ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸಂಗೀತದೆಡೆ ಅವರದ್ದು ಮಗುವಿನ ಪ್ರೀತಿ…

ಪೋಸ್ಟ್ ಶೇರ್ ಮಾಡಿ
ಕೆ.ಕಲ್ಯಾಣ್‌
ಚಿತ್ರಸಾಹಿತಿ, ಸಂಗೀತ ಸಂಯೋಜಕ

ಜಾನಕಮ್ಮನವರು ದೈಹಿಕ ಪರಿಶ್ರಮ ಇಲ್ಲದೇನೇ, ದೈವಿಕ ಪರಿಶ್ರಮದಿಂದ ಹಾಡ್ತಾರೆ. ಹಾಗಾಗಿ ಆ ಧ್ವನಿ ಲೀಲಾಜಾಲವಾಗಿ ಬರುತ್ತೆ. ಬಹುಶಃ ಈ ಗುಣ ಇರೋದು ಭಾರತದಲ್ಲಿ ಅವರಿಗೊಬ್ಬರಿಗೇ ಅನಿಸುತ್ತೆ.

ಭಾರತೀಯ ಸಿನಿಮಾ ಕಂಡ ಮೇರು ಗಾಯಕಿ ಜಾನಕಮ್ಮನವರ ಧ್ವನಿಯಲ್ಲೊಂದು ವಿಶೇಷತೆಯಿದೆ. ಸಾಮಾನ್ಯವಾಗಿ ಗಾಯಕ-ಗಾಯಕಯರಿಗೆ ಮಂಧ್ರಸ್ಥಾಯಿಯಲ್ಲಿ ಹಾಡುವಾಗ ವ್ಯಾಲ್ಯೂಮ್ ಕಡಿಮೆಯಾಗುತ್ತೆ. ತಾರಕ ಸ್ಥಾಯಿಯಲ್ಲಿ ಹಾಡುವಾಗ ವ್ಯಾಲ್ಯೂಮ್ ಜಾಸ್ತಿ ಇರುತ್ತೆ. ಹಾಗೆ ಸಹಜವಾಗಿ ಹಾಡುವವರು ನಮ್ಮ ಮಧ್ಯೆ ಇದ್ದಾರೆ. ಆದರೆ ಎಸ್.ಜಾನಕಿಯವರು ಪ್ರತೀ ಪದಕ್ಕೂ ತನ್ನದೇ ಆದ ವೆಲಾಸಿಟಿ.. ತೂಕ ಇರುವಂತೆ ನೋಡಿಕೊಳ್ಳುತ್ತಾರೆ. ಜಾನಕಿಯವರು ಹಾಡಿದ ಯಾವುದೇ ವೇರಿಯೇಷನ್‍ನ ಹಾಡಾಗಿರಬಹುದು. ಯಾವುದೇ ಪದಗಳನ್ನು ತಕ್ಕಡಿಗೆ ಹಾಕಿ, ಅದು ಸಮಾನವಾಗಿರುತ್ತೆ! ಅಂದ್ರೆ ಅವರು ಪ್ರೊಡ್ಯೂಸ್ ಮಾಡುವಂತಹ ಆ ಧ್ವನಿ, ಆ ನಾದ, ಶ್ರುತಿಗೆ ಯಾರೂ ಸರಿಸಾಟಿಯಾಗಲಾರರು. ಆ ಲೆವೆಲ್‍ಗೆ ಜಾನಕಮ್ಮನವರ ಧ್ವನಿ ಶ್ರುತಿ, ತಾಳ ಬದ್ಧವಾಗಿರುವಂಥದ್ದು. ಇನ್ನು ಅವರ ಹಾಡುಗಾರಿಕೆ ಲೀಲಾಜಾಲ. ತುಟಿಚಲನೆಯಿಂದ ಮಾತ್ರ ಅವರು ಹಾಡೋದು ಗೊತ್ತಾಗುತ್ತೆ. ಹಾಡುವಾಗ ಅವರ ದೇಹ ಒಂದಿಷ್ಟೂ ಚಲಿಸುವುದಿಲ್ಲ. ಅಂದರೆ ಅವರು ದೈಹಿಕ ಪರಿಶ್ರಮ ಇಲ್ಲದೇನೇ, ದೈವಿಕ ಪರಿಶ್ರಮದಿಂದ ಹಾಡ್ತಾರೆ. ಹಾಗಾಗಿ ಆ ಧ್ವನಿ ಲೀಲಾಜಾಲವಾಗಿ ಬರುತ್ತೆ. ಬಹುಶಃ ಈ ಗುಣ ಇರೋದು ಭಾರತದಲ್ಲಿ ಅವರಿಗೊಬ್ಬರಿಗೇ ಅನಿಸುತ್ತೆ.

