ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕನ್ನಡ ರಂಗಭೂಮಿ ಮತ್ತು ಚಲನಚಿತ್ರಗಳ ಸಾವಯವ ಸಂಬಂಧಗಳು

ಪೋಸ್ಟ್ ಶೇರ್ ಮಾಡಿ
ಕೆ.ಪುಟ್ಟಸ್ವಾಮಿ
ಲೇಖಕರು

ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ನಂಟಿಗೆ ಶತಮಾನದ ಇತಿಹಾಸವಿದೆ. ರಂಗಭೂಮಿಯ ಕಸುವನ್ನು ಹೀರುತ್ತಾ ಚಿತ್ರರಂಗ ಬೆಳೆಯುತ್ತಾ ಬಂದಿರುವುದು ಹೌದು. ವಿಶ್ವ ರಂಗಭೂಮಿ ದಿನದ (ಮಾರ್ಚ್‌ 27) ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಕೆ.ಪುಟ್ಟಸ್ವಾಮಿ ಅವರ ಸವಿಸ್ತಾರವಾದ ಬರಹವಿದು.

ಕನ್ನಡ ರಂಗಭೂಮಿಯು ಭಾರತೀಯ ರಂಗಭೂಮಿಯಂತೆಯೇ ಜನಪದರ ಒಡಲಿನಿಂದ ಆವಿರ್ಭವಿಸಿದ ಕಲಾ ಪ್ರಕಾರ. ಪ್ರಾಚೀನ ರಂಗಭೂಮಿಯನ್ನು ಸಾಮಾನ್ಯವಾಗಿ ಎರಡು ವರ್ಗಗಳಾಗಿ ನಿರ್ವಚಿಸುತ್ತಾರೆ. ಒಂದು ಜನಸಮುದಾಯ ತನ್ನ ರಂಜನೆಗಾಗಿ ಕಟ್ಟಿದ ಜನಪದ ರಂಗಭೂಮಿ. ಕರ್ನಾಟಕದಲ್ಲಿ ಕಂಡುಬರುವ ಬಯಲಾಟ, ಸಣ್ಣಾಟ, ದೊಡ್ಡಾಟ, ಗೊಂಬೆಯಾಟ ಇತ್ಯಾದಿ ಜನಪದ ರಂಗಭೂಮಿಯ ಪ್ರಕಾರಗಳು. ಮತ್ತೊಂದು-ಪ್ರಭುತ್ವ ಪೋಷಿತ ನಾಟಕ ಪ್ರದರ್ಶನಗಳು. ಕಲಾಪೋಷಣೆ ರಾಜರ ಕರ್ತವ್ಯಗಳಲ್ಲೊಂದಾದ ಕಾರಣ ರಾಜರ ಆಸ್ಥಾನದಲ್ಲಿ ನಾಟಕಗಳನ್ನು ಏರ್ಪಡಿಸುವ ಪರಿಪಾಠವಿತ್ತು. ಇವು ಸಂಸ್ಕೃತ ರಂಗಭೂಮಿಯನ್ನು ಅನುಕರಿಸುತ್ತಿದ್ದವು. ಹಾಗಾಗಿ ಸಂಗೀತ ಅಭಿನಯಕ್ಕೆ ಹೆಚ್ಚು ಪ್ರಾಧಾನ್ಯವಿತ್ತು. ಬಹುತೇಕ ಕಲಾವಿದರು ಸಂಗೀತಗಾರರೇ ಆಗಿರುತ್ತಿದ್ದದ್ದು ವಿಶೇಷ. ಈ ಎರಡೂ ವರ್ಗಗಳ ನಾಟಕ ರೂಪಗಳು ಎಂದೂ ಉದ್ಯಮವಾಗಿರಲಿಲ್ಲ. ಒಂದು ಆರ್ಥಿಕ ರೀತಿ-ನೀತಿಗಳನ್ನು ಅಳವಡಿಸಿಕೊಂಡಿರಲಿಲ್ಲ. ಜನರಂಜನೆ, ಬೋಧನೆಗಳೇ ಅವುಗಳ ಹಿಂದಿನ ಉದ್ದೇಶಗಳಾಗಿದ್ದವು.

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದ ಭಾರತದಲ್ಲಿ ವೃತ್ತಿ ರಂಗಭೂಮಿಗಳು ತಲೆಯೆತ್ತಿದ್ದವು. ಜನರಂಜನೆಯ ಮೂಲಕ ರಂಗಭೂಮಿಯನ್ನು ಉದ್ಯಮವನ್ನಾಗಿಸಿದ ಖ್ಯಾತಿ ಅವುಗಳಿಗೆ ಸಲ್ಲುತ್ತದೆ. ಹಾಗಾಗಿ ರಂಗಭೂಮಿಯು ಒಂದು ಸಾಂಸ್ಥಿಕ ಸ್ವರೂಪ ಪಡೆಯಿತು. ಮುಖ್ಯವಾಗಿ ಪಾರ್ಸಿ ರಂಗಭೂಮಿಯು ಭಾರತದಲ್ಲಿ ವೃತ್ತಿ ರಂಗಭೂಮಿಯನ್ನು ಉದ್ಘಾಟಿಸಿದ್ದು ಮಾತ್ರವಲ್ಲ; ಇಡೀ ಭಾರತೀಯ ವೃತ್ತಿ ರಂಗಭೂಮಿಯ ಮೇಲೆ ಮತ್ತೆ ನಂತರದ ಚಲನಚಿತ್ರರಂಗದ ಬೆಳವಣಿಗೆ, ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸಿತು. ಇಂದಿಗೂ ಪಾರ್ಸಿ ರಂಗಭೂಮಿಯ ಪ್ರಭಾವವನ್ನು ಚಲನಚಿತ್ರರಂಗ ತಪ್ಪಿಸಿಕೊಳ್ಳಲು ಹೆಣಗಾಡುತ್ತಲೇ ಇದೆ.

ವಾಣಿಜ್ಯ ವ್ಯವಹಾರ ಮತ್ತು ಹಡಗು ನಿರ್ಮಾಣದ ಉದ್ದಿಮೆಯಲ್ಲಿ ತೊಡಗಿಸಿಕೊಂಡು ಆರ್ಥಿಕ ಶ್ರೀಮಂತಿಕೆಯನ್ನು ಗಳಿಸಿಕೊಂಡದ್ದು ಪಾರ್ಸಿ ಸಮುದಾಯ. ಪ್ರಮುಖವಾಗಿ ಪಶ್ಚಿಮ ಕರಾವಳಿಯಲ್ಲಿ ನೆಲೆ ನಿಂತ ಈ ವರ್ಗ ತನ್ನ ಕಾರ್ಯಕ್ಷೇತ್ರವನ್ನು ನಾನಾ ರಂಗಗಳಿಗೆ ವಿಸ್ತರಿಸಿಕೊಂಡಿತು. ಜನೋಪಕಾರ ಮತ್ತು ಸಾಂಸ್ಕೃತಿಕ ರಂಗ ಅವರು ಕೈಚಾಚಿದ ಎರಡು ಪ್ರಮುಖ ಕ್ಷೇತ್ರಗಳು. ವಣಿಕರಾಗಿದ್ದ ಅವರು ಸಹಜವಾಗಿಯೇ ರಂಗಭೂಮಿಯನ್ನು ಉದ್ಯಮವಾಗಿ ಪರಿವರ್ತಿಸಲು ತೊಡಗಿದರು. ಜನರಿಗೆ ನಾಟಕಗಳನ್ನು ಪ್ರದರ್ಶಿಸಲು ರಂಗಭೂಮಿ ನಿರ್ಮಿಸಿದರು. ಕಲಾವಿದರನ್ನು ತಿಂಗಳ ವೇತನದ ಆಧಾರದಲ್ಲಿ ಕಲೆ ಹಾಕಿದರು. ಸಂಗೀತಕಾರರಿಗೆ ಪ್ರಯೋಗಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಿದರು. ಸಾಹಿತಿಗಳಿಂದ ನಾಟಕಗಳನ್ನು ಬರೆಸಿ ಪ್ರಯೋಗಿಸಿದರು.

ಭಾರತದ ಮೊದಲ ಸಿನಿಮಾ (ಮೂಕಿ) ‘ಸತ್ಯ ಹರಿಶ್ಚಂದ್ರ’

ಭಾರತೀಯ ರಂಗಭೂಮಿಯನ್ನು ರೂಪಿಸುವಲ್ಲಿ ಪಾರ್ಸಿ ಸಮಾಜ ವಹಿಸಿದ ಪಾತ್ರ ಅಪ್ರತಿಮವಾದದ್ದು. ಮುಂಬಯಿಯಲ್ಲಿ ಪಾರಸೀಯರು ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ರಂಗಮಂದಿರಗಳಿದ್ದವು. ಅವುಗಳನ್ನು ‘ಪೀಲಾ ಹೌಸ್’ (ಪ್ಲೇ ಹೌಸ್‍ನ ಅಪಭ್ರಂಶ) ಎನ್ನುತ್ತಿದ್ದರು. ಪಾರ್ಸಿ ನಾಟಕ ಮಂಡಳಿಗಳು ದೂರದೂರದ ಊರುಗಳಿಗೆ ಸಂಚರಿಸಿದಂತೆ ಹೋದಲ್ಲೆಲ್ಲ ನಾಟಕದ ಹಣತೆಗಳು ಹತ್ತಿಕೊಂಡವು. ಹಾಗೆ ಹತ್ತಿಕೊಂಡು ಪ್ರತಿಯೊಂದು ಜ್ಯೋತಿಯೂ ಅಯಾ ಪ್ರಾಂತ್ಯದ ಭಾಷೆಯನ್ನಾಡಿತು.

ಪಾರ್ಸಿ ರಂಗಭೂಮಿಯು 1850 ರಿಂದ 1930ರವರೆಗೆ ತನ್ನ ಉಚ್ಛ್ರಾಯ ಸ್ಥಿತಿಯಲ್ಲೇ ಮುಂದುವರೆಯಿತು. ಅದು ಜಗತ್ತಿನ ಹಲವಾರು ರಂಗಭೂಮಿಗಳಿಂದ ವಸ್ತು, ವಿಷಯ, ವಿನ್ಯಾಸಗಳನ್ನು ಎರವಲು ಪಡೆದುಕೊಂಡು ಒಂದು ವಿಶಿಷ್ಟ ರಂಗಪ್ರಕಾರವನ್ನು ಹುಟ್ಟು ಹಾಕಿತು. ಪ್ರಧಾನವಾಗಿ ಮಧ್ಯಮ ವರ್ಗದ ಜನರಿಗೆ ರಂಜನೆ ನೀಡುವ ಮೂಲಕ ಆರ್ಥಿಕ ಲಾಭ ಸಂಪಾದನೆಗೆ ವೃತ್ತಿ ರಂಗಭೂಮಿ ಮಾಧ್ಯಮವಾಯಿತು. ಜನಪದ ರಂಗದ ಧ್ಯೇಯಗಳಾದ ದೇವತಾರಾಧನೆ, ನೀತಿಬೋಧೆ ಮತ್ತು ಆಸ್ಥಾನ ರಂಗದ ಕಲಾ ಪ್ರೌಢಿಮೆ ಕಲಾರಸಿಕತೆ, ಕಲಾಪ್ರತಿಷ್ಠೆಗಳಿಗಿಂತ ಭಿನ್ನವಾದ ಮನರಂಜನೆ, ಹಣ ಸಂಪಾದನೆಯೇ ಗುರಿಯಾದ ವೃತ್ತಿ ರಂಗಭೂಮಿ ಅದಕ್ಕೆ ಅನುಗುಣವಾಗಿ ನಾಟಕ ವಿಧಾನವನ್ನು ರೂಪಿಸಿಕೊಂಡಿತು. ಮುಖ್ಯವಾಗಿ ಬ್ರಿಟಿಷ್ ನಾಟಕಗಳ ರಂಗಸಜ್ಜಿಕೆ, ದೃಶ್ಯ ಸಂಯೋಜನೆ, ಯೂರೋಪ್ ರಂಗಭೂಮಿಯ ವೇದಿಕೆ, ಭಾರತದ ಪುರಾಣ ವಸ್ತುಗಳು, ಪಾಶ್ಚಾತ್ಯ ನಾಟಕಗಳು ಮತ್ತು ಅರಬ್ ರಾಷ್ಟ್ರಗಳ ಕಥಾವಸ್ತುಗಳನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿತು.

