ತುಳು ಚಿತ್ರರಂಗದ ಜನಪ್ರಿಯ ನಟ ಅರ್ಜುನ್ ಕಾಪಿಕಾ ನಟಿಸಿ, ನಿರ್ದೇಶಿಸಿರುವ ‘ಟಾಸ್’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ತುಳು ಚಿತ್ರರಂಗದ ಸೂಪರ್ ಸ್ಟಾರ್, ಬಹುಮುಖ ಪ್ರತಿಭೆ ಅರ್ಜುನ್ ಕಾಪಿಕಾಡ್ (ಅರ್ಜುನ್ ದೇವ್) ನಾಯಕ ನಟನಾಗಿ ನಟಿಸಿ – ನಿರ್ದೇಶಿಸಿರುವ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಅವಿಕಾ ಪ್ರೊಡಕ್ಷನ್ಸ್, ಬಿ.ಆರ್.ಬಿ ಪ್ರೊಡಕ್ಷನ್ಸ್ ಹಾಗೂ P & Y World Tours LLP (ಸಾಗರ್ ಪೂಜಾರಿ) ನಿರ್ಮಾಣದ ಈ ಚಿತ್ರವು ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿದೆ.
ಗೋಲ್ಡನ್ ಮೂವೀಸ್ ಬೆಂಬಲ | ಯಾವುದೇ ಹಿನ್ನೆಲೆಯಿಲ್ಲದೆ ಸ್ವಂತ ಪರಿಶ್ರಮದಿಂದ ಸ್ಯಾಂಡಲ್‌ವುಡ್‌ನಲ್ಲಿ ಬೆಳೆದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಶ್ರೀಮತಿ ಶಿಲ್ಪಾ ಗಣೇಶ್ ಅವರು ತಮ್ಮ ‘ಗೋಲ್ಡನ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ಅರ್ಪಿಸುತ್ತಿದ್ದಾರೆ. ಡಾ. ದೇವದಾಸ್ ಕಾಪಿಕಾಡ್ ಅವರ ಮೇಲಿರುವ ಗೌರವ ಹಾಗೂ ಚಿತ್ರದ ಮೇಕಿಂಗ್ ನೋಡಿ ಉತ್ಸುಕರಾದ ಶಿಲ್ಪಾ ಗಣೇಶ್ ಅವರು, ಕೋಸ್ಟಲ್‌ವುಡ್ ಸ್ಟಾರ್ ಅರ್ಜುನ್ ಕಾಪಿಕಾಡ್ ಅವರನ್ನು ಈ ಸಿನಿಮಾ ಮೂಲಕ ಕನ್ನಡಕ್ಕೆ ನಾಯಕ ನಟನಾಗಿ ಪರಿಚಯಿಸುತ್ತಿದ್ದಾರೆ.
ಶಿವಣ್ಣ ಮೆಚ್ಚಿದ ‘ಟಾಸ್’ ಕಂಟೆಂಟ್ | ಚಿತ್ರೀಕರಣದ ಹಂತದಲ್ಲೇ ಗಮನ ಸೆಳೆದಿರುವ ‘ಟಾಸ್’ ಸಿನಿಮಾದ ಕಂಟೆಂಟ್ ಹಾಗೂ ಝಲಕ್ ನೋಡಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ತೀವ್ರ ಸಂತಸ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಸಿನಿಮಾ ತಂಡದ ಉತ್ಸಾಹವನ್ನು ದ್ವಿಗುಣಗೊಳಿಸಿದೆ.
ತಂದೆ-ಮಗನ ಜುಗಲ್‌ಬಂಧಿ | ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ 32 ಜನರ ತಂಡವನ್ನು ಕಟ್ಟಿಕೊಂಡು ನಿರಂತರ ಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದ ಡಾ. ದೇವದಾಸ್ ಕಾಪಿಕಾಡ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ದ್ವಿತೀಯ ಹಾಡು ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರ್ಜುನ್ ದೇವ್ ಮನೆಯಲ್ಲಿ ಮಾತ್ರ ನನಗೆ ಮಗ, ಕೆಲಸದ ವಿಷಯಕ್ಕೆ ಬಂದಾಗ ಆತ ಒಬ್ಬ ಶ್ರೇಷ್ಠ ತಂತ್ರಜ್ಞ’ ಎಂದು ಮಗನ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಮಣಿಕಾಂತ್ ಕದ್ರಿ ಮ್ಯಾಜಿಕ್ | ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಅದ್ಭುತ ಸಂಗೀತವಿದ್ದು, ಈಗಾಗಲೇ ಯೋಗರಾಜ್ ಭಟ್ ಸಾಹಿತ್ಯ ಹಾಗೂ ಅರ್ಮಾನ್ ಮಲಿಕ್ ಗಾಯನದಲ್ಲಿ ಮೂಡಿಬಂದ ‘ಹಲೋ ಹಲೋ ನೀಲಾಂಬರಿ’ ಹಾಡು ಸೂಪರ್ ಹಿಟ್ ಆಗಿ ಟ್ರೆಂಡಿಂಗ್‌ನಲ್ಲಿದೆ. ಇದೀಗ ನಾಗಾರ್ಜುನ್ ಶರ್ಮಾ ಸಾಹಿತ್ಯದ ‘ಮಿರ ಮಿರ ಮಿಂಚುತ್ತಾ ನನ್ನ ಕಣ್ಣೀಗೆ ಬಿದ್ದೋಳೆ’ ಎಂಬ ದ್ವಿತೀಯ ಹಾಡು ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಚಿತ್ರದ ಮತ್ತೊಂದು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ.
ಅರ್ಜುನ್ ದೇವ್ ಭರವಸೆ | ‘2012ರಿಂದಲೂ ನಾನು ಚಿತ್ರೋದ್ಯಮದಲ್ಲಿದ್ದೇನೆ. ಕೊನೆಯುಸಿರಿರುವವರೆಗೂ ಸಿನಿಮಾ ಮಾಡುವುದೇ ನನ್ನ ಧ್ಯೇಯ’ ಎನ್ನುತ್ತಾರೆ ನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್. ಸೆಪ್ಟೆಂಬರ್ 18ಕ್ಕೆ ತೆರೆಕಾಣಲಿರುವ ಈ ಚಿತ್ರಕ್ಕೆ ಕರಾವಳಿ ಹಾಗೂ ಇಡೀ ಕರ್ನಾಟಕದಾದ್ಯಂತ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.








