ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಹೇಶ್ ದೇವಶೆಟ್ಟಿ ಅವರ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’

ಪೋಸ್ಟ್ ಶೇರ್ ಮಾಡಿ
ಮಹೇಶ್ ದೇವಶೆಟ್ಟಿ
ಹಿರಿಯ ಸಿನಿಮಾ ಪತ್ರಕರ್ತ

ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಸೃಷ್ಟಿಸಿದ ಮಹೋನ್ನತ ಚಿತ್ರಗಳಲ್ಲೊಂದು ‘ಬಂಗಾರದ ಮನುಷ್ಯ’. ಹಿರಿಯ ಸಿನಿಮಾ ಪತ್ರಕರ್ತ, ಲೇಖಕ ಮಹೇಶ್ ದೇವಶೆಟ್ಟಿ ಅವರು ಚಿತ್ರದ ಮೇಕಿಂಗ್‌ ಕುರಿತು ದಾಖಲಿಸಿರುವ ಅಪರೂಪದ ಕೃತಿ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡಿದೆ. ಈ ಕೃತಿಯಲ್ಲಿನ ಒಂದು ಅಧ್ಯಾಯ ಇಲ್ಲಿದೆ.

ಬಂಗಾರದ ಮನುಷ್ಯ’ನನ್ನು ಕಿತ್ತು ಹಾಕಿದರಲ್ಲ!

ಥೇಟರ್ ಮುಂದೆ ರಕ್ತಪಾತವಾಗಿದ್ದು ಸುಳ್ಳಲ್ಲ!

ಅದೇನೊ ಮಹಾ ಮೋಡಿ ಮಾಡಿಬಿಟ್ಟಿದ್ದ ಬಂಗಾರದ ಮನುಷ್ಯ. ಮೊದಲ ವಾರ ಜನರೇ ಇಲ್ಲದಿದ್ದ ಥೇಟರ್‍ಗಳ ಮುಂದೆ ಆಮೇಲೆ ನೆಲವೇ ಕಾಣದಷ್ಟು ಜನರು ತುಂಬಿಕೊಂಡರು. ಅದೇನು ಸಣ್ಣ ಮಾತಾ ? ಕೇವಲ ನಾಲ್ಕು ಐದು ವಾರ ಓಡಬಹುದೆಂದು ಅಂದುಕೊಂಡಿದ್ದ ಖುದ್ದು ರಾಜ್‍ಗೂ ಈ ದಾಖಲೆ ಎದೆ ಬಡಿತ ಹೆಚ್ಚಿಸಿತ್ತು. ನನ್ನ ಚಿತ್ರವನ್ನು ಜನರು ಈ ಮಟ್ಟಕ್ಕೆ ಮುಟ್ಟಿಸಿದರಾ ? ನನ್ನನ್ನು ಕನ್ನಡಿಗರು ಇಷ್ಟೊಂದು ಎದೆಯಲ್ಲಿಟ್ಟುಕೊಂಡಿದ್ದಾರಾ ? ಮುತ್ತುರಾಯ ಇವರ ಈ ಪ್ರೀತಿಗೆ ನಾನು ಯೋಗ್ಯನಾ ? ಅಭಿಮಾನಿ ದೇವರ ಮುಂದೆ ನನ್ನನ್ನು ಇನ್ನಷ್ಟು ವಿನೀತನನ್ನಾಗಿ ಮಾಡು…ಹೀಗೆ ರಾಜ್‍ಕುಮಾರ್ ಎನ್ನುವ ರಾಜ್‍ಕುಮಾರ್ ಗಂಟಲು ಕಟ್ಟಿಕೊಂಡಂತೆ ಮಾತಾಡಿಕೊಳ್ಳುತ್ತಿದ್ದರು. ಯಾವ ಕಲಾವಿದ ಈ ಜಾಗದಲ್ಲಿದ್ದರೂ ಹೀಗೇ ಅಂದುಕೊಳ್ಳುತ್ತಿದ್ದರೆಂದು ತಿಳಿಯಬೇಡಿ. ಒಬ್ಬ ರಾಜ್‍ಕುಮಾರ್‍ಗೆ ಮಾತ್ರ ಇಂಥ ಆತ್ಮವಿಮರ್ಶೆ ಸಾಧ್ಯ. ಅದಕ್ಕೇ ಅವರನ್ನು ಅಂದಿಗೂ ಇಂದಿಗೂ ನಮ್ಮ ಜನರು ಮೆರವಣಿಗೆ ಮಾಡುತ್ತಿರುವುದು.