ರಾಮಾಯಣ, ಮಹಾಭಾರತ ಮತ್ತು ಪೌರಾಣಿಕ ವಸ್ತುಗಳನ್ನೊಳಗೊಂಡಂತೆ, ಷೇಕ್ಸ್‍ಪಿಯರ್‍ನ ರೋಮಿಯೋ ಜೂಲಿಯಟ್, ಅರಬ್ ಮೂಲದ ಗುಲ್ ಬಕಾವಲಿ, ಸೊಹ್ರಾಬ್ ರುಸ್ತುಂ, ಅಲ್ಲಾವುದ್ದೀನ್ ಮುಂತಾದ ವಸ್ತುಗಳನ್ನು ನಾಟಕಕ್ಕೆ ಪಾರ್ಸಿ ರಂಗಭೂಮಿಯ ಸಂಘಟಕರು ಒಗ್ಗಿಸಿದರು. ಮುಖ್ಯವಾಗಿ ಪೌರಾಣಿಕ ನಾಟಕಗಳ ವಸ್ತ್ರವಿನ್ಯಾಸ, ಪ್ರಸಾಧನ ಮತ್ತು ಪರಿಸರ ಸೃಷ್ಟಿಗೆ ಅವರು ಕಲಾವಿದ ರಾಜಾ ರವಿವರ್ಮ ಚಿತ್ರಿಸಿದ ಪೌರಾಣಿಕ ವ್ಯಕ್ತಿಗಳ ಕ್ಯಾನ್‍ವಾಸುಗಳನ್ನು ಅನುಕರಿಸಿದರು. ಉಡುಗೆ-ತೊಡುಗೆ, ಒಡವೆ-ಕಿರೀಟಗಳಿಂದ ಹಿಡಿದು ಚಿತ್ರಗಳ ಸೂಕ್ಷ್ಮಾತಿ ಸೂಕ್ಷ್ಮಗಳನ್ನೆಲ್ಲ ರಂಗದ ಮೇಲೆ ಮೂರ್ತರೂಪಕ್ಕೆ ತಂದ ಖ್ಯಾತಿ ಅವರದು. ಇದೇ ಆಧಾರದ ಮೇಲೆ ಅವರು ಎಲ್ಲ ಪೌರಾಣಿಕ, ಚಾರಿತ್ರಿಕ ವ್ಯಕ್ತಿಗಳ ವಸ್ತ್ರವಿನ್ಯಾಸವನ್ನು ಮಾಡಿಸಿದರು. ಹನ್ನೆರಡನೇ ಶತಮಾನದ ಬಸವಣ್ಣ, ಹದಿನಾಲ್ಕನೇ ಶತಮಾನದ ಶ್ರೀಕೃಷ್ಣದೇವರಾಯ, ಛತ್ರಪತಿ ಶಿವಾಜಿ ಮುಂತಾದ ಐತಿಹಾಸಿಕ ಪಾತ್ರಗಳೂ ರಾಜಾ ರವಿವರ್ಮನ ದೇವರುಗಳಂತೆ ಕಿರೀಟ, ಭುಜಕೀರ್ತಿ ಮತ್ತು ಉಡುಪಿನಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವುದರ ಹಿಂದೆ ಪಾರ್ಸಿ ರಂಗಭೂಮಿಯ ಕೊಡುಗೆಯಿದೆ.

ಭಾರತದ ಮೊದಲ ಟಾಕಿ ‘ಆಲಂ ಅರಾ’

ಪಾರ್ಸಿ ರಂಗಭೂಮಿಯ ಪ್ರಭಾವದಿಂದಲೇ ಕರ್ನಾಟಕದಲ್ಲೂ ವೃತ್ತಿರಂಗಭೂಮಿಗಳು ತಲೆಯೆತ್ತಿದ್ದವು. ಅಲ್ಲದೇ, ಮರಾಠೀ ರಂಗಭೂಮಿಯ ಪ್ರಭಾವವನ್ನು ಪ್ರತಿರೋಧಿಸಲು ಗದಗಿನಲ್ಲಿ ಮೊದಲ ವೃತ್ತಿ ರಂಗಭೂಮಿ ಆರಂಭವಾಯಿತು. ಶಾಂತಕವಿ – ಬಾಳಾಚಾರ್ಯ ಗೋಪಾಳಚಾರ್ಯ ಸಕ್ಕರಿಯವರ ನೇತೃತ್ವದಲ್ಲಿ 1874ರಲ್ಲಿ ಸ್ಥಾಪನೆಯಾದ ‘ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ ಕನ್ನಡದ ಮೊದಲ ವೃತ್ತಿ ನಾಟಕ ಕಂಪನಿ. ರಾಯಲ್ ಡ್ರಾಮಾಟಿಕ್ ಕಂಪನಿ ಎಂಬ ವೃತ್ತಿರಂಗಭೂಮಿ ಸಂಸ್ಥೆಯನ್ನು ಹುಟ್ಟುಹಾಕಿತು.

ಅರಮನೆಯ ಕಂಪನಿ ನಾಟಕಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುತ್ತಿದ್ದರೂ ದಕ್ಷಿಣ ಕರ್ನಾಟಕದ ಹಲವೆಡೆ ಸ್ವತಂತ್ರ ನಾಟಕ ಕಂಪನಿಗಳು ಸ್ಥಾಪನೆಯಾದವು. ಮಂಡ್ಯದಲ್ಲಿದ್ದ ರಂಗಾಚಾರ್ಯರು ಕಟ್ಟಿದ ರಾಜಧಾನಿ ನಾಟಕ ಮಂಡಳಿ (1881), ರಸಿಕ ಮನೋಲ್ಲಾಸಿನಿ ನಾಟಕ ಮಂಡಳಿ (1883) ಶ್ರೀ ಸರಸ್ವತಿ ವಿಲಾಸ ಕರ್ನಾಟಕ ಸಭೆ, ಬೆಂಗಳೂರಿನ ಶ್ರೀ ಕಂಠೇಶ್ವರ ಕರ್ನಾಟಕ ನಾಟಕ ಸಭೆ, ಗೊಲ್ಲರಪೇಟೆ ನಾಟಕ ಸಭೆ, ಬುಳ್ಳಪ್ಪನವರ ಕಂಪನಿ ಹೀಗೆ ಆರಂಭ ಕಾಲದಲ್ಲಿ ಮೈಸೂರು, ಬೆಂಗಳೂರು ಸುತ್ತಮುತ್ತ ಅನೇಕ ಕಂಪನಿಗಳು ಮೂಡಿದವು. ಆದರೆ ಕನ್ನಡ ವೃತ್ತಿರಂಗಭೂಮಿ ಸಾರ್ವಜನಿಕರಲ್ಲಿ ಮೂಡಿಸಿದ ಕಲಾಭಿಮಾನವನ್ನೇ ಬಂಡವಾಳ ಮಾಡಿಕೊಂಡು, ತಮ್ಮ ಸಂಘಟನಾ ಚಾತುರ್ಯ ಮತ್ತು ನಿರಂತರ ಪ್ರಯೋಗಶೀಲತೆಯಿಂದ ಕೆಲವರು ಬೃಹತ್ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಈ ಸಂಸ್ಥೆಗಳೇ ಮುಂದೆ ಕನ್ನಡ ಚಲನಚಿತ್ರರಂಗದ ಗತಿಯನ್ನು ನಿರ್ದೇಶಿಸಿದವು. ಅವುಗಳಲ್ಲಿ ಮುಖ್ಯವಾದವು ಶ್ರೀ ಗುಬ್ಬಿ ಚನ್ನ ಬಸವೇಶ್ವರ ಕೃಪಾಪೋಷಿತ ನಾಟಕ ಸಂಘ (ಗುಬ್ಬಿ ಕಂಪನಿ ಎಂದೇ ಜನಪ್ರಿಯ) ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ (ಎಸ್.ಎಸ್.ಎಸ್. ಕಂಪನಿ ಅಥವಾ ಸುಬ್ಬಯ್ಯನಾಯ್ಡು ಕಂಪನಿ) ಟೈಗರ್ ವರದಾಚಾರ್ಯರ ರತ್ನಾವಳಿ ಥಿಯೇಟ್ರಿಕಲ್ಸ್, ಪೀಲ್ ಸಾಹೇಬರ್ ಚಂದ್ರಕಲಾ ನಾಟಕ ಮಂಡಳಿ, ಹಿರಣ್ಣಯ್ಯ ಮಿತ್ರ ಮಂಡಳಿ ಹಾಗೂ ಇತರೆ ಸಂಸ್ಥೆಗಳು.

1880 ರಿಂದ ಕನ್ನಡ ವೃತ್ತಿ ರಂಗಭೂಮಿ ತನ್ನ ಬೇರುಗಳನ್ನು ಬಲವಾಗಿ ಊರಿದ್ದಷ್ಟೇ ಅಲ್ಲ ಇಡೀ ದಕ್ಷಿಣ ಭಾರತಕ್ಕೆ ವ್ಯಾಪಿಸಿತು. ಭಾಷೆಯ ಗಡಿಗಳಿಲ್ಲದೆ ಸ್ವಚ್ಛಂದವಾಗಿ ಬೆಳೆದ ಕನ್ನಡ ರಂಗಭೂಮಿ ಅಪ್ರತಿಮ ನಾಟಕಕಾರರನ್ನು ಕಲಾವಿದರನ್ನು, ವ್ಯವಹಾರ ಕುಶಲಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿತು. ‘ಕಂಪನಿ ನಾಟಕಗಳು’ ಎಂದು ವೃತ್ತಿರಂಗಭೂಮಿಯ ನಾಟಕಗಳು ಜನಪ್ರಿಯವಾದರೆ ವೃತ್ತಿ ರಂಗಭೂಮಿಯು ‘ನಾಟಕ ಕಂಪನಿ’ ಎಂದೇ ಜನಮಾನಸದಲ್ಲಿ ಅಚ್ಛಳಿಯದೆ ಉಳಿಯಿತು.  ಈ ಸಂಸ್ಥೆ ಮತ್ತು ಮಾಧ್ಯಮ ಮನರಂಜನೆಯ ಅನೇಕ ಸಾಧ್ಯತೆಗಳನ್ನು ಪರಿಚಯಿಸಿತು.

ನಿರ್ದೇಶಕ – ನಿರ್ಮಾಪಕ ಅರ್ದೇಶಿರ್ ಇರಾನಿ

ಭಾರತೀಯ ಚಲನಚಿತ್ರರಂಗದ ಮೇಲೆ ವೃತ್ತಿ ನಾಟಕಗಳು ಪ್ರಭಾವ ಬೀರಿರುವ ರೀತಿಯಲ್ಲಿಯೇ ಕನ್ನಡ ಚಿತ್ರರಂಗದ ಮೇಲೂ ಬೀರಿವೆ. ಭಾರತೀಯ ಚಲನಚಿತ್ರ ಪರಂಪರೆ ಆರಂಭವಾದದ್ದು ಧುಂಡಿರಾಜ್ ಗೋವಿಂದ ಫಾಲ್ಕೆ ನಿರ್ಮಿಸಿ ನಿರ್ದೇಶಿಸಿದ ‘ರಾಜಾ ಹರಿಶ್ಚಂದ್ರ’ (1913) ಚಿತ್ರದ ಮೂಲಕ. ರಂಗಭೂಮಿಯ ನಂಟು ಇಲ್ಲದ, ಶಿಲ್ಪಕಲೆ-ಚಿತ್ರಕಲೆ ತಮ್ಮ ಪ್ರಯೋಗಗಳಿಗೆ ಅಭ್ಯಾಸ ಮಾಡಿದ್ದ ಸಂಪ್ರಯವಾದಿ ಚಿತ್ಪಾವನ್ ಬ್ರಾಹ್ಮಣ ಕುಟುಂದ ಹಿನ್ನೆಲೆಯ ಫಾಲ್ಕೆ ಅವರು ಆರಿಸಿಕೊಂಡಿದ್ದು ಚಿತ್ರರಂಗವನ್ನು. ಮೊದಲ ಪ್ರಯೋಗವಾಗಿ ಅವರು ಆಯ್ಕೆಮಾಡಿದ್ದು ಭಾರತೀಯರಿಗೆ ಪರಿಚಿತವಾದ, ಹರಿಕತೆ-ನಾಟಕ ರೂಪಗಳಲ್ಲಿ ಯಶಸ್ವಿಯಾಗಿದ್ದ ಹರಿಶ್ಚಂದ್ರನ ಕತೆಯನ್ನೇ! ಆದರೆ ಮೂಕಿ ಯುಗದಲ್ಲಿ ನಂತರ ತಯಾರಾದ ಬಹುತೇಕ ಚಿತ್ರಗಳ ಕಥಾ ವಸ್ತುವಿಗೆ ಒತ್ತು ನೀಡುತ್ತಿದ್ದದ್ದು ಕಡಿಮೆ. ಹೊಸ ತಾಂತ್ರಿಕ ಸಾಧ್ಯತೆಯಾದ ಸಿನಿಮಾವನ್ನು ಪ್ರೇಕ್ಷಕರನ್ನು ಸೆಳೆಯುವ ದೃಷ್ಟಿಯಿಂದಲೇ ತಯಾರು ಮಾಡುತ್ತಿದ್ದರು. ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ, ಬೆರಗಾಗಿಸುವ, ಕಚಗುಳಿಯಿಡುವ ದೃಶ್ಯಗಳನ್ನೇ ಹೆಚ್ಚಾಗಿ ಅಳವಡಿಸುತ್ತಿದ್ದರು. ಸಾಹಸ, ನೃತ್ಯ ಮುಂತಾದ ದೃಶ್ಯಗಳನ್ನು ಬೆರೆಸಿ ಸಾಧಾರಣ ಕತೆಯ ಎಳೆಯನ್ನು ಬಳಸಿ ಸಿದ್ದಗೊಳಿಸುತ್ತಿದ್ದರು.

