ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ದಾಖಲೆ ಬರೆದ ‘ಕೋಟಿ ಚೆನ್ನಯ’ ಸಿನಿಮಾಗೆ 48 ವರ್ಷ!

ಪೋಸ್ಟ್ ಶೇರ್ ಮಾಡಿ
ಚರಣ್ ಐವರ್ನಾಡು
ಬರಹಗಾರ

ತುಳುನಾಡಿನ ಅವಳಿ ವೀರರ ಕಥನ ‘ಕೋಟಿ ಚೆನ್ನಯ’ ಸಿನಿಮಾ ತೆರೆಕಂಡು ಇದೀಗ 48 ವರ್ಷ. ತುಳು ಚಿತ್ರರಂಗದಲ್ಲಿ ಇತಿಹಾಸ ಬರೆದ ಈ ಮಹತ್ವದ ಪ್ರಯೋಗದ ಬಗ್ಗೆ ಚರಣ್ ಐವರ್ನಾಡು ಬರೆದಿದ್ದಾರೆ.

ತುಳು ಚಿತ್ರರಂಗದಲ್ಲಿ ಇತಿಹಾಸ ಬರೆದ ‘ಕೋಟಿ ಚೆನ್ನಯ’ ಸಿನಿಮಾ ಬಿಡುಗಡೆಯಾಗಿ ಇದೀಗ ನಲವತ್ತೆಂಟು ವರ್ಷಗಳು ಸಂದಿವೆ. ಜೂನ್ 15, 1973ರಲ್ಲಿ ಮಂಗಳೂರಿನ ಜ್ಯೋತಿ ಥಿಯೇಟರ್‌ನಲ್ಲಿ ಬಿಡುಗಡೆಯಾದ ‘ಕೋಟಿ ಚೆನ್ನಯʼ ಸಿನಿಮಾ 150 ದಿನಗಳ ಕಾಲ ದಾಖಲೆಯ ಪ್ರದರ್ಶನ ನೀಡಿ ದಾಖಲೆ ಬರೆಯಿತು. ಮಿನುಗು ತಾರೆ ಕಲ್ಪನಾ ಅಭಿನಯದ ಈ ಚಿತ್ರದಲ್ಲಿ ಕೋಟಿ ಮತ್ತು ಚೆನ್ನಯರಾಗಿ ಅಭಿನಯಿಸಿದ ಸುಭಾಷ್‌ ಪಡಿವಾಳ ಮತ್ತು ವಾಮನ್‌ ರಾಜ್‌ ಜೋಡಿಯನ್ನು ತುಳುನಾಡು ಇನ್ನೂ ಮರೆತಿಲ್ಲ!

ನಾನು ನನ್ನ ಜೀವನದಲ್ಲಿ ನೋಡಿದ ಮೊದಲ ಚಲನಚಿತ್ರ ತುಳುವಿನ ‘ಕೋಟಿ ಚೆನ್ನಯ’. ಐವರ್ನಾಡು ಶಾಲೆಯಲ್ಲಿ ಸೆಲ್ಯೂಲಾಯ್ಡ್ ರೀಲ್ ಮೂಲಕ ಬಿಳಿ ಪರದೆಯ ಮೇಲೆ ‘ಕೋಟಿ ಚೆನ್ನಯ’ ಸಿನಿಮಾವನ್ನು ಶಾಲೆಯ ಮಕ್ಕಳಿಗೆ ತೋರಿಸಲಾಯಿತು. ಆಗ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಮೊಟ್ಟೆಮನೆ ವೀರಪ್ಪ ಗೌಡರು ಎಲ್ಲಾ ಮಕ್ಕಳಿಂದ ಐದೈದು ರೂಪಾಯಿ ಸಂಗ್ರಹಿಸಿ ಈ ಚಿತ್ರವನ್ನು ತೋರಿಸಿದ್ದರು. ಬಹುಶಃ ನಾನು ಆಗ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದೆ ಅನ್ನಿಸುತ್ತದೆ. ದೇಯಿ ಬೈದ್ಯೇತಿ ಅವಳಿ ಶಿಶುಗಳನ್ನು ಬಿಟ್ಟು ಕೆರೆಗೆ ಬಟ್ಟೆ ತೊಳೆಯಲು ಹೋಗುವಾಗ ತೆಂಗಿನ ಮಡಲ್ ಬಿದ್ದು ಸಾಯುವ ದೃಶ್ಯ ನನ್ನನ್ನು ಆಗಲೇ ಕಾಡಿತ್ತು. ಇದಾದ ಮೇಲೆ ನಾನು ಈ ಚಲನಚಿತ್ರವನ್ನು ಎರಡು ಬಾರಿ ನೋಡಿದ್ದೇನೆ.

