ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ ಸ್ವಂತ ಪರಿಶ್ರಮದಿಂದ ಎತ್ತರಕ್ಕೆ ಬೆಳೆದ ಸಾಧಕ. ಕಾರಣಾಂತರಗಳಿಂದ ಚಿತ್ರ ಹಂಚಿಕೆ ಸಂಸ್ಥೆಯನ್ನು ಮುಚ್ಚುವ ಸಂದರ್ಭ ಎದುರಾಯ್ತು. ಆಗ ಉತ್ತರ ಭಾರತ ಮೂಲದ ಮಾಲೀಕರು ತಮ್ಮ ಸಂಸ್ಥೆಯನ್ನು ವೀರಾಸ್ವಾಮಿ ಉಸ್ತುವಾರಿಗೆ ಬಿಟ್ಟು ಹೋದರು. ಮುಂದೆ ವೀರಾಸ್ವಾಮಿಯವರು ಈ ಸಂಸ್ಥೆಗೆ `ಈಶ್ವರಿ ಪಿಕ್ಚರ್ಸ್’ ಎಂದು ಮರುನಾಮಕರಣ ಮಾಡಿ ಚಿತ್ರಹಂಚಿಕೆ ಆರಂಭಿಸಿದರು.

ಸಿನಿಮಾ ಪ್ರೀತಿ, ಆತ್ಮವಿಶ್ವಾಸ, ಮುನ್ನೋಟವಿದ್ದ ವೀರಾಸ್ವಾಮಿ ಆನಂತರ ಹಿಂತಿರುಗಿ ನೋಡಲೇ ಇಲ್ಲ. ಚಿತ್ರನಿರ್ಮಾಣ, ವಿತರಣೆ, ಹಂಚಿಕೆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದರು. ಆ ಮಟ್ಟಿಗೆ ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಅವರದು ದೊಡ್ಡ ಕೊಡುಗೆ. ಕುಲಗೌರವ, ನಾಗರಹಾವು, ನಾ ನಿನ್ನ ಮರೆಯಲಾರೆ, ನಾರಿ ಸ್ವರ್ಗಕ್ಕೆ ದಾರಿ…. ಸಹನಿರ್ಮಾಣದಲ್ಲಿ ತಯಾರಾದ ಬೂತಯ್ಯನ ಮಗ ಅಯ್ಯು, ಹೇಮಾವತಿ, ಭೂಲೋಕದಲ್ಲಿ ಯಮರಾಜ, ನಾರದವಿಜಯ… ಹೀಗೆ ವೀರಾಸ್ವಾಮಿ ಸಂಸ್ಥೆಯಡಿ ಹಲವಾರು ಪ್ರಮುಖ ಚಿತ್ರಗಳು ತಯಾರಾಗಿವೆ. ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನ ಪರಿಚಯಿಸಿದ ವೀರಾಸ್ವಾಮಿ ತಮ್ಮ ಪುತ್ರನಿಗಾಗಿ ಚಕ್ರವ್ಯೂಹ, ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ ಮತ್ತಿತರ ಸಿನಿಮಾಗಳನ್ನು ನಿರ್ಮಿಸಿದರು. ಹಿಂದಿ, ತಮಿಳು ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಮುಂದೆ ತಂದೆ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಸಾಗಿದ ರವಿಚಂದ್ರನ್ ಅವರದ್ದು ಮತ್ತೊಂದು ಯಶೋಗಾಥೆ. ಅವರ ಸಂಸ್ಥೆಯಡಿ ಹಲವಾರು ಕಲಾವಿದರು ಹಾಗೂ ತಂತ್ರಜ್ಞರು ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ.
