ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.
Dr. Rajkumar & Bharathi eating Sugarcane

ಸಿನಿಮಾ ಸ್ಟಿಲ್ ಅಲ್ಲ, ಚಲನಚಿತ್ರ. ಸಿನಿಮಾ ನೋಡುತ್ತಾ ಮನಸ್ಸೂ ಚಲಿಸುವಂತಿರಬೇಕು. ಆಗಲೇ ಅದು ಚಲನಚಿತ್ರ ಅನಿಸಿಕೊಳ್ಳೋದು.

- ಸಿದ್ದಲಿಂಗಯ್ಯ, ಚಿತ್ರನಿರ್ದೇಶಕ

ನಮ್ಮ ಬಗ್ಗೆ

ಚಿತ್ರಪಥ

ಸಿನಿಮಾ ಇತಿಹಾಸ, ಮಾಹಿತಿ, ಫೋಟೋಗಳನ್ನು ದಾಖಲಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಿನಿಮಾರಂಗದ ದಶಕಗಳ ಹಿಂದಿನ ಅಪೂರ್ವ ಮಾಹಿತಿ – ಫೋಟೋಗಳನ್ನು ತಲುಪಿಸುವುದು, ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ರೂಪಿಸುವುದು ‘ಚಿತ್ರಪಥ’ ಪೋರ್ಟಲ್‌ನ ಆಶಯ. ಹಿರಿಯ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ಸ್ಮರಿಸುವುದರ ಜೊತೆಗೆ ಅಪರೂಪದ ಫೋಟೋ, ಪತ್ರ, ಮಾಹಿತಿಗಳನ್ನು ದಾಖಲಿಸುವುದು, ಉತ್ತಮ ಬರಹ – ಲೇಖನ - ವಿಶ್ಲೇಷಣೆಗಳ ಮೂಲಕ ಸಿನಿಮಾ ಕುರಿತಾಗಿ ಒಳನೋಟಗಳನ್ನು ನೀಡುವ ನಿಟ್ಟಿನಲ್ಲಿ ‘ಚಿತ್ರಪಥ’ ಕೆಲಸ ಮಾಡಲಿದೆ.

ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಶಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ – ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು – ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ.

ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು-ಹೊಳಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದು, ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರ ಕುರಿತ ಮಾಹಿತಿ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಒಂದು ಪ್ರಯತ್ನ. ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಹಾಗೂ ಕಲಾವಿದರ ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಇಲ್ಲಿ ಇರಲಿದೆ.

ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಛಾಯಾಚಿತ್ರಗಳು ‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಬಳಕೆಯಾಗುತ್ತವೆ. ಇವರ ಕಿರುಪರಿಚಯ ಇಲ್ಲಿದೆ.

ಭವಾನಿ ಲಕ್ಷ್ಮೀನಾರಾಯಣ

ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟನಟಿಯರು, ತಂತ್ರಜ್ಞರಿಗೆ ಅವರುಸ್ಟಾರ್ ಫೋಟೋಗ್ರಾಫರ್‘! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು. ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.

ಐವತ್ತರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರು ಇರಲಿಲ್ಲ. ಹಾಗಾಗಿ ಭವಾನಿಯವರ ಸಿನಿಮಾ ಸ್ಟಿಲ್ಗಳಿಗೆ ಬಹುಬೇಡಿಕೆ ಇತ್ತು. ಚಲನಚಿತ್ರ ಇತಿಹಾಸ ಗ್ರಂಥ ಸೇರಿದಂತೆ ಹತ್ತಾರು ಸಿನಿಮಾ ಪುಸ್ತಕಗಳು, ಪತ್ರಿಕೆಗಳಲ್ಲಿ ಭವಾನಿಯವರು ಸೆರೆಹಿಡಿದ ಅಸಂಖ್ಯ ಛಾಯಾಚಿತ್ರಗಳು ಬಳಕೆಯಾಗಿವೆ. ‘ಕ್ಯಾಮರಾ ಕಣ್ಣಲ್ಲಿ ರಾಜ್‌’ ಕೃತಿಯಲ್ಲಿ ವರನಟ ಡಾ.ರಾಜಕುಮಾರ್‌ ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟವನ್ನು ಭವಾನಿಯವರು ಸ್ಮರಿಸಿಕೊಂಡಿದ್ದಾರೆ. ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

ಪ್ರಗತಿ ಅಶ್ವತ್ಥ ನಾರಾಯಣ

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು `ಪ್ರಗತಿ ಹೆಮ್ಮೆ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ `ಬೆಳ್ಳಿಮೋಡಚಿತ್ರದೊಂದಿಗೆ. ಅವರು ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ `ಪ್ರೇಮ ಪ್ರೇಮ ಪ್ರೇಮ‘. `ಪ್ರಗತಿಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ.

ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ. ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರನಿರ್ದೇಶಕರ ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. `ಪ್ರಗತಿಯಲ್ಲಿ ಹತ್ತಾರು ಸ್ಟಿಲ್ ಫೋಟೋಗ್ರಾಫರ್ಗಳು ತಯಾರಾಗಿದ್ದಾರೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳುಹೀಗೆ ಅವರ ಸಂಗ್ರಹದಲ್ಲಿನ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ನುಡಿಯುತ್ತವೆ.

ನಿಮ್ಮ ಆಸಕ್ತಿಯೇ ನಮ್ಮ ಉತ್ಸಾಹ

'ಚಿತ್ರಪಥ' ತಂಡ

ಶಶಿಧರ ಚಿತ್ರದುರ್ಗ

ಪರಿಕಲ್ಪನೆ – ಸಂಪಾದಕ

ಕೃಷ್ಣೇಗೌಡ ಎನ್.ಎಲ್.

ತಾಂತ್ರಿಕ ಸಲಹೆ – ಪೋರ್ಟಲ್‌ ವಿನ್ಯಾಸ

ರಂಜಿತ್‌ ರಾಮಚಂದ್ರನ್‌

ಶೀರ್ಷಿಕೆ - ಲೋಗೋ ವಿನ್ಯಾಸ

ಸಲಹೆ - ಮಾರ್ಗದರ್ಶನ

ಎನ್‌. ಜಗನ್ನಾಥ್‌ ಪ್ರಕಾಶ್‌

ಲೇಖಕ

ನಟರಾಜು ವಿ.

ಪತ್ರಕರ್ತ

ಮಂಜುನಾಥ ಬಿ.

ಪ್ರಗತಿಪರ ಕೃಷಿಕ

ಕೃತಜ್ಞತೆ - ಸ್ಮರಣೆ

‘ಚಿತ್ರಪಥ’ದಲ್ಲಿನ ಆಯ್ದ ಬರಹಗಳನ್ನು ಆಯಾ ಕೃತಿ, ಕೃತಿಕಾರರ ಅನುಮತಿ ಪಡೆದು ಅವರ ಸ್ಮರಣೆಯೊಂದಿಗೆ ಬಳಕೆ ಮಾಡಲಾಗಿದೆ. ಇನ್ನಿತರೆ ವಿವಿಧ ವಿಭಾಗಗಳ ಬಿಡಿ ಬರಹಗಳು ಅಂತರ್ಜಾಲ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ. ಕೆಲವೆಡೆ ಮಾಹಿತಿಯ ನಿಖರತೆಗಾಗಿ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕ ಮತ್ತು ರುಕ್ಕೋಜಿರಾವ್‌ ಅವರ ಡಾ.ರಾಜಕುಮಾರ್ ಸಮಗ್ರ ಚರಿತ್ರೆ ಕೃತಿಗಳನ್ನು ಪರಾಮರ್ಶಿಸಲಾಗಿದೆ. ಇವರಿಗೆ ಕೃತಜ್ಞತಾಪೂರ್ವಕ ಧನ್ಯವಾದ ಅರ್ಪಣೆ. ಬರಹಗಳಂತೆ ಫೋಟೋಗಳ ಸಂದರ್ಭದಲ್ಲೂ ಅವು ಬಳಕೆಯಾದ ಮೂಲ ಮಾಧ್ಯಮಗಳನ್ನು ಸ್ಮರಿಸಲಾಗಿದೆ.

ತಪ್ಪು - ಒಪ್ಪು

ಪೋರ್ಟಲ್‌ನಲ್ಲಿ ಬಳಕೆ ಮಾಡುವ ಮಾಹಿತಿ ಸಾಧ್ಯವಾದಷ್ಟೂ ನಿಖರತೆಗೆ ಹತ್ತಿರವಾಗಿರುವಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮಾಹಿತಿ ಕೊರತೆಯಿಂದ ಇಲ್ಲವೇ ಕಣ್ತಪ್ಪಿನಿಂದ ತಪ್ಪುಗಳಾಗುವು ಸಾಧ್ಯತೆಗಳು ಇಲ್ಲದಿಲ್ಲ. ತಪ್ಪುಗಳು ಕಾಣಿಸಿದಲ್ಲಿ ಇಲ್ಲವೇ ಮಾಹಿತಿ ಅಪೂರ್ಣವಾಗಿದ್ದಲ್ಲಿ ‘ಚಿತ್ರಪಥ (editor@chithrapatha.com)’ಕ್ಕೆ ಇ ಮೇಲ್‌ ಮಾಡಿ. ತಪ್ಪು ಸರಿಪಡಿಸಿಕೊಳ್ಳುತ್ತೇವೆ.

ಕಾಪಿರೈಟ್‌ ಅನ್ವಯ

‘ಚಿತ್ರಪಥ’ ಪೋರ್ಟಲ್‌ನಲ್ಲಿ ಬಳಕೆಯಾಗುವ ಫೋಟೋಗಳಿಗೆ ಕಾಪಿರೈಟ್‌ ನಿಯಮ ಅನ್ವಯವಾಗುತ್ತದೆ. ಅನುಮತಿ ಇಲ್ಲದೆ ಇಲ್ಲಿನ ಫೋಟೋಗಳನ್ನು ಬಳಕೆ ಮಾಡುವುದು ಅಪರಾಧ. ಒಂದೊಮ್ಮೆ ಇತರೆಡೆ ಬಳಕೆ ಮಾಡಲು ಇಲ್ಲಿನ ಫೋಟೋಗಳು ನಿಮಗೆ ಬೇಕಿದ್ದಲ್ಲಿ ‘ಚಿತ್ರಪಥ(editor@chithrapatha.com)’ಕ್ಕೆ ಈ ಕುರಿತು ಇ-ಮೇಲ್ ಮಾಡಿ. ಆ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರಿಗೆ ಸೂಕ್ತ ಸಂಭಾವನೆ ಪಾವತಿಸಿದ ನಂತರ ಫೋಟೋಗಳ ಮೂಲ ಪ್ರತಿಯನ್ನು ನಿಮಗೆ ಇ-ಮೇಲ್ ಮಾಡಲಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಾಹಕರ ಹೆಸರನ್ನು ನಮೂದಿಸಿ ಈ ಫೋಟೋಗಳನ್ನು ನೀವು ಬಳಕೆ ಮಾಡಬೇಕಾಗುತ್ತದೆ. ಈ ಮೂಲಕ ಫೋಟೋಗಳ ಮೂಲಕ ಇತಿಹಾಸ ದಾಖಲಿಸುವ ಸ್ಥಿರಚಿತ್ರ ಛಾಯಾಗ್ರಾಹಕರಿಗೆ ಗೌರವ ಸಮರ್ಪಿಸುವುದು ನಮ್ಮ ಉದ್ದೇಶ.

ನೀವೂ ಬರೆಯಿರಿ

‘ಚಿತ್ರಪಥ’ಕ್ಕೆ ನೀವೂ ಬರೆಯಿರಿ. ಕನ್ನಡ ಸೇರಿದಂತೆ ಇತರೆ ಭಾಷೆಗಳ ಸಿನಿಮಾ ಕುರಿತ ರೆಟ್ರೋ ಮಾಹಿತಿಯನ್ನು ನೀವು ನಮ್ಮೊಂದಿಗೆ ಹಂಚಿಕೊಳ್ಳಿ. ದಶಕಗಳ ಹಿಂದಿನ ಸಿನಿಮಾಗಳ ಬಗೆಗಿನ ನಿಮ್ಮ ವಿಶ್ಲೇಷಣಾತ್ಮಕ, ಅಭಿಪ್ರಾಯ ಬರಹಗಳಿಗೂ ಸ್ವಾಗತ. ಹೀಗೆ, ನೀವು ಇತಿಹಾಸದೊಂದಿಗೆ ಮುಖಾಮುಖಿಯಾಗುತ್ತಾ ಅನುಸಂಧಾನ ನಡೆಸಬಹುದು. ಬರಹಕ್ಕೆ ಪೂರಕವಾದ ಛಾಯಾಚಿತ್ರಗಳನ್ನು ಒದಗಿಸಿ. ಲೇಖನದ ಜೊತೆ ನಿಮ್ಮ ಪೂರ್ಣ ಹೆಸರು, ಫೋಟೋ ಇಮೇಲ್ ಮಾಡಿ. (editor@chithrapatha.com)