ನಿರ್ದೇಶಕ ವಿಶುಕುಮಾರ್‌, ಛಾಯಾಗ್ರಾಹಕ ಎನ್‌.ಜಿ.ರಾವ್‌ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

1967ರಲ್ಲಿ ವಿಶು ಕುಮಾರ್ ಅವರು ಅವಳಿ ವೀರರ ಕಥನವನ್ನು ಇಟ್ಟುಕೊಂಡು ‘ಕೋಟಿ ಚೆನ್ನಯ’ ನಾಟಕವನ್ನು ಬರೆಯುತ್ತಾರೆ. ಇದಕ್ಕಿಂದ ಮುಂಚೆಯೇ ಕೋಟಿ ಚೆನ್ನಯ ಯಕ್ಷಗಾನಗಳು ಬಂದಿದ್ದವು. ಪಂಜೆ ಮಂಗೇಶರಾಯರು ಕನ್ನಡದಲ್ಲಿ ಮೊದಲ ಬಾರಿಗೆ ಕೋಟಿ ಚೆನ್ನಯರ ಕಥಾ ವಸ್ತುವನ್ನು ಇಟ್ಟುಕೊಂಡು ನೀಳ್ಗತೆ ಬರೆದಿದ್ದರೂ ಅದು ಕನ್ನಡದ್ದಲ್ಲದ ಸಂಸ್ಕೃತಿಯ ಕಥನವಾದ್ದರಿಂದ ತುಳುವಿನ ಸೊಗಡು ಕನ್ನಡದಲ್ಲಿ ಬಾರದು ಎಂದು ಮುನ್ನುಡಿಯಲ್ಲಿ ವಿಶುಕುಮಾರ್ ಹೇಳುತ್ತಾರೆ. ಈ ನಾಟಕ ಕೃತಿಯನ್ನು ಸ್ವತಃ ನಾಟಕಕಾರರೇ ಪ್ರಕಟಿಸುತ್ತಾರೆ. ಹೀಗೆ ಮೌಖಿಕ ಪರಂಪರೆಯಿಂದ ಬಂದ ಪಾಡ್ದನ ಕೃತಿಯೊಂದು ಆರಾಧನೆಯ ಸ್ವರೂಪ ಪಡೆದು ನಂಬಿಕೆಯೊಂದಿಗೆ ಮಿಲಿತವಾದ ದೈವಾರಾಧನೆಯಂತಹ ಆರಾಧನೆಯ ನರ್ತನವಾಗಿ ಜನಮಾನಸದಲ್ಲಿ ಉಳಿದುಕೊಂಡು ಯಕ್ಷಗಾನ ಎಂಬ ಪ್ರದರ್ಶನ ಕಲೆಯಲ್ಲಿ ಗಟ್ಟಿಯಾಗುತ್ತದೆ. ಮುಂದೆ ನಾಟಕವಾಗಿ ಬೆಳೆದು ಸಿನಿಮಾದ ತನಕ ಬಂದ ಒಟ್ಟಾರೆ ಬೆಳವಣಿಗೆ ಈ ಜಾನಪದ ಕಥನಕ್ಕೆ ಇರುವ ಶಕ್ತಿಯನ್ನು ತೋರಿಸುತ್ತದೆ.

