
ಲೇಖಕ
ಹಿರಿಯ ಚಿತ್ರನಟ ರಾಜೇಶ್ ಅವರಿಗೆ ಇಂದು (ಏಪ್ರಿಲ್ 15) 89 ವರ್ಷ ತುಂಬಿತು. ರಂಗಭೂಮಿ ಹಿನ್ನೆಲೆಯಿಂದ ಬೆಳ್ಳಿತೆರೆ ಪ್ರವೇಶಿಸಿದ ಅವರು ‘ಶಿಸ್ತಿನ ನಟ’ ಎಂದೇ ಕರೆಸಿಕೊಂಡವರು. ರಾಜೇಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಲೇಖಕ ಡಾ.ಶ್ರೀನಿವಾಸ್ ಪ್ರಸಾದ್ ಅವರು ನಾಲ್ಕು ವರ್ಷಗಳ ಹಿಂದೆ ಹಿರಿಯ ನಟನನ್ನು ಸಂದರ್ಶಿಸಿದ ಆಪ್ತ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಡಾ.ರಾಜೇಶ್ ಅವರನ್ನು ಸಂದರ್ಶನ ಮಾಡುವಿರಾ ಎಂದು ಮುಖಪುಸ್ತಕದ ಆಪ್ತರಾದ ಶ್ರೀಮತಿ ಸುಧಾ ಅವರು ಕರೆ ಮಾಡಿ ಕೇಳಿದಾಗ ನಾನು ಆನಂದ ತುಂದಿಲನಾದೆ. ಅದರಂತೆ ರಾಜೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರೂ ಅತ್ಯಂತ ಆಪ್ಯಾಯತೆಯಿಂದ ಸಲೀಸಾಗಿ ವಿದ್ಯಾರಣ್ಯಪುರದ ಮನೆಗೆ ಬರಹೇಳಿದರು. ನನ್ನ ಮೊಬೈಲ್ ಅಡಚಣೆ ಅವರ ಬಳಿ ಸರಿಯಾಗಿ ಮಾತಾಡಲು ಬಿಡಲಿಲ್ಲ, ನನಗೋ ಭಯ ಶುರುವಾಯ್ತು. ರಾಜೇಶ್ ಏನಂದುಕೊಂಡರೋ ಎಂಬ ಆತಂಕವಾಯಿತು. ಆದರೆ, ಕೆಲವೇ ಕ್ಷಣಗಳಲ್ಲಿ ಅವರೇ ಫೋನ್ ಮಾಡಿದ್ದರು. 56 ವರ್ಷದ ಚಿತ್ರರಂಗದ ಅನುಭವಿ, ಹಿರಿಯ ಚೇತನ ನನ್ನನ್ನು ತಮ್ಮ ಮನೆಗೆ ಆಮಂತ್ರಿಸಿದರು.
ನಾನು ಅವರ ರವಿವರ್ಮನ ಕುಂಚದ ಕಲೆ, ಕಂಗಳು ವಂದನೆ ಹೇಳಿದೆ, ಬೆಳುವಲದ ಮಡಿಲಲ್ಲಿ, ನಾನೇ ಎಂಬ ಭಾವ… ಈ ದೇಶ ಚೆನ್ನ… ಗೀತೆಗಳು, ‘ರೇಣುಕಾದೇವಿ ಮಹಾತ್ಮೆ’ ಚಿತ್ರದ ಅವರ ‘ಜಮದಗ್ನಿ’ ಪಾತ್ರ, ‘ಕಲಿಯುಗ’ ಚಿತ್ರದ ಭವಾನಿಶಂಕರ್ ಪಾತ್ರ, ‘ಜಯಭೇರಿ’ ಚಿತ್ರದ ‘ರಾಜಾರಾಮ್’ ಆಗಿ ಅವರ ಖಳಪಾತ್ರ “ನನ್ನ ಕ್ಯಾರೆಕ್ಟರೇ ಅರ್ಥ ಮಾಡ್ಕೊಳ್ಳೊದಿಲ್ವಲ್ಲ” ಈ ಮಾತುಗಳನ್ನ ನೆನಪಿಸಿದೆ. ಅವರೂ ಅಪಾರವಾಗಿ ಖುಷಿ ಪಟ್ಟರು. ಅವರ ಆಪ್ತರು ಈ ಪಾತ್ರಕ್ಕೆ ನೀಡಿದ ಶಹಭಾಷ್‌ಗಿರಿಯನ್ನೂ ಹೇಳಿದರು. ‘ಕುಮಾರತ್ರಯರ ಬಳಿಕ ಸುಸ್ಪಷ್ಟ ಭಾಷಾಭಿವ್ಯಕ್ತಿಗೆ ನೀವೇ ನಾಂದಿ’ ಎಂದದ್ದಕ್ಕೆ ರಾಜೇಶ್ “ಸತ್ಯವಾದ ಮಾತು, ಸತ್ಯವಾದ ಮಾತು” ಎಂದು ಹರ್ಷಿಸಿದರು.

