ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

‘ಅಪೂರ್ವ ರಾಗಂಗಳ್’; ಹೀಗೊಂದು ‘ಪ್ರೇಮ’ಕಥೆ

ಪೋಸ್ಟ್ ಶೇರ್ ಮಾಡಿ
ರಾಘವನ್ ಚಕ್ರವರ್ತಿ
ಸಿನಿಮಾ ವಿಶ್ಲೇಷಕ

ನಿರ್ದೇಶಕ ಕೆ.ಬಾಲಚಂದರ್‌ ‘ಅಪೂರ್ವ ರಾಗಂಗಳ್‌’ ಮೂಲಕ ತಮಿಳು ಸಿನಿಮಾಗೆ ಹೊಸ ವ್ಯಾಕರಣವೊಂದನ್ನು ನೀಡಿದರು. ತಮ್ಮ ಚಿತ್ರದ ಸ್ತ್ರೀಪಾತ್ರಗಳಿಗೆಲ್ಲಾ ರಾಗದ ಹೆಸರನ್ನೇ ಇಡುತ್ತಿದ್ದ ಕೆ.ಬಿ, ಆ ರಾಗದ ಏರಿಳಿತ, ಹರಿವಿನಂತೆಯೇ ಪಾತ್ರವನ್ನೂ ಸೃಷ್ಟಿಸುತ್ತಿದ್ದರು. ಈ ಚಿತ್ರದಲ್ಲಿಯೂ, ಭೈರವಿ – ರಂಜನಿ ಎರಡೂ ರಾಗಗಳೇ.

ಆತ ಪ್ರಸನ್ನ (ಕಮಲಹಾಸನ್). ಹದಿಹರೆಯದ ಹುಡುಗ. ವಯಸ್ಸಿನ ಆತುರ – ಕುಚೋದ್ಯ – ಅವಿವೇಕಗಳನ್ನೆಲ್ಲಾ ತುಸು ಹೆಚ್ಚಾಗಿ ಮೈಗೂಡಿಸಿಕೊಂಡ ಪ್ರಸನ್ನ, ಒಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದ ಕಿಡಿಗೇಡಿಗಳನ್ನು ಕೆಣಕಿ, ಅವರೊಂದಿಗಿನ ಹೊಡೆದಾಟದಲ್ಲಿ ತೀವ್ರವಾಗಿ ಗಾಯಗೊಳ್ಳುತ್ತಾನೆ. ಪೆಟ್ಟು ತಿಂದು ಬಿದ್ದಿದ್ದ ಪ್ರಸನ್ನನನ್ನು, ಶಾಸ್ತ್ರೀಯ ಸಂಗೀತ ಕಲಾವಿದೆ ಭೈರವಿ (ಶ್ರೀವಿದ್ಯಾ) ಗಮನಿಸುತ್ತಾಳೆ. ಮನೆಗೆ ಕರೆದುಕೊಂಡು ಹೋಗಿ ಶುಶ್ರೂಷೆ ಮಾಡುತ್ತಾಳೆ. ಭೈರವಿಯ ಆರೈಕೆಯಲ್ಲಿ ಪ್ರಸನ್ನ ಬೇಗ ಗುಣಮುಖನಾಗುತ್ತಾನೆ. ಆಕೆ ಪ್ರಸನ್ನನಿಗಿಂತ ವಯಸ್ಸಿನಲ್ಲಿ ದೊಡ್ಡವಳು. ಬದುಕನ್ನು ಪ್ರೀತಿಸುವ, ರಾಗಗಳಲ್ಲೇ ಕಳೇದುಹೊಗುವ ಭೈರವಿಗೆ, ಬಾಧಿಸುವಂತಹ ಹಿನ್ನಲೆಯೊಂದಿದೆ. ಆದರೇನು? ಪ್ರೇಮ ಕುರುಡಲ್ಲವೇ? ಆಕೆಯ ಹಿನ್ನಲೆಯ ಬಗ್ಗೆ ಚಿಂತಿಸದ ಪ್ರಸನ್ನ ಆಕೆಯನ್ನು ಪ್ರೀತಿಸಲಾರಂಭಿಸುತ್ತಾನೆ.

