ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟವರು ಪಾರ್ವತಮ್ಮ ರಾಜಕುಮಾರ್

ಪೋಸ್ಟ್ ಶೇರ್ ಮಾಡಿ

ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ ಇಂದಿಗೆ (ಮೇ 31) ನಾಲ್ಕು ವರ್ಷ. ಸದಭಿರುಚಿಯ ಚಿತ್ರಗಳ ನಿರ್ಮಾಣದೊಂದಿಗೆ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ, ಚಿತ್ರನಿರ್ಮಾಣದಲ್ಲಿ ಶಿಸ್ತು ರೂಢಿಸಿದವರು ಪಾರ್ವತಮ್ಮ. ವರನಟ ಡಾ.ರಾಜಕುಮಾರ್ ಕನ್ನಡಗರ ಐಕಾನ್ ಆಗಿ ರೂಪುಗೊಳ್ಳುವಲ್ಲಿ ಪಾರ್ವತಮ್ಮನವರ ಶ್ರಮ ದೊಡ್ಡದು.

“ಕನ್ನಡ ಸಿನಿಮಾ ನಿರ್ಮಾಣಕ್ಕೆ ಶಿಸ್ತು ಮತ್ತು ಸ್ಥಿರತೆ ತಂದುಕೊಟ್ಟವರು ಪಾರ್ವತಮ್ಮ ರಾಜಕುಮಾರ್” ಎಂದಿದ್ದರು ಹಿರಿಯ ನಿರ್ದೇಶಕ ಭಗವಾನ್. ವರ್ಷದ ಹಿಂದೆ ಅವರಿಗೆ ಡಾಕ್ಟರೇಟ್ ಗೌರವ ಸಂದ ಸಂದರ್ಭದಲ್ಲಿ ಪಾರ್ವತಮ್ಮನವರ ಬಗ್ಗೆ ಭಗವಾನ್ ಮಾತನಾಡುತ್ತಾ, “ಅವರು ಈ ಗೌರವಕ್ಕೆ ಅತ್ಯಂತ ಸೂಕ್ತ ವ್ಯಕ್ತಿ. ನಾನು ಅವರನ್ನು ನನ್ನ ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ನೋಡಿಕೊಂಡು ಬಂದಿದ್ದೇನೆ. ಆಗ ಮದರಾಸಿನಲ್ಲಿ ಕನ್ನಡ ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿದ್ದ ದಿನಗಳಲ್ಲಿ ಕನ್ನಡ ಕಲಾವಿದರು ಮತ್ತು ತಂತ್ರಜ್ಞರಾದ ನಮಗೆ ಅನಿಶ್ಚಿತತೆ ಕಾಡುತ್ತಿತ್ತು. ಕನ್ನಡ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದವರು ಹೊರರಾಜ್ಯದವರೇ ಆಗಿರುತ್ತಿದ್ದರು. ಮುಂದೆ ಪಾರ್ವತಮ್ಮನವರು ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಕನ್ನಡದ ಹೂಡಿಕೆದಾರರಿಗೆ ಆತ್ಮವಿಶ್ವಾಸ ಮೂಡಿಸಿದರು. ಶಿಸ್ತು ಮತ್ತು ಬದ್ಧತೆಯ ಅವರ ಬ್ಯಾನರ್ ಕನ್ನಡ ಚಿತ್ರರಂಗಕ್ಕೆ ಸ್ಥಿರತೆ ತಂದುಕೊಟ್ಟಿತು” ಎಂದು ಹೇಳಿದ್ದರು. ಪ್ರಮುಖವಾಗಿ ಡಾ.ರಾಜಕುಮಾರ್ ಐಕಾನ್ ಆಗಿ ರೂಪುಗೊಳ್ಳುವಲ್ಲಿ ಪಾರ್ವತಮ್ಮನವರ ಕೊಡುಗೆ ಬಹುದೊಡ್ಡದು.

