(ಬರಹ: ಡಾ.ಕೆ.ಪುಟ್ಟಸ್ವಾಮಿ, ಲೇಖಕರು)
ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದಂತಹ ಅಪರೂಪದ ವಿದ್ಯಮಾನಗಳಲ್ಲಿ ಜಯಂತಿ ಎಂಬ ನಟಿಯ ಅಭಿನಯವೂ ಒಂದು. ಕನ್ನಡ ಚಿತ್ರರಂಗದ ಅತ್ಯದ್ಭುತ ಸಾಧನೆಯೆಂದು ಜಯಂತಿಯವರ ಕಲಾ ಬದುಕು ದಾಖಲಾಗದಿದ್ದರೂ, ಒಂದು ಚರಿತ್ರೆ ಪಡೆದುಕೊಳ್ಳುವ ಕಾಲವಿನ್ಯಾಸದಲ್ಲಿ ಅವರ ಅಭಿನಯ ಕೌಶಲ್ಯವೂ ಹೆಣೆದುಕೊಂಡಿರುವುದು ಸುಳ್ಳೇನಲ್ಲ. ವೈಯಕ್ತಿಕ ಬದುಕಿನಲ್ಲಿ ಹಲವರಿಗೆ ಅರ್ಥವಾಗದ ಜಯಂತಿಯವರ ವ್ಯಕ್ತಿತ್ವ ವೃತ್ತಿ ಬದುಕಿನಲ್ಲೂ ಅಭಿನಯಕ್ಕೆ ತಕ್ಕಂತೆ ಉಜ್ವಲವಾಗಿ ಪ್ರಕಾಶಿಸಲಿಲ್ಲ. ಕನ್ನಡ ನಾಡಿನ ಎಲ್ಲ ಪ್ರದೇಶದ, ವಯೋತಾರತಮ್ಯ ದಾಟಿದ ಪುರುಷ -ಮಹಿಳೆಯರ ಮನದ ಮೂಲೆಯನ್ನು ತಮ್ಮ ಮಾದಕತೆಯಿಂದ ಉದ್ದೀಪನಗೊಳಿಸಿ, ಅಭಿನಯ ಕೌಶಲ್ಯದಿಂದ ಪಾತ್ರಗಳಿಗೆ ಜೀವ ತುಂಬಿದ ಜಯಂತಿಯವರು ನಮ್ಮ ಕಣ್ಣ ಮುಂದೆಯೇ ಹೆಚ್ಚು ನಿಗೂಢವಾಗಿ ಉಳಿದಿದ್ದಾರೆ. ಅವರ ವೃತ್ತಿ ಬದುಕು ಮತ್ತು ಕಲಾಸಾಧನೆಯನ್ನು ಅವಲೋಕಿಸಿದಾಗ ನನಗೆ ಹಾಲಿವುಡ್‌ನ ಇಬ್ಬರು ಲೆಜೆಂಡ್‌ಗಳಾದ ಮರ್ಲಿನ್ ಮನ್ರೋ ಮತ್ತು ಗ್ರೆಟಾ ಗಾರ್ಬೊ ಒಟ್ಟಿಗೇ ನೆನಪಾಗುತ್ತಾರೆ. ಈ ಹೋಲಿಕೆ ಸರಿಯಲ್ಲವೆಂದು ಅನೇಕರ ಅಭಿಪ್ರಾಯವಿರಬಹುದು. ಈ ಅಭಿಪ್ರಾಯಕ್ಕೆ ವಾಣಿಜ್ಯ ಚಿತ್ರಗಳ ಬಗ್ಗೆ ನಮಗಿರುವ ಉದಾಸೀನ ಮತ್ತು ಹೆಣ್ಣು ಪಾತ್ರಗಳ ಬಗ್ಗೆ ನಮಗಿರುವ ಅತಿರಂಜಿತ ಕಲ್ಪನೆ ಮತ್ತು ಅಸಡ್ಡೆಯ ಫಲವಾಗಿರಬಹುದೇ? ಈ ಅಸಡ್ಡೆಯ ತೆರೆಯನ್ನು ಸರಿಸಿ ಜಯಂತಿಯವರ ಸಹಜ ಪ್ರತಿಭೆಯ ಹಲವಾರು ರೂಹುಗಳನ್ನು ತೆರೆದಿಡುವುದೇ ಈ ಲೇಖನದ ಹಿಂದಿನ ಉದ್ದೇಶ.
ಹಾಗೆ ನೋಡಿದರೆ ಜಯಂತಿಯವರಿಗಿಂತ ಹೆಚ್ಚು ಸುಂದರಿಯರಾದ ನಟಿಯರು ಕನ್ನಡ ಚಿತ್ರರಂಗದಲ್ಲಿರಬಹುದು. ಅವರ ಅಭಿನಯದ ಸಾಮರ್ಥ್ಯವನ್ನು ಮೀರಿದ ಪ್ರತಿಭಾವಂತರೂ ಇರಬಹುದು. ಜಯಂತಿಯವರಿಗಿಂತ ಪ್ರೇಕ್ಷಕರ ಮೇಲೆ ಹೆಚ್ಚು ಮೋಡಿ ಹಾಕಿ ಥಿಯೇಟರ್‌ಗೆ ಸೆಳೆವಂತಹ ಅನೇಕ ನಟಿಯರೂ ಬಂದು ಹೋಗಿರುವುದು ಸುಳ್ಳಲ್ಲ. ಹಾಗೆಂದ ಮಾತ್ರಕ್ಕೆ ಅವರ ಸಾಧನೆಯೇನೂ ಕಡಿಮೆಯಲ್ಲ. ಜಯಂತಿಯವರು ಕನ್ನಡ ಚಿತ್ರರಂಗಕ್ಕೆ ಬಂದ ಕಾಲಘಟ್ಟ, ಅವರು ಬೆಳೆಯುತ್ತಿದ್ದಂತೆ ಸಂಭವಿಸಿದ ಪಲ್ಲಟಗಳು ಮತ್ತು ಬಹುದೀರ್ಘಕಾಲ ವೃತ್ತಿ ಜೀವನದಲ್ಲಿ ಬದುಕಿ ಉಳಿಯಲು ಅವರು ಎದುರಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಅವಲೋಕಿಸಿದರೆ ಅವರ ನಿಜವಾದ ಸಾಮರ್ಥ್ಯ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಕುಲುಮೆಯಲ್ಲಿ ಜಯಂತಿಯೆಂಬ ಅಪರಂಜಿಯಂಥ ಕಲಾವಿದೆ ಪುಟಗೊಂಡ ಕಥಾನಕವೊಂದು ದೊರೆಯುತ್ತದೆ. ಪ್ರಮುಖವಾಗಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಮಹಿಳಾ ಕಲಾವಿದರ ಹಿನ್ನೆಲೆಯಲ್ಲಿ ಕೆದಕಿದರೆ ಜಯಂತಿಯವರ ನಿಜ ಸಾಮರ್ಥ್ಯ ಬೆಳಕು ಕಾಣುತ್ತದೆ.

ನಟಿಯರ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಇತಿಹಾಸ ಒಂದು ವಿಧದಲ್ಲಿ ಭಿನ್ನವಾಗಿ ಕಾಣುತ್ತದೆ. 1934ರಲ್ಲಿ ತೆರೆಕಂಡ ‘ಸತಿ ಸುಲೋಚನಾ’ ವಾಕ್ಚಿತ್ರದಿಂದ ಆರಂಭಿಸಿ ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದ ನಾಯಕಿಯರ ಪಾತ್ರವನ್ನು ವಹಿಸಿದವರು ಕನ್ನಡ ರಂಗಭೂಮಿಯ ಅಭಿನೇತ್ರಿಯರು. ಲಕ್ಷ್ಮಿಬಾಯಿ, ಎಂ.ವಿ.ರಾಜಮ್ಮ, ಬಿ. ಜಯಮ್ಮ, ಮಳವಳ್ಳಿ ಸುಂದರಮ್ಮ, ಅಮೀರ್‌ಬಾಯಿ ಕರ್ನಾಟಕಿ, ತ್ರಿಪುರಾಂಬ, ಬಳ್ಳಾರಿ ಲಲಿತ, ಕಮಲಾಬಾಯಿ, ಜಯಶ್ರೀ, ಹರಿಣಿ, ಫಂಡರೀಬಾಯಿ, ಪ್ರತಿಮಾದೇವಿ ಮುಂತಾದ ರಂಗಪ್ರತಿಭೆಗಳೇ ಕನ್ನಡ ಚಿತ್ರಗಳಲ್ಲಿ ನಾಯಕಿಯ ಪಟ್ಟವನ್ನಲಂಕರಿಸಿದ್ದವು. ಕನ್ನಡ ಮೂಲದ ಹಿಂದಿ – ಮರಾಠಿ ಚಿತ್ರಗಳ ನಟಿ ಶಾಂತಾ ಹುಬ್ಳೀಕರ್ ಮತ್ತು ತೆಲುಗಿನ ಸೂರ್ಯಕುಮಾರಿಯಂಥವರು ಅಪರೂಪಕ್ಕೆ ಅಭಿನಯಿಸಿದ ಅಪವಾದಗಳನ್ನು ಹೊರತುಪಡಿಸಿದರೆ, ಆಗ ಕನ್ನಡ ಚಿತ್ರರಂಗದ ಮಹಿಳಾ ಪಾತ್ರಗಳನ್ನು ರಂಗಭೂಮಿಯ ಅಪ್ರತಿಮ ಕಲಾವಿದರೇ ನಿರ್ವಹಿಸಿದರು.
ಕನ್ನಡ ಚಿತ್ರರಂಗದ ಎರಡು ದಶಕಗಳ ಅಸ್ತಿತ್ವದ ನಂತರ ಪರಭಾಷಾ ಚಿತ್ರತಾರೆಯರ ಆರಂಭ ಪ್ರಾಯಶಃ ‘ಜಲದುರ್ಗ’ (1954) ದಿಂದ ಆರಂಭವಾಯಿತೆನ್ನಬಹುದು. ತೆಲುಗಿನ ಕೃಷ್ಣಕುಮಾರಿಯವರು ಈ ಚಿತ್ರದ ಮೂಲಕ ಪರಭಾಷಾ ತಾರೆಯರ ಆಮದು ಪರಂಪರೆಯನ್ನು ಉದ್ಘಾಟಿಸಿದರು. ಅವರನ್ನು ಅನುಸರಿಸಿ ಅವರ ಸೋದರಿ ಸಾಹುಕಾರ್ ಜಾನಕಿ, ಸೂರ್ಯಕಲಾ, ಜಮುನಾ, ಭಾನುಮತಿ, ರಾಜಶ್ರೀ ಮುಂತಾದವರು ಕನ್ನಡ ಚಿತ್ರರಂಗಕ್ಕೆ ಆಗಮಿಸಿದರು. ಈ ಅವಧಿಯಲ್ಲೇ ಕನ್ನಡದ ಬಿ.ಸರೋಜಾದೇವಿಯಂಥ ನಟಿಯರೂ ಆಗಮಿಸಿ ನಂತರ ತಮಿಳು – ತೆಲುಗು ಚಿತ್ರರಂಗದಲ್ಲಿ ಪ್ರಖ್ಯಾತಗೊಂಡ ವಿದ್ಯಮಾನವೂ ಸಂಭವಿಸಿತು. ಜಯಂತಿಯವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದು ನಟಿಯರ ದೃಷ್ಟಿಯಿಂದ ಸ್ಥಿತ್ಯಂತರದಲ್ಲಿದ್ದ ಆ ಘಟ್ಟದಲ್ಲಿ.

ಹಾಗೆ ನೋಡಿದರೆ ಜಯಂತಿಯವರು ರಂಗಭೂಮಿಯ ಅನುಭವ ಪಡೆದು ಚಿತ್ರರಂಗಕ್ಕೆ ಬಂದವರಲ್ಲ. ರಂಗಭೂಮಿ – ಸಿನಿಮಾ ಕ್ಷೇತ್ರದ ನಂಟಿದ್ದ ಕುಟುಂಬದಿಂದಲೂ ಬಂದವರಲ್ಲ. ಚಿತ್ರರಂಗವು ಅವರ ಆಯ್ಕೆಯಾಗಿತ್ತು ಎಂಬುದಕ್ಕೆ ಅವರ ಬಾಲ್ಯಕಾಲದ ಲಭ್ಯ ಮಾಹಿತಿಯನ್ನು ಅವಲೋಕಿಸಿದರೆ ಪುರಾವೆ ಸಿಗದು. ಅವರ ಸಿನಿಮಾ ಜಗತ್ತಿನ ಪ್ರವೇಶ ‘ಅಚಾನಕ’ ಎನ್ನುವ ರೀತಿಯಲ್ಲೇ ಸಂಭವಿಸಿದಂತೆ ಕಾಣುತ್ತದೆ. ಜಯಂತಿಯವರ ಮೂಲ ಹೆಸರು ಕಮಲಕುಮಾರಿ. ಚಿತ್ರರಂಗಕ್ಕೆ ಬಂದ ನಂತರ ಅವರ ಹೆಸರು ಬದಲಾಯಿತು. ತಾಯಿ ಸಂತಾನಲಕ್ಷ್ಮಿಯವರು ಬಳ್ಳಾರಿಯವರು. ತಂದೆ ಬಾಲಸುಬ್ರಮಣ್ಯಂ ತಮಿಳು ಭಾಷಿಕರು. ಹುಟ್ಟಿ-ಬೆಳೆದದ್ದು ಬಳ್ಳಾರಿಯಾದರೂ ಜಯಂತಿಯವರಿಗೆ ಕನ್ನಡ ಭಾಷೆ ಸ್ವಲ್ಪ ಮಟ್ಟಿಗೆ ಅಪರಿಚಿತವೇ ಆಗಿತ್ತು! ತಂದೆ ಮದರಾಸಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದವರು. ಹಾಗಾಗಿ ಸುಶಿಕ್ಷಿತ ಕುಟುಂಬದ ಹಿನ್ನೆಲೆಯ ಜಯಂತಿಯವರು ಚಿತ್ರರಂಗ ಪ್ರವೇಶಕ್ಕೆ ತಾಯಿಯವರ ಒತ್ತಾಸೆ ಕಾರಣವೆಂದು ಹೇಳಲಾಗುತ್ತದೆ. ಹಾಗಾಗಿ ಅವರ ಒತ್ತಾಯದಿಂದ ನೃತ್ಯ ತರಬೇತಿಗೆ ಸೇರಿದರು. ಬಾಲ್ಯದಿಂದಲೂ ಸ್ವಲ್ಪ ಸ್ಥೂಲದೇಹಿಯಾದ ಜಯಂತಿಯವರು ನೃತ್ಯ ಶಾಲೆಯ ವಿದ್ಯಾರ್ಥಿಗಳ ಅಪಹಾಸ್ಯದಿಂದ ನೃತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಆ ಅಪಹಾಸ್ಯ, ತಿರಸ್ಕಾರಗಳೇ ಅವರು ಕಲಾವಿದರಾಗಿ ಗಟ್ಟಿಯಾಗಲು ಬೀಜ ಬಿತ್ತಿದವು ಎಂದು ಕಾಣುತ್ತದೆ.