ದೊಡ್ಡವರು, ಚಿಕ್ಕವರು, ಮುದುಕರು, ಮಕ್ಕಳು, ಹರೆಯದ ಹುಡುಗ ಹುಡುಗಿಯರು, ಮಧ್ಯವಯಸ್ಕರು…ಸಿನಿಮಾ ನೋಡಿ ಕಣ್ಣು ತೇವ ಮಾಡಿಕೊಂಡರು. `ಮಾಡಿದರೆ ಇಂಥ ಸಿನಿಮಾ ಮಾಡಬೇಕಪ್ಪಾ…’ ಎಂದು ಎದೆ ಮೇಲೆ ಕೈ ಇಟ್ಟುಕೊಂಡರು. ಇನ್ನೊಂದು ಕಡೆ ಸಿನಿಮಾ ನೋಡುವುದಿದ್ದರೆ, ಅದು ರಾಜ್ಕುಮಾರ್ ಸಿನಿಮಾ ಮಾತ್ರ ನೋಡಬೇಕೆಂದು ಅಪ್ಪ ಅಮ್ಮಂದಿರು ಮಕ್ಕಳಿಗೆ ಕಾನೂನು ಮಾಡಿದರು. ಚೂರಿ ಚಿಕ್ಕಣ್ಣ, ಎಮ್ಮೆ ತಮ್ಮಣ್ಣದಂಥ ಪಾತ್ರ ಮಾಡಿ ಹುಡುಗ-ಹುಡುಗಿಯರ ಮನ ಗೆದ್ದಿದ್ದ ರಾಜ್ಕುಮಾರ್, ಬಂಗಾರದ ಮನುಷ್ಯದ ನಂತರ ಎಲ್ಲಾ ವಯೋಮಾನದವರ ಮನಸಲ್ಲಿ ಮಣೆ ಹಾಕಿ ಕುಳಿತುಬಿಟ್ಟರು. ಎಲ್ಲಾ ಜಾತಿ – ಧರ್ಮಗಳನ್ನು ಮೀರಿ ಮೆರೆದುಬಿಟ್ಟರು. `ಈತ ನಮ್ಮ ಮನೆಯ ಮಗ, ಅಣ್ಣ, ಅಪ್ಪ….’ ಹೀಗೆ ಅವರಿಗೆ ಹೇಗೆ ಬೇಕೊ ಹಾಗೆ ತಿಳಿದುಕೊಂಡು ಖುಷಿಪಟ್ಟರು ಕನ್ನಡಿಗರು.

ಹೀಗೆ ಒಂದು ವರ್ಷ ಮುಗಿಯುತ್ತಾ ಬರುತ್ತಿದ್ದರೂ ಹಬ್ಬ ನಿಲ್ಲಿಸುವ ಮಾತಿರಲಿ, ಸಂಭ್ರಮವನ್ನು ಕಮ್ಮಿ ಮಾಡಿಕೊಳ್ಳಲೂ ಜನರು ಒಪ್ಪಲಿಲ್ಲ. ನಾವು ನೋಡುತ್ತಿರುತ್ತೇವೆ, ನೀವು ಪ್ರದರ್ಶನ ಹಾಕಿಕೊಂಡೇ ಇರಿ…ಎನ್ನುವ ಆದೇಶವನ್ನು ಕೊಟ್ಟುಬಿಟ್ಟಿದ್ದರು. ಒಂದು ವರ್ಷ ಪ್ರದರ್ಶನ ಮುಗಿಸಲು ಕೇವಲ ಏಳು ದಿನ ಬಾಕಿ ಇತ್ತು. ಅಂದರೆ 358ನೇ ದಿನದ ಸಡಗರಕ್ಕೆ ಕಾಲಿಟ್ಟಿತ್ತು. ಆಗಲೇ ನಡೆದಿತ್ತು ನೋಡಿ ಆ ಅವಘಡ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಂಥ ಘಟನೆ ನಡೆದಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಕನ್ನಡಕ್ಕೆ ಧಕ್ಕೆ ಬಂದರೆ ನಮ್ಮ ಜನ ಏನು ಮಾಡುತ್ತಾರೆಂದು ಸಾಬೀತು ಪಡಿಸಿತ್ತು ಆ ದಿನ. ಗೋಕಾಕ್ ಚಳವಳಿಗೂ ಕೆಲವು ವರ್ಷಗಳ ಮುನ್ನವೇ ಕನ್ನಡಕ್ಕಾಗಿ ಚಳವಳಿ ನಡೆದುಬಿಟ್ಟಿತ್ತು. ಅದು ಬಂಗಾರದ ಮನುಷ್ಯನಿಗಾಗಿ ಅನ್ನೋದೇ ತಿಕ್ಕಿ ಒರೆಸಿದರೂ ಅಳಿಸಲಾಗದ ಇತಿಹಾಸ.