ಇಲ್ಲಿ ಮತ್ತೊಂದು ಸಂದರ್ಭವನ್ನು ಸ್ಮರಿಸಬಹುದು. ನಿರ್ದೇಶಕರಾದ ದೊರೈ-ಭಗವಾನ್ ಅದೊಮ್ಮೆ ತಾವು ನಿರ್ದೇಶಿಸಲಿದ್ದ ‘ಚಂದನಗ ಗೊಂಬೆ’ ಚಿತ್ರಕ್ಕಾಗಿ ರಾಜಕುಮಾರ್ ಡೇಟ್ಸ್ ಕೇಳುವುದಕ್ಕೆಂದು ಸದಾಶಿವನರದ ಅವರ ಮನೆಗೆ ಹೋಗದ್ದರು. ಇದು ಸಾಹಿತಿ ತರಾಸು ಅವರ ಕೃತಿಯನ್ನು ಆಧರಿಸಿದ ವಸ್ತು. ಕಥೆ ಕೇಳಿದ ಪಾರ್ವತಮ್ಮನವರು, “ಈ ಪಾತ್ರ ರಾಜಕುಮಾರ್ ಅವರ ಇಮೇಜ್‌ಗೆ ಹೊಂದುವುದಿಲ್ಲ. ಬದಲಿಗೆ ಈ ಪಾತ್ರಕ್ಕೆ ನೀವು ಅನಂತನಾಗ್ ಅವರನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರ ಚೆನ್ನಾಗಿ ಆಗುತ್ತದೆ” ಎಂದು ಸಲಹೆ ಮಾಡಿದರು. ಅದರಂತೆ ನಿರ್ದೇಶಕದ್ವಯರು ಅನಂತನಾಗ್ ಅವರನ್ನ ಆಯ್ಕೆ ಮಾಡಿಕೊಂಡ ಚಿತ್ರ ಮಾಡಿದರು. ಈ ಸಿನಿಮಾ ಸೂಪರ್‌ಹಿಟ್‌ ಆಯ್ತು! ಅನಂತನಾಗ್ ಅವರ ವೃತ್ತಿ ಬದುಕಿಗೂ ಈ ಸಿನಿಮಾ ಒಂದೊಳ್ಳೆ ತಿರುವು ನೀಡಿತು. ಹೀಗೆ ಹಲವು ಹಂತಗಳಲ್ಲಿ ಅವರು ಕನ್ನಡ ಚಿತ್ರನಿರ್ದೇಶಕರಿಗೆ ಮಾರ್ಗದರ್ಶನ ಮಾಡಿದ್ದಿದೆ.

“ಪಾರ್ವತಿ ಬದುಕಿಗೆ ಬಂದ ನಂತರ ನನ್ನ ಅದೃಷ್ಟ ಖುಲಾಯಿಸಿತು. ಆಕೆ ನನ್ನ ಅದೃಷ್ಟ ದೇವತೆ” ಎನ್ನುತ್ತಿದ್ದರು ಡಾ.ರಾಜಕುಮಾರ್. 1953 ಜೂನ್ 25ರಂದು ರಾಜಕುಮಾರ್ ಅವರನ್ನು ವರಿಸಿದಾಗ ಪಾರ್ವತಮ್ಮನವರಿಗೆ 13 ವರ್ಷವಷ್ಟೆ. 1954ರಲ್ಲಿ ರಾಜ್ ನಾಯಕನಟನಾಗಿ ನಟಿಸಿದ ಮೊಟ್ಟಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ ತೆರೆಕಂಡಿತು. ಈ ಚಿತ್ರದ ಯಶಸ್ಸಿನೊಂದಿಗೆ ರಾಜಕುಮಾರ್ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಯವರೆಗೆ ರಂಗಭೂಮಿ ನಟನಾಗಿದ್ದ ಅವರು ಮುಂದೆ ಸಿನಿಮಾ ನಟನಾಗಿ ಗುರುತಿಸಿಕೊಂಡರು. ಈ ಏಳ್ಗೆಗೆ ತಮ್ಮ ಬದುಕಿಗೆ ಬಂದ ಪಾರ್ವತಮ್ಮನವರೇ ಕಾರಣ ಎಂದೇ ಭಾವಿಸಿದ್ದರು ರಾಜ್. ಅದಕ್ಕೆ ಸರಿಯಾಗಿ ಪಾರ್ವತಮ್ಮನವರೂ ಸೂಕ್ತ, ಸಲಹೆ ಸೂಚನೆಗಳೊಂದಿಗೆ ಪತಿಗೆ ನೆರವಾಗುತ್ತಿದ್ದರು. ವಯಸ್ಸು ಚಿಕ್ಕದಾದರೂ ಪ್ರೌಢ ಆಲೋಚನೆ ಪಾರ್ವತಮ್ಮನವರದ್ದು. ಅವರ ಹುಟ್ಟೂರು ಮೈಸೂರು ಜಿಲ್ಲೆಯ ಸಾಲಿಗ್ರಾಮ. ಅಪ್ಪಾಜಿ ಗೌಡ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರಿಯಾಗಿ 1939 ಡಿಸೆಂಬರ್ 6ರಂದು ಜನಿಸಿದರು.