ತಾಯಿಯ ಒತ್ತಾಸೆಯಿಂದ ಸ್ಟುಡಿಯೋಗೆ ಎಡತಾಕಿದರೂ ಚಿಕ್ಕ ವಯಸ್ಸು ಎಂಬ ಕಾರಣಕ್ಕೆ ಅವರಿಗೆ ಅವಕಾಶ ಸಿಗಲಿಲ್ಲ. ತೆಲುಗಿನಲ್ಲಿ ಅತ್ಯಂತ ಯಶಸ್ವಿಯಾಗಿ ಕನ್ನಡಕ್ಕೂ ಡಬ್ ಆದ ’ಜಗದೇಕವೀರುನಿ ಕಥಾ’(1961) ಚಿತ್ರದಲ್ಲಿ ಅವರು ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ದೃಷ್ಟಿಯಿಂದ ಕನ್ನಡಕ್ಕೆ ಡಬ್ ಆದ ‘ಜಗದೇಕವೀರನ ಕತೆ’’ ಚಿತ್ರಕ್ಕೆ ಅದರದೇ ಆದ ವಿಶಿಷ್ಟತೆಯಿದೆ. ತೆಲುಗಿನ ಎನ್.ಟಿ.ಆರ್. ಅವರು ನಾಯಕರಾಗಿದ್ದ ಈ ಚಿತ್ರದಲ್ಲಿ ನಾಲ್ವರು ನಾಯಕಿಯರು. ಅದರಲ್ಲಿ ಪ್ರಧಾನ ಭೂಮಿಕೆ ಬಿ.ಸರೋಜಾದೇವಿಯವರ ಪಾಲಿಗೆ. ಅದು ಅವರಿಗೆ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಳಿಸಿಕೊಟ್ಟಿತು. ಅದೇ ಚಿತ್ರದ ‘ತಿಳಿ ನೀರಾಟಗಳು ಕಲಕಲ ಪಾಟಗಳು’ ಎಂದು ಸರೋಜಾದೇವಿಯವರು ಕೊಳದಲ್ಲಿ ಮಿಂದು ಹಾಡುವ ಸನ್ನಿವೇಶದಲ್ಲಿ ಜಯಂತಿಯವರೂ ಸಹಕಲಾವಿದೆಯಾಗಿ ಅಭಿನಯಿಸಿದ್ದರು. ‘ಶಿವಶಂಕರಿ ಶಿವಾನಂದ ಲಹರಿ’ ಹಾಡಿನಿಂದ ಪ್ರಖ್ಯಾತವಾಗಿದ್ದ ಈ ಚಿತ್ರವು ಅಂದಿನ ‘ಡಬ್ಬಿಂಗ್ ವಿರೋಧಿ ಕನ್ನಡ ಕಟ್ಟಾಳು’ಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಆದರೂ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಎರಡು ವಿಭಿನ್ನ ಪ್ರತಿಭೆಯ ಜಯಂತಿ ಮತ್ತು ಬಿ.ಸರೋಜಾದೇವಿಯವರ ಸಂಗಮದ ಚಿತ್ರ ಅದಾಗಿತ್ತು.

ಎಲ್ಲ ಭಾಷೆಗಳಲ್ಲೂ ಅವಕಾಶಗಳಿಗಾಗಿ ತಡಕಾಡುತ್ತಿದ್ದ ಜಯಂತಿಯವರನ್ನು ಗುರುತಿಸಿದವರು ನಿರ್ದೇಶಕ ವೈ.ಆರ್.ಸ್ವಾಮಿ ಅವರು. ಆ ಕಾಲಕ್ಕೆ ಸಹಜವಾಗಿದ್ದ ಕೌಟುಂಬಿಕ ವಿಘಟನೆ ಮತ್ತು ಐಕ್ಯತೆಯ ಹಿನ್ನೆಲೆಯಿದ್ದ ‘ಜೇನುಗೂಡು’ (1963) ಚಿತ್ರದ ಎರಡನೇ ನಾಯಕಿಯ ಪಾತ್ರಕ್ಕೆ ಅವರನ್ನು ಆರಿಸಿದರು. ಕತೆಯೇ ಪ್ರಧಾನವಾದ ಆ ಚಿತ್ರದ ಕಥಾ ನಾಯಕರು ಕೆ.ಎಸ್. ಅಶ್ವಥ್ – ಪಂಢರೀಬಾಯಿ. ಆದರೂ ನಟ ಸೂರ್ಯಕುಮಾರ್ ಅವರ ಜೋಡಿಯಾಗಿ ನಟಿಸಿದ ಜಯಂತಿ ಅವರು ತಮ್ಮ ಸಹಜಾಭಿನಯದ ಮುದ್ರೆಯನ್ನು ಆ ಚಿತ್ರದಲ್ಲಿ ಒತ್ತಿದ್ದರು. ಅಲ್ಲಿಂದಾಚೆಗೆ ಜಯಂತಿಯವರ ವೃತ್ತಿ ಬದುಕಿನ ಗೆರೆ ಊರ್ಧ್ವಮುಖವಾಗಿ ಮೇಲೇರತೊಡಗಿತು. ಜಯಂತಿಯವರು ಚಿತ್ರರಂಗಕ್ಕೆ ಬಂದಾಗ ಕೃಷ್ಣಕುಮಾರಿ, ಸಾಹುಕಾರ್ ಜಾನಕಿ, ಪಂಢರೀಬಾಯಿ, ಹರಿಣಿ, ಬಿ.ಸರೋಜಾದೇವಿ ನಟಿಯರಾಗಿ ಜನಪ್ರಿಯರಾಗಿದ್ದರು. ಮುಖ್ಯವಾಗಿ ರಾಜ್ – ಲೀಲಾವತಿ ಜೋಡಿ ಜನಪ್ರಿಯತೆಯನ್ನು ಗಳಿಸಿಕೊಂಡು ಗಟ್ಟಿಯಾಗಿತ್ತು. ಆ ಹಿನ್ನೆಲೆಯಲ್ಲಿ ಎರಡನೇ ನಾಯಕಿಯಾಗಿ ಆಗಮಿಸಿದ ಜಯಂತಿಯವರು ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಂಡ ವಿಧಾನವೇ ವಿಶಿಷ್ಟವಾದದ್ದು. ‘ಜೇನುಗೂಡು’ ನಂತರ ‘ರಾಮಾಂಜನೇಯ ಯುದ್ಧ’ದಂತಹ ಚಿತ್ರಗಳಲ್ಲಿ ಪುಟ್ಟ ಪಾತ್ರ ನಿರ್ವಹಿಸಿದರೂ ಜಯಂತಿಯವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ಚಂದವಳ್ಳಿಯ ತೋಟ’ (1964) ದಲ್ಲಿ ತಾನೆಂಥ ಪ್ರಬುದ್ಧ ನಟಿಯಾಗಿ ಬೆಳೆಯಬಲ್ಲೆ ಎಂಬ ಸಂದೇಶವನ್ನು ರವಾನಿಸಿಬಿಟ್ಟರು.
‘ಚಂದವಳ್ಳಿಯ ತೋಟ’ ಒಂದು ಸಂಸಾರದ ವಿಘಟನೆಯ ಮೂಲಕ ಊರೊಂದು ಅವನತಿಯ ಹಾದಿ ಹಿಡಿಯುವ ಭಾರತದ ಹಳ್ಳಿಯ ಮಾದರಿ ಕತೆಯೊಂದನ್ನು ಆಧರಿಸಿದ ಚಿತ್ರ. ‘ಆಧುನಿಕ ಬದುಕಿನ ಕೆಲ ಸಂಗತಿಗಳು ಮತ್ತು ಹೊರಗಿನ ವ್ಯಕ್ತಿಗಳು ಊರೊಳಗೆ ಪ್ರವೇಶಿಸಿದಾಗ ಆಗುವ ಪಲ್ಲಟಗಳನ್ನು, ದುರಂತವನ್ನು ವಿವರಣಾತ್ಮಕವಾಗಿ ಕಟ್ಟಿಕೊಟ್ಟ ಚಿತ್ರವದು. ಊರಿನ ಹಿರಿಯ ಶಿವನಂಜೇಗೌಡನ ಹಿರಿಯ ಮಗ ಹನುಮನ ಹೆಂಡತಿಯ ಪಾತ್ರ ಜಯಂತಿಯವರ ಪಾಲಿಗೆ. ಅದೊಂದು ಸಂಕೀರ್ಣ ಪಾತ್ರ. ಸವಾಲಿನ ಪಾತ್ರ. ಜೀವನ ಮೌಲ್ಯಗಳನ್ನು ಪ್ರತಿನಿಧಿಸುವ, ಊರಿಗೆ ಬುದ್ಧಿ ಹೇಳುವ ಶಿವನಂಜೇಗೌಡನ ಕಿರಿಯ ಮಗ ರಾಮ ಹಾದಿ ತಪ್ಪಿದಾಗ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಉಗ್ರಕೋಪಿಷ್ಠ ಹನುಮನ ಮಡದಿಯಾಗಿ, ಸಂಸಾರವನ್ನು ಹಿಡಿದಿಟ್ಟುಕೊಳ್ಳಬೇಕೆಂಬ ಹಂಬಲದ ಶಿವನಂಜೇಗೌಡನ ಸೊಸೆಯಾಗಿ ಜಯಂತಿಯವರು ಆ ವಯಸ್ಸಿಗೆ ಮತ್ತು ಅನುಭವದ ಕೊರತೆಯ ಹಿನ್ನೆಲೆಯಲ್ಲಿ ಪಾತ್ರ ನಿರ್ವಹಿಸಿದ ರೀತಿ ಬೆರಗು ಮೂಡಿಸುತ್ತದೆ. ಸ್ವಾತಂತ್ರ್ಯ ಬಂದ ನಂತರದ ಆಧುನಿಕತೆಗೆ ತೆರೆದುಕೊಂಡ ಬಯಲು ಸೀಮೆಯ ಹೆಣ್ಣು ಮಕ್ಕಳ ಜೀವಂತಿಕೆ, ಸಂಸಾರವನ್ನು ಒಂದು ಸುಂದರ ಘಟಕವನ್ನಾಗಿ ಕಾಪಾಡಬೇಕೆಂಬ ಅವರ ಹಂಬಲ, ಆ ನಿಟ್ಟಿನಲ್ಲಿ ಎದುರಿಸುವ ತಳಮಳ, ಹಿರಿಯರ ಬಗೆಗಿನ ಮಡುಗಟ್ಟಿದ ಪ್ರೀತಿ, ಸಂಸಾರದ ಸದಸ್ಯರೊಡನೆ ತೋರುವ ವಾತ್ಸಲ್ಯ, ಸಂಕಷ್ಟ ಕಾಲದಲ್ಲಿ ಮೆರೆಯಬೇಕಾದ ಸಂಯಮ – ಹೀಗೆ ಅನೇಕ ಭಾವಗಳನ್ನು ಒಂದೇ ಚಿತ್ರದಲ್ಲಿ ಹೊಮ್ಮಿಸಬೇಕಾದ ಪಾತ್ರವದು. ನಾಯಕಿಯಾದ ಮೊದಲನೇ ಚಿತ್ರದಲ್ಲಿಯೇ ಜಯಂತಿಯವರು ಗಮನ ಸೆಳೆಯುವ ರೀತಿಯಲ್ಲಿ ತಮ್ಮ ಸಹಜಾಭಿನಯ ಚಾತುರ್ಯವನ್ನು ನಿರೂಪಿಸಿದರು.

ಹಾಗೆ ನೋಡಿದರೆ ಭಾರತೀಯ ವಾಣಿಜ್ಯ ಚಿತ್ರ ಪರಂಪರೆಯು ನಾಯಕಿಯರ ಬಗೆಗೆ ಆ ಕಾಲದಲ್ಲಿ ಹಾಕಿಕೊಂಡಿದ್ದ ಮಾನದಂಡಗಳನ್ನು ಅನ್ವಯಿಸಿದರೆ ಜಯಂತಿಯವರಿಗೆ ನಾಯಕಿಯಾಗಲು ಅರ್ಹತೆ ಕಡಿಮೆಯಿತ್ತೆಂದೇ ಹೇಳಬಹುದು. ಸ್ವಲ್ಪ ಸ್ಥೂಲವಾದ ದೇಹ; ಆರಂಭದಲ್ಲಿ ಸ್ವಲ್ಪ ಕೀರಲು ಧ್ವನಿಯ ಲೇಪನವಿದ್ದಂತೆ ಸಂಭಾಷಣೆ ಹೇಳುತ್ತಿದ್ದರು. ನೃತ್ಯದಲ್ಲಿ ಪರಿಶ್ರಮವಿದ್ದಂತೆ ಕಾಣದು. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ನಾಡಿನ ಹೆಣ್ಣು ಮಕ್ಕಳ ಭಾವನೆಯನ್ನು ಅರ್ಥಮಾಡಿಕೊಳ್ಳಬಲ್ಲ ಪರಿಸರದಲ್ಲಿ ಅವರು ಬೆಳೆದವರಾಗಿರಲಿಲ್ಲ. ಕನ್ನಡ ಭಾಷೆಯ ಪರಿಚಯವೂ ಹೆಚ್ಚಿದ್ದಂತೆ ತೋರುವುದಿಲ್ಲ. ಆದರೂ ಜಯಂತಿಯವರಿಗೆ ಆಂಗಿಕ ಅಭಿನಯ ಸಹಜವಾಗಿ ಸಿದ್ಧಿಸಿತ್ತು. ಅದರಿಂದಲೇ ತಮ್ಮೆಲ್ಲ ಕೊರತೆಗಳನ್ನು ನೀಗಿಕೊಂಡು ಅಭಿನಯ ಸಾಮರ್ಥ್ಯದಿಂದ ಉಳಿದುಬಂದರು. ಒಂದು ಪಾತ್ರದ ಹಿನ್ನೆಲೆ ಮತ್ತು ಅದು ವ್ಯಕ್ತಪಡಿಸಬೇಕಾದ ಭಾವನೆಗಳನ್ನು ತಮ್ಮ ಕಣ್ಣು, ಮುಖಭಾವ ಮತ್ತು ಅಂಗಾಂಗ ಚಲನೆಯಿಂದಲೇ ಹೊರಹಾಕಿ ಗೆದ್ದವರು ಜಯಂತಿ. ಈ ಅಂಶಗಳ ಹಿನ್ನೆಲೆಯಲ್ಲಿಯೂ ಜಯಂತಿಯವರ ಸಾಧನೆಯನ್ನು ಅಳೆಯಬೇಕು.
