ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಡಮ್ಮಿ’ ಜೊತೆ ನಿಜ ಕಲ್ಲುಗಳನ್ನೂ ಬೀಸಿದರು!

ಪೋಸ್ಟ್ ಶೇರ್ ಮಾಡಿ
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಕಥಾವಸ್ತುವಿನ ದೃಷ್ಟಿಯಿಂದ ಮಹತ್ವದ ಚಿತ್ರವಾಗಿ ದಾಖಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ನಟ-ನಟಿಯರ ಜೊತೆ ಸ್ಥಳೀಯರೂ ಪಾತ್ರಧಾರಿಗಳಾಗಿದ್ದಾರೆ. ಅಂಥದ್ದೊಂದು ಸನ್ನಿವೇಶ ಚಿತ್ರಿಸುವಾಗ ನಡೆದ ಅಚಾತುರ್ಯವನ್ನು ಚಿತ್ರಕ್ಕೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಪ್ರಗತಿ ಅಶ್ವತ್ಥ ನಾರಾಯಣ ಅವರು ನೆನಪು ಮಾಡಿಕೊಂಡಿದ್ದಾರೆ.

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ (1977) ಕನ್ನಡದ ಗಮನಾರ್ಹ ಚಿತ್ರಗಳಲ್ಲೊಂದು. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿಯನ್ನು ಆಧರಿದ ಪ್ರಯೋಗ. ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ದಿಟ್ಟ ಕಥಾವಸ್ತು. ಅತ್ಯಂತ ಶ್ರಮವಹಿಸಿ ಬಹುನಿರೀಕ್ಷೆಯಿಂದ ನಿರ್ಮಿಸಿದ ಚಿತ್ರಕ್ಕೆ ಅದೇಕೋ ಪ್ರೇಕ್ಷಕರ ಬೆಂಬಲ ಸಿಗಲಿಲ್ಲ. ಆದರೆ ವಿಶಿಷ್ಠ ಕಥಾವಸ್ತು, ದಿಟ್ಟ ಪ್ರಯೋಗವಾಗಿ ದಾಖಲಾಗಿದೆ.

ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಬಹಳಷ್ಟು ಕಲಾವಿದರಿಗೆ ಇದು ಚೊಚ್ಚಲ ಸಿನಿಮಾ. ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಕತೆ. ಅದಕ್ಕೆ ತಕ್ಕಂತಹ ಪರಿಸರ, ವೇಷಭೂಷಣದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿತ್ತು. ಇನ್ನು ಚಿತ್ರದ ಹತ್ತಾರು ದೃಶ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರ ಉಪಸ್ಥಿತಿ ಇರಬೇಕಿತ್ತು. ಆಗೆಲ್ಲಾ ನಿರ್ದೇಶಕ ಸಿದ್ದಲಿಂಗಯ್ಯನವರು ಗ್ರಾಮದಲ್ಲಿನ ಸ್ಥಳೀಯರನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು.

ಚಿತ್ರದಲ್ಲೊಂದು ಸನ್ನಿವೇಶವಿದೆ. ಓರ್ವ ಶ್ರೀಮಂತ ಹಾಗೂ ಸಂಗೀತಗಾರನೊಬ್ಬನ ಮಧ್ಯೆ ಹಣ ಹೆಚ್ಚೋ?  ಸಂಗೀತ ಹೆಚ್ಚೋ? ಎನ್ನುವ ವಾದ ಶುರುವಾಗುತ್ತದೆ. ಶ್ರೀಮಂತ ತನ್ನ ಮನೆಗೆ ಬರುವ ಪ್ರತಿಯೊಬ್ಬರಿಗೂ ಒಂದೊಂದು ರೂಪಾಯಿ ಕೊಡುವುದಾಗಿಯೂ, ಸಂಗೀತ ಕೇಳಲು ಇಚ್ಛಿಸುವವರು ಸಂಗೀತಗಾರನ ಮನೆಗೆ ಹೋಗಿ ಸಂಗೀತ ಕೇಳಬಹುದು ಎಂದು ಹಳ್ಳಿಯಲ್ಲಿ ಡಂಗೂರ ಹೊಡೆಸುತ್ತಾನೆ.