ಅದು 1973…ಮಾರ್ಚ್ 22…

ಬೆಂಗಳೂರು ಮೆಜೆಸ್ಟಿಕ್‍ನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಬಂಗಾರದ ಮನುಷ್ಯ ಭರ್ಜರಿ ಪ್ರದರ್ಶನ ಕಾಣುತ್ತಿತ್ತು. ನಿತ್ಯ ಸಾವಿರಾರು ಜನರ ನೂಕುನುಗ್ಗಲಿತ್ತು. ಏನಾಗುತ್ತದೆ ಎಂದು ಗೊತ್ತಾಗುಷ್ಟರಲ್ಲಿ ಆ ಥೇಟರ್‍ನಿಂದ ಸಿನಿಮಾವನ್ನು ಎತ್ತಂಗಡಿ ಮಾಡಿಬಿಟ್ಟ ಮಾಲೀಕ. ಅದರ ಬದಲಿಗೆ ರಾಜ್ ನಟಿಸಿದ ಹಳೇ ಸಿನಿಮಾ `ಪಾರ್ವತಿ ಕಲ್ಯಾಣ’ವನ್ನು ಪ್ರದರ್ಶನ ಮಾಡುವುದಾಗಿ ಘೋಷಿಸಿದ. ವಾಟ್… ? ಒಂದು ವರ್ಷಕ್ಕೆ ಕೇವಲ ಒಂದು ವಾರ ಬಾಕಿ ಇರುವಾಗ ಹೀಗೇಕಾಯಿತು ? ಇದರ ಹಿಂದಿನ ಉದ್ದೇಶವಾದರೂ ಏನು ? ಕನ್ನಡ ಚಿತ್ರವನ್ನು ತುಳಿಯುವುದಾ ? ಅಥವಾ ರಾಜ್ ಏಳಿಗೆಯನ್ನು ಸಹಿಸದವರು ಹೀಗೆ ಮಾಡಿದರಾ ?

ಉತ್ತರ ಇಲ್ಲಿದೆ. ಸ್ಟೇಟ್ಸ್ ಥೇಟರ್‍ಗೆ ಮೊದಲಿದ್ದ ಮಾಲೀಕ ಬದಲಾಗಿದ್ದ. ಅಂದರೆ ಒಂದು ವರ್ಷ ಈ ಥೇಟರ್ ಒಂದು ಕುಟುಂಬದ ಇಬ್ಬರು ಸೋದರರಿಗೆ ಸೇರಿತ್ತು. ಬಂಗಾರದ ಮನುಷ್ಯನಿಗೆ ಒಂದು ವರ್ಷ ಮುಗಿಸುವ ಸಂಭ್ರಮದಲ್ಲಿಯೇ ಸೋದರರ ಆಸ್ತಿ ಪಾಲಾಗಿತ್ತು. ಮೊದಲಿದ್ದ ಸೋದರ ಥೇಟರ್ ಒಡೆತನವನ್ನು ಇನ್ನೊಬ್ಬ ಸೋದರನಿಗೆ ಬಿಟ್ಟು ಕೊಟ್ಟಿದ್ದ. ಆತ ಏನು ಮಾಡಿದ ಗೊತ್ತಾ ? ಇದೇ ಚಿತ್ರ ಮುಂದುವರೆದರೆ ಅದು ನನ್ನ ಒಡೆತನ ಹೇಗಾಗುತ್ತದೆ ಎಂದು ಏಕಾಏಕಿ ಭರ್ತಿಯಾಗಿ ಓಡುತ್ತಿದ್ದ ಬಂಗಾರದ ಮನುಷ್ಯನನ್ನು ತೆಗೆದುಬಿಟ್ಟ. ಅದರ ಬದಲು `ಪಾರ್ವತಿ ಕಲ್ಯಾಣ’ವನ್ನು ಹಾಕಿಬಿಟ್ಟ. ಬಂದಿದ್ದ ಜನರು ಕೂಗಾಡಿದರೂ, ಕಿಚುಚಾಡಿದರೂ…ಇಲ್ಲ ಅತ ಅಹಂಕಾರ ಬಿಡಲಿಲ್ಲ. ಜನರು ಬರಲಿ ಬಿಡಲಿ…ಪಾರ್ವತಿ ಕಲ್ಯಾಣವನ್ನೇ ಓಡಿಸುತ್ತೇನೆ ಎಂದು ಜನರು ಇಲ್ಲದಿದ್ದರೂ ಅದನ್ನೇ ಮಾಡಿದ. ಎರಡು ಶೋ ಹಾಗೆಯೇ ಪ್ರದರ್ಶನ ಮಾಡಿ ಕೊಬ್ಬು ತೋರಿಸಿದ. ಆಗ ನೋಡಿ ಎದ್ದು ನಿಂತರಲ್ಲ ನಮ್ಮ ಕನ್ನಡಿಗರು. ನಾವಾ ನೀನಾ ಎನ್ನುತ್ತಾ ತೊಡೆ ತಟ್ಟಿಬಿಟ್ಟರು. ಮುಂದಾಗಿದ್ದು ಅಲ್ಲಿವರೆಗೆ ಆಗದ್ದು, ಇಲ್ಲಿವರೆಗೆ ಆಗಲಾರದ್ದು.

