ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಾಧುರ್ಯದ ಮಹಾರಾಜ ಪಿ.ಬಿ.ಶ್ರೀನಿವಾಸ್

ಪೋಸ್ಟ್ ಶೇರ್ ಮಾಡಿ
ಡಾ.ಡಿ.ಎಸ್‌.ಶ್ರೀನಿವಾಸ ಪ್ರಸಾದ್
ಲೇಖಕ

ಗಾಯಕ ಪಿಬಿಎಸ್‌ ಅವರ ಸ್ಥಾನ ತುಂಬಲು ಖಂಡಿತವಾಗಿಯೂ ಯಾರಿಗೂ ಸಾಧ್ಯವಿಲ್ಲ. ಅವರು ಈಗ ನಮ್ಮೊಡನಿಲ್ಲದಿದ್ದರೂ ಅವರದೇ ಹಾಡಿನಂತೆ ಅವರದ್ದು ಹೃದಯಸಾಕ್ಷಿ ಹಾಡು. ಇಂದು ಪಿಬಿಎಸ್ (22/09/1930 14/04/2013) ಜನ್ಮದಿನ. ಲೇಖಕ ಡಾ.ಡಿ.ಎಸ್‌.ಶ್ರೀನಿವಾಸ ಪ್ರಸಾದ್ ಅವರು ಮೇರು ಗಾಯಕನನ್ನು ಸ್ಮರಿಸಿದ್ದಾರೆ.

Songs may end, but it’s melody lingers on

1995 – 96 ಇರಬಹುದು. ಅಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನ ಕಿಕ್ಕಿರಿದಿದ್ದರು. ಅಲ್ಲಿ ನಟಿ ಜಯಂತಿ, ಗಾಯಕಿ ಎಸ್.ಜಾನಕಿಯವರೂ ಸೇರಿದಂತೆ ಅನೇಕ ಅತಿರಥ ಚಲನಚಿತ್ರ ಕಲಾವಿದರು ವೇದಿಕೆಯ ಮೇಲಿದ್ದರು. ಸಭೆ ಇನ್ನೊಬ್ಬ ಮಹಾನ್ ಗಾನಕೋಗಿಲೆಗೆ ಕಾಯುತ್ತಿತ್ತು. ಸಹಜವಾಗಿಯೇ ಸದ್ದುಗದ್ದಲ ಅಲ್ಲಿ ಇದ್ದೇ ಇತ್ತು. ಕಾರ್ಯಕ್ರಮದ ನಿರೂಪಕಿ ಅಪರ್ಣ ಅವರು ಧ್ವನಿವರ್ಧಕದಲ್ಲಿ ನೆರೆದಿದ್ದ ಜನರಿಗೆ “ನೋಡಿ ಬರ್ತಾ ಇದ್ದಾರೆ ‘ನಾವಾಡುವ ನುಡಿಯೇ ಕನ್ನಡ ನುಡಿ, ಕನ್ನಡನುಡಿ, ಗಂಧದ ಗುಡಿ’ ಎಂದು ಉಲಿದ ಕೋಗಿಲೆ’ ದಯವಿಟ್ಟು ಎಲ್ಲರೂ ಸುಮ್ಮನಿರಿ” ಅಂತಂದರು. ಊರುಗೋಲು ಹಿಡಿದು ಬಂದರು ನೋಡಿ ಗಂಧರ್ವ ಡಾ.ಪಿ.ಬಿ.ಶ್ರೀನಿವಾಸ್. ಅದುವರೆಗೂ ಗಿಜಿಗಿಜಿಗುಡುತ್ತಿದ್ದ ಜನ ಒಮ್ಮೆಲೆ ಮೌನವಾಗಿ ಆ ಅಪ್ರತಿಮ ಗಾಯಕರಾದ ಪಿಬಿಎಸ್ ಮೇಲಿನ ಅಮಿತವಾದ ಅಕ್ಕರೆ – ಅಭಿಮಾನ ಮತ್ತು ಆ ಸಾಧಕಶ್ರೇಷ್ಠರ ಕುರಿತಾದ ನಿಡುಗಾಲದ ಗೌರವಕ್ಕೆ ಅರ್ಹ ಮರ್ಯಾದೆ ಸಲ್ಲಿಸಿತು. ಬಾಯಿ ತೆರೆದ ಕ್ಷಣವೇ ಮಾಧುರ್ಯದ ಸಿಹಿ ಇಂಚರವನ್ನು ನಮ್ಮೆಲ್ಲರ ಕಿವಿ – ಹೃನ್ಮನಗಳಿಗೆ ಧಾರೆ ಎರೆದ ಪಿ.ಬಿ.ಶ್ರೀನಿವಾಸ್ ಮತ್ತು ಸಂಗೀತ ಒಟ್ಟೊಟ್ಟಿಗೆ ಅಲ್ಲಿ ಘನತೆಯ ವಿಜಯ ಸಾಧಿಸಿತ್ತು. ಸ್ವಲ್ಪ ಹೊತ್ತಾದ ಮೇಲೆ ಆ ಮಹಾನ್ ಗಾಯಕರ ಮುಂದೆ ನಾನು ನಿಂತರೂ ಆ ಸುಶ್ರಾವ್ಯಶಾರೀರದ ಹಾಡುಗಳೆಲ್ಲ ನೆನಪಾಗಿ ಮಾತಾಡಲು ಬಾರದೆ, ನಮಸ್ಕಾರ ಹೇಳಿ ಧನ್ಯತಾಭಾವದಲ್ಲಿ ಹೊರಬಂದ ಪುಣ್ಯ ನನ್ನದಾಗಿತ್ತು.

