ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಸನಾದಿ ಅಪ್ಪಣ್ಣ’ ಸಿನಿಮಾದ ಆತ್ಮ ಬಿಸ್ಮಿಲ್ಲಾ ಖಾನ್ ಎಂದಿದ್ದರು ಡಾ. ರಾಜಕುಮಾರ್

ಪೋಸ್ಟ್ ಶೇರ್ ಮಾಡಿ
ಶಶಿಧರ ಚಿತ್ರದುರ್ಗ
ಪತ್ರಕರ್ತ

ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್‌ ಅವರ ಸಂಸ್ಮರಣಾ ದಿನವಿಂದು (ಆಗಸ್ಟ್‌ 21). ಶಹನಾಯಿ ವಾದ್ಯ ಮತ್ತು ಬಿಸ್ಮಿಲ್ಲಾ ಖಾನ್‌ ಅವರನ್ನು ಕನ್ನಡಿಗರಿಗೆ ಹೆಚ್ಚು ಪರಿಚಯಿಸಿದ ಸಿನಿಮಾ ‘ಸನಾದಿ ಅಪ್ಪಣ್ಣ’ ಎಂದರೆ ಅತಿಶಯೋಕ್ತಿಯಾಗದು. ಬಿಸ್ಮಿಲ್ಲಾ ಖಾನ್‌ರ ವಾದನ ಮತ್ತು ರಾಜಕುಮಾರ್ ಅಮೋಘ ಅಭಿನಯದಿಂದ ಈ ಚಿತ್ರ ಮೈಲುಗಲ್ಲಾಯ್ತು.

ರಾಜಕುಮಾರ್ ಅಭಿನಯದ ‘ಸನಾದಿ ಅಪ್ಪಣ್ಣ’ (1977) ಸಿನಿಮಾ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗುವುದು ಶಹನಾಯಿ ವಾದನ. ಶಹನಾಯಿ ದಂತಕತೆ ಬಿಸ್ಮಿಲ್ಲಾ ಖಾನ್‌ ಅವರ ವಾದನ ಚಿತ್ರವನ್ನು ಬಹುಎತ್ತರಕ್ಕೆ ಕೊಂಡೊಯ್ದಿತ್ತು. ಶಹನಾಯಿ ವಾದನಕ್ಕೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟ ಬಿಸ್ಮಿಲ್ಲಾ ಖಾನ್‌ ವಿವಿಧ ರಾಗಗಳಲ್ಲಿ ‘ಸನಾದಿ ಅಪ್ಪಣ್ಣ’ನಿಗೆ ಶಹನಾಯಿ ನುಡಿಸಿದ್ದಾರೆ. ಬೆಹಾಗ್ ರಾಗದಲ್ಲಿನ ‘ಕರೆದರೂ ಕೇಳದೆ’ ಹಾಡು ಸೇರಿದಂತೆ ಹಿನ್ನೆಲೆಯಲ್ಲಿ ಬಳಕೆಯಾಗುವ ಶಹನಾಯಿ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ.

ಕೃಷ್ಣಮೂರ್ತಿ ಪುರಾಣಿಕ್ ಅವರ ಕೃತಿಯನ್ನಾಧಿರಿಸಿದ ಸಿನಿಮಾ ‘ಸನಾದಿ ಅಪ್ಪಣ್ಣ’. ಹಳ್ಳಿಯೊಂದರ ಶಹನಾಯಿ ವಾದಕ ಅಪ್ಪಣ್ಣನ ವೃತ್ತಿ, ಬದುಕಿನ ಚಿತ್ರಣ ಚಿತ್ರದ ಕಥಾವಸ್ತು. ಮುಖ್ಯಭೂಮಿಕೆಯಲ್ಲಿದ್ದ ಡಾ ರಾಜಕುಮಾರ್ ಮತ್ತು ಜಯಪ್ರದಾ ಅವರ ಉತ್ತಮ ನಟನೆ, ನಿರ್ದೇಶಕ ವಿಜಯ್‌ ಆಕರ್ಷಕ ನಿರೂಪಣೆ, ಜಿ ಕೆ ವೆಂಕಟೇಶ್‌ ಅವರ ಆಪ್ತ ಸಂಗೀತದ ಜೊತೆಗೆ ಥೀಮ್ ಆಗಿ ಬಳಕೆಯಾಗಿದ್ದ ಬಿಸ್ಮಿಲ್ಲಾ ಖಾನ್‌ರ ಶಹನಾಯಿ ವಾದನದಿಂದಾಗಿ ಈ ಸಿನಿಮಾ ಕನ್ನಡ ಚಿತ್ರರಂಗದ ಮೈಲುಗಲ್ಲು ಎನಿಸಿತು.

