
ಡಾ.ರಾಜಕುಮಾರ್ ಅಭಿನಯದ `ದ್ರುವತಾರೆ’ ಚಿತ್ರದಲ್ಲಿ ನನಗೆ ಪೊಲೀಸ್ ಇನ್‍ಸ್ಪೆಕ್ಟರ್ ಪಾತ್ರವಿತ್ತು. ಕೆಂಗೇರಿ ಮತ್ತು ರಾಮನಗರ ಮಧ್ಯೆಯಿದ್ದ ಗ್ರಾಮವೊಂದರಲ್ಲಿ ಶೂಟಿಂಗ್. ಈ ಚಿತ್ರವೂ ಸೇರಿದಂತೆ ಆಗ ನಾನು ನಿರಂತರವಾಗಿ 36ನೇ ಬಾರಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೆ ! ಅದೇಕೋ ಆಗ ಚಿತ್ರಗಳಲ್ಲಿ ನನಗೆ ಪೊಲೀಸ್ ಆಫೀಸರ್ ಪಾತ್ರವನ್ನೇ ಕೊಡುತ್ತಿದ್ದರು. ಹಾಗಾಗಿ ನನಗೆ ಫಿಟ್ ಆಗುವಂತೆ ಎರಡು ಪೊಲೀಸ್ ಕಾಸ್ಟ್ಯೂಮ್ಸ್ ಹೊಲಿಸಿಕೊಂಡಿದ್ದೆ. ಇನ್‍ಸ್ಪೆಕ್ಟರ್ ಆದ್ದರಿಂದ ಬುಲೆಟ್ ಗಾಡಿ ಹೊಂದಿಸಿಕೊಳ್ಳಬೇಕು. ನನ್ನ ದುರದೃಷ್ಟಕ್ಕೆ ಅಂದು ಕೆಟ್ಟ ಬುಲೆಟ್ ಗಾಡಿ ಸಿಕ್ಕಿತ್ತು. ಅದನ್ನೇ ತೆಗೆದುಕೊಂಡು ಬೆಂಗಳೂರಿನಿಂದ ಸೆಟ್‍ಗೆ ಹೊರಟೆ.
ಅಲ್ಲಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಡಾ.ರಾಜ್ ಸೇರಿದಂತೆ ಎಲ್ಲರೂ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ನಾನು ಕವರ್‍ವೊಂದರಲ್ಲಿ ಬಿಳಿ ಷರ್ಟ್ ತೆಗೆದುಕೊಂಡು ಹೋಗಿದ್ದೆ. ಶೂಟಿಂಗ್ ಮುಗಿದ ನಂತರ ಖಾಕಿ ಷರ್ಟ್ ತೆಗೆದು ಬಿಳಿ ಷರ್ಟ್ ಹಾಕಿಕೊಂಡು ಬೆಂಗಳೂರಿಗೆ ಮರಳಬೇಕಿತ್ತು. ಅದು ಹೇಗೋ ಆ ಕವರ್ ಬೇರೊಬ್ಬರಲ್ಲಿ ಸೇರಿ, ಅವರು ಬೆಂಗಳೂರಿಗೆ ಮರಳಿದ್ದರು. ಅನಿವಾರ್ಯವಾಗಿ ನಾನು ಪೊಲೀಸ್ ವೇಷದಲ್ಲೇ ವಾಪಸು ಹೊರಟೆ. ಜತೆಗೆ ಕೆಟ್ಟ ಬುಲೆಟ್ ಬೈಕ್! ಅದು ಒಮ್ಮೆ ಆಫ್ ಆದರೆ, ಸ್ಟಾರ್ಟ್ ಮಾಡಲು ವಿಪರೀತ ಕಷ್ಟ ಪಡಬೇಕಿತ್ತು. ಶೂಟಿಂಗ್ ಸೆಟ್‍ನಿಂದ ಬೆಂಗಳೂರಿಗೆ ಮರಳುವ ಹಾದಿಯುದ್ದಕ್ಕೂ ಇನ್‍ಸ್ಪೆಕ್ಟರ್ ವೇಷದಲ್ಲಿದ್ದ ನನಗೆ ಸಾಕಷ್ಟು ಜನ ಸೆಲ್ಯೂಟ್ ಹೊಡೆದರು! ನನಗೆ ಮರಳಿ ಸೆಲ್ಯೂಟ್ ಹೊಡೆಯಬೇಕೆನ್ನುವ ಆಸೆ. ಆದರೆ ಕ್ಲಚ್ ಬಿಟ್ಟರೆ, ಗಾಡಿ ಎಲ್ಲಿ ಆಫ್ ಆಗಿಬಿಡುತ್ತದೋ ಎನ್ನುವ ಆತಂಕ.
ಅಂತೂ ಬೆಂಗಳೂರಿನ ಐಲ್ಯಾಂಡ್ ಹೋಟೆಲ್ ಬಳಿ ಬಂದೆ. ಅಲ್ಲಿ ರಾಜ್ ಹಾಗೂ ಚಿತ್ರತಂಡದವರಿದ್ದರು. ನಾನು ರಾಜ್‍ರಲ್ಲಿ ನನ್ನ ಹಾಗೂ ಬುಲೆಟ್ ಗೋಳು ಹೇಳಿಕೊಂಡೆ. `ನಿಮ್ಮನ್ನು ಎಲ್ಲರೂ ನಿಜವಾದ ಪೊಲೀಸ್ ಅಧಿಕಾರಿ ಎಂದೇ ಭಾವಿಸಿರುತ್ತಾರೆ, ಬಿಡಿ’ ಎಂದು ನಕ್ಕರು. `ಹೌದು ಸಾರ್, ದಾರಿಯುದ್ದಕ್ಕೂ ಪೊಲೀಸರೂ ಸೇರಿದಂತೆ ಬಹಳಷ್ಟು ಜನ ಸೆಲ್ಯೂಟ್ ಹೊಡೆದರು. ಮರಳಿ ಸೆಲ್ಯೂಟ್ ಹೊಡೆಯೋಣ ಅಂದ್ರೆ ಗಾಡಿ ಆಫ್ ಆಗುತ್ತೆ ಅನ್ನೋ ಭಯ’ ಎಂದೆ. ಅದಕ್ಕೆ ರಾಜ್ ಹೇಳಿದ್ದು ಹೀಗೆ – `ಒಳ್ಳೇದಾಯ್ತು ಬಿಡಿ, ಗಾಡಿ ಮೇಲಿರುವ ಇನ್‍ಸ್ಪೆಕ್ಟರ್ ಹಾಗೆಯೇ ತಲೆಬಗ್ಗಿಸಿ ನಮಸ್ಕರಿಸ್ತಾರೆ. ಮರಳಿ ಸೆಲ್ಯೂಟ್ ಹೊಡೆದಿದ್ದರೆ, ನೀವು ನಿಜವಾದ ಪೊಲೀಸ್ ಅಲ್ಲ ಅಂತ ಜನರಿಗೆ ಗೊತ್ತಾಗಿರೋದು..!’