ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಈ ಸಿನಿಮಾದಲ್ಲಿ ಸೈಕಲ್ಲೂ ಒಂದು ಪಾತ್ರ!

ಪೋಸ್ಟ್ ಶೇರ್ ಮಾಡಿ
ಬಿ.ಎಸ್.ಲಿಂಗದೇವರು
ಚಿತ್ರನಿರ್ದೇಶಕ

ತೆಳುಹಾಸ್ಯದೊಂದಿಗೆ ಇಡೀ ಸಿನಿಮಾ ಕಟ್ಟಿರುವ ಕ್ರಮ ನಮ್ಮ ಮನಸ್ಸಿನ ಆಳಕ್ಕಿಳಿಯುತ್ತದೆ. ಮೆಲೋಡ್ರಾಮಾ, ರೋಮ್ಯಾನ್ಸ್‌, ಫೈಟ್‌ ಬಿಟ್ಟು ಒಂದು ಒಳ್ಳೆಯ ಕಥೆಗೆ ಚಿತ್ರಕಥೆಯೂ ಪೂರಕವಾಗಿ ಮೂಡಿಬಂದರೆ ಗೆಲುವು ಖಚಿತ ಎನ್ನುವುದನ್ನು ‘ಸೈಕಲ್‌’ (2017) ಮರಾಠಿ ಸಿನಿಮಾ ಮತ್ತೆ ಸಾಬೀತು ಪಡಿಸಿದೆ.

ರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾಗಳು ತನ್ನ ವಸ್ತುವಿನಿಂದಲೇ ಹೆಚ್ಚೆಚ್ಚು ಜನಪ್ರಿಯತೆ ಗಳಿಸಿವೆ. ಅದರಲ್ಲೂ ಮರಾಠಿ ಸಿನಿಮಾ ಕಳೆದ ಹದಿನೈದು ವರ್ಷಗಳಿಂದ ಅಪರೂಪದ ಸಿನಿಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ಕುಂಟೆ ನಿರ್ದೇಶನದ ‘ಸೈಕಲ್’ ಕೂಡ ನಾವು ಗಮನಿಸಬೇಕಾದ ಸಿನಿಮಾ.

‘ಮಾಡಿದ್ದುಣ್ಣೋ ಮಹಾರಾಯ’ ಎಂಬ ಮಾತು ಕನ್ನಡದಲ್ಲಿ ಬಹಳ ಪ್ರಚಲಿತದಲ್ಲಿದೆ. ಇದರ ಅರ್ಥ ನಾವು ಮಾಡಿದ ಕರ್ಮವೇ ನಮಗೆ ಫಲ ನೀಡುತ್ತದೆ. ಅದನ್ನೇ ನಾವು ಅನುಭವಿಸಬೇಕೇ ಹೊರತು ನಮ್ಮ ಸುಖ ದುಃಖಗಳಿಗೆ ಬೇರೆಯವರನ್ನು ದೂಷಿಸಲು ಸಾಧ್ಯವಿಲ್ಲ ಮತ್ತು ನಮ್ಮ ಸುಖ ದುಃಖಗಳಿಗೆ ನಾವೇ ಕಾರಣ ಎಂಬುದಾಗಿದೆ. ಈ ‘ಸೈಕಲ್’ ಸಿನಿಮಾ ಮಾಡಿದ್ದುಣ್ಣೋ ಮಹಾರಾಯ ಎಂಬ ಮಾತಿಗೆ ಅತ್ಯುತ್ತಮ ಉದಾಹರಣೆ.

