ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪ್ರಯೋಗಶೀಲ ನಟ ನಾಸಿರುದ್ದೀನ್ ಷಾ

ಪೋಸ್ಟ್ ಶೇರ್ ಮಾಡಿ

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಪ್ರಮುಖ ನಟ ನಾಸಿರುದ್ದೀನ್ ಷಾ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತೀಯ ಕಲಾವಿದ. ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ `ಪ್ಯಾರಲಲ್ ಸಿನಿಮಾ’ಗಳಲ್ಲಿ ಷಾ ಶ್ರೇಷ್ಠ ಅಭಿನಯ ನೀಡಿದ್ದಾರೆ. ನಿಶಾಂತ್, ಆಕ್ರೋಷ್, ಸ್ಪರ್ಶ್, ಮಿರ್ಚ್ ಮಸಾಲಾ, ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂ ಆತಾ ಹೈ, ತ್ರಿಕಾಲ್, ಭಾವ್ನಿ ಭಾವೈ, ಜುನೂನ್, ಮಂಡಿ, ಮೋಹನ್ ಜೋಷಿ ಹಾಜಿರ್ ಹೋ!, ಅರ್ಧ್ ಸತ್ಯ್, ಕಥಾ.. ನಾಸಿರುದ್ದೀನ್ ಷಾ ನಟಿಸಿರುವ ಕೆಲವು ಹೊಸ ಅಲೆಯ ಪ್ರಮುಖ ಹಿಂದಿ ಸಿನಿಮಾಗಳು. ಹೊಸ ಅಲೆಯ ಪ್ರಯೋಗಗಳಷ್ಟೇ ಅಲ್ಲದೆ, ಮುಖ್ಯವಾಹಿನಿ ಹಿಂದಿ ಚಿತ್ರಗಳಲ್ಲೂ ನಾಸಿರ್ ಯಶಸ್ಸು ಕಂಡಿದ್ದಾರೆ.

ನಾಸಿರುದ್ದೀನ್ ಜನಿಸಿದ್ದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಜುಲೈ 20, 1950ರಂದು. ಅವರ ಶಾಲಾ ವಿದ್ಯಾಭ್ಯಾಸ ನಡೆದದ್ದು ನೈನಿತಾಲ್‍ನಲ್ಲಿ. ಮುಂದೆ ಆಲಿಘರ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಅವರು (1971) ಪದವಿ ಪಡೆದರು. ಮುಂದೆ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ನಂತರ ಷಾ ಸಿನಿಮಾ, ನಾಟಕಗಳತ್ತ ಹೊರಳಿದರು. ನಾಸಿರುದ್ದೀನ್ ಷಾರ ಮುಖ್ಯವಾಹಿನಿ ಬೆಳ್ಳಿತೆರೆ ಅಭಿಯಾನ ಆರಂಭವಾಗಿದ್ದು `ಹಮ್ ಪಾಂಚ್’ (1980) ಚಿತ್ರದೊಂದಿಗೆ. 1986ರಲ್ಲಿ ತೆರೆಕಂಡ ಬಹುತಾರಾಗಣದ `ಕರ್ಮ್’ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಈ ಚಿತ್ರದಲ್ಲಿ ಷಾ, ಮೇರು ನಟ ದಿಲೀಪ್ ಕುಮಾರ್ ಅವರೊಂದಿಗೆ ನಟಿಸಿದ್ದರು. ಮುಂದೆ ಇಜಾಜತ್ (1987), ಜಲ್ವಾ (1988), ಹೀರೋ ಹಿರಾಲಾಲ್ (1988) ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಇಂಗ್ಲಿಷ್‍ನಲ್ಲಿ ತಯಾರಾದ `ದಿ ಪರ್ಫೆಕ್ಟ್ ಮರ್ಡರ್’ ನಾಸಿರ್‍ರ ಪ್ರಮುಖ ಚಿತ್ರಗಳಲ್ಲೊಂದು. ಲೇಖಕ ಎಚ್.ಆರ್.ಎಫ್. ಕೀಟಿಂಗ್ ಕೃತಿಯನ್ನಾಧರಿಸಿ ತಯಾರಾದ ಚಿತ್ರವಿದು. ನಾಸಿರ್ ಪತ್ನಿ ರತ್ನಾ ಪಾಠಕ್ ಅವರಿಗೂ ಚಿತ್ರದಲ್ಲಿ ಪ್ರಮುಖ ಪಾತ್ರವಿತ್ತು.

