ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಿತ್ರಗೀತೆಗಳ ಹಿಂದಿನ ಕಣ್ಣು ‘ಚಿಟ್ಟಿಬಾಬು’

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಚಿತ್ರಗೀತೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬೆಳ್ಳಿತೆರೆಯಲ್ಲಿ ಮೂಡಿಸಿದ ಚಿಟ್ಟಿ ಬಾಬು ಅವರಂತಹ ಛಾಯಾಗ್ರಾಹಕರು ಭಾರತೀಯ ಚಿತ್ರರಂಗದಲ್ಲಿಯೇ ಬೆರಳೆಣಿಕೆಯಷ್ಟು. ಇಂದು (ಮೇ 25) ಚಿಟ್ಟಿ ಬಾಬು ಜನ್ಮದಿನ. – ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ ಅವರ ಬರಹ.

‘ನಾಗರ ಹಾವು’ಚಿತ್ರದ ‘ಬಾರೆ ಬಾರೆ ಚಂದದ ಚೆಲುವಿನ ತಾರೆ’ಗೀತೆ ಸ್ಲೋ ಮೋಷನ್‍ನಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತು. ಇದರ ತಾಂತ್ರಿಕತೆ ಕುರಿತು ಎಲ್ಲರೂ ಮಾತನಾಡಿದ್ದಾರೆ. ಹೀಗಿದ್ದರೂ ಅಲ್ಲಿ ಗಮನಿಸದೇ ಹೋದ ಸಂಗತಿಗಳು ಹಲವಿದೆ. ಇದು ನಿಜವಾದ ಅರ್ಥದ ಸ್ಲೋಮೇಷನ್‍ ಅಲ್ಲ. ಏಕೆಂದರೆ ನಾಲ್ಕು ನಿಮಿಷ ಇರುವ ಈ ಹಾಡಿನಲ್ಲಿ 19 ಚಿತ್ರಿಕೆಗಳಿವೆ. ಅದರಲ್ಲಿ 12 ಮಾತ್ರ ಸ್ಲೋ ಮೋಷನ್‍ನಲ್ಲಿದೆ. ಉಳಿದ ಐದು ಸಹಜಗತಿಯಲ್ಲಿವೆ. ಇನ್ನೆರಡು ಚಿತ್ರಿಕೆಗಳು ಇನ್ನಷ್ಟು ವಿಶೇಷವಾಗಿವೆ. ಅದರಲ್ಲಿ ವಿಷ್ಣುವರ್ಧನ್‌ ಒಂದು ವೇಗದಲ್ಲಿ ಚಲಿಸಿದರೆ ಆರತಿ ಇನ್ನೊಂದು ವೇಗದಲ್ಲಿ ಚಲಿಸುವಂತೆ ಕಾಣುತ್ತದೆ. ಚಿತ್ರದಲ್ಲಿ ಈ ಗೀತೆ ಬರುವ ಸನ್ನಿವೇಶಕೂಡ ಬಹಳ ಮಹತ್ವದ್ದು. ರಾಮಾಚಾರಿ ಮನಸ್ಸಿನಲ್ಲಿ ಅಲಮೇಲುವಿನ ಚಿತ್ರ ಅಳಿಯುತ್ತಾ ಹೋಗಿ ಮಾರ್ಗರೇಟ್ ಪ್ರವೇಶಿಸುವುದನ್ನು ಅದು ಸಂಕೇತಿಸುತ್ತದೆ. ಇಂತಹ ಸೂಕ್ಷ್ಮವನ್ನು ಹಿಡಿದಿಟ್ಟ ಅಪ್ರತಿಮ ಛಾಯಾಗ್ರಾಹಕರೇ ಚಿಟ್ಟಿ ಬಾಬು.

