
ಚಿತ್ರಸಾಹಿತಿ
ಹಂಸಲೇಖಾರ ಹಾಡುಗಳಂತೆಯೇ ಅವರಲ್ಲಿನ ಸಾಹಿತ್ಯಜ್ಞಾನ, ವಚನ ಸಾಹಿತ್ಯ, ದಾಸ ಸಾಹಿತ್ಯದ ಮೇಲೆ ಹೊಂದಿದ್ದ ಹಿಡಿತ, ಜಾನಪದ ಪರಿಜ್ಞಾನ, ನೆಲದ ಮಿಡಿತಗಳನ್ನು ಎತ್ತಿ ಹಿಡಿಯುವಂತಹ ವಾದ್ಯಗಳ ಬಗೆಗಿನ ಹಿಡಿತ, ಅವುಗಳನ್ನು ತಮ್ಮ ಗೀತೆಗಳಲ್ಲಿ ಬಳಸಿಕೊಳ್ಳುವಲ್ಲಿನ ಜಾಣ್ಮೆ ಮೆಚ್ಚುವಂಥದ್ದು ಹಾಗೂ ಇತರರಿಗೆ ಮಾದರಿಯೂ ಹೌದು.
ಹಂಸಲೇಖಾ ಅವರ ಬಗ್ಗೆ ಧ್ಯಾನಿಸಲು ಕಾರಣಗಳಿವೆ. ಕನ್ನಡ ಚಿತ್ರಗೀತೆಗಳು ತನ್ನದೇ ವೈಶಿಷ್ಯತೆಯನ್ನು ಮರೆದದ್ದು ಈ ಪ್ರತಿಭೆಯ ಮೂಲಕ. ಇವರು ಸಂಗೀತ ನೀಡುವ, ಸಾಹಿತ್ಯ ರಚಿಸುವವರೆಗೆ ಕನ್ನಡ ಚಿತ್ರಗೀತೆಗಳ ಹೊಸತನ ಜನರಿಗೆ ಗೊತ್ತಾಗಿರಲಿಲ್ಲ. ಸಾಮಾನ್ಯ ಜನರ ಆಡುಭಾಷೆಯನ್ನೇ ಹಾಡುಗಳಲ್ಲಿ ತಂದದ್ದು; ಕನ್ನಡ ಜನತೆ ಆವರೆಗೆ ಕೇಳಿರದ ನೆಲದ ಸದ್ದು, ಜನಪದೀಯ ಸ್ಪರ್ಶದ ಹಾಡುಗಳು ಅರಳತೊಡಗಿದ್ದು; ಚಿತ್ರಗಳ ಜೊತೆಜೊತೆಗೆ ಅಂದರೆ ಚಿತ್ರಕತೆಯನ್ನು ಹಾಡಿನ ಮೂಲಕ ಹೇಳುವ ಪರಿಪಾಠ ಆರಂಭವಾಗಿದ್ದು; ಮೊಟ್ಟಮೊದಲ ಬಾರಿಗೆ ಕನ್ನಡಿಗನ ಆಳದ ಲೋಕಕ್ಕೆ ಚಿತ್ರಗೀತೆಗಳು ಬೇರೆಯದೇ ರೀತಿಯಲ್ಲಿ ಲಗ್ಗೆ ಇಟ್ಟದ್ದು; ಕನ್ನಡ ಚಿತ್ರಗಳೆಲ್ಲ ಸಂಗೀತಮಯ, ಸಾಹಿತ್ಯಮಯವಾದದ್ದು; ಇವೆಲ್ಲ ಈಗ ಚರಿತೆಯ ಭಾಗ. ಹಾಗೆಯೇ ಹಂಸಲೇಖಾರು ನಡೆದು ಬಂದ ದಾರಿಯೂ.
