ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಶಹೀದ್’ ಖ್ಯಾತಿಯ ಮನೋಜ್ ಕುಮಾರ್

ಪೋಸ್ಟ್ ಶೇರ್ ಮಾಡಿ

ದೇಶಭಕ್ತಿ ಚಿತ್ರಗಳ ಮೂಲಕವೇ ಗುರುತಿಸಿಕೊಂಡ ನಟ ಮನೋಜ್ ಕುಮಾರ್. ಅವರ ನಿಜ ನಾಮಧೇಯ ಹರಿಕಿಶನ್ ಗಿರಿ ಗೋಸ್ವಾಮಿ. ಮೇರು ನಟ ದಿಲೀಪ್‍ಕುಮಾರ್ ಅವರ ಕಟ್ಟಾ ಅಭಿಮಾನಿ ಹರಿಕಿಶನ್. ಇದೇ ಕಾರಣಕ್ಕೆ ತಮ್ಮ ಹೆಸರನ್ನು ಮನೋಜ್ ಕುಮಾರ್ ಎಂದು ಬದಲಿಸಿಕೊಂಡಿದ್ದರು! ಹುಟ್ಟಿದ್ದು 1937, ಜುಲೈ 24ರಂದು. ಅಬೋಟಾಬಾದ್ (ಈಗ ಪಾಕಿಸ್ತಾನ್‍ನಲ್ಲಿದೆ) ಅವರ ಜನ್ಮಸ್ಥಳ. ದೇಶವಿಭಜನೆ ಸಂದರ್ಭದಲ್ಲಿ ಅವರ ಕುಟುಂಬ ಭಾರತಕ್ಕೆ ಬಂದು ನೆಲೆಸಿತು. ಆಗ ಹರಿಕಿಶನ್‍ಗೆ 10 ವರ್ಷ. ದಿಲ್ಲಿ ಯೂನಿವರ್ಸಿಟಿಯ ಹಿಂದೂ ಕಾಲೇಜ್‍ನಲ್ಲಿ ಪದವಿ ಪಡೆದ ಮನೋಜ್, ಅದಾಗಲೇ ನಟನಾಗಬೇಕೆಂದು ನಿರ್ಧರಿಸಿದ್ದರು.

ತಮ್ಮ 9ರ ಹರೆಯದಲ್ಲೇ ದಿಲೀಪ್‍ಕುಮಾರ್ ಅವರನ್ನು ಮನೋಜ್ ಆರಾಸತೊಡಗಿದ್ದರು. ಅವರಂತೆಯೇ ಹೆಸರು ಮಾಡಬೇಕೆನ್ನುವುದು ಮನೋಜ್ ಗುರಿಯಾಗಿತ್ತು. ಹಲವು ಪ್ರಯತ್ನಗಳ ನಂತರ ಮನೋಜ್ ಬೆಳ್ಳಿತೆರೆ ಪ್ರವೇಶ ಸಾಧ್ಯವಾಯ್ತು. ಆರಂಭದ ಅವರ ಚಿತ್ರಗಳಾದ `ಫ್ಯಾಷನ್’, `ಪಂಚಾಯತ್’, `ಚಾಂದ್’ ಸೋತು ಹೋದವು. ಚಿತ್ರರಂಗದಲ್ಲಿ ಉಳಿಯುವ ಅನಿವಾರ್ಯತೆಯಿಂದ ಮನೋಜ್ ಚಿತ್ರಕಥೆ ರಚನೆಯತ್ತ ಹೊರಳಿದರು.

‘ದಸ್ ನಂಬರಿ’ ಚಿತ್ರದಲ್ಲಿ ಹೇಮಾ ಮಾಲಿನಿ ಜೊತೆ

ತಮ್ಮ ಮೊದಲ ಸಿನಿಮಾ `ಫ್ಯಾಷನ್’ನಲ್ಲಿ ಮನೋಜ್ 90 ವರ್ಷದ ಮುದುಕನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು. ಆಗಿನ್ನೂ ಅವರಿಗೆ 19 ವರ್ಷ! ಕೆಲವು ಚಿತ್ರಗಳ ಸೋಲಿನ ನಂತರ ಮನೋಜ್ ನಿಧಾನವಾಗಿ ಗೆಲುವಿನ ಸವಿ ಕಂಡರು. `ಕಾಂಚ್ ಕಿ ಗುಡಿಯಾ’ (1961), `ಹರಿಯಾಲಿ ಔರ್ ರಾಸ್ತಾ’ (1962), `ಹಿಮಾಲಯ್ ಕಿ ಗೋದ್ ಮೇ’, `ವೊಹ್ ಕೌನ್ ಥೀ’ (1964), `ಶಾಹೀದ್’ (1965), `ಗುಮ್ನಾಮ್’ (1965), `ದೋ ಬದನ್’ (1966) ಅವರಿಗೆ ಹೆಸರು ತಂದುಕೊಟ್ಟಂಥ ಚಿತ್ರಗಳು.

