(ಬರಹ: ಸಂತೋಷ್‌ಕುಮಾರ್ ಎಲ್.ಎಂ.)
ಅದು ಎರಡನೇ ಮಹಾಯುದ್ಧದ ಸಂದರ್ಭ. ಯಹೂದಿಗಳನ್ನು ಈ ಭೂಮಿಯಿಂದ ನಿರ್ನಾಮ ಮಾಡಲೇಬೇಕೆಂದು ಹಿಟ್ಲರ್ ಮುಂದಾಳತ್ವದ ನಾಜಿ ಪಡೆ ಹೇಳಹೆಸರಿಲ್ಲದಂತೆ ಕಂಡಕಂಡಲ್ಲಿ ಸಾಮೂಹಿಕ ಹತ್ಯೆ ಮಾಡುವಾಗ ಅದೇ ನಾಜಿ ಜನಾಂಗದ ವ್ಯಕ್ತಿಯೊಬ್ಬ ಸುಮಾರು ಸಾವಿರದಿನ್ನೂರು ಯಹೂದಿಗಳನ್ನು ತನ್ನ ಫ್ಯಾಕ್ಟರಿಗೆ ಕೆಲಸ ಮಾಡಲು ಬೇಕೆಂದು ಗುತ್ತಿಗೆಯ ಆಧಾರದ ಮೇಲೆ ಕರೆದುಕೊಂಡು ಹೋಗುತ್ತಾನೆ. ಆ ವ್ಯಕ್ತಿಯ ಹೆಸರು ‘ಆಸ್ಕರ್ ಶಿಂಡ್ಲರ್’. ಊಟವಿಲ್ಲದೆ ಸಾಯುತ್ತಿದ್ದ ಅಮಾಯಕ ಯಹೂದಿಗಳಿಗೆ ಊಟ ಕೊಟ್ಟು, ಜರ್ಮನ್ ಸೇನೆಯ ಕಣ್ಣು ತಪ್ಪಿಸಿ ಯುದ್ಧ ಮುಗಿಯುವವರೆಗೆ ಅವರನ್ನು ಸಲಹಿ ಸಾವಿನ ದವಡೆಯಿಂದ ಕಾಪಾಡುತ್ತಾನೆ. ಅಂದು ಆತ ತನ್ನ ಫ್ಯಾಕ್ಟರಿಗೆ ಕೆಲಸಕ್ಕೆ ಬೇಕೆಂದು ಯಹೂದಿ ಖೈದಿಗಳ ಹೆಸರನ್ನು ಪಟ್ಟಿ ಮಾಡುತ್ತಾನಲ್ಲ. ಆ ಪಟ್ಟಿಯೇ ‘ಶಿಂಡ್ಲರ್ಸ್ ಲಿಸ್ಟ್’. ಸಾವಿನಿಂದ ಅವರನ್ನು ಪಾರು ಮಾಡಿದ ಆ ಲಿಸ್ಟಿಗೆ ‘ಲಿಸ್ಟ್ ಆಫ್ ಲೈಫ್’ ಅಂತಲೇ ಕರೆಯಲಾಗುತ್ತದೆ. ಆ ಮನಕಲಕುವ, ಆಸ್ಕರ್ ಶಿಂಡ್ಲರ್ ಅನ್ನುವ ಆಶ್ರಯದಾತನ ಸಾಹಸದ ಕಥೆಯೇ ‘ಶಿಂಡ್ಲರ್ಸ್ ಲಿಸ್ಟ್’ (1993) ಸಿನಿಮಾದ್ದು.
ಲಂಚ ಕೊಡುವ ಅಥವಾ ಸ್ವೀಕರಿಸುವ ದೃಶ್ಯಗಳು ಬಂದಾಗ ನಮಗೆ ಸಹಜವಾಗಿ ಒಂದು ಕೋಪ, ಅಸಹನೆ ಮೂಡುತ್ತದಲ್ಲ. ಆದರೆ ಈ ಸಿನಿಮಾದಲ್ಲಿ ಶಿಂಡ್ಲರ್ ಆ ಅಧಿಕಾರಿಗಳಿಗೆ ಲಂಚ ಕೊಡುವಾಗ ಹಾಗೆ ಅನ್ನಿಸುವುದಿಲ್ಲ. ಏಕೆಂದರೆ ನಮ್ಮ ಮನಸ್ಸಿನಲ್ಲಿ ಆ ಲಂಚದ ಉದ್ದೇಶ ಮನೆಮಾಡಿರುತ್ತದೆ.