ಚಿತ್ರಗೀತೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬೆಳ್ಳಿತೆರೆಯಲ್ಲಿ ಮೂಡಿಸಿದ ಅವರಂತಹ ಛಾಯಾಗ್ರಾಹಕರು ಭಾರತೀಯ ಚಿತ್ರರಂಗದಲ್ಲಿಯೇ ಬೆರಳೆಣಿಕೆಯಷ್ಟು. 1927ರ ಮೇ 25ರಂದು ಜನಿಸಿದ ಚಿಟ್ಟಿಬಾಬು ಓದಿದ್ದು ಆರನೇ ತರಗತಿಯವರೆಗೆ ಮಾತ್ರ. ಹೊಟ್ಟೆಪಾಡಿಗೆ ಚೆನ್ನೈಗೆ ಹೋಗಿ ಜೆಮಿನಿ ಸ್ಟುಡಿಯೋದಲ್ಲಿ ಪ್ರಿಂಟರ್ ಆಗಿ ಕೆಲಸ ಮಾಡುತ್ತಿದ್ದವರು. ಅನುಭವಿ ತಂತ್ರಜ್ಞರಾಗಿದ್ದ ಸ್ವಾಮಿಯವರ ಕಣ್ಣಿಗೆ ಬಿದ್ದು ಛಾಯಾಗ್ರಹಣದ ಕಡೆ ಬಂದರು. ದೊರೆ – ಭಗವಾನ್‌ ಜೋಡಿಯ ದೊರೆ ಮೊದಲು ಛಾಯಾಗ್ರಾಹಕರು. ಅವರೇ ಚಿಟ್ಟಿ ಬಾಬು ಅವರ ಗುರುಗಳು. ದೊರೆ ಮುಂದೆ ನಿರ್ದೇಶನದ ಕಡೆ ಹೆಚ್ಚು ಗಮನ ಕೊಡುತ್ತಾ ಹೋದಂತೆ ಛಾಯಾಗ್ರಹಣದ ಹೊಣೆ ಚಿಟ್ಟಿಬಾಬು ಅವರಿಗೆ ಬಂದಿತು.

‘ಸನಾದಿ ಅಪ್ಪಣ್ಣ’ ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಚಿಟ್ಟಿಬಾಬು, ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್‌, ವರನಟ ರಾಜಕುಮಾರ್‌

ಆ ವೇಳೆಗಾಗಲೇ ಅವರು ಆಸಕ್ತಿಯಿಂದ ಕಥೆಗಳನ್ನು ಕೇಳುತ್ತಿದ್ದರು. ಚಿತ್ರಗೀತೆಗಳನ್ನು ರೂಪಿಸುವಲ್ಲಿ ಆಸಕ್ತಿ ಬೆಳೆಯಿತು. ‘ಕಸ್ತೂರಿ ನಿವಾಸ’ದ ಅಮರಗೀತೆ ‘ಆಡಿಸಿ ನೋಡು ಬೀಳಿಸಿ ನೋಡು’ವನ್ನು ತೆರೆಯ ಮೇಲೆ ಚಂದವಾಗಿ ಬಿಂಬಿಸಿದವರು ಚಿಟ್ಟಿ ಬಾಬು ಅವರೇ. ಆಡುವ ಗೊಂಬೆಯಿಂದ ಆರಂಭವಾಗುವ ಗೀತೆಯಲ್ಲಿ ಅವರು ನೆರಳು – ಬೆಳಕುಗಳನ್ನು ಜೋಡಿಸಿರುವ ಕ್ರಮ ಗೀತೆಯ ಅರ್ಥವನ್ನು ಬಿಂಬಿಸುವಂತಿದೆ. ಹಾಡಿನ ಅರ್ಥಕ್ಕೆ ಚಿತ್ರೀಕರಣ ಪೂರಕವಾಗಿರಬೇಕು ಎಂದು ನಂಬಿದ್ದ ಅವರು ಅದಕ್ಕಾಗಿ ಎಂತಹ ಶ್ರಮವನ್ನು ಬೇಕಾದರೂ ಪಡಲು ಸಿದ್ದರಿದ್ದರು.