ಮಾತಿನ ಯುಗ ಆರಂಭವಾದ ನಂತರ ಭಾರತದಲ್ಲಿ ಇವೆಲ್ಲವೂ ತಲೆ ಕೆಳಗಾಯಿತು. ಆಗ ಸಿನಿಮಾಗಳು  ನಾಟಕದ ವಿಸ್ತ್ರತ ರೂಪದಂತೆ ತಯಾರಾದವು. ನವರಸಗಳನ್ನು ಬಳಸಿದ ಭಾರತೀಯ ಪರಂಪರೆಯ ನಾಟಕಗಳ ಸ್ಪಷ್ಟವಾದ ಪಾತ್ರಗಳು, ತೀವ್ರ ಭಾವನಾತ್ಮಕ ಅಂಶಗಳು, ಕಣ್ಮನ ಸೂರೆಗೊಳ್ಳುವ ದೃಶ್ಯಗಳು, ನೀತಿ ಬೋಧನೆ ಮುಂತಾದವುಗಳನ್ನು ಅಳವಡಿಸಿಕೊಂಡೇ ಚಿತ್ರಗಳು ತಯಾರಾಗತೊಡಗಿದವು.

ಭಾರತೀಯ ಚಲನಚಿತ್ರೋದ್ಯಮವು ತನ್ನ ಆರಂಭದ ದಿನಗಳಲ್ಲಿ ಕಥಾವಸ್ತುವಿಗೆ ಸಂಪೂರ್ಣವಾಗಿ ತನ್ನ ಸಂಸ್ಕೃತಿಯಲ್ಲಿ ಸಂಪದ್ಭರಿತವಾಗಿದ್ದ ಪುರಾಣದ ಕತೆಗಳು, ಚಾರಿತ್ರಿಕ ಘಟನೆಗಳು ಮತ್ತು ಜಾನಪದದ ರಮ್ಯಲೋಕವನ್ನೇ ನೆಚ್ಚಿಕೊಂಡಿತ್ತು. ಭಾರತೀಯ ಪ್ರೇಕ್ಷಕನ ಮನಸ್ಸು ತನ್ನ ಪರಂಪರೆಯ ಪೌರಾಣಿಕ ಕತೆಗಳಿಗೆ, ಜಾನಪದ ಲೋಕಕ್ಕೆ ಮತ್ತು ಚಾರಿತ್ರಿಕ ಸನ್ನಿವೇಶಗಳಿಗೆ ಮತ್ತೆ ಮತ್ತೆ ಹಿಂದಿರುಗಿ ಆನಂದ ಪಡೆಯುವ ಉಪಾಧಿಗೆ ಒಗ್ಗಿಕೊಂಡಿತ್ತು. ಚಿತ್ರ ನಿರ್ಮಾಪಕರು-ನಿರ್ದೇಶಕರು ಪ್ರೇಕ್ಷಕನ ಅಂತರಂಗವನ್ನು ಬಂಡವಾಳ ಮಾಡಿಕೊಂಡು ಪುರಾಣೇತಿಹಾಸದ ಕತೆಗಳನ್ನೇ ಚಿತ್ರ ಮಾಡಿದರು ಎನ್ನುವುದಕ್ಕಿಂತ ರಿಸ್ಕ್ ತೆಗೆದುಕೊಳ್ಳಲು ಬಯಸದೆ ಸುಲಭವಾದ ಸಿದ್ಧ ಶೈಲಿಯ ನಾಟಕಗಳ ಕತೆಗಳನ್ನು ಸೆಲ್ಯುಲಾಯ್ಡ್‍ಗೆ ಅಳವಡಿಸಿದರು ಎನ್ನುವುದೇ ಸೂಕ್ತ. ರಂಗಭೂಮಿಯು ಪುರಾಣೇತಿಹಾಸ, ಜಾನಪದ ಕತೆಗಳನ್ನು ಅತಿರಂಜಿತಗೊಳಿಸಿ, ಭ್ರಮಾಲೋಕ ಸೃಷ್ಟಿಸಿ ಪ್ರೇಕ್ಷಕನನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಎರಡೇ ಆಯಾಮದ ತೆರೆಯ ಮೇಲೆ ಮೂರು ಆಯಾಮದ ದೃಶ್ಯಾವಳಿಗಳನ್ನು ಸೃಜಿಸಬಲ್ಲ ಸಿನೆಮಾ ಎಂಬ ಅದ್ಭುತ ಮಾಧ್ಯಮವು ರಂಗಭೂಮಿಗಿದ್ದ ಕ್ರಿಯಾಶೀಲತೆಯನ್ನು ಮತ್ತಷ್ಟು ಹಿಗ್ಗಿಸಿತು. ಪರಿಣಾಮ- ಸಿನಿಮಾ ಮಾಧ್ಯಮವು ರಂಗಭೂಮಿಗಿಂತ ಬಹುದೊಡ್ಡ ಭ್ರಮಾಲೋಕವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ರಂಗಭೂಮಿಗೆ ಇಲ್ಲದ ಕ್ಲೋಸ್‍ಅಪ್ ಶಾಟ್‍ಗಳು, ವಿವಿಧ ಕೋನಗಳ ಚಿತ್ರೀಕರಣ, ಹೊರಾಂಗಣದ ಅವಕಾಶ, ಪರಿಪೂರ್ಣತೆಯನ್ನು ಸಾಧಿಸಲು ರೀಟೇಕ್, ಸಂಕಲನ, ಸಂಸ್ಕರಣಗಳ ಸಾಧ್ಯತೆಗಳು ಸಿನಿಮಾಕ್ಕೆ ದಕ್ಕಿದ್ದು ಅದರ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣ. ನಾಟಕ, ಸಿನಿಮಾಗಳಿಗೆ ಒಂದೇ ಕತೆ ಆಧಾರವಾದರೂ ಪರಿಣಾಮಗಳಲ್ಲಿ ವಿಭಿನ್ನವಾಗಿರುತ್ತವೆ. ವಿಭಿನ್ನ ಅನುಭವಲೋಕವನ್ನು ಸೃಜಿಸುತ್ತವೆ. ಹಾಗಾಗಿ ಆರಂಭದ ಸಿನಿಮಾಗಳು ಪುರಾಣ, ಇತಿಹಾಸ, ಜಾನಪದ ಲೋಕದ ಪರಿಚಿತ ಕತೆಗಳನ್ನೇ ಆಧರಿಸಿರುತ್ತಿದ್ದವು.

‘ಹಿಸ್ ಲವ್ ಅಫೇರ್ಸ್‌’ ಮೂಕಿ ಚಿತ್ರದಲ್ಲಿ ಗುಬ್ಬಿ ವೀರಣ್ಣ ಮತ್ತಿತರರು

ಭಾರತದ ಮೊದಲ ಚಿತ್ರ ‘ಅಲಂ ಅರಾ’ (1931) ಹಿಂದೀ ಭಾಷೆಯಲ್ಲಿ ತಯಾರಾಯಿತು. ಅದು ರಂಗದಲ್ಲಿ ಯಶಸ್ವಿಯಾಗಿದ್ದ ಅದೇ ಹೆಸರಿನ ಪಾರ್ಸಿ ನಾಟಕವನ್ನು ಆಧರಿಸಿತ್ತು. ಅನಂತರ ತಮಿಳಿನಲ್ಲಿ ತೆರೆಕಂಡ ಮೊದಲ ಚಿತ್ರ ‘ಕಾಳಿದಾಸ’ (1931) ಚಿತ್ರವೂ ನಾಟಕವನ್ನೇ ಆಧರಿಸಿತ್ತು. ಪ್ರಥಮವಾಗಿ ತೆಲುಗಿನಲ್ಲಿ ತಯಾರಾದ ‘ಭಕ್ತ ಪ್ರಹ್ಲಾದ’ (1932) ಸಹ ನಾಟಕ ರೂಪವೇ! ಬಂಗಾಳಿ ಭಾಷೆಯ ಮೊದಲ ಚಿತ್ರ ‘ದೇನಾ ಪಾವೋನ’ (1931) ಚಿತ್ರ ಮಾತ್ರ ಶರತ್‍ಚಂದ್ರ ಚಟ್ಟೋಪಾಧ್ಯಯರ ಕಾದಂಬರಿಯನ್ನು ಆಧರಿಸಿತ್ತು.

ಕನ್ನಡದ ಮೊದಲ ಮಾತಿನ ಸಿನಿಮಾ ಪ್ರಯೋಗವು ಆರಂಭವಾದದ್ದು ನಾಟಕಕೃತಿಯೊಂದನ್ನು ಆಧರಿಸಿ. ಬಿಡುಗಡೆಯಾದ ಮೊದಲಚಿತ್ರದ ಕೀರ್ತಿ ‘ಸತಿ ಸುಲೋಚನಾ’ಚಿತ್ರದ್ದಾದರೂ ಕನ್ನಡಭಾಷೆಯಲ್ಲಿ ಮೊದಲು ಸೆಟ್ ಏರಿದ ಭಾಗ್ಯ ‘ಭಕ್ತ ಧ್ರುವ’ಕ್ಕೆ ಸಲ್ಲುತ್ತದೆ. ‘ಭಕ್ತ ಧ್ರುವ’ ಬಿಡಗಡೆಯಾದ ಎರಡನೇ ಚಿತ್ರ. ಅದೇನೇ ಇರಲಿ ಎರಡೂ ಚಿತ್ರದ ಬಹುತೇಕ ಕಲಾವಿದರು ತಂತ್ರಜ್ಞರು ನಾಟಕಗಳಲ್ಲಿ ತೊಡಗಿಸಿಕೊಂಡಿದ್ದವರೆ ಆಗಿದ್ದರು.

ಇದಕ್ಕೂ ಮುನ್ನ ಕನ್ನಡ ವೃತ್ತಿರಂಗಭೂಮಿ ಮತ್ತು ಇತರ ಆಧುನಿಕ ನಾಟಕಕಾರರ ಸಿನಿಮಾ ಸಂಬಂಧವನ್ನು ಇಲ್ಲಿ ಮೊದಲು ಉಲ್ಲೇಖಿಸಬೇಕಾಗುತ್ತದೆ. ಕನ್ನಡ ನೆಲದಲ್ಲಿ ಮೂಕಿ ಚಿತ್ರಗಳ ಯುಗವು 1921ರಿಂದ ಆರಂಭವಾಯಿತೆಂದು ಕೆಲವು ಚಲನಚಿತ್ರ ಇತಿಹಾಸಕಾರ ಅಭಿಪ್ರಾಯ. 1921ರಿಂದ 1933ರವರೆಗೆ ಸುಮಾರು 175 ಮೂಕಿ ಚಿತ್ರಗಳು ತಯಾರಾಗಿರಬಹುದೆಂದು ತರ್ಕಿಸಲಾಗಿದೆ. ಮೈಸೂರಿನ ಅಂದಿನ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಅರಮನೆಯಲ್ಲಿ ಪ್ರದರ್ಶನವಾದ ಎ.ವಿ. ವರದಾಚಾರ್ಯರು ಅಭಿನಯಿಸಿದ್ದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ನಾಟಕ ‘ನಿರುಪಮಾ’ (1921)ವನ್ನು ಕೈಯಲ್ಲಿ ಸುತ್ತುವ ಕ್ಯಾಮೆರಾದಿಂದ (ಕ್ರಾಂಕಿಂಗ್ ಮಿಷಿನ್) ಚಿತ್ರೀಕರಿಸಿದ್ದರಂತೆ. ಅರಮನೆಗೆ ಭೇಟಿ ನೀಡುತ್ತಿದ್ದ ದೇಶೀಯ ಮತ್ತು ವಿದೇಶೀಯ ಗಣ್ಯರಿಗಾಗಿ ಈ ‘ನಾಟಕ ಚಿತ್ರ’ದ ವಿಶೇಷ ಪ್ರದರ್ಶನ ಏರ್ಪಡಿಸುತ್ತಿದ್ದರಂತೆ. ಹಾಗಾಗಿ ಎ.ವಿ. ವರದಾಚಾರ್ಯರು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ. ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ನಿರ್ಮಾಪಕ ಎಂದು ಹೇಳಬಹುದು.