ನಾನು ನನ್ನ ಹತ್ತಿರದ ಗೆಳೆಯರಾದ ನನ್ನದೇ ಹೆಸರಿನ ಪ್ರಸಾದ್ ಜೊತೆ ರಾಜೇಶ್ ಅವರ ವಿದ್ಯಾರಣ್ಯಪುರದ ಮನೆಗೆ ತಲುಪಿದಾಗ ರವಿವಾರದ ಬೆಳಗಿನ 11:00 ಗಂಟೆಯ ಸಮಯ. ರಾಜೇಶ್ ಅವರಿಗೆ ಕರೆ ಮಾಡಿದೆ. ಒಂದು ಗಂಟೆ ಮುಂಚಿತವಾಗಿ ಅವರ ಮನೆಗೆಹೋದೆವು. ಉಭಯಕುಶಲೋಪರಿಯ ನಂತರ, ರಾಜೇಶ್ ಅವರ ವಾಗ್ವರ್ಚಸ್ಸು, ಓಘ, ಸಲಿಲ ಧಾರೆಯಂತೆ ಸುಲಲಿತವಾಗಿ ನಿರರ್ಗಳವಾಗಿ ಹರಿದಾಡಿ ಸುಭಗವಾದ ಆನಂದೋತ್ಕರ್ಷದ ಧ್ವನಿತರಂಗಗಳನ್ನೆಬ್ಬಿಸುತ್ತಿತ್ತು. ರಾಜೇಶ್ ಉತ್ತಮ ಕಂಠಸಿರಿ ಹೊಂದಿದ್ದು ನಾಟಕಗಳಲ್ಲಿ ಗಾಯನವನ್ನೂ ಮಾಡಿದ್ದಾರೆ. ಬಡವನ ಬಾಳು, ನಿರುದ್ಯೋಗಿಯ ಬಾಳು.ಸೇರಿದಂತೆ ಏಳೆಂಟು ನಾಟಕಗಳನ್ನು ರಚಿಸಿರುವ ಸೃಜನಶೀಲರು.
‘ರೇಣುಕಾದೇವಿ ಮಹಾತ್ಮೆ’ ಸಿನಿಮಾಗೆ ಸಂಭಾಷಣೆ ಬರೆದವರು ಉದಯಕುಮಾರ್. ರಾಜೇಶ್ ಅವರದ್ದು ಜಮದಗ್ನಿಯ ಪಾತ್ರ. ಪಾತ್ರಕ್ಕೆ ತಕ್ಕಂತೆ ಮಾಂಸಾಹಾರ ತ್ಯಜಿಸಿ ಆ ಪಾತ್ರ ನಿರ್ವಹಿಸಿದೆಎಂದ ರಾಜೇಶ್ ಅವರು ರೇಣುಕೆಯ ಶಿರಚ್ಛೇದನದ ಸನ್ನಿವೇಶದಲ್ಲಿ ದೀರ್ಘ ಪುಟಗಳ ಸಂಭಾಷಣೆಯನ್ನು ರಾಜೇಶ್ ಒಂದೇ ಸಲ ಹೇಳಿ ಮುಗಿಸಿದ್ದಕ್ಕೆ ರೇಣುಕೆಯ ಪಾತ್ರಧಾರಿ ಬಿ.ಸರೋಜಾದೇವಿ ಅವರು ಅಚ್ಚರಿ-ಆನಂದ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲದೆ, ಉದಯ ಕುಮಾರ್ ರಾಜೇಶ್ ಅವರ ಎರಡೂ ಕಾಲುಗಳನ್ನು ಹಿಡಿದು, ಕಣ್ಣೀರು ಸುರಿಸಿ, “ತಮ್ಮಾ, ನಿನ್ನಲ್ಲಿರುವ ಕಲಾ ಸರಸ್ವತಿಗೆ ನನ್ನ ನಮಸ್ಕಾರ” ಎಂದಾಗ ರಾಜೇಶ್ ಮೂಕರಾಗಿದ್ದರು.
