೋಷಿಯವರೇ ಒತ್ತಾಯದಿಂದ ಕರೆದುಕೊಂಡು ಬಂದು ಹಾಡಿಸಿದರು. ಕೊನೆಗೂ ಹಾಡು ಸೊಗಸಾಗಿ ಮೂಡಿ ಬಂತು. ಜೋಷಿಯವರು ಮನ್ನಾಡೆಯವರಲ್ಲಿ ‘ನೀವು ಶಾಸ್ತ್ರೀಯ ಸಂಗೀತವನ್ನು ವೃತ್ತಿಯನ್ನಾಗಿಯೇಕೆ ಸ್ವೀಕರಿಸಲಿಲ್ಲ’ಎಂದು ಕೇಳಿದರು. ಇದು ಮನ್ನಾಡೇಯವರಿಗೆ ಪ್ರಿಯವಾದ ಘಟನೆಯಾಗಿತ್ತು.

ಡಾ.ಭೀಮಸೇನ್ ಜೋಷಿ ಅವರೊಂದಿಗೆ ಮನ್ನಾ ಡೇ ಗಾಯನ – ‘ಕೇತಕಿ ಗುಲಾಬ್ ಜೂಹಿ..’

ಮನ್ನಾಡೇಯವರ ಮುಂಬಯಿ ಮನೆ ‘ಆನಂದನ್’ ಸಮೀಪವೇ ಅಮಿತಾಬ್ ಬಚ್ಚನ್‍ ಅವರ ತಂದೆ ಖ್ಯಾತ ಕವಿ ಡಾ.ಹರಿವಂಶರಾಯ್ ಬಚ್ಚನ್‍ ಅವರ ಮನೆ. ಪ್ರತಿ ದಿನ ಅವರು ವಾಕಿಂಗ್ ಹೊಗುವಾಗ ಮನ್ನಾಡೇಯವರ ಮನೆ ಸಮೀಪ ನಿಂತು ರಿಯಾಜ್ ಕೇಳಿಯೇ ಹೋಗುತ್ತಿದ್ದರು. ಇಬ್ಬರಿಗೂ ಪರಸ್ಪರ ಭೇಟಿಯೇ ಇಲ್ಲ. ಮಂದೆ ಅವರ ‘ಮಧುಶಾಲ’ ಧ್ವನಿಮುದ್ರಿಕೆಯಾದಾಗ ಸಂಗೀತ ನಿರ್ದೇಶಕ ಜೈದೀಪ್ ಮಹಮದ್‍ ರಫಿಯವರ ಹೆಸರು ಸೂಚಿಸಿದರು. ಡಾ.ಹರಿವಂಶ್‍ ಖಚಿತವಾಗಿದ್ದರು. ‘ಹಾಡಿಸುವುದಿದ್ದರೆ ಮನ್ನಾಡೇಯವರ ಬಳಿ ಹಾಡಿಸಿ ಇಲ್ಲದಿದ್ದರೆ ಧ್ವನಿಮುದ್ರಿಕೆಯೇ ಬೇಡ’