‘ಚಂದವಳ್ಳಿಯ ತೋಟ’ ಚಿತ್ರದ ನಂತರ ಅವರು ಅಭಿನಯಿಸಿದ ಚಿತ್ರ ‘ಕಲಾವತಿ’. ಇಲ್ಲಿ ಜಯಂತಿಯವರಿಗೆ ಸಂಪೂರ್ಣ ವಿಭಿನ್ನವಾದ ಪಾತ್ರ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು. ಅದೂ ಪ್ರೇಕ್ಷಕರ ಸಹಾನುಭೂತಿಗೆ ಅರ್ಹವಲ್ಲದ ಪಾತ್ರ. ನೃತ್ಯ ಬಾರದ ಅಸೂಯೆ ಹೆಣ್ಣಾಗಿ, ಯಶಸ್ಸು ಸಾಧಿಸಬೇಕೆಂಬ ಹಠಕ್ಕೆ ಬಿದ್ದು ಎದುರಾಳಿಯನ್ನು ಸೋಲಿಸಲು ವಾಮಮಾರ್ಗಗಳನ್ನು ಹಿಡಿಯುವ ‘ವನಜಾ’ ಪಾತ್ರ. ಜಯಂತಿಯವರು ಈ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ ತಮ್ಮ ಅಭಿನಯ ಪ್ರತಿಭೆಯ ಮತ್ತೊಂದು ಮುಖವನ್ನು ತೆರೆದಿಟ್ಟರು. 1964ರಲ್ಲಿಯೇ ಬಿಡುಗಡೆಯಾದ ‘ಮುರಿಯದ ಮನೆ’ ಚಿತ್ರದಲ್ಲಿ ಜಯಂತಿಯವರು ‘ಚಂದವಳ್ಳಿಯ ತೋಟ’ದಲ್ಲಿನ ತಮ್ಮ ಅಭಿನಯ ಸಹಜತೆಯನ್ನು ಮುಂದುವರೆಸಿದರು. ಚಿತ್ರ ತಮಿಳಿನ ರೀಮೇಕ್ ಆದರೂ, ಗ್ರಾಮೀಣ ಪರಿಸರದ ಮಾದರಿ ಕತೆಯೊಂದಾದ ಕಾರಣ ಕನ್ನಡದ ಕತೆಯೆಂಬಂತೆ ಸ್ವಾಭಾವಿಕವಾಗಿ ಮೂಡಿ ಬಂತು. ವಿಚ್ಛಿದ್ರಗೊಳ್ಳುತ್ತಿದ್ದ ಸಂಸಾರದಲ್ಲಿದ್ದ ಹೆಳವನನ್ನು ಮದುವೆಯಾಗಿ ಮನೆತನದ ಪ್ರತಿಷ್ಠೆಯನ್ನು ಕಾಪಾಡುವ ಹೆಣ್ಣಾಗಿ ಜಯಂತಿಯವರು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರು. ಹೆಳವ ಚೆನ್ನನ ಪಾತ್ರದಲ್ಲಿ ರಾಜಕುಮಾರ್ ಮತ್ತು ಅವರ ಪತ್ನಿಯಾಗಿ ಜಯಂತಿಯವರು ಗ್ರಾಮೀಣ ಪರಿಸರದ ಸಹಾನುಭೂತಿ ಬೆಸೆದ ಜೋಡಿಯಾಗಿ ಗಮನ ಸೆಳೆದರು. ಮತ್ತೆ ಜೋಡಿಯ ಜನಪ್ರಿಯತೆ ಬಿ.ಎಸ್. ರಂಗಾ ನಿರ್ದೇಶನದ ‘ಪ್ರತಿಜ್ಞೆ(1964) ಚಿತ್ರದಲ್ಲಿ ಮುಂದುವರೆಯಿತು.

1964ರಲ್ಲಿ ಬಿಡುಗಡೆಯಾದ ಹತ್ತೊಂಬತ್ತು ಚಿತ್ರಗಳಲ್ಲಿ ಜಯಂತಿಯವರು ಆರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆಗ ರಾಜ್ – ಲೀಲಾವತಿ ಜೋಡಿ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿತ್ತು. ಜಯಲಲಿತಾರಂಥ ಯುವಕಲಾವಿದೆ ‘ಚಿನ್ನದ ಗೊಂಬೆ’, ‘ಮನೆ ಅಳಿಯ’ ಚಿತ್ರದಲ್ಲಿ ನಾಯಕಿಯಾಗಿ ಸಂಚಲನ ತಂದಿದ್ದರು. ‘ಸಾಕುಮಗಳು’ ಕಲ್ಪನಾ ಅವರು ‘ನಾಂದಿ’ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನದ ಹೊರಳು ಹಾದಿಗೆ ಕಾಲಿರಿಸಿದ್ದ ಕಾಲ. ಅಂಥ ಸನ್ನಿವೇಶದಲ್ಲಿಯೂ ಜಯಂತಿಯವರು ತಮ್ಮ ಅಭಿನಯ ಮಾತ್ರದಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇರೂರಲು ಆರಂಭಿಸಿದ್ದರು.
ಒಂದು ವಿಧದಲ್ಲಿ ಜಯಂತಿಯವರ ವೃತ್ತಿ ಬದುಕು ಸಾಗಿ ಬಂದದ್ದು ಹೋರಾಟದ ಹಾದಿಯಲ್ಲಿ. ಅವರು ಕನ್ನಡ ಚಲನಚಿತ್ರರಂಗವನ್ನು ಪ್ರವೇಶಿಸಿದಾಗ ಹರಿಣಿ, ಲೀಲಾವತಿ, ಕಲ್ಪನಾ, ಬಿ.ಸರೋಜಾದೇವಿಯವರಂಥ ಅಚ್ಚ ಕನ್ನಡಿತಿಯರು ನೆಲೆ ಕಂಡುಕೊಳ್ಳುತ್ತಿದ್ದರು. ಸಾಹುಕಾರ್ ಜಾನಕಿ, ಕೃಷ್ಣಕುಮಾರಿ, ರಾಜಶ್ರೀಯವರಂಥ ಆಮದು ನಟಿಯರು ಆಗಮಿಸಿದ್ದರು. ಇವರ ನಡುವೆ ಹೋರಾಡಿ ತಮ್ಮ ನೆಲೆಯನ್ನು ಅವರು ಕಂಡುಕೊಳ್ಳಬೇಕಿತ್ತು. ಆ ನಂತರದಲ್ಲಿ ಅವರು ಜಯಲಲಿತ, ಚಂದ್ರಕಲ, ಭಾರತಿಯವರಂಥ ಹೊಸ ತಲೆಮಾರಿನ ನಟಿಯರ ಸ್ಪರ್ಧೆಗೆ ಒಡ್ಡಿಕೊಳ್ಳಬೇಕಾಯಿತು. ಅದರಲ್ಲೂ ನಟಿ ಕಲ್ಪನಾರವರು ಅಭಿನಯದ ಹೊಸ ಶಾಖೆಯೊಂದನ್ನು ಉದ್ಘಾಟಿಸಿದ ಕಾಲ. ಪ್ರೇಕ್ಷಕರು ಅದನ್ನು ಒಪ್ಪಿಕೊಂಡಿದ್ದಂತಹ ಘಟ್ಟ. ಎಪತ್ತರ ದಶಕದಲ್ಲಿ ಆಧುನಿಕ ಶಿಕ್ಷಣ ಪಡೆದು, ಸಿನಿಮಾ ವೃತ್ತಿಯನ್ನು ಗಂಭೀರವಾಗಿ ಸ್ವೀಕರಿಸಿದ ಆರತಿ, ಮಂಜುಳಾ, ಜಯಮಾಲಾ ಮತ್ತು ಅನೇಕ ಪರಭಾಷಾ ನಟಿಯರ ತೀವ್ರ ಸ್ಪರ್ಧೆಯಲ್ಲಿ ಜಯಂತಿ ಅವರು ತಮ್ಮ ಪ್ರತಿಭೆಯ ಟಿಸಿಲುಗಳನ್ನು ಚಾಚಬೇಕಿತ್ತು. ಆದರೆ 1964ರಿಂದ 1982ರವರೆಗೆ ಇವುಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ಸುಮಾರು ಎರಡು ದಶಕಗಳ ಕಾಲ ತಮ್ಮ ನಾಯಕಿ ಪಟ್ಟವನ್ನು ಉಳಿಸಿಕೊಂಡವರು ಜಯಂತಿ. ಕನ್ನಡದ ಸಂದರ್ಭದಲ್ಲಿ ಜಯಂತಿಯವರಷ್ಟು ದೀರ್ಘಕಾಲ ನಾಯಕಿ ಪಟ್ಟವನ್ನು ಉಳಿಸಿಕೊಂಡ ಮತ್ತೊಂದು ಉದಾಹರಣೆ ಸಿಕ್ಕುವುದಿಲ್ಲ. ಇದು ಸಹ ದಾಖಲಾಗಬೇಕಾದ ಸಂಗತಿ.

1964ರಲ್ಲಿ ಆರಂಭವಾದ ಅವರ ಯಶೋಗಾಥೆ ಮುಂದಿನ ಹದಿನೈದು ವರ್ಷ ಅಬಾಧಿತವಾಗಿ ಮುಂದುವರೆಯಿತು. ಅವರು ಅಭಿನಯಿಸಿದ ಚಿತ್ರಗಳು 1964, 1965ರಲ್ಲಿ ತಲಾ ಆರು ಚಿತ್ರಗಳು ಬಿಡುಗಡೆಯಾದರೆ, 1966ರಲ್ಲಿ ಆ ಸಂಖ್ಯೆ ಏಳಕ್ಕೆ ಏರಿತು. ಮಾರನೇ ವರ್ಷ ಒಂಬತ್ತನ್ನು ದಾಟಿತು. 1968ರಲ್ಲಿ ಅವರು ಅಭಿನಯಿಸಿದ ನಾಲ್ಕು ಚಿತ್ರಗಳು ಬಿಡುಗಡೆಯಾದರೆ, 1969ರಲ್ಲಿ ಬರೊಬ್ಬರಿ ಹತ್ತು ಚಿತ್ರಗಳು ಬಿಡುಗಡೆಯಾದವು. 1971ರಲ್ಲಿ ಈ ಸಂಖ್ಯೆ ಮತ್ತೆ ಪುನರಾವರ್ತನೆಯಾಯಿತು. ಈ ವಿದ್ಯಮಾನ, ಪ್ರತಿವರ್ಷವೂ ನವೀಕರಣವಾಗುತ್ತಾ ಸಾಗಿತು. 1982ರಲ್ಲಿ ಬಿಡುಗಡೆಯಾದ ‘ಧರ್ಮದಾರಿ ತಪ್ಪಿತು’ ಅವರು ಅಭಿನಯಿಸಿದ ನೂರನೇ ಕನ್ನಡ ಚಿತ್ರವೆಂದು ಕಾಣುತ್ತದೆ. ಆ ಚಿತ್ರದ ಅಭಿನಯಕ್ಕಾಗಿ ಜಯಂತಿಯವರು ‘ಶ್ರೇಷ್ಠ ನಟಿ’ ರಾಜ್ಯ ಪ್ರಶಸ್ತಿಯನ್ನು ಪಡೆದರು. ಚಿತ್ರರಂಗವೂ ಪುರುಷ ಪ್ರಾಬಲ್ಯದ ಕ್ಷೇತ್ರ. ಹಾಗಾಗಿ ಸಣ್ಣ ಪುಟ್ಟ ನಟರು ಶತಚಿತ್ರ ಪೂರೈಸಿದರೂ ಸುದ್ದಿಯಾಗುತ್ತದೆ. ಅಭಿನಯದಲ್ಲಿ ಹೊಸ ಶೈಲಿಯೊಂದನ್ನು ಬರೆದ ಜಯಂತಿಯವರ ನೂರನೇ ಚಿತ್ರ ಯಾವುದಿರಬಹುದೆಂಬ ಲೆಕ್ಕವನ್ನು ನಮ್ಮ ಚಿತ್ರರಂಗ ಇಡಲಿಲ್ಲ.
