ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬ್ಲೂ ಐಸ್‌ ಕಲರ್‌ಫುಲ್‌ ಮೈ ಡ್ರೆಸ್; ದೃಶ್ಯಕಟ್ಟುವ ಕಲೆಗಾರಿಕೆ

ಪೋಸ್ಟ್ ಶೇರ್ ಮಾಡಿ
ಕೆ.ಫಣಿರಾಜ್‌
ಸಿನಿಮಾ ವಿಶ್ಲೇಷಕ

ಸದ್ಯಕ್ಕೆ ಅಸಾಧ್ಯವಾಗಿರುವ ಈ ಆದರ್ಶವನ್ನು ಪೋಲಿನಾ ಯಾವ ರಮ್ಯತೆಯ ಪ್ರದರ್ಶನ ವ್ಯಸನಕ್ಕೆ ಬೀಳದೆ, ಸಹಜವೆನ್ನಿಸುವಂತೆ ದರ್ಶನ ಮಾಡಿಸಿಬಿಡುತ್ತಾರೆ! ಇದು ಅದ್ಭುತ! ಬದುಕಿನ ಅರಿವು, ಸಿನಿಮಾ ಕಸುಬು, ಸುಖಿ ಬದುಕಿನ ಕಾಣ್ಕೆಗಳ ದರ್ಶನ ಹುಡುಕಾಟವಿದ್ದಾಗ ಮಾತ್ರ ಹೊಮ್ಮುವ ಅಪ್ಪಟ ಕಲೆ ಇದು.

ಮೂರು ವರ್ಷದ ಬಲ್ಗೇರಿಯಾದ ಬಾಲಕಿ ಝನಾಳ, ಬೇಸಿಗೆಯ ದಿನಗಳ, ಅಂಕೆ ಇಲ್ಲದ ಆಟ, ತಿರುಗಾಟವನ್ನು ಪೋಲಿನ ಗುಮೇಲ ನಿರ್ದೇಶಿತ ಕ್ಯಾಮೆರಾವು ಯಾವುದೇ ಮಧ್ಯಪ್ರವೇಶವಿಲ್ಲದೆ ದೃಶ್ಯ ಚೌಕಟ್ಟಿನಲ್ಲಿ ಹಿಡಿದಿಡುತ್ತಾ ಹೋಗುತ್ತದೆ. ಸಹಜವಾದ ವಾತಾವರಣ ಶಬ್ಧ ಗ್ರಹಣದ ಹೊರತಾಗಿ ಬೇರಾವ ಶಬ್ದವನ್ನು ದೃಶ್ಯಕ್ಕೆ ಹೆಣೆಯಲಾಗಿಲ್ಲ. ಪುಟ್ಟಿ ಝನಾಳ 54 ನಿಮಿಷಗಳ  ಆಟ, ತಿರುಗಾಟಗಳ ಅಪರೂಪದ ದೃಶ್ಯಕಟ್ಟು ಈ ಡ್ಯಾಕುಮೆಂಟರಿ ಸಿನಿಮಾ! ಏನು ಮಹಾ! ದುಬಾರಿ ಕ್ಯಾಮೆರ, ದನಿಗ್ರಹಣ ಯಂತ್ರಗಳು, ನಗರದ ವಿರಾಮ ವಸತಿ ಸಮುಚ್ಛಯ ಮತ್ತೂ ಝನಾಳಂತಹ ದಿಟ್ಟ ಚೋಟಿ ಪೋರಿ ಸಿಕ್ಕರೆ, ನಾವು ಮಾಡ್ಬೋದು ಬಿಡಿ! ಅನಿಸುವ ಹಾಗೆ ಪೋಲಿನಾ ಈ ಸಾಕ್ಷ್ಯಚಿತ್ರ ಮಾಡಿದ್ದಾರೆ!

ಪೋಲಿನಾ ಈ ತುಂಟ ಹುಡುಗಿಯ ಬೆನ್ನು ಹತ್ತಿ, ಎಷ್ಟು ಗಂಟೆಗಳ ದೃಶ್ಯಗಳನ್ನು ಸೆರೆ ಹಿಡಿದಿರುವರೋ ಗೊತ್ತಿಲ್ಲ. ಸಿನಿಮಾದಲ್ಲಿ ಝನಾ ತೊಟ್ಟ ಉಡುಗೆಗಳು ಮೂರು ಭಿನ್ನ ಉಡುಗೆಗಳಾಗಿರುವುದರಿಂದ, ಮೂರು ದಿನ, ದಿನಕ್ಕೆ ಗರಿಷ್ಠ ಮೂರು ಗಂಟೆ- ಅಂದರೆ 9 ಗಂಟೆ ವಿಡಿಯೋ ಹಿಡಿದಿಟ್ಟುಕೊಂಡಿದ್ದಾರೆ ಎಂದಿಟ್ಟುಕೊಳ್ಳೋಣ. ಆ 9 ಗಂಟೆಯ ವಿಡಿಯೋ ದಾಖಲೆಯನ್ನು ಪೋಲಿನ, 54 ನಿಮಿಷದ ದೃಶ್ಯ ಕಟ್ಟುಗಳ ಸರಣಿಯಲ್ಲಿ ನೀಡಿದ್ದಾರೆ. ಅಂದರೆ ಹತ್ತಿರ ಹತ್ತಿರ ಚಿತ್ರೀಕರಿಸಿದ ಒಂಬತ್ತು ತಾಸಲ್ಲಿ, ಎಂಟು ತಾಸು  ಕತ್ತರಿಸಿ, 55 ನಿಮಿಷಗಳ ಝನಾಳ ಆಟ-ತಿರುಗಾಟ-ತುಂಟಾಟವನ್ನು ಸಂಕಲಿಸಿ ಕೊಟ್ಟಿದ್ದಾರೆ! 