1925ರಲ್ಲಿ ತಯಾರಾದ `ವಸಂತ ಸೇನಾ’ ಮೂಕಿ ಚಿತ್ರವು ಕರ್ನಾಟಕ ಚಲನಚಿತ್ರ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು. `ವಸಂತ ಸೇನಾ’ ಚಲನಚಿತ್ರ ತಯಾರಿಕೆ ಆರಂಭವಾದದ್ದು ವಿಚಿತ್ರ ಸಂದರ್ಭದಲ್ಲಿ. ಅದಕ್ಕೆ ನಾಂದಿ ಹಾಡಿದವರು ಮೋಹನ್ ಭವನಾನಿ ಮತ್ತು ನಾಟಕಕಾರ ಟಿ.ಪಿ. ಕೈಲಾಸಂ. ಮೋಹನ್ ಭವನಾನಿ ಜರ್ಮನಿಯಲ್ಲಿ ತರಬೇತು ಪಡೆದಿದ್ದ ಕ್ಯಾಮೆರಾಮೆನ್. ಕೇಂದ್ರ ಫಿಲಂ ಡಿವಿಜನ್‍ನಲ್ಲಿದ್ದ ಉತ್ತರ ಭಾರತೀಯ. ಒಮ್ಮೆ ಟಿ.ಪಿ. ಕೈಲಾಸಂ ಅವರೊಡನೆ ಮಾತನಾಡುತ್ತಿರುವಾಗ ಮೈಸೂರಿನಲ್ಲಿ ತಾವೊಂದು ಕಥಾ ಸಿನಿಮಾ ತಯಾರಿಸುವ ಪ್ರಸ್ತಾಪ ಮುಂದಿಟ್ಟರಂತೆ. ಕೈಲಾಸಂರವರು ಶೂದ್ರಕನ `ಮೃಚ್ಛಕಟಿಕಂ’ ನಾಟಕವನ್ನು ಚಿತ್ರ ಮಾಡಲು ಸೂಚಿಸಿದರಂತೆ. ಭಾರತೀಯ ಸಾಹಿತ್ಯದಲ್ಲೇ ಸರ್ವಕಾಲದ ಮೇರು ಕೃತಿಯಲ್ಲೊಂದೆನಿಸಿದ `ಮೃಚ್ಛಕಟಿಕಂ’ನ ವಸ್ತುವೂ ಭವನಾನಿಯವರಿಗೆ ಒಪ್ಪಿತವಾಯಿತು. ಈ ಚಿತ್ರದಲ್ಲಿ ಟಿ ಪಿ ಕೈಲಾಸಂ ಅವರು ನಾಟಕದ ಪ್ರಮುಖ ಪಾತ್ರಗಳೊಲ್ಲೊಂದಾದ ಶಕಾರನ ಪಾತ್ರ ವಹಿಸಿದ್ದರು. ಚಿತ್ರ ಭಾರತದಾದ್ಯಂತವಲ್ಲದೆ ವಿದೇಶದಲ್ಲೂ ಪ್ರದರ್ಶನ ಕಂಡಿತು.

ಗುಬ್ಬಿ ವೀರಣ್ಣ, ಬೆಳ್ಳಾವೆ ನರಹರಿಶಾಸ್ತ್ರಿ

ಸಾಹಿತ್ಯವಲಯದಿಂದ ನಾಟಕಕಾರರಾದ ಶ್ರೀರಂಗ ಹಾಗು ದೇವುಡು ನರಸಿಂಹ ಶಾಸ್ತ್ರಿ ಅವರೂ ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ತಾಳಿದ್ದರು. ದೇವುಡು ಅವರು ಗುಬ್ಬಿ ವೀರಣ್ಣನವರು ಹಲವು ಮೂಕಿ ಚಿತ್ರಗಳನ್ನು ನಿರ್ಮಿಸಲು ಪ್ರೇರಣೆ ನೀಡಿದ್ದರು. ಅವರದೇ ಕತೆಯನ್ನು ಆಧರಿಸಿ ‘ಕಳ್ಳರ ಕೂಟ’ಮೂಕಿ ಚಿತ್ರವೂ ತಯಾರಾಗಿತ್ತು.

ಕಳೆದ ಶತಮಾನದ ಮೂವತ್ತು-ನಲವತ್ತು ದಶಕದಲ್ಲಿ ಪ್ರಖ್ಯಾತರಾಗಿದ್ದ ಎಂ.ವಿ. ಸುಬ್ಬಯ್ಯನಾಯ್ಡು ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ಚಿತ್ರದ ನಾಯಕ. ಬೆಳ್ಳಾವೆ ನರಹರಿ ಶಾಸ್ತ್ರಿಗಳೇ ಪ್ರಥಮ ಚಿತ್ರಸಾಹಿತಿ. ಹದಿನಾರು ಹಾಡುಗಳಿಗೆ ರಾಗ ಸಂಯೋಜಿಸಿ ಸಂಗೀತ ನೀಡಿದ ನಟ ಆರ್. ನಾಗೇಂದ್ರರಾಯರೇ ಮೊದಲ ಸಂಗೀತ ದಿಗ್ದರ್ಶಕರು. ‘ಭಲೇ ಭಲೇ ಪಾರ್ವತಿ ಬಲು ಚತುರೆ’ ಹಾಡನ್ನು ಹಾಡಿದ ಲಕ್ಷ್ಮೀಬಾಯಿಯವರೇ ಕನ್ನಡ ಚಿತ್ರರಂಗದ ಮೊದಲ ಗಾಯಕಿ. ‘ಸತಿ ಸುಲೋಚನಾ’ ಚಿತ್ರದಲ್ಲಿ (ಪ್ರತಿ)ನಾಯಕ ಇಂದ್ರಜಿತುವಿನ ಪಾತ್ರ ವಹಿಸಿದ ದಿವಂಗತ ಎಂ.ವಿ. ಸುಬ್ಬಯ್ಯನಾಯ್ಡುರವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಅಭಿಜಾತ ಕಲಾವಿದರೊಬ್ಬರು. ರಂಗಭೂಮಿಯಲ್ಲಿ ಅನೇಕ ಪ್ರಯೋಗ ನಡೆಸಿದವರು. ರಂಗಭೂಮಿಗೆ ಶಿಸ್ತು ಮತ್ತು ಗ್ಲಾಮರ್ ತಂದವರು. ರಂಗಭೂಮಿಯ ಸೆಳೆತದಿಂದಾಗಿ ಅವರಿಗೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಚಲನಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಆಗಲಿಲ್ಲ. ಆದರೆ ಇರುವಷ್ಟು ದಿನವೂ ಚಿತ್ರರಂಗದಲ್ಲಿ ಅಭಿನಯದ ಶೈಲಿಯೊಂದನ್ನು ರೂಪಿಸಿದರು. ಅವರು ಪುರಾಣ ಪಾತ್ರಗಳ ಅಭಿನಯಕ್ಕೆ ನೀಡಿದ ಹೊಸ ಬಗೆಯ ಶೈಲಿಯು ಮುಂದೆ ಅನೇಕ ನಟರ ಮೇಲೆ ಪ್ರವಾವ ಬೀರಿತೆಂದು ಹೇಳಲಾಗಿದೆ.

ಗುಬ್ಬಿ ವೀರಣ್ಣನವರು ತಯಾರಿಸಿದ ‘ಹಿಸ್ ಲವ್ ಅಫೇರ್’ ಮೂಕಿ ಚಿತ್ರದಲ್ಲಿ ಪಾತ್ರವಹಿಸಿದ್ದ ಸುಬ್ಬಯ್ಯನಾಯ್ಡುರವರು ಮತ್ತೊಬ್ಬ ಅಭಿಜಾತ ರಂಗಕಲಾವಿದ ಆರ್. ನಾಗೇಂದ್ರರಾಯರ ಜೊತೆಗೂಡಿ ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿಯನ್ನು ಹುಟ್ಟುಹಾಕಿತು. ನಾಯ್ಡು-ರಾಯರು ಅಣ್ಣ ತಮ್ಮಂದಿರಂತೆ ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿಯನ್ನು ಹದಿನೇಳು ವರ್ಷಕಾಲ ಮುನ್ನಡೆಸಿ ಕೊನೆಗೆ ಬೇರೆಯಾದರು. ನಾಯ್ಡು – ರಾಯರು ಜೋಡಿ ಚಲನಚಿತ್ರ ರಂಗದಲ್ಲಿ ಉತ್ತಮ ಪ್ರಯೋಗಗಳನ್ನು ನಡೆಸಿತು. ತಮಿಳು ಚಿತ್ರ ನಿರ್ಮಾಪಕರ ಪರಿಚಯವಿದ್ದ ಆರೆನ್ನಾರ್ ಅವರೊಡನೆ ಹಾಗೂ ಗೆಳೆಯ ನಾಯ್ಡು ಅವರ ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. 1941ರಲ್ಲಿ ತಯಾರಾದ ‘ವಸಂತಸೇನಾ’ ಚಿತ್ರದಲ್ಲಿ ನಾಯ್ಡುರವರು ಚಾರುದತ್ತನ ಪಾತ್ರ ವಹಿಸಿದರೆ ಆರೆನ್ನಾರ್ ‘ಶ’ಕಾರನ ಪಾತ್ರಕ್ಕೆ ಹೊಸದೊಂದು ತಿರುವು ನೀಡಿದರು.

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’

ಬಳಿಕ ಎಂ.ವಿ.ಎಸ್. – ಆರೆನ್ನಾರ್ ಜೋಡಿಯು ಎ.ವಿ.ಎಂ. ಸಂಸ್ಥೆಯ ನೆರವಿನೊಡನೆ ತಯಾರಿಸಿದ ‘ಸತ್ಯ ಹರಿಶ್ಚಂದ್ರ’ ಹೊಸದೊಂದು ಇತಿಹಾಸವನ್ನೇ ಬರೆಯಿತು. ಇಲ್ಲೂ ಸುಬ್ಬಯ್ಯನಾಯ್ಡು (ಹರಿಶ್ಚಂದ್ರ) ಮತ್ತು ರಾಯರ (ವಿಶ್ವಾಮಿತ್ರ) ಅಭಿನಯ ಜನರ ಮೇಲೆ ಮೋಡಿ ಹಾಕಿತ್ತು. ಕೊನೆಯದಾಗಿ ಅವರಿಬ್ಬರೂ ಒಟ್ಟಾಗಿ ದುಡಿದ ಚಿತ್ರ ‘ಮಹಾತ್ಮ ಕಬೀರ್’ (1947). ರಾಯರ ನಿರ್ದೇಶನದಲ್ಲಿ ಕಬೀರ್ ಪಾತ್ರದಲ್ಲಿ ನಾಯ್ಡು ಅವರು ಅಭಿನಯಿಸಿದ್ದರು. ಎಂ.ವಿ.ಎಸ್-ಆರೆನ್ನಾರ್ ಜೋಡಿ ಬೇರೆಯಾದ ನಂತರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಲಾಂಛನದಡಿ ಎಂ.ಎಸ್. ಸುಬ್ಬಯ್ಯನಾಯ್ಡುರವರು ಎಚ್.ಎಸ್. ಕೃಷ್ಣಸ್ವಾಮಿ ಅವರ ಜೊತೆಯಲ್ಲಿ ನಿರ್ದೇಶಿಸಿದ ‘ಭಕ್ತ ಪ್ರಹ್ಲಾದ’ (1958) ಚಿತ್ರವು ಅವರ ಅಭಿನಯದ ಕೊನೆಯ ಚಿತ್ರ. ಆ ಚಿತ್ರದಲ್ಲಿ ಅವರ ಮಗ ಲೋಕೇಶ್ ಪ್ರಹ್ಲಾದನ ಪಾತ್ರ ವಹಿಸಿದ್ದರು. ಅದು ನಿರ್ದೇಶಕ ವಿ. ಸೋಮಶೇಖರ್ ಅವರು ಚಿತ್ರರಂಗಕ್ಕೆ ಪ್ರವೇಶ ಪಡೆದ ಚಿತ್ರವೂ ಹೌದು. ಮುಂದೆ ಹವ್ಯಾಸಿ ರಂಗಭೂಮಿಯಲ್ಲಿ ಪ್ರಖ್ಯಾತರಾಗಿ ಬೆಳೆದ ಲೋಕೇಶ್‍ರವರು ಕನ್ನಡ ಚಲನಚಿತ್ರರಂಗ ಕಂಡ ಅಪರೂಪದ ನಟರಲ್ಲೊಬ್ಬರಾದರು.

ಕೇವಲ ಪುರಾಣ, ಇತಿಹಾಸ ಮತ್ತು ಭಕ್ತರ ಕತೆಗಳನ್ನೇ ನೆಚ್ಚಿ ಕುಳಿತಿದ್ದ ಭಾರತೀಯ ಚಲನಚಿತ್ರರಂಗಕ್ಕೆ ಸಾಮಾಜಿಕ ವಸ್ತುವನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿದ್ದು ಕನ್ನಡ ಚಿತ್ರರಂಗ. 1931ರಲ್ಲಿ ತಯಾರಾದ ‘ಸಂಸಾರ ನೌಕೆ’ ಚಿತ್ರವು ಸಮಕಾಲೀನ ಸಾಂಸಾರಿಕ ವಸ್ತುವನ್ನು ಕುರಿತದ್ದಾಗಿತ್ತು. ಇದೂ ಸಹ ರಂಗ ಕೃತಿಯನ್ನು ಆಧರಿಸಿತ್ತು. ‘ಬೇಡರ ಕಣ್ಣಪ್ಪ’ ಮೂಲಕ ಕನ್ನಡ ಚಿತ್ರರಂಗಕ್ಕೆ ದೊಡ್ಡ ತಿರುವನ್ನು ನೀಡಿದ ಎಚ್.ಎಲ್.ಎನ್. ಸಿಂಹ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಅಪ್ರತಿಮ ಪ್ರತಿಭೆ. ರಾತ್ರಿಯಿಡಿ ನಡೆಯುವ ದೀರ್ಘ ಪೌರಾಣಿಕ ನಾಟಕಗಳಿಂದ ಬೇಸತ್ತ ಸಿಂಹ ಅವರು ಸಾಮಾಜಿಕ ನಾಟಕವನ್ನು ಬರೆಯಲು ನಿರ್ಧರಿಸಿದರು. ಪೀರ್ ಸಾಹೇಬರು ಕಟ್ಟಿದ್ದ ಸ್ವಂತ ಕಂಪನಿ ಚಂದ್ರಕಲಾ ನಾಟಕ ಮಂಡಲಿಗೆ ಸೇರಿದ ಸಿಂಹ ಅವರು ಮೂರುವರೆ ಗಂಟೆ ಅವಧಿಯ ‘ಸಂಸಾರ ನೌಕೆ’ (1931) ನಾಟಕವನ್ನು ಬರೆದರು. ಸಂಗೀತದ ಭಾರವನ್ನು ಗದ್ಯ ನಾಟಕಗಳ ಕಡೆ ರಂಗಭೂಮಿ ಹೊರಳುವಂತೆ ಮಾಡಿದ ನಾಟಕವಿದು. ‘ಸಂಸಾರ ನೌಕೆ’ವು ರಂಗಭೂಮಿಯಲ್ಲಿ ಕಂಡ ಯಶಸ್ಸನ್ನು ಸಿನಿಮಾ ಅವತರಣಿಕೆಯಲ್ಲಿ ಪುನರಾವರ್ತಿಸಿತು.

ಆರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳೆಸಿದ ಕೀರ್ತಿ ನಾಟಕ ಸಂಸ್ಥೆಗಳು ಮತ್ತು ರಂಗಕಲಾವಿದರು, ಸಂಘಟಕರಿಗೆ ಸಲ್ಲುತ್ತದೆ. ಮುಖ್ಯವಾಗಿ ಇಲ್ಲಿ ಹೆಸರಿಸಬೇಕಾದ ನಾಟಕ ಸಂಸ್ಥೆ ಮತ್ತು ವ್ಯಕ್ತಿಗಳೆಂದರೆ ಗುಬ್ಬಿ ಕಂಪನಿ, ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಲಿ, ಬಿ.ಆರ್. ಪಂತುಲು ಮತ್ತು ಬಿ.ಎಸ್. ರಂಗಾ ಅವರು ರಂಗಭೂಮಿಯ ಹಿನ್ನೆಲೆಯಿಲ್ಲದೆ ಬಂದ ಮಹಾತ್ಮಾ ಪಿಕ್ಚರ್ಸ್‍ರವರ ಕಾಣಿಕೆ ಅಷ್ಟೆ ಸ್ಮರಣ ಯೋಗ್ಯ. 1884ರಲ್ಲಿ ಆರಂಭವಾದ “ಶ್ರೀ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಸಂಘ” ನೂರು ವರ್ಷಗಳನ್ನು ಆಚರಿಸಿಕೊಂಡ ಜಗತ್ತಿನ ಏಕೈಕ ವೃತ್ತಿನಿರತ ರಂಗಸಂಸ್ಥೆ. ಜನಮಾನಸದಲ್ಲಿ ‘ಗುಬ್ಬಿ ನಾಟಕ ಕಂಪನಿ’ ಅಥವಾ ‘ಗುಬ್ಬಿ ಕಂಪನಿ’ ಎಂದೇ ಚಿರಸ್ಥಾಯಿಯಾಗಿದೆ. ಈ ಸಂಸ್ಥೆಗೆ 1896ರಲ್ಲಿ ಆರು ವರ್ಷದ ಬಾಲಕ ಜಿ.ಎಚ್. ವೀರಣ್ಣ ಕೂಲಿಮಠ ವಿದ್ಯಾಭ್ಯಾಸ ಬಿಟ್ಟು ಕಲಾವಿದರಾಗಿ ಸೇರಿಕೊಂಡರು. ಆರಂಭದಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ವೀರಣ್ಣನವರು 27ನೇ ವಯಸ್ಸಿನಲ್ಲಿ ಕಂಪನಿಯ ಒಡೆತನ ವಹಿಸಿಕೊಂಡರು. ಕನ್ನಡ ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಯಶಸ್ಸು ಕಂಡರು. ಅಪ್ರತಿಮ ವ್ಯವಹಾರ ಕೌಶಲ್ಯವಿದ್ದ ವೀರಣ್ಣನವರು ಕಂಪನಿಯನ್ನು ತುಂಬಾ ದಕ್ಷತೆಯಿಂದ ಮುನ್ನಡೆಸಿದರು. ರಂಗಭೂಮಿ ಮತ್ತು ಚಲನಚಿತ್ರರಂಗ ಪರಸ್ಪರ ಪೂರಕವಾಗಿ ಬೆಳೆಯಬೇಕೆಂಬ ಆಶಯ ಅವರದ್ದಾಗಿತ್ತು. ಮಾತಿನ ಚಿತ್ರಗಳು ಆರಂಭವಾಗುವ ಮುನ್ನವೇ ಚಿತ್ರದ ಮಹತ್ತ್ವವನ್ನು ವೀರಣ್ಣನವರು ಮನಗಂಡಿದ್ದರು. ಹಾಗಾಗಿ ಅವರು ಎರಡೂ ಕ್ಷೇತ್ರಗಳಲ್ಲಿ ನಡೆಸಿದ ಪ್ರಯೋಗಗಳು ಅವರ ಸಾಹಸ ಮತ್ತು ಸೃಜನಶೀಲತೆಗೆ ಇಂದಿಗೂ ಸಾಕ್ಷಿಯಾಗಿವೆ. ಗುಬ್ಬಿ ಕರ್ನಾಟಕ ಫಿಲಂಸ್ ಸಂಸ್ಥೆಯನ್ನು ಸ್ಥಾಪಿಸಿ ಚಿತ್ರ ನಿರ್ಮಾಣ ಮುಂದುವರೆಸಿದ ವೀರಣ್ಣನವರು ಸದಾರಮೆ (1935), ಸುಭದ್ರ (1941), ಜೀವನ ನಾಟಕ (1942), ಹೇಮರೆಡ್ಡಿ ಮಲ್ಲಮ್ಮ (1945) ಗುಣಸಾಗರಿ (1953) ಮೊದಲಾದ ಚಿತ್ರಗಳನ್ನು ನಿರ್ಮಿಸಿದರು.

ಚಿತ್ರೀಕರಣ ಆರಂಭಿಸಿದ ಕನ್ನಡದ ಮೊದಲ ವಾಕ್ಚಿತ್ರ ‘ಭಕ್ತ ಧ್ರುವ’

ಗುಬ್ಬಿ ಕರ್ನಾಟಕ ಫಿಲ್ಮ್ಸ್ ತಯಾರಿಸಿದ ‘ಬೇಡರ ಕಣ್ಣಪ್ಪ’ಸ (1954) ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿತು. ಗುಬ್ಬಿ ಸಂಸ್ಥೆಯು ವಿತರಕ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸಿತು. ಇದಲ್ಲದೆ ಅದಕ್ಕೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಗೀತಾ, ಮೂವಿಲ್ಯಾಂಡ್ ಮತ್ತು ಸಾಗರ್ ಥಿಯೇಟರ್‍ಗಳ ಒಡೆತನವಿತ್ತು. ಹೀಗೆ ಗುಬ್ಬಿ ಕಂಪನಿ ನಿರ್ಮಾಣ ಮತ್ತು ವಿತರಣೆ ಮತ್ತು ಪ್ರದರ್ಶನ ಕ್ಷೇತ್ರಗಳಲ್ಲಿ ಚಲನಚಿತ್ರರಂಗಕ್ಕೆ ಸೇವೆ ಸಲ್ಲಿಸಿತು. ಮುಂದು ಗುಬ್ಬಿ ವೀರಣ್ಣನವರ ಮೂಲಕವೇ ಶ್ರೀ ಕಂಠೀರವ ಸ್ಟುಡಿಯೊ ಸ್ಥಾಪನೆಯಾದದ್ದು ಮತ್ತೊಂದು ಇತಿಹಾಸ.

ಗುಬ್ಬಿ ಕಂಪನಿಯೆಂಬುದೊಂದು ದೊಡ್ಡ ಕರ್ಮಭೂಮಿ. ಅದರ ಕುಲುಮೆಯಿಂದ ರೂಪುಗೊಂಡು ಬಂದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಮೊದಲ ಸಾಮಾಜಿಕ ಚಿತ್ರ ನಿರ್ದೇಶಿಸಿ ನಂತರ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ತಿರುವು ನೀಡಿದ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಗುಬ್ಬಿ ಕಂಪನಿಯ ನಂಟು ಹೊಂದಿದ್ದರು. ಸಾಹಿತಿ ಕು.ರಾ. ಸೀತಾರಾಮಶಾಸ್ತ್ರಿ, ಬೆಳ್ಳಾವೆ ನರಹರಿಶಾಸ್ತ್ರಿ, ನಿರ್ಮಾಪಕ-ನಿರ್ದೇಶಕರಾಗಿ ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ ಬಿ.ಆರ್. ಪಂತುಲು, ಆರ್. ನಾಗೇಂದ್ರರಾಯರು ಹಾಗೂ ಮತ್ತೊಂದು ಸಂಸ್ಥೆಯನ್ನು ಕಟ್ಟಿದ ಎಂ.ವಿ. ಸುಬ್ಬಯ್ಯನಾಯ್ಡು ಅವರೂ ಗುಬ್ಬಿ ಕಂಪನಿಯಲ್ಲಿದ್ದವರೇ. ಮುಂದೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಪ್ರಯೋಗ ನಡೆಸಿದ ಬಿ.ವಿ. ಕಾರಂತರ ವೃತ್ತಿ ಬದುಕು ಆರಂಭಗೊಂಡಿದ್ದು ಗುಬ್ಬಿ ಕಂಪನಿಯಲ್ಲಿ. ಸಾಹಿತಿ ದೇವುಡು ನರಸಿಂಹಶಾಸ್ತ್ರಿಯಂಥವರ ಚಲನಚಿತ್ರಾಸಕ್ತಿಗೆ ವೇದಿಕೆಯೊದಗಿಸಿದ್ದೇ ಗುಬ್ಬಿ ಕಂಪನಿ. ರಾಜ್‍ರವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನಟಿಸಿದ ಏಕೈಕ ಚಿತ್ರ ಗುಬ್ಬಿ ಕಂಪನಿಯ ತಯಾರಿಕೆಯೇ ಆಗಿದೆ. ‘ಬೇಡರ ಕಣ್ಣಪ್ಪ’ ಚಿತ್ರ ನಿರ್ಮಾಣಕ್ಕೆ ಮುನ್ನ ಹೊನ್ನಪ್ಪ ಭಾಗವತರ್, ಡಿ. ಕೆಂಪರಾಜ ಅರಸ್ ಅಂಥ ಅಪ್ರತಿಮ ಕಲಾವಿದರಿಗೆ ಕನ್ನಡದಲ್ಲಿ ಅವಕಾಶ ಕಲ್ಪಿಸಿದವರು ವೀರಣ್ಣನವರು. ‘ಬೇಡರ ಕಣ್ಣಪ್ಪ’ ಚಿತ್ರವಂತೂ ಕನ್ನಡ ಚಿತ್ರರಂಗ ತೀವ್ರ ವೇಗವನ್ನು ಕಂಡುಕೊಳ್ಳಲು ಕಾರಣವಾಯಿತು.

ಆ ಚಿತ್ರದ ಮೂಲಕ ರಾಜ್‍ಕುಮಾರ್, ಟಿ.ಆರ್. ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್ ಚಲನಚಿತ್ರ ರಂಗಕ್ಕೆ ದೊಡ್ಡ ರೀತಿಯಲ್ಲಿ ಪದಾರ್ಪಣೆ ಮಾಡಿದರು. ಅಷ್ಟೆ ಅಲ್ಲ, ಉದಯಕುಮಾರ್, ಬಾಲಕೃಷ್ಣ, ಬಿ.ಆರ್. ರಾಘವೇಂದ್ರ ರಾವ್, ಈಶ್ವರಪ್ಪ, ಮಹಾಬಲ ರಾಯರು, ಸಿ.ಬಿ. ಮಲ್ಲಪ್ಪ, ಡಿಕ್ಕಿ ಮಾಧವರಾವ್, ತಮಾಷಾ ಮಾಧವರಾವ್ ಗುಬ್ಬಿ ಕಂಪನಿಯ ಉತ್ಪನ್ನಗಳೇ! ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಎಂ.ವಿ. ವಾಸುದೇವರಾವ್ ಗುಬ್ಬಿ ಕಂಪನಿಯಲ್ಲಿ ಬಾಲನಟರಾಗಿ ಪ್ರವರ್ಧಮಾನಕ್ಕೆ ಬಂದವರು. ‘ಕಾಡು’ ಚಿತ್ರದ ಕಿಟ್ಟಿ ಪಾತ್ರಕ್ಕಾಗಿ ಅತ್ಯುತ್ತಮ ಬಾಲನಟ ರಾಜ್ಯ-ರಾಷ್ಟ್ರ ಪ್ರಶಸ್ತಿ ಗಳಿಸಿದ ಮಾಸ್ಟರ್ ನಟರಾಜ್ ವೀರಣ್ಣನವರ ಮೊಮ್ಮಗ. ಪ್ರಥಮ ವಾಕ್ಚಿತ್ರದ ನಾಯಕಿ ತ್ರಿಪುರಾಂಬ, ಕಂಠಶ್ರೀಗೆ ಹೆಸರಾಗಿದ್ದ ಕೆ. ಅಶ್ವಥಮ್ಮ, ಸ್ವರ್ಣಮ್ಮ ಮುಂತಾದವರು ರಂಗಭೂಮಿಯಲ್ಲೂ ರಸಿಕರನ್ನು ರಂಜಿಸಿದವರು.

