ನಾಟಕದಲ್ಲಿ ಆಕಸ್ಮಿಕವಾಗಿ ಬಣ್ಣ ಹಚ್ಚಿದ ಫಂಡರೀಬಾಯಿ ಪುಟ್ಟ ವಯಸ್ಸಿಗೇ ಬೆಳ್ಳಿತೆರೆಗೆ ಪರಿಚಯವಾದರು. ‘ವಾಣಿ’ (1943) ಚಿತ್ರದಲ್ಲಿ ನಟಿಸಿದಾಗ ಫಂಡರೀಬಾಯಿ ಅವರಿಗೆ ಒಂಬತ್ತು ವರ್ಷ. ಬಹುಭಾಷಾ ನಟಿಯಾಗಿ ಮಿಂಚಿದ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜನ್ಮದಿನದ (ಸೆಪ್ಟೆಂಬರ್ 18) ಈ ಸಂದರ್ಭದಲ್ಲಿ ಮೇರು ನಟಿಯ ಸ್ಮರಣೆ.
ಟಿ ಚೌಡಯ್ಯನವರ ‘ವಾಣಿ’ (1943) ಚಿತ್ರದಲ್ಲಿ ನಟಿಸಿದಾಗ ಫಂಡರೀಬಾಯಿ ಅವರಿಗೆ ಒಂಬತ್ತು ವರ್ಷ. ಇದಾದ ನಂತರ ಹೊನ್ನಪ್ಪ ಭಾಗವತರ್ ನಟಿಸಿ, ನಿರ್ದೇಶಿಸಿದ ‘ಗೋರ ಕುಂಬಾರ’ ಚಿತ್ರದಲ್ಲಿ ಅಭಿನಯಿಸಿದರು. ಮುಂದೆ ಎವಿಎಂ ಸಂಸ್ಥೆಯ ಕಲಾವಿದೆಯಾಗಿ ಕರಾರು ಮಾಡಿಕೊಂಡ ನಂತರ ‘ಬೇಡರ ಕಣ್ಣಪ್ಪ’ (1954) ಚಿತ್ರದಲ್ಲಿ ನಾಯಕಿಯಾದರು. ಈ ಸಿನಿಮಾ ಅವರ ವೃತ್ತಿ ಬದುಕಿಗೆ ತಿರುವಾಯ್ತು. ಮುಂದೆ ಬಹುಭಾಷಾ ನಟಿಯಾಗಿ ಮಿಂಚಿದರು. ಏಳು ಭಾಷೆಗಳಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಫಂಡರೀಬಾಯಿ ಅಭಿನಯಿಸಿದ್ದಾರೆ.
ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (1928, ಸೆಪ್ಟೆಂಬರ್ 18). ತಂದೆ ರಂಗವಿಠಲ ಅವರು ಹರಿಕಥಾ ವಿದ್ವಾನ್, ಕೀರ್ತನಕಾರ ಮತ್ತು ರಂಗಭೂಮಿ ಕಲಾವಿದ. ತಾಯಿ ಕಾವೇರಮ್ಮ ಶಿಕ್ಷಕಿ. ತಂದೆಯವರು ನಡೆಸುತ್ತಿದ್ದ ‘ಆದರ್ಶ ನಾಟಕ ಸಭಾ’ದ ನಾಟಕವೊಂದರಲ್ಲಿ ನಟಿಸಬೇಕಿದ್ದ ಕಲಾವಿದೆಯೊಬ್ಬರು ಗೈರಾಗಿದ್ದರು. ಆಗ ಈ ಪಾತ್ರವನ್ನು ಎಳೆ ವಯಸ್ಸಿನ ಫಂಡರೀಬಾಯಿ ಅವರೇ ನಿರ್ವಹಿಸಿದರು. ನಾಟಕದಿಂದ ಬೆಳ್ಳಿತೆರೆಗೆ ಪರಿಚಯವಾದ ಅವರು ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕಲಾವಿದೆಯಾದರು.
ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪ್ರಮುಖ ನಾಯಕನಟರೊಂದಿಗೆ ಫಂಡರೀಬಾಯಿ ಅಭಿನಯಿಸಿದ್ದಾರೆ. ನಾಯಕನಟಿಯಾಗಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ ಅವರು ಮುಂದೆ ‘ಅಮ್ಮ’ನಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮ ಛಾಪು ಮೂಡಿಸಿದರು. ಪಾಂಡುರಂಗನ ಅನನ್ಯ ಭಕ್ತೆಯಾದ ಅವರು ‘ಪಾಂಡುರಂಗ ಪ್ರೊಡಕ್ಷನ್ಸ್’ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದರು. ರಾಯರ ಸೊಸೆ, ಅನ್ನಪೂರ್ಣ, ಕೆರಳಿದ ಸಿಂಹ, ಅನರಾಧ… ಅವರ ನಿರ್ಮಾಣದ ಕೆಲವು ಕನ್ನಡ ಸಿನಿಮಾಗಳು. ತೆಲುಗು, ತಮಿಳು ಚಿತ್ರಗಳನ್ನೂ ನಿರ್ಮಿಸಿದ್ದಾರೆ.
ಸಿನಿಮಾ ಜೊತೆಗೆ ರಂಗಭೂಮಿ ನಂಟನ್ನೂ ಉಳಿಸಿಕೊಂಡರು. ‘ಶ್ರೀಕೃಷ್ಣ ಚೈತನ್ಯ ನಾಟಕಸಭಾ’ ರಂಗತಂಡ ಕಟ್ಟಿ ರಾಜ್ಯದ ಹಲವೆಡೆ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದು ವಿಶೇಷ. ಇಳಿವಯಸ್ಸಿನಲ್ಲಿ ಕನ್ನಡ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರನ್ನು ಮುದಗೊಳಿಸಿದರು. ಫಂಡರೀಬಾಯಿ ಅವರಿಗೆ ಹಲವು ಪ್ರತಿಷ್ಠಿತ ಗೌರವಗಳು ಸಂದಿವೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಡಾ ರಾಜಕುಮಾರ್ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. 2003ರ ಜನವರಿ 27ರಂದು ಫಂಡರೀಬಾಯಿ ನಮ್ಮನ್ನು ಅಗಲಿದರು.
(ಪೂರಕ ಮಾಹಿತಿ ಕೃಪೆ : ದೊಡ್ಡಹುಲ್ಲೂರು ರುಕ್ಕೋಜಿ ಅವರ ‘ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)