ಈ ಸಿನಿಮಾವನ್ನು ಹದಿನೈದು ವರ್ಷಗಳ ಹಿಂದೊಮ್ಮೆ ನೋಡಿದ್ದೆ. ಆಗ ಇಷ್ಟೊಂದು impact ಮಾಡಿರಲಿಲ್ಲ. ಇತಿಹಾಸಕ್ಕೆ ಸಂಬಂಧಪಟ್ಟ ಸಿನಿಮಾಗಳನ್ನು ನೋಡುವಾಗ ಅಲ್ಲಿಯ ಇತಿಹಾಸದ ಬಗ್ಗೆ ಕನಿಷ್ಟ ಜ್ಞಾನ ಇರಬೇಕು ಅನ್ನುವುದು ಮತ್ತೊಮ್ಮೆ ತಿಳಿಯಿತು. ಲೇಖಕಿ ಭಾರತಿ ಬಿ.ವಿ. ಅವರು ಬರೆದ ‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ’ ಪುಸ್ತಕ ಓದಿದ ಮೇಲೆ ಜರ್ಮನಿ, ಹಿಟ್ಲರ್, ಯಾಹೂದಿಗಳು, ನಾಜಿಗಳು, ಯಹೂದಿಗಳ ಹತ್ಯಾಕಾಂಡ, ಯಹೂದಿಗಳನ್ನು ನಾಜಿ ಸೈನಿಕರು ನಡೆಸಿಕೊಂಡ ರೀತಿ, ಕಾನ್ಸಂಟ್ರೇಶನ್ ಕ್ಯಾಂಪುಗಳು ಎಲ್ಲ ಮಾಹಿತಿಗಳು ಕೊಂಚ ಕೊಂಚವಾಗಿಯೇ ಒಳಗಿಳಿದವು. ಅವೆಲ್ಲವುಗಳನ್ನು ಅರ್ಥ ಮಾಡಿಕೊಳ್ಳದೆ ಶಿಂಡ್ಲರ್ ಬಗ್ಗೆ ಅರ್ಥ ಮಾಡಿಕೊಳ್ಳಲು ಹೊರಟರೆ ಅದು ವ್ಯರ್ಥವಾಗುತ್ತದೆ. ಅದೇ ಪುಸ್ತಕದಲ್ಲಿ ಆಸ್ಕರ್ ಶಿಂಡ್ಲರ್ ಬಗ್ಗೆಯೂ ಒಂದು ಅಧ್ಯಾಯವಿತ್ತು. ಅದನ್ನು ಓದಿದ ಮೇಲಂತೂ ಈ ಮರೆತು ಹೋದ ಸಿನಿಮಾವನ್ನು ಮತ್ತೆ ನೋಡುವ ಮನಸ್ಸಾಯಿತು. ಹಾಗಾಗಿಯೇ ಈ ಸಿನಿಮಾ ಮತ್ತೊಮ್ಮೆ ನೋಡಿಸಿಕೊಂಡಿತು.

ಹೇಳಿ ಕೇಳಿ ಇದು ಸ್ಟೀವನ್ ಸ್ಪೀಲ್‌ಬರ್ಗ್ ಸಿನಿಮಾ. ಅಂಥ ಜನಪ್ರಿಯ ನಿರ್ದೇಶಕನ ಸಿನಿಮಾವನ್ನು ಬಹುತೇಕರು ನೋಡಿಯೇ ಇರುತ್ತೀರಿ. ಇನ್ನೂ ನೋಡಿಲ್ಲವಾದರೆ ನೋಡುವ ಮೊದಲು ಕೊಂಚ ಈ ಮೇಲೆ ಹೇಳಿದ ಇತಿಹಾಸದ ಹಿನ್ನೆಲೆಯನ್ನು ಓದಿಕೊಳ್ಳಿ. ಆಗ ನಿಜಕ್ಕೂ ಈ ಸಿನಿಮಾ ಒಳಕ್ಕಿಳಿಯುತ್ತದೆ.
