ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಿನಿಮಾದ ಗತವೈಭವ ಮತ್ತು ತಂತ್ರಜ್ಞಾನ

ಪೋಸ್ಟ್ ಶೇರ್ ಮಾಡಿ
ರವಿ ಕೃಷ್ಣಾರೆಡ್ಡಿ
ಲೇಖಕ, ಕೆಆರ್‌ಎಸ್‌ ಪಕ್ಷದ ರಾಜ್ಯಾಧ್ಯಕ್ಷ

ಇಂದಿನ ಅದ್ಭುತ ಸಿನಿಮಾ ತಂತ್ರಜ್ಞಾನ ಮತ್ತು ಸ್ಪೆಷಲ್ ಎಫೆಕ್ಟ್ಸ್ ಏನಾದರೂ ಅಂದೇ ಸಿಕ್ಕಿದ್ದರೆ? ಅಣ್ಣಾವ್ರ ಹಿರಣ್ಯಕಶಿಪುವಿನ ವೇಗ, ಅಬ್ಬರ ಮತ್ತು ಆರ್ಭಟಕ್ಕೆ ವಿಶಾಲ ಪರದೆಯ IMAX ಅಥವ 4D ಥಿಯೇಟರ್‌ನಲ್ಲಿ ಕುಳಿತವರು ನಡುಗಿ ಮುದುರಿಕೊಂಡು ಬಿಡುತ್ತಿದ್ದರೇನೋ! – ಲೇಖಕ ರವಿ ಕೃಷ್ಣಾರೆಡ್ಡಿ ಅವರ ಬರಹ.

ನಿರ್ಭಾವುಕ ಸದಾಸ್ಮಿತ ಕೃಷ್ಣ, ನತದೃಷ್ಟ ನಿಸ್ಸಹಾಯಕ ಕರ್ಣ, ಸಕಲ ರಾಗದ್ವೇಷಗಳಿಂದ ಭೋರ್ಗರೆವ ದುರ್ಯೋಧನ; ಅಲ್ಪಸ್ವಲ್ಪ ಹೋಲಿಕೆಗಳಿರುವ ಮೂವರು ನಟಿಸಿದ್ದಾರೆ ಎಂದು ಭಾವಿಸಬೇಕು. ತ್ರಿಪಾತ್ರಗಳಲ್ಲಿ ಅಷ್ಟು ಭಿನ್ನವಾಗಿ ಮತ್ತು ಅದ್ಭುತವಾಗಿ ನಟಿಸಿ, ಮೂರೂಮುಕ್ಕಾಲು ಗಂಟೆಯ ಸಿನಿಮಾವನ್ನು ನಿರ್ಮಿಸಿ – ನಿರ್ದೇಶಿಸಿದ ಮಹತ್ವಾಕಾಂಕ್ಷಿ ಮತ್ತು ಪ್ರತಿಭಾವಂತ ಎನ್‌ಟಿಆರ್. 1977ರಲ್ಲಿ ಬಿಡುಗಡೆಯಾದ ತೆಲುಗಿನ ‘ದಾನ ವೀರ ಶೂರ ಕರ್ಣ’, ಭಾರತದ ಸಿನಿಜಗತ್ತಿನಲ್ಲಿ ಅಪರೂಪದ ಅಪೂರ್ವ ಚಿತ್ರ. (‘ದಾನ ವೀರ ಶೂರ ಕರ್ಣ’ ಚಿತ್ರದ ಯೂಟ್ಯೂಬ್ ಲಿಂಕ್‌ – (https://youtu.be/JB1_n0LtUCY)