ನಾಟಕ, ಸಿನಿಮಾವೊಂದು ಯಶಸ್ಸು ಸಾಧಿಸಲು ಇಡೀ ತಂಡದ ಪ್ರಯತ್ನ ಅತ್ಯಗತ್ಯ ಎಂದು ಅರಿವಾಗಲು ಪಾರ್ವತಮ್ಮನವರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಮುಂದಿನ ದಿನಗಳಲ್ಲಿ ಪಾರ್ವತಮ್ಮನವರು ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ಅರಿವು ಮೂಡಿಸಿಕೊಂಡರು. ಸಿನಿಮಾವೊಂದರ ಯಶಸ್ಸಿಗೆ ಉತ್ತಮ ಕತೆ, ತಂತ್ರಜ್ಞರ ಪಾಲ್ಗೊಳ್ಳುವಿಕೆ ಮುಖ್ಯ ಎನ್ನುವುದನ್ನು ರಾಜ್ ಸಿನಿಮಾಗಳ ನಿರ್ಮಾಪಕರಿಗೆ ಮನವರಿಕೆ ಮಾಡಿಕೊಟ್ಟರು. ಮುಂದೆ ಸ್ವತಃ ತಾವೂ ರಾಜ್ ಸಿನಿಮಾಗಳ ಕತೆ, ವಸ್ತುವಿನ ಚರ್ಚೆಯಲ್ಲಿ ಪಾಲ್ಗೊಳ್ಳತೊಡಗಿದರು. ರಾಜ್ ಅವರ ಕಿರಿಯ ಸಹೋದರ ವರದಪ್ಪ ಮತ್ತು ಪಾರ್ವತಮ್ಮನವರು ಕತೆ, ಚಿತ್ರಕಥೆಯ ಚರ್ಚೆಗಳಲ್ಲಿ ತೊಡಗಿಸಿಕೊಂಡದ್ದು ರಾಜ್‌ಗೆ ಬಹುದೊಡ್ಡ ವರವಾಯ್ತು. ಕ್ರಮೇಣ ಅವರ ಇಮೇಜ್ ಬೆಳಗತೊಡಗಿತಲ್ಲದೆ ಅವರು ನಟಿಸಿದ ಸಿನಿಮಾಗಳು ಕೂಡ ಜನಮನ್ನಣೆ ಗಳಿಸಿದವು.

ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ಅನುಭವ ಸಿಗುತ್ತಿದ್ದಂತೆ ಪಾರ್ವತಮ್ಮನವರು ಸ್ವತಃ ತಾವೇ ಚಿತ್ರನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಿದರು. ಚಿತ್ರನಿರ್ಮಾಣ ಮತ್ತು ಕನ್ನಡ ಚಿತ್ರೋದ್ಯಮದ ಬಗ್ಗೆ ಪಾರ್ವತಮ್ಮನವರಿಗೊಂದು ವಿಷನ್ ಇತ್ತು. ‘ತ್ರಿಮೂರ್ತಿ’ ಚಿತ್ರದಿಂದ ನಿರ್ಮಾಣಕ್ಕಿಳಿದ ಅವರು ಮುಂದೆ ಸಾಲು ಸಾಲಾಗಿ ಮಹತ್ವದ ಚಿತ್ರಗಳನ್ನು ನಿರ್ಮಿಸುತ್ತಾ ಬಂದರು. ಇಲ್ಲಿಯವರೆಗೆ ಅವರ ಸಂಸ್ಥೆಯಡಿ 80ಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣಗೊಂಡಿವೆ. ಶಿಸ್ತು ಮತ್ತು ಬದ್ಧತೆ ಅವರ ಚಿತ್ರನಿರ್ಮಾಣ ಸಂಸ್ಥೆಯ ಧ್ಯೇಯ ವಾಕ್ಯ. ತಮ್ಮದೇ ಸಂಸ್ಥೆಯಡಿ ಚಿತ್ರಗಳನ್ನು ನಿರ್ಮಿಸತೊಡಗಿದಾಗ ಪಾರ್ವತಮ್ಮನವರಿಗೆ ಹೆಚ್ಚಿನ ಅಧಿಕಾರವಿರುತ್ತಿತ್ತು. ತಾವೇ ಕತೆಯನ್ನು ಆಯ್ಕೆ ಮಾಡುತ್ತಿದ್ದರು. ಕತೆಗೆ ಹೊಂದುವಂತಹ ತಾರಾಬಳಗ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿತ್ತು. ಪ್ರಮುಖವಾಗಿ ಪಾರ್ವತಮ್ಮ ಚಿತ್ರಸಾಹಿತಿಗಳ ಬಗ್ಗೆ ಅಪಾರ ಗೌರವಭಾವ ಹೊಂದಿದ್ದರು. ಸದೃಢ ಚಿತ್ರವೊಂದು ರೂಪುಗೊಳ್ಳಲು ಚಿತ್ರಸಾಹಿತ್ಯದ ಪಾಲು ದೊಡ್ಡದು ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದ ಅವರು ಅನುಭವಿ ಚಿತ್ರಸಾಹಿತಿಗಳಿಂದ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳನ್ನು ಬರೆಸುತ್ತಿದ್ದರು. ಒಂದೆಡೆ ಇದರಿಂದ ರಾಜ್ ‘ಐಕಾನ್’ ಆಗಿ ರೂಪುಗೊಂಡರಲ್ಲದೆ ಮತ್ತೊಂದೆಡೆ ತಂತ್ರಜ್ಞರು ಮತ್ತು ಚಿತ್ರಸಾಹಿತಿಗಳೂ ಬೆಳೆದರು. ಅವರ ಸಂಸ್ಥೆಯಡಿ ತಯಾರಾದ ತಂತ್ರಜ್ಞರು ಮುಂದೆ ಕನ್ನಡದ ಇತರೆ ನಿರ್ಮಾಣ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ದೊಡ್ಡ ಯಶಸ್ಸು ಕಂಡಿದ್ದಾರೆ. ಅವರ ಸಂಸ್ಥೆಯ ಚಿತ್ರಗಳ ಯಶಸ್ಸಿನ ಪರ್ಸಂಟೇಜ್ ಶೇ.98 ಎನ್ನುವುದು ವಿಶೇಷ!

ಸ್ವತಃ ಪಾರ್ವತಮ್ಮನವರು ಕೂಡ ಉತ್ತಮ ಓದುಗರಾಗದ್ದರು. ಬಿಡುವಿನ ವೇಳೆಯಲ್ಲಿ ಕಾದಂಬರಿಗಳನ್ನು ಓದುತ್ತಿದ್ದ ಅವರು ಬೆಳ್ಳಿತೆರೆಗೆ ಹೊಂದಿಕೆಯಾಗುವಂತಹ ಕತೆಗಳಿದ್ದರೆ ನಿರ್ದೇಶಕರಿಗೆ ತಿಳಿಸುತ್ತಿದ್ದರು. ಹೀಗಾಗಿಯೇ ಅವರ ಬ್ಯಾನರ್ನಲ್ಲಿ ತಯಾರಾದ ಸಾಕಷ್ಟು ಸಿನಿಮಾಗಳು ಕಾದಂಬರಿ ಆಧರಿಸಿದ್ದವೇ ಆಗಿವೆ. ಒಮ್ಮೆ ಬೀದಿಯಲ್ಲಿ ತಳ್ಳುಗಾಡಿಯಲ್ಲಿ ಓರ್ವ ಹಳೆಯ ಪುಸ್ತಕಗಳನ್ನು ಮಾರಾಟಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದನಂತೆ. ಪಾರ್ವತಮ್ಮನವರು ಆಸಕ್ತಿಯಿಂದ ಗಾಡಿ ನಿಲ್ಲಿಸಿ ತಮಗೇನಾದರೂ ಪುಸ್ತಕಗಳು ಸಿಗುತ್ತವೆಯೇ ಎಂದು ನೋಡಿದ್ದಾರೆ. ಅಲ್ಲಿ ಅವರಿಗೆ ದೇವುಡು ನರಸಿಂಹಶಾಸ್ತ್ರಿಯವರ ‘ಮಯೂರ’ ಕೃತಿ ಕಣ್ಣಿಗೆ ಬಿದ್ದಿದೆ. ಅದನ್ನು ಎತ್ತಿಕೊಂಡ ಪಾರ್ವತಮ್ಮನವರು ಓದಿ ಆ ವಸ್ತುವನ್ನು ಬೆಳ್ಳಿತೆರೆಗೆ ಅಳವಡಿಸಲು ನಿರ್ಧರಿಸಿದರು. ಡಾ.ರಾಜಕುಮಾರ್ ವೃತ್ತಿ ಬದುಕಿಗೆ ಮಾತ್ರವಲ್ಲ ಕನ್ನಡ ಚಿತ್ರರಂಗಕ್ಕೂ ಇದು ಮಹತ್ವದ ಚಿತ್ರವಾಯ್ತು!

ಎಪ್ಪತ್ತರ ದಶಕದ ದ್ವಿತಿಯಾರ್ಧದ ಹೊತ್ತಿಗೆ ಕನ್ನಡ ಚಿತ್ರರಂಗ ಮದರಾಸಿನಿಂದ ಕನ್ನಡ ನಾಡಿಗೆ ಶಿಫ್ಟ್ ಆಯ್ತು. ಆಗ ಇಲ್ಲಿ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡ ಮೂರ್ನಾಲ್ಕು ಪ್ರಮುಖ ಸಂಸ್ಥೆಗಳಲ್ಲಿ ಪಾರ್ವತಮ್ಮನವರ ಬ್ಯಾನರ್ ಮುಂಚೂಣಿಯದ್ದು. ಈ ಕಾಲಘಟ್ಟದಲ್ಲಿ ತಂತ್ರಜ್ಞರು ಮತ್ತು ಕಲಾವಿದರಲ್ಲಿ ಚಿತ್ರನಿರ್ಮಾಣದೊಂದಿಗೆ ವಿಶ್ವಾಸ ಮೂಡಿಸುವುದು ಅತ್ಯವಶ್ಯವಾಗಿತ್ತು. ಆ ವೇಳೆಗಾಗಲೇ ಸಿನಿಮೋದ್ಯಮದ ವ್ಯಾಕರಣ ಕರಗತ ಮಾಡಿಕೊಂಡಿದ್ದ ಪಾರ್ವತಮ್ಮನವರು ತಮ್ಮ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ರಾಜ್ ಸಿನಿಮಾಗಳಲ್ಲಿ ಬಿಝಿಯಾಗಿದ್ದಾಗ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಸ್ಟಾರ್ ನಟನಾಗಿ ಬೆಳೆದ ರಾಜ್ರನ್ನು ಯಾವುದೇ ಗಾಸಿಪ್‌ಗಳು ಕಲಕದಂತೆ ಎಚ್ಚರಿಕೆ ವಹಿಸಿದರು. ಅದೆಷ್ಟೋ ಉದ್ಯಮದ ಸಮಸ್ಯೆಗಳು ಮತ್ತು ಕಲಾವಿದರ ವೈಯಕ್ತಿಕ ಸಮಸ್ಯೆಗಳು ಕೂಡ ಪಾರ್ವತಮ್ಮನವರ ಸಮ್ಮುಖದಲ್ಲಿ ಬಗೆಹರಿದಿದ್ದಿದೆ. ಇದು ಉದ್ಯಮದ ಮಂದಿ ಅವರ ಮೇಲಿಟ್ಟ ಗೌರವ, ವಿಶ್ವಾಸದ ಪ್ರತೀಕ.