ಕುರುಡು ಪ್ರೇಮ ಮಾಡುವ ಆಭಾಸ ಒಂದೆರೆಡೇ? ಪ್ರಸನ್ನನ ತಂದೆ ಮಹೇಂದ್ರನ್… ‘ಹುಷಾರಾಗಿದ್ದೀಯಲ್ಲ…ಮನೆಗೆ ಬಾ…ಬದುಕು ನೋಡಿಕೋ’ ಎಂದು ಹೇಳಬೇಕಾದ ಮಹೇಂದ್ರನ್, ತಾವೇ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ತಮ್ಮ ಮಗಳ ವಯಸ್ಸಿನ ರಂಜನಿ (ಜಯಸುಧಾ)ಯೊಂದಿಗೆ ಪ್ರೇಮಪಾಶಕ್ಕೆ ಸಿಲುಕಿರುವ ಮಹೇಂದ್ರನ್‌ಗೆ, ಮಗನ ಮಧ್ಯವಯಸ್ಕಳೊಡಗಿನ ಪ್ರೇಮ ವಿರೋಧಿಸುವ ನೈತಿಕತೆಯಿಲ್ಲ. ಪ್ರಸನ್ನ – ಮಹೇಂದ್ರನ್ ಪರಸ್ಪರ ಬಿಸಿತುಪ್ಪವಾಗುತ್ತಾರೆ. ಹಾಗೆಯೇ ಭೈರವಿ – ರಂಜನಿ ಕೂಡಾ. ಯಾರು ಯಾರನ್ನೂ ದೂಷಿಸುವಂತಿಲ್ಲ…ನಾಲ್ಕೂ ಮಂದಿ ತಮ್ಮ ಪ್ರೇಮಕ್ಕೆ ಬದ್ಧರು. ಭೈರವಿಯ ಸಂಗೀತಕ್ಕೆ ಮಾರುಹೋಗಿ ಮೃದಂಗ ಕಲಿತಿರುವ ಪ್ರಸನ್ನನಿಗೆ, ಅವಳ ರಾಗಕ್ಕೆ ತಾನು ತಾಳವಾಗುವ ಆಸೆ. ಸಮಾಜ ಏನಾದರೂ ಹೇಳಿಕೊಳ್ಳಲಿ.. ಪ್ರಸನ್ನ, ಭೈರವಿಯನ್ನು ವರಿಸಲು ಸಿದ್ಧನಾಗುತ್ತಾನೆ. ಲಯಬದ್ಧವಾಗಿ, ಶ್ರುತಿಶುದ್ಧವಾಗಿ ರಾಗ ಸಾಗುತ್ತಿದ್ದಾಗ, ಅಪಸ್ವರವೊಂದು ಎಲ್ಲಿಂದಲೋ ಮೂಡುವಂತೆ, ಪಾಂಡ್ಯನ್ (ರಜನೀಕಾಂತ್) ಪ್ರವೇಶವಾಗುತ್ತದೆ.