ನಮ್ಮ ಅಣ್ಣಾವ್ರ ಸಿನಿಮಾಕ್ಕೆ ಈ ಗತಿಯಾ ? ಬಂಗಾರದ ಮನುಷ್ಯನನ್ನು ಕಿತ್ತು ಹಾಕುತ್ತೀಯಾ ? ನೋಡಿಯೇ ಬಿಡುತ್ತೇವೆ ನಾವೂ… ಹೀಗಂದುಕೊಂಡು ಬಂದರು.. ಬಂದರು.. ಬಂದರು… ಜನರು… ಒಬ್ಬರಲ್ಲ.. ಇಬ್ಬರಲ್ಲ.. ನೂರಾರಲ್ಲ… ಸಾವಿರಾರು ಕನ್ನಡಿಗರು ಸ್ಟೇಟ್ಸ್ ಥೇಟರ್ ಮುಂದೆ ಜಮಾಯಿಸಿದರು. ಆಗ ಭರ್ತಿ ಚಾಲ್ತಿಯಲ್ಲಿದ್ದ ವಾಟಾಳ್ ನಾಗರಾಜ್ ಕೂಡ ಸೇರಿಕೊಂಡರು. ನೋಡ ನೋಡುತ್ತಲೇ ಥೇಟರ್‍ನತ್ತ ಕಲ್ಲು ಬಿದ್ದವು. ಸುಮಾರು ಐದು ನೂರಕ್ಕೂ ಹೆಚ್ಚು ಪೊಲೀಸರು ಹಾಜರಿದ್ದರು. ಒಂದು ಕಡೆ ಕನ್ನಡಿಗರ ಕಾವು, ಇನ್ನೊಂದು ಕಡೆ ಹಠ ಬಿಡದ ಮಾಲೀಕ. ಬರೀ ಕಲ್ಲು ತೂರಾಟ ಮಾತ್ರ ಅಲ್ಲ, ಲಾಠಿ ಚಾರ್ಜ್ ಆಯಿತು, ಅಶ್ರುವಾಯು ಸಿಡಿಸಲಾಯಿತು… ಪೊಲೀಸರಿಗೆ ಹೊಡೆತ ಬಿದ್ದವು. ಜನರೂ ರಕ್ತ ರಕ್ತ. ಹಲವಾರು ಜನರನ್ನು ಬಂಧಿಸಿ ಜೈಲಿಗೆ ಹಾಕಿದರು.