ಸಿನಿಮಾಗೆ ಶಹನಾಯಿ ನುಡಿಸಲು ಬಿಸ್ಮಿಲ್ಲಾ ಖಾನ್ ಮೊದಲ ಮನವಿಗೆ ಒಪ್ಪಿರಲಿಲ್ಲ. ಪಟ್ಟು ಬಿಡದೆ ವಾರಣಾಸಿಯಲ್ಲಿ ಕೆಲವು ದಿನ ಬೀಡುಬಿಟ್ಟ ನಿರ್ಮಾಪಕ ವಿಕ್ರಂ ಶ್ರೀನಿವಾಸ್‌ ಅವರ ಮನವೊಲಿಸಿದರು. ಬಿಸ್ಮಿಲ್ಲಾ ಖಾನ್ ತಮ್ಮದೊಂದು ಸಂಗೀತಗಾರರ ತಂಡದೊಂದಿಗೆ ಸಿನಿಮಾದ ರೀರೆಕಾರ್ಡಿಂಗ್‌ಗೆಂದು ಚೆನ್ನೈಗೆ ಬಂದಿದ್ದರು. ಅಲ್ಲಿ ಹತ್ತಾರು ದಿನಗಳ ಕಾಲ ರೆಕಾರ್ಡಿಂಗ್‌ನಲ್ಲಿ ಭಾಗವಹಿಸಿದ್ದರು. ‘ನಾನು ರಾಗಗಳನ್ನು ಸಂಪೂರ್ಣವಾಗಿ ನುಡಿಸುತ್ತೇನೆ. ಇದಕ್ಕೆ ನೀವು ಆಕ್ಷೇಪ ಮಾಡುವಂತಿಲ್ಲ. ನೀವು ಅಗತ್ಯಕ್ಕೆ ತಕ್ಕಂತೆ ಚಿತ್ರದಲ್ಲಿ ಅಳವಡಿಸಿ’ ಎಂದು ಬಿಸ್ಮಿಲ್ಲಾ ಖಾನ್ ಅವರು ನಿರ್ದೇಶಕ ವಿಜಯ್ ಮತ್ತು ಸಂಗೀತ ಸಂಯೋಜಕ ಜಿ ಕೆ ವೆಂಕಟೇಶ್ ಅವರಿಗೆ ತಾಕೀತು ಮಾಡಿದ್ದರಂತೆ. ಅದರಂತೆ ಬಿಸ್ಮಿಲ್ಲಾ ಖಾನ್‌ ಅವರ ಪ್ರತಿಭೆಯನ್ನು ನಿರ್ದೇಶಕ ವಿಜಯ್ ಚಿತ್ರದಲ್ಲಿ ಸೊಗಸಾಗಿ ಬಳಕೆ ಮಾಡಿಕೊಂಡರು.

ಉಸ್ತಾದ್ ಬಿಸ್ಮಿಲ್ಲಾ ಖಾನ್‌

‘ಸನಾದಿ ಅಪ್ಪಣ್ಣ’ ಚಿತ್ರಕ್ಕೆ ಬಿಸ್ಮಿಲ್ಲಾ ಖಾನ್ ಅವರು ಶಹನಾಯಿ ನುಡಿಸುತ್ತಾರೆ ಎಂದು ಗೊತ್ತಾದಾಗ ಡಾ ರಾಜ್‌ ತುಂಬಾ ಖುಷಿ ಪಟ್ಟಿದ್ದರು. ತಮ್ಮ ಇತರೆ ಸಿನಿಮಾಗಳ ಚಿತ್ರೀಕರಣವನ್ನು ರದ್ದುಗೊಳಿಸಿ ಬಿಸ್ಮಿಲ್ಲಾ ಖಾನ್‌ರ ರೆಕಾರ್ಡಿಂಗ್‌ನಲ್ಲಿ ಹಾಜರಿರುತ್ತಿದ್ದರು. ಶಹನಾಯಿ ವಾದನವನ್ನು ಆಲಿಸುತ್ತಾ, ಗಾಯಕನ ಹಾವ-ಭಾವ ಅಭ್ಯಸಿಸಿದ್ದರು. ಇದರಿಂದಾಗಿ ಚಿತ್ರದಲ್ಲಿ ಪಾತ್ರದ ಅಭಿವ್ಯಕ್ತಿ ಮನಮುಟ್ಟುವಂತೆ ಮೂಡಿಬಂದಿತ್ತು.