ಈತ ಯಾರು ಎಂಬುದು ಅರಿವಾಗುತ್ತಿದ್ದಂತೆ ಸಿಡಿಲು ಮೊರೆದಂತಾಗುತ್ತದೆ. ಆದರೆ ಎಣಿಸಿದಂತೆ ಈತ ಖಳನಲ್ಲ, ಸ್ವಾರ್ಥಿಯಲ್ಲ. ಆತನೊಬ್ಬ ಒಳ್ಳೆಯ ಮನುಷ್ಯ. ನಂತರ ? ವಯಸ್ಕ – ಅಪರವಯಸ್ಕರ ನಡುವಿನ ಪ್ರೇಮ – ತಾಕಲಾಟ -ದುಮ್ಮಾನಗಳ ವಿಷಯವನ್ನು 1975ರಷ್ಟು ಹಿಂದೆಯೇ ಆಯ್ದುಕೊಂಡ ಕೆ.ಬಾಲಚಂದರ್ (ಕೆಬಿ), ತಮಿಳು ಸಿನಿಮಾರಂಗವನ್ನು ಅಚ್ಚರಿಗೊಳಿಸಿದ್ದರು. ಸಮಾಜ ಹೆಚ್ಚು ಇಷ್ಟಪಡದ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಾಲಚಂದರ್, 1973ರ ಸೂಪರ್ ಹಿಟ್ ಹಾಲಿವುಡ್ ಚಿತ್ರ ‘40 carats’ನಿಂದ ಪ್ರಭಾವಿತರಾಗಿದ್ದರು. 16ರ ಹರೆಯದ ಮಗಳಿದ್ದ ಮಧ್ಯವಯಸ್ಕ ವಿಧವೆಯೊಬ್ಬಳು, ತನ್ನ ಮಗಳ ವಯಸ್ಸಿನ ಹುಡುಗನೊಬ್ಬನ ಮೋಹ ಪಾಶಕ್ಕೆ ಸಿಲುಕುವ ಆ ಕಥೆ, ಕೆಬಿ ಯವರ ತಲೆ ಕೊರೆದಿತ್ತು. ‘What matters is true love…nothing else..’ ಎಂಬ ಆ ಚಿತ್ರದ ಸಂದೇಶ ಕೆ.ಬಿ ಯವರನ್ನು ಪುಳಕಿತವಾಗಿಸಿತ್ತು. ತಡಮಾಡದ ಕೆ.ಬಿ, ಆ ಹಿಟ್ ಚಿತ್ರದ ಹೂರಣ ತೆಗೆದು ಪಕ್ಕಾ ತಮಿಳು ಕಥೆ ಹೊಸೆದರು.  ಆದರೂ ಚಿತ್ರದಲ್ಲಿನ ಕೆ.ಬಿ ತನವನ್ನು ಯಾರೂ ಅಲ್ಲಗಳೆಯುವಂತಿಲ್ಲ. ತಮಿಳು ಸಿನಿಮಾಗೆ ಹೊಸ ವ್ಯಾಕರಣವೊಂದನ್ನು ಕೆ.ಬಿ ಈ ಚಿತ್ರದ ಮುಖಾಂತರ ನೀಡಿದರು. ತಮ್ಮ ಚಿತ್ರದ ಸ್ತ್ರೀಪಾತ್ರಗಳಿಗೆಲ್ಲಾ ರಾಗದ ಹೆಸರನ್ನೇ ಇಡುತ್ತಿದ್ದ ಕೆ.ಬಿ, ಆ ರಾಗದ ಏರಿಳಿತ, ಹರಿವಿನಂತೆಯೇ ಪಾತ್ರವನ್ನೂ ಸೃಷ್ಟಿಸುತ್ತಿದ್ದರು. ಈ ಚಿತ್ರದಲ್ಲಿಯೂ, ಭೈರವಿ – ರಂಜನಿ ಎರಡೂ ರಾಗಗಳೇ.