ಸುತ್ತಮುತ್ತಲಿನ ಹಳ್ಳಿಗಳ ಜನರು ಅಭಿಮಾನದಿಂದ ಮತ್ತು ಅತ್ಯಂತ ಗೌರವದಿಂದ ಕಾಣುವ ವ್ಯಕ್ತಿ ಕೇಶವ. ಜ್ಯೋತಿಷ್ಯ ಹೇಳುವ ಕೇಶವನಿಗೆ ತನ್ನ ತಾತನಿಂದ ಉಡುಗೊರೆಯಾಗಿ ಬಂದಿರುವ ಸೈಕಲ್ ಮೇಲೆ ಅತೀವ ಪ್ರೀತಿ. ಆತ ಯಾರಿಗೂ ಆ ಸೈಕಲ್ ಕೊಡುವುದಿಲ್ಲ. ಆದರೂ ಸುತ್ತಮುತ್ತಲಿನ ಹಳ್ಳಿಗರಿಗೆ ಆ ಸೈಕಲನ್ನು ಒಂದು ರೌಂಡ್ ಓಡಿಸಬೇಕು ಎನ್ನುವ ಆಸೆ. ಇಂತಹ ಪ್ರೀತಿಪಾತ್ರವಾದ ಸೈಕಲನ್ನು ಇಬ್ಬರು ಕಳ್ಳರು (ಮಾಂಗ್ಯ ಮತ್ತು ಗಜ್ಯ) ಕದಿಯುತ್ತಾರೆ. ಹಳ್ಳಿಯಿಂದ ಹಳ್ಳಿಗೆ ಇವರಿಬ್ಬರೂ ಸೈಕಲ್‌ನಲ್ಲಿ ಪ್ರಯಾಣಿಸುವಾಗ ಕೇಶವನ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ.

ಸ್ವಾತಂತ್ರ್ಯ ನಂತರದ ಕಾಲಘಟ್ಟದ ಹಿನ್ನೆಲೆಯಲ್ಲಿ, ತೆಳುಹಾಸ್ಯದೊಂದಿಗೆ ಇಡೀ ಸಿನಿಮಾ ಕಟ್ಟಿರುವ ಕ್ರಮ ನಮ್ಮ ಮನಸ್ಸಿನ ಆಳಕ್ಕಿಳಿಯುತ್ತದೆ. ತೀರಾ ವಿಶ್ಲೇಷಣಾತ್ಮಕವಾಗಿ, ತರ್ಕಬದ್ಧವಾಗಿ ಈ ಸಿನಿಮಾ ನೋಡಬಾರದು ಎನ್ನುವುದು ನನ್ನ ಅನಿಸಿಕೆ. ಮೆಲೋಡ್ರಾಮಾ, ರೋಮ್ಯಾನ್ಸ್‌, ಫೈಟ್‌ಗಳನ್ನು ಬಿಟ್ಟು ಒಂದು ಒಳ್ಳೆಯ ಕಥೆಗೆ ಚಿತ್ರಕಥೆಯೂ ಪೂರಕವಾಗಿ ಮೂಡಿಬಂದರೆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವುದು ಈ ಸಿನಿಮಾ ಮುಖೇನ ಮತ್ತೊಮ್ಮೆ ಸಾಬೀತಾಗಿದೆ.

ಪ್ರತಿಭಾವಂತ ಕಲಾವಿದರ ಆಯ್ಕೆ ಮತ್ತು ಲೋಕೇಶನ್‌ಗಳು ಚಿತ್ರದ ಸಾವಯವ ಬೆಳವಣಿಗೆಗೆ ಸಹಾಯ ಮಾಡಿವೆ. ಮನರಂಜನೆಗಾಗಿಯೇ ಸಿನಿಮಾ ಎನ್ನುವ ಪ್ರೇಕ್ಷಕರಿಗೆ ಖಂಡಿತ ಈ ಸಿನಿಮಾ ಇಷ್ಟವಾಗುತ್ತದೆ ಎನ್ನುವ ಭಾವನೆ ನನ್ನದು. ಇಂತಹ ಚಿತ್ರ ಕೊಟ್ಟ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಅಭಿನಂದನೆಗಳು. ನೆಟ್‌ಫ್ಲಿಕ್ಸ್‌ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮ್‌ ಆಗುತ್ತಿದ್ದು ಬಿಡುವು ಮಾಡಿಕೊಂಡು ನೋಡಿ.

ಈ ಬರಹಗಳನ್ನೂ ಓದಿ