1973ರಲ್ಲಿ ‘ತ್ರಿವೇಣಿ’ ಚಿತ್ರಕ್ಕೆ ಹಾಡು ಬರೆಯುವ ಮೂಲಕ ಇಪ್ಪತ್ತೊಂದು ವರ್ಷದ ಹಂಸಲೇಖಾ (ಗೋವಿಂದರಾಜು ಗಂಗರಾಜು) ಚಿತ್ರರಂಗಕ್ಕೆ ಬಂದರು. ಅದೂ ನಿರ್ದೇಶಕ ಎಂ.ಎನ್.ಪ್ರಸಾದ್ ಅವರ ಮೂಲಕ. ಹಳ್ಳಿಗಾಡಿನಿಂದ ಬಂದ ಈ ಪ್ರತಿಭೆಗೆ ಭಾಷೆಯ ಮೇಲೆ ಅಪಾರವಾದ ಹಿಡಿತವಿದ್ದುದರಿಂದ ‘ನೀನಾ ಭಗವಂತ’ ತರಹದ ಹಾಡು ಬರೆಯುವುದು ಕಷ್ಟವಾಗಲಿಲ್ಲ. ‘ತ್ರಿವೇಣಿ’ ಚಿತ್ರಕ್ಕೆ ಈ ಹಾಡಿನ ಜೊತೆಗೆ ಮತ್ತೊಂದು ಗೀತೆಯನ್ನೂ ಬರೆದರೂ ಆಮೇಲೆ ಸುಮಾರು ಒಂದು ದಶಕದಷ್ಟು ಕಾಲ ಯಾವುದೇ ಚಿತ್ರಕ್ಕೆ ಹಾಡು ಬರೆದಿಲ್ಲ ಎಂಬುದು ಅಚ್ಚರಿ ಮೂಡಿಸುವಂಥದ್ದು. ಮತ್ತೆ 1983ರಲ್ಲಿ ‘ನಾನು ನನ್ನ ಹೆಂಡ್ತಿ’ ಚಿತ್ರಕ್ಕೆ ‘ಯಾರೇ ನೀನು ಚೆಲುವೆ… ನಿನ್ನಷ್ಟಕ್ಕೆ ನೀನೇ ಏಕೆ ನಗುವೇ?’ ಎಂಬ ಹಾಡು ಬರೆದರು; ಆ ಹಾಡು ಸೂಪರ್ ಹಿಟ್ ಆಯಿತು. ಅಲ್ಲಿಂದಾಚೆಗೆ ‘ಪ್ರೇಮಲೋಕ’ ಚಿತ್ರವು ಇವರೊಳಗೆ ಗಹನವಾಗಿ ಅಡಗಿದ್ದ ಸಂಗೀತ, ಸಾಹಿತ್ಯದ ಝಲಕನ್ನು ತೋರಿತು; ಅಲ್ಲಿಯವರೆಗೆ ದಾಖಲಾಗದ ಸರಳ ಭಾಷೆ, ವಿಶಿಷ್ಟ ಸಂಗೀತ ಇವರ ಆಳದ ಸಂಗೀತ ಜ್ಞಾನ, ನೇಟಿವಿಟಿ ಪ್ರಜ್ಞೆ ಮತ್ತು ಪದಸಂಪತ್ತನ್ನು ಬಿಚ್ಚಿಟ್ಟವು. ಒಮ್ಮೆಲೇ ಸೆಳೆದುಬಿಡುವ ಗುಣವನ್ನು ಹೊಂದಿದ್ದ ಇವರ ಹಾಡುಗಳು ಕೇಳುಗರನ್ನು ಕಾಡಲಾರಂಭಿಸಿದವು. ಹಾರ್ಮೋನಿಯಂ, ಕೊಳಲು, ಗಿಟಾರ್, ತಬಲಾ ಇತ್ಯಾದಿ ವಾದ್ಯಗಳ ನಾದ ಮತ್ತು ಜನಪದೀಯ ಸ್ಪರ್ಶ ಹಂಸಲೇಖಾರ ಆಂತರ್ಯದ ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳು ಕನ್ನಡಿಗರ ಮೇಲೆ ದಾಳಿ ಮಾಡುವಂತೆ ಮಾಡಿದವು. ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಂಗೀತಗಾರ ಹಾಗೂ ಸಾಹಿತಿ ಏಕವ್ಯಕ್ತಿಯ ಮೂಲಕ ಪಡಿಮೂಡಿ ಸಿನಿಮಾದಂತಹ ಸಾರ್ವತ್ರಿಕ ಮಾಧ್ಯಮದ ಮುಖೇನ ಜನರಲ್ಲಿ ಬೆರಗು, ರೋಮಾಂಚನ ಮೂಡಿಸತೊಡಗಿದವು; ಹಂಸಲೇಖಾರ ವಿಶಿಷ್ಟ ವ್ಯಕ್ತಿತ್ವ ಹಾಡಿನ ಮಾಧ್ಯಮದ ಮೂಲಕ ವಿಸ್ಮಯದಂತೆ ಬಿಚ್ಚಿಕೊಳ್ಳುತ್ತಿದ್ದ ಕಾಲವದು.
