ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

‘ಭೂತಯ್ಯನ ಮಗ ಅಯ್ಯು’ ಚಲನಚಿತ್ರದ ಸುತ್ತಮುತ್ತ…

ಪೋಸ್ಟ್ ಶೇರ್ ಮಾಡಿ
ಮ ಶ್ರೀ ಮುರಳೀಕೃಷ್ಣ
ಸಿನಿಮಾ ವಿಶ್ಲೇಷಕ

ಎಲ್ಲ ಕಲೆಗಳೂ, ಸಿನಿಮಾ ಒಳಗೊಂಡಂತೆ ಆಯಾಯ ಕಾಲದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಇತರ ಆಗುಹೋಗುಗಳಿಗೆ ಸ್ಪಂದಿಸುತ್ತ, ಸಂಧಾನ -ಅನುಸಂಧಾನ ಪ್ರಕ್ರಿಯೆಗಳಿಗೆ ಒಳಪಡುತ್ತವೆ. ಈ ನಿಟ್ಟಿನಲ್ಲಿ, ಆ ಕಾಲದಲ್ಲಿ ಈ ಚಲನಚಿತ್ರ ತಯಾರಾದದ್ದು ಜಿಜ್ಞಾಸಾರ್ಹ ವಿಷಯವಾಗಬಹುದು. – ಮ ಶ್ರೀ ಮುರಳೀಕೃಷ್ಣ ವಿಶ್ಲೇಷಣೆ.

ಕನ್ನಡ ಚಲನಚಿತ್ರರಂಗದಲ್ಲಿ ‘ಭೂತಯ್ಯನ ಮಗು ಅಯ್ಯು’ ಚಲನಚಿತ್ರಕ್ಕೆ ಗಮನೀಯ ಸ್ಥಾನವಿದೆ.  ಇದು 1974ರಲ್ಲಿ ತೆರೆಕಂಡಿತು. ಖ್ಯಾತ ಸಾಹಿತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ‘ವೈಯಾರಿ’ ಎಂಬ ಕಥಾಸಂಕಲನದ ಒಂದು ಕಥೆಯನ್ನು ಆಧರಿಸಿದ ಈ ಜನಪ್ರಿಯ ಚಲನಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಪಡೆಯಿತು.  ‘ಬಂಗಾರ ಮನುಷ್ಯ’ ಚಲನಚಿತ್ರದ ಜೊತೆಗೆ ಇನ್ನು ಕೆಲವು ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ ಸಿದ್ದಲಿಂಗಯ್ಯ ಇದರ ನಿರ್ದೇಶಕರು. ಇವರ ನಿರ್ದೇಶನದಲ್ಲಿ 22 ಕನ್ನಡ ಚಲನಚಿತ್ರಗಳು ಮತ್ತು ಒಂದು ತಮಿಳು ಚಲನಚಿತ್ರ ತೆರೆಕಂಡಿವೆ.  ಇವರ ಅನೇಕ ಚಲನಚಿತ್ರಗಳಲ್ಲಿ ಗ್ರಾಮೀಣ ಬದುಕಿನ ಚಿತ್ರಣವನ್ನು ಕಾಣಬಹುದು.  ಅಲ್ಲದೆ ಅವುಗಳಲ್ಲಿ ಗ್ರಾಮೀಣ ಮತ್ತು ನಗರ ಜೀವನದ ಮುಖಾಮುಖಿಯ ಅಂಶವು ಇರುತ್ತದೆ.  ಸಾಮಾನ್ಯ ಜನರನ್ನು ಪ್ರತಿನಿಧಿಸುವ ಪಾತ್ರಗಳು ಅವರ ಚಲನಚಿತ್ರಗಳ ಕಥನದಲ್ಲಿ ಇರುವುದು ಕೂಡ ಗಮನಾರ್ಹ ವಿಷಯ. ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರ ಬಹುತೇಕ ಚಲನಚಿತ್ರಗಳು ಸೇರಿದಂತೆ ಆ ಕಾಲಮಾನದಲ್ಲಿ ಕಥೆ/ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರಗಳ ಸಂಖ್ಯೆ ಗಮನಾರ್ಹವಾಗಿದ್ದವು.  ‘ಭೂತಯ್ಯನ ಮಗ ಅಯ್ಯು’ ಕೂಡ ಅದೇ ಟ್ರೆಂಡ್‌ನಲ್ಲಿತ್ತು.