ಹಿಂದೊಮ್ಮೆ ಅವರ ಮನೆಗೆ ಹೋಗುವ ಅವಕಾಶ ನನಗೆ ಲಭಿಸಿತ್ತು. ಮೇಲ್ಮಹಡಿಯಲ್ಲಿದ್ದ ಅವರ ಕೋಣೆಗೆ ಮೆಟ್ಟಿಲೇರಿ ಹೋಗಬೇಕಿತ್ತು. ಒಂದೊಂದು ಮೆಟ್ಟಿಲು ಹತ್ತುವಾಗಲೂ ಮೆಟ್ಟಿಲುಗಳ ಸಮೀಪ ಎರಡೆರಡು ಪ್ರಶಸ್ತಿ ಫಲಕಗಳಿದ್ದವು. ಕೊನೆಯ ಮೆಟ್ಟಿಲು ಹತ್ತುವ ವೇಳೆಗೆ ಸರಿಸುಮಾರು ಐವತ್ತಕ್ಕೂ ಹೆಚ್ಚು ಮೊಮೆಂಟೋಗಳಿದ್ದವು. ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅವರಿಗೆ ಸಂದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ನೋಡುತ್ತಾ ನಾನು ಭಾವಪರವಶನಾದೆ.

ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದಾಗ ಬೇಡವೆಂದು ಅವರು ನಯವಾಗಿ ತಿರಸ್ಕರಿಸಿದರು. ಪದ್ಮಭೂಷಣವನ್ನು ಮೀರಿದಂತಹ ಸಾಧನೆ ಅವರದ್ದು. ಅಭಿಮಾನಿಗಳ ಪ್ರೀತಿಗಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ ಎಂದೇ ಅವರು ಭಾವಿಸಿದ್ದಾರೆ. ಹಾಗೆ ನೋಡಿದರೆ ಭಾರತರತ್ನಕ್ಕೆ ಅರ್ಹವಾದ ಸಾಧನೆ ಮಾಡಿದವರು ಎಸ್.ಜಾನಕಿ. ಇಂದು ಯಾರಿಗೆಲ್ಲಾ ಭಾರತರತ್ನ ಸಿಕ್ಕಿದೆಯೋ, ಅವರನ್ನು ಗಮನಿಸಿದರೆ, ಜಾನಕಿ ಅವರ ಸಾಧನೆ ಯಾವುದಕ್ಕೂ ಕಡಿಮೆಯಿಲ್ಲ. ಅಂತಹವರಿಗೆ ಯಾಕೆ ಭಾರತರತ್ನ ಕೊಡಬಾರದು? ಅವರ ಸಾಧನೆಗೆ ಭಾರತರತ್ನ ಕೊಡಬಹುದಾದರೆ, ವ್ಯಕ್ತಿತ್ವದಲ್ಲಿ ಅವರು ನೋಬೆಲ್‍ಗೆ ಅರ್ಹರು! ಸಂಗೀತ ಮತ್ತು ಸಂಗೀತವನ್ನು ಆಸ್ವಾದಿಸುವ ಜನರೆಡೆಗೆ ಅವರದ್ದು ಮಗುವಿನ ಪ್ರೀತಿ.

