ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸ್ತ್ರೀ ಅಂತಃಸತ್ವಕ್ಕೆ ಕನ್ನಡಿ ಹಿಡಿದ ಚಿತ್ರನಿರ್ದೇಶಕಿ ಸುಮಿತ್ರಾ ಭಾವೆ

ಪೋಸ್ಟ್ ಶೇರ್ ಮಾಡಿ
ಸುಮನಾ ಕಿತ್ತೂರು
ಚಿತ್ರನಿರ್ದೇಶಕಿ

ಮರಾಠಿ ರಂಗಭೂಮಿ ಮತ್ತು ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ಇಂದು (ಏಪ್ರಿಲ್‌ 19) ಪುಣೆಯಲ್ಲಿ ಅಗಲಿದ್ದಾರೆ. ಕನ್ನಡ ಚಿತ್ರನಿರ್ದೇಶಕಿ ಸುಮನಾ ಕಿತ್ತೂರು ಅವರು ಭಾವೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದವರು. ಸುಮಿತ್ರಾ ಭಾವೆ ಅರ್ಥಪೂರ್ಣ ಸಿನಿಮಾಗಳು, ಅವರ ಮೇರು ವ್ಯಕ್ತಿತ್ವವನ್ನು ಸುಮನಾ ಸ್ಮರಿಸಿಕೊಂಡಿದ್ದಾರೆ.

ದಶಕದ ಹಿಂದೆ ಗೋವಾ ಸಿನಿಮೋತ್ಸವಕ್ಕೆ ಹೋಗಿದ್ದಾಗಿನ ಸಂದರ್ಭ. ಅಲ್ಲಿ ಮೊದಲ ಬಾರಿ ಸುಮಿತ್ರಾ ಭಾವೆ ನಿರ್ದೇಶನದ ‘ದೋಘಿ’ ಮರಾಠಿ ಸಿನಿಮಾ ನೋಡಿದ್ದು. ಅಂದೇ ಅವರ ಅಭಿಮಾನಿಯಾಗಿಬಿಟ್ಟಿದ್ದೆ. ಈ ಚಿತ್ರದಿಂದ ಪ್ರಭಾವಿತಳಾದ ನಾನು ನಂತರ ಅವರ ಸಿನಿಮಾಗಳನ್ನು ಹುಡುಕಿ ನೋಡುತ್ತಾ ಬಂದೆ. ತುಂಬಾ ಪ್ರಭಾವಶಾಲಿ ಚಿತ್ರನಿರ್ದೇಶಕಿ ಸುಮಿತ್ರಾ ಭಾವೆ. ಭಾರತದ ಪ್ರಮುಖ ಚಿತ್ರನಿರ್ದೇಶಕಿಯರ ಬಗ್ಗೆ ಹೇಳುವಾಗ ಭಾವೆ ಅವರ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸಿನಿಮಾ, ಸಾಕ್ಷ್ಯಚಿತ್ರಗಳಲ್ಲಿ ಮಹಿಳೆಯ ಅಂತಃಸತ್ವವನ್ನು ತುಂಬಾ ಮೇಲ್ಮಟ್ಟದಲ್ಲಿ ಪ್ರಸೆಂಟ್ ಮಾಡಿದಂತಹ ನಿರ್ದೇಶಕಿ. ಆ ವಿಚಾರವಾಗಿ ಅವರ ಸಮಕಾಲೀನ ಚಿತ್ರನಿರ್ದೇಶಕರ ಸಾಲಿನಲ್ಲಿ ಅವರು ಪ್ರತ್ಯೇಕವಾಗಿ ನಿಲ್ಲುತ್ತಾರೆ. ಸಾಕಷ್ಟು ತಯಾರಿ, ರೀಸರ್ಚ್‌ನೊಂದಿಗೆ ಮಾಡಿದ ಅವರ ಸಾಕ್ಷ್ಯಚಿತ್ರಗಳು ಸಿನಿಮಾ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ಪಠ್ಯ. ತುಂಬಾ ಸೂಕ್ಷ್ಮ ವಿಚಾರಗಳನ್ನು ಅವರಿಲ್ಲಿ ಹೇಳಿದ್ದಾರೆ.