ಹಿಂದಿಯ ಕೆಲವು ಬಹುತಾರಾಗಣದ ಸಿನಿಮಾಗಳು ನಾಸಿರ್‌ಗೆ ಖ್ಯಾತಿ ತಂದುಕೊಟ್ಟವು. ಗುಲಾಮಿ (1985), ತ್ರಿದೇವ್ (1989), ವಿಶ್ವಾತ್ಮ (1992) ಕೆಲವು ಉದಾಹರಣೆ. `ಮೊಹ್ರಾ’ದಲ್ಲಿ (1994) ಷಾ ಖಳ ಪಾತ್ರ ಪೋಷಿಸಿದ್ದರು. ಮಹಾತ್ಮಾ ಗಾಂಧಿ ಪಾತ್ರದಲ್ಲಿ ನಟಿಸಬೇಕೆನ್ನುವ ನಾಸಿರ್ ಆಸೆ `ಹೇ ರಾಮ್’ನಲ್ಲಿ ಈಡೇರಿತು. ಕಮಲ ಹಾಸನ್ ನಿರ್ದೇಶನದ ಚಿತ್ರ ವಿಶ್ಲೇಷಕರ ಅಪಾರ ಪ್ರಶಂಸೆಗೆ ಪಾತ್ರವಾಯ್ತು. ಮುಂದೆ ನಾಸಿರ್ ಅಂತಾರಾಷ್ಟ್ರೀಯ ಪ್ರಯೋಗ `ಮಾನ್ಸೂನ್ ವೆಡ್ಡಿಂಗ್’ನಲ್ಲಿ (2001) ಕಾಣಿಸಿಕೊಂಡರು. ಕಾಮಿಕ್ ಪುಸ್ತಕವೊಂದನ್ನು ಆಧರಿಸಿದ ಹಾಲಿವುಡ್ ಸಿನಿಮಾ `ದಿ ಲೀಗ್ ಆಫ್ ಎಕ್ಸ್‍ಟ್ರಾ ಆರ್ಡಿನರಿ ಜಂಟಲ್‍ಮೆನ್’ (2003) ನಾಸಿರ್‌ರ ಮತ್ತೊಂದು ಪ್ರಮುಖ ಸಿನಿಮಾ. ಖ್ಯಾತ ಹಾಲಿವುಡ್ ನಟ ಶಾನ್ ಕಾನರಿ ನಟಿಸಿದ್ದ ಚಿತ್ರದಲ್ಲಿ ನಾಸಿರ್ ಕ್ಯಾಪ್ಟನ್ ನೆಮೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶೇಕ್‌ಸ್ಪಿಯರ್ ವಿರಚಿತ `ಮ್ಯಾಕ್‍ಬೆತ್’ನ ಭಾರತೀಯ ಅವತರಣಿಕೆ `ಮಕ್ಬೂಲ್’ನಲ್ಲಿ (2004) ನಾಸಿರ್ ಪ್ರಮುಖ ಪಾತ್ರ ಪೋಷಿಸಿದ್ದರು. `ಖುದಾ ಕೆ ಲಿಯೇ’ ಚಿತ್ರದೊಂದಿಗೆ ಅವರ ಪಾಕಿಸ್ತಾನಿ ಬೆಳ್ಳಿತೆರೆ ಪ್ರವೇಶವಾಯ್ತು. ಶೋಯೆಬ್ ಮನ್ಸೂರ್ ನಿರ್ದೇಶನದ ಚಿತ್ರ ವಿವಾದಕ್ಕೀಡಾಗಿತ್ತು. `ತಬ್ಬಲಿಯು ನೀನಾದೆ ಮಗನೇ’ (ಕನ್ನಡ), `ಪೊಂಥಾನಮಾದ’ (ಮಲಯಾಳಂ), `ದಿಯೂಲ್’ (ಮರಾಠಿ), `ಖಾಸಿ ಕಥಾ’ (ಬಂಗಾಳಿ) ಸಿನಿಮಾಗಳಲ್ಲಿ ನಾಸಿರ್ ಗಮನಾರ್ಹ ಪಾತ್ರಗಳನ್ನು ಪೋಷಿಸಿದ್ದಾರೆ.