ತೆಲುಗು ಮನೆಮಾತಿನ, ತಮಿಳು ನೆಲದ ಚೆನ್ನೈನಲ್ಲಿ ವಾಸವಾಗಿದ್ದ ಪಿ.ಬಿ.ಶ್ರೀನಿವಾಸ್ ತಮಿಳಿನಲ್ಲಿ ಜೆಮಿನಿ ಗಣೇಶನ್‌ಗೆ ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ ನಿಜ. ಆದರೆ,ಡಾ.ರಾಜ್ – ಡಾ.ಪಿ.ಬಿ.ಶ್ರೀನಿವಾಸ್ ಶರೀರ – ಶಾರೀರದ ಜೋಡಿ ಮಾಡಿದ ಮೋಡಿ ಅವರಿಬ್ಬರ ಸಹಸಂಯೋಜನೆಯಲ್ಲೇ ಬಂದ ಹಾಡಾದ ‘ನಿನದೇ ನೆನಪು ದಿನವೂ ಮನದಲ್ಲಿ.. ಎನ್ನುವ ಹಾಗೆ ಸದಾಕಾಲವೂ ಚಿರಸ್ಮರಣೀಯವಾದ ಚಿನ್ನದ ಖನಿಗಳೇ ಆಗಿ, ಒಲಿದು, ಉಲಿದು ಬಂದ ಸುಮಧುರ ಬಾಂಧವ್ಯದ ಕನ್ನಡ ನೆಲದ ಪುಣ್ಯ. ಪಿಬಿಎಸ್ ಅವರ ಹಾಡುಗಳಲ್ಲಿ ಯಾವುದು ಬಹಳ ಸೊಗಸಾಗಿದೆ ಎಂಬ ನಿರ್ಧಾರಕ್ಕೆ ಬರುವುದು ಬಹಳ ಕಷ್ಟ. ಹಾಗಿರುವಾಗ ಡಾ.ರಾಜ್ – ಪಿಬಿಎಸ್ ಅವರ ಅನುಪಮ ಜುಗಲ್ಬಂದಿಯಲ್ಲಿ ಮೂಡಿದ ಹಾಡುಗಳ ರಸಸಿಂಚನದಲ್ಲಿ ಹಾಡುಗಳ ಜ್ಯೇಷ್ಠತೆ ಇನ್ನೂ ಕಠಿಣವಾದ ಕೆಲಸ.

