ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವಿಷ್ಣು ಯಾರನ್ನೂ ಹಚ್ಚಿಕೊಳ್ಳುತ್ತಿರಲಿಲ್ಲ. ಹಚ್ಚಿಕೊಂಡರೆ ನೇರ ಹೃದಯಕ್ಕೇ..

ಪೋಸ್ಟ್ ಶೇರ್ ಮಾಡಿ

(ಬರಹ: ಬಿ.ಎಲ್‌.ವೇಣು, ಕಾದಂಬರಿಕಾರ – ಚಿತ್ರಸಾಹಿತಿ)

ಚಿತ್ರದುರ್ಗದಲ್ಲಿ ‘ನಾಗರಹಾವು ‘ ಚಿತ್ರದ ಚಿತ್ರೀಕರಣ (1972) ನಡೆಯುತ್ತಿದ್ದಾಗ ನಾನೂ ಎಲ್ಲರಂತೆ ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಆಗ ನಾವು ಮೆಚ್ಚುಗೆಯಿಂದ ನೋಡುತ್ತಿದ್ದುದು ಪುಟ್ಟಣ್ಣ ಕಣಗಾಲರನ್ನು. ಮುಂದೆ ವಿಷ್ಣುವರ್ಧನ್ ಕನ್ನಡದ ‘ಟಾಪ್ ನಟ’ರಾಗುತ್ತಾರೆಂದು ಯಾರೂ ನಿರೀಕ್ಷಿಸದ ದಿನಗಳವು. ಅಷ್ಟೇ ಅಲ್ಲ ಮುಂದೊಂದು ದಿನ ನಾನು ಕೂಡ ಈ ಇಬ್ಬರು ಮಹಾನ್ ಕಲಾಕಾರರ ಸಿನಿಮಾಗಳಲ್ಲಿ ಭಾಗಿಯಾಗುತ್ತೇನೆಂದು ಕನಸಿನಲ್ಲೂ ನೆನೆಯದ ಕಾಲವದು. ಏಕೆಂದರೆ ನಾನಿನ್ನೂ ಬರೆಯುವತ್ತ ಗಮನಹರಿಸಿರಲಿಲ್ಲ. ಬರವಣಿಗೆ ಆರಂಭಿಸಿದ್ದು 1976ರಲ್ಲಿ.

ಚಿತ್ರೀಕರಣದ ಸಂದರ್ಭದಲ್ಲಿ (1972) ವಿಷ್ಣುರನ್ನು ದೂರದಿಂದ ನೋಡಿದ್ದ ನಾನು 1985ರಲ್ಲಿ ಮದರಾಸಿನಲ್ಲಿ ಅವರ ಮನೆಯಲ್ಲೇ ಭೇಟಿಯಾದೆ. ಖ್ಯಾತ ನಿರ್ದೇಶಕ ಭಾರ್ಗವ ಅವರು ಮತ್ತು ನಾನು ವಿಷ್ಣು ಮನೆಗೆ ಹೋದಾಗ ಪ್ರೀತಿಯ ಸ್ವಾಗತ. ‘ಪ್ರೇಮಜಾಲ’ ಕಥೆ ಕೇಳಿದ ವಿಷ್ಣು ಬದಲಾವಣೆಗಳ ಬಗ್ಗೆ ಚರ್ಚಿಸಿದರು. ಬದಲಾವಣೆಗೆ ನಾನು ಒಪ್ಪಲಿಲ್ಲ. ನಾನಿನ್ನೂ ಆಗ ಸಾಹಿತ್ಯವೇ ಬೇರೆ ಸಿನಿಮಾವೇ ಬೇರೆ ಎಂಬ ಸತ್ಯ ಅರಿಯದೆ ಹಠಮಾರಿಯಾಗಿದ್ದೆ. ವಿಷ್ಣುವೂ ಹಠಮಾರಿ, ಒಪ್ಪಲಿಲ್ಲ. ಅಂತ್ಯವನ್ನು ಬದಲಾಯಿಸಬೇಕೆಂದರು. ಒಪ್ಪದಿದ್ದಾಗ ಬೇಸರಿಸಿದ ಅವರು, ‘ಈ ಕಾದಂಬರಿ ಬರೆಯೋರನ್ನೆಲ್ಲಾ ಯಾಕ್ರೀ ಕರ್ಕೊಂಡು ಬರ್ತೀರಾ? ಇವರೆಲ್ಲ ಸಿನಿಮಾಕ್ಕೆ ಒಗ್ಗೋದಿಲ್ಲ ‘ ಎಂದು ಸಿಡಿಮಿಡಿಗೊಂಡರು. ನಷ್ಟವಾದದ್ದು ಭಾರ್ಗವ ಅವರಿಗೆ. ವಿಷ್ಣು ಕಾಲ್‌ಶೀಟ್‌ ಸಿಗದಿದ್ದಕ್ಕೆ ನಾನೇ ಕಾರಣವೆಂದು ಭಾರ್ಗವರೂ ಸಿಟ್ಟಾದರು. ಹಿಂದಿರುಗಿ ಬಂದರೆ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು, ಕಥೆ ಇದ್ದಂತೆಯೇ ಒಪ್ಪಿ ನನ್ನ ‘ಪ್ರೇಮ ಜಾಲ’ ಕಾದಂಬರಿ ಸಿನಿಮಾ ಮಾಡಲು ನಿರ್ದೇಶಕ ಜೋಸೈಮನ್‌ಗೆ ಸೂಚಿಸಿದರು… ಆ ಮಾತು ಬೇರೆ…

