
ಪತ್ರಕರ್ತ
ಭಾರತೀಯ ಬೆಳ್ಳಿತೆರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ವ್ಯಕ್ತಿತ್ವ, ಸಾಧನೆಯ ಚಿತ್ರಣದ ಹಲವು ಸಿನಿಮಾಗಳು ಮೂಡಿಬಂದಿವೆ. ಅಂಬೇಡ್ಕರ್, ರಮಾಬಾಯಿ ವ್ಯಕ್ತಿಚಿತ್ರಗಳ ಪ್ರಯೋಗಗಳ ಜೊತೆ ಅವರ ಆಶಯಗಳನ್ನು ದಾಟಿಸುವ ಚಿತ್ರಗಳನ್ನೂ ನೋಡಬಹುದು.
ರಂಗಕರ್ಮಿ, ಚಿತ್ರನಿರ್ದೇಶಕ ಜಬ್ಬಾರ್ ಪಟೇಲ್ ನಿರ್ದೇಶನದಲ್ಲಿ ತಯಾರಾಗಿರುವ ‘ಡಾ ಬಾಬಾಸಾಹೇಬ್ ಅಂಬೇಡ್ಕರ್’ (2000) ಮಹತ್ವದ ಸಿನಿಮಾ. ದೊಡ್ಡ ಪ್ರಮಾಣದಲ್ಲಿ ತಯಾರಾಗಿದ್ದ ಈ ಇಂಗ್ಲಿಷ್ ಭಾಷೆಯ ಸಿನಿಮಾ ಭಾರತದ ಒಂಬತ್ತು ಪ್ರಾದೇಷಿಕ ಭಾಷೆಗಳಿಗೆ ಡಬ್ ಅಗಿತ್ತು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪರಿಶ್ರಮದ ಬಗೆಗಿನ ವಿಚಾರಕ್ಕೆ ಚಿತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಮಹಾರಾಷ್ಟ್ರ ಸರ್ಕಾರ ಚಿತ್ರನಿರ್ಮಾಣಕ್ಕೆ ಧನಸಹಾಯ ಒದಗಿಸಿದ್ದವು. ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಖ್ಯಾತ ಮಲಯಾಳಂ ನಟ ಮುಮ್ಮೂಟಿ ಅಭಿನಯಿಸಿದ್ದರು. ಅತ್ಯುತ್ತಮ ಪ್ರಾದೇಷಿಕ ಭಾಷಾ ವಿಭಾಗದಲ್ಲಿ ಹಾಗೂ ಕಲಾನಿರ್ದೇಶನಕ್ಕಾಗಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳು ಒಲಿದಿದ್ದವು. ಅತ್ಯುತ್ತಮ ಅಭಿನಯಕ್ಕಾಗಿ ಮುಮ್ಮೂಟಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ರಮಾಬಾಯಿ ಅಂಬೇಡ್ಕರ್ ಪಾತ್ರದಲ್ಲಿ ನಟಿಸಿದ್ದ ಸೋನಾಲಿ ಕುಲಕರ್ಣಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಯುಗಪುರುಷ್ ಡಾ.ಬಿ.ಅರ್.ಅಂಬೇಡ್ಕರ್ | ಶಶಿಕಾಂತ್ ನಲವಾಡೆ ನಿರ್ದೇಶನದಲ್ಲಿ ತಯಾರಾಗಿದ್ದ ‘ಯುಗಪುರುಷ್ ಡಾ ಬಿ.