ಸುಮಿತ್ರಾ ಭಾವೆ ಅವರೊಂದಿಗೆ ಸುಮನಾ ಕಿತ್ತೂರು

2018ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಮಿತ್ರಾ ಭಾವೆ ಜ್ಯೂರಿಯಾಗಿ ಭಾಗವಹಿಸಿದ್ದರು. ಈ ಜ್ಯೂರಿ ತಂಡದಲ್ಲಿ ನಾನೂ ಒಬ್ಬ ಸದಸ್ಯೆಯಾಗಿದ್ದೆ. ಅದೊಂದು ಅಪೂರ್ವ ಕ್ಷಣ. ನಾನು ತುಂಬಾ ಇಷ್ಟಪಟ್ಟ ಚಿತ್ರನಿರ್ದೇಶಕಿಯೊಂದಿಗೆ ಹತ್ತು ದಿನ ಕಳೆಯುವ ಅವಕಾಶ ಸಿಕ್ಕಿತ್ತು. ಚಿತ್ರೋತ್ಸವದಲ್ಲಿ ಭಾವೆ ಅವರ ಮೂರು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಅದಾಗಲೇ ನಾನು ಆ ಚಿತ್ರಗಳನ್ನು ನೋಡಿದ್ದರೂ ಮತ್ತೊಮ್ಮೆ ಭಾವೆ ಅವರೊಂದಿಗೆ ಅವರ ಸಿನಿಮಾಗಳನ್ನು ವೀಕ್ಷಿಸಿದ್ದೆ. ‘ದೇವರಾಯಿ’, ‘ವಾಸ್ತುಪುರುಷ್‌’ ಸಿನಿಮಾದಲ್ಲಿ ನಿರ್ದೇಶಕಿ ಭಾವೆ ಮನುಷ್ಯನೊಳಗೆ ಆಳವಾಗಿ ಸ್ಫುರಿಸುವಂತಹ ಆಸೆ, ಆಕಾಂಕ್ಷೆ, ಅವನತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿನ ಲೊಕೇಶನ್‌ ಬಗ್ಗೆ ನಾನು ತಲೆಕೆಡಿಸಿಕೊಂಡಿದ್ದೆ. ಅವರು ಕತೆಗೆ ಸೂಕ್ತವಾದಂತಹ ಲೊಕೇಶನ್ ಹುಡುಕುವ ಬಗೆ, ಇದಕ್ಕಾಗಿ ತಾವು ಪಟ್ಟ ಶ್ರಮ, ಸಿನಿಮಾ ಮೇಕಿಂಗ್‌ನಲ್ಲಿ ಕತೆ, ಚಿತ್ರಕಥೆಯಲ್ಲಿನ ಮಾರ್ಪಾಟುಗಳ ಬಗ್ಗೆ ಹೇಳಿದ್ದು ನನಗೊಳ್ಳೆ ಪಾಠವಾಗಿತ್ತು. ಅತುಲ್ ಕುಲಕರ್ಣಿ, ರಾಧಿಕಾ ಆಪ್ಟೆ ಸೇರಿದಂತೆ ಅವರ ಸಿನಿಮಾಗಳಲ್ಲಿ ಹತ್ತಾರು ಪ್ರತಿಭಾವಂತರು ಪ್ರಬಲ ಕಲಾವಿದರಾಗಿ ಹೊರಹೊಮ್ಮಿದ್ದಾರೆ.

‘ವಾಸ್ತುಪುರುಷ್‌’ ಸಿನಿಮಾ

ಭಾವೆ ಅವರ ‘ಅಸ್ತು’ ನನಗೆ ತುಂಬಾ ಇಷ್ಟವಾದ ಮತ್ತೊಂದು ಸಿನಿಮಾ. ಈ ಚಿತ್ರದಲ್ಲಿ ಮೋಹನ್ ಅಗಾಸ್ಸೆ ಅಲ್ಜಮೈರ್‌ ಪೇಷೆಂಟ್ ಆಗಿ ನಟಿಸಿದ್ದಾರೆ. ಸೋಷಿಯಲ್ ಸೈನ್ಸ್ ಓದಿಕೊಂಡಿರುವ ಅವರು ಇಂತಹ ವಿಷಯಗಳನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸುವ ರೀತಿ ತುಂಬಾ ಪರಿಣಾಮಕಾರಿಯಾಗಿದೆ. ‘ದೇವರಾಯಿ’ಯಲ್ಲಿ ಮನುಷ್ಯನ ಮಾನಸಿಕ ಸ್ಥಿತಿ-ಗತಿಯನ್ನು ಅವರು ಆಳವಾಗಿ ಅಭ್ಯಸಿಸಿ ನಿರ್ವಹಿಸಿದ್ದಾರೆ. ಇಂತಹ ವಸ್ತು – ವಿಷಯವನ್ನು ತೆರೆಗೆ ಅಳವಡಿಸುವುದು ಸವಾಲು. ನಿರ್ದೇಶಕರು ಬೆಳೆದು ಬಂದಂಥ ಹಿನ್ನೆಲೆ, ಅವರ ಅಭಿರುಚಿ – ಆಸಕ್ತಿಗಳೂ ಇಲ್ಲಿ ಮುಖ್ಯವಾಗುತ್ತವೆ. ಮೂಲತಃ ಭಾವೆ ಅವರು ಸಾಮಾಜಿಕ ಕಾರ್ಯಕರ್ತೆಯಾದ್ದರಿಂದ ಇದು ಸಾಧ್ಯವಾಗಿದೆ ಎನ್ನುವುದು ನನ್ನ ಅನಿಸಿಕೆ. ‘ದೋಘಿ’ ನನಗೆ ತುಂಬಾ ಇಷ್ಟವಾದ ಅವರ ಸಿನಿಮಾ. ಒಂದು ಹೆಣ್ಣು, ಮತ್ತೊಬ್ಬ ಹೆಣ್ಣಿಗೆ ಬೆಂಬಲವಾಗಿ ನಿಂತರೆ ಒಂದೊಳ್ಳೆಯ ಪರಿಸರ ಹೇಗೆ ನಿರ್ಮಾಣವಾಗುತ್ತದೆ ಎನ್ನುವ ಆಪ್ತ ವಿಚಾರ ಇಲ್ಲಿದೆ.