‘ಸೊಸೆ ತಂದ ಸೌಭಾಗ್ಯ’ ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ. ಈ ಸಿನಿಮಾದ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರು ರಾಜೇಶ್‌ರ ಬಳಿಗೆ ಬಂದು, “ರಾಜೇಶ್, ಉಳಿದೆಲ್ಲ ಗೀತೆಗಳಿಗಿಂತ ನಿಮ್ಮ ಮೇಲೆ ಚಿತ್ರೀಕರಿಸಿರುವ ಹಾಡು ಅತ್ಯಂತ ಯಶಸ್ವಿ ಆಗುತ್ತದೆ, ಅಂದರು. ಭೀಮ್ ಪಲಾಸ್/ಅಭೇರಿ ರಾಗದ ಆ ಹಾಡೇ ಚಿರಂತನವಾದ ‘ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ…’. ಜಯಗೋಪಾಲ್ ಅವರ ಸಾಹಿತ್ಯಕ್ಕೆ ಪಿಬಿಎಸ್ ಸುಮಧುರ ಕೊರಳ ದೇಣಿಗೆ ನೀಡಿದ್ದರು. ಪಿಬಿಎಸ್ ಅವರ ಅಮ್ಮ ಶೇಷಗಿರಿಯಮ್ಮ ತೀರಿ ಹೋಗಿ ಹಿಂದಿನ ದಿನ ಅವರ ದಹನ ಕಾರ್ಯ ಮುಗಿಸಿ ಮಾರನೇದಿನ ಹಾಡಿದ ಪಿಬಿಎಸ್ ಈ ಗೀತೆಯನ್ನು ಅಮ್ಮನಿಗೆ ಅರ್ಪಿಸಿದ್ದನ್ನು ರಾಜೇಶ್ ತಿಳಿಸಿದರು. ‘ದೇವರ ದುಡ್ಡು’ ಸಿನಿಮಾಗೆ ಮೊದಲು ಬೇರೆಯವರು ನಾಯಕ/ನಾಯಕಿ ಆಗಬೇಕಿತ್ತು. ಆದರೆ ಅದು ರಾಜೇಶ್, ಜಯಂತಿ ಅವರಿಗೊಲಿಯಿತು. 28 ದಿನಗಳಲ್ಲಿ ಮುಗಿದ ಈ ಚಿತ್ರ ಇದೇ ಕಥೆಯ ಷೂಟಿಂಗ್ ಆಗುತ್ತಿದ್ದ ಹಿಂದಿಯ ಸಂಜೀವಕುಮಾರ್ ಅಭಿನಯದ ‘ಯಹೀ ಹೈ ಜಿ಼ಂದಗಿ..’ ಎರಡೂ ಸಹ ಚೆನ್ನಾಗಿ ಓಡಿತು ಅಂದರು ರಾಜೇಶ್. ಇದು ತಮಿಳಿನ ‘ಕಲಿಯುಗ ಕಣ್ಣನ್’ ಅವತರಣಿಕೆ.
