
ಪತ್ರಕರ್ತ
‘ಉಚಲ್ಯಾ’ ಸಮುದಾಯಕ್ಕೆ ಸೇರಿದ ‘ಪಿಸ್ತೂಲ್ಯಾ’ ಎಂಬ ಹುಡುಗನ ಕಥೆ ಇದು. ಬ್ರಿಟಿಷ್ ಕಾಲದಲ್ಲಿ ‘ಉಚಲ್ಯಾ’ಗಳನ್ನು ಕ್ರಿಮಿನಲ್ ಟ್ರೈಬ್ಸ್ ಎಂದು ದಾಖಲು ಮಾಡಿದ್ದರ ಫಲವಾಗಿ ಕಳ್ಳತನವನ್ನೇ ತಮ್ಮ ಹೊಟ್ಟೆಪಾಡಿನ ಮಾರ್ಗವಾಗಿಸಿಕೊಳ್ಳಬೇಕಾದ ದುರಂತ ಈ ಸಮುದಾಯದ್ದು.
‘ಉಚಲ್ಯಾ’ ಸಮುದಾಯಕ್ಕೆ ಸೇರಿದ ‘ಪಿಸ್ತೂಲ್ಯಾ’ ಎಂಬ ಹುಡುಗನ ಕಥೆ ಇದು. ಲಕ್ಷ್ಮಣ್ ಗಾಯಕವಾಡ್ ಅವರ ಆತ್ಮಕಥೆ ‘ಉಚಲ್ಯಾ’ ಓದಿದವರಿಗೆ ‘ಉಚಲ್ಯಾ’ ಸಮುದಾಯದ ಕುರಿತು ಕಿರುಪರಿಚಯ ಇದ್ದೇ ಇರುತ್ತದೆ. ಬ್ರಿಟಿಷ್ ಕಾಲದಲ್ಲಿ ‘ಉಚಲ್ಯಾ’ಗಳನ್ನು ಕ್ರಿಮಿನಲ್ ಟ್ರೈಬ್ಸ್ ಎಂದು ದಾಖಲು ಮಾಡಿದ್ದರ ಫಲವಾಗಿ ಕಳ್ಳತನವನ್ನೇ ತಮ್ಮ ಹೊಟ್ಟೆಪಾಡಿನ ಮಾರ್ಗವಾಗಿಸಿಕೊಳ್ಳಬೇಕಾದ ದುರಂತ ಈ ಸಮುದಾಯದ್ದು. ಕರ್ನಾಟಕದಲ್ಲಿನ ಗಂಟಿಚೋರ್‌ಗಳ ರೀತಿ ಮಹಾರಾಷ್ಟ್ರದಲ್ಲಿ ಈ ಉಚಲ್ಯಾಗಳು. ಲಕ್ಷ್ಮಣ್ ಗಾಯಕವಾಡ್ ನಾಗರಿಕ ಸಮಾಜದ ಮುಂದಿಡುವ ಒಂದು ಪ್ರಶ್ನೆಗೆ ಈಗಲೂ ಉತ್ತರವಿಲ್ಲ, ಮುಂದೆಯೂ ಉತ್ತರ ಸಿಗುವುದಿಲ್ಲ.
“ನಮ್ಮ ಹಸಿದ ಹೊಟ್ಟೆ ತುಂಬಿಸಿ, ಜೀವ ಉಳಿಸಿಕೊಳ್ಳುವುದಕ್ಕೆ ಕಳ್ಳತನ ಮಾಡುತ್ತಿದ್ದೆವು. ಆದರೆ ಓದಿದವರು, ಹುನ್ನತ ಹುದ್ದೆ ಅಲಂಕರಿಸಿದವರು, ಹೊಟ್ಟೆ- ಬಟ್ಟೆಗೆ ಯಾವುದೇ ತೊಡಕಿಲ್ಲದವರು ಕೋಟಿ ಕೋಟಿ ಭ್ರಷ್ಟಾಚಾರ ಮಾಡಿದರೂ ಅವರು ಕಳ್ಳರಲ್ಲ. ಜೀವ ಉಳಿಸಿಕೊಳ್ಳಲು ಕದಿಯುವ ನಾವು ಮಾತ್ರ ಈ ಸಮಾಜದ ಪಾಲಿಗೆ ಕಳ್ಳರೆ?” – ಇದು ಲಕ್ಷ್ಮಣ ಗಾಯಕವಾಡ್ ಅವರ ಪ್ರಶ್ನೆ. ಉಚಲ್ಯಾಗಳ ಕುರಿತು ಚಿಂತಕ ವಲಯದಲ್ಲೂ ಸರಿಯಾದ ಗ್ರಹಿಕೆಗಳಿಲ್ಲ ಎಂದು ಗಾಯಕವಾಡ್ ಬೇಸರ ವ್ಯಕ್ತಪಡಿಸಿದ್ದೂ ಉಂಟು.