‘ಬೂತಯ್ಯನ ಮಗ ಅಯ್ಯು’ ಚಿತ್ರೀಕರಣದಲ್ಲಿ ಛಾಯಾಗ್ರಾಹಕ ಡಿ.ವಿ.ರಾಜಾರಾಂ ಅವರಿಗೆ ಸಹಾಯಕರಾಗಿದ್ದ ಬಿ.ಎಸ್.ಬಸವರಾಜು ಹಾಗೂ ‘ಬೂತಯ್ಯನ ಮಗ ಅಯ್ಯು’ ನಿರ್ದೇಶಕ ಸಿದ್ದಲಿಂಗಯ್ಯ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಈ ಚಲನಚಿತ್ರ ತೆರೆಕಂಡ ಕಾಲಘಟ್ಟದ ಸಮಾಜೋ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದಾಗ ಒಂದು ಅಂಶ ಕಂಡುಬರುತ್ತದೆ.  ಅದೆಂದರೆ – ಆಗ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ‘ಉಳುವವನೇ ಭೂಮಿಯೊಡೆಯ’ ತತ್ವಕ್ಕೆ ಮೂರ್ತರೂಪ ಕೊಡಲು ಪ್ರಯತ್ನಿಸಿದ್ದರು.  ಅವರು ಭೂಸುಧಾರಣೆಗಳನ್ನು ಜಾರಿಮಾಡಿದ ಕಾಲವದು (ಆದರೆ ಅವು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಜಾರಿಯಾದ ಕ್ರಮಗಳಷ್ಟು ಕ್ರಾಂತಿಕಾರಿಯಾಗಿರಲಿಲ್ಲ ಎಂಬುದನ್ನು ಗುರುತಿಸಬೇಕಾಗುತ್ತದೆ). ಇರಲಿ… ಗೊರೂರರು ಈ ಕಥೆಯನ್ನು ಬರೆದು ಅನೇಕ ವರ್ಷಗಳಾಗಿದ್ದರೂ 1970ರ ದಶಕದ ಆದಿಯಲ್ಲಿ,  ಕರ್ನಾಟಕದಲ್ಲಿ ಭೂಒಡೆತನಕ್ಕೆ ಸಂಬಂಧಿಸಿದಂತೆ ಒಂದು ನೂತನ ಶಕೆ ಆರಂಭವಾಗುವ ಘಟ್ಟದಲ್ಲಿ ಈ ಚಲನಚಿತ್ರ ತಯಾರಾದದ್ದು ಕಾಕತಾಳೀಯವೇ ಅಥವಾ ಅಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಅಲ್ಲದೆ, ಆಗ ಪಶ್ಚಿಮ ಬಂಗಾಳ ಮತ್ತು ಇತರ ಕೆಲವು ರಾಜ್ಯಗಳಲ್ಲಿ ನಕ್ಸಲೀಯವಾದವೂ ಭುಗಿಲೆದ್ದಿತ್ತು. ಸಣ್ಣ ರೈತಾಪಿ ಮಂದಿ ಹಾಗೂ ಕೃಷಿಕೂಲಿ ಕಾರ್ಮಿಕರ ಸಮಸ್ಯೆಗಳು ಹಾಗೂ ಬವಣೆಗಳ ನಿವಾರಣೆಗಾಗಿ ಈ ವಾದದ ಪ್ರತಿಪಾದಕರು ತೀವ್ರ ಸ್ವರೂಪದ ಹೋರಾಟಗಳನ್ನು ಹೂಡಿದ್ದರು. ಇದಕ್ಕೆ ಮುನ್ನ ಭಾರತದಲ್ಲಿ, 1960ರ ದಶಕದ ಕೊನೆಯ ವರ್ಷಗಳಲ್ಲಿ, ಹಸಿರು, ಶ್ವೇತ ಮತ್ತು ಹಳದಿ ಕ್ರಾಂತಿಗಳು ಜರುಗಿದ್ದವು. 1969ರಲ್ಲಿ ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು.  ಇವುಗಳ ಪರಿಣಾಮಗಳಿಂದ ಅಂದಿನ ಕೇಂದ್ರ ಸರ್ಕಾರವೂ ಗ್ರಾಮೀಣ ಅಭಿವೃದ್ಧಿ ವಿಷಯದತ್ತ ಗಮನ ಹರಿಸಿತ್ತು. ಇವೆಲ್ಲವೂ ಈ ಚಲನಚಿತ್ರವೂ ಸೇರಿದಂತೆ ಇತರ ಕೆಲವು ಚಲನಚಿತ್ರಗಳ ಮೇಲೆ ಪರಿಣಾಮಗಳನ್ನು ಬೀರಿರಬಹುದು. ಎಲ್ಲ ಕಲೆಗಳೂ, ಸಿನಿಮಾ ಒಳಗೊಂಡಂತೆ ಆಯಾಯ ಕಾಲದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಇತರ ಆಗುಹೋಗುಗಳಿಗೆ ಸ್ಪಂದಿಸುತ್ತ, ಸಂಧಾನ -ಅನುಸಂಧಾನ ಪ್ರಕ್ರಿಯೆಗಳಿಗೆ ಒಳಪಡುತ್ತವೆ. ಈ ನಿಟ್ಟಿನಲ್ಲಿ, ಆ ಕಾಲದಲ್ಲಿ ಈ ಚಲನಚಿತ್ರ ತಯಾರಾದದ್ದು ಜಿಜ್ಞಾಸಾರ್ಹ ವಿಷಯವಾಗಬಹುದು.