‘ದೋಘಿ’ (1995) ಮರಾಠಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಜೋಡಿ ಸುಮಿತ್ರಾ ಭಾವೆ ಮತ್ತು ಸುನೀಲ್ ಸುಖ್ತಂಕರ್, ನಟಿ ರೇಣುಕಾ ದಫ್ತಾದಾರ್. ಈ ಸಿನಿಮಾ ಮೂರು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದೆ.

ಬೆಂಗಳೂರು ಚಿತ್ರೋತ್ಸವದಲ್ಲಿ ಜ್ಯೂರಿ ತಂಡದಲ್ಲಿ ಭಾವೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂದದ್ದು ಅದೃಷ್ಟವೆಂದೇ ಭಾವಿಸುತ್ತೇನೆ. ಇದು ಜೀವಮಾನದ ಅವಕಾಶ. ಆ ಮೊದಲು ಅವರ ಸಂಪರ್ಕ ಇತ್ತಾದರೂ ಚಿತ್ರೋತ್ಸವದಲ್ಲಿ ಹೆಚ್ಚು ಒಡನಾಟ ಸಾಧ್ಯವಾಯ್ತು. ಅವರು ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು. ಚಿತ್ರಪ್ರದರ್ಶನ, ಸಂವಾದದ ನಂತರ ಹೋಟೆಲ್‌ ರೂಂನಲ್ಲಿ ತುಂಬಾ ಮಾತನಾಡುತ್ತಿದ್ದೆವು. ನನ್ನ ಅಪ್ಪ ಥಿಯೇಟರ್ ಆಪರೇಟರ್ ಆಗಿದ್ದನ್ನು ನೋಡಿ ನನಗೆ ಸಿನಿಮಾದೆಡೆ ಆಸಕ್ತಿ ಬೆಳೆದದ್ದು, ನಂತರ ಪತ್ರಕರ್ತೆಯಾಗಿ ನಿರ್ದೇಶನದತ್ತ ಹೊರಳಿದ್ದನ್ನು ಕೇಳಿ, “ನಿನ್ನ ಜರ್ನೀನೇ ಸಿನಿಮಾ ಮಾಡಬಹುದು” ಎಂದಿದ್ದರು! ನಾನೇನೋ ದೊಡ್ಡ ಸಾಧನೆ ಮಾಡಿರುವಂತೆ ಅವರು ಹಾಗೆ ಹೇಳಿದಾಗ ನನಗೆ ತುಂಬಾ ಸಂಕೋಚವಾಗಿತ್ತು. ನನ್ನ ನಿರ್ದೇಶನದ ‘ಎದೆಗಾರಿಕೆ’ ಸಿನಿಮಾ ನೋಡಿ ತುಂಬಾ ಮೆಚ್ಚಿಕೊಂಡಿದ್ದರು.