1988ರಲ್ಲಿ ಭಾರ್ಗವ ಅವರು ವಿಷ್ಣು ಚಿತ್ರಕ್ಕೆಂದೇ ಸಂಭಾಷಣೆ ಬರೆಸಲು ಮದರಾಸಿಗೆ ಪುನಃ ಕರೆಸಿಕೊಂಡರು. ಬರೆದೆನು ಕೂಡ. ಮೊದಲೇ ಈ ಹಿಂದೆ ನನ್ನ ಮೇಲೆ ಮುನಿಸಿಕೊಂಡಿದ್ದ ವಿಷ್ಣು, “ಯಾರ್ರೀ ಸಂಭಾಷಣೆ ಬರೆದಿದ್ದು ?” ಎಂದು ಕೇಳಿ, ನಾನೆಂದು ತಿಳಿಯುತ್ತಲೇ “ಸ್ಟುಪಿಡ್.. ಬರೀ ಬುಕ್ಕಿಶ್ ಲ್ಯಾಂಗ್ವೇಜ್… ಇವರೆಲ್ಲಾ ಸಿನಿಮಾಕ್ಕಲ್ಲ ಬಾಬಿ… ಸಂಭಾಷಣೆ ಬದಲಿಸಿ” ಎಂದು ಕಿರಿಕಿರಿ. ದೊಡ್ಡ ಹೀರೋನನ್ನ ಎದುರು ಹಾಕಿಕೊಳ್ಳುವಂತಿಲ್ಲ. ಆಗ ಭಾರ್ಗವ ಬುದ್ಧಿವಂತಿಕೆ ಉಪಯೋಗಿಸಿ, ಅಲ್ಲಿ ಅಭಿನಯಿಸುತ್ತಿದ್ದ ಅಶ್ವತ್ಥ್, ಭವ್ಯ, ಮು .ಮಂ . ಚಂದ್ರು ಅವರಿಗೆ “ವೇಣು ಸಂಭಾಷಣೆಯಿಂದ ನಿಮಗೇನಾದರು ತೊಡಕಾಗುತ್ತಿದೆಯೇ?” ಎಂದು ಕೇಳಿದ್ದಾರೆ. ಅವರುಗಳಾಗಲೇ ನಾನು ಬರೆದ ಚಿತ್ರಗಳಲ್ಲಿ ಅಭಿನಯಿಸಿದ್ದವರು. “ನಮಗೇನೋ ಓಕೆ” ಅಂದರಂತೆ. ಈ ವಿಷಯವನ್ನು ವಿಷ್ಣು ಗಮನಕ್ಕೆ ತಂದು “ನೋಡಮ್ಮ ವಿಷ್ಣು, ಇವರೆಲ್ಲಾ ವೇಣು ಸಂಭಾಷಣೆಯನ್ನೇ ಹೇಳ್ತಾರೆ.. ನಿನಗೆ ಬದಲಾಯಿಸಿ ಕೊಡುತ್ತೇನೆ. ಆಮೇಲೆ ಅದು ಜಾಳು ಜಾಳಾದರೆ ನಾನು ಜವಾಬ್ದಾರನಲ್ಲ” ಅಂದಿದ್ದಾರೆ ಭಾರ್ಗವ. ಮತ್ತಷ್ಟು ಮುನಿದ ವಿಷ್ಣು , “ಆಯಿತು ಬಿಡು … ಗೋ ಅಹೆಡ್” ಎಂದು ಅರೆ ಮನಸ್ಸಿನಿಂದಲೇ ಚಿತ್ರ ಮುಗಿಸಿದರು. ಆ ಚಿತ್ರವೇ ಸೂಪರ್ ಹಿಟ್ ಆದ ‘ಜನನಾಯಕ’.