1965ರಲ್ಲಿ ಬಿಡುಗಡೆಯಾದ ‘ಬೆಟ್ಟದ ಹುಲಿ’ ಚಿತ್ರವು ಜಯಂತಿಯವರ ಪಾಲಿಗೆ ಮತ್ತೊಂದು ಮಹತ್ವದ ಚಿತ್ರ. ಎ.ವಿ.ಶೇಷಗಿರಿರಾವ್ ನಿರ್ದೇಶನದ ‘ಬೆಟ್ಟದ ಹುಲಿ’ ಸಾಹಸ ಚಿತ್ರಗಳಲ್ಲಿ ವಿಶಿಷ್ಟವಾದದ್ದು. ಪೊಲೀಸ್ ಅಧಿಕಾರಿಯ ಮನೆಯಲ್ಲಿ ಬೆಳೆದ ಹೆಣ್ಣು ಮಗಳೊಬ್ಬಳು ಸಾಹಸ ಬದುಕಿಗೆ ಆಕರ್ಷಿತಳಾಗುವ ಪಾತ್ರ. ಜೊತೆಗೆ ತಮ್ಮ ಮಾದಕತೆಯಿಂದ ಪ್ರೇಕ್ಷಕರ ಅಂತರಂಗಕ್ಕೆ ಲಗ್ಗೆಯಿಟ್ಟ ಜಯಂತಿಯವರು ಅಶ್ಲೀಲತೆಯ ಸೋಂಕಿಲ್ಲದೆಯೆ ಪರಿಶುದ್ಧ ಪ್ರಣಯ ಭಾವವನ್ನು ಉದ್ದೀಪನಗೊಳಿಸಲು ಸಾಧ್ಯವೆಂಬುದನ್ನು ನಿರೂಪಿಸಿದರು. ಅದೇ ವರ್ಷ ಬಿಡುಗಡೆಯಾದ ‘ಮಿಸ್ ಲೀಲಾವತಿ’ ಜಯಂತಿಯವರ ವೃತ್ತಿ ಜೀವನಕ್ಕೆ ಮತ್ತೊಂದು ತಿರುವು ನೀಡಿದ ಚಿತ್ರ. ಆ ಕಾಲಕ್ಕೆ ‘ಬೋಲ್ಡ್’ ಎನಿಸಿದ ಕಥಾವಸ್ತು. ಸಂಪ್ರದಾಯಗಳನ್ನು ತಿರಸ್ಕರಿಸಿ, ಮದುವೆ ಎಂಬ ಸಾಮಾಜಿಕ ಸಂಸ್ಥೆಯನ್ನು ಧಿಕ್ಕರಿಸಿ, ವಿವಾಹಪೂರ್ವ ಲೈಂಗಿಕತೆಯ ಬಗ್ಗೆ ಮಡಿವಂತಿಕೆಯಿಲ್ಲದ, ಸ್ವತಂತ್ರವಾಗಿ ಬದುಕಲು ಹವಣಿಸುವ ದಿಟ್ಟ ಹೆಣ್ಣೊಬ್ಬಳ ಕತೆ. ಆದರೂ ಸಮಾಜವು ಸಾಮಾಜಿಕ ಒಪ್ಪಂದಗಳಿಗೆ ಬದ್ಧವಾಗಿರುವುದರಿಂದ ಅಂಥ ಪಾತ್ರಗಳು ದುರಂತದಲ್ಲಿ ಅಂತ್ಯವಾಗುವ ಕಥಾ ಚೌಕಟ್ಟಿದ್ದ ಆ ಚಿತ್ರದಲ್ಲಿ ನಾಯಕಿಯಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಲು ಎಲ್ಲ ಅವಕಾಶಗಳಿದ್ದವು. ಜಯಂತಿಯವರು ಅದನ್ನು ಸಮರ್ಥವಾಗಿ ಬಳಸಿಕೊಂಡರು.

1968ರಲ್ಲಿ ಬಿಡುಗಡೆಯಾದ ‘ಜೇಡರ ಬಲೆ’ ಅಭಿನಯದ ದೃಷ್ಟಿಯಿಂದ ಮಹತ್ವದ್ದು ಎನಿಸದು ನಿಜ. ಆದರೆ ಅದರ ಚಾರಿತ್ರಿಕ ಮಹತ್ವವನ್ನು ಅಲ್ಲಗಳೆಯಲಾಗದು. ‘ಮಿಸ್ ಲೀಲಾವತಿ’ ಗಿಂತ ವಿಭಿನ್ನವಾದ ಪಾತ್ರವಿದು. ಅಂದರೆ ‘ಮಿಸ್ ಲೀಲಾವತಿ’ ಪಾತ್ರವು ತಾತ್ವಿಕವಾಗಿ ಸಂಪ್ರದಾಯಗಳನ್ನು ವಿರೋಧಿಸಿ ಈಜುಡುಗೆಯುಟ್ಟು ಮಿಂದರೆ ಅದು ಕತೆಗೆ ಸಹಜವೆಂಬತ್ತಿತ್ತು. ಆದರೆ ಪತ್ತೆದಾರಿ ಚಿತ್ರಗಳಲ್ಲಿ ಬೆತ್ತಲೆಯಾಗಲು ಹೆಣ್ಣುಗಳಿಗೆ ಯಾವುದೇ ತಾತ್ವಿಕ ಆಧಾರಗಳಿಲ್ಲ. ಪ್ರೇಕ್ಷಕನ ಡಿಮ್ಯಾಂಡ್ ಮತ್ತು ನಿರ್ದೇಶನದ ಒಲವಷ್ಟೇ! ಅಥವಾ ಪ್ರೇಕ್ಷಕನಲ್ಲಿ ಬೇಡಿಕೆಯನ್ನು ಸೃಷ್ಟಿಸುವ ಚಿತ್ರೋದ್ಯಮದ ಹುನ್ನಾರವಷ್ಟೆ. ಹಾಗಾಗಿ ‘ಜೇಡರ ಬಲೆ’ ಚಿತ್ರದಲ್ಲಿ ಪತ್ತೆದಾರಿ ಚಿತ್ರಗಳ ನಾಯಕಿಯರು ಸಹಜವಾಗಿ ಅರೆಬತ್ತಲಾಗುವಂತೆ ಜಯಂತಿಯವರು ಮೊದಲ ಬಾರಿಗೆ ಸ್ವಿಮ್‌ಸೂಟ್ ಧರಿಸಿ ಈಜುಕೊಳಕ್ಕಿಳಿದರು. ಆ ಚಿತ್ರದ ಸಾಹಸ ದೃಶ್ಯಗಳಷ್ಟೇ ಜಯಂತಿಯವರು ಡ್ರೆಸ್ ಪ್ರೇಕ್ಷಕರನ್ನು ಸೆಳೆದಿತ್ತು. ಬಾಂಡ್ ಮಾದರಿಯ ಚಿತ್ರಗಳಲ್ಲಿ ಅಭಿನಯಿಸಿದ ರಾಜ್‌ರವರಿಗೆ ದಕ್ಕಿದಷ್ಟೇ ಪ್ರಸಿದ್ಧಿ ತುಂಡುಡುಗೆಯುಟ್ಟ ಜಯಂತಿಯವರಿಗೂ ದೊರಕಿತ್ತು.
ಎಂ.ಆರ್.ವಿಠಲ್‌ರವರು ನಿರ್ದೇಶಿಸಿದ ‘ಎರಡು ಮುಖ’ (1969) ಜಯಂತಿಯವರ ಅಭಿನಯ ಸೂಕ್ಷ್ಮಗಳನ್ನು ಅನಾವರಣಗೊಳಿಸಿದ ಚಿತ್ರ. ಇದು ಮೊದಲ ಕನ್ನಡದ ಮನೋವೈಜ್ಞಾನಿಕ ಚಿತ್ರ. ಸೀಳು ವ್ಯಕ್ತಿತ್ವದ ವ್ಯಕ್ತಿಯ ಮಾನಸಿಕ ವಿಶ್ಲೇಷಣೆಯನ್ನು ಗಂಭೀರವಾಗಿ ನಿರೂಪಿಸಿದ ಚಿತ್ರ. ತಂದೆಯಿಲ್ಲದ, ರೋಗಿಯಾದ ತಾಯಿ ಮತ್ತು ಸಂಸಾರದ ಹೊಣೆ ಹೊತ್ತ ರಮಾ ತಾಯಿ ಸತ್ತಾಗ ಮನೋವಿಕಲ್ಪಕ್ಕೆ ಒಳಗಾಗುತ್ತಾಳೆ. ತನಗೆ ವಂಚನೆಯಾದ ಸುಖ, ಆಮೋದಗಳನ್ನು ಅನುಭವಿಸುವ ಹಂಬಲದ ಹೆಣ್ಣಾಗಿ ಸೀಳು ವ್ಯಕ್ತಿತ್ವದಲ್ಲಿ ಬದುಕುತ್ತಾಳೆ. ಈ ಮಾನಸಿಕ ತುಯ್ದಾಟದಲ್ಲಿ ಆಕೆಯ ಬದುಕು ಪಲ್ಲಟಗೊಳ್ಳುತ್ತದೆ. ಸಂಸಾರದ ಹೊಣೆ ಹೊತ್ತ ರಮಾ ಮತ್ತು ಸುಖವನ್ನು ಮೊಗೆ ಮೊಗೆದು ಕುಡಿಯುವ ‘ಉಮಾ’ ಆಗಿ ವಿಭಿನ್ನ ಭಾವಗಳನ್ನು ಅಭಿವ್ಯಕ್ತಿಸುವ ಪಾತ್ರವನ್ನು ಜಯಂತಿಯವರು ನಿರ್ವಹಿಸುವ ರೀತಿಯೇ ಆಶ್ಚರ್ಯ ಮೂಡಿಸುತ್ತದೆ. ಚಲನಚಿತ್ರಗಳಲ್ಲಿ ಹಾಸ್ಯದ ಟ್ರ್ಯಾಕ್ ತುಂಬಿಸಲು ಮನೋವಿಕಲ ಪಾತ್ರಗಳನ್ನು ಬಳಸುವುದೇ ಹೆಚ್ಚು. ಅಂಥ ಸಂದರ್ಭದಲ್ಲಿ ಪೂರ್ಣಪ್ರಮಾಣದಲ್ಲಿ ಮನೋವಿಶ್ಲೇಷಣೆಯ ಚಿತ್ರವನ್ನು ನಿರ್ಮಿಸುವುದು ಹಾಗೂ ಭಾವಾತಿರೇಕವಿಲ್ಲದಂತೆ ಅಂತಹ ಪಾತ್ರಗಳನ್ನು ನಿರ್ವಹಿಸುವುದು ಸವಾಲಿನ ಕಾರ್ಯ. ನಿರ್ದೇಶಕ ಎಂ.ಆರ್.ವಿಠಲ್‌ರವರ ನಿರೀಕ್ಷೆಯನ್ನು ಹುಸಿ ಮಾಡದೆ ಅಮೋಘವಾಗಿ ‘ರಮಾ’ ಮತ್ತು ‘ಉಮಾ’ ಪಾತ್ರಗಳಿಗೆ ಜಯಂತಿಯವರು ಜೀವ ತುಂಬಿದರು. ಕನ್ನಡ ಚಿತ್ರರಂಗದಲ್ಲಿ ಒಂದು ಮಾನಸಿಕ ರೋಗಿಯ ಪಾತ್ರದಲ್ಲಿ ಇವರಷ್ಟು ಸಂಯಮದಿಂದ ನಟಿಸಿದ ಮತ್ತೊಂದು ಉದಾಹರಣೆ ನೆನಪಾಗದು. ‘ಶರಪಂಜರ’ ಮತ್ತು ‘ಯಾವ ಜನ್ಮದ ಮೈತ್ರಿ’ ಚಿತ್ರದಲ್ಲಿ ಕಲ್ಪನಾ ಅವರ ಅಭಿನಯವನ್ನು ನೆನಪಿಟ್ಟುಕೊಂಡೇ ಈ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ. ಯಾಕೆಂದರೆ ಜಯಂತಿಯವರು ಈ ಪಾತ್ರಗಳಲ್ಲಿ ಅತ್ಯಂತ ಸಹಜವೆಂಬಂತೆ ಅತಿರೇಕಕ್ಕೆ ಎಡೆಯಿಲ್ಲದಂತೆ ಪಾತ್ರನಿರ್ವಹಣೆ ಮಾಡಿದ್ದಾರೆ. ತಮಿಳಿನ ‘ಎದಿರ್ ನೀಚಲ್’ ಚಿತ್ರದಲ್ಲಿಯೂ ಜಯಂತಿಯವರು ಅಂಥದೇ ಪಾತ್ರವೊಂದನ್ನು ಕೆ. ಬಾಲಚಂದರ್ ಅವರ ನಿರ್ದೇಶನದಲ್ಲಿ ಸಮರ್ಥವಾಗಿ ನಿರ್ವಹಿಸಿರುವುದೂ ಇಲ್ಲಿ ದಾಖಲಾರ್ಹ.

ಹೀಗೆ ಚಿತ್ರರಂಗ ಪ್ರವೇಶಿಸಿದ ನಂತರ ಹತ್ತು ವರ್ಷ ತುಂಬುವ ಮೊದಲೇ ಮೊದಲೇ ಜಯಂತಿಯವರು ತಮ್ಮ ಅಭಿನಯ ಶಾಲೆಯ ನಾಲ್ಕು ವಿವಿಧ ಶಾಖೆಗಳನ್ನು ತೆರೆದರು. ಅವರು ಕನ್ನಡದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಇದ್ದ ಸಿದ್ಧಮಾದರಿಗಳನ್ನು ಒಡೆದು ಜಯಿಸಿದರು. ಸಂಪ್ರದಾಯ ನಾಯಕಿಯರ ಇಮೇಜುಗಳನ್ನು ಮೀರಿ ಬೆಳೆದರು. ಹೊಸ ವಸ್ತುವನ್ನು ಆರಿಸಿಕೊಳ್ಳಲು ಧೈರ್ಯ ಮಾಡುತ್ತಿದ್ದ ಆ ಕಾಲದ ನಿರ್ದೇಶಕರಿಗೆ ಜಯಂತಿಯವರಿದ್ದಾರೆ ಎಂಬ ಭರವಸೆಯಿರುತ್ತಿತ್ತು. ಹಾಗಾಗಿ ಅವರು ‘ನಿರ್ದೇಶಕರ ನಟಿ’ಯಾದರು. ಯಾವುದೇ ತಾತ್ವಿಕ ಸಂಕಷ್ಟಗಳನ್ನು ಮೈಮೇಲೆ ಹಾಕಿಕೊಳ್ಳದೆ, ಬೌದ್ಧಿಕ ಗೋಜಲುಗಳಿಗೆ ಸಿಲುಕದೆ ಕೇವಲ ಸಹಜವಾಗಿ ದಕ್ಕಿದ ಅಭಿನಯ ಪ್ರತಿಭೆಯಿಂದಲೇ ಅವರು ಸಾಧನೆಯ ಶಿಖರವನ್ನೇರಿದರು. ಜಯಂತಿಯವರ ಅಭಿನಯ ಮಾದರಿಗಳತ್ತ ಗಮನ ಹರಿಸಿದರೆ ಕನ್ನಡ ಚಿತ್ರರಂಗವು ಕಂಡ ಮತ್ತು ದುಡಿಸಿಕೊಂಡ ಅತ್ಯಂತ ಪ್ರತಿಭಾವಂತ ನಟಿ ಎಂಬುದು ಎದ್ದು ಕಾಣುತ್ತದೆ. ಅವರು ಅಭಿನಯದಲ್ಲಿ ತೋರಿದ ವೈವಿಧ್ಯ ಆ ನಟಿಯು ಪಡೆದಿರುವ ಭಾವನಾ ಸಂಪತ್ತನ್ನು ಅನಾವರಣಗೊಳಿಸುತ್ತದೆ. ಅಭಿನಯದ ಅನೇಕ ಪ್ರಯೋಗಗಳಲ್ಲಿ ತನ್ನನ್ನು ತೊಡಗಿಸಿಕೊಂಡೂ ಅವರು ಯಶಸ್ಸು ಕಂಡ ವಿದ್ಯಮಾನ ಅಚ್ಚರಿ ಮೂಡುತ್ತದೆ. ಇದನ್ನು ಹೇಳಲು ಕಾರಣವಿದೆ.