ಈ ಮಧ್ಯೆ ಹಾಡುಗಳ ಮಧ್ಯೆ ಒಂದಿಷ್ಟು ಚಿತ್ರಗಳಿಗೆ ಸಂಭಾಷಣೆ ಬರೆಯಲು ಶುರು ಮಾಡಿಕೊಂಡ ಮೇಲೆ ಹಂಸಲೇಖಾ ತಮ್ಮ ಸಮಯ, ದೃಷ್ಟಿ ಹಂಚಿಹೋಗುವ ಅಪಾಯಕ್ಕೆ ದಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕವೂ ಜನರಲ್ಲಿ ಹುಟ್ಟಿಕೊಂಡಿತ್ತು. ಆದರೆ ಹಾಗಾಗಲಿಲ್ಲ. ಮೈಸೂರು ಕಡೆಯ ಈ ಪ್ರತಿಭೆ ತಮ್ಮ ಮನೋಜ್ಞ ಸಾಲುಗಳು ಮತ್ತು ಹೊಸತನದ ನಾದದ ಮೂಲಕ ಹಾಡುಗಳತ್ತಲೇ ಹೆಚ್ಚು ತೊಡಗಿಕೊಂಡರು. ಅವರ ಕ್ರಿಯಾಶೀಲತೆ, ಚಿತ್ರದಿಂದ ಚಿತ್ರಕ್ಕೆ ಮಾಡುತ್ತಿದ್ದ ಪ್ರಯೋಗಗಳು ಇನ್ನಷ್ಟು ಜನಪ್ರಿಯತೆ ತಂದು ಕೊಟ್ಟವು. ಅವರು ಕಟ್ಟುತ್ತಿದ್ದ ಮಟ್ಟುಗಳು ಹಂಸಲೇಖಾರನ್ನು ಜನರ ಪ್ರೀತಿಗೆ ಗುರಿಮಾಡಿದವು, ನಾದಬ್ರಹ್ಮನನ್ನಾಗಿ ಮಾಡಿದವು. ಇಡೀ ಕನ್ನಡಿಗರ ಹೃದಯ ಗೆದ್ದಿದ್ದ ಹಂಸಲೇಖಾ ‘ಪುಟ್ನಂಜ’, ‘ರಾಮಾಚಾರಿ’, ‘ಹಳ್ಳಿ ಮೇಷ್ಟ್ರು’, ‘ರಣಧೀರ’, ‘ಬೆಳ್ಳಿ ಕಾಲುಂಗುರ’, ‘ಆಕಸ್ಮಿಕ’, ‘ಮುಂಜಾನೆಯ ಮಂಜು’, ‘ಒಡಹುಟ್ಟಿದವರು’, ‘ಹಾಲುಂಡ ತವರು’, ‘ಯಾರೇ ನೀನು ಚೆಲುವೆ’, ‘ಅಣ್ಣಯ್ಯ’, ‘ತವರಿಗೆ ಬಾ ತಂಗಿ’, ‘ಸಿಪಾಯಿ’ ಮುಂತಾದ ಚಿತ್ರಗಳಲ್ಲಿ ಅದ್ಭುತ ಸಂಗೀತ, ಸಾಹಿತ್ಯ ನೀಡಿದರು. ದಶಕಗಳ ಕಾಲ ಎಡೆಬಿಡದೆ ಒಂದರ ಹಿಂದೆ ಒಂದು ಹಿಟ್ ಕೊಡುತ್ತಿದ್ದ ಹಂಸಲೇಖಾ ಹಾರ್ಮೋನಿಯಂ ಮಣೆಗಳ ಮೇಲೆ ಬೆರಳಿಟ್ಟರೆ ಸಂಗೀತವಾಗುತ್ತಿತ್ತು, ಹಾಳೆಯ ಮೇಲೆ ಪೆನ್ನಿಟ್ಟರೆ ಸಾಹಿತ್ಯವಾಗುತ್ತಿತ್ತು. ತೀರಾ ಸರಳ, ಸಮೃದ್ಧ ಹಾಡುಗಳ ಮೂಲಕವೇ ಅತ್ಯಂತ ಆರ್ಧ್ರ, ಮೋಹಕ ಮಿಡಿತಗಳನ್ನು ಅಭಿವ್ಯಕ್ತಗೊಳ್ಳುತ್ತಿದ್ದವು.