ಚಿತ್ರದ ಒಂದು ಸನ್ನಿವೇಶದಲ್ಲಿ ದಿನೇಶ್‌, ಬಾಲಕೃಷ್ಣ, ವೈಶಾಲಿ ಕಾಸರವಳ್ಳಿ

ಪರ್ಯಾಯ ಚಲನಚಿತ್ರಗಳಾದ ‘ಕಾಡು’(1973), ‘ಅಂಕುರ್’(1974), ‘ಚೋಮನ ದುಡಿ’(1975) ಚಲನಚಿತ್ರಗಳಲ್ಲಿ ಗ್ರಾಮಜೀವನದ ಹಲವು ಆಯಾಮಗಳು ಅನಾವರಣಗೊಂಡಿದ್ದವು.  ಇವುಗಳ ಪ್ರಭಾವ ‘ಭೂತಯ್ಯನ ಮಗ ಅಯ್ಯು’ ಒಳಗೊಂಡಂತೆ ಇತರ ಕಮರ್ಷಿಯಲ್ ಚಲನಚಿತ್ರಗಳ ಮೇಲೂ ಬಿದ್ದಿರಬಹುದಾದ ಸಾಧ್ಯತೆಗಳಿವೆ (ಕಥನದ ಆಯ್ಕೆಗೆ ಸಂಬಂಧಿಸಿದಂತೆ).  ಅಂದ ಹಾಗೆ. ಜಮೀನುದಾರನೊಬ್ಬನ ಸುತ್ತ ಕಥನ ಕಟ್ಟಲಾಗಿದ್ದ ‘ಸಂಪತ್ತಿಗೆ ಸವಾಲ್’(ಇದು ಧುತ್ತರಗಿ ಎಂಬುವವರ ನಾಟಕ ಆಧಾರಿತ ಸಿನಿಮಾ) ಕೂಡ 1974ರಲ್ಲಿ ಬಿಡುಗಡೆಯಾಯಿತು.