ತಮ್ಮ ಪುತ್ರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರನ್ನು ತಮ್ಮ ಬ್ಯಾನರ್ ಮೂಲಕ ಪಾರ್ವತಮ್ಮನವರು ಯಶಸ್ವಿಯಾಗಿ ಬೆಳ್ಳಿತೆರೆಗೆ ಪರಿಚಯಿಸಿದರು. ಅಮ್ಮ ಹಾಕಿಕೊಟ್ಟ ಕಾದಂಬರಿ ಆಧರಿಸಿದ ಮತ್ತು ಸದಭಿರುಚಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಡಾ.ರಾಜ್ ಪುತ್ರರೂ ಯಶಸ್ಸು ಕಂಡರು. ಇನ್ನು ಅವರ ನಿರ್ಮಾಣ ಸಂಸ್ಥೆಯಡಿ ಕನ್ನಡ ತೆರೆಗೆ ಪರಿಚಯವಾದ ನಾಯಕಿಯರ ಸಂಖ್ಯೆ ದೊಡ್ಡದಿದೆ. ಸುಧಾರಾಣಿ, ಆಶಾರಾಣಿ, ವೀಣಾ, ಮಾಲಾಶ್ರೀ, ಮೋಹಿನಿ, ಮೊನಿಶಾ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ವಿದ್ಯಾವೆಂಕಟೇಶ್, ಶ್ರೀವಿದ್ಯಾ, ರಕ್ಷಿತಾ, ರಮ್ಯಾ… ಹೀಗೆ ಹತ್ತಾರು ನಾಯಕಿಯರು ಅವರ ಬ್ಯಾನರ್‌ನಲ್ಲಿ ಪರಿಚಯವಾಗಿ ಯಶಸ್ಸು ಕಂಡಿದ್ದಾರೆ. “ಪಾರ್ವತಮ್ಮನವರ ಬ್ಯಾನರ್‌ನಿಂದ ಪರಿಚಯವಾದ ನಟಿ ನಾನು. ವೈಯಕ್ತಿಕವಾಗಿ ನನಗೆ ಆ ಬಗ್ಗೆ ತುಂಬಾ ಖುಷಿ ಇದೆ. ಅವರ ಸಂಸ್ಥೆಯಿಂದ ಪರಿಚಯವಾಗಿದ್ದು ವೃತ್ತಿ ಬದುಕಿಗೆ ದೊಡ್ಡ ವರವಾಯ್ತು. ಮತ್ತೊಂದೆಡೆ ನನಗೆ ಗೌರವವೂ ಸಿಕ್ಕಿದೆ. ದೊಡ್ಮನೆಯ ಸಿನಿಮಾ ಮೂಲಕ ಬಂದವಳು ಎಂದು ಎಲ್ಲರೂ ಪ್ರೀತಿ, ವಿಶ್ವಾಸ, ಗೌರವದಿಂದ ಕಾಣುತ್ತಾರೆ” ಎನ್ನುತ್ತಾರೆ ನಟಿ ಸುಧಾರಾಣಿ. ಹೀಗೆ, ಹಲವು ಕಾರಣಗಳಿಂದಾಗಿ ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮನವರು ಪ್ರಮುಖ ವ್ಯಕ್ತಿಯಾಗಿ ಗೋಚರಿಸುತ್ತಾರೆ.

(ಬರಹ: ಅಮೋಘ ವರ್ಷ)

‘ದೂರದ ಬೆಟ್ಟ’ ಸಿನಿಮಾದ ನೆಗೆಟಿವ್ ಕಟಿಂಗ್ ಕಾರ್ಯಕ್ಕೆ ಚಾಲನೆ ನೀಡುತ್ತಿರುವ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್. ಚಿತ್ರದ ಸಹಾಯಕ ನಿರ್ದೇಶಕ ಎಂ.ಎಸ್.ರಾಜಶೇಖರ್, ಸಂಕಲನಕಾರ ರಾಜನ್, ನಿರ್ಮಾಪಕರಾದ ವಿಕ್ರಂ ಶ್ರೀನಿವಾಸ್ ಮತ್ತು ಶಿವಕುಮಾರ್ ಫೋಟೋದಲ್ಲಿದ್ದಾರೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಭಕ್ತವತ್ಸಲಂ

ಆತ್ಮೀಯರಿಂದ ‘ಭಕ್ತ’ ಎಂದೇ ಕರೆಸಿಕೊಳ್ಳುತ್ತಿದ್ದ ಭಕ್ತವತ್ಸಲಂ ಅವರದ್ದು ವ್ಯಾಕರಣಬದ್ಧ ಸಂಕಲನ. ಸಿನಿಮಾದ ಛಾಯಾಗ್ರಹಣ, ನಿರ್ದೇಶನದಲ್ಲಿ ತಪ್ಪುಗಳಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಅವರು ಸಂಬಂಧಿಸಿದವರನ್ನು