ಆರ್.ಅಂಬೇಡ್ಕರ್’ ಮರಾಠಿ ಸಿನಿಮಾ 1993ರಲ್ಲಿ ತೆರೆಕಂಡಿತ್ತು. ಧನಂಜಯ್ ಕೀರ್ ರಚಿಸಿದ್ದ ಅಂಬೇಡ್ಕರ್ ಬಯೋಗ್ರಫಿ ಆಧರಿಸಿ ತಯಾರಾಗಿದ್ದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಪ್ರೇಮ್‌ಲತಾ ಮಸ್ಟೇಕರ್ ಅಭಿನಯಿಸಿದ್ದರು. ಪ್ರಕಾಶ್ ಜಾಧವ್ ನಿರ್ಮಾಣ, ನಿರ್ದೇಶನದಲ್ಲಿ ತಯಾರಾದ ‘ರಮಾಬಾಯಿ ಭೀಮರಾವ್ ಅಂಬೇಡ್ಕರ್’ ಮರಾಠಿ ಸಿನಿಮಾ ರಮಾಬಾಯಿ ಕುರಿತ ಒಳ್ಳೆಯ ಚಿತ್ರಣವಾಗಿ ಗಮನಸೆಳೆದ ಪ್ರಯೋಗ. ಅಂಬೇಡ್ಕರ್ ಸಾಧನೆಗೆ ಬೆನ್ನೆಲುಬಾಗಿ ನಿಂತು, ಮಹಿಳೆಯರಿಗೆ ಸ್ಫೂರ್ತಿಯಾದ ರಮಾಬಾಯಿ ಅವರ ಬಗೆಗಿನ ಒಂದೊಳ್ಳೆಯ ಸಿನಿಮಾ. ನಿಶಾ ಪರುಲೇಕರ್ ಶೀರ್ಷಿಕೆ ಪಾತ್ರ ನಿರ್ವಹಿಸಿದ್ದರು.

ಭೀಮ್ ಘರ್ಜನಾ | ವಿಜಯ್ ಪವಾರ್ ನಿರ್ದೇಶನದಲ್ಲಿ ತಯಾರಾದ ‘ಭೀಮ್ ಘರ್ಜನಾ’ (1990) ಮರಾಠಿ ಸಿನಿಮಾ, ತೊಂಬತ್ತರ ದಶಕದ ಆರಂಭದಲ್ಲಿ ಗಮನ ಸೆಳೆದ ಪ್ರಯೋಗ. ಕೃಷ್ಣಾನಂದ್ ಮತ್ತು ಪ್ರಥಮಾ ದೇವಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. 2016ರಲ್ಲಿ ತೆರೆಗೆ ಬಂದ ‘ಬೋಲೆ ಇಂಡಿಯಾ ಜೈ ಭೀಮ್’ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿತ್ತು. ಚಿತ್ರದಲ್ಲಿ ಅಂಬೇಡ್ಕರ್ ಅವರ ಅನುಯಾಯಿ ಹರಿದಾಸ್ ಲಕ್ಷ್ಮಣ್ ರಾವ್ ನಗ್ರಾಲೆ ಅವರ ಮೇಲೆ ಬೆಳಕು ಚೆಲ್ಲಿದ್ದರು. ಸುಭೋದ್ ನಾಗ್‌ದೇವ್ ನಿರ್ದೇಶನದ ಚಿತ್ರದಲ್ಲಿ ಶ್ಯಾಂ ಭೀಮ್‌ಸರಿಯಾ ಅವರು ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದರು. ಎರಡೂವರೆ ಗಂಟೆಗಳ ಅವಧಿಯ ಚಿತ್ರದಲ್ಲಿ ಅಂಬೇಡ್ಕರ್ ಚಳವಳಿಗಳ ಬಗ್ಗೆ ಹೆಚ್ಚಿನ ಪ್ರಸ್ತಾಪವಿತ್ತು.