ಬೆಂಗಳೂರಿನ ‘ಊರ್ವಶಿ’ ಚಿತ್ರಮಂದಿರಲ್ಲಿ ನಡೆದ ‘ಸನಾದಿ ಅಪ್ಪಣ್ಣ’ ಶತದಿನೋತ್ಸವ ಸಮಾರಂಭಕ್ಕೆ ಬಿಸ್ಮಿಲ್ಲಾ ಖಾನ್ ಆಗಮಿಸಿದ್ದರು. ಡಾ ರಾಜಕುಮಾರ್ ಪಾತ್ರವನ್ನು ಮೆಚ್ಚಿ ಮಾತನಾಡಿದ್ದ ಅವರು, ‘ರಾಜಕುಮಾರ್ ಅವರ ತನ್ಮಯತೆಯಿಂದ ತುಂಬಾ ಪ್ರಭಾವಿತನಾಗಿದ್ದೇನೆ. ತೆರೆ ಮೇಲೆ ನೋಡುವಾಗ ಅವರೇ ಶಹನಾಯಿ ನುಡಿಸುತ್ತಿದ್ದಂತೆ ಭಾವಿಸಿದೆ’ ಎಂದಿದ್ದರು. ಮುಂದೆ ಡಾ ರಾಜಕುಮಾರ್ ಮಾತನಾಡುತ್ತಾ, ‘ಇಲ್ಲಿ ನಾವು ಪಾತ್ರಗಳಷ್ಟೆ. ಬಿಸ್ಮಿಲ್ಲಾ ಖಾನ್‌ರ ವಾದನವೇ ಚಿತ್ರದ ಆತ್ಮ’ ಎಂದು ನುಡಿನಮನ ಸಲ್ಲಿಸಿದ್ದರು. ಹಿರಿಯ ಪತ್ರಕರ್ತ ರುಕ್ಕೋಜಿ ರಾವ್‌ ಅವರು, ‘ಇವರಿಬ್ಬರ ಸಂಗಮದಿಂದ ಸನಾದಿ ಅಪ್ಪಣ್ಣ ಮೇರು ಚಿತ್ರವಾಗಿ ದಾಖಲಾಯ್ತು. ಈ ಚಿತ್ರದ ನಂತರ ಬಿಸ್ಮಿಲ್ಲಾ ಖಾನ್ ಮತ್ತು ರಾಜಕುಮಾರ್ ಆಪ್ತರಾದರು. ರಾಜ್‌ ಉತ್ತರ ಭಾರತದ ಕಡೆ ಹೋಗುವಾಗ ಬಿಸ್ಮಿಲ್ಲಾ ಖಾನ್‌ರಿಗಾಗಿ ಇಲ್ಲಿಂದ ಸುವಾಸಿತ ಅಗರಬತ್ತಿಗಳನ್ನು ಕೊಂಡೊಯ್ಯುತ್ತಿದ್ದರು’ ಎಂದು ಸ್ಮರಿಸಿಕೊಳ್ಳುತ್ತಾರೆ.

‘ಸನಾದಿ ಅಪ್ಪಣ್ಣ’ ಚಿತ್ರದ ಸಂಗೀತ ಸಂಯೋಜಕ ಜಿ.ಕೆ.ವೆಂಕಟೇಶ್, ರಾಜಕುಮಾರ್, ಬಿಸ್ಮಿಲ್ಲಾ ಖಾನ್‌, ಚಿತ್ರದ ನಿರ್ಮಾಪಕ ವಿಕ್ರಂ ಶ್ರೀನಿವಾಸ್‌, ಚಿತ್ರಸಾಹಿತಿ ಚಿ.ಉದಯಶಂಕರ್ (ಫೋಟೋ ಕೃಪೆ: ಮಲ್ಲಿಕಾರ್ಜುನ ಮೇಟಿ)‌

ಗೂಂಜ್‌ ಉಠಿ ಶಹನಾಯಿ | ವಿಜಯ್ ಭಟ್ ನಿರ್ದೇಶನದ ‘ಗೂಂಜ್‌ ಉಠಿ ಶಹನಾಯಿ’ (1959) ಹಿಂದಿ ಚಿತ್ರದಲ್ಲಿ ಬಿಸ್ಮಿಲ್ಲಾ ಖಾನ್‌ ವಾದನ ಬಳಕೆಯಾಗಿದೆ. ಇದು ಶಹನಾಯಿ ವಾದಕನ ಕಥಾನಕ. ರಾಜೇಂದ್ರ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದ್ದ ಚಿತ್ರಕ್ಕೆ ವಸಂತ್ ದೇಸಾಯಿ ಸಂಗೀತ ಸಂಯೋಜನೆಯಿತ್ತು. ಚಿತ್ರದಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್‌ ಅವರ ಶಹನಾಯಿ ಮತ್ತು ಸಿತಾರ್ ವಾದಕ ಅಬ್ದುಲ್ ಹಲೀಂ ಜಾಫರ್ ಖಾನ್‌ ಅವರ ಜುಗಲ್‌ಬಂದಿ ತುಂಬಾ ಜನಪ್ರಿಯವಾಗಿತ್ತು.

ಈ ಬರಹಗಳನ್ನೂ ಓದಿ