‘ಬಿಳಿಗಿರಿ ರಂಗಯ್ಯ’ಚಿತ್ರದಲ್ಲಿನ ‘ಮುದ್ದುರಂಗಯ್ಯ, ಬಾರೋಚೆನ್ನಯ್ಯ’ಗೀತೆಗಾಗಿ ಜೋಗ್ ಫಾಲ್ಸ್‍ನಲ್ಲಿ ಒಂದೂವರೆ ತಿಂಗಳು ಶೂಟಿಂಗ್ ಮಾಡಿದ್ದರು. ಬಿಟ್ಟು ಬಿಡದೆ ಮಳೆ ಹಿಡಿದುಕೊಂಡಿತ್ತು. ಚಿಟ್ಟಿಬಾಬು ಅವರಿಗೆ ಇಂತಹ ವಾತಾವರಣವೇ ಬೇಕಾಗಿತ್ತು. ಅದಕ್ಕಾಗಿ ಅವರು ಬಿಸಿಲು ಬಂದಾಗ ಒಂದೋ ಎರಡೋ ಶಾಟ್ಸ್ ತೆಗೆಯುತ್ತಾ  ಕೊನೆಗೆ ತಮ್ಮ ಕನಸಿನಂತೆ ಗೀತೆ ಬರುವುದನ್ನು ಖಚಿತ ಪಡಿಸಿದರು. ‘ಎರಡು ಕನಸು’ಚಿತ್ರದಲ್ಲಿ ‘ಪೂಜಿಸಲೆಂದೆ ಹೂಗಳ ತಂದೆ’ಗೀತೆಯನ್ನು ನೋಡಿ ಇಲ್ಲಿ ಕಲ್ಪನಾ ಪಾತ್ರಕ್ಕೆ ಗಂಡನ ಮನದಲ್ಲಿ ಸ್ಥಾನ ಪಡೆಯಬೇಕು ಎನ್ನುವ ಹಂಬಲ ಗಂಡನಾದರೂ ತನ್ನ ಹಳೆಯ ಪ್ರೇಮದಲ್ಲಿಯೇ ಮನಸ್ಸನ್ನು ಮರೆತಿದ್ದಾನೆ. ಈ ಹಂತದಲ್ಲಿ ಬರುವ ಗೀತೆ ಇದು. ಸೂರ್ಯೋದಯಕ್ಕೆ ಮುಂಚೆ ಆರಂಭವಾಗುವ ಗೀತೆ ಸೂರ್ಯೋದಯ ಪೂರ್ಣವಾಗಿ ಆಗುವವರೆಗೂ ನಡೆಯುತ್ತದೆ. ಈ ಎಲ್ಲಾ ಬೆಳಕಿನ ಆಟವೂ ಪಾತ್ರಗಳ ಭಾವನೆಗಳನ್ನು ಬಿಂಬಿಸಲು ಚಿಟ್ಟಿ ಬಾಬು ಅವರಿಗೆ ಬೇಕಾಗಿತ್ತು. ಕಲ್ಪನಾ ಪೂಜಿಸುತ್ತಿರುವ ತುಳಸಿ ಕಟ್ಟೆ, ಅವರು ಹಿಡಿದಿರುವ ಪೂಜಾತಟ್ಟೆ ಎಲ್ಲದರಲ್ಲೂ ಬೆಳಕಿನ ವಿನ್ಯಾಸವಿದೆ. ಇದು ಈ ಪಾತ್ರದ ತುಮುಲವನ್ನು ಹಿಡಿಯುವ ರೀತಿಯಲ್ಲಿದೆ. ‘ತೆರೆಯೋ ಬಾಗಿಲನು ರಾಮ’ಎಂಬ ಸಾಲು ಬರುತ್ತಿದ್ದಂತೆ ಪೂಜಾ ತಟ್ಟೆಯಿಂದ ಹೊಮ್ಮಿದ ಬೆಳಕು ಪಡಸಾಲೆಯನ್ನು ಹಾದು ರಾಜ್‍ಕುಮಾರ್‍ ಅವರ ಕೋಣೆಯನ್ನು ಪ್ರವೇಶಿಸುತ್ತದೆ. ಅಲ್ಲಿ ಕೋರೈಸುವ ಬೆಳಕಿಗೂ ಕತ್ತಲ ಹಿನ್ನೆಲೆ ಇದೆ. ಇಂತಹದೊಂದು ಅದ್ಭುತ ವಿನ್ಯಾಸವನ್ನು ರೂಪಿಸಲು ಚಿಟ್ಟಿ ಬಾಬು ನಾಲ್ಕು ದಿನಗಳ ಕಾಲ ಪ್ರಯತ್ನ ಪಟ್ಟಿದ್ದರು.