ಏಕೆ ಇದನ್ನು ಹೇಳಿದೆನೆಂದರೆ ಸಿನಿಮಾದಲ್ಲಿ ಕಥೆಯನ್ನು ಹೇಳಿರುವ ರೀತಿಯೂ ಹಾಗೇ ಇದೆ. ಅದೊಂದು ದೃಶ್ಯದಲ್ಲಿ ಜರ್ಮನ್ನರು ಯಹೂದಿಗಳನ್ನು ಅವರ ಮನೆಗಳಿಂದ ಹೊರಗೆಳೆದು ನಿರಾಶ್ರಿತರನ್ನಾಗಿಸಿ ಬೇರೆ ಬೇರೆ ಕಾನ್ಸಂಟ್ರೇಶನ್ ಕ್ಯಾಂಪುಗಳಿಗೆ ಕರೆದುಕೊಂಡು ಹೋಗುವ ಸಂದರ್ಭ. ನಾಜಿ ಸೈನಿಕರು ಆ ಯಹೂದಿಗಳಿಗೆ ತಮ್ಮ ತಮ್ಮ ಸೂಟ್‍ಕೇಸ್‍ಗಳನ್ನು ತೆಗೆದುಕೊಂಡು ಹೋಗಬಾರದೆಂದು ಅವುಗಳ ಮೇಲೆ ತಮ್ಮ ತಮ್ಮ ಹೆಸರನ್ನು ಬರೆದು ಅಲ್ಲೇ ಇಟ್ಟು ಹೊರಡಬೇಕೆಂದು ಹೇಳುತ್ತಾರೆ. ಎಲ್ಲರೂ ಹೆಸರು ಬರೆದಿಟ್ಟು ರೈಲುಗಳಲ್ಲಿ ಹೊರಡುತ್ತಾರೆ. ಅದರ ಮುಂದಿನ ದೃಶ್ಯದಲ್ಲೇ ಆ ಸೂಟ್‍ಕೇಸ್‍ಗಳನ್ನು ತೆರೆದು ಅಲ್ಲಿ ಸುರಿಯಲಾಗುತ್ತದೆ. ಅಲ್ಲಿನ ಸಾಮಾನುಗಳನ್ನು ಬೇರೆ ಬೇರೆ ಮಾಡಲಾಗುತ್ತದೆ. ಹೆಸರು ಬರೆದಿಟ್ಟು ಹೊರಡಿ ಅಂತ ಅಂದಿದ್ದು ‘ನೀವು ಮತ್ತೆ ಇಲ್ಲಿಗೆ ಬರುತ್ತೀರ’ ಅಂತ ನಂಬಿಸಲು! ಇದು ಹಾಗೆ ಬಂದು ಹೀಗೆ ಹೋಗುವ ಒಂದು ದೃಶ್ಯದಲ್ಲಿ ನಿರ್ದೇಶಕ ಥಟ್ಟನೆ ಹೇಳಿಬಿಡುತ್ತಾನೆ. ಹಿನ್ನೆಲೆ ಗೊತ್ತಿದ್ದರೆ ಮಾತ್ರ ನಮಗೆ ಇದು ಅರ್ಥವಾಗುತ್ತದೆ.

ಇನ್ನೊಂದು ದೃಶ್ಯದಲ್ಲಿ ಆ ಸಾಮಾನುಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಬೇರ್ಪಡಿಸಿ ಅವುಗಳ ಬೆಲೆಯನ್ನು ಅಳೆದು ಇಡುವ ದೃಶ್ಯ. ಆ ಕೆಲಸಕ್ಕಾಗಿಯೇ ಅನೇಕ ಜನರನ್ನು ನೇಮಿಸಲಾಗಿರುತ್ತದೆ. ಆಭರಣಗಳು, ಅಮೂಲ್ಯ ಹರಳುಗಳು, ಬೆಲೆಬಾಳುವ ಅಲಂಕಾರಿಕ ವಸ್ತುಗಳು ಹೀಗೆ ಎಲ್ಲವೂ ಅಲ್ಲಿ ಬಂದು ಬೀಳುತ್ತಿರುತ್ತವೆ. ಒಂದು ಗಂಟನ್ನು ಆ ಕೆಲಸಗಾರ ಬಿಚ್ಚಿ ಸುರಿಯುತ್ತಾನೆ. ಅದರಲ್ಲಿದ್ದುದನ್ನು ಕಂಡು ಆತ ಬೆಚ್ಚಿ ಬೀಳುತ್ತಾನೆ. ಅಲ್ಲಿದ್ದವೆಲ್ಲ ಚಿನ್ನದಿಂದ ಮಾಡಿಸಿಕೊಂಡ ಯಹೂದಿಗಳ ಹಲ್ಲುಗಳು. ಆತ ದಂಗಾಗಿ ನೋಡುತ್ತಿರುವಂತೆಯೇ ದೃಶ್ಯ ಮುಂದಕ್ಕೆ ಸಾಗುತ್ತದೆ. ಆದರೆ ಇಲ್ಲಿ ನಮಗೆ ಗೊತ್ತಿರಬೇಕಾದ ವಿಷಯವೆಂದರೆ ಯಹೂದಿಗಳನ್ನು ಒತ್ತೆಯಾಗಿರಿಸಿಕೊಂಡ ತಕ್ಷಣ ಅವರು ಜೀವಂತವಿರುವಾಗಲೇ ಯಾವುದೇ ಕರುಣೆ ತೋರದೆ ಅವರ ಚಿನ್ನದ ಹಲ್ಲುಗಳನ್ನು ಇಕ್ಕಳಗಳಿಂದ ಕಿತ್ತುಕೊಂಡಿರುತ್ತಾರೆ. ಅವುಗಳ ರಾಶಿಯೇ ಅಲ್ಲಿರುತ್ತದೆ! ಅವುಗಳನ್ನು ನೋಡುವಾಗ ನಮಗೆ ಯಹೂದಿಗಳು ಅನುಭವಿಸಿದ ಹಿಂಸೆ ಅರ್ಥವಾಗಬೇಕು.
