ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರುಕ್ಕೋಜಿ ಅವರ ಅಭಿಮಾನದ ದಾಖಲೆಯ ಡಾ.ರಾಜ್ ಕೃತಿ

ಪೋಸ್ಟ್ ಶೇರ್ ಮಾಡಿ
ಶಶಿಧರ ಚಿತ್ರದುರ್ಗ
ಸಂಪಾದಕ, ‘ಚಿತ್ರಪಥ’

ಡಾ.ರಾಜಕುಮಾರ್ ಅಗಲಿ ಮೊನ್ನೆ 12ನೇ ತಾರೀಖಿಗೆ ಹದಿನೈದು ವರ್ಷವಾಯ್ತು. ಬರುವ 24ರಂದು ವರನಟನ ಜನ್ಮದಿನ. ಅಭಿಮಾನಿಗಳು ರಾಜ್‌ರನ್ನು ಸ್ಮರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಲೇಖಕ, ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ಅವರು ರಾಜ್‌ ಕುರಿತು ರಚಿಸಿರುವ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಎರಡು ಸಂಪುಟಗಳ ದಾಖಲೆಯ ಕೃತಿಯ ಬಗ್ಗೆ ಹೇಳಲೇಬೇಕು.

“ಭೀಮಗಾತ್ರದ ಈ ಗ್ರಂಥಾವಳಿಯ ವಿಷಯ ಸಂಚಯಕ್ಕೆ ರುಕ್ಕೋಜಿಯವರು ಪಟ್ಟಿರುವ ಅಪ್ರತಿಮ ಸಾಹಸ ಯಾರಿಗಾದರೂ ದಂಗುಬಡಿಸುವಂತಹುದು. ಹದಿನೈದು ವರ್ಷಗಳ ಅವಿರತವಾದ ಶ್ರದ್ಧಾವಂತ ಸಂಶೋಧನರೂಪದ ಅವರ ಗೆಯ್ಮೆಗೆ ಒಂದಲ್ಲ, ಎರಡು ಮೂರು ಡಾಕ್ಟರೇಟ್‌ಗಳನ್ನು ನೀಡಬಹುದು” – ರುಕ್ಕೋಜಿಯವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ – ಜೀವನ’ ಸಂಪುಟಕ್ಕೆ ಕವಿ ಕೆ.ಎಸ್‌.ನಿಸಾರ್ ಅಹಮದ್ ಅವರು ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವ ಮಾತುಗಳಿವು.

‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ –ಸಿನಿಮಾ’ ಸಂಪುಟಕ್ಕೆ ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಮುನ್ನುಡಿ ಬರೆದಿದ್ದಾರೆ. ಅವರೊಂದು ಕಡೆ ಹೇಳುವುದು ಹೀಗೆ – “ಕನ್ನಡ ಸಮುದಾಯದ ಸಾಮಾಜಿಕ ಚಲನೆ ಮತ್ತು ಚಲನಶೀಲತೆಯ ನಡುವೆ ರಾಜಕುಮಾರ್ ಅವರನ್ನು ಇರಿಸಿ, ಅವರು ನಡೆದು ಬಂದ ದಾರಿಯನ್ನು ಗುರುತಿಸುವ ರುಕ್ಕೋಜಿಯವರ ಕ್ರಮ ನನ್ನ ಗ್ರಹಿಕೆಯ ಬೇರುಗಳನ್ನುಅಲ್ಲಾಡಿಸಿ, ರಾಜಕುಮಾರ್‌ ಅವರನ್ನುಬೇರೆ ಬೇರೆ ನೆಲೆಗಳಿಂದ ನೋಡುವಂತೆ ಮಾಡಿದೆ”.

‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ’ ರುಕ್ಕೋಜಿಯವರು ಮಾಡಿರುವ ಅಕ್ಷರ ಪವಾಡ! ಈ ಕೃತಿಗಾಗಿ ಅವರು ತಮ್ಮ ಜೀವಿತ ಕಾಲದ ಹದಿನೈದು ವರ್ಷಗಳನ್ನು ವ್ಯಯಿಸಿದ್ದಾರೆ. ಅವರು ‘ಕಾಜಾಣ’ ಪತ್ರಿಕೆಯ ಸಂಪಾದಕರಾಗಿದ್ದಾಗ ಕಂಡ ಕನಸಿದು. ಪ್ರತಿಭೆ, ಕಠಿಣ ಪರಿಶ್ರಮದ ಜೊತೆ ರಾಜಕುಮಾರ್ ಅವರೆಡೆಗೆ ರುಕ್ಕೋಜಿಯವರಿಗಿದ್ದ ಅಪರಿಮಿತ ಅಭಿಮಾನದಿಂದಾಗಿ ಈ ಕೃತಿ ರೂಪುಗೊಂಡಿದೆ. “ಈ ಎರಡು ಗ್ರಂಥಗಳು ನನ್ನ ಜೀವನದ ಮಹಾತ್ವಾಕಾಂಕ್ಷೆಯಾದ್ದರಿಂದ ಕಠಿಣ ತಪಸ್ಸಿನಿಂದ ರೂಪಿಸಿದ್ದೇನೆ. ಈ ಕೆಲಸಕ್ಕೆ ನಿಷ್ಕಲ್ಮಷ ಪ್ರೀತಿಯಿಂದ ನೆರವಾದ ಎಲ್ಲರಿಗೂ ಋಣಿಯಾಗಿರುತ್ತೇನೆ” ಎಂದು ಪುಸ್ತಕದಲ್ಲಿ ರುಕ್ಕೋಜಿ ಹೇಳಿಕೊಂಡಿದ್ದಾರೆ. 2015ರ ಅಕ್ಟೋಬರ್ ತಿಂಗಳಿನಲ್ಲಿ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ ಲೋಕಾರ್ಪಣೆಗೊಂಡಿತು. ಅತ್ಯುತ್ತಮ ಕೃತಿ ವಿಭಾಗದಲ್ಲಿ ರುಕ್ಕೋಜಿಯವರು ರಾಷ್ಟ್ರಪ್ರಶಸ್ತಿಗೆ (63ನೇ ಸಾಲಿನಲ್ಲಿ) ಭಾಜನರಾದರು.