ಓಹಿಲೇಶ್ವರದಲ್ಲೇ (1956) ಡಾ.ರಾಜ್‌ಗೆ ಶ್ರೀನಿವಾಸ್ ಹಾಡಿದ್ದರೂ ಸಹ ಇವರಿಬ್ಬರ ಜೋಡಿಯ ಯಶೋಗಾಥೆಗೆ ಮುನ್ನುಡಿಯಾದ ಚಿತ್ರ 1960ರಲ್ಲಿ ಬಂದ ‘ಭಕ್ತ ಕನಕದಾಸ’. ರಾಜ್ ಅಭಿನಯಕ್ಕೆ ಪಿಬಿಎಸ್ ಹಾಡಿದ ‘ಬಾಗಿಲನು ತೆರೆದು’, ಜೈಜಯವಂತಿ ರಾಗದ ‘ಕುಲಕುಲಕುಲವೆಂದು’ ಅಂದಿಗೆ ಮಾತ್ರವಲ್ಲದೆ ಇವತ್ತಿಗೂ ಮಧುರ. ಆದರೆ ಸ್ವತಃ ಶ್ರೀನಿವಾಸ್ ಅವರಿಗೆ ಬಹಳ ಇಷ್ಟವಾಗಿದ್ದುದು ಇದೇ ಚಿತ್ರದ ವರಭೈರವಿ ರಾಗಾಧಾರಿತ ವೆಂಕಟರಾಜು ಸಂಗೀತದ ‘ಬದುಕಿದೆನು ಬದುಕಿದೆನು ಭವ ಎನಗೆ ಇಂಗಿತು’ ಕೀರ್ತನೆ. ಜಯತು ಜಯವಿಠಲ, ಹಾಡೊಂದ ಹಾಡುವೆ, ಆಕಾಶವೇ ಬೀಳಲಿ ಮೇಲೆ, ಆಡಿಸಿ ನೋಡು ಬೀಳಿಸಿ ನೋಡು, ಮೌನವೇ ಆಭರಣ, ನೀ ಜನಿಸಿದ ದಿನವೂ ಅಳುವೆ.. ಒಲವೇ ಜೀವನ ಸಾಕ್ಷಾತ್ಕಾರ, ನಾವಾಡುವ ನುಡಿಯೇ, ಆಡುತಿರುವ ಮೋಡಗಳೇ, ಎಲ್ಲಿಗೇ ಪಯಣ.. ಬಾಡಿಹೋದ ಬಳ್ಳಿಯಿಂದ, ಚಿನ್ನ ಎಂದೂ ನಗುತಿರು.. ಹೀಗೇ ನೂರಾರು ಗೀತೆಗಳ ಚಿತ್ರ – ಗಾನಮಂಜರಿಯೇ ನಮ್ಮೆದೆಯಲ್ಲಿ ರಿಂಗಣಿಸುತ್ತದೆ.

ಆದರೆ ಪಿ.ಬಿ.ಶ್ರೀನಿವಾಸ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಕನ್ನಡ ಚಿತ್ರರಂಗದ ಭೀಷ್ಮ ಆರ್.ನಾಗೇಂದ್ರರಾಯರಿಗೆ ಇಡೀ ಕನ್ನಡ ಜನತೆ ಧನ್ಯಮಾನ್ಯ ನಮಸ್ಕಾರ ಸಲ್ಲಿಸಲೇ ಬೇಕು. ತಮ್ಮ ಜಾತಕಫಲ (1953) ಚಿತ್ರವನ್ನು ಕನ್ನಡ, ತಮಿಳು, ತೆಲುಗು ತ್ರಿಭಾಷೆಗಳಲ್ಲಿ ತೆಗೆದಾಗ ಪಿಬಿಶ್ರೀ ಅವರ ಪಾದಾರ್ಪಣೆ ಆಯಿತು. ಕನ್ನಡದಲ್ಲಿ ಜಿ.ಕೆ.ವೆಂಕಟೇಶ್ ಸಹ ಈ ಚಿತ್ರದಲ್ಲಿ ಹಾಡಿದ್ದಾರೆ. ಇಲ್ಲಿಂದ ಪಿ.ಬಿ.ಶ್ರೀನಿವಾಸ್ ಕನ್ನಡ ಚಿತ್ರರಂಗದ ಜೊತೆಗಿನ ಬೆಸುಗೆ ಕನ್ನಡಿಗರ ಪಾಲಿನ ಅಮೃತಘಳಿಗೆಗಳಾದವು.