ವಿಶುಕುಮಾರ್ ಹೇಳುವಂತೆ ಕನ್ನಡದಲ್ಲಿ ತುಳುವಿನ ಸೊಗಡನ್ನು ಕಟ್ಟಲು ಸಾಧ್ಯ ಇಲ್ಲ ಎಂಬ ನಿಲುವು ನನಗೆ ಅವರಲ್ಲಿ ಇದ್ದ ಅಕಾಡೆಮಿಕ್ ಚಿಂತನೆಗೆ ಮತ್ತು ಹೊಸತನಕ್ಕೆ ತೆರೆದುಕೊಳ್ಳುವ ಪ್ರಭುದ್ಧತೆಯಾಗಿ ಕಾಣುತ್ತದೆ. ಹೀಗಾಗಿ ಇವರಿಗೆ ‘ಕೋಟಿ ಚೆನ್ನಯ’ ಸಿನಿಮಾ ಮಾಡಲು ಸಾಧ್ಯವಾಯಿತು. ಸಾಂಪ್ರದಾಯಿಕವಾಗಿ ಕಟ್ಟಲ್ಪಟ್ಟ ಯಕ್ಷಗಾನದಲ್ಲಿ ಸಾಧ್ಯವಾಗದ ತುಳುವಿನ ಸಹಜ ಬದುಕಿನ ಪ್ರತಿನಿಧೀಕರಣವನ್ನು ಮಿತಿಗಳ ಜೊತೆ ಜೊತೆಗೆ ರಂಗದ ಮೇಲೆ ಕೊಂಚ ವಿಸ್ತರಿಸಿ ಅದನ್ನು ಸಿನಿಮಾದಲ್ಲಿ ಪೂರ್ಣವಾಗಿ ಕಟ್ಟಲು ವಿಶುಕುಮಾರ್ ಪ್ರಯತ್ನಿಸುತ್ತಾರೆ. ತಾವೇ ಬರೆದ ನಾಟಕವನ್ನು ಮುದ್ದು ಸುವರ್ಣ ಅವರ ‘ಪ್ರಜಾ ಫಿಲಂಸ್’ ಬ್ಯಾನರ್ ನ ಅಡಿಯಲ್ಲಿ ವಿಶು ಕುಮಾರ್ ‘ಕೋಟಿ ಚೆನ್ನಯ’ ಸಿನಿಮಾ ಮಾಡುತ್ತಾರೆ. ಕೋಟಿ, ಚೆನ್ನಯ ಪಾತ್ರ ಮಾಡಿದ ಕಲಾವಿದರಾದ ಸುಭಾಷ್ ಪಡಿವಾಳ ಮತ್ತು ವಾಮನ್ ರಾಜ್ ಜೋಡಿ ಸಿನಿಮಾದಲ್ಲಿ ಮಿಂಚುತ್ತದೆ.

‘ಕೋಟಿ ಚೆನ್ನಯ’ ಪಾತ್ರಧಾರಿಗಳಾದ ಸುಭಾಷ್ ಪಡಿವಾಳ ಮತ್ತು ವಾಮನ್ ರಾಜ್ ಅವರೊಂದಿಗೆ ನಟಿ ಕಲ್ಪನಾ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಎಕ್ಕ ಸಕ್ಕಾ…ಎಕ್ಕ ಸಕ್ಕಾ….ಎಕ್ಕ ಸಕ್ಕಲಾ….ಅಕ್ಕಾ ಪಂಡುದ್ ಲೆಪ್ಪುಣಕುಳು ಬತ್ತೆರಿತ್ತೆಲಾ…ಎಂಬ ಪ್ರೊ. ವಿವೇಕ್ ರೈಗಳು ಬರೆದ ಹಾಡು, ಹಿರಿಯ ವಿದ್ವಾಂಸ ಅಮೃತ ಸೋಮೇಶ್ವರ ಅವರು ಬರೆದ, ಪಿ.ಬಿ.ಶ್ರೀನಿವಾಸ್ ಹಾಡಿದ ‘ಜೋಡು ನಂದಾ ದೀಪ ಬೆಳಗುಂಡ್ ತುಳುವ ನಾಡುದ ಗುಂಡೊಡು…’ ಹಾಡುಗಳನ್ನು ತುಳುವರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಸ್.ಜಾನಕಿ ಹಾಡಿದ ‘ಎಕ್ಕಸಕ್ಕಾ’ ಹಾಡಿನಲ್ಲಿ ತನ್ನ ತಮ್ಮಂದಿರು ಮನೆಗೆ ಬಂದ ಸಂಭ್ರಮದಲ್ಲಿ ಹಾಡಿ ಕುಣಿಯುವ ಕಿನ್ನಿದಾರು ಪಾತ್ರದಾರಿ ‘ಮಿನುಗುತಾರೆ ಕಲ್ಪನಾ’ ಹಾಡಿನ ಸೌಂದರ್ಯವನ್ನು ಹೆಚ್ಚಿಸುತ್ತಾರೆ.

