ರಂಗಭೂಮಿ ದಿಗ್ಗಜ ಬಿ.ವಿ.ಕಾರಂತರು ಸಿನಿಮಾರಂಗದಲ್ಲೂ ಛಾಪು ಮೂಡಿಸಿದವರು. ಇಂದು (ಸೆಪ್ಟೆಂಬರ್ 19) ಅವರ ಜನ್ಮದಿನ. ಕಾರಂತ ನಿರ್ದೇಶನದ ‘ಚೋಮನ ದುಡಿ’ ಚಿತ್ರದಲ್ಲಿ ಮೇಕಪ್ ಕಲಾವಿದರಾಗಿದ್ದ ಎನ್.ಕೆ.ರಾಮಕೃಷ್ಣ ಚಿತ್ರೀಕರಣದ ಸಂದರ್ಭವೊಂದನ್ನು ಸ್ಮರಿಸಿಕೊಂಡಿದ್ದಾರೆ.
ಬೆಳ್ತಂಗಡಿ ಸಮೀಪದ ಗ್ರಾಮವೊಂದರಲ್ಲಿ ‘ಚೋಮನ ದುಡಿ’ (1975) ಸಿನಿಮಾ ಚಿತ್ರೀಕರಣ ನಡೆದಿತ್ತು. ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತಾದರೂ ಬಾಡಿಗೆಗೆ ತಂದಿದ್ದ ಕ್ಯಾಮೆರಾವನ್ನು ಹಿಂದಿರುಗಿಸಬೇಕಾದ ಒತ್ತಡವಿತ್ತು. ಎರಡು ದಿನಗಳಲ್ಲಿ ಚಿತ್ರೀಕರಣ ಮುಗಿಸಲೇಬೇಕೆಂದು ಕಾರಂತರು ಎಲ್ಲರನ್ನೂ ಸಜ್ಜುಗೊಳಿಸಿದರು. ಆಗ ನಾವು ಸತತ ನಲವತ್ತೆಂಟು ಗಂಟೆಗಳ ಕಾಲ ಚಿತ್ರೀಕರಣ ನಡೆಸಿದ್ದೆವು. ಊಟ-ತಿಂಡಿಗೂ ಹೆಚ್ಚಿನ ಸಮಯವಿರುತ್ತಿರಲಿಲ್ಲ. ಕಾರಂತರು ತುಂಬಾ ತಾಳ್ಮೆಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚಿತ್ರೀಕರಣ ನಡೆಸಿದರು.

ಸನ್ನಿವೇಶವೊಂದರಲ್ಲಿ ಚೋಮನ ಪಾತ್ರ ಮಾಡಿದ್ದ ನಟ ವಾಸುದೇವರಾವ್ ಅವರು ದುಡಿ ನುಡಿಸಬೇಕಿರುತ್ತದೆ. ಅದೊಂದು ಸುದೀರ್ಘ ಸನ್ನಿವೇಶ. ನಿರಂತರ ಚಿತ್ರೀಕರಣದಿಂದಾಗಿ ಎಲ್ಲರೂ ಬಳಲಿದ್ದರು. ವಾಸುದೇವರಾವ್ ಎಷ್ಟು ಬಾರಿ ದುಡಿ ನುಡಿಸಿದರೂ ಕಾರಂತರಿಗೆ ಅದು ಸಮಾಧಾನ ತರಲಿಲ್ಲ. ಸ್ವತಃ ಅವರೂ ನುಡಿಸಿ ತೋರಿಸಿದರು. ಮತ್ತೆ ಮತ್ತೆ ದುಡಿ ನುಡಿಸುವ ಪ್ರಯತ್ನದಲ್ಲಿ ವಿಫಲರಾದ ವಾಸುದೇವರಾವ್ ಕೋಪ ಮಾಡಿಕೊಂಡರು. ಆದರೆ ಕಾರಂತರು ಮಾತ್ರ ತಾಳ್ಮೆಯಿಂದಲೇ ಇದ್ದರು. ಸನ್ನಿವೇಶ ಓಕೆ ಆಗದಿದ್ದಾಗ ಕಾರಂತರು ಚಿತ್ರೀಕರಣದ ಸ್ಥಳದಿಂದ ನಿರ್ಗಮಿಸಿ, ಹತ್ತು ನಿಮಿಷಗಳ ನಂತರ ಮರಳಿದರು. ಬಂದವರೇ, “ಚೆನ್ನಾಗಿ ನುಡಿಸುತ್ತಿದ್ದೀರಿ, ಇನ್ನೊಮ್ಮೆ ಪ್ರಯತ್ನಿಸಿ. ಬೇಕಿದ್ದರೆ ಹತ್ತು ನಿಮಿಷ ವಿರಮಿಸಿ” ಎಂದು ವಾಸುದೇವರಾವ್ ಅವರಿಗೆ ಸೂಚಿಸಿದರು. ವಿರಾಮ ಬೇಡವೆಂದ ವಾಸುದೇವರಾವ್ ಶಾಟ್‌ಗೆ ಸಜ್ಜಾದರು. ಈ ಬಾರಿ ಒಂದೇ ಟೇಕ್‌ಗೆ ಶಾಟ್ ಓಕೆ ಆಯ್ತು. ಹೀಗೆ, ಸತತ ನವಲತ್ತೆಂಟು ಗಂಟೆಗಳ ಚಿತ್ರೀಕರಣದಲ್ಲಿ ಹಲವು ಅನುಭವಗಳಾಗಿವೆ. ಮುಂದೆ ಮತ್ತಾವ ಚಿತ್ರಕ್ಕೂ ನಾನು ಹೀಗೆ ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡ ಉದಾಹರಣೆಯಿಲ್ಲ.