ಡಾ.ರಾಜ್‌ – ಪಿಬಿಎಸ್‌

“ಶ್ರೀನಿವಾಸ ಒಬ್ಬ ಶಾಪಗ್ರಸ್ತ ಗಂಧರ್ವ. ದೇವಲೋಕದಲ್ಲಿರಬೇಕಾದವನು ಭೂಲೋಕಕ್ಕೆ ಇಳಿದು ಬಂದಿರುವ ಗಾಯನಲೋಕದ ಗಂಧರ್ವ ನಮ್ಮ ಶ್ರೀನಿವಾಸ” ಎಂದಿದ್ದರು ಸಂಗೀತ ಸಂಯೋಜಕ ಜಿ.ಕೆ.ವೆಂಕಟೇಶ್‌. ಅವರ ಮಾತುಗಳನ್ನು ಇಲ್ಲವೆನ್ನಲು ಅಸಾಧ್ಯವಲ್ಲವೇ. ಜಿಕೆವಿ, ಶ್ರೀನಿವಾಸ್ ಜೋಡಿಯ ಸುಮಧುರ ಹಾಡುಗಳ ರಾಶಿಯೇ ಸಾಕಷ್ಟಿವೆ. ದೀನ ನಾ ಬಂದಿರುವೆ, ಕಣ್ಣಂಚಿನ ಈ ಮಾತಲಿ, ನಗುವುದೋ ಅಳುವುದೋ ನೀವೇ ಹೇಳಿ, ಆಡೋಣ ನೀನು ನಾನು.. ಹೀಗೆ. ಶ್ರೀನಿವಾಸ ಅವರು ತಮ್ಮತಾಯಿ ಶೇಷಗಿರಿಯಮ್ಮ ಸತ್ತ ನೋವು ಅದುಮಿಟ್ಟು ಕೊಂಡು ಹಾಡಿದ ಭೀಮ್ ಪಲಾಸ್/ಅಭೇರಿ ರಾಗಾಧಾರಿತ ಗೀತೆಯಾದ “ರವಿವರ್ಮನಾ,. ನಗುನಗುತಾ ನಲಿನಲಿ, ಆಗದು ಎಂದು..ಇತ್ಯಾದಿ. ಸಂಗೀತ ಸಂಯೋಜಕ ಎಂ.ರಂಗರಾವ್ – ಶ್ರೀನಿವಾಸರ ಜೋಡಿಯ ಮೋಡಿಯೂ ವಿಶಿಷ್ಟ. ಇವರಿಬ್ಬರ ಜೋಡಿಯಲ್ಲೂ ಅನೇಕ ಒಳ್ಳೆಯ ಗೀತೆಗಳಿವೆ. ಈ ದಿನ ಜನುಮ ದಿನ, ಮೈಸೂರು ದಸರಾ… ಅನೇಕ.