ಮನೋಜ್ ಸಿನಿಮಾ ಜೀವನದ ಅತ್ಯಂತ ದೊಡ್ಡ ಯಶಸ್ಸು `ಶಹೀದ್’. ಈ ಚಿತ್ರದಲ್ಲಿ ಅವರು ಕ್ರಾಂತಿಕಾರಿ ಭಗತ್‍ಸಿಂಗ್ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಯಶಸ್ಸಿನ ನಂತರ ಅವರನ್ನು ಅಭಿಮಾನಿಗಳು ಭಾರತ್ ಕುಮಾರ್ ಎಂದೇ ಪ್ರೀತಿಯಿಂದ ಕರೆಯತೊಡಗಿದರು. ಆಗ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅದೊಮ್ಮೆ ಮನೋಜ್‍ರನ್ನು ಭೇಟಿ ಮಾಡಿದ್ದರು. ತಮ್ಮ ಜನಪ್ರಿಯ ಘೋಷವಾಕ್ಯ `ಜೈ ಜವಾನ್ ಜೈ ಕಿಸಾನ್’ ಧ್ವನಿಸುವಂಥ ಚಿತ್ರವೊಂದನ್ನು ಮಾಡಬೇಕೆಂದು ಶಾಸ್ತ್ರೀಜಿ, ಮನೋಜ್‍ರನ್ನು ಕೇಳಿಕೊಂಡಿದ್ದರು. ಆಗ ಮನೋಜ್‍ರಿಂದ ತಯಾರಾದ ಸಿನಿಮಾ `ಉಪ್ಕಾರ್‌’.

‘ಹರಿಯಾಲಿ ಔರ್ ರಾಸ್ತಾ’ ಚಿತ್ರದಲ್ಲಿ ಮಾಲಾ ಸಿನ್ಹಾ ಜೊತೆ

`ಉಪ್ಕಾರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ಈ ಪ್ರಯೋಗಕ್ಕೆ ಹಲವು ಪುರಸ್ಕಾರಗಳೂ ಸಂದವು. ನಂತರದ ದಿನಗಳಲ್ಲಿ ಮನೋಜ್ `ರೋಟಿ ಕಪಡಾ ಔರ್ ಮಕಾನ್’, `ಪೂರಬ್ ಔರ್ ಪಶ್ಚಿಮ್’ನಂಥ ಅತ್ಯುತ್ತಮ ದೇಶಭಕ್ತಿ ಚಿತ್ರಗಳನ್ನು ಮಾಡಿದರು. `ಬಿ-ಇಮಾನ್’ ಚಿತ್ರದ ಉತ್ತಮ ಅಭಿನಯಕ್ಕಾಗಿ ಮನೋಜ್‍ಗೆ ಫಿಲ್ಮ್‍ಫೇರ್ ಶ್ರೇಷ್ಠ ನಾಯಕನಟ ಪುರಸ್ಕಾರ ಸಿಕ್ಕಿತು. `ಉಪ್ಕಾರ್’ (1967), `ರೋಟಿ ಕಪಡಾ ಔರ್ ಮಕಾನ್’ (1974) ಚಿತ್ರಗಳಿಗೆ ಫಿಲ್ಮ್‍ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳಿಗೆ ಭಾಜನರಾದರು. ಸಾಕಷ್ಟು ಯಶಸ್ವೀ ಸಿನಿಮಾಗಳ ನಂತರ ಕೊನೆಗೊಮ್ಮೆ ಮನೋಜ್ ತಮ್ಮ ಕನಸು ಈಡೇರಿಸಿಕೊಂಡರು. `ಕ್ರಾಂತಿ’ ಚಿತ್ರದೊಂದಿಗೆ ತಾವು ಆರಾಸುತ್ತಿದ್ದ ದಿಲೀಪ್ ಕುಮಾರ್ ಜೊತೆ ಅವರು ನಟಿಸಿದರು. ಈ ಚಿತ್ರದ ನಂತರ ಏಳು ವರ್ಷಗಳ ವಿರಾಮ ಪಡೆದ ಮನೋಜ್, `ಕ್ಲರ್ಕ್’ ಮತ್ತು `ಕಲ್ಯುಗ್ ಔರ್ ರಾಮಾಯಣ್’ ಚಿತ್ರಗಳೊಂದಿಗೆ ಬೆಳ್ಳಿತೆರೆಗೆ ಮರಳಿದರು. ಈ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ವಿಫಲವಾದವು. 60 ವರ್ಷಗಳ ಸುದೀರ್ಘ ಸಿನಿಮಾ ಜೀವನ ಕಂಡ ಮನೋಜ್ ಹಿಂದಿ ಚಿತ್ರರಂಗದ ಶ್ರೇಷ್ಠ ನಟರಲ್ಲೊಬ್ಬರು ಎನಿಸಿಕೊಂಡಿದ್ದಾರೆ. ಪದ್ಮಶ್ರೀ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರು. 1998ರಲ್ಲಿ ಮನೋಜ್ ಕುಮಾರ್‌ ಅವರಿಗೆ ಫಿಲ್ಮ್‌ಫೇರ್‌ನಿಂದ ಜೀವಮಾನದ ಸಾಧನೆ ಪುರಸ್ಕಾರದ ಗೌರವ ಸಂದಿತು.

ಈ ಬರಹಗಳನ್ನೂ ಓದಿ