ಹಾಲಿವುಡ್ ತಾರೆಯರಾದ ಟಾಮ್ ಆಲ್ಟರ್ ಮತ್ತು ಬೆಂಜಮಿನ್ ಗಿಲಾನಿ ಅವರೊಡಗೂಡಿ ನಾಸಿರ್ `ಮೋಟ್ಲೇ ಪ್ರೊಡಕ್ಷನ್ಸ್‌ ‘ ಥಿಯೇಟರ್ ಸಂಸ್ಥೆ (1977) ಆರಂಭಿಸಿದ್ದರು. ಸಂಸ್ಥೆಯ ಮೊದಲ ಪ್ರಯೋಗವಾಗಿ ಸ್ಯಾಮ್ಯುಯೆಲ್ ಬೆಕೆಟ್ ವಿರಚಿತ `ವೇಟಿಂಗ್ ಫಾರ್ ಗೋಡಾಟ್’ ನಾಟಕ ಪ್ರದರ್ಶನಗೊಂಡಿತ್ತು. ಗುಲ್ಜಾರ್ ನಿರ್ದೇಶನದ ಮಿರ್ಜಾ ಗಾಲಿಬ್ ಜೀವನ ಕತೆ ಹೇಳುವ ಕಿರುತೆರೆ ಸರಣಿಯಲ್ಲಿ ನಾಸಿರ್ ಶೀರ್ಷಿಕೆ ಪಾತ್ರ ನಿರ್ವಹಿಸಿದ್ದರು. `ಭಾರತ್ ಕೆ ಖೋಜ್’ ಕಿರುತೆರೆ ಸರಣಿಯಲ್ಲಿ ಮರಾಠ ದೊರೆ ಶಿವಾಜಿಯಾಗಿ ನಟಿಸಿದ್ದರು. ಜವಾಹರಲಾಲ್ ನೆಹರೂ ರಚನೆಯ `ಡಿಸ್ಕವರಿ ಆಫ್ ಇಂಡಿಯಾ’ ಕೃತಿಯನ್ನಾಧರಿಸಿದ ಈ ಸರಣಿಯನ್ನು ಶ್ಯಾಂ ಬೆನಗಾಲ್ ನಿರ್ದೇಶಿಸಿದ್ದರು. `ಸ್ಪರ್ಶ್’ (1980), `ಪಾರ್’ (1985) ಮತ್ತು ‘ಇಕ್ಬಾಲ್‌’ (2006) ಚಿತ್ರಗಳ ಉತ್ತಮ ನಟನೆಗಾಗಿ ನಾಸಿರ್‌ಗೆ ರಾಷ್ಟ್ರ ಪ್ರಶಸ್ತಿಗಳು ಸಂದಿವೆ. ಆಕ್ರೋಷ್, ಚಕ್ರ ಮತ್ತು ಮಾಸೂಮ್ ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಫಿಲ್ಮ್‍ಫೇರ್‌ನಿಂದ ಅವರು ಪುರಸ್ಕೃತರಾಗಿದ್ದಾರೆ. ಪದ್ಮಶ್ರೀ (1987) ಮತ್ತು ಪದ್ಮಭೂಷಣ (2003) ಗೌರವಗಳಿಗೆ ನಾಸಿರ್ ಪಾತ್ರರಾಗಿದ್ದಾರೆ.

ಈ ಬರಹಗಳನ್ನೂ ಓದಿ