
ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಸಿದ್ದಲಿಂಗಯ್ಯ ಶಿಸ್ತು ಮತ್ತು ಸಮಯ ಪರಿಪಾಲನೆಗೆ ಹೆಸರಾದವರು. ಅನಗತ್ಯವಾಗಿ ನೆಗೆಟಿವ್ (ರೀಲ್) ವೇಸ್ಟ್ ಮಾಡದ ಅವರನ್ನು `ಎಕಾನಮಿ ಡೈರೆಕ್ಟರ್’ ಎಂದೇ ಗುರುತಿಸಲಾಗುತ್ತಿತ್ತು. ಸದೃಢ ಚಿತ್ರಕಥೆ ಸಿದ್ದಲಿಂಗಯ್ಯನವರ ಸಿನಿಮಾದ ಶಕ್ತಿ. ಸನ್ನಿವೇಶವೊಂದರಲ್ಲಿ ತಮಗೇನು ಬೇಕೆನ್ನುವುದರ ಸೃಷ್ಟ ಚಿತ್ರಣ ಅವರಿಗಿರುತ್ತಿತ್ತು. ಮೂರ್ನಾಲ್ಕು ಬಾರಿ ಕಲಾವಿದರಿಗೆ ರಿಹರ್ಸಲ್ ಮಾಡಿಸಿ ತಮ್ಮ ಮನಸ್ಸಿಗೆ ಓಕೆ ಎನಿಸಿದಾಗಷ್ಟೇ ಅವರು ಟೇಕ್ ತೆಗೆದುಕೊಳ್ಳುತ್ತಿದ್ದುದು.
ಅವರ ನಿರ್ದೇಶನದ `ಬಾ ನನ್ನ ಪ್ರೀತಿಸು’ (1992) ಚಿತ್ರಕ್ಕೆ ರಾಮನಗರ ಸಮೀಪದ ಗ್ರಾಮವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಬೆಳಗ್ಗೆ ಏಳೂವರೆ ಗಂಟೆಗೆ ಮೊದಲ ಶಾಟ್ ತೆಗೆಯುವುದು ಸಿದ್ದಲಿಂಗಯ್ಯನವರ ಪದ್ಧತಿ. ಚಿತ್ರದ ಹೀರೋ ಶಶಿಕುಮಾರ್ ಬೆಂಗಳೂರಿನಿಂದ ಬರುವ ಹೊತ್ತಿಗೆ ಒಂಬತ್ತು, ಒಂಬತ್ತೂವರೆ ಗಂಟೆ ಆಗಿರುತ್ತಿತ್ತು.
ಸಿದ್ದಲಿಂಗಯ್ಯನವರು ಮೊದಲೆರಡು ದಿನ ಸುಮ್ಮನಿದ್ದರು. ಮೂರನೆಯ ದಿನವೂ ಶಶಿ ಒಂಬತ್ತೂವರೆಗೆ ಸೆಟ್‍ಗೆ ಬಂದರು. `ಬೇರೆ ಶಾಟ್ ತೆಗೆದುಕೊಂಡು ಬರ್ತೀವಿ. ನಿನಗೇನೂ ಕೆಲಸವಿಲ್ಲ, ಕುಳಿತಿರು..’ ಎಂದು ಶಶಿಕುಮಾರ್‍ಗೆ ಹೇಳಿದ ಸಿದ್ದಲಿಂಗಯ್ಯನವರು ಬೇರೆ ಸನ್ನಿವೇಶಗಳನ್ನು ಚಿತ್ರಿಸುವುದರಲ್ಲಿ ಬಿಝಿಯಾದರು. ಗಂಟೆಗಳ ಕಾಲ ಸುಮ್ಮನೆ ಕುಳಿತಿದ್ದ ಶಶಿಕುಮಾರ್‍ಗೆ ನಿರ್ದೇಶಕರ `ಪಾಠ’ ಅರ್ಥವಾಗಿತ್ತು. ಮುಂದೆ ಅವರಿಂದ ತಪ್ಪು ಮರುಕಳಿಸಲಿಲ್ಲ.