ಹಿಂದಿ ಮೇರು ನಟ ಅಶೋಕ್ ಕುಮಾರ್‌ ಅವರೊಂದಿಗೆ ಚಿಟ್ಟಿ ಬಾಬು

‘ಸಿಪಾಯಿ ರಾಮು’ಚಿತ್ರದ ‘ಎಲ್ಲಿಗೆ ಪಯಣ’ಗೀತೆ ಲಾಂಗ್ ಶಾಟ್‍ನಲ್ಲಿ ಆರಂಭವಾಗುತ್ತದೆ. ಚಿಟ್ಟಿಬಾಬು ಅವರಿಗೆ ನಾಯಕನ ಮನಸ್ಥಿತಿಯನ್ನು ತೋರಿಸಬೇಕು. ಅದಕ್ಕೆ ಅವರು ಮೀಡಿಯಂ ಶಾಟ್ ಜೋಡಿಸಿರುವ ಕ್ರಮ ಅವರ ಕುಸುರಿ ಕ್ರಮಕ್ಕೆ ಸಾಕ್ಷಿಯಾಗಿದೆ. ‘ಬಯಲುದಾರಿ’ಚಿತ್ರದಲ್ಲಿ ‘ಎಲ್ಲಿರುವೆ ಮನವ ಕಾಡುವ ರೂಪಿಸಿಯೆ’ಗೀತೆಯಲ್ಲಿ ಹೆಲಿಕ್ಯಾಪ್ಟರ್ ಬಳಕೆಯಾಗಿದೆ. ಬೇರೆ ಯಾರೆ ಆಗಿದ್ದರೂ ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಸಲ ಬಳಕೆಯಾದ ಹೆಲಿಕ್ಯಾಪ್ಟರ್‌ ಚಿತ್ರಣಕ್ಕೆ ತಮ್ಮ ಕೌಶಲ್ಯವನ್ನು ವಿನಿಯೋಗಿಸುತ್ತಿದ್ದರು. ಆದರೆ ಚಿಟ್ಟಿಬಾಬು ಅದನ್ನು ರೂಪಕದಂತೆ ಬಳಸಿ ಚಿತ್ರೀಕರಣ ನಡೆಸಿರುವುದು ಗಮನ ಸೆಳೆಯುವಂತಿದೆ.

‘ಹುಲಿಯ ಹಾಲಿನ ಮೇವು’ಚಿತ್ರದಲ್ಲಿನ ‘ಆಸೆ ಹೇಳುವಾಸೆ’ಗೀತೆಯಲ್ಲಿ ಅಂಡರ್ ವಾಟರ್ ಶಾಟ್‍ಗಳನ್ನು ಕೂಡಚಿಟ್ಟಿ ಬಾಬು ಆ ಪಾತ್ರಗಳ ಅಭಿಸಾರಿಕೆ ಭಾವವನ್ನು ಬಿಂಬಿಸುವಂತೆಯೇ ಬಳಸಿಕೊಂಡಿದ್ದಾರೆ. ‘ನಾಗರ ಹಾವು’ಚಿತ್ರದ ‘ಬಾರೆ ಬಾರೆ ಚಂದದ ಚೆಲುವಿನ ತಾರೆ’ ಗೀತೆಯಲ್ಲಿ ‘ಅಂದದ ಹೆಣ್ಣಿನ ನಾಚಿಕೆ’ ಎಂಬ ರೂಪಕ ಬರುವುದನ್ನು ಗಮನಿಸಿರಬಹುದು. ಈ ಚಿತ್ರದ ಛಾಯಾಗ್ರಾಹಕರಾಗಿದ್ದ ಚಿಟ್ಟಿಬಾಬು ಅವರಿಗೆ ನಾಚಿಕೆಯ ರಂಗನ್ನು ಹಂತ ಹಂತವಾಗಿ ತೋರಿಸಿ ರೂಪಕವನ್ನು ಜೀವಂತಗೊಳಿಸಬೇಕು ಎಂಬ ಹಂಬಲ. ಆದರೆ ಆರತಿಯವರಿಗೆ ಅಂತಹ ಎಕ್ಸಪ್ರೆಷನ್‌ ಕೊಡಲು ಆಗಲೇ ಇಲ್ಲ. ಪುಟ್ಟಣ್ಣನವರು ಆ ಶಾಟ್‍ನ ಕುರಿತು ಸಮಾಧಾನ ತೋರಿಸಲಿಲ್ಲ, ಈಗಲೂ ನೀವು ಹಾಡಿನಲ್ಲಿ ನೋಡ ಬಹುದು. ಈ ರೂಪಕ ಬರುವಾಗ ಕ್ಯಾಮರಾ ವಿಷ್ಣುವರ್ಧನ್‍ ಅವರ ಮೇಲೆ ಪೋಕಸ್‍ ಆಗಿರುತ್ತದೆ. ಬೇರೆ ಛಾಯಾಗ್ರಾಹಕರಾದರೆ ಅದನ್ನು ಅಲ್ಲಿಗೆ ಮರೆತು ಬಿಟ್ಟುರುತ್ತಿದ್ದರು. ಆದರೆ ಚಿಟ್ಟಿ ಬಾಬು ಹಾಗಲ್ಲ ಅಂತಹ ಸನ್ನಿವೇಶವನ್ನು ಹುಡುಕುತ್ತಲೇ ಇದ್ದರು.

‘ಗಜೇಂದ್ರ’ ಚಿತ್ರದ ಮುಹೂರ್ತದಲ್ಲಿ ನಿರ್ದೇಶಕ ವಿ.ಸೋಮಶೇಖರ್ ಅವರೊಂದಿಗೆ

‘ನಾ ನಿನ್ನ ಮರೆಯಲಾರೆ’ಚಿತ್ರದ ‘ನನ್ನಾಸೆಯ ಹೂವೆ’ಗೀತೆಯಲ್ಲಿ ಆಗಲೇ ಅಂದದ ಹೆಣ್ಣು ಎಂದು ಹೆಸರು ಪಡೆದಿದ್ದ ಲಕ್ಷ್ಮಿಯವರಿಂದ ಇಂತಹ ಎಕ್ಸಪ್ರೆಷನ್ ಬಯಸಿದರು. ಚಿಟ್ಟಿ ಬಾಬು  ಆಗ 16 ಅಪರ್ಚರ್‍ನಲ್ಲಿ ಶೂಟ್ ಮಾಡುತ್ತಿದ್ದರು. ಎದುರಿಗೆ ಎರಡು ರಿಪ್ಲೆಕ್ಟರ್‍ಗಳನ್ನು ಇಡುತ್ತಿದ್ದರು. ಎಕ್ಸಪ್ರೆಷನ್‌ ಕ್ಲಿಯರ್ ಆಗಿ ಬರಲಿ ಎನ್ನುವುದು ಅವರ ಉದ್ದೇಶ. ಈ ವಾತಾರವಣಕ್ಕೆ ಲಕ್ಷ್ಮಿ ಕೋಪಿಸಿಕೊಂಡು ‘ಮೊದಲೇ ಬಿಸಿಗಾಳಿ ಒಂದು ಕಿವಿಯಲ್ಲಿ ಹೊಕ್ಕು ಇನ್ನೊಂದು ಕಿವಿಯಿಂದ ಹೊರಗೆ ಬರ್ತಾ ಇದೆ. ಸಾಲದು ಎಂದು ಎದರುಗಡೆ ರೆಫ್ಲಕ್ಟರ್‍ಗಳು ಕಣ್ಣನ್ನು ಕೋರೈಸುತ್ತಿವೆ. ಇಂತಹ ಕಡೆ ನಾಚಿಕೆಯ ಗ್ರೇಡೇಷನ್‌ ಕೊಡಬೇಕು ಎಂದರೆ ಹೇಗೆ ಸಾಧ್ಯ?’