ಭಾರತದ ಪ್ರೇಕ್ಷಕ ಬ್ರೆಕ್ಟ್‌ನ ಅನುಯಾಯಿಗಳಲ್ಲ. ನಾಟಕದ ಕಥಾವಸ್ತು ಮತ್ತು ಕಲಾವಿದರ ಜೊತೆ ಲೀನವಾಗದೆ ನಾಟಕ ಮೂಡಿಸುವ ‘ಅನುಭವ’ವೇ ಪ್ರೇಕ್ಷಕನಿಗೆ ಮುಖ್ಯವಾಗಬೇಕೆಂಬ ವಾದ ನಾಟಕಕಾರ ಬ್ರೆಕ್ಟ್‌ನದು. ಆದರೆ ಸಾಮಾನ್ಯ ಭಾರತೀಯ ಪ್ರೇಕ್ಷಕರು ಕಲಾವಿದನನ್ನು ‘ಇಮೇಜಿ’ನಲ್ಲಿ ಬಂಧಿಸುತ್ತಾರೆ. ಆ ‘ಇಮೇಜು’ ಅಥವಾ ಬಿಂಬ ತನ್ನದೇ ರೂಪ ಎಂದೂ ಕಲಾವಿದ ಭ್ರಮಿಸಿ ಅದಕ್ಕೆ ಅಂಟಿಕೂರುವ ಸಂಪ್ರದಾಯವೂ ಇದೆ. ಆ ಇಮೇಜಿನ ಚೌಕಟ್ಟಿನಿಂದಾಚೆಗೆ ಸ್ವಲ್ಪ ಸರಿದರೂ ಪ್ರೇಕ್ಷಕನ ಪ್ರತಿಕ್ರಿಯೆ ವಿಚಿತ್ರವಾಗಿರುತ್ತದೆ. ಹಾಗಾಗಿ ಇಮೇಜಿನ ಪಂಜರದೊಳಕ್ಕೆ ಕಲಾವಿದ ಅಂಟಿಕೂತು ‘ಸ್ಟಾರ್’ ಆಗಿ ಉಳಿಯುತ್ತಾನೆ. ಒಬ್ಬ ಕಲಾವಿದ ‘ಇಂಥ’ ಪಾತ್ರಗಳಿಗೇ ಲಾಯಕ್ಕು ಎಂದು ಪ್ರೇಕ್ಷಕ ಮತ್ತು ಉದ್ಯಮ ತೀರ್ಮಾನಿಸಿಬಿಡುತ್ತದೆ. ಹಾಗಾಗಿ ಆ ‘ಬಿಂಬ ರಾಜಕಾರಣ’ಕ್ಕೆ ಬಲಿಯಾದ ಕಲಾವಿದರ ಬಹುದೊಡ್ಡ ಪಟ್ಟಿಯೇ ಇದೆ. ಅದರಲ್ಲೂ ಸಂಪ್ರದಾಯ ಚೌಕಟ್ಟನ್ನು ಮೀರುವ ಮಹಿಳೆಯರ ಅಥವಾ ‘ತಪ್ಪು ಹಾದಿ ಹಿಡಿದ’ (Wronged) ಮಹಿಳೆಯರ ಪಾತ್ರವನ್ನು ವಹಿಸಿದ ಮಹಿಳಾ ಕಲಾವಿದರನ್ನು ಅದೇ ಚೌಕಟ್ಟಿನಲ್ಲಿ ಬಂಧಿಸಿಟ್ಟಿರುವ ಅನೇಕ ಉದಾಹರಣೆಗಳಿವೆ. ಹೀಗಾಗಿ ಪಾತ್ರಕ್ಕೆ ಅಗತ್ಯವಿರಲಿ ಇಲ್ಲದಿರಲಿ ಕಲಾವಿದರಿಗೆ ಅಂಟಿಕೊಂಡ ಇಮೇಜ್ ಪಾತ್ರವನ್ನು ನಿಯಂತ್ರಿಸುತ್ತದೆ. ‘ತಪ್ಪು ಹಾದಿ ಹಿಡಿದ’ ಮಹಿಳಾ ಪಾತ್ರಗಳಿಗಂತೂ ಪ್ರೇಕ್ಷಕನಿಂದ ಸಹಾನುಭೂತಿ ಗಳಿಸುವುದು ಕಷ್ಟ ಸಾಧ್ಯ. ನನಗೆ ತಿಳಿದಂತೆ ಅಂತಹ ಪಾತ್ರಗಳನ್ನು ಘನತೆಯಿಂದ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದ ಕಲಾವಿದೆಯೆಂದರೆ ವಹೀದಾ ರೆಹಮಾನ್. ಕನ್ನಡದ ಮಟ್ಟಿಗೆ ಅಂಥ ಸಾಧನೆ ಮಾಡಿದವರಲ್ಲಿ ಮೊದಲಿಗರು ಜಯಂತಿಯವರೇ!

ಜಯಂತಿಯವರ ಅಭಿನಯ ಮಾದರಿಗಳತ್ತ ಈಗ ಸ್ವಲ್ಪ ವಿವರವಾಗಿ ನೋಡುವುದೊಳಿತು.
ತಾವು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ಚಂದವಳ್ಳಿಯ ತೋಟ’ ಚಿತ್ರದಲ್ಲಿ ಸಂಕಷ್ಟಗಳ ನಡುವೆಯೂ ಸಂಸಾರವನ್ನು ಉಳಿಸಿಕೊಳ್ಳಲು ಯತ್ನಿಸುವ ಪಾತ್ರದಲ್ಲಿ ಜಯಂತಿಯವರು ಮನೋಜ್ಞ ಅಭಿನಯ ನೀಡಿದ್ದರು. ಅಂತಹ ಅನೇಕ ಪಾತ್ರಗಳನ್ನು ಅವರು ಬೇರೆ ಬೇರೆ ನಿರ್ದೇಶಕರ ಚಿತ್ರಗಳಲ್ಲಿ ನಿರ್ವಹಿಸಿದ್ದಾರೆ. ಪ್ರಮುಖವಾಗಿ ‘ಮುರಿಯದ ಮನೆ’ ‘ಚಕ್ರತೀರ್ಥ’ ಚಿತ್ರದಲ್ಲಿನ ಕಮಲ ಮತ್ತು ಲಲಿತ, ‘ಪುನರ್ಜನ್ಮ’ ಚಿತ್ರದ ನೀಲಾ, ‘ಚಿಕ್ಕಮ್ಮ’ ಚಿತ್ರದ ಗೌರಿ, ‘ನನ್ನ ತಮ್ಮ’ ಚಿತ್ರದ ಮಂಜುಳಾ, ‘ಬಾಳ ಬಂಧನ’, ‘ಸಂಶಯ ಫಲ’, ‘ಮಣ್ಣಿನ ಮಗಳು’, ‘ಕುಲಗೌರವ’, ‘ಮನಸ್ಸಿದ್ದರೆ ಮಾರ್ಗ’ ಇಂಥ ಚಿತ್ರಗಳಲ್ಲಿ ಆ ಮಾದರಿಗಳನ್ನು ನೋಡಬಹುದು. ಇಲ್ಲಿ ಸಂಕಷ್ಟದಲ್ಲಿ ಬೇಯುವ, ಸಂಸಾರವನ್ನು ತಹಬಂದಿಗೆ ತರಲು ಹೋರಾಡಿ ಯಶಸ್ವಿಯಾಗುವ ಇಲ್ಲವೇ ಸೋಲು ಕಾಣುವ ಪಾತ್ರಗಳಿವೆ. ಅವುಗಳೆಲ್ಲಕ್ಕೂ ಜಯಂತಿಯವರ ಅಭಿನಯದ ಸ್ಪರ್ಶವಿದೆ. ‘ಅಳುಮುಂಜಿ’ಯ ಪಾತ್ರದಂತೆ ಕಂಡರೂ ತಮ್ಮ ಅಭಿನಯದ ಮೂಲಕ ಪಾತ್ರಗಳಿಗೆ ದೃಢತೆಯ ಸಂಕಲ್ಪವನ್ನು ಲೇಪಿಸಬಲ್ಲ ಸಾಮರ್ಥ್ಯವನ್ನು ಈ ಚಿತ್ರಗಳಲ್ಲಿ ಬಿಂಬಿಸುತ್ತಾರೆ.
ಇದೇ ಮಾದರಿಯ ಕೆಲವು ಚಿತ್ರಗಳಲ್ಲಿನ ಮಹಿಳಾ ಪಾತ್ರಗಳು ಜಯಂತಿಯವರು ಅಭಿನಯದ ಕಾರಣಕ್ಕಾಗಿ ಹೊಸ ಚಹರೆಯನ್ನು ಪಡೆದುಕೊಳ್ಳುವ ಪವಾಡವನ್ನು ಕಾಣಬಹುದು. ಅದರಲ್ಲಿ ‘ಕಸ್ತೂರಿ ನಿವಾಸ’ದ ನೀಲಾ ಪಾತ್ರವೂ ಒಂದು. ರಾಜ್ ಮತ್ತು ಕೆ.ಎಸ್.ಅಶ್ವಥ್‌ರವರ ಅಮೋಘ ಅಭಿನಯದ ನಡುವೆಯೂ ಜಯಂತಿಯವರು ತಮ್ಮ ಇರುವಿಕೆಯನ್ನು ಸ್ಪಷ್ಟವಾಗಿ ದಾಖಲಿಸಿದ ಚಿತ್ರವಿದು. ಅನಾಥ ಹೆಣ್ಣು ನೀಲಾ, ಕಸ್ತೂರಿ ನಿವಾಸದ ರಘು ಮತ್ತು ಮತ್ತೊಬ್ಬ ಅನಾಥ ಚಂದ್ರುವಿನ ಬಾಳಿನಲ್ಲಿ ತರುವ ಪಲ್ಲಟಗಳು ಇಡೀ ಕತೆಯನ್ನು ಆವರಿಸಿಕೊಳ್ಳುತ್ತವೆ. ಆ ಪಾತ್ರದ ಮಾನಸಿಕ ಭಾವನೆಗಳನ್ನು ಅಸ್ಪಷ್ಟವಾಗಿಯೇ ಉಳಿಸಿರುವ ನಿರ್ದೇಶಕರು ಅದಕ್ಕೊಂದು ವಿಚಿತ್ರ ಆಕರ್ಷಣೆಯನ್ನು ಸೃಷ್ಟಿಸಿದ್ದಾರೆ. ಮುಖ್ಯವಾಗಿ ಆರಂಭದಲ್ಲಿ ಬರುವ ‘ಎಲ್ಲೇ ಇರು ಹೇಗೇ ಇರು’ ಹಾಡಿನಲ್ಲಿ ತೋರುವ ಅವರ ಮುಖದಲ್ಲಿನ ಭಾವನೆ ಮತ್ತು ‘ಕಸ್ತೂರಿ ನಿವಾಸ’ ಅವನತಿಯತ್ತ ಸಾಗಿದಂತೆ ನರಳುವ ಹೆಣ್ಣಾಗಿ ತೋರುವ ನಟನೆ ಮತ್ತು ಅಂತ್ಯದಲ್ಲಿ ವ್ಯಕ್ತಪಡಿಸುವ ಅನೇಕ ಪದರುಗಳ ಅಭಿನಯದ ಮೂಲಕ ನೀಲಾಳ ಪಾತ್ರವನ್ನು ಎದ್ದು ಕಾಣುವಂತೆ ಮಾಡಿದ್ದರೆ. ಬಂಗಲೆಯೊಳಗಿನ ಕಣ್ಣಾ ಮುಚ್ಚಾಲೆ ಆಟ ಮತ್ತು ತನ್ನ ಮದುವೆ ಪ್ರಸ್ತಾಪವನ್ನು ‘ಬಾಸ್’ ಮುಂದೆ ಮಂಡಿಸುವ ಕ್ರಮ ಜಯಂತಿಯವರೊಬ್ಬರಿಂದಲೇ ಸಾಧ್ಯ ಎಂಬುದು ನಿರೂಪಿತವಾಗುತ್ತದೆ.