ಮತ್ತೊಂದು ದೃಶ್ಯದಲ್ಲಿ ಕಾನ್ಸಂಟ್ರೇಶನ್ ಕ್ಯಾಂಪೊಂದರ ಬಳಿ ತನ್ನ ಕಾರು ನಿಲ್ಲಿಸಿ ಒಳಗೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿ ಹೊರಬರುತ್ತಾನೆ. ಅವನ ಕಾರಿನ ಮೇಲೆ ಅದಾಗಲೇ ಕಣ್ಣಿಗೆ ಕಾಣುವಷ್ಟು ಬೂದಿ ಕುಳಿತಿರುತ್ತದೆ. ಆತ ಅದನ್ನು ಕೈಯಿಂದ ಮುಟ್ಟಿ ಅತ್ತ ತಿರುಗುತ್ತಾನೆ. ಅಲ್ಲಿ ಚಿಮಣಿಯಿಂದ ಅದ್ಯಾವ ಪರಿ ಬೂದಿ ಮಿಶ್ರಿತ ಹೊಗೆ ಬರುತ್ತಿರುತ್ತದೆಂದರೆ, ಹಿಮಪಾತದ ರೀತಿಯಲ್ಲಿ ಬೂದಿ ಆಕಾಶದಿಂದ ಸುತ್ತಮುತ್ತಲಿನ ಮನೆಗಳ ಮೇಲೆ ಸುರಿಯುತ್ತಿರುತ್ತದೆ. ಅಲ್ಲಿ ನಮಗೆ ಅರ್ಥವಾಗಬೇಕಾದ ವಿಷಯವೆಂದರೆ ಅಲ್ಲಿ ನಡೆಯುವ ಸಾಮೂಹಿಕ ಹತ್ಯೆಯ ಬಳಿಕ ರಾಶಿರಾಶಿ ಹೆಣಗಳನ್ನು ಸುಡಲು ದೊಡ್ದ ದೊಡ್ಡ ಚಿತಾಗಾರಗಳನ್ನು ಬಳಸಲಾಗುತ್ತದೆ. ಅದರಿಂದ ಹೊರಬರುವ ಬೂದಿಯೇ ಅಷ್ಟು ಹೆಚ್ಚೆಂದರೆ ಅಲ್ಲಿ ಇನ್ಯಾವ ಪರಿ ಜನರನ್ನು ಹತ್ಯೆಗೈಯಲಾಗುತ್ತಿತ್ತು ಅಂತ.