ಎಂದಿದ್ದರು. ಆದರೆ ಚಿಟ್ಟಿ ಬಾಬು ಹಠವಾದಿ ಲಕ್ಷ್ಮಿಯವರಿಂದ ಅಂತಹ ಎಕ್ಸಪ್ರೆಷನ್ ಪಡೆದುಕೊಂಡು. ಆದರೆ ಲೈಟಿಂಗ್ ಜಾಸ್ತಿಯಾಗಿ ಅದು ತೆರೆಯ ಮೇಲೆ ಬ್ಲರ್ ಆಗಿ ಬಿಟ್ಟಿತು. ಚಿಟ್ಟಿ ಬಾಬು ಆಗಲೂ ನಿರಾಶರಾಗಲಿಲ್ಲ. ಇನ್ನೊಂದು ಅವಕಾಶಕ್ಕೆ ಸಿದ್ದರಾದರು. ‘ಚಂದನದ ಗೊಂಬೆ’ಚಿತ್ರದಲ್ಲಿ ಅವರಿಗೆ ಇಂತಹ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ಅನಂತ್ ನಾಗ್ ಪಾತ್ರದ ಅವಧಿ ಬಹಳ ಕಡಿಮೆಯಾಗಿದ್ದರಿಂದ ಅಷ್ಟರಲ್ಲಿಯೇ ಗೀತೆಗಳನ್ನು ತರಲು ನಿರ್ದೇಶಕ ದೊರೆ – ಭಗವಾನ್ ಉದ್ದೇಶಿಸಿದ್ದರು. ಅದರಲ್ಲಿಯೂ ಟೈಟಲ್ ಸಾಂಗ್ ‘ಆಕಾಶದಿಂದ ಧರೆಗಿಳಿದ ರಂಭೆ’ಗೀತೆಯಲ್ಲಿ ಅನಂತ್ ನಾಗ್‍ ಅವರು ಹಾಡುತ್ತಿರುವುದರ ಜೊತೆಗೆ ಲಕ್ಷ್ಮಿಯವರ ಎಕ್ಸಪ್ರೆಷನ್‍ಗಳನ್ನು ಜೆಕ್ಸಟ್ರಾಪೋಸ್ ಮಾಡುವ ಸನ್ನಿವೇಶ ಒದಗಿತು. ಈಗ ಚಿಟ್ಟಿಬಾಬು ಲಕ್ಷ್ಮಿಯವರನ್ನು ಮತ್ತೆ ಒಪ್ಪಿಸಿದರು. ಈಗ ಅವರ ಪ್ರಯತ್ನ ವ್ಯರ್ಥವಾಗಲಿಲ್ಲ. ‘ಅಂದದ ಹೆಣ್ಣಿನ ನಾಚಿಕೆ’ಸಿಕ್ಕಿಯೇ ಬಿಟ್ಟಿತು. ಸಾಲದು ಎನ್ನುವಂತೆ ಅದೇ ಚಿತ್ರದ ‘ಮನೆಯನು ಬೆಳಗಿದೆ ಇಂದು’ಗೀತೆಯಲ್ಲಿ ಕೂಡ ಇನ್ನೊಂದು ಭಿನ್ನ ಬಗೆಯಲ್ಲಿ ನಾಚಿಕೆಯ ಎಕ್ಸಪ್ರೆಷನ್ ಹಿಡಿದಿದ್ದರು. ಚಿಟ್ಟಿ ಬಾಬು ಅವರ ಯಾನವನ್ನು ಗಮನಿಸಿದರೆ ಇಂತಹ ಹತ್ತಾರು ಉದಾಹರಣೆಗಳು ದೊರಕುತ್ತವೆ.