ಬಾಲಕ ಅಂಬೇಡ್ಕರ್ | ಅಂಬೇಡ್ಕರ್ ಕುರಿತಂತೆ ಕನ್ನಡದಲ್ಲಿ ಮೂರು ಚಿತ್ರಗಳು ತಯಾರಾಗಿವೆ. ಬಸವರಾಜ್ ಕೆಸ್ತೂರ್ ನಿರ್ದೇಶನದಲ್ಲಿ ತಯಾರಾಗಿದ್ದ ‘ಬಾಲಕ ಅಂಬೇಡ್ಕರ್’ (1991) ಚಿತ್ರದಲ್ಲಿ ಅಂಬೇಡ್ಕರ್ ಬಾಲ್ಯದ ಚಿತ್ರಣವಿತ್ತು. ಬಾಲಕ ಅಂಬೇಡ್ಕರ್ ಪಾತ್ರದಲ್ಲಿ ವಿಜಯ್ ನಟಿಸಿದ್ದ ಚಿತ್ರವನ್ನು ಹಿಂದಿಗೂ ಡಬ್ ಮಾಡಿದ್ದರು. ಶರಣ್ ಕಬ್ಬೂರು ನಿರ್ದೇಶನದಲ್ಲಿ ತಯಾರಾಗಿದ್ದ ‘ಡಾ.ಬಿ.ಆರ್ ಅಂಬೇಡ್ಕರ್’ (2005) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಬಿ.ಜೆ.ವಿಷ್ಣುಕಾಂತ್ ಅಭಿನಯಿಸಿದ್ದರು. ಕತೆ, ಚಿತ್ರಕಥೆ ಮತ್ತು ನಿರ್ಮಾಣವೂ ಅವರದೆ. ತಾರಾ ಮತ್ತು ಭವ್ಯ ಪ್ರಮುಖ ಪಾತ್ರಗಳಲ್ಲಿದ್ದರು. ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಮತ್ತು ವಿಶೇಷ ಜ್ಯೂರಿ ಗೌರವಕ್ಕೆ ಈ ಸಿನಿಮಾ ಪಾತ್ರವಾಗಿತ್ತು. ಎಂ.ರಂಗನಾಥ್ ನಿರ್ದೇಶನದಲ್ಲಿ ತಯಾರಾಗಿದ್ದ ‘ರಮಾಬಾಯಿ’ (2016) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಯಜ್ಞ ಶೆಟ್ಟಿ ನಟಿಸಿದ್ದರು. ಡಾ.ಸಿದ್ದರಾಮ ಕಾರ್ನಿಕ್ ಅವರು ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದ ಚಿತ್ರಕ್ಕೆ ಕೆ.ಕಲ್ಯಾಣ್ ಸಂಗೀತ ಸಂಯೋಜಿಸಿದ್ದರು.

ಈ ಚಿತ್ರಗಳಲ್ಲದೆ ಭಾರತದ ಇತರೆ ಕೆಲವು ಭಾಷೆಗಳಲ್ಲಿ ಅಂಬೇಡ್ಕರ್ ಜೀವನ ಚರಿತ್ರೆ ಹಾಗೂ ಅವರ ವಿಚಾರಧಾರೆ ಆಧರಿಸಿ ಹತ್ತಾರು ಚಿತ್ರಗಳು, ಕಿರುತೆರೆ ಸರಣಿಗಳು ತಯಾರಾಗಿವೆ. ‘ಬೋಲೆ ಇಂಡಿಯಾ ಜೈ ಭೀಮ್’ (ಮರಾಠಿ, 2016), ‘ಶರಣಂ ಗಚ್ಚಾಮಿ’ (ತೆಲುಗು, 2017), ‘ಬಾಲ್ ಭೀಮ್‌ರಾವ್’ (ಮರಾಠಿ, 2018) ಪ್ರಸ್ತಾಪಿಸಬಹುದಾದ ಕೆಲವು ಚಿತ್ರಗಳು. ರಮಾಬಾಯಿ ಅಂಬೇಡ್ಕರ್ ಜೀವನ ಚರಿತ್ರೆ ಆಧರಿಸಿಯೂ ಚಿತ್ರಗಳು ತಯಾರಾಗಿವೆ. ಇನ್ನು ಕಿರುತೆರೆಯಲ್ಲಿ ವಿವಿಧ ಪ್ರಾದೇಷಿಕ ಭಾಷೆಗಳಲ್ಲಿ ಅಂಬೇಡ್ಕರ್ ವ್ಯಕ್ತಿಚಿತ್ರಗಳು ಅನಾವರಣಗೊಂಡಿವೆ. ಪ್ರಸ್ತುತ ‘ಮಹಾನಾಯಕ’ ಹಿಂದಿ ಸರಣಿ ವಿವಿಧ ಭಾಷೆಗಳಿಗೆ ರೀಮೇಕ್ ಆಗಿ ಪ್ರಸಾರವಾಗುತ್ತಿದ್ದು, ಜನಪ್ರಿಯವಾಗಿದೆ.