ಪ್ರಧಾನ ಭೂಮಿಕೆಯಲ್ಲಿರುವ ಭೂತಯ್ಯ ಮತ್ತು ಆತನ ಮಗ ಅಯ್ಯು ಮೇಲ್ಜಾತಿ ಮತ್ತು ಮೇಲ್ವರ್ಗಕ್ಕೆ ಸೇರಿದವರಾಗಿದ್ದು, ಇತರರು ಕೆಳವರ್ಗದವರಾಗಿರುವುದರಿಂದ, ಈ ಚಲನಚಿತ್ರದಲ್ಲಿ ವರ್ಗವೈರುಧ್ಯಗಳ ಆಯಾಮವಿದೆ. ಆದರೆ ವರ್ಗ ಶ್ರೇಣೀಕರಣದಿಂದ ಪರಿಣಮಿಸುವ ಕ್ರೌರ್ಯ, ಹಿಂಸೆ ಮತ್ತು ಅಪಮಾನ ಮುಂತಾದವುಗಳಿಗೆ ಪ್ರತಿರೋಧ ವೈಯಕ್ತಿಕ ಮಟ್ಟದಲ್ಲಿ ಅಭಿವ್ಯಕ್ತಿಗೊಂಡಿದೆಯೇ ಹೊರತು ವರ್ಗದ(ಸಾಮುದಾಯಿಕ) ನೆಲೆಯಲ್ಲಿ ಇಲ್ಲ. ಅಂದರೆ ಫ್ಯೂಡಲಿಸಂ (ಊಳಿಗಮಾನ್ಯ) ವ್ಯವಸ್ಥೆಯ ವಿರುದ್ಧದ ಪ್ರತಿರೋಧ ಇಲ್ಲಿ ಕಂಡು ಬರುವುದಿಲ್ಲ. ಭೂತಯ್ಯ ಅಸುನೀಗಿದಾಗ ಹಳ್ಳಿಗರು ಆತನ ಶವಸಂಸ್ಕಾರದಲ್ಲಿ ಭಾಗವಹಿಸುವುದಿಲ್ಲ. ಇದೊಂದು ಸಾಮುದಾಯಿಕ ಸ್ಪಂದನದ ಬಿಡಿ ಪ್ರಕರಣ ಅಷ್ಟೇ. ಹೀಗಾಗಿರುವುದಕ್ಕೆ ಎರಡು ಕಾರಣಗಳಿರಬಹುದು. ಒಂದು – ಮೂಲ ಕಥೆಗೆ ಅನುಗುಣವಾಗಿ ನಿರ್ದೇಶಕರು ಸಿನಿಮಾ ನಿರೂಪಣೆಗೆ ಕೈ ಹಾಕಿರಬಹುದು. ಇನ್ನೊಂದು, ನಿರ್ದೇಶಕರು ಸಿನಿಮೇಟಿಕ್ ಲಿಬರ್ಟೀಸ್‌ಗಳನ್ನು ತೆಗೆದುಕೊಳ್ಳದಿರಲು ನಿಶ್ಚಯಿಸಿರಬಹುದು. ಅಲ್ಲದೇ ಮೂಲ ಕಥೆಯ ಲೇಖಕರಾದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಗಾಂಧೀವಾದಿಗಳಾಗಿದ್ದರು.  ವೈಯಕ್ತಿಕ ನೆಲೆಯ ಪರಿವರ್ತನೆಗೆ ಗಾಂಧೀವಾದದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಆದುದರಿಂದ ಗೊರೂರುರವರು ತಾವು ನಂಬಿದ ಸಿದ್ಧಾಂತಕ್ಕೆ ಅನುಸಾರವಾಗಿ ಕಥೆಯನ್ನು ಅಂತ್ಯಗೊಳಿಸಿರಬಹುದು. ಸುಮಾರು ನಲವತ್ತೈದು ವರ್ಷಗಳ ತರುವಾಯ ಈ ಅಂಶವನ್ನು ಒರೆಗೆ ಹಚ್ಚುತ್ತಿರುವುದರಿಂದ ಇಂತಹ ಅಭಿಪ್ರಾಯಗಳು ಮೂಡಿರಬಹುದಾದ ಸಾಧ್ಯತೆಯೂ ಇದೆ!