ಅಪಾರ ಗೆಲುವು, ಸಾರ್ಥಕ ಭಾವನೆಯನ್ನು ನೀಡಿದ ಸಿನಿಮಾರಂಗ ಹಂಸಲೇಖಾರಲ್ಲಿ ಹೊಸ ಅಚ್ಚರಿಯನ್ನೇ ಮೂಡಿಸಿತ್ತು; ಚಿತ್ರರಂಗದ ವಿಚಿತ್ರ ಮೆಂಟಾಲಿಟಿಯೇ ಅವರಲ್ಲಿ ಬೆರಗು ತಂದಿದ್ದವು ಎನ್ನಬಹುದು. ಹೊರಗಿನಿಂದ ಬಣ್ಣಬಣ್ಣವಾಗಿ ಕಾಣುವ ಚಿತ್ರರಂಗ ಒಳಗೆ ಬೇರೆಯದೇ ಆಗಿರುತ್ತದೆ; ವಿಚಿತ್ರ ರೆಡಿಮೇಡ್ ಜಗತ್ತು, ರೆಡಿಮೇಡ್ ಮನಸ್ಥಿತಿ, ವ್ಯಕ್ತಿತ್ವಗಳನ್ನು ರೂಪಿಸುತ್ತದೆ. ಎಲ್ಲರೂ ನಮ್ಮವರು, ಹಾಗೆಯೇ ಯಾರೂ ನಮ್ಮವರಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಎಲ್ಲ ಸಂಬಂಧಗಳೂ ಚೆನ್ನಾಗಿಯೇ ಬೆಸೆದುಕೊಳ್ಳುತ್ತವೆ, ಆದರೆ ಎಲ್ಲವೂ ವ್ಯವಹಾರಿಕವಾಗಿ ಕೊನೆಗೊಳ್ಳುತ್ತವೆ… ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಾರ್ಥಕವಾಗಿ ಜೀವಂತಿಕೆಯನ್ನು ಕಾಯ್ದುಕೊಂಡು ಹಾಡುಗಳನ್ನು ಕೊಡಲು ಪ್ರಯತ್ನಿಸುತ್ತಿದ್ದ ಹಂಸಲೇಖಾ ಹೊಸ ಸಂಗೀತ ನಿರ್ದೇಶಕರ ಪ್ರವೇಶದ ನಂತರ ಸಮಯಸಾಧಕ ಚಿತ್ರರಂಗದವರಿಂದ ತುಸು ಅಸಡ್ಡೆಗೆ ಒಳಗಾಗಿದ್ದೂ ಸುಳ್ಳಲ್ಲ. ಇವರಿಂದ ಸೂಪರ್ ಹಿಟ್ ಹಾಡುಗಳನ್ನು ಪಡೆದು ತಮ್ಮ ಚಿತ್ರಗಳನ್ನು ಗೆಲ್ಲಿಸಿಕೊಂಡಿದ್ದ ಎಷ್ಟೋ ಜನ ನಿರ್ದೇಶಕರು ಬೇರೆ ಬೇರೆ ಸಂಗೀತ ನಿರ್ದೇಶಕರತ್ತ ಕಣ್ಣು ಹೊರಳಿಸಿದರು. ಮೊದಲಿನಷ್ಟೇ ಉತ್ಸಾಹ, ಹೊಸತಿನೆಡೆಗಿನ ಹಂಬಲ, ಮುರಿದು ಕಟ್ಟುವ ಆತ್ಮವಿಶ್ವಾಸ, ಜೀವನ ಸ್ಫೂರ್ತಿ, ಆದಮ್ಯ ಚೈತನ್ಯ ಹೊಂದಿದ್ದ ಹಂಸಲೇಖಾ ಮತ್ತೆ ತಮ್ಮ ಮೊದಲಿನ ವೈಭವದ ಯುಗವನ್ನು ಮರಳಿಸುವುದರಲ್ಲಿ, ತಮ್ಮ ಹಳೆಯ ಚಾರ್ಮನ್ನು, ಫಾರ್ಮ್ ಅನ್ನು ಕಂಡುಕೊಳ್ಳುವಲ್ಲಿ ತುಸು ಪ್ರಯಾಸ ಪಡಬೇಕಾಯಿತು. ಆದರೂ ಹೊಸಬರ ನಡುವೆಯೇ ‘ನೆನಪಿರಲಿ’, ‘ಅಣ್ಣ ತಂಗಿ’ ‘ದಿಗ್ಗಜರು’, ‘ರಾಜಾಹುಲಿ’ ತರಹದ ಚಿತ್ರಗಳ ಹಾಡುಗಳ ಮೂಲಕ ತಮ್ಮೊಳಗಿನ ಕ್ರಿಯೇಟರ್ ಗೆ ಇನ್ನೂ ಯುವತನ ಇರುವುದಾಗಿ ತೋರಿಸಿದ್ದನ್ನು ಇಲ್ಲಿ ನೆನೆಯಬಹುದು.
ಹಂಸಲೇಖಾರ ಬಗ್ಗೆ ಆಲೋಚಿಸುವಾಗ ನಮ್ಮನ್ನು ಅವರ ಈ ಕ್ರಿಯಾಶೀಲತೆ, ಅಗಾಧವಾದ ಅಂತಃಶಕ್ತಿ ಕಾಡುತ್ತದೆ. ಭಾರತೀಯ ಸಿನಿಮಾಗಳಲ್ಲಿ ಹಾಡುಗಳೇ ಪ್ರಧಾನವೆಂದು, ಹಾಡಿಲ್ಲದ ಭಾರತೀಯ ಸಿನಿಮಾ ಬೋರು ಹೊಡೆಸುತ್ತದೆ ಎಂದು ಕೇಳಿದ್ದೇವೆ, ನಂಬಿದ್ದೇವೆ. ಆದರೆ ಹಂಸಲೇಖಾ ತರಹದ ಸಂಗೀತಗಾರರು ಚಿತ್ರದ ಕತೆಯನ್ನು ಹೇಳುವಲ್ಲಿ ಹಾಡುಗಳನ್ನು ಮಾಧ್ಯಮವಾಗಿ ಬಳಸಿಕೊಳ್ಳುವುದು ನಿಜಕ್ಕೂ ಗ್ರೇಟ್; ‘ನಮ್ಮೂರ ಯುವರಾಣಿ ಕಲ್ಯಾಣವಂತೆ’ ಗೀತೆಯಿಲ್ಲದ ‘ರಾಮಾಚಾರಿ’ ಚಿತ್ರವಾಗಲೀ, ‘ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ’ ಹಾಡಿಲ್ಲದ ‘ಪುಟ್ನಂಜ’ ಚಿತ್ರವಾಗಲೀ, ‘ಅಣ್ಣಯ್ಯ ಅಣ್ಣಯ್ಯ ಬಾರೋ’ ಇಲ್ಲದ ‘ಅಣ್ಣಯ್ಯ’ ಸಿನಿಮಾವನ್ನಾಗಲೀ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕೆಂದರೆ ಇವು ಕೇವಲ ಹಾಡುಗಳು ಮಾತ್ರವಲ್ಲದೆ ಚಿತ್ರಕತೆಯೊಂದಿಗೆ ಬೆರೆತು ಸಿನಿಮಾದ ಕತೆಯು ಮುನ್ನಡೆಯಲು, ಕತೆಯ ಆಶಯ ಪ್ರೇಕ್ಷಕನಿಗೆ ಸಮರ್ಪಕವಾಗಿ ತಲುಪುವಲ್ಲಿ ಸಹಕರಿಸುತ್ತವೆ; ಹಂಸಲೇಖಾರ ಹಾಡುಗಳಂತೆಯೇ ಅವರಲ್ಲಿನ ಸಾಹಿತ್ಯಜ್ಞಾನ, ವಚನ ಸಾಹಿತ್ಯ, ದಾಸ ಸಾಹಿತ್ಯದ ಮೇಲೆ ಹೊಂದಿದ್ದ ಹಿಡಿತ, ಜಾನಪದ ಪರಿಜ್ಞಾನ, ನೆಲದ ಮಿಡಿತಗಳನ್ನು ಎತ್ತಿ ಹಿಡಿಯುವಂತಹ ವಾದ್ಯಗಳ ಬಗೆಗಿನ ಹಿಡಿತ, ಅವುಗಳನ್ನು ತಮ್ಮ ಗೀತೆಗಳಲ್ಲಿ ಬಳಸಿಕೊಳ್ಳುವಲ್ಲಿನ ಜಾಣ್ಮೆ ಮೆಚ್ಚುವಂಥದ್ದು ಹಾಗೂ ಇತರರಿಗೆ ಮಾದರಿಯೂ ಹೌದು.
ಕೇವಲ ಮೂರು ದಶಕಗಳಲ್ಲಿ ಮಾನವನ ಅಂತರಂಗದ ಭಾವನೆಗಳನ್ನೆಲ್ಲಾ ಗ್ರಹಿಸಿದ ಈ ಮಹಾನ್ ಕಲಾವಿದ ಅದೆಷ್ಟೋ ಸಂಗೀತ ನಿರ್ದೇಶಕರನ್ನು, ಗಾಯಕ – ಗಾಯಕಿಯರನ್ನು ಬೆಳೆಸಿದರು. ದಂತಕತೆಯಾಗಬೇಕೆಂಬ ಆಸಕ್ತಿಯೂ ಅವರಲ್ಲಿ ಇರಲಿಲ್ಲ, ಜನ ತಮ್ಮನ್ನು ಹೊಗಳಲಿ ಎಂದೂ ಬಯಸಲಿಲ್ಲ, ತಮ್ಮಿಂದ, ತಮ್ಮ ಹಾಡುಗಳಿಂದ ಅಪಾರ ಲಾಭ ಪಡೆದು ತಮ್ಮನ್ನು ದೂರ ಉಳಿಸಿದ ಅದೆಷ್ಟೋ ಚಿತ್ರರಂಗದ ಮಂದಿ ತಮಗೆ ಕೃತಜ್ಞರಾಗಿರಬೇಕೆಂದೂ ಆಸೆ ಪಡಲಿಲ್ಲ. ‘ದೇಸಿ’ ಹೆಸರಿನಲ್ಲಿ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡ ಹಂಸಲೇಖಾ ತಮ್ಮ ಆನಂತರದ ದಿನಗಳ ಶೂನ್ಯವನ್ನು ತುಂಬಿಕೊಂಡು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಹಂಬಲಿಸಿದಂತೆ ಕಂಡಿತು, ತಾವು ಆರಂಭಿಸಿದ ವಿದ್ಯಾಲಯದ ಮೂಲಕ ಮುಂದಿನ ಪೀಳಿಗೆಗೆ, ಮುಂದಿನ ಕರ್ನಾಟಕಕ್ಕೆ ತಮ್ಮೊಳಗಿರುವ ಕಲೆಯನ್ನು ರವಾನಿಸಿ ಹೋಗಬೇಕೆಂದು ತೀರ್ಮಾನಿಸಿದಂತಿತ್ತು.