ಇನ್ನು ಉಚಲ್ಯಾಗಳ ಕೈಚಳಕದ ಕುರಿತು…. ಪೊಲೀಸರಿಗೆ ಸಿಕ್ಕಿಬಿದ್ದು ಯದ್ವಾತದ್ವಾ ಹೊಡೆಸಿಕೊಂಡರೂ ಬಾಯಿ ಬಿಡಬಾರದ ರೀತಿಯಲ್ಲಿ ಉಚಲ್ಯಾಗಳು ಚಿಕ್ಕಂದಿನಿಂದಲೇ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಎಷ್ಟೇ ಹೊಡೆದರೂ ಯಾರ ಹೆಸರನ್ನೂ ಹೇಳದಿದ್ದರೆ ಆತ ಪಳಗಿದ ಉಚಲ್ಯಾ. ಆಗ ಮಾತ್ರವೇ ಆತ ಕಳ್ಳತನಕ್ಕೆ ಹೋಗಬಹುದು. ಈ ಉಚಲ್ಯಾಗಳು ಕಳ್ಳತನ ಮಾಡಲು ಬಳಸುವ ತಂತ್ರಗಳು ಅನೇಕ. ಗಾಯಕವಾಡ್ ಅವರು ಉಚಲ್ಯಾಗಳು ಹೇಗೆಲ್ಲ ಕಳ್ಳತನ ಮಾಡುತ್ತಾರೆ ಎಂಬುದನ್ನು ತಮ್ಮ ಆತ್ಮಕಥೆಯಲ್ಲಿ ಸಾಕಷ್ಟು ದಾಖಲಿಸಿದ್ದಾರೆ. ಇಲಿಗಳನ್ನು ಹೊಲಕ್ಕೆ ಬಿಟ್ಟು ದವಸ – ಧಾನ್ಯ ಕದಿಯುತ್ತಿದ್ದರು ಎಂದರೆ ಯೋಚಿಸಿ, ಎಷ್ಟೆಲ್ಲ ಪಟ್ಟುಗಳಿರಬಹುದು!!
‘ಪಿಸ್ತೂಲ್ಯಾ’ (ಮರಾಠಿ) ಕಿರುಚಿತ್ರ ನೋಡುವ ಮುನ್ನ ‘ಉಚಲ್ಯಾ’ಗಳ ಕುರಿತು ಒಂದಿಷ್ಟಾದರೂ ತಿಳಿದಿರಬೇಕು. ಹೀಗಾಗಿ ಈ ಟಿಪ್ಪಣಿ ಬರೆಯಬೇಕಾಯಿತು. ‘ಫಂಡ್ರಿ’, ‘ಸೈರಾಟ್’ ಸಿನಿಮಾಗಳನ್ನು ನೋಡಿದವರಿಗೆ ನಿರ್ದೇಶಕ ನಾಗರಾಜ್ ಮಂಜುಳೆಯ ಪರಿಚಯ ಇದ್ದೇ ಇರುತ್ತದೆ. ಈ ಪಿಸ್ತೂಲ್ಯಾ ರಚಿಸಿ ನಿರ್ದೇಶಿಸಿದ್ದು ಇದೇ ನಾಗರಾಜ್ ಮಂಜುಳೆ. ಅಂದಹಾಗೆ ಮಂಜುಳೆ ನಿರ್ದೇಶನದ ಮೊದಲ ಚಿತ್ರ ‘ಪಿಸ್ತೂಲ್ಯಾ’ ರಾಷ್ಟ್ರಪ್ರಶಸ್ತಿಗೂ ಭಾಜನವಾಯಿತು.