ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಭಾರತೀಯ ಸಿನಿಮಾದ ಜನಕ ದಾದಾ ಸಾಹೇಬ್ ಫಾಲ್ಕೆ

ಪೋಸ್ಟ್ ಶೇರ್ ಮಾಡಿ

ಭಾರತೀಯ ಸಿನಿಮಾಗೆ ಚಾಲನೆ ಸಿಕ್ಕಿದ್ದು ‘ರಾಜಾ ಹರಿಶ್ಚಂದ್ರ’ (1913) ಮೂಕಿ ಚಿತ್ರದೊಂದಿಗೆ. ಈ ಚಿತ್ರ ತಯಾರಿಸಿದ ದಾದಾ ಸಾಹೇಬ್ ಫಾಲ್ಕೆ ಅವರನ್ನು ಭಾರತೀಯ ಸಿನಿಮಾದ ಜನಕ ಎಂದು ಸ್ಮರಿಸಲಾಗುತ್ತದೆ. ಮಹಾರಾಷ್ಟ್ರದ ತ್ರಿಂಬಕ್‌ನಲ್ಲಿ ಜನಿಸಿದ ದುಂಡಿರಾಜ್ ಗೋವಿಂದ್ ಫಾಲ್ಕೆ ಬಾಲ್ಯದಲ್ಲೇ ಫೋಟೋಗ್ರಫಿಯಲ್ಲಿ ಆಸಕ್ತರಾಗಿದ್ದರು. ಓದಿದ್ದು ಎಂಜಿನಿಯರಿಂಗ್ ಮತ್ತು ವಾಸ್ತುಶಾಸ್ತ್ರ. ಕೆಲವು ವರ್ಷ ಪ್ರಿಂಟಿಂಗ್ ಪ್ರೆಸ್ ನಡೆಸಿದ ಅವರು ಖ್ಯಾತ ಚಿತ್ರಕಲಾವಿದ ರಾಜಾ ರವಿವರ್ಮ ಅವರೊಂದಿಗೂ ಕೆಲಸ ಮಾಡಿದರು. ಅವರ ಸಿನಿಮಾ ಕನಸಿಗೆ ಕಾರಣವಾಗಿದ್ದು ‘ದಿ ಲೈಫ್ ಆಫ್ ದಿ ಕ್ರೈಸ್ಟ್’ (1910) ಮೂಕಿ ಸಿನಿಮಾ.

ಆ ವೇಳೆಗೆ ರಂಗಭೂಮಿಯಲ್ಲಿ ಸೆಟ್ ಡಿಸೈನರ್ ಮತ್ತು ಪೇಂಟರ್ ಅಗಿ ಕೆಲಸ ಮಾಡುತ್ತಿದ್ದ ಅವರು ಸಿನಿಮಾ ಬಗ್ಗೆ ಕಲಿಯಲು ಲಂಡನ್‌ಗೆ ತೆರಳಿದರು. ಅಲ್ಲಿ ಬ್ರಿಟಿಷ್ ನಿರ್ದೇಶಕ, ನಿರ್ಮಾಪಕ ಸೆಸಿಲ್ ಹೋಪ್‌ವರ್ಥ್‌ ಅವರಲ್ಲಿ ಸಿನಿಮಾ ಕಲೆಯ ಬಗ್ಗೆ ಅವರಿಗೆ ತರಬೇತಿ ಸಿಕ್ಕಿತು. ಭಾರತಕ್ಕೆ ಮರಳಿ 1912ರಲ್ಲಿ ಅವರು ‘ರಾಜಾ ಹರಿಶ್ಚಂದ್ರ’ ಮೂಕಿ ಸಿನಿಮಾ ಆರಂಭಿಸಿದರು. ತಾಂತ್ರಿಕ ಅನುಕೂಲತೆಗಳಿಲ್ಲದ ಆ ದಿನಗಳಲ್ಲಿ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಯ್ತು. ತಾವೇ ಸ್ವತಃ ಸೆಟ್ ನಿರ್ಮಿಸಿ ಏಳೂವರೆ ತಿಂಗಳುಗಳ ಕಾಲ ಚಿತ್ರೀಕರಣ ನಡೆಸಿದರು. ಚಿತ್ರಕಥೆ, ಸಂಕಲನ, ಮೇಕಪ್, ವಸ್ತ್ರವಿನ್ಯಾಸ… ಹೀಗೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದರು. 1913ರಲ್ಲಿ ಸಿನಿಮಾ ಬಿಡುಗಡೆಯಾಯ್ತು. ಭಾರತೀಯ ಚಿತ್ರರಂಗದ ಪಾಲಿಗೆ ಅದು ಸುವರ್ಣ ಕ್ಷಣ.

ಮೋಹಿನಿ ಭಸ್ಮಾಸುರ, ಸತ್ಯವಾನ್ ಸಾವಿತ್ರಿ, ಲಂಕಾ ದಹನ, ಶ್ರೀ ಕೃಷ್ಣ ಜನ್ಮ, ಕಾಲಿಯಾ ಮರ್ದನ್, ಬುದ್ಧದೇವ್, ಸೇತು ಬಂಧನ್, ಗಂಗಾವತರಣ್.. ಅವರ ನಿರ್ದೇಶನ, ನಿರ್ಮಾಣದ ಕೆಲ ಪ್ರಮುಖ ಚಿತ್ರಗಳು. ಹತ್ತೊಂಬತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಫಾಲ್ಕೆ 90ಕ್ಕೂ ಹೆಚ್ಚು ಸಿನಿಮಾಗಳು, 25ಕ್ಕೂ ಹೆಚ್ಚು ಕಿರುಚಿತ್ರಗಳನ್ನು ತಯಾರಿಸಿದ್ದಾರೆ. ಭಾರತೀಯ ಸಿನಿಮಾಗೆ ನಾಂದಿ ಹಾಡಿದ ಫಾಲ್ಕೆ ಅವರ ಸ್ಮರಣಾರ್ಥ 1969ರಿಂದೀಚೆಗೆ ಸಿನಿಮಾರಂಗದ ಅತ್ಯುನ್ನತ ಸಾಧಕರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಕೊಡಲಾಗುತ್ತಿದೆ.

ದಾದಾ ಸಾಹೇಬ್ ಫಾಲ್ಕೆ | ಜನನ: 30/04/1870 | ನಿಧನ: 16/02/1944

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸ್ವರ ಸಾರ್ವಭೌಮ ‘ಟಿ.ಜಿ.ಲಿಂಗಪ್ಪ’

ಶಾಸ್ತ್ರೀಯ ಸಂಗೀತದ ಅಪಾರ ಅಭಿಮಾನಿಯಾಗಿದ್ದರೂ ಜಗತ್ತಿನ ವಿಭಿನ್ನ ಶೈಲಿಯ ಸಂಗೀತದ ಪರಿಚಯ ಟಿ.ಜಿ.ಲಿಂಗಪ್ಪ ಅವರಿಗಿತ್ತು. ಅದರಲ್ಲೂ ಲ್ಯಾಟಿನ್‌ ಅಮೆರಿಕಾದ ಬುಡಕಟ್ಟು

ಕಂಚಿನಕಂಠದ ನಟ ಅರಸ್

ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