ಗುಬ್ಬಿ ಕಂಪನಿಯ ಕುಟುಂಬಕ್ಕೆ ಸೇರಿದ ಹಲವಾರು ಸದಸ್ಯರು ಚಲನಚಿತ್ರರಂಗಕ್ಕೆ ಸಾಕಷ್ಟು ದುಡಿದಿದ್ದಾರೆ. ಬಸವರಾಜ್, ಜಿ.ವಿ. ಶಿವಾನಂದ್ ಅವರ ಮಗ ನಟರಾಜ್, ಪದ್ಮಶ್ರೀ, ಬಿ. ಜಯಶ್ರೀ, ಲತಾದೇವಿ ಮುಂತಾದವರು ಕನ್ನಡ ಚಿತ್ರರಂಗದ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ‘ಕಾಡು’ ಚಿತ್ರದ ಕಿಟ್ಟಿಯ ಪಾತ್ರ ನಿರ್ವಹಿಸಿದ ಮಾಸ್ಟರ್ ನಟರಾಜ್ ಕನ್ನಡಕ್ಕೆ ಮೊದಲ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಟ್ಟರು. ಈಗಲೂ ಗುಬ್ಬಿ ಕಂಪನಿಯ ಒಡೆಯರ ವಂಶವೃಕ್ಷವನ್ನು ಅರಸಿ ಹೋದರೆ ಕನ್ನಡ ಚಿತ್ರರಂಗ ಮತ್ತು ಟಿವಿ ರಂಗಗಳಲ್ಲಿ ಅದರ ಶಾಖೋಪಶಾಖೆಗಳು ಹರಡಿ ಹೋಗಿರುವುದು ಅರಿವಾಗುತ್ತದೆ.

ಹೀಗೆ ಗುಬ್ಬಿ ಕಂಪನಿ ಪ್ರತಿಭಾವಂತರಿಗೊಂದು ಕರ್ಮಭೂಮಿಯಾಗಿತ್ತು. ಅದರ ಫಲ ಕನ್ನಡ ಚಿತ್ರರಂಗಕ್ಕಾಯಿತು. ಕನ್ನಡ ಚಿತ್ರರಂಗಕ್ಕೆ ಕಲಾವಿದರು ಮತ್ತು ತಂತ್ರಜ್ಞರನ್ನು ತಯಾರಿಸುವ ಕೇಂದ್ರವಾಗಿದ್ದ ಅದು ಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲೂ ಸಾಕಷ್ಟು ಕಾಣಿಕೆ ಸಲ್ಲಿಸಿತು. ಜೊತೆಗೆ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳನ್ನು ಸಮಾನವಾಗಿ ಪೋಷಿಸಿದ ಅಪರೂಪದಲ್ಲಿ ಅಪರೂಪವಾದ ಸಂಸ್ಥೆ.

ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕ ಆರ್‌.ನಾಗೇಂದ್ರರಾಯರು

ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿಯ ಜೋಡಿ ಯಜಮಾನರಲ್ಲಿ ಒಬ್ಬರಾದ ಶ್ರೀ ಆರ್. ನಾಗೇಂದ್ರರಾಯರು ಮುಂದೆ ಕನ್ನಡ ಚಿತ್ರರಂಗದಲ್ಲಿ ಸಹಜ ಅಭಿನಯದ ಒಂದು ಮಾದರಿಯನ್ನೇ ರೂಪಿಸಿದರು. ‘ನಮ್ಮ ಮಕ್ಕಳು’ವಿನಂಥ ಸದಭಿರುಚಿಯ ಚಿತ್ರವನ್ನು ನಿರ್ದೇಶಿಸಿದರು. ತಮ್ಮ ಮೂವರು ಪುತ್ರರನ್ನು ಸಿನಿಮಾರಂಗದ ವಿವಿಧ ಭಾಗಗಳಲ್ಲಿ ನಿಯೋಜಿಸಿದರು. ಅವರ ಗರಡಿಯಲ್ಲಿ ಪಳಗಿದ ಆರ್.ಎನ್. ಜಯಗೋಪಾಲ್ ನಮ್ಮ ಅತ್ಯುತ್ತಮ ಗೀತರಚನಕಾರರೂ, ಸಂಭಾಷಣೆಕಾರರೂ ಮತ್ತು ನಿರ್ದೇಶಕರೂ ಆಗಿದ್ದರು. ಆರ್.ಎನ್. ಕೃಷ್ಣಪ್ರಸಾದ್ ‘ನಾಂದಿ’, ‘ಬೆಳ್ಳಿಮೋಡ’ ಮತ್ತು ‘ನಗುವ ಹೂವು’ ಮೊದಲಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ‘ಬೆಳ್ಳಿಮೋಡ’ ಚಿತ್ರದ ‘ಮೂಡಲ ಮನೆಯ ಮುತ್ತಿನ…’ ಹಾಡಿನಲ್ಲಿ ದೃಶ್ಯಕಾವ್ಯವನ್ನೇ ಮೂಡಿಸಿದ್ದಾರೆ. ಕೃಷ್ಣಪ್ರಸಾದ್ ಅವರು ‘ನಗುವ ಹೂವು’ ಮೂಲಕ ನಿರ್ದೇಶನದಲ್ಲಿ ವಿಶಿಷ್ಟ ಛಾಪು ಮೂಡಿಸಿದರೂ ನೆಲೆಯೂರಲಿಲ್ಲ. ಆರ್.ಎನ್. ಸುದರ್ಶನ್ ನಟರಾಗಿ ಕೆಲವು ವರ್ಷ ನಾಯಕ ನಟರಾಗಿ ರಾರಾಜಿಸಿದರು.

ಆಂಧ್ರಪ್ರದೇಶದ ಕುಪ್ಪಂನ ಬುಡುಗೂರು ಗ್ರಾಮದಲ್ಲಿ ಜನಿಸಿದ (1911) ಬುಡುಗೂರು ರಾಮಕೃಷ್ಣ ಪಂತುಲು ಅವರು ಭಾರತೀಯ ರಂಗಭೂಮಿ ಮತ್ತು ಚಲನಚಿತ್ರರಂಗದ ಅಪೂರ್ವ ಪ್ರತಿಭೆ. ನಾಟಕದ ಗೀಳಿನಿಂದಾಗಿ ಶಿಕ್ಷಕ ವೃತ್ತಿ ತೊರೆದು ಪೀರ್ ಸಾಹೇಬರ ನಾಟಕ ಮಂಡಲಿ ಚಂದ್ರಕಲಾ ನಾಟಕ ಸಮಾಜ ಸೇರಿದ ಅವರು ‘ಸಂಸಾರನೌಕೆ’ ‘ಸದಾರಮೆ’ ಮತ್ತು ‘ಗುಲೇಬಾಕಾವಲಿ ಕತೆ’ಯಂಥ ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿ ಪ್ರಖ್ಯಾತರಾದರು. ‘ಸಂಸಾರ ನೌಕೆ’ ನಾಟಕದ ಸುಂದರನ ಪಾತ್ರ ಅವರನ್ನು ಜನಪ್ರಿಯಗೊಳಿಸಿತು. ಅನಂತರ ಗುಬ್ಬಿ ನಾಟಕ ಕಂಪನಿ ಸೇರಿದರು. ಮೊಟ್ಟಮೊದಲ ಸಾಮಾಜಿಕ ಚಿತ್ರವಾದ ‘ಸಂಸಾರ ನೌಕೆ’ ಚಿತ್ರದ ನಾಯಕರಾಗಿದ್ದ ಬಿ.ಆರ್. ಪಂತುಲು ಅವರು ಆರೆನ್ನಾರ್, ಸುಬ್ಬಯ್ಯನಾಯ್ಡು ಅವರ ಜೊತೆಯಲ್ಲಿ ಆರಂಭದಲ್ಲಿ ಅಭಿನಯದ ಮಾದರಿಯೊಂದನ್ನು ರೂಪಿಸಿದರು. ಆರೆನ್ನಾರ್ ಅವರಷ್ಟು ಸಂಯಮ ಮತ್ತು ಸುಬ್ಬಯ್ಯನಾಯ್ಡು ಅವರಷ್ಟು ರಂಗಭೂಮಿಗೆ ಸಹಜವಾದ ಆವೇಶ ಅವರ ಅಭಿನಯದಲ್ಲಿರಲಿಲ್ಲ. ಎರಡರ ನಡುವಣ ಒಂದು ಸಮತೋಲನವನ್ನು ಕಾಯ್ದುಕೊಂಡಿದ್ದರು. ಹಾಗೆ ನೋಡಿದರೆ ಈ ಮೂವರು ನಟರು ರೂಪಿಸಿದ ಅಭಿನಯ ಮಾದರಿಗಳೇ ಹಲವಾರು ದಶಕಗಳ ಕಾಲ ಅನುಕರಣೀಯ ಶೈಲಿಗಳಾಗಿದ್ದವು. ಪಂತುಲು ಅವರು 1955ರಲ್ಲಿ ಸ್ವಂತ ನಿರ್ಮಾಣ ಸಂಸ್ಥೆ ‘ಪದ್ಮಿನಿ ಪಿಕ್ಚರ್ಸ್’ ಆರಂಭಿಸಿದರು. ಪಂತಲುರವರು 1955ರಿಂದ 1972ರವರೆಗೆ ಒಟ್ಟಾರೆ ಇಪ್ಪತ್ತು ಕನ್ನಡ ಚಿತ್ರಗಳನ್ನು ನಿರ್ಮಿಸಿ ಹದಿನೆಂಟು ಚಿತ್ರಗಳನ್ನು ನಿರ್ದೇಶಿಸಿದರು. ಇವುಗಳಲ್ಲಿ ಎರಡು ಐತಿಹಾಸಿಕ, ಎರಡು ಪೌರಾಣಿಕ, ಒಂದು ಜಾನಪದ ಹಾಗೂ ಒಂದು ಮಕ್ಕಳ ಚಿತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಸಾಮಾಜಿಕ ಚಿತ್ರಗಳೇ!

ಸ್ಕೂಲ್ ಮಾಸ್ಟರ್ ಅವರ ಅಭಿಜಾತ ಕೃತಿ. ‘ಸ್ಕೂಲ್ ಮಾಸ್ಟರ್’- ಸ್ವಾತಂತ್ರ್ಯಾನಂತರದ ಸಾಮಾಜಿಕ ಪರಿಸ್ಥಿತಿಗೆ ತೋರಿದ ಪ್ರತಿಕ್ರಿಯೆಯೇ ಆಗಿತ್ತು. ಹಳ್ಳಿಗಾಡಿನ ಶಿಕ್ಷಣ ಪರಿಸ್ಥಿತಿ, ಗುರುವಿನ ಸ್ಥಾನ, ಕಲಿತ ಮಕ್ಕಳು ನಗರ ಜೀವನಕ್ಕೆ ಹೊಂದಿಕೊಂಡಂತೆ ಹಳೆಯ ಪರಂಪರೆಗೆ ತೋರುವ ತಿರಸ್ಕಾರ, ಆಗತಾನೇ ಪಿಡುಗಾಗಿ ಬೆಳೆಯುತ್ತಿದ್ದ ವರದಕ್ಷಿಣೆಯ ಅವಾಂತರ, ನಗರವಾಸಿಗಳಾದ ಮಕ್ಕಳು ಮತ್ತು ತಂದೆತಾಯಿಗಳ ಪರಿಸ್ಥಿತಿ-ಹೀಗೆ ಸಾಮಾಜಿಕ ವಿಘಟನೆಯನ್ನು ಹಿಡಿದ ದೊಡ್ಡ ಹಂದರವನ್ನೆ ಅದು ಹೊಂದಿತ್ತು. ಕೌಟುಂಬಿಕ ಸದಸ್ಯರ ನಡುವಣ ಸಂಬಂಧಗಳ ಎಳೆಗಳನ್ನು ಬಿಡಿಸಿ ತೋರುವುದರಲ್ಲಿ ಪಂತುಲು ಒಲವುಳ್ಳವರಾಗಿದ್ದರು. ‘ಶ್ರೀಕೃಷ್ಣ ದೇವರಾಯ’ದಂಥ ಅದ್ಭುತ ಚಿತ್ರವನ್ನು ನೀಡಿದ ಪಂತುಲು ನಾಟಕದಿಂದ ಸಿನಿಮಾರಂಗವನ್ನೂ ಶ್ರೀಮಂತಗೊಳಿಸಿದ ದೊಡ್ಡ ಪ್ರತಿಭೆ.

ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಯೇ ಸ್ತಬ್ದಗೊಂಡಾಗ ರಂಗಭೂಮಿಯಿಂದ ಸಿನಿಮಾರಂಗಕ್ಕೆ ಬಂದ ಕಲಾವಿದರು ದೃತಿಗೆಟ್ಟರು. ಕೆಲಸವಿಲ್ಲದ ಅಸಹಾಯಕತೆಯಿಂದ ಕೊರಗುತ್ತಿದ್ದ ಕಲಾವಿದರ ನೆರವಿಗೆ ಬಂದದ್ದು ರಂಗಭೂಮಿ. ಆಗ ಕನ್ನಡದ ಕಲಾವಿದರು ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು ತಮ್ಮ ಹಳೆಯ ಕ್ಷೇತ್ರವಾದ ನಾಟಕರಂಗಕ್ಕೆ ಮರಳಿಬಂದರು. ರಾಜ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ. ಅಯ್ಯರ್ ಮುಂತಾದವರು ಮತ್ತೆ ರಂಗಭೂಮಿಯಲ್ಲಿ ನಟಿಸಲು ಹಿಂಜರಿಯಲಿಲ್ಲ. ಪ್ರೇಕ್ಷಕರೂ ಅವರನ್ನು ರಂಗಭೂಮಿಯಲ್ಲಿ ಪ್ರೋತ್ಸಾಹಿಸಿದರು. ಆದರೆ ಸಿನಿಮಾ ಮಾಧ್ಯಮದ ನಂಟನ್ನು ಬಿಡಬಾರದೆಂದು ಭಾವಿಸಿದ ಅವರು ರಂಗಭೂಮಿಯಲ್ಲಿ ಉಳಿಸಿದ ಹಣವನ್ನು ತೊಡಗಿಸಿ ಚಿತ್ರ ನಿರ್ಮಾಣಕ್ಕೆ ಇಳಿದರು. ‘ಕನ್ನಡ ಕಲಾವಿದರು’ ಲಾಂಛನದಡಿಯಲ್ಲಿ ರಾಜ್‍ಕುಮಾರ್, ಟಿ.ಎನ್. ನರಸಿಂಹರಾಜು, ಟಿ.ಆರ್. ಬಾಲಕೃಷ್ಣ ಮತ್ತು ಜಿ.ವಿ. ಅಯ್ಯರ್ ಜೊತೆಗೂಡಿ ‘ರಣಧೀರ ಕಂಠೀರವ’ ಚಿತ್ರ ನಿರ್ಮಾಣವನ್ನು ಆರಂಭಿಸಿದರು. ಹೀಗೆ ‘ರಣಧೀರ ಕಂಠೀರವ’ ಅನನ್ಯ ಐತಿಹಾಸಿಕ ಚಿತ್ರ ಮಾತ್ರವಲ್ಲದೆ ರಂಗಭೂಮಿ ಚಲನಚಿತ್ರರಂಗದ ಕರಳುಬಳ್ಳಿ ಸಂಬಂಧವನ್ನು ಎತ್ತಿ ತೋರಿಸಿದ ಚಿತ್ರವೆನಿಸಿದೆ.

1925ರಲ್ಲಿ ಗುಬ್ಬಿ ಚನ್ನ ಬಸವೇಶ್ವರ ಕಂಪನಿಯ ತರೀಕರೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಮಹಾತ್ಮಾ ಕಬೀರ್’ ಚಿತ್ರವನ್ನು ಚಿತ್ರೀಕರಿಸಿ ಸಿನಿಮಾ ಮಾಡಿತು. ನಾಯಕ ಕಬೀರನ ಪಾತ್ರವನ್ನು ಅಭಿನವ ಶಿರೋಮಣಿ ಸಿ.ಬಿ. ಮಲ್ಲಪ್ಪನವರು ವಹಿಸಿದ್ದರು.

ಇಪ್ಪತ್ತನೇ ಶತಮಾನದ ಆರಂಭದಿಂದ ಊರ್ಧೃಮುಖ ಪ್ರಗತಿಯನ್ನು ಕಂಡು ಕರ್ನಾಟಕದಾದ್ಯಂತ ಚದುರಿದಂತಿದ್ದ ಅನೇಕ ನಾಟಕ ಕಂಪನಿಗಳ ಕಲಾವಿದರೇ ಆರಂಭದಲ್ಲಿ ಚಲನಚಿತ್ರಗಳಲ್ಲಿ ಕಲಾವಿದರ ಕೊರತೆಯನ್ನು ತುಂಬಿದರು. ಮುಖ್ಯವಾಗಿ ಮಹಿಳೆಯರು ಸಿನಿಮಾಗಳಲ್ಲಿ ನಟಿಸಲು ಹಿಂಜರಿಯುತ್ತಿದ್ದ ಆ ಕಾಲದಲ್ಲಿ ನಾಯಕಿಯರು, ಪೋಷಕ ಸ್ತ್ರೀ ಪಾತ್ರಗಳ ಅಭಾವವನ್ನು ನೀಗಿಸಿದವರು. ವೃತ್ತಿ ರಂಗಭೂಮಿಯು ಉಚ್ಛ್ರಾಯದ ಕಾಲದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡಿನ ಜನರಿಂದ ಅತ್ಯುತ್ತಮ ನಟಿಯರೆಂದು ಪ್ರಖ್ಯಾತರಾಗಿದ್ದ ಲಕ್ಷ್ಮೀಬಾಯಿ, ಕಮಲಬಾಯಿ, ಮಳವಳ್ಳಿ ಸುಂದರಮ್ಮ, ಅಶ್ವತ್ಥಮ್ಮ, ಬಿ. ಜಯಮ್ಮ, ಗಂಗೂಬಾಯಿ ಗುಳೇದಗುಡ್ಡ, ಮುಂದೆ ಮುಂಬೈ ಚಿತ್ರರಂಗದಲ್ಲಿ ಗಾಯಕಿಯಾಗಿ ಹೆಸರು ಮಾಡಿದ ಅಮೀರ್‍ಬಾಯಿ ಕರ್ನಾಟಕ, ಎಂ.ವಿ. ರಾಜಮ್ಮ, ಎಂ. ಫಂಡರೀಬಾಯಿ, ಬಳ್ಳಾರಿ ಲಲಿತಾ, ಹರಿಣಿ, ಬಳ್ಳಾರಿ ರತ್ನಮಾಲ, ಬಿ. ಜಯಶ್ರೀ ಮುಂತಾದ ಹಿರಿಯ ನಟಿಯರೆಲ್ಲ ರಂಗಭೂಮಿಯಿಂದ ತಾಲೀಮು ಪಡೆದವರೇ ಆಗಿದ್ದರು.

ವೃತ್ತಿರಂಗಭೂಮಿಯ ಜನಪ್ರಿಯ ನಟಿ ಚಿಂದೋಡಿ ಲೀಲಾ

ಆರಂಭದ ಬಹುತೇಕ ನಾಯಕ ನಟರು ರಂಗಭೂಮಿಯಿಂದ ಬಂದದ್ದು ಮಾತ್ರವಲ್ಲ ಕನ್ನಡ ಚಿತ್ರರಂಗದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು. ಮುಖ್ಯವಾಗಿ ಎಂ.ಎಸ್. ಸುಬ್ಬಯ್ಯನಾಯ್ಡು, ಆರ್.ಎನ್.ಆರ್., ಬಿ.ಆರ್. ಪಂತುಲು, ಕೆಂಪರಾಜ ಅರಸು, ಹೊನ್ನಪ್ಪ ಭಾಗವತರ್ ಅವರಿಂದ ಹಿಡಿದು ಟಿ.ಎನ್. ಬಾಲಕೃಷ್ಣ, ಜಿ.ವಿ. ಅಯ್ಯರ್, ನರಸಿಂಹರಾಜು, ಬೇಲೂರು ರಾಘವೇಂದ್ರರಾವ್, ಎಚ್.ಆರ್. ಶಾಸ್ತ್ರಿ, ಕುಪ್ಪುರಾಜ್, ಸಿದ್ದಯ್ಯಸ್ವಾಮಿ, ವಾಸುದೇವ ಗಿರಿಮಾಜಿ, ಕೌಶಿಕ್ ಡಿಕ್ಕಿ ಮಾಧವರಾವ್, ಹನುಮಂತರಾವ್ ಮುಂತಾದ ಕಲಾವಿದರು ರಂಗಭೂಮಿಯಿಂದ ವಲಸೆ ಬಂದು ಚಿತ್ರರಂಗಕ್ಕೆ ವೈವಿಧ್ಯ ತಂದರು.

ಕನ್ನಡ ಚಿತ್ರರಂಗದ ನವೋದಯ ಕಾಲದ ನಾಯಕರಾದ ಡಾ. ರಾಜ್‍ಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್ (ರಂಗಭೂಮಿಯ ಅನುಭವ ಮೊದಲ ಇಬ್ಬರಿಗೆ ಹೋಲಿಸಿದರೆ ಕಡಿಮೆ) ಕೆ.ಎಸ್. ಅಶ್ವಥ್ ಮೊದಲಾದವರು ನಾಟಕರಂಗದ ಸಮೃದ್ಧ ಅನುಭವದೊಡನೆಯೇ ಆಗಮಿಸಿದರು. ಕುಮಾರತ್ರಯರು, ಕೆ.ಎಸ್. ಅಶ್ವಥ್, ಬಾಲಕೃಷ್ಣ, ನರಸಿಂಹರಾಜು, ಜಿ.ವಿ. ಅಯ್ಯರ್ ಮೊದಲಾದ ರಂಗ ಪ್ರತಿಭೆಗಳು ಕನ್ನಡ ಚಲನಚಿತ್ರ ರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು.

ಚಲನಚಿತ್ರಗಳ ಅವಿಭಾಜ್ಯ ಅಂಗವೆನಿಸಿದ ಸಾಹಿತ್ಯ (ಸಂಭಾಷಣೆ-ಗೀತೆ) ರಚನೆಯಲ್ಲೂ ರಂಗಭೂಮಿಯಲ್ಲಿ ಪಳಗಿದವರೆ ಅಸ್ತಿಭಾರ ಹಾಕಿದರು. ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ಚಿತ್ರದ ಸಂಭಾಷಣೆ ಗೀತೆಗಳನ್ನು ಬರೆದವರು ಗುಬ್ಬಿ ಕಂಪನಿಗೆ ನಾಟಕಗಳನ್ನು ರಚಿಸುತ್ತಿದ್ದ ಬೆಳ್ಳಾವೆ ನರಹರಿಶಾಸ್ತ್ರಿಗಳು. ಮತ್ತೋರ್ವ ನಾಟಕಕಾರ ಬಿ. ಪುಟ್ಟಸ್ವಾಮಯ್ಯನವರು ಸುಭದ್ರಾ, ಜೀವನನಾಟಕ ಮೊದಲಾದ ಚಿತ್ರಗಳಿಗೆ ಸಾಹಿತ್ಯ ಒದಗಿಸಿದರು. ಆರಂಭದಲ್ಲಿ ಚಿತ್ರ ಸಾಹಿತ್ಯ ಒದಗಿಸಿದ ಪ್ರಮುಖರಲ್ಲಿ ಹಿರಿಯ ನಾಟಕಕಾರರಾದ ಹಿರಣ್ಣಯ್ಯ, ಕು.ರಾ.ಸೀ., ಎಂ. ನರೇಂದ್ರಬಾಬು, ಆರ್‍ಎನ್ನಾರ್ ಮೊದಲಾದವರು ತಮ್ಮ ರಂಗಭೂಮಿಯ ಅನುಭವವನ್ನೇ ಧಾರೆ ಎರೆದರು. ಕೃಷ್ಣಲೀಲಾ (1947) ಚಿತ್ರದ ಮೂಲಕ ಚಿತ್ರ ಸಾಹಿತಿಯಾಗುವ ಮುನ್ನ ಹುಣಸೂರು ಕೃಷ್ಣಮೂರ್ತಿ ಅವರು ‘ಗೋಪಿಚಂದ್’ ‘ಎಚ್ಚಮನಾಯಕ’ ‘ದಲ್ಲಾಳಿ’ ಮೊದಲಾದ ನಾಟಕಗಳನ್ನು ಬರೆದಿದ್ದರು. ಹಲವಾರು ಕಂಪನಿಗಳಲ್ಲಿ ದುಡಿದಿದ್ದರು. ಅನಂತರ ಐವತ್ತರ ದಶಕದಲ್ಲಿ ಅತಿ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಒದಗಿಸಿ ಕ್ರಮೇಣ ನಿರ್ಮಾಣ ಮತ್ತು ನಿರ್ದೇಶನ ಕ್ಷೇತ್ರಕ್ಕೂ ಇಳಿದರು.

ಹೀಗೆ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಮಾನ ಆಸಕ್ತಿಯಿಂದ ತೊಡಗಿಕೊಂಡಿದ್ದ ಪ್ರತಿಭೆಗಳು ಕನ್ನಡ ಚಿತ್ರರಂಗವನ್ನು ಮುನ್ನಡೆಸಿದವು. ಆದರೆ ಅರವತ್ತರ ದಶಕದಲ್ಲಿ ರಂಗಪ್ರತಿಭೆಗಳು ಚಿತ್ರರಂಗಕ್ಕೆ ಬರುವುದು ಬಹುತೇಕ ಸ್ಥಗಿತಗೊಂಡಿತು. ಇದಕ್ಕೆ ಕಾರಣಗಳು ಹಲವಾರು. ಚಿತ್ರರಂಗದ ಪ್ರಭಾವಕ್ಕೆ ವೃತ್ತಿ ರಂಗಭೂಮಿಗಳು ಕಾಲ್ತೆಗೆಯಬೇಕಾಯಿತು. ಆ ವೇಳೆಗೆ ಸಿನಿಮಾ ಕ್ಷೇತ್ರ ವಿವಿಧ ಕ್ಷೇತ್ರಗಳ ಆಸಕ್ತರನ್ನು ಸೆಳೆಯತೊಡಗಿತ್ತು. ರಂಗಭೂಮಿಯ ಅನುಭವವನ್ನು ದುಡಿಸಿಕೊಳ್ಳುವ ಬಗ್ಗೆ ನಿರ್ದೇಶಕರು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲೊಂದು ಇಲ್ಲೊಂದು ರಂಗಪ್ರತಿಭೆಗಳು ಆಗಾಗ್ಗೆ ಚಿತ್ರರಂಗಕ್ಕೆ ಬಂದಿಳಿದರೂ ಹಿಂದಿನ ರಂಗಭೂಮಿಯ ವಲಸೆ ವಿರಳವಾಗಿತ್ತು. ಶ್ರೀನಾಥ್, ಗಂಗಾಧರ್ ಅವರಂಥ ಹವ್ಯಾಸಿ ರಂಗಭೂಮಿಯ ನಟರು ಮಾತ್ರ ಇದಕ್ಕೆ ಅಪವಾದವೆನಿಸಿದ್ದರು.