ಶ್ರೀಮಂತನ ಮನೆಮುಂದೆ ಜನಸಾಗರವೇ ಸೇರುತ್ತದೆ. ಸಂಗೀತಗಾರನ ಮನೆಗೆ ಯಾರೂ ಹೋಗುವುದಿಲ್ಲ. ಧನಿಕನ ಮನೆಗೆ ಬಂದ ಜನರು ಒಂದೊಂದು ರೂಪಾಯಿ ಕೊಡುವಂತೆ ಕೇಳುತ್ತಾರೆ. ಆದರೆ ಧನಿಕ ಹಣ ನೀಡದೆ, “ನಾನು ನನ್ನ ಹಣವೇ ದೊಡ್ಡದು ಎಂದು ಸಂಗೀತಗಾರನಿಗೆ ಮನವರಿಕೆ ಮಾಡಿಕೊಡಲು ಹೀಗೆ ಮಾಡಿದೆ.  ನಿಮೆಗೆಲ್ಲಾ ಹಣ ಕೊಡಲು ಸಾದ್ಯವಿಲ್ಲ” ಎಂದು ಹೇಳುತ್ತಾನೆ. ಆಗ ರೊಚ್ಚಿಗೆದ್ದ ಜನರು ಶ್ರೀಮಂತನಿಗೆ ಹಾಗೂ ಅಲ್ಲಿಗೆ ಬಂದಿದ್ದ ಅಮಲ್ದಾರನಿಗೂ ಕಲ್ಲುಗಳಿಂದ ಹೊಡೆಯುವ ಸನ್ನಿವೇಶ ಅದು. ಈ ಸನ್ನಿವೇಶಕ್ಕಾಗಿ ಕಲ್ಲಿನಂತೆ ಕಾಣುವ ಪೇಪರ್‌ ಮೌಲ್ಡ್‌ ಮಾಡಿಸಿ ಜನರ ಮಧ್ಯೆ ಅಲ್ಲಲ್ಲಿ ಇಡಲಾಗಿತ್ತು. ನಿರ್ದೇಶಕರು ಆಕ್ಷನ್ ಹೇಳಿದಾಕ್ಷಣ ಜನರು ಸನ್ನದ್ಧರಾದರು. ಉತ್ಸಾಹದಲ್ಲಿದ್ದ ಅವರು ಪೇಪರ್ ಮೌಲ್ಡ್‌ನ ‘ಡಮ್ಮಿ’ ಕಲ್ಲುಗಳ ಜೊತೆಗೆ ಅಲ್ಲಲ್ಲಿ ಸಿಕ್ಕ ನಿಜವಾದ ಕಲ್ಲುಗಳನ್ನೂ ಬೀಸತೊಡಗಿದರು! ಅನಾಹುತದ ಸೂಚನೆ ಸಿಗುತ್ತಿದ್ದಂತೆ ನಿರ್ದೇಶಕ ಸಿದ್ದಲಿಂಗಯ್ಯ ‘ಕಟ್‌’ ಹೇಳಿದರು. ನಂತರ ಅಲ್ಲಿದ್ದ ನಿಜವಾದ ಕಲ್ಲುಗಳನ್ನೆಲ್ಲಾ ಆರಿಸಿ ದೂರಕ್ಕೆ ಎಸೆಯಲಾಯ್ತು. ಮತ್ತೊಮ್ಮೆ ‘ಡಮ್ಮಿ’ ಕಲ್ಲುಗಳನ್ನು ಹಾಕಿ, ಅವನ್ನಷ್ಟೇ ಎಸೆಯುವಂತೆ ಜನರಿಗೆ ತಿಳಿಸಿ ಚಿತ್ರೀಕರಣ ನಡೆಸಲಾಯಿತು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಶಶಿ ಸಾಬ್ ಪಕ್ಕ ಕುಳಿತ ರೋಮಾಂಚನ!

ಕನ್ನಡದ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜ್‌ ವೃತ್ತಿಬದುಕಿನ ಆರಂಭದಲ್ಲಿ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದರು. ಆಗೊಮ್ಮೆ ನಟ ಶಶಿಕಪೂರ್‌ ಅವರೊಂದಿಗೆ

ಪ್ರಕಾಶ್ ರೈ ಮೇಷ್ಟ್ರಾಗಿದ್ದು!

ಹಾಗೆ ನೋಡಿದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಕಾಶನಿಗೂ ಮಲಯಾಳಂ ಸರಿಯಾಗಿ ಗೊತ್ತಿಲ್ಲ. ಆದರೆ ಭಾಷೆಯ ಬಗ್ಗೆ ತಿಳಿವಳಿಕೆ ಇತ್ತಷ್ಟೆ. ನಟಿ

ಡೆಲ್ಲಿ ಪೂರಾ ಸುತ್ನಾ..!

ಆಟೋ ಹತ್ತಿ ಕುಳಿತ ನಂತರ ವಜ್ರಮುನಿ, `ಸಾಠ್ ಅಂದರೆ ಎಷ್ಟೋ?’ ಎಂದು ತನ್ನ ಜತೆಗಿದ್ದವರನ್ನು ಕೇಳಿದ್ದಾನೆ. ಅರವತ್ತು ಎಂದು ಗೊತ್ತಾಗುತ್ತಿದ್ದಂತೆ