‘ಹುಲಿಯ ಹಾಲಿನ ಮೇವು’ಚಿತ್ರದ ಔಟ್‍ಡೋರ್ ಶೂಟಿಂಗ್‌ ರಾಜಸ್ತಾನದಲ್ಲಿ ನಡೆದಿತ್ತು. ಯುದ್ಧದ ಸನ್ನಿವೇಶ ಸಾವಿರಕ್ಕೂ ಹೆಚ್ಚು ಕಲಾವಿದರು. ಮೂರು ಕ್ಯಾಮರಾ ಬಳಸಿ ಚಿತ್ರೀಕರಣ ಅಷ್ಟೋ ಜನಕ್ಕೆ ಮಾರ್ಗದರ್ಶನ ಮಾಡುವುದು ಹೇಗೆ? ಚಿಟ್ಟಿಬಾಬು ಕುದುರೆ ಮೇಲೆ ಕುಳಿತು ಇಡೀ ರಣರಂಗವನ್ನು ಮಿಂಚಿನ ವೇಗದಲ್ಲಿ ಸಂಚರಿಸುತ್ತಾ ಸೂಚನೆಗಳನ್ನು ನೀಡುತ್ತಿದ್ದ ರೀತಿ ಅವರಿಗಿದ್ದ ಬದ್ದತೆಯನ್ನು ಸೂಚಿಸುತ್ತಿತ್ತು. ದ್ವಿಪಾತ್ರಗಳನ್ನು ಚಿತ್ರಿಸಲು ಮಾಸ್ಕು ಬಳಸಬೇಕಾದ ಕಾಲ. ಚಿಟ್ಟಿ ಬಾಬು ಈ ಸವಾಲನ್ನುಅದ್ಭುತವಾಗಿ ಎದುರಿಸಿದ್ದರು. ‘ಬಾಳು ಬೆಳಗಿತು’ಚಿತ್ರದ ಇದಕ್ಕೆ ಉದಾಹರಣೆ. ‘ನಾ ನಿನ್ನ ಮರೆಯಲಾರೆ’ಚಿತ್ರದಲ್ಲಿ ಇದನ್ನೇ ಬೇರೊಂದು ರೀತಿಯಲ್ಲಿ ಬಳಸಿದ್ದಾರೆ. ಚಿತ್ರದಲ್ಲಿ ಲಕ್ಷ್ಮಿ ಮತ್ತು ಶುಬಾ ಒಂದೇ ದೃಶ್ಯದಲ್ಲಿ ಬೇರೆ ಬೇರೆ ಸ್ಥಳಗಳಿಂದ ಮಾತನಾಡುತ್ತಾರೆ. ಅದನ್ನು ಸೂಚಿಸುವಂತೆ ಒಂದೇ ಸಮಯದ ಬೆಳಕಿನ ವಿನ್ಯಾಸವನ್ನುಅವರು ರೂಪಿಸಿರುವ ರೀತಿ ಗಮನ ಸೆಳೆಯುವಂತಿದೆ. ಹೀಗೆ ನೂರಾರು ಚಿತ್ರಗೀತೆಗಳಿಗೆ ಜೀವ ನೀಡಿದ ಚಿಟ್ಟಿ ಬಾಬು 1999ರ ಜನವರಿ 28ರಂದು ಮದ್ರಾಸಿನ ಮೌಂಟ್‍ ರಸ್ತೆಯಲ್ಲಿರುವ ದೇವಸ್ಥಾನಕ್ಕೆ ಮಡದಿ ಜೊತೆ ಕಾರಿನಲ್ಲಿ ಹೋಗಿದ್ದರು ಹಿಂದಿರುಗುವಾಗ ಮಾತನಾಡುತ್ತಲೇ ಇದ್ದವರು ಇದಕ್ಕಿದ್ದಂತೆ ಮಾತು ನಿಲ್ಲಿಸಿದ್ದಾರೆ ಎಂದು ನೋಡಿದಾಗ ತಮ್ಮ ಬದುಕಿನ ಲೈಟ್ಸ್ ಆರಿಸಿ ಬಿಟ್ಟಿದ್ದರು. ಇಂದು ಅವರು ಚಿತ್ರಿಸಿರುವ ಗೀತೆಗಳು ನೆನಪನ್ನು ಉಳಿಸುವಂತಿವೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.