ಎಂ.ಪಿ.ಶಂಕರ್, ಬಾಲಕೃಷ್ಣ

ಹಳ್ಳಿಯಲ್ಲಿ ಜರಗುವ ಕೆಲವು ಪ್ರಮುಖ ಘಟನೆಗಳನ್ನು, ಸಣ್ಣ, ಸಣ್ಣ ಸಂಗತಿಗಳನ್ನು ಕಟ್ಟಿಕೊಡುವ ಮೂಲಕ ಸಿದ್ದಲಿಂಗಯ್ಯ ಇಡೀ ಚಲನಚಿತ್ರದ ಪಾತ್ರಪೋಷಣೆಗೆ ಬಲವನ್ನು ನೀಡಿದ್ದಾರೆ.  ಅವರು ತಾರಾಗಣದಲ್ಲಿರುವ ನಟರನ್ನು ಸಮರ್ಥವಾಗಿ ದುಡಿಸಿಕೊಳ್ಳುವುದರಲ್ಲಿ ಸಫಲರಾಗಿದ್ದಾರೆ. ಪ್ರಥಮ ಬಾರಿಗೆ ಸಿದ್ಧಿ ಜನಾಂಗದ (ಆಫ್ರಿಕಾ ಮೂಲದವರಾದ ಇವರು ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ) ಒಬ್ಬ ವ್ಯಕ್ತಿಯನ್ನು ನಟನನ್ನಾಗಿ ಆಯ್ಕೆ ಮಾಡಲಾಗಿದೆ. ಮಾದೇವಿ (ಗುಳ್ಳನ ಹೆಂಡತಿ) ಮತ್ತು ಗಿರಿಜಾ (ಅಯ್ಯುವಿನ ಹೆಂಡತಿ) ಪಾತ್ರಗಳು ಶಕ್ತವಾಗಿ ಮೂಡಿ ಬಂದಿವೆ. ಚಲನಚಿತ್ರದ ಕೊನೆಯ ಹಂತದಲ್ಲಿ ಗಿರಿಜಾ ಅಯ್ಯುನನ್ನು ಅಡ್ಡಕಟ್ಟಿ ಮನಸ್ಸಿಗೆ ತಾಗುವಂತೆ ಕೆಲವು ಸಂಗತಿಗಳನ್ನು ಮನದಟ್ಟು ಮಾಡುತ್ತಾಳೆ.  ಅಯ್ಯುವಿನ ಮನಸ್ಸು ಪರಿವರ್ತನೆಗೊಳ್ಳತ್ತದೆ! ಆದರೆ ಇದು ತೀರ ಬೇಗನೆ ಜರುಗುವ, ಸ್ವಲ್ಪ ಅಸಹಜ ಬೆಳವಣಿಗೆ ಎಂಬ ಭಾವ ಕೆಲವು ವೀಕ್ಷಕರಲ್ಲಿ ಮೂಡಬಹುದು! ಈ ದೃಶ್ಯದಲ್ಲಿ ಮೂಡಬಂದಿರುವ ಬೆಳಕಿನ ವಿನ್ಯಾಸಗಳು ಗಮನೀಯ. ಪ್ರಥಮ ಬಾರಿಗೆ ಕನ್ನಡ ಚಲನಚಿತ್ರರಂಗದಲ್ಲಿ ಇಡೀ ಚಲನಚಿತ್ರ ಹೊರಾಂಗಣದಲ್ಲೇ ಚಿತ್ರೀಕರಿಸಿದ್ದು ಇದರ ಹೆಗ್ಗಳಿಕೆ.  ಸಿದ್ದಲಿಂಗಯ್ಯನವರು ಇದರ ಹೆಚ್ಚಿನ ಭಾಗವನ್ನು ಚಿಕ್ಕಮಗಳೂರಿನ ಸಮೀಪದ ಕಳಸಾಪುರದಲ್ಲಿ ಚಿತ್ರೀಕರಿಸಿದರು (‘ಬಂಗಾರದ ಮನುಷ್ಯ’ದಲ್ಲಿ ಕೂಡ ಭಾಗಶಃ ಈ ಹಳ್ಳಿಯನ್ನು ಬಳಸಲಾಯಿತು).

ಉಪ್ಪಿನ ಕಾಯಿ ಸನ್ನಿವೇಶದಲ್ಲಿ ನಟ ಲೋಕನಾಥ್

ಈ ಚಲನಚಿತ್ರದ ಡಿ.ವಿ.ರಾಜಾರಾಮ್ ಅವರ ಛಾಯಾಚಿತ್ರಗ್ರಹಣ ಅವರ ಇಡೀ ವೃತ್ತಿಜೀವನದಲ್ಲೇ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.  ಅವರಿಗೆ ಸಹಾಯಕರಾಗಿದ್ದ ಖ್ಯಾತ ಛಾಯಾಚಿತ್ರಗ್ರಾಹಕ ಬಿ.ಎಸ್.ಬಸವರಾಜ್ ಕೆಲವು ವರ್ಷಗಳ ಹಿಂದೆ ಒಂದು ಸಂದರ್ಶನದಲ್ಲಿ ಈ ಚಲನಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯದ (ಮೂಲಕಥೆಯಲ್ಲಿರುವ ಒಂದು ಪ್ಯಾರಾ) ಬಗೆಗೆ ಬೆಳಕನ್ನು ಚೆಲ್ಲಿದ್ದರು. ಬೀಳುತ್ತಿರುವ ಮಳೆಯಲ್ಲಿ, ತುಂಬಿ ಹರಿಯುತ್ತಿದ್ದ ನದಿಯಲ್ಲಿ, ಇಂದಿನಂತೆ ತಾಂತ್ರಿಕ ಸೌಲಭ್ಯಗಳು ಇರದ ಕಾಲದಲ್ಲಿ ಕನ್ನಡ ಸಿನಿಮಾ ಚರಿತ್ರೆಯಲ್ಲೇ ಬೆಕ್ಕಸಬೆರಗಾಗುವ ರೀತಿಯಲ್ಲಿ ಆ ದೃಶ್ಯ ಚಿತ್ರೀಕರಿಸಿದ್ದು ಒಂದು ಅಪೂರ್ವ ಸಾಧನೆಯೇ ಸರಿ.  ಇದನ್ನು ಶೂಟ್ ಮಾಡಲು ಇಪ್ಪತ್ತು ದಿನಗಳು ಬೇಕಾಯಿತಂತೆ! ಭದ್ರತೆಯ ದೃಷ್ಟಿಯಿಂದ ಎಂಟು ಸ್ಥಳೀಯ ಈಜುಗಾರರನ್ನು, ಕೆಲವು ಅಂಬಿಗರನ್ನು ನಿಯೋಜಿಸಲಾಗಿತ್ತು ಎಂದು ಬಸವರಾಜ್ ಸಂದರ್ಶನದ ಸಮಯದಲ್ಲಿ ತಿಳಿಸಿದ್ದರು.

