
ನಟ
ಅವರು ಸೀದಾ ಅಡುಗೆ ಮನೆಗೆ ನುಗ್ಗಿದರು. ಅಲ್ಲಿದ್ದ ಪರಿಕರಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಮ್ಮನ್ನು ಹಿಗ್ಗಾಮುಗ್ಗ ಥಳಿಸಿದರು. ರೌಡಿಗಳ ಹಾಗಿದ್ದ ಅವರಿಗೆ ಸಣ್ಣಗಿದ್ದ ನಾನು ಯಾವ ಲೆಕ್ಕ? ನನ್ನನ್ನು ಎತ್ತಿ ಹೊರಗೆ ಬಿಸಾಕಿದರು!
ಮಂಡ್ಯ ಸಮೀಪದ ಎಮ್ಮಿಗೆ ಗ್ರಾಮದಲ್ಲಿ `ಪರಸಂಗದ ಗೆಂಡೆತಿಮ್ಮ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದು ನನ್ನ ಮೊದಲ ಸಿನಿಮಾ. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ನನಗೆ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದೇ ದೊಡ್ಡ ಹಬ್ಬವಾಗಿತ್ತು. ಸಿಕ್ಕ ಅವಕಾಶ ಕೈತಪ್ಪದಿರಲಿ ಎಂದು ಚಿತ್ರೀಕರಣದ ವೇಳೆ ಎಲ್ಲಾ ಕೆಲಸಗಳಲ್ಲೂ ಸಹಕರಿಸುತ್ತಿದ್ದೆ. ನಟನೆ ಜತೆಗೆ ಕಾಸ್ಟ್ಯೂಮ್, ಮೇಕಪ್, ಕ್ಲ್ಯಾಪ್, ಕಂಟ್ಯೂನಿಟಿ ಬರೆದುಕೊಳ್ಳುವುದು.. ಹೀಗೆ ಎಲ್ಲರಿಗೂ ಬೇಕಾದವನಾಗಿ ಓಡಾಡುತ್ತಿದ್ದೆ. ಸುಮಾರು ಮೂವತ್ತು ದಿನ ಚಿತ್ರೀಕರಣ ನಡೆದಿತ್ತು ಎನಿಸುತ್ತದೆ. ಅದೊಂದು ದಿನ ಚಿತ್ರತಂಡಕ್ಕೆ ಅಡುಗೆ ಮಾಡುವವರು ಸತ್ಯಾಗ್ರಹ ಆರಂಭಿಸಿದರು. ನಿರ್ಮಾಪಕರು ಅವರಿಗೆ ಸಂಭಾವನೆ ಕೊಟ್ಟಿರಲಿಲ್ಲ. ನಿರ್ದೇಶಕ ಮಾರುತಿ ಶಿವರಾಂ ಅವರು ಶೂಟಿಂಗ್ ನಿಲ್ಲಿಸುವಂತಿರಲಿಲ್ಲ.
ಏನಾದರೂ ಅಡುಗೆ ಮಾಡುವಂತೆ ನಿರ್ದೇಶಕರು ನನಗೆ ಸೂಚನೆ ನೀಡಿದರು. ಹೊಸಬನಾದ ನಾನು ಇಲ್ಲವೆಂದು ಹೇಳುವಂತಿಲ್ಲ. ಇಬ್ಬರು ಸಹಾಯಕ ನಿರ್ದೇಶಕರನ್ನು ಕರೆದುಕೊಂಡು ನಾನು ಅಡುಗೆ ಮನೆ ಸೇರಿದೆ. ಮೂವರೂ ಉತ್ಸಾಹದಿಂದ ಅಡುಗೆಗೆ ಸಿದ್ಧ ಮಾಡುತ್ತಿದ್ದೆವು. ಸತ್ಯಾಗ್ರಹ ಹೂಡಿದ್ದ ಶಿವರಾಂ ಉಪ್ಪುಂದ, ಕರುಣಾಕರ್ (ಅಡುಗೆ ಭಟ್ಟರು) ಸೀದಾ ಅಡುಗೆ ಮನೆಗೆ ನುಗ್ಗಿದರು. ಅಲ್ಲಿದ್ದ ಪರಿಕರಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಮ್ಮನ್ನು ಹಿಗ್ಗಾಮುಗ್ಗ ಥಳಿಸಿದರು. ರೌಡಿಗಳ ಹಾಗಿದ್ದ ಅವರಿಗೆ ಸಣ್ಣಗಿದ್ದ ನಾನು ಯಾವ ಲೆಕ್ಕ? ನನ್ನನ್ನು ಎತ್ತಿ ಹೊರಗೆ ಬಿಸಾಕಿದರು! ಬದುಕಿದೆಯಾ ಬಡಜೀವವೇ ಎಂದು ನಾವು ಮೂವರೂ ಓಡಿ ನಿರ್ದೇಶಕರಲ್ಲಿ ರಕ್ಷಣೆ ಪಡೆದೆವು. ಅಂದು ಸಂಜೆಯೇ ಅಡುಗೆ ಭಟ್ಟರಿಗೆ ಸಂಭಾವನೆ ಸಂದಾಯವಾಯಿತು.