‘ಹಾದಿ ತಪ್ಪಿದ ಹೆಣ್ಣಾಗಿ’ಯೂ ಪ್ರೇಕ್ಷಕರನ್ನು ತುದಿಗಾಲಲ್ಲಿರಿಸಿದ ಜಯಂತಿಯವರ ಅಭಿನಯವನ್ನು ಕಾಣಬೇಕಾದರೆ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರವನ್ನು ನೋಡಬೇಕು. ಗಂಡನಿಂದ ಪಡೆಯದ ಲೈಂಗಿಕ ತೃಪ್ತಿಯನ್ನು ಆಕಸ್ಮಿಕವಾಗಿ ಪರಪುರುಷನಲ್ಲಿ ಪಡೆದು ಪಾಪಪ್ರಜ್ಞೆಯಿಂದ ನರಳುವ ‘ಮಾಧವಿ’ ಪಾತ್ರ ಅನೇಕ ಸ್ತರಗಳ ಪಾತ್ರ. ತಾನು ಮೋಹಿಸಿದ ಪುರುಷನೇ ತನ್ನ ತಂಗಿಯನ್ನೂ ಮೋಹಿಸುವುದನ್ನು ಕಂಡು, ಅಸೂಯೆ, ಸಿಟ್ಟಿನಿಂದ ಕೆರಳುವ ಮಾಧವಿ ಕೊನೆಗೂ ಸಂಪ್ರದಾಯದ ಕಟ್ಟಲೆಗಳಿಗೆ ಬಲಿಯಾಗುತ್ತಾಳೆ. ಈ ಪಾತ್ರದಲ್ಲಿ ಜಯಂತಿಯವರ ಆಂಗಿಕ ಅಭಿನಯ ಉತ್ತುಂಗಕ್ಕೇರಿದವುದನ್ನು ಗಮನಿಸಬಹುದು. ಎಡಕಲ್ಲು ಗುಡ್ಡದಿಂದ ಬೈಕಿನಲ್ಲಿ ಕುಳಿತು ಮರಳಿದ ಮಾಧವಿ ಅಲ್ಲಿಂದ ಹೊರಡುವ ಬೈಕಿನ ಶಬ್ದಕ್ಕೆ ಪ್ರತಿಕ್ರಿಯಿಸುವ ರೀತಿ ಮತ್ತು ತನ್ನ ಮಾನಸಿಕ ತುಮುಲಗಳನ್ನು ತಹಬಂದಿಗೆ ತರಲು ನೀರನ್ನು ಗಟಗಟನೆ ಕುಡಿಯುವ ದೃಶ್ಯ ಅಭಿನಯ ಸೂಕ್ಷ್ಮಗಳನ್ನು ಕಲಿಯುವ ವಿದ್ಯಾರ್ಥಿಗಳಿಗೊಂದು ಅಧ್ಯಯನ ವಸ್ತು. ಅದೇ ರೀತಿ ತನ್ನದೇ ಮನೆಯಲ್ಲಿ ತನ್ನ ಎದುರೇ ತಂಗಿಯ ಬಳಿ ಹೋಗಲು ಯತ್ನಿಸುವ ನಂಜುಂಡನಿಗೇ ಸಿಟ್ಟಿನಿಂದ ತೋರುಬೆರಳಿನಲ್ಲಿ ದಾರಿತೋರುವ ದೃಶ್ಯದಲ್ಲಿ ಆಕೆಯ ನಟನೆಯನ್ನು ಹೇಗೆ ಮರೆಯಲು ಸಾಧ್ಯ. ಪ್ರೇಕ್ಷಕನಿಗೆ ಅದೇ ರೀತಿ ‘ಮಸಣದ ಹೂವು’ ಚಿತ್ರದಲ್ಲಿ ವೇಶ್ಯಾ ಗೃಹದ ಒಡತಿಯಾಗಿ ಜಯಂತಿಯವರು ತಮ್ಮ ಅಭಿನಯದ ಸೂಕ್ಷ್ಮಗಳನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಹೀಗೆ ‘ರಾಂಗ್‌ಡ್’ ಮಹಿಳೆಯ ಪಾತ್ರವನ್ನು ಘನತೆಯಿಂದ ನಿರ್ವಹಿಸಿ ಗೆದ್ದ ಜಯಂತಿಯವರು ಕಲಾವಿದರಾಗಿಯೇ ಉಳಿದುಕೊಂಡು ಬಂದದ್ದು ಕನ್ನಡ ಚಿತ್ರರಂಗದ ಸೋಜಿಗಗಳಲ್ಲೊಂದು.
ಜಯಂತಿಯವರು ಅಭಿನಯದ ಮತ್ತೊಂದು ಮಾದರಿಯೆಂದರೆ ‘ಗಯ್ಯಾಳಿ’ಯ ಪಾತ್ರಗಳು. ಸಾಮಾನ್ಯವಾಗಿ ನಾಯಕಿಯರು ಮೃದುವಾಗಿ ಮಾತನಾಡುತ್ತಾ, ಗಂಡಸರನ್ನು ಅತಿ ವಿನಯದಿಂದ ಸಂಬೋಧಿಸುತ್ತಾ, ನಯವಿನಯ ಮೈಗೂಡಿಸಿಕೊಂಡ ವರ್ತನೆಗಳನ್ನು ಸೂಸುತ್ತಾ ಗಂಡಸರ ಮನಸ್ಸನ್ನು ಗೆಲ್ಲುವವರಾಗಿದ್ದರು. ಗಯ್ಯಾಳಿತನ ಅತ್ತೆಯರು, ಮನೆಯ ಸೊಸೆಯಂದಿರು ಇಲ್ಲವೇ ಸಾಧ್ವೀಮಣಿಗಳಿಗೆ ಕಾಟ ಕೊಡುವ ನಾದಿನಿಯರ ಪಾಲಾಗಿತ್ತು. ಅರವತ್ತರ ದಶಕದಲ್ಲಿ ಚಿತ್ರಗಳ ಆಕರ್ಷಣೆಯ ಅಂಶವಾಗಿ ಅದನ್ನು ನಾಯಕಿಯರಿಗೂ ವರ್ಗಾಯಿಸಲಾಯಿತು. ಅಂಥದೊಂದು ಬಜಾರಿ ಪಾತ್ರ ‘ಅಣ್ಣ-ತಂಗಿ’ಯಲ್ಲಿ ನಾಯಕಿಯಾಗಿದ್ದ ಬಿ.ಸರೋಜಾದೇವಿಯವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಆ ನಂತರ ಅಂಥ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು ಜಯಂತಿಯವರು. ಮುಂದೆ ಆ ಪರಂಪರೆಯನ್ನು ಮಂಜುಳಾ ಮತ್ತು ಮಾಲಾಶ್ರೀ ಗಟ್ಟಿಯಾಗಿ ಮುಂದುವರೆಸಿದರು. ‘ಲಗ್ನಪತ್ರಿಕೆ’ (1967) ಚಿತ್ರದಲ್ಲಿ ಬ್ರಹ್ಮಚರ್ಯದ ವ್ರತ ತೊಟ್ಟ ರಘುವನ್ನು ಛೇಡಿಸುವ ಸೀತಾ ಪಾತ್ರದಲ್ಲಿ ಜಯಂತಿಯವರ ‘ಬಜಾರಿ’ ಪಾತ್ರ ಮುಂಚೂಣಿಗೆ ಬಂತು. ತಮ್ಮ ಬಿಡುಬೀಸಾದ ಹಾವಭಾವ, ನಿಯಂತ್ರಣ ತೊರೆದಂತೆ ಕಾಣುವ ವರ್ತನೆ, ಪಟಪಟನೆ ಸಿಡಿಯುವ ಮಾತುಗಳಿಂದ ಅವರು ಗಯ್ಯಾಳಿಯ ಪಾತ್ರಗಳಿಗೆ ಹೊಸ ಆಯಾಮವನ್ನೇ ನೀಡಿದರು. ಮುಖ್ಯವಾಗಿ ‘ಲಗ್ನಪತ್ರಿಕೆ’, ‘ರೌಡಿ ರಂಗಣ್ಣ’, ‘ಚೂರಿ ಚಿಕ್ಕಣ್ಣ’, ‘ಭಲೇ ರಾಜ’, ‘ಭಲೇ ಬಸವ’, ‘ದೇವರ ಮಕ್ಕಳು’, ‘ಪರೋಪಕಾರಿ’, ‘ಬಹದ್ದೂರ್ ಗಂಡು’, ‘ಶ್ರೀಮಂತನ ಮಗಳು’, ‘ಸಿಡಿಲು ಮರಿ’ ಇತ್ಯಾದಿ ಚಿತ್ರಗಳು ಅವರ ಆ ಬಗೆಯ ಅಭಿನಯ ಮಾದರಿಯನ್ನು ಹೊರಹಾಕಿದವು. ಗಂಡನ್ನು ಏಕವಚನದಿಂದ ಸಂಬೋಧಿಸುತ್ತಾ ಸವಾಲು ಹಾಕುವ ಪಾತ್ರಗಳಲ್ಲಿ ಜಯಂತಿಯವರು ಮೂಡಿಸುತ್ತಿದ್ದ ಭಾವ ಅಪ್ಯಾಯಮಾನವೆನಿಸುತ್ತಿತ್ತು. ‘ಭಲೇ ಬಸವ’ ಚಿತ್ರದಲ್ಲಿನ ಅವರ ಬಜಾರಿತನ ಮತ್ತು ‘ಕಂಡ್ಯಾ ಕಂಡ್ಯೇನೊ ಬಸವಾ’ ಹಾಡು ಮನೆ ಮಾತಾಗಿತ್ತು. ವಿಚಿತ್ರವೆಂದರೆ ಡಾ.ರಾಜ್ ಮತ್ತು ಜಯಂತಿಯವರು ಜೋಡಿಯಾಗಿದ್ದ ಚಿತ್ರಗಳಲ್ಲೇ ಅವರು ಹೆಚ್ಚು ಸಂಖ್ಯೆಯಲ್ಲಿ ಬಜಾರಿ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ. (ಎಲ್ಲರೂ ರಾಜ್ ಅವರನ್ನು ಅಣ್ಣಾವ್ರು, ಸರ್ ಎಂದು ಸಂಬೋಧಿಸಿದರೆ ಇಡೀ ಚಿತ್ರರಂಗದಲ್ಲಿ ರಾಜ್ ಅವರನ್ನು ರಾಜ್… ರಾಜ್ ಎಂದು ಸಲುಗೆಯಿಂದ ಕರೆಯುತ್ತಿದ್ದದ್ದು ಜಯಂತಿ ಒಬ್ಬರೇ!) ದುರಂತ ಸೂಸುವ ಪಾತ್ರಗಳನ್ನು ನಿರ್ವಹಿಸುವಷ್ಟೇ ಸಲೀಸಾಗಿ ಜಯಂತಿಯವರು ಹಾಸ್ಯ ಮತ್ತು ಗಯ್ಯಾಳಿ ಪಾತ್ರವನ್ನು ನಿರ್ವಹಿಸುತ್ತಿದ್ದ ರೀತಿ ನಿಜಕ್ಕೂ ವಿಸ್ಮಯಕಾರಿ.

ಕನ್ನಡದ ಸಂದರ್ಭದಲ್ಲಿ ಜಯಂತಿಯವರು ಹಲವು ಸಾಹಸಗಳ, ಸವಾಲಿನ ಮತ್ತು ‘ಬೋಲ್ಡ್’ ಎನಿಸುವ ಪ್ರಯೋಗಗಳಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ‘ಬೆಟ್ಟದ ಹುಲಿ’ ಚಿತ್ರದಿಂದ ಆರಂಭವಾದ ಅವರ ಸಾಹಸವು ‘ಜೇಡರ ಬಲೆ’, ‘ಭಾರತದ ರತ್ನ’, ‘ಕ್ರಾಂತಿವೀರ’, ‘ಬಹದ್ದೂರ್ ಗಂಡು’, ‘ಜಯವಿಜಯ’ ಚಿತ್ರಗಳನ್ನು ಹಾಯ್ದು ‘ವಜ್ರದ ಜಲಪಾತ’ದವರೆಗೆ ಮುಂದುವರೆಯಿತು. ಕುದುರೆಯೇರಿ, ಕತ್ತಿ ಝಳಪಿಸಿ, ಹಂಟರ್ ಬೀಸಿ, ಸಾಹಸ ದೃಶ್ಯಗಳನ್ನು ನಿರ್ವಹಿಸಿ ರಸಿಕರಲ್ಲಿ ರೋಮಾಂಚನ ಮೂಡಿಸಿದಷ್ಟೆ ಸಲೀಸಾಗಿ ತುಂಡುಡುಗೆ ತೊಟ್ಟು ನೀರಿನಲ್ಲಿ ಈಜಾಡುತ್ತಾ ಅವರ ಭಾವಗಳನ್ನು ಉದ್ದೀಪನಗೊಳಿಸಿದರು. ಆದರೆ ಜಯಂತಿಯವರು ತುಂಡುಡುಗೆಗಿಂತಲೂ ಕೇವಲ ಮುಖಭಾವದಿಂದಲೇ ಮಾದಕತೆಗೆ ಹೊಸತೊಂದು ಭಾಷ್ಯ ಬರೆದರು. ತಮ್ಮ ಆಂಗಿಕ ಚಲನೆಯಿಂದ ರಸಿಕರೆದೆಯಲ್ಲಿ ಕಿಚ್ಚಿಟ್ಟರು. ‘ಬೆಟ್ಟದ ಹುಲಿ’ ಚಿತ್ರದ ‘ಏಕೋ ಈ ದಿನ ಏನೋ ತಲ್ಲಣ’ ಹಾಡಿನಲ್ಲಿ ಸ್ವಚ್ಛಂದ ಪ್ರಕೃತಿಯ ನಡುವೆ ಕುಣಿವ ಹೆಣ್ಣಾಗಿ ಮತ್ತು ‘ಲಗ್ನ ಪತ್ರಿಕೆ’ಯ ’ನಿನ್ನಿಂದ ನಾನೆಂದು ಹಗಲಿರುಳೂ ಹಂಬಲಿಸಿ’ ಹಾಡಿನಲ್ಲಿ ಬೃಂದಾವನದ ಕಾರಂಜಿಯ ನಡುವೆ ನಡೆದಾಡುವ ಅಪ್ಸರೆಯಾಗಿ ಅವರು ಮೂಡಿಸಿದ ಬಿಂಬಗಳು ಮಾದಕತೆಯ ಹೊಸ ಬಗೆಯ ವಿನ್ಯಾಸಗಳು. ‘ಬಾಳು ಬೆಳಗಿತು’ ಚಿತ್ರದ ‘ಕಮಲದ ಹೂವಿಂದ ಕೆನ್ನೆಯ ಮಾಡಿದನು’ ಹಾಡು ಅದರ ಮೂರ್ತರೂಪದಂತಿತ್ತು. ಹೀಗೆ ಹತ್ತು ಹಲವಾರು ಚಿತ್ರಗಳಲ್ಲಿ ಅವರು ಕೇವಲ ಮುಖಭಾವ ಮತ್ತು ಆಂಗಿಕ ಅಭಿನಯದಿಂದ ರಸಿಕರೆದೆಯಲ್ಲಿ ಸಂತಸದ ಬಿರುಗಾಳಿಯನ್ನು ಎಬ್ಬಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಅಗ್ರಗಣ್ಯ ನಾಯಕಿಯರಲ್ಲಿ ಡಾ. ರಾಜ್‌ರವರ ಜೊತೆ ಅತಿ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡ ಅಗ್ಗಳಿಕೆಯೂ ಜಯಂತಿಯವರಿಗೆ ಸಲ್ಲುತ್ತದೆ. ವಿಶೇಷವೆಂದರೆ, ಕೆಲವೇ ಚಿತ್ರಗಳನ್ನು ಹೊರತುಪಡಿಸಿದರೆ (ಶ್ರೀರಾಮಾಂಜನೇಯ ಯುದ್ಧ, ತುಂಬಿದ ಕೊಡ, ಮಹಾಸತಿ ಅನಸೂಯ, ಮೂರುವರೆ ವಜ್ರಗಳು) ಉಳಿದೆಲ್ಲ ಚಿತ್ರಗಳಲ್ಲಿ ಅವರೇ ನಾಯಕಿ. ‘ನನ್ನ ತಮ್ಮ’ ಮತ್ತು ‘ಕಸ್ತೂರಿ ನಿವಾಸ’ದಲ್ಲಿ ರಾಜ್ ಜೋಡಿಯಲ್ಲದಿದ್ದರೂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡದ್ದು ವಿಶೇಷ. ಒಂದು ಕಾಲಕ್ಕೆ ಉದಯ್‌ಕುಮಾರ್ – ಜಯಂತಿಯವರ ಜೋಡಿಯೂ ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಯೆನಿಸಿತ್ತು. ಸರಿಸುಮಾರು ಎರಡು ತಲೆಮಾರಿನ ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ ಖ್ಯಾತಿಯೂ ಜಯಂತಿಯವರಿಗೆ ಸಲ್ಲುತ್ತದೆ. ಕುಮಾರತ್ರಯರಲ್ಲದೆ, ಅರವತ್ತರ ದಶಕದಲ್ಲಿ ಬಿ.ಎಂ.ವೆಂಕಟೇಶ್, ಅರುಣ್‌ಕುಮಾರ್, ರಾಜೇಶ್, ರಮೇಶ್ ಅವರಿಗೆ ಜೋಡಿಯಾಗಿ ನಟಿಸಿದ ಜಯಂತಿಯವರು ಆ ಸರಣಿಯನ್ನು ಎಪ್ಪತ್ತರ ದಶಕದಲ್ಲೂ ಮುಂದುವರೆಸಿದರು. ಜೊತೆಗೆ ಆಗಿನ ಹೊಸ ತಲೆಮಾರಿನ ನಟರಾದ ಗಂಗಾಧರ್, ಶ್ರೀನಾಥ್, ವಿಷ್ಣುವರ್ಧನ್, ಅನಂತ್‌ನಾಗ್, ಬಸಂತಕುಮಾರ ಪಾಟೀಲ್, ಮಾನು, ಲೋಕೇಶ್, ಅಂಬರೀಷ್, ಶ್ರೀನಿವಾಸಮೂರ್ತಿ, ಪ್ರಭಾಕರ್ ಅವರ ಚಿತ್ರಗಳಲ್ಲೂ ಜೋಡಿಯಾಗಿ ನಟಿಸಿದರು. ಸುದೀರ್ಘಕಾಲ, ಅಷ್ಟೊಂದು ಸಂಖ್ಯೆಯ ನಾಯಕರೊಡನೆ ನಟಿಸಿದ ಮತ್ತೊಬ್ಬ ನಟಿಯು ಸಿಗುವುದು ವಿರಳ. ಜಯಂತಿಯವರು ಅಭಿನಯ ಪ್ರೌಢಿಮೆಯೇ ಅವರ ವೃತ್ತಿ ಬದುಕಿನ ದೀರ್ಘಾವಧಿಗೆ ಕಾರಣವಾಯಿತು.