ಹೀಗೆ ಅನೇಕ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಸಿನಿಮಾ ‘ಶಿಂಡ್ಲರ್ಸ್ ಲಿಸ್ಟ್’. ಈ ಸಿನಿಮಾದ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್. ಸ್ವತಃ ಸ್ಟೀವನ್ ಸ್ಪೀಲ್‌ಬರ್ಗ್ ಯಹೂದಿ ಕುಟುಂಬದಲ್ಲಿ ಜನಿಸಿದವನು. ಆತನ ತಂದೆ ಹಾಲೋಕಾಸ್ಟ್’ನಲ್ಲಿ ಸುಮಾರು ಇಪ್ಪತ್ತು ಬಂಧುಗಳನ್ನು ಕಳೆದುಕೊಂಡಿದ್ದರು. ಜೊತೆಗೆ ಮಗನಿಗೆ ಚಿಕ್ಕಂದಿನಿಂದಲೂ ಹಾಲೋಕಾಸ್ಟ್’ನ ಭೀಕರತೆಯನ್ನು ಹೇಳುತ್ತಿದ್ದರು. ಹೀಗಾಗಿ ಈ ಸಿನಿಮಾ ತೆಗೆಯಲು ಸ್ಪೀಲ್‌ಬರ್ಗ್’ಗೆ ಪ್ರೇರೇಪಣೆಯಾಯಿತು. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ಆ ಕರಾಳ ದಿನಗಳ ಬಗ್ಗೆ ನೆನೆದು ಸ್ಪೀಲ್‌ಬರ್ಗ್ ಮನಸ್ಸು ಜರ್ಜರಿತವಾಗಿತ್ತಂತೆ. ಈ ಸಿನಿಮಾಗಾಗಿ ಸ್ವತಃ ಸ್ಪೀಲ್‌ಬರ್ಗ್ ಪೋಲೆಂಡಿಗೆ ಭೇಟಿ ಕೊಟ್ಟು ಸಿನಿಮಾಗೆ ಬೇಕಾಗುವ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದ್ದರಂತೆ. ಮತ್ತು ಘೆಟ್ಟಾಗಳಿಂದ ಯಹೂದಿಗಳನ್ನು ಹೊರಗೋಡಿಸುವ ದೃಶ್ಯ ಮತ್ತು ಇನ್ನಿತರ ದೃಶ್ಯಗಳನ್ನು ಅವು ನಡೆದ ಜಾಗಗಳಲ್ಲೇ ಚಿತ್ರೀಕರಿಸಿಕೊಳ್ಳಲಾಯಿತು. ಕೆಲಸಕ್ಕೆ ಆಯ್ಕೆ ಮಾಡಲು ಯಹೂದಿ ವೃದ್ಧರನ್ನು, ಮಹಿಳೆಯರನ್ನು ಬೆತ್ತಲೆಯಾಗಿ ಓಡಿಸುವ ದೃಶ್ಯವನ್ನಂತೂ ತಾನು ನೋಡಲು ಸಾಧ್ಯವಿಲ್ಲ ಅಂತ ಆ ಚಿತ್ರೀಕರಣದಿಂದ ದೂರ ಉಳಿದರಂತೆ.
ಸುಮಾರು 1980ರಲ್ಲೇ ಈ ಕಥೆಯನ್ನು ಕೇಳಿದ್ದ ಸ್ಪೀಲ್‌ಬರ್ಗ್ ಇಷ್ಟಪಟ್ಟು ಈ ಕಥೆಯನ್ನು ಸಿನಿಮಾ ಮಾಡಲು ಸಮಯ ಬೇಕು. ಇನ್ನು ಹತ್ತು ವರ್ಷಗಳೊಳಗೆ ಮಾಡುತ್ತೇನೆ ಅಂತ ಸಮಯ ತೆಗೆದುಕೊಂಡು ಬಂದಿದ್ದರು. ಆದರೆ ಸಿನಿಮಾ ಹೇಳುವ ಗಂಭೀರ ವಿಷಯದಿಂದಾಗಿ ಈ ಸಿನಿಮಾ ಮಾಡುವ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದರು. ಆದರೆ ತೊಂಭತ್ತರ ದಶಕದಲ್ಲಿ ಅಂದಿನ ಇನ್ನೊಬ್ಬ ಜನಪ್ರಿಯ ನಿರ್ದೇಶಕ ಬಿಲ್ಲಿ ವೈಲ್ಡರ್ ಈ ಸಿನಿಮಾ ಕಥೆಯನ್ನು ಕೇಳಿ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದರು. ಆದರೆ ಆ ವಿಷಯ ತಿಳಿದ ಸ್ಪೀಲ್‌ಬರ್ಗ್ ಅವರಿಗಿಂತಲೂ ಮೊದಲೇ ಕಥೆಯ ಹಕ್ಕುಗಳನ್ನು ತೆಗೆದುಕೊಂಡು ಸಿನಿಮಾ ಮಾಡಲು ಶುರುಮಾಡಿಯೇ ಬಿಟ್ಟರು. ಶಿಂಡ್ಲರ್ಸ್ ಲಿಸ್ಟ್ ಶುರುವಾದದ್ದು ಹೀಗೆ!