ಲತಾ ಮಂಗೇಶ್ಕರ್‍ ಅವರೊಂದಿಗೆ ಮನ್ನಾಡೇ ‘ಸೋಚ್‍ಕೆ ಏ ಗಗನ್’ಗೀತೆಯನ್ನು ಹಾಡುತ್ತಿದ್ದರು. ಲತಾ ಧ್ವನಿ ಎತ್ತರಿಸಿದಾಗ ಮನ್ನಾಡೇ ಇದ್ದಕಿದ್ದಂತೆ ಹಾಡುವುದನ್ನು ನಿಲ್ಲಿಸಿದರು. ಎಲ್ಲಿ ತಪ್ಪಿತೋ ಎಂದು ಲತಾ ಗಾಬರಿಯಾದರೆ ಮನ್ನಾಡೇ ಚಪ್ಪಾಳೆ ತಟ್ಟಿ ‘ಎಂತಹ ಸೊಗಸಾದ ಗಾಯನ’ಎಂದರು. ಅದು ಸಹ ಗಾಯಕರ ಕುರಿತು ಅವರಿಗೆ ಇದ್ದ ಆದರ. ಮನ್ನಾಡೇಯವರ ಕಂಠ ಮಂದ್ರದಂತೆ ತಾರಕಕ್ಕೂಒಗ್ಗುತ್ತಿತ್ತು. ‘ಪಡೋಸನ್’ಚಿತ್ರದ ‘ಏಕ್‍ ಚತುರ ನಾರ್‍ ಕರಕೆ ಸಿಂಗಾರ್’ನಂತಹ ಹಾಸ್ಯ ನೆಲೆಯ ಗೀತೆಯಲ್ಲೂ ಮಾಧುರ್ಯವನ್ನು ಅವರು ಬಿಟ್ಟವರಲ್ಲ. ‘ಯೇ ರಾತ್ ಬೀಗಿ ಬೀಗಿ’ (ಚೋರಿಚೋರಿ) ‘ಎ ಹವಾ ಎ ನದೀಕಾ ಕಿನಾರ’(ಘರ್ ಸಂಸಾರ್) ಗೀತೆಗಳಲ್ಲಿ ಅವರು ದೇಸಿ ನೆಲೆಗಳನ್ನು ಸ್ಪರ್ಶಿಸಿದ್ದಾರೆ. ‘ತೀಸರಿ ಕಸಮ್’ಚಿತ್ರದ ‘ಚಲತ್ ಮುಸಾಫಿರ್’ ಪಕ್ಕಾ ಜನಪದ ಶೈಲಿಯ ಹಾಡು. ಇದನ್ನು ಮನ್ನಾಡೇ ಜನಪದ ಗಾಯಕರಂತೆಯೇ ಹಾಡಿದ್ದಾರೆ. ‘ಕಾಬೂಲಿವಾಲಾ’ಚಿತ್ರದ ‘ಏ ಮೇರೆ ಪ್ಯಾರೆ ವತನ್’ ಅರಬ್ಬಿ ಶೈಲಿಯಲ್ಲಿರುವ ಗೀತೆ. ‘ಮೇರಾ ನಾಮ್‌ ಜೋಕರ್‌’ಚಿತ್ರದ ‘ಏ ಭಾಯ್‍ ಝರಾ ದೇಖೆ ಕೋ’ಆ ಕಾಲದ ಪ್ಯೂಷನ್ ಶೈಲಿಯ ಗೀತೆ. ಯಾವ ಮಾದರಿ ಗೀತೆಗಾದರೂ ಅವರ ಕಂಠ ನ್ಯಾಯವನ್ನುಒದಗಿಸುತ್ತಿತ್ತು.

ಯೇ ಮೇರೆ ಪ್ಯಾರೇ ವತನ್‌

ಬಂಗಾಳಿಯ ಮನ್ನಾಡೇ ಪ್ರೀತಿಸಿದ್ದು ಕೇರಳದ ಕಣ್ಣಾನೂರಿನ ಚೆಲುವೆ ಸುಲೋಚನಾ ಅವರನ್ನು. ಪರಿಪೂರ್ಣ ದಾಂಪತ್ಯ ಅವರದು. ತಮ್ಮ ಪ್ರೇಮ ಪ್ರಸಂಗವನ್ನು ಬಣ್ಣಿಸುವುದೆಂದರೆ ಮನ್ನಾಡೇಗೆ ಎಲ್ಲಿಲ್ಲದ ಸಂಭ್ರಮ. ಮಡದಿಗಾಗಿಯೇ ಅವರು ಮಲೆಯಾಳಂನ ‘ಚಮ್ಮೀನ್’ಚಿತ್ರದ ‘ಮಾನಸ ಮೈನೆ ವರೂ ಮಧುರಂ’ಗೀತೆಯನ್ನು ಒಪ್ಪಿಕೊಂಡು ಹಾಡಿದ್ದರು. ತಮ್ಮಕಾರ್ಯಕ್ಷೇತ್ರ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದೂ ಕೂಡ ತಮ್ಮ ನೆಚ್ಚಿನ ಮಡದಿಯ ಇಚ್ಚೆಯಂತೆಯೇ. ಕನ್ನಡದಲ್ಲಿಯೂ ಮನ್ನಾಡೆ ಎಂಟು ಚಿತ್ರಗಳಿಗೆ ಹಾಡಿದ್ದಾರೆ. ಅವುಗಳಲ್ಲಿ ‘ಕಲಾವತಿ’ಚಿತ್ರದ ‘ಕುಹೂ ಕುಹೂ’ಮತ್ತು ‘ಕಲ್ಪವೃಕ್ಷ’ಚಿತ್ರದ ‘ಜಯತೇ ಜಯತೇ’ಗೀತೆಗಳು ಜನಪ್ರಿಯವೂ ಆಗಿದೆ. ಬೆಂಗಳೂರಿನಲ್ಲಿ ಇದ್ದಾಗಲೇ ಅವರಿಗೆ 2007ರಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಬಂದಿತು. ಇಡೀ ಜಗತ್ತಿನ ಮಾಧ್ಯಮವೇ ತಮ್ಮ ಮನೆ ಎದುರು ಬಂದರೂ ಆಗಲೂ ಮನ್ನಾಡೇ ನಿರ್ಲಿಪ್ತರು. ಇದ್ಯಾರೂ ಸಂದರ್ಶನ ಕೇಳ್ತಾ ಇದ್ದಾರೆ? ಹೇಗೆ ಈ ಪತ್ರಿಕೆ ಎಂದು ಅವರು ವಿಚಾರಿಸುತ್ತಾ ಇದ್ದ ರೀತಿ ನನ್ನ ಮನದಲ್ಲಿ ಉಳಿದು ಬಿಟ್ಟಿದೆ.

ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಅವರ ಜೊತೆ ಹೋಗಿದ್ದೆ.  ರಾಜಭವನ ರಸ್ತೆಯನ್ನು ಅವರು ಕಾರ್ ಪ್ರವೇಶಿಸಿದಾಗ ‘ಸಾರ್‍ ಆಕಾಶವಾಣಿಗೆ ನಿಮ್ಮದೊಂದು ಸಂದರ್ಶನ ಮಾಡ ಬೇಕು, ಒಂದು ದಿನ ಸಮಯಕೊಡಿ’ ಎಂದೆ. ಒಂದು ದಿನ ಏಕೆ ಎನ್ನುತ್ತಲೇ ಡ್ರೈವರ್‍ಗೆ ಹೇಳಿ ಕಾರನ್ನುಆಕಾಶವಾಣಿಗೆ ನುಗ್ಗಿಸಿಯೇ ಬಿಟ್ಟರು. ಅಲ್ಲಿನ ನಿಲಯ ನಿರ್ದೇಶಕರಿಗೆ ಅಚ್ಚರಿ ಮತ್ತು ಆತಂಕ. ಅಂತಹ ಮೇರು ಗಾಯಕನನ್ನು ಕರೆತರುವ ಮೊದಲು ಔಪಚಾರಿಕ ವಿಧಿ ಪೂರೈಸ ಬೇಕಿತ್ತು ಎಂಬ ತಕರಾರು ಕೂಡ. ಆದರೆ ಮನ್ನಾಡೆ ಎಂದಿನಂತೆ ನಿರ್ಲಿಪ್ತರು. ಅಂದಿನ ಸಂದರ್ಶನ ನಿರ್ಮಲ ನದಿಯ ಹಾಗೆ ಎಷ್ಟು ಸರಳ, ಸಹಜವಾಗಿ ಬಂತು ಎಂದರೆ ಇಂದಿಗೂ ಅದು ಅತ್ಯುತ್ತಮ ಸಂದರ್ಶನಗಳಲ್ಲಿ ಒಂದು ಎನ್ನಿಸಿ ಕೊಂಡಿದೆ.

ಕಲಾವತಿ’ ಚಿತ್ರದ ಮನ್ನಾ ಡೇ ಗೀತೆ – ‘ಕುಹೂ ಕುಹೂ’