ಮುಮ್ಮೂಟಿ ಪಾತ್ರವನ್ನು ಜೀವಿಸಿದ್ದರು
ಯಾವುದೇ ಒಂದು ಸಮಾಜಿಕ – ರಾಜಕೀಯ ವಸ್ತು ಪ್ರಭಾವಶಾಲಿಯಾಗಿ ತೆರೆ ಮೇಲೆ ಮೂಡಬೇಕೆಂದರೆ ನಿರ್ದೇಶಕರ ಬದ್ಧತೆ ಗಣನೆಗೆ ಬರುತ್ತದೆ. ಅವರು ಎಷ್ಟು ರಿಸ್ಕ್ ತೆಗೆದುಕೊಳ್ಳೋದಕ್ಕೆ ಸಿದ್ಧರಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ. ‘ಡಾ.ಬಾಬಾಸಾಹೇಬ್ ಅಂಬೇಡ್ಕರ್’ ನನಗೆ ತುಂಬಾ ಇಷ್ಟವಾಗಿತ್ತು. ಶೀರ್ಷಿಕೆ ಪಾತ್ರ ನಿರ್ವಹಿಸಿದ್ದ ಮುಮ್ಮೂಟಿಯವರು ಆ ಪಾತ್ರವನ್ನು ಜೀವಿಸಿದ್ದರು. ಈಗ ಅಂಬೇಡ್ಕರ್‌ರಿಂದ ಪ್ರಭಾವಿತರಾಗಿರುವ ಯುವ ನಿರ್ದೇಶಕರು ರೂಪಿಸುತ್ತಿರುವ ಸಿನಿಮಾಗಳು ಗಮನ ಸೆಳೆಯುತ್ತಿವೆ.
– ಬಿ.ಎಂ.ಗುರುರಾಜ್, ಚಿತ್ರನಿರ್ದೇಶಕ
ಜಬ್ಬಾರ್ ಪಟೇಲ್ ನಿರ್ದೇಶನದ ‘ಡಾ.ಬಾಬಾಸಾಹೇಬ್ ಅಂಬೇಡ್ಕರ್’ ಸಂಶೋಧನೆ ನಡೆಸಿ ಮಾಡಿದ್ದ ಮಹತ್ವದ ಸಿನಿಮಾ. ಬಿಗಿಯಾದ ನಿರೂಪಣೆ ಇತ್ತು. ವೈಯಕ್ತಿಕವಾಗಿ ನನಗೆ ಈ ಚಿತ್ರದ ನೋಡಿದ ನಂತರವೇ ಪೂನಾ ಒಪ್ಪಂದದ ಬಗ್ಗೆ ಹಾಗೂ ಗಾಂಧಿ ಏಕೆ ಅಂಬೇಡ್ಕರ್ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದರು ಎನ್ನುವುದು ಮನವರಿಕೆಯಾಗಿದ್ದು. ಬಯೋಗ್ರಫಿಗಳನ್ನು ತೆರೆಗೆ ಅಳವಡಿಸುವ ನಿರ್ದೇಶಕರಿಗೆ ಈ ಸಿನಿಮಾ ಒಂದು ಶ್ರೇಷ್ಠ ಮಾದರಿ.
– ಕೆ ಪುಟ್ಟಸ್ವಾಮಿ, ಲೇಖಕರು