ಚಿತ್ರದ ತಾಂತ್ರಿಕ ನಿರ್ದೇಶಕ ನಾಗೇಶ್ ಬಾಬ, ಫೈಟರ್ ಶೆಟ್ಟಿ, ನಿರ್ದೇಶಕ ವಿಶುಕುಮಾರ್‌ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಇಂದಿಗೂ ಈ ಸಿನಿಮಾದ ಒಂದು ಡೈಲಾಗ್ ‘ಸತ್ಯಡ್ ಬತ್ತಿನಕುಳೆಗ್ ತಿಗಳೆಡ್ ಸಾದಿ ಕೊರ್ಪ, ಅನ್ಯಾಯಡ್ ಬತ್ತಿನಕುಳೆಗ್ ಸುರ್ಯೆಡ್ ಸಾದಿಕೊರ್ಪ…(ಸತ್ಯದಲ್ಲಿ ಬಂದವರಿಗೆ ಎದೆಯಲ್ಲಿ ದಾರಿ ಕೊಡುತ್ತೇವೆ, ಅನ್ಯಾಯದಲ್ಲಿ ಬಂದವರಿಗೆ ಸುರಗಿಯಲ್ಲಿ – ಎರಡೂ ಕಡೆ ಹರಿತವಾಗಿರುವ ಆಯುಧ – ದಾರಿ ಕೊಡುತ್ತೇವೆ) ಸ್ವತಃ ಕೋಟಿ ಚೆನ್ನಯರೇ ಹೇಳಿದ್ದಾರೆ ಎಂಬಂತೆ ಹೇಳಿಕೊಂಡು ಭಾವುಕರಾಗುವ ತುಳುವರು ಇದ್ದಾರೆ. ಕಾರ್ಕಳದ ಬಾರಾಡಿ ಬೀಡು, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಪಡುಬಿದ್ರಿ ಹಾಗೂ ಕ್ಲೈಮ್ಯಾಕ್ಸ್ ನ ಕಾಳಗವನ್ನು ಕಾರ್ಕಳದ ಬೈಲೂರಿನಲ್ಲಿ ಚಿತ್ರೀಕರಿಸಲಾಯಿತು. ಮಂಗಳೂರಿನ ಜ್ಯೋತಿ ಥಿಯೇಟರ್ ನಲ್ಲಿ 150 ದಿನಗಳು, ಉಡುಪಿಯ ಅಲಂಕಾರ ಥಿಯೇಟರ್ ನಲ್ಲಿ 125 ದಿನಗಳ ಕಾಲ, ಮೂಡುಬಿದರೆ ಮತ್ತು ಪುತ್ತೂರಿನಲ್ಲಿ 75 ದಿನಗಳ ಕಾಲ, ಮುಂಬೈನಲ್ಲಿ ಒಂದು ತಿಂಗಳು ಈ ಚಿತ್ರ ಯಶಸ್ವಿ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು.

ಚಿತ್ರದ ತಾರಾಬಳಗದಲ್ಲಿ ಮಿನುಗುತಾರೆ ಕಲ್ಪನಾ, ಲೋಕಯ್ಯ ಶೆಟ್ಟಿ, ಕುದ್ಕಾಡಿ ವಿಶ್ವನಾಥ ರೈ, ಫೈಟರ್ ಶೆಟ್ಟಿ, ಚೆನ್ನಪ್ಪ ಸುವರ್ಣ, ಆನಂದ ಗಾಣಿಗ ಮೊದಲಾದವರು ಇದ್ದರು. ರಾಜ್ಯ ಸರಕಾರದ ಆ ವರ್ಷದ ನಾಲ್ಕನೇ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ‘ಕೋಟಿ ಚೆನ್ನಯ’ ಚಲನಚಿತ್ರಕ್ಕೆ ಸಂದಿತು. 2007ರಲ್ಲಿ ಇದೇ ಕಥಾವಸ್ತುವನ್ನು ಇಟ್ಟುಕೊಂಡು ಆನಂದ್ ಪಿ. ರಾಜು ನಿರ್ದೇಶನದ ಬಾಲಕೃಷ್ಣ ಶೆಟ್ಟಿ, ಶೇಖರ್ ಕೋಟ್ಯಾನ್, ವಿನಯ ಪ್ರಸಾದ್, ನೀತು ಅಭಿಯಾನದ ‘ಕೋಟಿ ಚೆನ್ನಯ’ ಸಿನಿಮಾ ಬಂತು. ಆದರೆ ವಿಶು ಕುಮಾರ್ ಅವರ ಕೋಟಿ ಚೆನ್ನಯ ಸಿನಿಮಾ ತುಳುವರ ಮನಸ್ಸಲ್ಲಿ ಅಮರವಾಗಿ ಉಳಿದುಕೊಳ್ಳುತ್ತದೆ.

ಚಿತ್ರೀಕರಣ ಸಂದರ್ಭದಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಅಪರೂಪದ ಫೋಟೋ ಇದು. ಚಿತ್ರದ ನಿರ್ದೇಶಕ ವಿಶುಕುಮಾರ್‌, ಸಹನಿರ್ದೇಶಕ ನಾಗೇಶ್ ಬಾಬ, ಛಾಯಾಗ್ರಾಹಕ ಎನ್‌.ಜಿ.ರಾವ್‌, ಪ್ರಮುಖ ಕಲಾವಿದರಾದ ಕಲ್ಪನಾ, ಸುಭಾಷ್ ಪಡಿವಾಳ, ವಾಮನ್ ರಾಜ್ ಮತ್ತಿತರರಿದ್ದಾರೆ.

ಈ ಬರಹಗಳನ್ನೂ ಓದಿ