ಈ ಸಿನಿಮಾದಲ್ಲಿ ನನಗೆ ಇಷ್ಟವಾಗಿದ್ದೆಂದರೆ ಆಸ್ಕರ್ ಶಿಂಡ್ಲರ್ ಎಲ್ಲಿಯೂ ತಾನು ಯಹೂದಿಗಳನ್ನು ಕಾಪಾಡುತ್ತಿದ್ದೇನೆ. ಅವರ ಜೀವವನ್ನು ಉಳಿಸಲು ಇಷ್ಟೆಲ್ಲ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ ಅಂತ ಹೇಳುವುದೇ ಇಲ್ಲ. ಮೇಲೆ ಆತ ಮಾಡುವುದೆಲ್ಲ ವಿಲಾಸಕ್ಕೆ ಅಂತ ಕಂಡರೂ ಅಲ್ಲೆಲ್ಲ ಅಧಿಕಾರಿಗಳನ್ನು ತನ್ನತ್ತ ಸೆಳೆಯುವುದೇ ಆಗಿರುತ್ತದೆ. ಆತನ ವಿಷಯಗಳನ್ನು ತಿಳಿದ ಯಹೂದಿ ಮಹಿಳೆಯೊಬ್ಬಳು ಆತನನ್ನು ಭೇಟಿ ಮಾಡಲು ಪ್ರಯತ್ನಿಸಿ “ತನ್ನ ತಂದೆ-ತಾಯಿಯರನ್ನು ಕೂಡ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಿ. ಹಾಗಾದರೆ ಅವರ ಜೀವ ಉಳಿಯುತ್ತದೆ” ಅಂತ ಅಂಗಲಾಚಿದಾಗ ಅವಳನ್ನು ಬೈದು, ಹೆದರಿಸಿ ಕಳುಹಿಸುತ್ತಾನೆ. ಅಲ್ಲೂ ಆತ ತಾನು ಮಾಡುತ್ತಿರುವ ವಿಷಯದ ಬಗ್ಗೆ ಒಪ್ಪಿಕೊಳ್ಳುವುದೇ ಇಲ್ಲ. ಆದರೆ ಅದರ ಮರುದಿನ ಆ ಮಹಿಳೆಯ ತಂದೆ ತಾಯಿಯರನ್ನು ಕಂಡುಹಿಡಿದು ಈತನ ಫ್ಯಾಕ್ಟರಿಗೆ ಕರೆತರಲಾಗಿರುತ್ತದೆ. ಅಷ್ಟೆಲ್ಲ ಮಾಡಿದ ಮೇಲೂ ಕಡೆಯ ದೃಶ್ಯದಲ್ಲಿ ಆತ ತನ್ನ ಕೆಲಸದ ಬಗ್ಗೆ ಹೆಮ್ಮೆಪಡುವ ಬದಲು, ತಾನು “ಇದಕ್ಕಿಂತಲೂ ಇನ್ನೂ ಹೆಚ್ಚು ಮಾಡಬಹುದಿತ್ತು, ಇನ್ನಷ್ಟು ಅಮಾಯಕ ಯಹೂದಿಗಳ ಜೀವವನ್ನು ಉಳಿಸಬಹುದಿತ್ತು” ಅಂತ ಕಣ್ಣೀರಾಗುವಾಗ ಮನಸ್ಸು ಆರ್ಧ್ರವಾಗುತ್ತದೆ. ಪ್ರತೀ ಕ್ಷಣದಲ್ಲೂ ಆತ ತನ್ನ ಗುಟ್ಟು ಬಿಟ್ಟುಕೊಡದಂತೆ ಆ ಜನರನ್ನು ಉಳಿಸಿಕೊಳ್ಳಲು ಹೋರಾಡುವ ವಿಷಯ ಮಾತ್ರ ಮನಸ್ಸಲ್ಲಿ ಅಚ್ಚಾಗುತ್ತದೆ.
