ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮುದ ಕಳೆದುಕೊಳ್ಳದ ಎವರ್‌ಗ್ರೀನ್‌ ಸಿನಿಮಾ ‘ಗೋಲ್‌ಮಾಲ್’

ಪೋಸ್ಟ್ ಶೇರ್ ಮಾಡಿ
ನಾಗೇಶ್ ಕುಮಾರ್ ಸಿ.ಎಸ್‌.
ಕಾದಂಬರಿಕಾರ

ಮಧ್ಯಮ ವರ್ಗದ ಜನರ ಆಶೋತ್ತರಗಳನ್ನು ನಿರ್ದೇಶಕ ಹೃಷಿಕೇಶ್ ಮುಖರ್ಜಿ ‘ಗೋಲ್‌ಮಾಲ್‌’ನಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ. ದಶಕಗಳ ನಂತರವೂ ಈ ಸಿನಿಮಾ ಸರಳ ವಸ್ತು – ನಿರೂಪಣೆ, ತೆಳುಹಾಸ್ಯದ ರಂಜನೀಯ ಅಂಶಗಳಿಂದ ಸಿನಿಪ್ರಿಯರನ್ನು ಮುದಗೊಳಿಸುತ್ತದೆ.

ಲಘು ಹಾಸ್ಯ ಚಿತ್ರಗಳಲ್ಲಿ ವಿಶೇಷ ಸ್ಥಾನ ಗಳಿಸಿರುವ ‘ಗೋಲ್‌ಮಾಲ್’ ಹಿಂದಿ ಚಿತ್ರರಂಗದಲ್ಲಿ ಮೈಲುಗಲ್ಲಾದ ಪ್ರಯೋಗ. ಹೃಷಿಕೇಶ್ ಮುಖರ್ಜಿ ನಿರ್ದೇಶನದ ಈ ಸಿನಿಮಾ ಕನ್ನಡ, ತಮಿಳು, ಮಲಯಾಳಂ, ಸಿನ್ಹಳ ಭಾಷೆಗಳಿಗೆ ರೀಮೇಕ್ ಆಗಿದ್ದು, ಹಿಂದಿಯಲ್ಲಿ ಮತ್ತೆ ತಯಾರಾಗಿದೆ. ಮೂಲ ಹಿಂದಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಆಗಿನ ತೆಳುಹಾಸ್ಯ ಸಿನಿಮಾಗಳಲ್ಲಿ ಜನಮನ ಗೆದ್ದ ನಾಯಕ ಅಮೋಲ್ ಪಾಲೇಕರ್ ಮತ್ತು ಹಿರಿಯ ಬೆಂಗಾಲಿ ಮತ್ತು ಹಿಂದಿ ಚಿತ್ರಗಳ ಖ್ಯಾತ ನಟ ಉತ್ಪಲ್ ದತ್ ಪ್ರಮುಖರು.

ಬಿಂದಿಯಾ ಗೊಸ್ವಾಮಿ, ಅಮೋಲ್ ಪಾಲೇಕರ್‌ (ಫೋಟೋ ಕೃಪೆ: ಸಿನಿಮಾ ಹಿಸ್ಟರಿ ಪಿಕ್‌)

1970ರ ಘಟ್ಟದ ಮಧ್ಯಮ ಮತ್ತು ಶ್ರೀಮಂತ ವರ್ಗಗಳ ಮತ್ತು ಯುವಜನತೆಯ ಬದಲಾಗುತ್ತಿರುವ ಮಾಡರ್ನ್ ಟೇಸ್ಟ್ ಮತ್ತು ಆಶೋತ್ತರಗಳ ಮತ್ತು ಹಳೇ ಕಾಲದ ಮೌಲ್ಯಗಳ ದ್ವಂದ್ವ, ಕೇವಲ ನಾಯಕನ ಮೀಸೆ ಇರುವಿಕೆ ಮತ್ತು ಇಲ್ಲದಿರುವಿಕೆಗೆ ಬಂದು ನಿಲ್ಲುತ್ತದೆ. ನಾಯಕ ಎರಡೂ ವೇಷ ಧರಿಸಿ ತನ್ನ ಬಾಸ್ ಗೌರವ ಮತ್ತು ಆತನ ಮಗಳ ಒಲವು ಎರಡನ್ನೂ ನಿಭಾಯಿಸಬೇಕಾಗಿ ಬರುತ್ತದೆ. ನಗೆಯುಕ್ಕಿಸುವ ಸನ್ನಿವೇಶಗಳು ಚಿತ್ರಕಥೆಯ ಓಟದಲ್ಲಿ ನೈಜವಾಗಿ ಬಂದು ಹೋಗುತ್ತವೆ. ಸಂಭಾಷಣೆಯಲ್ಲಿ ಉತ್ತಮ ಅಭಿರುಚಿಯ ಹಾಸ್ಯ ಹಾಸುಹೊಕ್ಕಾಗಿದೆ.

ಉತ್ಪಲ್ ದತ್‌, ಅಮೋಲ್ ಪಾಲೇಕರ್‌‌ (ಫೋಟೋ ಕೃಪೆ: ಸಿನಿಮಾ ಹಿಸ್ಟರಿ ಪಿಕ್‌)

ಅಮೋಲ್ ಮತ್ತು ಉತ್ಪಲ್ ಮುಖ್ಯಪಾತ್ರಗಳ ಮಧ್ಯೆ ದ್ವಂದ್ವಕ್ಕೆ ಸಿಕ್ಕ ಬಾಸ್ ಮಗಳಾಗಿ ಬಿಂದಿಯಾ ಗೋಸ್ವಾಮಿ ಮುದ್ದಾಗಿ ಕಂಡುಬರುತ್ತಾರೆ. ಇತರ ಮುಖ್ಯ ಪೋಷಕ ಪಾತ್ರಗಳಲ್ಲಿ ದೇವೇನ್ ವರ್ಮಾ, ದೀನಾ ಪಾಠಕ್ ಇದ್ದಾರೆ. ಅತಿಥಿ ನಟರಾಗಿ ಅಮಿತಾಬ್ ಬಚ್ಚನ್‌ ಒಂದು ಸೀನ್‌ನಲ್ಲಿ ಬಂದು ಮಿಂಚುಹರಿಸುತ್ತಾರೆ. ರಾಹುಲ್ ದೇವ್ ಬರ್ಮನ್‌ರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ. ಕಿಶೋರ್ ಕುಮಾರರ ‘ಆನೆವಾಲಾ ಪಲ್ ಜಾನೆವಾಲಾ ಹೈ’ ಇಂದಿಗೂ ಗುನುಗುನಿಸಲ್ಪಡುವ ಸೂಪರ್ ಹಿಟ್ ಗೀತೆ. ಮನೆಮಂದಿಯೆಲ್ಲಾ ಕುಳಿತು ಕೊಂಚ ಕೂಡಾ ಅಶ್ಲೀಲತೆ ಇಲ್ಲದ, ಮುಜುಗರ ಪಡದೇ ನೋಡಿ ನಕ್ಕು ನಲಿಯಬಹುದಾದ ಹಾಸ್ಯಮಯ ಚಿತ್ರ ‘ಗೋಲ್‌ಮಾಲ್‌’.

ಈ ಬರಹಗಳನ್ನೂ ಓದಿ