ಅಪೂರ್ವ ರಾಗಂಗಳ್, ಕಮಲ್‌ರ ಸ್ಥಾನವನ್ನು ತಮಿಳು ಸಿನಿಮಾದಲ್ಲಿ ಭದ್ರಗೊಳಿಸಿದ್ದು ಮಾತ್ರವಲ್ಲ. ರಜನೀಕಾಂತ್‌ರಿಗೆ ಹೊಸ ಅಸ್ಮಿತೆಯೊಂದನ್ನು ದೊರಕಿಸಿತು. ಇದು ರಜನೀಕಾಂತ್ ಅಭಿನಯದ ಮೊದಲ ತಮಿಳು ಚಿತ್ರ. ಚಿತ್ರದ ಮೊದಲ ದೃಶ್ಯದಲ್ಲಿ ರಜನಿ, ಮನೆಯ ಗೇಟ್ ತೆಗೆದು ಒಳಬರುವ ದೃಶ್ಯವಿದೆ. ಕ್ಯಾಮೆರಾ ಚಾಲೂ ಆಗುವ ಮೊದಲು ರಜನಿಕಾಂತ್ ರನ್ನು ಪಕ್ಕಕ್ಕೆ ಕರೆದ ಕೆ,ಬಿ, ‘ನೋಡು.. ಈ ದೃಶ್ಯ ನಿನಗಾಗಿ… ಉದ್ದೇಶಪೂರ್ವಕವಾಗಿ ಸೇರಿಸಿದ್ದೇನೆ… ನೀನು ಗೇಟ್ ತೆಗೆದು ಒಳಹೋಗುತ್ತಿರುವುದು ಮನೆಯೊಳಗೆ ಮಾತ್ರವಲ್ಲ….ತಮಿಳು ಸಿನಿಮಾದೊಳಗೂ ಆಗಮಿಸುತ್ತಿದ್ದೀಯ…ಚೆನ್ನಾಗಿ ಮಾಡು’ ಎಂದರು. ಒಂದು ಕ್ಷಣ ಭಾವುಕರಾದ ರಜನಿ, ಏನೂ ತೋಚದೆ ನಿಂತಾಗ, ಕೆ.ಬಿ ಕ್ಯಾಮೆರ ಹಿಂದೆ ನಿಂತು ಗದರಿದರು.

ನಿರ್ದೇಶಕ ಕೆ.ಬಾಲಚಂದರ್‌ ಜೊತೆ ಕಮಲ ಹಾಸನ್‌, ರಜನೀಕಾಂತ್‌

ಕ್ಯಾಮೆರಾ ಆನ್ ಆಯಿತು. ರಜನಿ ಗೇಟ್ ತೆಗೆದು ಮನೆಯ ಪ್ರವೇಶಿಸುವ ಮೂಲಕ ತಮಿಳ ಹೃದಯದೊಳಗೂ ಪ್ರವೇಶಿಸಿಯೇ ಬಿಟ್ಟರು. ಅಲ್ಲೊಂದು ಶಾಶ್ವತ ಸ್ಥಾನ ಗಳಿಸಿಯೇ ಬಿಟ್ಟರು. ಚಿತ್ರದ ಕೊನೆಯಲ್ಲಿ ಸ್ವಲ್ಪ ಸಮಯ ಬಂದು ಹೋಗುವ ರಜನೀಕಾಂತ್ ಅಭಿನಯ ನಿಜಕ್ಕೂ ಪ್ರಶಂಸಾರ್ಹ. ಆದರೆ ಎಲ್ಲರನ್ನೂ ಹಿಂಬದಿ ಸರಿಸಿ ಮುಂದೆ ನಿಲ್ಲುವುದು ಶ್ರೀವಿದ್ಯಾ. ಅವರಿಗಾಗಿಯೇ ಹೇಳಿಮಾಡಿಸಿದ ಪಾತ್ರದಂತಿರುವ ಭೈರವಿಯಾಗಿ ಶ್ರೀವಿದ್ಯಾ ಪರಕಾಯ ಪ್ರವೇಶ ಮಾಡಿದರು. ಕಣ್ಣದಾಸನ್ ಬರೆದ ಅರ್ಥಪೂರ್ಣ ಸಾಲುಗಳನ್ನು ಅವಿಸ್ಮರಣೀಯವಾಗಿಸಿದ್ದು ಎಮ್.ಎಸ್.ವಿಶ್ವನಾಥನ್ ರ ಸಂಗೀತ ಸಂಯೋಜನೆ. ‘ಏಳು ಸ್ವರಂಗಳುಕ್ಕುಳ್ ಎತ್ತನೈ ರಾಗಮ್’ (ಏಳು ಸ್ವರಗಳಲ್ಲಿ ಎಷ್ಟೊಂದು ರಾಗ) ಎಂಬ ಗೀತೆಯ ಸುಶ್ರಾವ್ಯ ಗಾನಕ್ಕೆ ವಾಣಿ ಜಯರಾಂ ರಾಷ್ಟ್ರಪ್ರಶಸ್ತಿ ಪಡೆದರು. ಚಿ.ಉದಯಶಂಕರ್ ರ ಆತ್ಮೀಯ ಗೆಳೆಯರಾಗಿದ್ದ ಕಣ್ಣದಾಸನ್, ‘ಎನ್ನಪ್ಪಾ ಚಿ..’ ಎನ್ನುತ್ತಾ ಉದಯಶಂಕರ್ ಹೆಗಲಮೇಲೆ ಕೈ ಹಾಕಿ ಮಾತಾಡಿಸುತ್ತ ಪರಸ್ಪರ ಹಾಸ್ಯ ಪ್ರಜ್ಞೆ ಮೆರೆಯುತ್ತಿದ್ದರು. ಉದಯಶಂಕರ್, ‘ನೀಯ್ ಕಣ್ಣದಾಸನ್…ನಾನ್ ಕಣ್ಣಾಡಿ (ಕನ್ನಡಕ) ದಾಸನ್’ ಎಂದು ಕಿಚಾಯಿಸುತ್ತಿದ್ದರು. ‘ನಾನೂ ಕಣ್ಣಾಡಿದಾಸನಾಗಿಬಿಡುತ್ತೇನೋ’ ಎಂದು ಕಣ್ಣದಾಸನ್ ಹುಸಿಗಾಬರಿ ತೋರುತ್ತಿದ್ದರು.