ಜಯಂತಿಯವರು ನಿರ್ದೇಶಕರ ಪಾಲಿಗೆ ಅತ್ಯಂತ ಪ್ರಿಯವಾದ ನಟಿಯರಾಗಿದ್ದರು. ತಮ್ಮ ಕಲ್ಪನೆಯ ನಾಯಕಿಗೆ ಜಯಂತಿಯವರು ನ್ಯಾಯ ಒದಗಿಸಬಲ್ಲರೆಂಬ ವಿಶ್ವಾಸ ಕನ್ನಡದ ಪ್ರಖ್ಯಾತ ನಿರ್ದೇಶಕರಿಗಿತ್ತು. ಆ ಕಾರಣಕ್ಕಾಗಿಯೇ ಪ್ರತಿಭಾವಂತ ನಿರ್ದೇಶಕರೆಲ್ಲರೂ ತಮ್ಮ ಒಂದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಜಯಂತಿಯವರನ್ನು ನಿರ್ದೇಶಿಸಿದ್ದಾರೆ. ಅವರನ್ನು ಕನ್ನಡಕ್ಕೆ ಪರಿಚಯಿಸಿದ ವೈ.ಆರ್.ಸ್ವಾಮಿ ಮತ್ತು ಎ.ವಿ.ಶೇಷಗಿರಿರಾವ್ ಅವರು ಜಯಂತಿಯವರಿಗಿದ್ದ ಕಮರ್ಶಿಯಲ್ ಮೌಲ್ಯವನ್ನು ಸಂಪೂರ್ಣವಾಗಿ ಬಸಿದರೆ ಎಂ.ಆರ್.ವಿಠಲ್, ದೊರೈ-ಭಗವಾನ್ ಮತ್ತು ಪುಟ್ಟಣ್ಣನವರು ಅವರಲ್ಲಿದ್ದ ಕಲಾವಿದೆಯನ್ನು ಕೆಣಕಿ ಉತ್ತಮ ಅಭಿನಯವನ್ನು ತೆಗೆದರು. ಜೊತೆಗೆ ಜಯಂತಿಯವರ ಪ್ರತಿಭೆಯನ್ನು ಸಮರ್ಥವಾಗಿ ದುಡಿಸಿಕೊಂಡವರ ಪಟ್ಟಿಯಲ್ಲಿ ಟಿ.ವಿ. ಸಿಂಗ್‌ಠಾಕೂರ್ ಮತ್ತು ಪೇಕೇಟಿ ಶಿವರಾಂ ದೊರೈಭಗವಾನ್, ಬಿ.ಎಸ್. ರಂಗ, ಕೆ.ಎಸ್.ಎಲ್. ಸ್ವಾಮಿ, ಹುಣಸೂರು ಕೃಷ್ಣಮೂರ್ತಿ, ಗೀತಪ್ರಿಯ ಮತ್ತು ಸಮೀಯುಲ್ಲಾ ಅವರೂ ಸೇರುತ್ತಾರೆ. ಆ ಕಾಲದಲ್ಲಿ ಸಿದ್ಧ ಮಾದರಿಗಳನ್ನು ಒಡೆದು ಅಗ್ರಗಣ್ಯರೆನಿಸಿದ್ದ ಎನ್. ಲಕ್ಷ್ಮಿನಾರಾಯಣ ಅವರ ಚಿತ್ರಗಳಲ್ಲಿ ಮಾತ್ರ ಜಯಂತಿಯವರಿಗೆ ನಟಿಸಲು ಅವಕಾಶ ದೊರೆಯಲಿಲ್ಲ. ಅವರಿಗೆ ಹೆಚ್ಚು ಅವಕಾಶ ನೀಡಿದವರ ಪಟ್ಟಿಯಲ್ಲಿ ವೈ.ಆರ್. ಸ್ವಾಮಿ ಅವರಿಗೆ ಅಗ್ರಸ್ಥಾನ. ತಾವು ನಿರ್ದೇಶಿಸಿದ ಹತ್ತು ಚಿತ್ರಗಳಲ್ಲಿ ಜಯಂತಿಯವರಿಗೆ ಅವಕಾಶ ನೀಡಿದ ಸ್ವಾಮಿ ಅವರು ಮುಖ್ಯವಾಗಿ ರಾಜ್-ಜಯಂತಿ ಜೋಡಿಯ ಜನಪ್ರಿಯತೆಗೆ ಕಾರಣರಾದರು. ಸ್ವಾಮಿ ಅವರ ನಿರ್ದೇಶನದಲ್ಲಿ ‘ಮುರಿಯದ ಮನೆ’ ಚಿತ್ರದಿಂದ ಆರಂಭವಾದ ರಾಜ್ – ಜಯಂತಿ ಜೋಡಿಯ ಯಶಸ್ಸು ’ವಾತ್ಸಲ್ಯ’, ‘ಭಲೇ ರಾಜ’, ‘ದೇವರ ಮಕ್ಕಳು’, ‘ಪರೋಪಕಾರಿ’, ‘ಕ್ರಾಂತಿವೀರ’, ‘ನಂದಗೋಕುಲ’ ಮತ್ತು ‘ಬಹದ್ದೂರ್ ಗಂಡು’ವರೆಗೆ ಮುಂದುವರೆಯಿತು. ಟಿ.ವಿ.ಸಿಂಗ್‌ಠಾಕೂರ್ ಅವರು ಜಯಂತಿಯವರನ್ನು ವೈವಿಧ್ಯ ಪಾತ್ರಗಳಲ್ಲಿ ಚಿತ್ರಿಸಿದರು. ‘ಚಂದವಳ್ಳಿಯ ತೋಟ’, ‘ಕಲಾವತಿ’, ‘ಕವಲೆರಡು ಕುಲವೊಂದು’, ‘ಮಂತ್ರಾಲಯ ಮಹಾತ್ಮೆ’, ‘ಭಾಗೀರಥಿ’, ‘ಹೂಬಿಸಿಲು’, ‘ಭಾರತದ ರತ್ನ’ ಚಿತ್ರಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದರು.
ಉದಯ್ – ಜಯಂತಿ ಜೋಡಿಯನ್ನು ಜನಪ್ರಿಯಗೊಳಿಸಿದ ಖ್ಯಾತಿ ಬಿ.ಎಸ್.ರಂಗ ಅವರಿಗೆ ಸಲ್ಲಬೇಕು. ಅವರ ನಿರ್ದೇಶನದ ‘ಭಲೇ ಬಸವ’, ‘ಸಿಡಿಲ ಮರಿ’ ಚಿತ್ರದಲ್ಲಿ ಚೆಲ್ಲುಚೆಲ್ಲಾಗಿ ನಟಿಸಿದರೆ, ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧರಿಸಿದ ‘ಮಣ್ಣಿನ ಮಗಳು’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಮೋಘ ಅಭಿನಯ ನೀಡಿದರು. ಇಲ್ಲಿ ಉತ್ತರ ಕರ್ನಾಟಕದ ಸ್ವಾತಂತ್ರ್ಯ ಪೂರ್ವದ ಊಳಿಗಮಾನ್ಯ ಮನೆತನಕ್ಕೆ ಸೊಸೆಯಾಗಿ ಬರುವ ಪಾತ್ರದಲ್ಲಿ ಅಭಿನಯಿಸಿರುವ ಜಯಂತಿ ಭೋಗವಿಲಾಸ, ದುಶ್ಚಟಗಳ ದಾಸನಾದ ಗಂಡನನ್ನು ಸರಿದಾರಿಗೆ ತರಲು ಆಕೆ ವಿಫಲಳಾಗುತ್ತಾಳೆ. ನಿರ್ಗತಿಕಳಾಗಿ ಮತ್ತೆ ತನ್ನ ಮಕ್ಕಳನ್ನು ಕೂಡಿಕೊಂಡು ಬದುಕು ಕಟ್ಟುವ ಪಾತ್ರದಲ್ಲಿ ಜಯಂತಿಯವರದು ಅಮೋಘ ಅಭಿನಯ. ಆದರೆ ಜಾಳುಜಾಳಾದ ಚಿತ್ರಕತೆಯಿಂದ, ನಿರ್ಮಾಣಕ್ಕೆ ದೀರ್ಘಕಾಲ ತೆಗೆದುಕೊಂಡ ಕಾರಣ ಪ್ರೇಕ್ಷಕರಿಂದ ಚಿತ್ರ ವಿಮುಖವಾಯಿತು. ಆದರೆ ಸೂಕ್ತ ಚಿತ್ರಕತೆ ಮತ್ತು ನಿರ್ದೇಶನ ಕೌಶಲ್ಯವಿದ್ದರೆ ‘ಮದರ್ ಇಂಡಿಯಾ’ ಚಿತ್ರದಲ್ಲಿ ನರ್ಗಿಸ್ ನೀಡಿದಂತಹ ಅಭಿನಯವನ್ನು ಜಯಂತಿಯವರಲ್ಲಿ ನಿರೀಕ್ಷಿಸಬಹುದಿತ್ತು. ಪೂರ್ಣಗೊಳ್ಳದ ‘ಸಾವಿರ ಮೆಟ್ಟಿಲು’ ಚಿತ್ರಕ್ಕೆ ಜಯಂತಿ ಅವರನ್ನು ಆಯ್ಕೆ ಮಾಡಿಕೊಂಡ ಪುಟ್ಟಣ್ಣನವರಿಗೆ ಅವರ ಅಭಿನಯ ಸಾಮರ್ಥ್ಯದ ಅಗಾಧತೆಯ ಪರಿಚಯವಾಗಿರಲೇಬೇಕು. ಹಾಗಾಗಿ ಕಲ್ಪನಾರವರು ಒಲ್ಲೆ ಎಂದ ಓಬವ್ವನ ಪಾತ್ರವನ್ನು ‘ನಾಗರ ಹಾವು’ ಚಿತ್ರದಲ್ಲಿ ಅಮರವಾಗಿಸಿದರು. ಮೂಲ ಕತೆಯಿಂದ ಹೊರಗೇ ನಿಲ್ಲುವ, ಪ್ರತ್ಯೇಕ ಘಟಕದಂತೆ ಕಾಣುವ ಓಬವ್ವನ ಸಬ್‌ಪ್ಲಾಟ್‌ನಲ್ಲಿ ಜಯಂತಿಯವರು ಹಾಕಿದ ಮೋಡಿ ಈಗ ಇತಿಹಾಸ. ಅದೇ ಪುಟ್ಟಣ್ಣನವರು ಮತ್ತೆ ‘ಎಡಕಲ್ಲು ಗುಡ್ಡದ ಮೇಲೆ’ ಹಾಗೂ ‘ಮಸಣದ ಹೂವು’ ಚಿತ್ರಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಅಭಿನಯವನ್ನು ಅವರಿಂದ ತೆಗೆದರು. ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬರಬಹುದೆಂಬ ನಿರೀಕ್ಷೆಯಿತ್ತು. ಕನ್ನಡಿಗರ ಪಾಲಿಗೆ ಅದು ಹುಸಿಯಾಯಿತು.