ಇದು ಬಿಡುಗಡೆಯಾದ ಏಳೇ ತಿಂಗಳೊಳಗೆ ರಾಮರಾಯರು ‘ಚಾಣಕ್ಯ – ಚಂದ್ರಗುಪ್ತ’ ಸಿನಿಮಾವನ್ನೂ ನಿರ್ಮಿಸಿ – ನಿರ್ದೇಶಿಸುತ್ತಾರೆ ಮತ್ತು ಯುವ ಚಂದ್ರಗುಪ್ತ ಮೌರ್ಯನಾಗಿ ನಟಿಸುತ್ತಾರೆ. ಜೊತೆಗೆ ತನ್ನ ಸಮಕಾಲೀನ ಜನಪ್ರಿಯ ನಟ ಅಕ್ಕಿನೇನಿ ನಾಗೇಶ್ವರರಾವ್’ರನ್ನು ಅದರಲ್ಲಿ ಚಾಣಕ್ಯನನ್ನಾಗಿ ಮಾಡುತ್ತಾರೆ ಹಾಗೂ ತಮಿಳಿನ ಪ್ರಖ್ಯಾತ ನಟ ಶಿವಾಜಿ ಗಣೇಶರನ್ನು ಗ್ರೀಕ್ ವೀರ ಅಲೆಕ್ಸಾಂಡರ್’ನನ್ನಾಗಿಸುತ್ತಾರೆ. ಪಾಂಚಾಲೀ, ಪಂಚ ಭದ್ರುಕ! ಏಮೇ, ಏಮೇಮೇ ನೀ ಉನ್ಮತ್ತ ವಿಕೃತ ಅಟ್ಟಹಾಸಮು… ಇಂದಿನ ಅದ್ಭುತ ಸಿನಿಮಾ ತಂತ್ರಜ್ಞಾನ ಮತ್ತು ಸ್ಪೆಷಲ್ ಎಫೆಕ್ಟ್ಸ್ ಏನಾದರೂ ಅಂದೇ ರಾಮರಾಯರಿಗೆ ಸಿಕ್ಕಿಬಿಟ್ಟಿದ್ದರೆ ಮತ್ತು ಅವರದನ್ನು ದಕ್ಕಿಸಿಕೊಂಡಿದ್ದಿದ್ದರೆ, (ಹಾಗೂ ರಾಜಮೌಳಿಯಂತಹ ಮಹತ್ವಾಕಾಂಕ್ಷಿ ಹಾಗೂ ಕಸುಬುದಾರ ನಿರ್ದೇಶಕ ಸಿಕ್ಕಿದ್ದರೆ) ಅವರು ಮಹಾಭಾರತದ ಜೀವಂತಕಾವ್ಯವನ್ನೇ ನಮ್ಮ ಮುಂದೆ ಇಡುತ್ತಿದ್ದರೇನೋ!

ಹಾಗೆಯೇ, ಅಣ್ಣಾವ್ರ ‘ಬಬ್ರುವಾಹನ’, ‘ಭಕ್ತ ಪ್ರಹ್ಲಾದ’ (https://youtu.be/BHOl61JPpt0) ಇತ್ಯಾದಿ ಸಿನಿಮಾಗಳು ಇನ್ನೂ ಹೇಗೆಲ್ಲಾ ಇದ್ದಿರಬಹುದಿತ್ತು? ಅಣ್ಣಾವ್ರ ಹಿರಣ್ಯಕಶಿಪುವಿನ ವೇಗ, ಅಬ್ಬರ ಮತ್ತು ಆರ್ಭಟಕ್ಕೆ ವಿಶಾಲ ಪರದೆಯ IMAX ಅಥವ 4D ಥಿಯೇಟರ್‌ನಲ್ಲಿ ಕುಳಿತವರು ನಡುಗಿ ಮುದುರಿಕೊಂಡು ಬಿಡುತ್ತಿದ್ದರೇನೋ! ಏ ಹರೀ…

ಹಣ ಮತ್ತು ತಂತ್ರಜ್ಞಾನದ ಕೊರತೆಯ ಕಾರಣ ಭಾರತೀಯ ಸಿನಿಮಾಗಳ ಸಾಹಸ ದೃಶ್ಯಗಳು ಎಂದೂ ಒಂದು ಹಂತದಿಂದ ಮೆಲೇರಲಿಲ್ಲ. ಬೆನ್-ಹರ್, ಟೆನ್ ಕಮ್ಯಾಂಡ್‌ಮೆಂಟ್ಸ್’ನಂತಹ ಹೊರಾಂಗಣ ಸಾಹಸ ದೃಶ್ಯಗಳ ಮತ್ತು ಸ್ಪೆಷಲ್ ಎಫೆಕ್ಟ್ಸ್ ಸಿನಿಮಾಗಳು ‘ಬಾಹುಬಲಿ’ ಬರುವ ತನಕ ನಮ್ಮಲ್ಲಿ ಬರಲೇ ಇಲ್ಲ. ಹಾಗೆ ನೋಡಿದರೆ ಠಾಕೂರ್ ಮತ್ತು ಗಬ್ಬರ್ ಸಿಂಗ್‌ನ ಕಾದಾಟದ ದೃಶ್ಯಗಳನ್ನು ಹೊರತುಪಡಿಸಿದರೆ ‘ಶೋಲೆ’ ಒಂದು ಹಂತಕ್ಕೆ ‘The Magnificent Seven’ನ ಹತ್ತಿರತ್ತಿರಕ್ಕೆ ಹೋಗುತ್ತದೆ.