ಸಿನಿಮಾ ಬಿಡುಗಡೆಯಾಗಿದ್ದು 1993ರಲ್ಲಿ. ಆದರೂ ಈ ಸಿನಿಮಾವನ್ನು ಕಪ್ಪು – ಬಿಳುಪಿನಲ್ಲೇ ಚಿತ್ರಿಸಲಾಗಿದೆ! ಎರಡನೇ ಮಹಾಯುದ್ಧದ ಕಾಲಘಟ್ಟವನ್ನು ತೋರಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಅನ್ನಿಸಿದರೂ ಅಮಾಯಕ ಜನರನ್ನು ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಬಲಿಕೊಡುವ ಕಥೆಯನ್ನು ಬಣ್ಣದಲ್ಲಿ ತೋರಿಸಿ ವಿಜೃಂಭಿಸುವುದು ಬೇಡ ಅನ್ನುವುದು ಸ್ಪೀಲ್‌ಬರ್ಗ್‌ನ ಉದ್ದೇಶವಂತೆ. ಇಡೀ ಸಿನಿಮಾ ಕಪ್ಪು-ಬಿಳುಪಿನಲ್ಲಿದ್ದರೂ ಒಂದು ಪುಟ್ಟ ಹುಡುಗಿಯೊಂದು ತಬ್ಬಲಿಯಾಗಿ ಯಾರನ್ನೋ ಹುಡುಕಾಡುವ, ಪುಟ್ಟ ಅಲ್ಮೆರಾದಲ್ಲಿ ಬಚ್ಚಿಟ್ಟುಕೊಳ್ಳುವ, ಕಡೆಗೆ ಜರ್ಮನ ಸೈನಿಕರು ಎಳೆದುಕೊಂಡು ಹೋಗುವ ತಳ್ಳುಗಾಡಿಯಲ್ಲಿ ಶವವಾಗಿ ಕಾಣುವ ದೃಶ್ಯವನ್ನು ಮಾತ್ರ ಬಣ್ಣದಲ್ಲಿ ಉಳಿಸಿಕೊಳ್ಳಲಾಗಿದೆ.

ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದವರು ಜಾನ್ ವಿಲ್ಲಿಯಮ್ಸ್. ಈ ಸಿನಿಮಾಗಾಗಿ ಜಾನ್ ವಿಲ್ಲಿಯಮ್ಸ್ ಅನ್ನು ಭೇಟಿಯಾದಾಗ ಈ ಸಿನಿಮಾದ ಬಗ್ಗೆ ತಿಳಿದುಕೊಂಡ ಮೇಲೆ ಆಲೋಚಿಸಿ ಜಾನ್ ಹೇಳಿದರಂತೆ “ಈ ಸಿನಿಮಾಗೆ ನಾನು ಸಂಗೀತ ಕೊಡುವಷ್ಟು ಶಕ್ತನಲ್ಲ. ಬಹುಶಃ ನನಗಿಂತ ಉತ್ತಮ ಸಂಗೀತ ನಿರ್ದೇಶಕರನ್ನು ನೋಡಿಕೊಂಡರೆ ಒಳ್ಳೆಯದು” ಅಂತ. ಅದಕ್ಕೆ ಸ್ಪೀಲ್‍ಬರ್ಗ್ ನಕ್ಕು ಹೇಳಿದರಂತೆ ” ಹೌದು. ಈ ಸಿನಿಮಾಗೆ ನಿನಗಿಂತ ಒಳ್ಳೆಯ ಸಂಗೀತ ಕೊಡುವ ಸಂಗೀತ ನಿರ್ದೇಶಕರನ್ನು ನಾನು ಬಲ್ಲೆ…. ಆದರೆ ಅವರ್ಯಾರೂ ಈಗ ಜೀವಂತವಿಲ್ಲ” ಅಂತ! ಕಡೆಗೆ ಜಾನ್ ವಿಲ್ಲಿಯಮ್ಸ್ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡರು. ಕಾಕತಾಳೀಯವೆಂಬಂತೆ ಜಾನ್ ವಿಲ್ಲಿಯಮ್ಸ್’ಗೆ ಈ ಸಿನಿಮಾದಲ್ಲಿನ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ದೊರೆಯಿತು!
ಈ ಸಿನಿಮಾದಲ್ಲಿ ಬರುವ ಕೆಂಪು ಕೋಟಿನ ಹುಡುಗಿಯ ಪಾತ್ರ ಮಾಡಿದಾಕೆ ಒಲಿವಿಯಾ ಡಬ್ರೋವ್ಸ್ಕಾ. ಆ ಸಿನಿಮಾದಲ್ಲಿ ನಟಿಸುವಾಗ ಆಕೆಗೆ ಕೇವಲ ಮೂರು ವರ್ಷ ವಯಸ್ಸು. ಸ್ಪೀಲ್‍ಬರ್ಗ್ ಆಗಲೇ ತಾಕೀತು ಮಾಡಿದ್ದರು. “ಈ ಸಿನಿಮಾವನ್ನು ನೀನು ಕೊಂಚ ಪ್ರಬುದ್ಧತೆ ಬಂದ ಮೇಲೆ ನೋಡಬೇಕು. ಹಾಗಾಗಿ ನಿನಗೆ 18 ವರ್ಷ ವಯಸ್ಸಾಗುವವರೆಗೆ ಇದನ್ನು ನೋಡಬೇಡ” ಅಂತ. ಅದಕ್ಕೆ ಆಕೆ ಒಪ್ಪಿಕೊಂಡಳು ಕೂಡ. ಆದರೆ ಕೊಟ್ಟ ಮಾತನ್ನು ಮುರಿದು ತನ್ನ ಹನ್ನೊಂದನೇ ವಯಸ್ಸಿನಲ್ಲೇ ನೋಡಿ ಭಯಪಟ್ಟಿದ್ದಳು. ಮತ್ತೆ ಹದಿನೆಂಟು ವರ್ಷಗಳಾದ ಮೇಲೆ ನೋಡಿದಾಗ ಆಕೆಗೆ ತಾನು ಮಾಡಿದ ಪಾತ್ರದ ಬಗ್ಗೆ ಹೆಮ್ಮೆಯಾಯಿತು.