ಇಲ್ಲಿ ಹಂಚಿಕೊಂಡಿರುವ ಈ ಗೀತೆ, ಮಹತಿ ರಾಗದ್ದು. ಈ ರಾಗದ ಅನ್ವೇಷಣೆಮಾಡಿದ್ದು ಬಾಲಮುರಳಿ ಕೃಷ್ಣ. ರೆಕಾರ್ಡಿಂಗ್ ಸಂದರ್ಭದಲ್ಲಿ, ವಿಶ್ವನಾಥನ್ ಕಥೆಯ ತಿರುಳನ್ನು ಬಾಲಮುರುಳಿಯವರಿಗೆ ಹೇಳಿ, ‘ಈ ಸಿನಿಮಾ ಹೊಸ ಸಂಬಂಧಗಳ ಬಗ್ಗೆ. ಹಾಗಾಗಿ ಹಾಡುಗಳ ಸಂಯೋಜನೆಯೂ ಹೊಸರಾಗದಲ್ಲಾಗಲೆಂದು ನನಗೆ ಇಷ್ಟ’. ಎಂದರು. ಕೂಡಲೇ ಬಾಲಮುರುಳಿ ತಮ್ಮ ಹೊಸ ಅನ್ವೇಷಣೆಯನ್ನು ತಿಳಿಸಿ, ಒಂದೆರೆಡು ಸಾಲು ಹಾಡಿದರು. ತಡಮಾಡದ ವಿಶ್ವನಾಥನ್, ಆ ರಾಗದಲ್ಲೇ ಹಾಡಿನ ಸಂಯೋಜನೆ ಮಾಡಿದರು. ‘ಉನ್ಮೈಯಾವೇ ಇದು ಒರು ಅತಿಸಯಮಾನ, ಆನಂದಮಾನ, ಅಳಗಾನ ರಾಗಂ..ನಂಡ್ರಿ’ (ಇದು ನಿಜವಾಗಿಯೇ ಅತಿಶಯವಾದ, ಆನಂದದಾಯಕವಾದ, ಅಪೂರ್ವರಾಗ. ನಿಮಗೆ ಧನ್ಯವಾದ) ಎಂದು ಬಾಲಮುರಳಿಯವರನ್ನು ಪ್ರಶಂಸಿದರು. ಜೇಸುದಾಸ್ ಒಂದೊಂದು ಸಾಲಿಗೂ ಉಸಿರು ತುಂಬಿ ಹಾಡಿದರು.

ಈ ಬರಹಗಳನ್ನೂ ಓದಿ