‘ಕಾಸವ್’ ಸಿನಿಮಾ

ವಯಸ್ಸಿನಲ್ಲಿ ಅವರಿಗಿಂತ ತುಂಬಾ ಚಿಕ್ಕವರಾದ ಸುನೀಲ್ ಸುಖ್ತಂಕರ್‌ ಅವರೊಡಗೂಡಿ ಭಾವೆ ನಿರ್ದೇಶನ ಮಾಡುತ್ತಿದ್ದರು. ಇವರಿಬ್ಬರಲ್ಲಿ ತುಂಬಾ ಹೊಂದಾಣಿಕೆ ಇತ್ತು. ಸುನೀಲ್ ಕೂಡ ಚಿತ್ರೋತ್ಸವಕ್ಕೆ ಬಂದಿದ್ದರು. ‘ನಮ್ಮ ಸಮಾಜದಲ್ಲಿ ಲಿಂಗತಾರತಮ್ಯ ಸಾಮಾನ್ಯ. ಪುರುಷ ನಿರ್ದೇಶಕನ ಜೊತೆಗೂಡಿ ಚಿತ್ರಗಳಲ್ಲಿ ಕೆಲಸ ಮಾಡುವ ಸಂದರ್ಭಗಳಲ್ಲಿ ಇರುಸು – ಮುರುಸು ಉಂಟಾಗುವಂತಹ ಮಾತುಗಳು ಕೇಳಿಬಂದಿದ್ದವೇ?” ಎಂದು ಪ್ರಶಸ್ನಿಸಿದ್ದೆ. “ಆ ಥರದ್ದೆಲ್ಲಾ ಇದ್ದದ್ದೇ. ಆರಂಭದಲ್ಲಿ ಹಾಗೆಲ್ಲಾ ಆಯ್ತು. ಸಮಾಜದಲ್ಲಿ ಇದೆಲ್ಲಾ ಇದ್ದದ್ದೆ. ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳಲಿಲ್ಲ. ನನಗೆ ಬಲ ಅಂದ್ರೆ ಅವರೇನೇ” ಎಂದಿದ್ದರು ಭಾವೆ. ಆಗ ಅಲ್ಲೆ ಜೊತೆಗಿದ್ದ ಸುನೀಲ್ ಸುಖ್ತಂಕರ್ ಕೂಡ ನಕ್ಕು ಸುಮ್ಮನಾಗಿದ್ದರು.

‘ಏಕ್ ಕಪ್ ಚಾಯ್‌’ ಸಿನಿಮಾ

ತುಂಬಾ ದೊಡ್ಡ ವ್ಯಕ್ತಿತ್ವದ ಹೆಣ್ಣುಮಗಳು ಸುಮಿತ್ರಾ ಭಾವೆ. ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡಿದವರಲ್ಲ. ಚಿತ್ರೋತ್ಸವದಿಂದ ಅವರನ್ನು ಬೀಳ್ಗೊಡುವಾಗ ತುಂಬಾ ಬೇಸರವಾಗಿತ್ತು. ನೆನಪಿಗಾಗಿ ಜ್ಯೂರಿ ತಂಡದ ಎಲ್ಲಾ ಸದಸ್ಯರೂ ಫೋಟೋ ತೆಗೆಸಿಕೊಂಡಿದ್ದೆವು. “ನನಗೆ ಸುಮನಾ ಜೊತೆ ಪ್ರತ್ಯೇಕವಾಗಿ ಫೋಟೋ ಬೇಕು” ಎಂದಿದ್ದರು. ನಾನು ಖುಷಿಯಿಂದ ಪೋಸು ಕೊಟ್ಟಿದ್ದೆ. ಕೊನೆಯಲ್ಲಿ ನನ್ನ ಕೈಗೆ ಒಂದು ಡೈರಿ ಮತ್ತು ಪೆನ್‌ ಕೈಗಿಟ್ಟು, “ಇದರಲ್ಲಿ ನಿನ್ನ ಲೈಫ್ ಹಿಸ್ಟರಿ ಬರಿ. ಏನಾದರೂ ಮಾಡೋಣ” ಎಂದಿದ್ದರು. ಅವರ ಬದುಕಿನ ಅನುಭವ, ನಿರ್ದೇಶನದ ಸಿನಿಮಾಗಳ ಬಗ್ಗೆ ಕನ್ನಡದಲ್ಲಿ ಬರೆಯಬೇಕೆಂದು ತುಂಬಾ ಅಂದುಕೊಂಡಿದ್ದೆ. ಇದಕ್ಕಾಗಿ ಮನಸ್ಸಿನಲ್ಲೇ ತಯಾರಿಯೂ ನಡೆದಿತ್ತು. ಆಗೊಮ್ಮೆ ಅವರಿಗೆ ಕರೆ ಮಾಡಿ ನಿಮ್ಮೊಂದಿಗೆ ಮಾತನಾಡಲು ಪುಣೆಗೆ ಬರುತ್ತೇನೆ ಎಂದಿದ್ದೆ. ಅವರು ಪ್ರೀತಿಯ ಆಹ್ವಾನ ನೀಡಿದ್ದರು. ಈ ಕೋವಿಡ್‌ ದಿನಮಾನಗಳು, ನನ್ನ ಬದುಕಿನ ಒತ್ತಡಗಳಿಂದ ಯೋಜನೆ ಮುಂದಕ್ಕೆ ಹೋಯ್ತು. ಮೂರು ತಿಂಗಳ ಹಿಂದಷ್ಟೇ ಮಾತನಾಡಿದ್ದೆ. ಈಗ ಪುಣೆಗೆ ಹೋಗಲು ಕಾರಣವೇ ಇಲ್ಲದಂತಾಗಿದೆ.

ಈ ಬರಹಗಳನ್ನೂ ಓದಿ