ಸೋಲು, ಗೆಲುವು ಈ ಎರಡನ್ನೂ ಕಂಡಿರುವ ಹಂಸಲೇಖಾ ಮನಸು ಮಾಡಿದ್ದರೆ ತಮಿಳಿಗೋ, ತೆಲುಗಿಗೋ ಹೋಗಿ ಇನ್ನೂ ಹೆಚ್ಚು ಮಟ್ಟದಲ್ಲಿ ಕೀರ್ತಿ, ಹಣ ಎಲ್ಲವನ್ನೂ ಗಳಿಸಬಹುದಿತ್ತು. ಆದರೆ ಈ ಮಹಾನ್ ಪ್ರತಿಭೆ ಕನ್ನಡವನ್ನೇ ಪ್ರೀತಿಸಿದರು, ಕನ್ನಡಿಗರಿಗೇ ತಮ್ಮ ಕಲೆಯನ್ನು ಮೀಸಲಾಗಿಸಿದರು. ಭ್ರಮೆಗಳ ಬೆನ್ನಟ್ಟಿ ಹೊಗುವುದನ್ನು ಕೈ ಬಿಟ್ಟರು. ಸಾವಿರಾರು ಗೀತೆಗಳನ್ನು ಈ ನಾಡಿಗೆ ಕೊಟ್ಟು, ತಮ್ಮ ಅದ್ಭುತ ಹಿನ್ನೆಲೆ ಸಂಗೀತದ ಮೂಲಕ ಚಿತ್ರದ ಒಂದೊಂದು ದೃಶ್ಯವೂ ಪ್ರೇಕ್ಷಕನ ಎದೆಯಾಳಕ್ಕೆ ಇಳಿಯುವಂತೆ ಮಾಡಿ, ಎಲ್ಲಾ ಜಂಬ, ಹಮ್ಮುಬಿಮ್ಮುಗಳಿಂದ ಮುಕ್ತರಾಗಿ, ಸರಳ ಸಜ್ಜನರಾಗಿ ತಮ್ಮ ವ್ಯಕ್ತಿತ್ವವನ್ನು ಜನರ ಮನಸುಗಳಲ್ಲಿ ದಾಖಲಿಸಿದರು. ಹಂಸಲೇಖಾ ಅವರು ‘ನಂಜುಂಡಿ’ ಚಿತ್ರಕ್ಕೆ ಬರೆದಿದ್ದ ಈ ಕೆಳಗಿನ ಸಾಲುಗಳನ್ನು ನೆನೆಯುತ್ತಾ ಈ ಪುಟ್ಟ ಬರಹಕ್ಕೆ ತೆರೆ ಎಳೆಯೋಣ ಅಲ್ಲವೇ…
ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ
ಪ್ರೀತಿ ಹಂಚಲು…
ಮನಸಿನಿಂದ ಮನಸನು
ಬೆಳಗಬೇಕು ಮಾನವ
ಮೇಲು ಕೀಳು ಭೇದ ನಿಲ್ಲಲು…