ಜಾನಕಮ್ಮ ತುಂಬಾ ಸವಾಲು, ಸ್ಪರ್ಧೆ, ಸಂಕಷ್ಟಗಳನ್ನು ಎದುರಿಸಿ ಬೆಳೆದವರು. ಗಾಯಕಿಯರಾದ ಪಿ.ಸುಶೀಲಾ, ಪಿ.ಲೀಲಾ ಅವರು ಜನಪ್ರಿಯರಾಗಿದ್ದ ಕಾಲವದು. ಪಿ.ಸುಶೀಲಾ ಇಲ್ಲದ ಹಾಡೇ ಇಲ್ಲ ಅನ್ನೋ ಟೈಂನಲ್ಲಿ ತಮ್ಮ ಧ್ವನಿಯಿಂದ ಜಾನಕಮ್ಮ ತಮ್ಮದೇ ಆದ ಛಾಪು ಮೂಡಿಸಿದರು. ಆಗಿನದ್ದು ಲೈವ್ ರೆಕಾರ್ಡಿಂಗ್ ಕಾಲ. ಚೆನ್ನೈ, ಹೈದರಾಬಾದ್, ಕೊಚ್ಚಿನ್ ಎಲ್ಲಾ ಕಡೆ ಓಡಾಡಬೇಕಿತ್ತು. ಹಾಗೆ ಓಡಾಡ್ಕೊಂಡು, ಸಮರ್ಪಕವಾಗಿ ಹ್ಯಾಂಡಲ್ ಮಾಡಿ, ಗುಣಮಟ್ಟದ ಗಾಯನದಿಂದ ಎಲ್ಲರ ಮನಗೆದ್ದರು. ಯಾವ ಭಾಷೆಯಲ್ಲಿ ಹಾಡಿದ್ರೂ ಅದೇ ಅವರ ಮಾತೃಭಾಷೆಯೇನೋ ಎನ್ನುವಂತೆ ಹಾಡಿದರು. ಎಸ್‍ಪಿಬಿ ಹೇಗೆ ಯಾವ ಹೀರೋಗೆ ಹಾಡಿದರೆ ಅದೇ ಹೀರೋ ಹಾಡುತ್ತಿದ್ದಾರೆ ಅನಿಸುತ್ತೋ… ಅದೇ ರೀತಿ ಜಾನಕಮ್ಮ. ಅವರು ಹಾಡುತ್ತಿದ್ದರೆ, ಅದೇ ಹಿರೋಯನ್ ಹಾಡ್ತಿದಾರೆ ಅನ್ನಿಸುತ್ತೆ. ಆಗ 70, 80ರ ದಶಕಗಳಲ್ಲಿ ಅವರು ಆ ಮಟ್ಟಿನ ಡೆಡಿಕೇಷನ್ ತೋರಿಸದೇ ಇದ್ದಿದ್ದರೆ ಬಹುಶಃ ಕನ್ನಡದ ಹಾಡುಗಳು ಈ ಹಂತಕ್ಕೆ ತಲುಪುತ್ತಿರಲಿಲ್ಲ. ಅದು ಜಾನಕಮ್ಮ ಕೊಟ್ಟ ಆಶೀರ್ವಾದ.

ಸಾಹಿತಿ, ಗೀತಸಾಹಿತ್ಯದ ಮೇಲೆ ಅವರಿಗೆ ಅಪಾರ ಗೌರವ. ತಾವು ಸಂಗೀತ ಕಲಿತಿಲ್ಲ ಎಂದು ವಿನಯವಂತಿಕೆಯಿಂದಲೇ ಮಾತನಾಡುತ್ತಾರೆ. ಎಂ.ಎಸ್.ಸುಬ್ಬಲಕ್ಷ್ಮೀ ಅವರಂತೆ ಶಾಸ್ತ್ರೀಯ ಗೀತೆಗಳನ್ನು ಹಾಡಬಲ್ಲರು. ನಾನಾ ಥರದ ಟೋನ್‍ಗಳಲ್ಲಿ ಹಾಡಬಲ್ಲ ಅಪೂರ್ವ ಗಾಯಕಿ. ಜಾನಕಮ್ಮ ಹಾಡಿರುವ ಭಕ್ತಿಗೀತೆ, ಭಾವಗೀತೆಗಳು ಅವರ ಸಿನಿಮಾ ಹಾಡುಗಳಷ್ಟೇ ಜನಪ್ರಿಯವಾಗಿವೆ. ದೈವಿಕ ಶಕ್ತಿಯೊಂದು ಅವರ ಕಂಠವನ್ನು ಆಳ್ತಾ ಇದೆ ಎಂದು ನಾನು ಭಾವಿಸುತ್ತೇನೆ.

ಕಲ್ಯಾಣ್‍ರ ಹತ್ತು ಫೇವರಿಟ್ ಎಸ್.ಜಾನಕಿ ಹಾಡುಗಳು

ಯಾವ ಜನ್ಮದ ಮೈತ್ರಿ… (ಗೌರಿ – 1963)

ಗಾಳಿಗೋಪುರ… (ನಂದಾದೀಪ – 1963)

ಮೂಡಲ ಮನೆಯ… (ಬೆಳ್ಳಿಮೋಡ – 1967)

ಶರಣು ವಿರೂಪಾಕ್ಷ… (ಶ್ರೀ ಕೃಷ್ಣದೇವರಾಯ – 1970)

ತಂನಂ ತಂನಂ… (ಎರಡು ಕನಸು – 1974)

ಭಾರತ ಭೂಷಿರ… (ಉಪಾಸನೆ – 1974)

ಆಚಾರವಿಲ್ಲದ ನಾಲಿಗೆ… (ಉಪಾಸನೆ – 1974)

ಭುವನೇಶ್ವರಿಯ… (ಮರೆಯದ ಹಾಡು – 1981)

ನಗೂ ಎಂದಿದೆ… (ಪಲ್ಲವಿ ಅನುಪಲ್ಲವಿ – 1983)

ಇದು ನನ್ನ ನಿನ್ನ ಪ್ರೇಮಗೀತೆ… (ಪ್ರೇಮಲೋಕ – 1987)

ಈ ಬರಹಗಳನ್ನೂ ಓದಿ