ರಾಜನ್- ನಾಗೇಂದ್ರ, ಸತ್ಯಂ ಎಲ್ಲರ ಸಂಯೋಜನೆಯಲ್ಲಿಯೂ ಪಿ.ಬಿ.ಶ್ರೀನಿವಾಸ್ ಅವರ ಗಾನಸುಧೆಯ ಕೊಡುಗೆ ಅಗಾಧವಾಗಿದೆ. ಆದರೆ ವಿಜಯಭಾಸ್ಕರ್ ಮತ್ತು ಪಿಬಿಎಸ್ ಸಹಸಾಂಗತ್ಯ ಮರೆಯಲು ಸಾಧ್ಯವಾಗದ ಸಂಗತಿ ಎನ್ನುವುದು ಅತ್ಯುಕ್ತಿಯಾಗಲಾರದು. ಕೆಂಪು ರೋಜಾ ಮೊಗದವಳೇ, ಬೆಳ್ಳಿ ಮೋಡದ ಅಂಚಿನಿಂದ, ಪಂಚಮ ವೇದ.. ಪ್ರೇಮದ ನಾದ, ಇಳಿದು ಬಾ (ಈ ಹಾಡಿಗೆ ಪಿಬಿಎಸ್ ತಾವೇ ಅಭಿನಯಿಸಿದ್ದಾರೆ) ನಾನೂ ನೀನು ಜೊತೆಗಿರಲು ಕಾಲದ ನೆನಪೇ ಬೇಕಿಲ್ಲ, ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ, ಕನ್ನಡನಾಡಿನ ವೀರ ರಮಣಿಯ, ಬಾರೆ ಬಾರೆ… ಬರೆದೆ ನೀನು ನಿನ್ನ ಹೆಸರ, ಕಲ್ಪನಾ ರೂಪರಾಶಿ… ಹೀಗೆ ನೂರಾರು ಗೀತೆಗಳಿವೆ.

‘ಭಾಗ್ಯಜ್ಯೋತಿ’ ಚಿತ್ರಕ್ಕೆ ತಾವೇ ರಚಿಸಿ ವಾಣಿ ಜಯರಾಂ ಜೊತೆಗೆ ಹಾಡಿದ ದಿವ್ಯ ಗಗನ ವನವಾಸಿ, ಉರ್ದು ಕಲಿತು, ತಮಿಳಿನ ‘ನಂದು’ ಚಿತ್ರಕ್ಕೆ ಬರೆದು, ಭೂಪೇನ್ ಹಝಾರಿಕಾ ಹಾಡಿದ ಕುಛ್ ಕೆಹ್ ಸಕೂ, ಲಕ್ಷ್ಮಣ್ ಶ್ರುತಿ ಎಂಬ ಕಾರ್ಯಕ್ರಮದಲ್ಲಿ ಎಸ್‌ಪಿ, ಏಸುದಾಸರನ್ನು ಹೊಗಳಿ ಬರೆದ ಹಾಡು, ನೀಲ್ ಆರ್ಮ್‌ಸ್ಟ್ರಾಂಗ್‌ ಸಾಧನೆಯನ್ನು ಕುರಿತು ಇಂಗ್ಲಿಷ್‌ನಲ್ಲಿ ರಚಿಸಿದ Man to Moon,Moon to God…  ಎಂಟು ಭಾಷೆಗಳನ್ನು ಅರಿತಿದ್ದ ಅರಿಜೋನ ವಿವಿಯ ಡಾಕ್ಟರೇಟ್‌ಗೆ ಭಾಜನರಾಗಿದ್ದ ಪಿಬಿಎಸ್ ಕವಿಯ ಮಧುರ ಕಲ್ಪನಾ (ಕಲ್ಯಾಣಿರಾಗ) ಹರಿನಾಮವೇ ಚಂದ (ಮೋಹನ) ಪರತತ್ವವನು ಬಲ್ಲ.. (ಹಿಂದೋಳ) ನಾನೇ ಎಂಬ ಭಾವ ನಾಶವಾಯಿತು (ಶಿವರಂಜಿನಿ) ವಿವಿಧ ರಾಗಸಮ್ಮೇಳಗಳಲ್ಲಿ ಉಲಿದ ಗೀತೆಗಳಾಗಲಿ, ತಾವೇ ಸೃಜಿಸಿದ ರಾಗಸೃಷ್ಟಿಯ ಹಿರಿಮೆಯಾಗಲೀ ಕಡಿಮೆ ಸಾಧನೆಯಲ್ಲ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ, ತಮಿಳುನಾಡಿನ ಕಲೈಮಾಮಣಿ ಹೀಗೆಲ್ಲ ಗೌರವಾದರಗಳಿಗೆ ಭಾಜನರಾಗಿದ್ದ ಶ್ರೀನಿವಾಸ ಅವರ ಸಾಧನೆ ಶಿಖರಸದೃಶ.