ಜಯಂತಿಯವರ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡ ಮೊದಲಿಗರೆಂದರೆ ಎಂ.ಆರ್.ವಿಠಲ್. ‘ಮಿಸ್ ಲೀಲಾವತಿ’ ಮೂಲಕ ಆರಂಭವಾದ ಅವರ ಪ್ರಯೋಗ ‘ಎರಡು ಮುಖ’ ಚಿತ್ರದ ವೇಳೆಗೆ ಪ್ರಬುದ್ಧತೆಯನ್ನು ಕಂಡುಕೊಂಡಿತು. ಈ ಎರಡೂ ಚಿತ್ರಗಳ ನಡುವೆ ಅಸೂಯೆಯ ಹೆಣ್ಣಾಗಿ (ಪ್ರೇಮಮಯಿ), ಕೌಟುಂಬಿಕ ಸಾಮರಸ್ಯ ಕಾಪಾಡುವ ಗೃಹಿಣಿಯಾಗಿ (ನಕ್ಕರೆ ಅದೇ ಸ್ವರ್ಗ) ಸಂಕಷ್ಟಗಳಲ್ಲಿ ನೋಯುವ ಗಂಡನಿಗೆ ನೆರಳಾಗುವ (ಮನಸ್ಸಿದ್ದರೆ ಮಾರ್ಗ) ಪಾತ್ರಗಳಲ್ಲಿ ಅವರು ಎಂ.ಆರ್.ವಿಠಲ್ ಅವರ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಛಾಪನ್ನು ಢಾಳಾಗಿ ಒತ್ತಿ ಬಿಟ್ಟರು. ಹಳೆಯ ತಲೆಮಾರಿನ ನಿರ್ದೇಶಕರಾದ ಕೆ.ಎಸ್.ಎಲ್.ಸ್ವಾಮಿ, ಹುಣಸೂರು ಕೃಷ್ಣಮೂರ್ತಿ, ಪೇಕೇಟಿ ಶಿವರಾಂ (ಅವರ ತಲಾ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದರು) ಬಿ.ಆರ್.ಪಂತುಲು, ಆರ್. ರಾಮಮೂರ್ತಿ, ಗೀತಪ್ರಿಯ (ತಲಾ ಮೂರು ಚಿತ್ರಗಳು) ಅವರಲ್ಲದೆ ಹೊಸ ತಲೆಮಾರಿನ ನಿರ್ದೇಶಕರಾದ ನಾಗಾಭರಣ, ರವೀಂದ್ರನಾಥ್, ಕೆ.ವಿ. ರಾಜು, ಗಿರಿಬಾಬು ಅಷ್ಟೇ ಏಕೆ ಗಿರೀಶ್ ಕಾಸರವಳ್ಳಿಯವರಿಗೂ ಜಯಂತಿ ಅವರು ಅಚ್ಚುಮೆಚ್ಚಿನ ನಟಿಯಾಗಿದ್ದರು. ಮಿಂಚಿನಂತೆ ಬೆಳಗಿ ಮಾಯವಾದ ಶಂಕರ್‌ನಾಗ್‌ರವರೂ ತಮ್ಮ ‘ಜನ್ಮಜನ್ಮದ ಅನುಬಂಧ’ ಚಿತ್ರದಲ್ಲಿ ಜಯಂತಿಯವರಿಗೊಂದು ವಿಶಿಷ್ಟ ಪಾತ್ರ ನೀಡಿದ್ದರು. ತುಂಬು ಗರ್ಭಿಣಿಯು ಅತ್ಯಾಚಾರಕ್ಕೆ ಒಳಗಾಗುವ ಸನ್ನಿವೇಶದಲ್ಲಿ ಮತ್ತು ಸತ್ತ ಗಂಡನೇ ಮರುಜನ್ಮ ಎತ್ತಿ ಬಂದಾಗ, ಮಗನಷ್ಟೆ ವಯಸ್ಸಿನ ಗಂಡನನ್ನು ಎದುರ್ಗೊಳ್ಳುವ ಸನ್ನಿವೇಶದಲ್ಲಿ ಜಯಂತಿಯವರು ಅಭಿವ್ಯಕ್ತಪಡಿಸಿರುವ ಮಾನಸಿಕ ತುಮುಲವನ್ನು ಆ ಚಿತ್ರ ನೋಡಿಯೇ ತಿಳಿಯಬೇಕು.
ಹೀಗೆ ಒಬ್ಬ ನಿರ್ದೇಶಕರ ಆವರಣಕ್ಕೆ ಜಯಂತಿ ಬಂದರೆಂದರೆ, ಅವರ ಮತ್ತೊಂದು ಚಿತ್ರದಲ್ಲಿ ನಟಿಸುವಂತಹ ಒಂದು ಪರಂಪರೆ ಅವರ ಪಾಲಿಗೆ ಸೃಷ್ಟಿಯಾಯಿತು. ಪರಭಾಷೆಯಿಂದ ರೀಮೇಕ್ ಆದ ಹಲವಾರು ಚಿತ್ರಗಳಲ್ಲೂ ಜಯಂತಿಯವರು ನಟಿಸಿದ್ದರೂ ಮೂಲಪಾತ್ರಗಳ ನೆರಳಾಗದೆ ತಮ್ಮದೇ ಛಾಪನ್ನು ಒತ್ತಿರುವುದು ಅವರ ಅಭಿನಯದ ವಿಸೇಷ. ಮುಖ್ಯವಾಗಿ ‘ಬೆಂಕಿ ಬಿರುಗಾಳಿ’ ಚಿತ್ರದ ಅವರ ಅಭಿನಯವನ್ನು ನೋಡಬಹುದು. ಮೂಲಚಿತ್ರ ‘ಮೇರೆ ಅಪ್ನೆ’ ಯಲ್ಲಿ ಆ ಪಾತ್ರವನ್ನು ವಹಿಸಿದವರು ಮೀನಾಕುಮಾರಿ. ಹಳ್ಳಿಯಿಂದ ಬಂದು ಪಟ್ಟಣದ ನಿರುದ್ಯೋಗ, ಹಿಂಸೆ, ಕ್ರೌರ್ಯಗಳಲ್ಲಿ ನಲುಗುವ ಹಿರಿಯ ಜೀವವಾಗಿ ಅವರು ಮೀನಾಕುಮಾರಿಯವರಿಗಿಂತ ಭಿನ್ನವಾಗಿ ನಟಿಸಿದ್ದರು. ಇದೇ ಅಭಿಪ್ರಾಯ ‘ಇತ್ತೇಫಾಕ್’ ಚಿತ್ರದ ನಕಲೆನಿಸಿದ ‘ಮುಖವಾಡ’ ಚಿತ್ರದಲ್ಲಿನ ಅಭಿನಯಕ್ಕೂ ಅನ್ವಯಿಸುತ್ತದೆ. ಮೂಲ ಚಿತ್ರದಲ್ಲಿ ಜಯಂತಿಯವರು ಮಾಡಿದ ಪಾತ್ರವನ್ನು ನಿರ್ವಹಿಸಿದವರು ನಟಿ ನಂದಾ. ಇಲ್ಲಿ ಜಯಂತಿಯವರು ಆ ಪಾತ್ರಕ್ಕೆ ಬೇಕಾದ ಮುಗ್ಧತೆಯ ಮುಖವಾಡದ ಹಿಂದಿನ ಸಂಚುಗಳನ್ನು ಮೂಲಕ್ಕಿಂತಲೂ ಗಾಢವಾಗಿ ನಿರ್ವಹಿಸಿದ್ದಾರೆ.

ಜಯಂತಿಯವರು ಖಂಡಿತವಾಗಿಯೂ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ. ಅವರು ವಹಿಸಿದಷ್ಟು ವೈವಿಧ್ಯ ಪಾತ್ರಗಳು ಬೇರಾರಿಗೂ ಸಾಧ್ಯವಾಗಲಿಲ್ಲ. ಅವರಷ್ಟು ದೀರ್ಘಕಾಲ ನಾಯಕಿಯಾಗಿ ಉಳಿದ ಬೇರೊಂದು ಉದಾಹರಣೆಯಿಲ್ಲ. ಎರಡು ತಲೆಮಾರಿನ ನಟರಿಗೆ ನಾಯಕಿಯಾದ ಅಪೂರ್ವ ಅವಕಾಶ ಅವರದು. ಭಾರತೀಯ ಚಲನಚಿತ್ರರಂಗ ಅಂಗೀಕರಿಸಿದ ನಾಯಕಿಯ ದೈಹಿಕ ಸ್ವರೂಪಗಳ ಮಾನದಂಡಗಳಿಗೆ ಅರ್ಹವೆನಿಸದಿದ್ದರೂ ತಮ್ಮ ಸಹಜ ಅಭಿನಯದಿಂದ ಆ ಕೊರತೆಗಳನ್ನು ನೀಗಿಸಿಕೊಂಡ ಪ್ರಬುದ್ಧ ಕಲಾವಿದೆ. ಸಂಪ್ರದಾಯ ನಿಷ್ಠ ಹೆಣ್ಣಿನ ಪಾತ್ರಗಳನ್ನು ನಿರ್ವಹಿಸಿದಷ್ಟೆ ಸುಲಭವಾಗಿ ಆಧುನಿಕ ಮನೋಭಾವದ ಹೆಣ್ಣಿನ ಆಶಯಗಳನ್ನು ಅಭಿವ್ಯಕ್ತಿಸಬಲ್ಲವರಾಗಿದ್ದರು. ಅಭಿನಯದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆಯದ ಅವರು ತಮ್ಮ ವೃತ್ತಿ ಬದುಕಿನುದ್ದಕ್ಕೂ ಪಾಠವನ್ನು ಕಲಿಯುತ್ತಾ ಅಭಿನಯದ ಹೊಸ ಶಾಖೆಯೊಂದನ್ನು ಉದ್ಘಾಟಿಸಿದ ಖ್ಯಾತಿ ಅವರದು. ನಿರ್ದೇಶಕರ ನೆಚ್ಚಿನ ಕಲಾವಿದೆಯಾದ ಜಯಂತಿಯವರ ನಟನೆಯ ರೆಪರ್ಟರಿ ಅವರಿಗೆ ಅರಿವಿಲ್ಲದಂತೆ ಹರಹಿನಿಂದ ಕೂಡಿತ್ತು. ಹಾಗಾಗಿಯೇ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ತಮ್ಮ ‘ಕೂರ್ಮಾವತಾರ’ ಚಿತ್ರದ ಮಧ್ಯಮ ವಯಸ್ಸಿನ ನಟಿಯ ಪಾತ್ರಕ್ಕೆ ಜಯಂತಿಯವರನ್ನು ಆರಿಸಿದ್ದು ಅಚ್ಚರಿಯಲ್ಲ. ಜಯಂತಿಯವರ ಪಾಲಿಗೆ ಹಲವಾರು ಪ್ರಶಸ್ತಿಗಳೂ ಬಂದಿರಬಹುದು. ನಿರೀಕ್ಷಿತ ಪ್ರಶಸ್ತಿಗಳು ದಕ್ಕದಿರಬಹುದು. ಆದರೆ ಚಿತ್ರರಂಗದಲ್ಲಿ ಅವರು ಕಂಡುಕೊಂಡ ನೆಲೆ, ಅಭಿನಯ ಕಲೆಯಲ್ಲಿ ಕೈಗೂಡಿಸಿಕೊಂಡ ಸಾಧನೆ ಮತ್ತು ರೂಪಿಸಿದ ಅಭಿನಯ ಶೈಲಿ ಅದ್ವಿತೀಯವಾದದ್ದು. ನಿರ್ದೇಶಕಿಯಾಗಿ ಯಶಸ್ವಿಯಾಗದಿದ್ದರೂ ಕನ್ನಡದಲ್ಲಿನ ಮಹಿಳಾ ನಿರ್ದೇಶಕರ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದರು. ಸಂಯಮದ ಹೆಣ್ಣಿರಲಿ, ಚೆಲ್ಲು ಚೆಲ್ಲಾದ ಹುಡುಗಿಯಿರಲಿ, ಸಂಕಷ್ಟಗಳಲ್ಲಿ ಬೇಯುವ ಪಾತ್ರವಿರಲಿ ಆ ಪಾತ್ರಗಳಲ್ಲೆಲ್ಲಾ ಜಯಂತಿಯವರ ಸ್ಪರ್ಶವಿದ್ದೇ ಇತ್ತು. ಕನ್ನಡವಲ್ಲದೆ ತೆಲುಗು, ತಮಿಳು ಮತ್ತು ಹಿಂದೀ ಭಾಷೆಯಲ್ಲಿ ನಟಿಸಿದರೂ ಆಕೆ ಪ್ರಧಾನವಾಗಿ ಕನ್ನಡದ ನಟಿ. ಕನ್ನಡ ಭಾಷೆ ಬಾಲ್ಯದಲ್ಲಿ ಅಪರಿಚಿತವಾದರೂ ಆಕೆ ಕರ್ನಾಟಕ ಸಂಸ್ಕೃತಿಯ ಪ್ರಾತಿನಿಧಿಕ ಹೆಣ್ಣು. ಅಚ್ಛ ಕನ್ನಡತಿ. ಖಂಡಿತವಾಗಿಯೂ ಆಕೆ ಕನ್ನಡ ಪ್ರೇಕ್ಷಕರ ಮೇಲೆ ಅಪಾರ ಪ್ರಭಾವ ಬೀರಿ ಅವರ ಅಂತರಂಗದ ಕದ ತೆರೆದು ಹಾಡಿದ ಕಲಾವಿದೆ.
