(ಬರಹ: ಎನ್.ಎಸ್.ಶ್ರೀಧರಮೂರ್ತಿ)
ಇವರು ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ದಲ್ಲಿ (1934) ‘ಸುಲೋಚನೆ’ಯ ಪಾತ್ರ ವಹಿಸಿದ್ದ, ಅಂದರೆ ಕನ್ನಡದ ಮೊದಲ ನಾಯಕಿ ತ್ರಿಪುರಾಂಬಾ. ಇವರ ಕುರಿತಂತೆ ನಮಗೆ ಮಾಹಿತಿ ಸಿಕ್ಕಿದ್ದು ತೀರಾ ಇತ್ತೀಚೆಗೆ. ಬೆಳ್ಳಾವೆ ನರಹರಿ ಶಾಸ್ತ್ರಿಗಳ 1938ರಲ್ಲಿ ಅಚ್ಚಾದ ‘ಕನ್ನಡ ರಂಗ ಕಲಾವಿದರು’ ಕೃತಿಯಲ್ಲಿ ಒಂದಿಷ್ಟು ಸುಳಿವು ಸಿಕ್ಕಿತು. ಅದರ ಜಾಡು ಹಿಡಿದು ಹುಡುಕಿದಾದ, ಇವರು ಕನ್ನಡದ ಖ್ಯಾತ ಸಂಗೀತಗಾರ ಶಂಕರಶಾಸ್ತ್ರಿಗಳ ಮಗಳು. 1910ರ ಜುಲೈ 17ರಂದು ಜನಿಸಿದರು. ಮೂಲತಃ ಗಾಯಕರು. ‘ಸತಿ ಸುಲೋಚನಾ’ ಮಾತ್ರವಲ್ಲದೆ ‘ಪುರಂದರ ದಾಸ’ ಕನ್ನಡ ಚಿತ್ರ ಮತ್ತು ಎರಡು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 1938ರಲ್ಲಿ ತಬಲಾ ವಾದಕ ವೇಣುಗೋಪಾಲ್ ಅವರನ್ನು ವಿವಾಹವಾಗಿ ಸೇಲಂನಲ್ಲಿ ನೆಲೆ ನಿಂತರು. ಅಲ್ಲಿಂದ ಮುಂದೆ ಚಿತ್ರರಂಗ ಬಿಟ್ಟರು. 1979ರಲ್ಲಿ ನಿಧನರಾದರು.