ಗೀತಪ್ರಿಯರ ‘ಬೆಳುವಲದ ಮಡಿಲಲ್ಲಿ’ ರಾಜೇಶ್ ಸಿನಿ ಬದುಕಿನ ಶ್ರೇಷ್ಠ ಚಿತ್ರ. ದೇವಿರಪ್ಪನವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಮೊದಲು ಆಯ್ಕೆ ಆಗಿದ್ದವರು ಬೇರೆ ನಾಯಕಿ. ಆಗ ರಾಜೇಶ್ ಗೀತಪ್ರಿಯರಿಗೆ ಕಲ್ಪನಾ ಹೆಸರನ್ನು ಸೂಚಿಸಿದರು. ‘ಆಕೆ ಶೂಟಿಂಗ್‌ಗೆ ತಡವಾಗಿ ಬರ್ತಾರಂತೆ ಎಂಬ ಆರೋಪ ಇದೆ’ ಎಂದು ಗೀತಪ್ರಿಯ ಕೇಳಿದಾಗ, ರಾಜೇಶ್, ‘ಆ ವಿಷಯ ನಾನು ಕಲ್ಪನ ಅವರ ಬಳಿ ಮಾತಾಡ್ತೀನಿ’ ಎಂದಿದ್ದರಂತೆ. ಮುಂದೆ ಚಿತ್ರ ಅದ್ಭುತವಾಗಿ ಮೂಡಿತು. “ಈ ಚಿತ್ರದ ‘ನೋಟಕ್ಕೆ ನೋಟ ಬೆಸೆಯೋನೇ…’ ಹಾಡಿಗೆ ನಿರ್ದೇಶಕ ಗೀತಪ್ರಿಯರಿಗೆ ಹೇಳಿ ನಾನು, ಕಲ್ಪನಾ ಇಬ್ಬರೂ ಮಾತಾಡಿಕೊಂಡು ನೃತ್ಯ ನಿರ್ದೇಶಕರೇ ಇಲ್ಲದೆ ನಾವೇ ಕುಣಿದ ಹಾಡಿದು” ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು ರಾಜೇಶ್. “ನನ್ನ ಮಗಳು ಆಶಾರಾಣಿಗೆ (ನಿವೇದಿತ) ರಥಸಪ್ತಮಿ ಚಿತ್ರದ ನಂತರ ತಮಿಳು ಚಿತ್ರಗಳಲ್ಲಿ ಹೆಚ್ಚೆಚ್ಚು ಅವಕಾಶಗಳು ಸಿಗುವಂತಾಗಲು ಗೀತಪ್ರಿಯ ಅವರೇ ಕಾರಣ, ತಂಪು ಹೊತ್ತಿನಲ್ಲಿ ಆ ಪುಣ್ಯಾತ್ಮನನ್ನು ನೆನೆಯಬೇಕು” ಎಂದು ಕೈ ಮುಗಿದರು.
‘ಬಿಡುಗಡೆ’ ಚಿತ್ರದಲ್ಲಿ ರಾಜೇಶ್ ಅವರಿಗೆ ಸಾಫ್ಟ್ ಫೇಸ್ಡ್ ವಿಲನ್ ಪಾತ್ರ. ಆದರೆ ಶೂಟಿಂಗ್ ಶುರುವಾದರೂ ರಾಜೇಶ್‌ಗೆ ಅವರ ಪಾತ್ರ, ಕಥೆ ಹೇಳದೆ ಸತಾಯಿಸಿದಾಗ, ಛಲದಿಂದ ರಾಜೇಶ್ “ಈ ಪಾತ್ರದಲ್ಲಿ ನಾನು ಗೆದ್ದೇ ಗೆಲ್ತೀನಿ” ಎಂದರು. ರಾಜೇಶ್‌ರ ಸೋಮನಾಥ್ ಖಳಪಾತ್ರದ ನಟನೆಗೆ ಮಾರು ಹೋಗಿ ರಾಜೇಶ್‌ರ ಮನೆಗೆ ಬಂದು ಮುತ್ತಿಟ್ಟು ಅವರನ್ನು ಅಭಿನಂದಿಸಿದವರು ಮುಂದೆ ಬಹಳ ದೊಡ್ಡ ಹೆಸರಾದ ನಿರ್ದೇಶಕರಾದ ಪಿ.ವಾಸು.