ಪೋಲಿನರ ಕಲೆಯ ಕಸುವು ಕಾಣಬೇಕಾದ್ದು ಇಲ್ಲಿ! ಆ ತುಂಟಿಯ ಸಹಜ ಆಟ – ತಿರುಗಾಟದ ಚಿತ್ರಾವಳಿಗಳಿಂದ ಪೋಲಿನ ಏನು ಹೇಳುತ್ತಾರೆ!? ಝನಾ ಯಾರು? ಎಂಬ ಒಂದೇ ಸುಳಿವನ್ನು ಪೋಲಿನಾ ಕೊಡುವುದಿಲ್ಲ. ಆ ತುಂಟಿ ತನ್ನ ಆಟ ತಿರುಗಾಟದಲ್ಲಿ ಮುಖಾಬಲಾ ಮಾಡುವ ಎಲ್ಲ ಮಕ್ಕಳು, ಹಿರಿಯರಿಗೂ ಆಕೆ ಅಪರಿಚಿತಳು. ಹಿರಿಯರು ಅವಳ ಜೊತೆ ಸಹನೆಯಿಂದ, ಅವಳ ವಯಸ್ಸಿನ ಅಥವ ಅವಳಿಗಿಂತ ಹಿರಿಯ ಮಕ್ಕಳು ತಮ್ಮ ಆಟ ತುಟಾಂಟದಲ್ಲಿ ಆಕೆಯ ಜೊತೆ ಒಡನಾಡಿದ್ದರಲ್ಲಿ, ಒಂಬತ್ತರಲ್ಲಿ ಒಂದು ಪಾಲನ್ನು ಸಂಕಲಿಸಿ‌ ಕೊಟ್ಟಿದ್ದಾರೆ. 

ಈ ಸಂಕಲಿತ ದೃಶ್ಯಚಿತ್ರ ಸರಣಿಯು ಹೊಮ್ಮಿಸುವ ಭಾವವೆಂದರೆ, ಹುಟ್ಟಾ ಸ್ವತಂತ್ರರಾದ ಮನುಷ್ಯರಿಗೆ ಜೈವಿಕ ಉಳಿವಿನ ಸಂಪನ್ಮೂಲಗಳನ್ನು ಪೂರೈಸಿ, ಅವರವರ ಪಾಡಿಗೆ ಸ್ವತಂತ್ರ ಬದುಕು ನಡೆಸಲು ಬಿಟ್ಟರೆ! ಬಿಟ್ಟರೆ ಮನುಷ್ಯ ಜೀವಿ ಎಷ್ಟು ಕುತೂಹಲ, ಬದುಕುವ ಚೂಟಿ ಛಲ ಹಾಗು ಸಹಜ ಒಡನಾಟ ಪ್ರೀತಿಯ ಭಾವದಲ್ಲಿ, ಎಲ್ಲವೂ ಹಂಗಾಮಿ, ದಕ್ಕುವ ಪ್ರೀತಿಯ ಕಸುವೇ ಮುನ್ನಡೆಯುವ ಹುಟ್ಟುಗೋಲು ಎನ್ನುವ ನಿರಾಳತೆಯಲ್ಲಿ ಬದುಕಬಹುದಲ್ಲವಾ!? ಸದ್ಯಕ್ಕೆ ಅಸಾಧ್ಯವಾಗಿರುವ ಈ ಆದರ್ಶವನ್ನು ಪೋಲಿನಾ ಯಾವ ರಮ್ಯತೆಯ ಪ್ರದರ್ಶನ ವ್ಯಸನಕ್ಕೆ ಬೀಳದೆ, ಸಹಜವೆನ್ನಿಸುವಂತೆ ದರ್ಶನ ಮಾಡಿಸಿಬಿಡುತ್ತಾರೆ! ಇದು ಅದ್ಭುತ! ಬದುಕಿನ ಅರಿವು, ಸಿನಿಮಾ ಕಸುಬು, ಸುಖಿ ಬದುಕಿನ ಕಾಣ್ಕೆಗಳ ದರ್ಶನ ಹುಡುಕಾಟವಿದ್ದಾಗ ಮಾತ್ರ ಹೊಮ್ಮುವ ಅಪ್ಪಟ ಕಲೆ ಇದು. ಅಮೂಲ್ಯವಾದ ದೃಶ್ಯಕಟ್ಟುವ ಕಲೆಗಾರಿಕೆ ಇದು.

ಈ ಬರಹಗಳನ್ನೂ ಓದಿ