ಸದಾ ಉತ್ಸಾಹದ ಬುಗ್ಗೆಯಾಗಿದ್ದ ಮನ್ನಾಡೆ 2012ರಲ್ಲಿ ಮಡದಿಯ ಅಗಲುವಿಕೆಯ ನಂತರ ಕುಗ್ಗಿದರು. ಆರೋಗ್ಯ ಕೈಕೊಡಲು ಆರಂಭಿಸಿತು. ಅದೇ ವರ್ಷದ ಡಿಸಂಬರ್‍ನಲ್ಲಿ ಒಂದು ಸುದೀರ್ಘ ಸಂದರ್ಶನ ಮಾಡಿದೆ. ‘ರಾಷ್ಟ್ರಕವಿ ಕುವೆಂಪು ಅವರ ಗೀತೆಯನ್ನು ಹಾಡಿದ ಧನ್ಯತೆ’ ಎಂದೇ ಅವರು ಮಾತನ್ನು ಆರಂಭಿಸಿದ್ದರು. ಕನ್ನಡದ ನೆಲ ಅವರಿಗೆ ಸಂತೋಷವನ್ನು ಕೊಟ್ಟಿತ್ತು. ಸಾಕಷ್ಟು ಇದರ ಕುರಿತು ಮಾತನಾಡಿದ್ದರು. ಸಂಗೀತದ ಕುರಿತ ಅವರ ಹಸಿವು ಇನ್ನೂ ತೀವ್ರವಾಗಿಯೇ ಇತ್ತು. ಆದರೆ ಕೆಲವು ಅಂಶಗಳು ಇನ್ನಷ್ಟು ಸ್ಪಷ್ಟವಾಗಬೇಕು ಎಂದುಅವರಿಗೆ ಅನ್ನಿಸಿತ್ತು. ‘ಈಗ ಪ್ರಕಟಿಸಬೇಡ, ಇನ್ನೊಂದು ದಿನ ಮತ್ತಷ್ಟು ಹೊತ್ತು ಹೀಗೆ ಕುಳಿತು ಕೊಳ್ಳೋಣ’ಎಂದರು. ಆ ಮತ್ತೊಂದು ದಿನ ಬರಲೇ ಇಲ್ಲ. ಕೊನೆಗೆ ಇನ್ನು ಕಾಯವುದು ಬೇಡ ಎನ್ನಿಸಿ ವಿಜಯವಾಣಿಯಲ್ಲಿ ಅದನ್ನು ಪ್ರಕಟಿಸಿದೆ. ದುರಾದೃಷ್ಟವಶಾತ್ ಈ ಅಪೂರ್ಣ ಸಂದರ್ಶನವೇ ಅವರ ಕೊನೆಯ ಸಂದರ್ಶನ ಕೂಡ ಆಗಿತ್ತು. ಮುಂದೆ ಆಸ್ಪತ್ರೆ ಸೇರುವುದು ಬರುವುದು ನಡೆದೇ ಇತ್ತು. ಕೊನೆಗೆ 2013ರ ಅಕ್ಟೋಬರ್ 24ರಂದು ಅವರ ಇಹ ಬದುಕಿನ ಯಾತ್ರೆ  ಮುಗಿಯಿತು. ಬಾಲಿವುಡ್‍ನ ಸುವರ್ಣಯುಗದ ಕೊನೆ ಕೊಂಡಿಯಂತಿದ್ದ ಮನ್ನಾಡೇಯವರನ್ನು ಕೊನೆ ದಿನಗಳಲ್ಲಿ ನೋಡಿದ ಸಂತೃಪ್ತಿ ನನ್ನದು. ರಫಿ –ಕಿಶೋರ್ – ಮುಕೇಶ್‍ಎಲ್ಲರೂ ಹಾಡಿನಿಂದ ಮಾತ್ರ ಪರಿಚಿತರು. ನಿಜ ಜೀವನದಲ್ಲಿ ನಮ್ಮ ಪಾಲಿಗೆ ದೂರದ ನಕ್ಷತ್ರವಾಗಿದ್ದರು. ಅದೇ ಸಾಲಿನಲ್ಲಿ ನಿಲ್ಲುವ ಮನ್ನಾಡೆ ನನ್ನ ಪಾಲಿಗೆ ‘ಭುವಿಗಿಳಿದ ನಕ್ಷತ್ರ’ವಾಗಿದ್ದರು.

‘ಮಾರ್ಗದರ್ಶಿ’ ಕನ್ನಡ ಚಿತ್ರದಲ್ಲಿನ ಮನ್ನಾ ಡೇ ಗೀತೆ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮರೆಯಲಾಗದ ಮೊಗ್ಯಾಂಬೋ!

ಪದವಿ ಮುಗಿಸಿದ ಅಮರೀಶ್ ಪುರಿ ಸಿನಿಮಾ ಸೇರಬೇಕೆಂದು ಮುಂಬಯಿಗೆ ತೆರಳಿದರು. ಆ ವೇಳೆಗಾಗಲೇ ಅವರ ಹಿರಿಯ ಸಹೋದರ ಮದನ್ ಪುರಿ

ಸ್ವರ ಸಾಮ್ರಾಟ್ ವಿಜಯಭಾಸ್ಕರ್

(ಬರಹ: ಎನ್.ಎಸ್.ಶ್ರೀಧರ ಮೂರ್ತಿ, ಲೇಖಕ) ಕನ್ನಡದ ಸಂಗೀತ ನಿರ್ದೇಶಕರಲ್ಲಿ  ಅತಿ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ ಇಳಯ ರಾಜಾ ಅವರಿಗಿಂತ

Exit mobile version