ಜೊತೆಗೆ ಆಗ ಪ್ರವರ್ಧಮಾನಕ್ಕೆ ಬರುತ್ತಿದ್ದ ಹವ್ಯಾಸಿ ರಂಗಭೂಮಿಯು ಚಲನಚಿತ್ರ ಕ್ಷೇತ್ರವನ್ನು ಮಡಿವಂತಿಕೆಯಿಂದ ನೋಡುತ್ತಿತ್ತು. ಚಲನಚಿತ್ರರಂಗವು ಹವ್ಯಾಸಿ ರಂಗಭೂಮಿಯ ಸೂಕ್ಷ್ಮಗಳಂತಲ್ಲ. ಒರಟು ಎಂಬ ಭಾವನೆ ಚಾಲ್ತಿಯಲ್ಲಿತ್ತು. ಹಾಗಾಗಿಯೇ ಪಿ.ವಿ. ನಂಜರಾಜೇ ಅರಸು ನಿರ್ಮಿಸಿ ನಿರ್ದೇಶಿಸಿದ ‘ಸಂಕಲ್ಪ’ ಚಿತ್ರದಲ್ಲಿ ನಟಿಸಿದ್ದ ಸಿ.ಆರ್. ಸಿಂಹರವರು ಚಿತ್ರರಂಗಕ್ಕಿಂತ ನಾಟಕ ರಂಗವೇ ಉತ್ತಮ ಎಂದು ಹೇಳಿ ಆ ಚಿತ್ರದ ಬಿಡುಗಡೆಯ ನಂತರ ಬಂದ ಅವಕಾಶಗಳನ್ನು ನಿರಾಕರಿಸಿದ್ದರು. (ಅನಂತರ ಅವರು ಚಲನಚಿತ್ರರಂಗಕ್ಕೆ ಮತ್ತೆ ಬಂದದ್ದು ಬೇರೆಯೇ ವಿಷಯ)

ರಂಗಭೂಮಿ ಮತ್ತು ಚಿತ್ರರಂಗದ ತಂತು ಮತ್ತೆ ಕೂಡಿ ನವೀಕರಣಗೊಂಡದ್ದು ಎಪ್ಪತ್ತರ ದಶಕದಲ್ಲಿ. ಈ ಬಾರಿ ಹವ್ಯಾಸಿ ರಂಗಭೂಮಿಯು ಚಲನಚಿತ್ರಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿತು. ಹವ್ಯಾಸಿ ರಂಗಭೂಮಿಯ ಪ್ರತಿಭೆಗಳು ಒಟ್ಟುಗೂಡಿ ನಿರ್ಮಿಸಿದ ಅಭಿಜಾತ ಚಿತ್ರವೆಂದರೆ ‘ಸಂಸ್ಕಾರ’. ಬೆಂಗಳೂರಿನ ಹವ್ಯಾಸಿ ರಂಗಭೂಮಿ ಹಾಗೂ ಇಂಗ್ಲಿಷ್ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಸ್ನೇಹಲತಾ ರೆಡ್ಡಿ, ದಾಶರಥಿ ದೀಕ್ಷಿತ್ ಬೆಂಗಳೂರು-ಮದರಾಸಿನ ಹವ್ಯಾಸಿ ತಂಡದ ನಟ-ನಟಿಯರು ‘ಸಂಸ್ಕಾರ’ ಚಿತ್ರದಲ್ಲಿ ನಟಿಸಿದರು. ‘ಸಂಸ್ಕಾರ’ದ ಯಶಸ್ಸು ಹವ್ಯಾಸಿ ರಂಗಭೂಮಿಯ ಬಹುದೊಡ್ಡ ವಲಸೆಯನ್ನು ಉದ್ಘಾಟಿಸಿತು. ‘ಸಂಸ್ಕಾರ’ ಚಿತ್ರವನ್ನು ಅನುಸರಿಸಿ ನಿರ್ಮಾಣಗೊಂಡ ಸಮಾನಾಂತರ ಚಿತ್ರಗಳಲ್ಲಿ ಬಹಳಷ್ಟು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದವರು ಅಭಿನಯಿಸಿದವರು ಹವ್ಯಾಸ ನಾಟಕ ರಂಗದ ಪ್ರತಿಭೆಗಳೇ ಆಗಿದ್ದರು.

‘ಸಂಸ್ಕಾರ’ ಚಿತ್ರದಲ್ಲಿ ಗಿರೀಶ್ ಕಾರ್ನಾಡ್‌, ಪಿ.ಲಂಕೇಶ್‌

ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ನಿರ್ದೇಶನ ಕಲಿತು ಬಂದ ಗಿರೀಶ್ ಕಾಸರವಳ್ಳಿಯವರು ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಮಾತ್ರ ಅದಕ್ಕೆ ಅಪವಾದ. ಮುಂದೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ ಚಿತ್ರಗಳನ್ನು ರೂಪಿಸಿದ ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ, ಟಿ.ಎಸ್. ರಂಗಾ, ಎಂ.ಬಿ.ಎನ್. ಪ್ರಸಾದ್, ಟಿ.ಎಸ್. ನಾಗಾಭರಣ, ಚಂದ್ರಶೇಖರ ಕಂಬಾರ, ಎಂ.ಎಸ್. ಸತ್ಯು, ಸಿ.ಆರ್. ಸಿಂಹ ಹಾಗೂ ಕಲಾವಿದರಾದ ಅನಂತ್‍ನಾಗ್, ವೆಂಕಟರಾವ್ ತಲಗೇರಿ, ಎಲ್.ವಿ. ಶಾರದಾ, ಶಂಕರ್‍ನಾಗ್, ಲೋಕೇಶ್, ವೈಶಾಲಿ ಕಾಸರವಳ್ಳಿ, ಅರುಂಧತಿ ನಾಗ್, ಉಮಾಶ್ರೀ, ಸುರೇಶ್ ಹೆಬ್ಳೀಕರ್, ಟಿ.ಎನ್. ಸೀತಾರಾಂ, ಎಚ್.ಜಿ. ಸೋಮಶೇಖರರಾವ್, ದತ್ತಾತ್ರೇಯ, ಸಿ.ಎಚ್. ಲೋಕನಾಥ್, ಕೋಕಿಲಾ ಮೋಹನ್, ದೇವರಾಜ್, ಸುಂದರ್‍ರಾಜ್, ಕಾಶಿ, ಜಗದೀಶ್ ಮಲ್ನಾಡ್ ಮುಂತಾದವರು ಹವ್ಯಾಸಿ ರಂಗಭೂಮಿಯಿಂದ ಬಂದವರು. ಅಲ್ಲದೆ ತಾಂತ್ರಿಕ ವರ್ಗದಲ್ಲಿ ಸಿ. ಅಶ್ವಥ್ (ಸಂಗೀತ ನಿರ್ದೇಶಕ) ಶಶಿಧರ ಅಡಪ (ಕಲೆ) ರಮೇಶ್ ದೇಸಾಯಿ (ಕಲೆ) ವೈಶಾಲಿ ಕಾಸರವಳ್ಳಿ (ವಸ್ತ್ರ ವಿನ್ಯಾಸ) ಜಯಶ್ರೀ (ಗಾಯಕಿ, ನಟಿ) ಟಿ.ಎನ್. ನರಸಿಂಹನ್ (ನಟ, ನಿರ್ದೇಶಕ) ಮೊದಲಾದವರು ಕನ್ನಡ ಚಲನಚಿತ್ರರಂಗ ಹೆಚ್ಚು ಸೋಪಜ್ಞತೆಯನ್ನು ತಂದಿದ್ದಾರೆ. ಹೀಗೆ ರಂಗಭೂಮಿಯ ಕಸುವನ್ನು ಹೀರುತ್ತಾ ಕನ್ನಡ ಚಿತ್ರರಂಗ ಬೆಳೆಯುತ್ತಾ ಬಂತು.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಾದ್ಯಂತ ರಂಗ ಚಟುವಟಿಕೆಗಳು ಹೆಚ್ಚಿನ ಭರಾಟೆ ಕಂಡುಕೊಂಡಿವೆ. ಉತ್ಸಾಹಿ ಯುವಕರ ದಂಡು ಆ ಕ್ಷೇತ್ರದತ್ತ ಲಗ್ಗೆ ಹಾಕಿದೆ. ಚಲನ ಚಿತ್ರರಂಗ ಮತ್ತು ದೂರದರ್ಶನಗಳೆರಡೂ ಉದ್ಯಮದ ಸ್ಥಾನಕ್ಕೇರಿ ಕುಳಿತಿವೆ. ಕಲೆಯನ್ನು ಪ್ರೀತಿಸಿ ಅದರೊಡನೆ ಅನುಸಂಧಾನ ನಡೆಸಿ ಹೊಸದನ್ನು ಅನ್ವೇಷಿಸುವ ಗೀಳಿಗಿಂತ, ಈ ಕ್ಷೇತ್ರಗಳು ತಂದುಕೊಡುವ ದಿಢೀರ್ ಪ್ರಸಿದ್ಧಿ ಮತ್ತು ಹಣ-ಎರಡೇ ಪ್ರಮುಖ ಆಕರ್ಷಣೆಯ ಅಂಶಗಳಾಗಿವೆ. ಇದು ಎಲ್ಲರಿಗೂ ಅನ್ವಯಿಸುವ ಅಭಿಪ್ರಾಯವಲ್ಲವಾದರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬಹುತೇಕ ಅನ್ವಯವಾಗುತ್ತದೆ. ದೃಶ್ಯ ಸಂಯೋಜನೆಯ ಗಂಧಗಾಳಿಯೂ ವ್ಯಕ್ತಿಗಳಿಗೆ ಗೊತ್ತಿಲ್ಲದ ಜನರು ಮೆಗಾ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದರೆ, ಕಲಾವಿದರ ಅಭಿನಯ ಗಿಳಿಪಾಟ ಒಪ್ಪಿಸುವುದಕ್ಕಷ್ಟೇ ಸೀಮಿತವಾಗಿದೆ. ವೈಚಾರಿಕತೆಯಿಂದ ಮೈಲು ದೂರವಿರುವ ಟಿ.ವಿ. ಧಾರಾವಾಹಿ, ರಿಯಾಲ್ಟಿ ಷೋಗಳಲ್ಲಿ ಮಿಂಚಲು ಹಾತೊರೆವ ಸಂಖ್ಯೆಯೇ ಹೆಚ್ಚು.

ಇನ್ನು ಚಿತ್ರರಂಗವಂತೂ ರೀಮೇಕ್ ಪಿಡುಗಿನ ಮುಂದೆ ಮಂಡಿಯೂರಿ ಕುಳಿತಿದೆ. ಚಲನಚಿತ್ರ ನಿರ್ಮಾಣದ ಹಿಂದೆ ರಿಯಲ್ ಎಸ್ಟೇಟ್ ಹಣ, ಭೂಗತ ನಂಟಿನ ಹಣಕ್ಕೆ ಕಲಾನ್ವೇಷಣೆಯ ಆಶಯಗಳಿಗಿಂತ ಭಿನ್ನವೇ ಆದ ಪ್ರೇರಣೆಗಳಿವೆ. ಹಾಗಾಗಿ ಅಲ್ಲಿ ಗುಣಮಟ್ಟದ ಬಗ್ಗೆ ಕಾಳಜಿ ಇಲ್ಲ. ಇಂಥ ಸನ್ನಿವೇಶದಲ್ಲಿ ಚಲನಚಿತ್ರರಂಗ ಮತ್ತು ಟಿ.ವಿ. ರಂಗಕ್ಕೆ ಕಲಾವಿದರನ್ನು ತಂತ್ರಜ್ಞರನ್ನು ಸರಬರಾಜು ಮಾಡುವ ಕೇಂದ್ರಗಳಾಗಿ ರಂಗಭೂಮಿಗಳು ಪರಿವರ್ತನೆಯಾಗುತ್ತಿವೆ. ವಿರಳವೆನಿಸಿದರೂ ನಿಜವಾದ ರಂಗಕಾಳಜಿಯುಳ್ಳ ಹವ್ಯಾಸಿ ನಾಟಕ ತಂಡಗಳು ಕ್ರಿಯಾಶೀಲವಾಗಿರುವುದು ಕನ್ನಡಿಗರ ಪುಣ್ಯವೆಂದೇ ಹೇಳಬೇಕು. ಹೀಗೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ನಡುವಣ ಸಂಬಂಧಗಳು ಅಬಾಧಿತವಾಗಿ ಮುಂದುವರಿದಿವೆ.

‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಡಾ.ರಾಜಕುಮಾರ್‌

ಈ ಬರಹಗಳನ್ನೂ ಓದಿ