ಕನ್ನಡದ ಈ ಹೆಮ್ಮೆಯ ಕೃತಿ ರೂಪುಗೊಂಡ ಬಗೆ ಮತ್ತು ವೈಶಿಷ್ಟ್ಯಗಳು

  • ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಹಾಗೂ ಅವರ ಕುಟುಂಬದವರನ್ನು ಒಳಗೊಂಡಂತೆ 2005ರಿಂದ ಒಟ್ಟು 142 ಮಂದಿಯನ್ನು ಸಂದರ್ಶಿಲಾಗಿದೆ.
  • ಮದರಾಸು, ಮೈಸೂರು, ನಂಜನಗೂಡು, ಗಾಜನೂರು, ಸಾಲಿಗ್ರಾಮ, ಬಿಡದಿ ಸೇರಿದಂತೆ ರಾಜ್‌ ಅವರ ನಿಕಟ ಒಡನಾಟವಿದ್ದ 10ಕ್ಕೂ ಹೆಚ್ಚು ನಗರ, ಊರುಗಳಿಗೆ ಹಲವಾರು ಸಲ ಹೋಗಿ ಮಾಹಿತಿ, ಚಿತ್ರಗಳನ್ನು ಸಂಗ್ರಹಿಸಲಾಗಿದೆ.
  • 12 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ಚಿತ್ರಗಳು 20 ಸಾವಿರ. ಸ್ಕ್ಯಾನ್ ಮಾಡಿದ್ದು 14 ಸಾವಿರ. ಅಂತಿಮವಾಗಿ ಆಯ್ಕೆ ಮಾಡಿ ಬಳಿಸಿರುವುದು 8,310 ಫೋಟೋಗಳು. ಎರಡು ಸಂಪುಟಗಳೂ ಸೇರಿ ಒಟ್ಟು ಪುಟಗಳ ಸಂಖ್ಯೆ 2,128.
  • ರಾಜ್‌ ಚಿತ್ರಗಳ 150 ಹಾಡಿನ ಪುಸ್ತಕ, 200 ಚಿತ್ರಗಳ ಸಿಡಿಗಳನ್ನು ನೋಡಿ, ಕೆಲವು ಹಿರಿಯರ ಸಂದರ್ಶನಗಳನ್ನು ಮಾಡಿ 212 ಚಿತ್ರಗಳ ಕಥೆ, ಹಾಡು, ತಂತ್ರಜ್ಞರ ವಿವರಗಳನ್ನು ಸಿದ್ಧಪಡಿಸಲಾಗಿದೆ.
  • ಸಾಹಿತ್ಯ, ರಂಗಭೂಮಿ, ಸಿನಿಮಾ ಕುರಿತಾದ 250ಕ್ಕೂ ಹೆಚ್ಚು ಪುಸ್ತಕ, ಸ್ಮರಣ ಸಂಚಿಕೆ, ನಿಯತಕಾಲಿಕೆಗಳನ್ನು 4 ವರ್ಷಗಳ ಕಾಲ ಅಧ್ಯಯನ ಮಾಡಿ ಅಗತ್ಯ ವಿವರಗಳನ್ನು ಸಂಗ್ರಹಿಸಲಾಗಿದೆ.
  • ಅಕ್ಷರ ಜೋಡಣೆಯ ಕೆಲಸ ಬಿಟ್ಟುಬಿಟ್ಟು 7 ವರ್ಷಗಳ ಕಾಲ ನಡೆಯಿತು. ಫೋಟೋ ಶುದ್ಧೀಕರಣಕ್ಕೆ ಹಿಡಿದ ಸಮಯ 1 ವರ್ಷ. ಪುಟವಿನ್ಯಾಸಕ್ಕೆ ಎರಡೂವರೆ ವರ್ಷ ಹಿಡಿದಿದೆ. ಫೋಟೋ ಸ್ಕ್ಯಾನಿಂಗ್‌ ಹಾಗೂ ಅದರ ವಿಭಾಗೀಕರಣಕ್ಕೆ ಹಿಡಿದ ಅವಧಿ 4 ವರ್ಷಗಳು.
  • ಕನ್ನಡ ಪುಸ್ತಕ ಲೋಕದ ಇತಿಹಾಸದಲ್ಲಿ ಅದ್ಧೂರಿ ನಿರ್ಮಾಣ ಹಾಗೂ ಅತಿಹೆಚ್ಚು ವೆಚ್ಚದ (87 ಲಕ್ಷ ರೂ.) ದಾಖಲೆ ಬರೆದ ಕೃತಿಗಳಿವು. ದೀರ್ಘ ಬಾಳಿಕೆ ಬರಬೇಕೆಂದು 80 ಜೆಸ್‌ಎಂ ಮ್ಯಾಟ್‌ ಫಿನಿಶಿಂಗ್‌ ನುಣುಪು ಕಾಗದದಲ್ಲಿ ಮುದ್ರಿಸಲಾಗಿದೆ.
  • ಎರಡು ಸಂಪುಗಳು ಒಟ್ಟು 2,128 ಪುಟಗಳನ್ನು ಒಳಗೊಂಡಿವೆ. ಪುಟಗಳ ಅಗಲ 9.5 ಇಂಚು, ಉದ್ದ 12.5 ಇಂಚು. ಎರಡು ಕೃತಿಗಳ ಒಟ್ಟು ಭೌತಿಕ ತೂಕ 13 ಕಿ.ಗ್ರಾಂ. ವಿಶ್ವಕೋಶ, ಆಕರಗ್ರಂಥ, ಸಂಶೋಧನೆ – ಈ ಎಲ್ಲಾ ಲಕ್ಷಣಗಳನ್ನುಳ್ಳ ಕೃತಿಗಳಿವು. ಬೆಲೆ – 7,500 ರೂಪಾಯಿ.

ಎರಡು ಸಂಪುಟಗಳ ಕೃತಿಯನ್ನು ಪರಾಮರ್ಶಿಸಿದ ಗಣ್ಯರ ನುಡಿಗಳಿವು

ಈ ಬರಹಗಳನ್ನೂ ಓದಿ