ಪೌರಾಣಿಕ ಸಿನಿಮಾಗಳ ಜೀವಾಳವೇ ನಾಟಕೀಯ ನಟನೆ; ಸರ್ವಾಂಗ ಅಭಿವ್ಯಕ್ತಿ. ಜೊತೆಗೆ ಅದರದೇ ವಿಶಿಷ್ಟ ಭಾಷೆ. ಸಹಜ ಮನುಷ್ಯರ ರೀತಿ ಮಾತನಾಡಿ ಹಾಗೆಯೇ ನಟಿಸಿದರೆ ಅದು ಶುಷ್ಕ. ಪುರಾಣವನ್ನು ಇತಿಹಾಸ ಮಾಡಿದಂತೆ; ಆಭಾಸ. ಈಗ ಎಲ್ಲವೂ ಇದೆ. ಆದರೆ ಬದಲಾದ ಅಭಿರುಚಿ ಮತ್ತು ಮಂದಪ್ರತಿಭೆಗಳ ಕಾರಣ ಹಿಂದಿನ ಮಾದರಿಯ ಪೌರಾಣಿಕ ಚಿತ್ರಗಳು ಇನ್ನು ಬರಲಾರವು; ಬಂದರೂ ಯಶಸ್ವಿ ಆಗುತ್ತವೆ ಎಂದು ಹೇಳಲಾಗದು. ಕೊರೋನೋತ್ತರ ಕಾಲದಲ್ಲಿ ಸಿನಿಮಾ ಪ್ರಪಂಚ ದೊಡ್ಡ ಪಲ್ಲಟಗಳನ್ನು ಕಾಣಲಿದೆ. ಹೊರಾಂಗಣ ಚಿತ್ರೀಕರಣ ಕಡಿಮೆಯಾಗುತ್ತದೆ ಮತ್ತು ಏಕಪರದೆಯ ಸಿನಿಮಾ ಥಿಯೇಟರ್‌ಗಳ ಸಂಖ್ಯೆ ಕ್ಷೀಣಿಸುತ್ತದೆ. ಊರೂರುಗಳಿಂದ ಮೊಬೈಲ್ ಕ್ಯಾಮೆರಾ ಹಿಡಿದವರ ‘ಸಿನಿಮಾ ಬಂಡಿ’ಗಳು ಹೊರಡುತ್ತವೆ. ಅಥವಾ ಈಗಾಗಲೇ ಹೊರಟಿವೆ. ಸ್ಮಾರ್ಟ್ ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿ’ಗಳೇ ಅವುಗಳ ನಿಲ್ದಾಣಗಳು, ರಂಗಮಂದಿರಗಳು. ಕೇವಲ ಸಾಹಿತ್ಯದಲ್ಲಿಯಷ್ಟೇ ಅಲ್ಲ, ಭಾರತದ ಸಿನಿ ಪ್ರಪಂಚದಲ್ಲಿಯೂ ಕಳೆದ ಶತಮಾನದಲ್ಲಿ ಎಂತೆಂತಹ ಮಹತ್ವಾಕಾಂಕ್ಷಿಗಳು ಮತ್ತು ಪ್ರತಿಭಾವಂತರು ಇದ್ದರು! ಗತವೈಭವ.

(ಹಳೆಯ ಬಹುತೇಕ ಎಲ್ಲಾ ಪ್ರಮುಖ ಸಿನಿಮಾಗಳು ಇಂದು ಯೂಟ್ಯೂಬ್’ನಲ್ಲಿ ಉಚಿತವಾಗಿ ಸಿಗುತ್ತವೆ. ಆಸ್ವಾದಿಸಲು ಅಥವ ಅಕಾಡೆಮಿಕ್ ಕಾರಣಕ್ಕಾಗಿಯಾದರೂ ಅವುಗಳನ್ನು ನೋಡಬೇಕು. ಆದರೆ ಮುಖ್ಯವಾಗಿ ಹೊರಾಂಗಣ ಮತ್ತು ಯುದ್ಧದ ದೃಶ್ಯಗಳು ಬಂದಾಗ ಆ ಸಿನಿಮಾಗಳು ನಿರ್ಮಾಣಗೊಂಡಿದ್ದ ಕಾಲಘಟ್ಟದ ತಂತ್ರಜ್ಞಾನ ಮತ್ತು ಆರ್ಥಿಕ ಮಿತಿಗಳು ನಮ್ಮ ಗಮನದಲ್ಲಿ ಇರಬೇಕು. ಇಲ್ಲವಾದಲ್ಲಿ ಹಲವು ಸಲ ಪೇಲವ ಎನ್ನಿಸುತ್ತದೆ ಅಥವ ‘ಅಯ್ಯೋ, ಇದೇನು ಹೀಗೆ ತೆಗೆದಿದ್ದಾರೆ’ ಎನ್ನುವ ಅನುಕಂಪ ಹುಟ್ಟುತ್ತದೆ. ಅವುಗಳನ್ನು ಮೀರಿ ನೋಡಬೇಕು.)

ಈ ಬರಹಗಳನ್ನೂ ಓದಿ