ಖಾನಾವಳಿ ಹಾಸ್ಯ ಸನ್ನಿವೇಶದ ಒಂದು ಫೋಟೊ

ಈ ಚಲನಚಿತ್ರದ ಉಪ್ಪಿನಕಾಯಿಗೆ ಸಂಬಂಧಿಸಿದ ಮತ್ತು ದುಡ್ಡು ಕೊಡದೆ ನಾಲ್ಕು ಮಂದಿ ಪೊಗದಸ್ತಾಗಿ ಊಟ ಮಾಡುವ ದೃಶ್ಯಗಳನ್ನು ಚಲನಚಿತ್ರ ರಸಿಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಸುಶ್ರಾವ್ಯ ಹಾಡುಗಳನ್ನು ಕೂಡ. ‘ಕೂಡಿ ಬಾಳಿದರೇ ಸ್ವರ್ಗಸುಖ’ ಎಂಬ ಸಂಭಾಷಣೆ ಹಾಗೂ ಟ್ಯಾಗ್‌ಲೈನ್‌ನೊಂದಿಗೆ ಕ್ಲೋಸ್-ಎಂಡೆಡ್ ಮುಕ್ತಾಯವನ್ನು ಕಾಣುತ್ತದೆ ಈ ಚಲನಚಿತ್ರ. ಇದೊಂದು ಹೆಸರುವಾಸಿಯಾದ ಜನಪ್ರಿಯ ಚಲನಚಿತ್ರ. ನಮ್ಮ ದೇಶದ ರಾಮಾಯಣ ಮತ್ತು ಮಹಾಭಾರತದಂತಹ ಪುರಾಣಗಳು ಹಲವು ಚಲನಚಿತ್ರಗಳ ವಸ್ತು, ನಿರೂಪಣೆ, ತಾತ್ವಿಕತೆ ಮತ್ತು ಸಂದೇಶದ  ಮೇಲೆ ಪ್ರಭಾವವನ್ನು ಬೀರಿವೆ.  ಅಲ್ಲದೆ ಅವುಗಳ ಮೇಲೆ ರಂಗಭೂಮಿಯ ಛಾಯೆಯೂ ಇದೆ. ಕೆಡುಕಿನ ವಿರುದ್ಧ ಒಳಿತು ಸಾಧಿಸುವ ವಿಜಯ ಅನೇಕ ಚಲನಚಿತ್ರಗಳ ಅಂತ್ಯದಲ್ಲಿ ಕಂಡು ಬರುವ ಸಾಮಾನ್ಯ ಅಂಶ. ಅಲ್ಲದೆ ಜನಪ್ರಿಯ ಚಲನಚಿತ್ರಗಳಲ್ಲಿ ಮೆಲೊಡ್ರಾಮ, ಹಾಡುಗಳು, ಹಾಸ್ಯ, ಫೈಟ್‌ಗಳು, ಕೆಲವು ಮತೀಯ ಆಚರಣೆಗಳು ಇತ್ಯಾದಿಗಳನ್ನು ಹೂರಣದಲ್ಲಿ ಅಡಕಗೊಳಿಸಲಾಗುತ್ತದೆ.  ಇವೆಲ್ಲವೂ ‘ಭೂತಯ್ಯನ ಮಗ ಅಯ್ಯು’ ಚಲನಚಿತ್ರದಲ್ಲಿವೆ.

‘ಬೂತಯ್ಯನ ಮಗ ಅಯ್ಯು’ ಯೂಟ್ಯೂಬ್ ಲಿಂಕ್‌ – https://youtu.be/aRJkkpOC12s

ವಿಷ್ಣುವರ್ಧನ್, ಭವಾನಿ

ಈ ಬರಹಗಳನ್ನೂ ಓದಿ