ಸಂಭಾಷಣೆಗಳಿಗೆ ಹೆಚ್ಚು ಶೀಟಿ ಚಪ್ಪಾಳೆಗಳು ಬಿದ್ದಾಗ ವಿಷ್ಣು ಮುನಿಸೂ ಮಾಯವಾಗಿರಬೇಕು. ನಂತರ ಭಾರ್ಗವ ನಿರ್ದೇಶನದ ವಿಷ್ಣು ಅಭಿನಯದ ‘ಕೃಷ್ಣ ರುಕ್ಮಿಣಿ’ ಚಿತ್ರಕ್ಕೂ ಬರೆದೆ. ಒಮ್ಮೆ ‘ಬ್ರಾಡ್ ವೇ’ ಹೋಟೆಲ್‌ಗೆ ಕರೆಸಿಕೊಂಡ ವಿಷ್ಣು ಅವರು, ನನ್ನ ಸಂಭಾಷಣೆ ಬಗ್ಗೆ ಟೀಕೆ ಮಾಡಿದ್ದುದನ್ನು ಹೇಳಿಕೊಂಡರು. “ಗೊತ್ತು ಸಾರ್ ಭಾರ್ಗವ ಹೇಳಿದರು” ಅಂದೆ. “ನಂಗೊತ್ತು ಬಾಬಿ ಹೇಳಿರ್ತಾನೆ ಅಂತ. ಆದರೂ ನಮ್ಮ ಸ್ನೇಹದ ನಡುವೆ ಇಂಥದ್ದೆಲ್ಲಾ ಉಳಿಯಬಾರದಲ್ಲವೆ ವೇಣೂಜೀ? ನಾನು ಯಾವಾಗಲು ನೇರ ಮಾತಿನ ಮನುಷ್ಯ. ಅದಕ್ಕೆ ಹೇಳ್ದೆ” ಅಂದರು. ವಿಷ್ಣು ಇದ್ದದ್ದೇ ಹಾಗೆ. “ನಿಮ್ಮ ಸಂಭಾಷಣೆ ತುಂಬಾ ಶಿಷ್ಟವಾಗಿದ್ದರಿಂದ ಜನಕ್ಕೆ ಹಿಡಿಸುತ್ತಾ ಎಂಬ ಅನುಮಾನವಿತ್ತುರೀ” ಎಂದೂ ಸೇರಿಸಿ ನಕ್ಕರು. “ನಮ್ಮ ಜನ ಬುದ್ಧಿವಂತರು ಸಾರ್. ಅವರೆಗೆಲ್ಲಾ ನಮೂನೆ ಕನ್ನಡವೂ ಗೊತ್ತು. ನಾವಾದರೂ ಡಾ .ರಾಜ್ ಮತ್ತು ನಿಮಗಲ್ಲದೆ ಇಂತಹ ಸಂಭಾಷಣೆಗಳನ್ನು ಯಾರಿಗೆ ಬರೆಯೋದು?” ಅಂತ ಕನ್ವಿನ್ಸ್ ಮಾಡಿದೆ. ಖುಷಿಯಿಂದ ಅವರದೇ ಶೈಲಿಯಲ್ಲಿ ಮೂಗಿಗೆ ಬೆರಳು ತಾಗಿಸಿ ಜೋರಾಗಿ ನಕ್ಕರು. ಆ ನಗು ಹಿಗ್ಗು ನಮ್ಮಿಬ್ಬರ ನಡುವೆ ಕೊನೆಯವರೆಗೂ ಇತ್ತು.

ಮುಂದೆ ಅವರೇ ನಿರ್ದೇಶಕರಿಗೆ ಹೇಳಿ ನನ್ನಿಂದ ಅವರ ಅನೇಕ ಚಿತ್ರಗಳಿಗೆ ಸಂಭಾಷಣೆ ಬರೆಸಿದರು. ನಾನು ನಿರ್ದೇಶಕರಿಗೆ ಮಾತ್ರ ಡೈಲಾಗ್ ರೀಡಿಂಗ್ ಕೊಡುವವನು. ಆದರೆ ವಿಷ್ಣು ಅವರ ಮನೆಗೆ ಹೋಗಿ ಅವರಿಗೂ ಡೈಲಾಗ್ ರೀಡಿಂಗ್ ಕೊಡಬೇಕೆಂಬ ಅವರ ಒತ್ತಾಸೆಯ ಪ್ರೀತಿಗೆ ಶರಣಾದೆ. ಇದನ್ನೆಲ್ಲ ಏಕೆ ಹೇಳಿದೆನೆಂದರೆ ವಿಷ್ಣು ಒಳ್ಳೆಯ ನಟ ಅಷ್ಟೇ ಅಲ್ಲ. ಒಳ್ಳೆಯ ಮನುಷ್ಯ ಕೂಡ. ಅವರದ್ದು ನೇರಾನೇರ ಮಾತು. ವಿಷ್ಣು ಯಾರನ್ನೂ ಹಚ್ಚಿಕೊಳ್ಳುತ್ತಿರಲಿಲ್ಲ. ಹಚ್ಚಿಕೊಂಡರೆ ನೇರ ಹೃದಯಕ್ಕೇ. ತುಂಬಾ ಮೂಡಿ ಕೂಡ. ಅದು ಕೆಲವರಿಗೆ ‘ಅಹಂ’ ಅನ್ನಿಸಿರಬಹುದೇನೊ. ಅದು ಅಹಂ ಅಲ್ಲ ಆತ್ಮಾಭಿಮಾನವಷ್ಟೆ. ಡಾ.ರಾಜ್ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡುತ್ತಿದ್ದ ವಿಷ್ಣು, ಯಾರ ಬಗ್ಗೆಯೂ ಲಘುವಾಗಿ ಮಾತನಾಡಿದ್ದನ್ನು ನಾನೆಂದು ಕೇಳಲಿಲ್ಲ.

ಈ ಬರಹಗಳನ್ನೂ ಓದಿ