ಈ ಸಿನಿಮಾ ಬರುವ ಹೊತ್ತಿಗಾಗಲೇ ಸ್ಪೀಲ್‍ಬರ್ಗ್ ಜನಪ್ರಿಯ ನಿರ್ದೇಶಕರಾಗಿದ್ದರು. ಆದರೆ ಈ ಸಿನಿಮಾಗೆ ಸ್ಪೀಲ್‍ಬರ್ಗ್ ನಯಾಪೈಸೆ ಸಂಭಾವನೆ ಪಡೆಯಲಿಲ್ಲ. ರಕ್ತಚರಿತ್ರೆಗೆ ಸಾಕ್ಷಿಯಾದ ಈ ಸಿನಿಮಾವನ್ನು ಲಾಭದ ಉದ್ದೇಶದಿಂದ ಮಾಡಬಾರದು. ಹಾಗೆ ಮಾಡಿದರೆ ಬರುವ ಹಣ ನೆತ್ತರಿನ ಹಣ ಅಂತ ಕರೆದುಕೊಳ್ಳುತ್ತಾರೆ. ಬದಲಿಗೆ ಈ ಸಿನಿಮಾದಿಂದ ಬರುವ ಹಣವನ್ನು ಹಾಲೋಕಾಸ್ಟ್’ನಲ್ಲಿ ಮಡಿದವರ ನೆನಪಿನ ಸ್ಮಾರಕವನ್ನು ಆರಂಭಿಸಲು ಬಳಸುತ್ತಾರೆ. ಕರಾಳ ಇತಿಹಾಸಕ್ಕೆ ಸಾಕ್ಷಿಯಾದ ಹಾಗೂ ಸಾಂಸ್ಕೃತಿಕವಾಗಿ ಮತ್ತು ಕಲಾತ್ಮಕತೆಯಿಂದ ಶ್ರೀಮಂತಗೊಂಡ ಈ ಸಿನಿಮಾ ಇವತ್ತಿಗೂ ಅಮೇರಿಕಾದ ಅತ್ಯುನ್ನತ ಸಿನಿಮಾಗಳಲ್ಲಿ ಒಂದಾಗಿದೆ. ಆಸ್ಕರ್ ಪ್ರಶಸ್ತಿಗೆ ಒಟ್ಟು ಹನ್ನೆರಡು ವಿಭಾಗಗಳಲ್ಲಿ ನಾಮಿನೇಟ್ ಆಗಿ ಅದರಲ್ಲಿ ಏಳು ಪ್ರಶಸ್ತಿಯನ್ನು ಗೆದ್ದುಕೊಂಡ ಸಿನಿಮಾ ಇದು! ಹತ್ತಿರತ್ತಿರ ಮೂರುವರೆ ಘಂಟೆ ಇರುವ ಈ ಸಿನಿಮಾ ನೋಡುವಾಗ ನಮ್ಮನ್ನೇ ನಾವು ಮರೆತುಬಿಡುತ್ತೇವೆ. ನೀವಿನ್ನೂ ನೋಡಿರದಿದ್ದರೆ ಎಂದಾದರೊಮ್ಮೆ ನೋಡಲೇಬೇಕಾದ ಸಿನಿಮಾ ‘ಶಿಂಡ್ಲರ್ಸ್ ಲಿಸ್ಟ್’ ! ನಿಮ್ಮ ಪಟ್ಟಿಗೆ ಮರೆಯದೆ ಸೇರಿಸಿಕೊಳ್ಳಿ.