‘ಬೆಳುವಲದ ಮಡಿಲಲ್ಲಿ’ ಶೂಟಿಂಗ್ ಸಮಯದಲ್ಲಿ ಬಿಜ್ಜಲಿ ಎಂಬ ತಾಣದಲ್ಲಿ ಹಾಕಿದ್ದ ಹೊಗೆ ರಾಜೇಶ್ ಅವರ ಗಂಟಲನ್ನೇ ಕಿತ್ತುಕೊಂಡಿತ್ತು. ಮರಳಿ ಧ್ವನಿ ಬಾರದೆಂದಾದಾಗ ರಾಜೇಶ್ ಮತ್ತವರ ಕುಟುಂಬದ ಜಂಘಾಬಲವೇ ಉಡುಗಿ ಹೋಗಿತ್ತಂತೆ. ಆಗ ಅವರ ಪಾಲಿಗೆ, ಬಾಳಿಗೆ ಸಂಜೀವಿನಿಯಾಗಿ ರಾಜೇಶ್ ಗಂಟಲು ಸರಿಪಡಿಸಿದವರು ಡಾ.ರುದ್ರೇಶ್ (ಹೋಮಿಯೋಪತಿ ವೈದ್ಯರಲ್ಲ). “ಆ ಮಹಾನುಭಾವ ರುದ್ರೇಶ್ ನಮಗೆ ದೇವರ ಸಮಾನ” ಎಂದು ಕೈ ಮುಗಿದರು ರಾಜೇಶ್. ಚಿತ್ರನಿರ್ದೇಶಕ ಮಣಿರತ್ನಂ ಅವರ ತಂದೆ ರತ್ನಂ ಅಯ್ಯರ್ ತಮ್ಮ ಸಿನಿಮಾ ಬದುಕಿನ ಗ್ರ್ಯಾಂಡ್‌ಫಾದರ್ ಎಂದು ಮೆಚ್ಚಿದ ರಾಜೇಶ್ ನಮ್ಮನ್ನು ಊಟಕ್ಕೆಬ್ಬಿಸಿದರು.
ಅತಿಥಿ ದೇವೋಭವ ಎಂದು “ಮೊದಲು ನಿಮ್ಮ ಊಟ, ಆಮೇಲೆ ನಂದು..” ಎಂದ ಹಿರಿಯ ಚೇತನ ಡಾ.ರಾಜೇಶ್ ಅವರ ಮಧುರ ಹಾಡಾದ “ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ..” ಹಾಡನ್ನು ಸ್ನೇಹಿತರಾದ ಸುಧಾ ಸೊಗಸಾಗಿ ಹಾಡಿದಾಗ ನಗುನಗುತ್ತಾ ಮೆಚ್ಚಿದ ಕಲಾತಪಸ್ವಿ ನನ್ನ ಕೃತಿಗಳ ಬಗ್ಗೆ ಅದ್ಭುತ ಮಾತುಗಳನ್ನು ಬರೆದುಕೊಟ್ಟು ಆಶೀರ್ವಾದ ಮಾಡಿದ ಆ ಜೀವಕ್ಕೆ ನಮಸ್ಕರಿಸಿ ಪೇಟ,ಶಾಲು ಹಾಕಿ ಸನ್ಮಾನಿಸಿದ್ದು ನನ್ನ ಸೌಭಾಗ್ಯ. “ಸರ್ ನನ್ನ ಈ ಬಗೆಯ ಎಲ್ಲ ಲೇಖನಗಳೂ ಕೃತಿಯಾಗಿ ಹೊರಬರಲಿದೆ. ಅದಕ್ಕೆ ತಾವು ಮುನ್ನುಡಿ ಬರೆದುಕೊಡಲು ಆಗುವುದೇ?” ಎಂದು ಕರೆ ಮಾಡಿ ಕೇಳಿದಾಗ, “ಏ, ಅದು ನನ್ನ ಭಾಗ್ಯವಲ್ಲವೇ, ಖಂಡಿತ ಬರೆದುಕೊಡ್ತೀನಿ” ಎಂದಾಗ ಅವರಿಗೆ ತಲೆಬಾಗುವ ಸಂತೃಪ್ತಿ ನನ್ನದಾಯಿತು.