ಘಂಟಸಾಲ ಅವರ ಸಂಗೀತ ನಿರ್ದೇಶನದ ಕನ್ನಡ ಚಿತ್ರಗಳಲ್ಲಿ ಒಂದಾದ ‘ನನ್ನ ತಮ್ಮ’ ಚಿತ್ರದ ‘ಇದೇ ಹೊಸ ಹಾಡು ಹೃದಯಸಾಕ್ಷಿ ಹಾಡು..’ ಸೇರಿದಂತೆ ಹಿಂದಿಯಲ್ಲಿ ಸಹಾ ಗೀತಾ ದತ್, ಲತಾ ಅವರ ಜೊತೆಯಲ್ಲಿಯೂ ಹಾಡಿದ್ದಾರೆ. ‘ಮೈ ಭಿ ಲಡ್ಕಿ ಹ್ಞೂಂ..’ ಚಿತ್ರದಲ್ಲಿ ಲತಾ ಮಂಗೇಶ್ಕರ್ ಅವರ ಜೊತೆಗೆ ಚಾಂದ್ ಸೆ ಹೋಗಾ ಪ್ಯಾರ್.. ಚಿತ್ರದಲ್ಲೂ ಹಾಡಿದ ಪಿಬಿಎಸ್, ಲತಾ ಅವರ ಜೊತೆ ಹಾಡಿದ್ದೊಂದು ಸ್ವರ್ಣಸ್ವಪ್ನ ಎಂದಿದ್ದರು. ಪಿ.ಬಿ.ಶ್ರೀನಿವಾಸ್ ಅವರ ಸ್ಥಾನ ತುಂಬಲು ಖಂಡಿತವಾಗಿಯೂ ಯಾರಿಗೂ ಸಾಧ್ಯವಿಲ್ಲ. ಅವರು ಈಗ ನಮ್ಮೊಡನಿಲ್ಲದಿದ್ದರೂ ಅವರದೇ ಹಾಡಿನಂತೆ ಅವರದ್ದು ಹೃದಯಸಾಕ್ಷಿ ಹಾಡು, ತಾಯಿದೇವಿ ಹರಸಿದಹಾಡು, ಜನ್ಮಜನ್ಮದ ಪುಣ್ಯದ ಹಾಡು ಕನ್ನಡಾಂಬೆ ಕಲಿಸಿದ ಹಾಡು. ದಾದಾ ಫಾಲ್ಕೆ ಪ್ರಶಸ್ತಿ ಸೇರಿದಂತೆ, ಅನೇಕ ಪ್ರಮುಖ ಪ್ರಶಸ್ತಿಗಳಿಂದ ವಂಚಿತರಾದರೂ ಪಿ.ಬಿ.ಶ್ರೀನಿವಾಸ್ ಅವೆಲ್ಲಕ್ಕೂ ಮೀರಿ ಮಿಗಿಲಾದ ಮಹಾನ್ ಚೇತನ ಮತ್ತು ಭಾರತೀಯ ಚಿತ್ರರಂಗದ ಅನರ್ಘ್ಯ ರತ್ನ.

ಪಿ.ಬಿ.ಶ್ರೀನಿವಾಸ್‌ | ಜನನ: 22/09/1930 | ನಿಧನ: 14/04/2013

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