ಮೆಜೆಸ್ಟಿಕ್‍ನ ಸ್ಟೇಟ್ಸ್ ಥೇಟರ್ ಮುಂದೆ ಅಲ್ಲಕಲ್ಲೋಲ. ಹರಿದ ಚಪ್ಪಲಿ, ರಕ್ತಸಿಕ್ತ ರಸ್ತೆ, ಎಲ್ಲಿ ನೋಡಿದರಲ್ಲಿ ಹೊಗೆ… ಇದಕ್ಕೆಲ್ಲ ಕಾರಣವಾಗಿದ್ದ ಮಾಲೀಕ ಮಾತ್ರ ತಣ್ಣಗೆ ಕುಳಿತುಬಿಟ್ಟಿದ್ದ. ಇದೆಲ್ಲ ನಡೆಯುತ್ತಿರುವಾಗ ಕೆ.ಸಿ.ಎನ್.ಗೌಡರು ತಮ್ಮ ಸೋದರ ರುದ್ರೇಗೌಡರ ಜತೆ ಚೆನ್ನೈಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದಾಕ್ಷಣ ನೇರವಾಗಿ ಥೇಟರ್‍ಗೆ ಬಂದರು. ಜನರನ್ನು ಸಮಾಧಾನ ಪಡಿಸಿದರು. ಬಂಗಾರದ ಮನುಷ್ಯವೇ ಪ್ರದರ್ಶನವಾಗುತ್ತದೆಂದು ಭರವಸೆ ಕೊಟ್ಟರು. ಇನ್ನೇನು ಮಾಲೀಕರೊಂದಿಗೆ ಮಾತಾಡಬೇಕೆಂದು ಒಳಹೊರಟಿದ್ದರು. ಅಷ್ಟರಲ್ಲಿ ಕಲ್ಲೊಂದು ನೇರವಾಗಿ ರುದ್ರೇಗೌಡರ ಕಣ್ಣಿಗೆ ಬಿದ್ದು ಬಿಟ್ಟಿತು. ಕಣ್ಣಿಂದ ರಕ್ತ ಚಿಲ್ ಚಿಲ್…ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಇತ್ತ ಗೌಡರು ಮಾಲೀಕರೊಂದಿಗೆ ಮಾತಾಡಿದರು. ಇಷ್ಟೆಲ್ಲಾ ಅನಾಹುತ ನಿರೀಕ್ಷೆ ಮಾಡದಿದ್ದ ಆ ಓನರ್ ಥಂಡಾ ಹೊಡೆದು ಕುಳಿತಿದ್ದ. ಅಹಂಕಾರದಿಂದ ಮೆರೆದಿದ್ದ ಆತ ಇನ್ನೊಂದು ಮಾತಾಡದೆ ಪ್ರದರ್ಶನಕ್ಕೆ ಒಪ್ಪಿಗೆ ಕೊಟ್ಟ. ರಾತ್ರಿ ಹೊತ್ತಿಗೆ ಮತ್ತೆ ಬಂಗಾರದ ಮನುಷ್ಯ ಸ್ಟೇಟ್ಸ್ ಚಿತ್ರಮಂದಿರದ ಬೆಳ್ಳಿತೆರೆ ಮೇಲೆ ಬಂಗಾರದಂತೆ ಹೊಳೆಯಲು ಆರಂಭಿಸಿದ. ಯಾವಾಗ ಮತ್ತೆ ಬಂಗಾರ ಬೆಳಗಿತೋ….ರಾಜ್‍ಕುಮಾರ್‍ಗೆ ಜೈ ಎನ್ನುವ ಸದ್ದು ಇಡೀ ಬೆಂಗಳೂರಿನ ಮನೆ ಮನೆಗಳಿಗೆ ಕೇಳಿಸಿತು. ಕರುನಾಡಿನ ತುಂಬೆಲ್ಲಾ ಹೂಂಕರಿಸಿತು. ಹಾಗಿತ್ತು ನೋಡಿ ಒಬ್ಬ ಅಣ್ಣಾವ್ರ ಖದರ್ರು… ಜೊತೆಗೆ ಕನ್ನಡಿಗರ ಪವರ್ರು…

(‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ಮೊಬೈಲ್‌ – 9448110034, ದೂರವಾಣಿ – 0836 – 4252498 ಸಂಪರ್ಕಿಸಿ.)

‘ಬಂಗಾರದ ಮನುಷ್ಯ’ ಚಿತ್ರದಲ್ಲಿ ರಾಜಕುಮಾರ್, ಭಾರತಿ

ಈ ಬರಹಗಳನ್ನೂ ಓದಿ