ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು ಮೈಸೂರಿಗೆ ತೆರಳಬೇಕಾದ ಸಂದರ್ಭ ಒದಗಿಬರುತ್ತದೆ. ಮೈಸೂರಿನ ನೆರೆಮನೆಯಲ್ಲಿ ನಟ, ಚಿತ್ರಸಾಹಿತಿ ಸೋರಟ್ ಅಶ್ವಥ್ ಪರಿಚಯವಾಗಿದ್ದು ಅವರ ಬದುಕಿನ ದೊಡ್ಡ ತಿರುವು. ಸೋರಟ್ ಅವರ ಮೂಲಕ ರಂಗಭೂಮಿ ನಂಟು ಸಿಕ್ಕಿತು. ‘ಸಿಂಹ ಸೆಲೆಕ್ಟ್ ಆರ್ಟಿಸ್ಟ್’ ತಂಡದಲ್ಲಿ ಬಾಲನಟನಾಗಿ ರತ್ನಾಕರ್ ರಂಗಭೂಮಿ ಪ್ರವೇಶಿಸಿದರು.

ನಂತರ ನಟ ಡಿಕ್ಕಿ ಮಾಧವರಾವ್ ಅವರ ಕಂಪನಿ ಹಾಗೂ ‘ಶೇಷಕಮಲ ಕಲಾಮಂಡಳಿ’ಯಲ್ಲಿ ನಟನೆ ಮುಂದುವರಿಸಿದರು. ನಟಿ ಪಂಢರೀಬಾಯಿ ಅವರ ನಾಟಕ ಕಂಪನಿಯಲ್ಲಿ ‘ಶಾಂತಿನಿವಾಸ’ ನಾಟಕದ ಒಂದು ಸಾವಿರ ಪ್ರದರ್ಶನಗಳಲ್ಲಿ ಹಾಸ್ಯನಟನಾಗಿ ಅವರು ಅಭಿನಯಿಸಿದ್ದರು ಎನ್ನುವುದು ವಿಶೇಷ. ‘ವಿಚಿತ್ರ ಪ್ರಪಂಚ’ (1955) ಚಿತ್ರದೊಂದಿಗೆ ರತ್ನಾಕರ್ ಬೆಳ್ಳಿತೆರೆಗೆ ಪರಿಚಯವಾದರು. ಕೀರಲು ಕಂಠ ಮತ್ತು ವಿಶಿಷ್ಠ ಭಾವಾಭಿನಯದಿಂದ ಹಾಸ್ಯಪಾತ್ರಗಳಲ್ಲೇ ಅವರು ಹೆಚ್ಚು ಗುರುತಿಸಿಕೊಂಡರು. ಕನಕದಾಸ, ಸ್ವರ್ಣಗೌರಿ, ನಂದಾದೀಪ, ನವಜೀವನ, ಕರುಳಿನ ಕರೆ, ಕಠಾರಿವೀರ, ವೀರಕೇಸರಿ, ಗೌರಿ, ಸತಿಸುಕನ್ಯಾ, ಆನಂದಭೈರವಿ, ಗುರುಶಿಷ್ಯರು, ಕನ್ಯಾರತ್ನ.. ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು.

ಸಿನಿಮಾ ಪ್ರವೇಶಿಸಿದ ಆರಂಭದಲ್ಲಿ ರತ್ನಾಕರ್, ನಿರ್ದೇಶಕ – ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಅವರ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕ, ನಿರ್ಮಾಣ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದರು. ಕು.ರ.ಸೀತಾರಾಮಶಾಸ್ತ್ರಿ ಮತ್ತು ಸೋರಟ್ ಅಶ್ವಥ್ ಅವರೊಂದಿಗೆ ಸಾಹಿತ್ಯ ರಚನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ಚಿತ್ರನಿರ್ದೇಶನದ ಬಗ್ಗೆಯೂ ಅವರಿಗೆ ಅನುಭವವಿತ್ತು. ತಮ್ಮ ಆತ್ಮೀಯ ಸ್ನೇಹಿತ, ಸಿನಿಮಾ ಛಾಯಾಗ್ರಾಹಕ ಮಧುಸೂದನ್ ಅವರೊಡಗೂಡಿ ರತ್ನಾಕರ್ ‘ಭಾಗ್ಯದೇವತೆ’ ಸಿನಿಮಾ ನಿರ್ದೇಶಿಸಿದರು. ‘ಬಾಂಧವ್ಯ’ ಮತ್ತು ‘ಶನಿಪ್ರಭಾವ’ ರತ್ನಾಕರ್ ನಿರ್ದೇಶನದ ಇನ್ನೆರೆಡು ಚಿತ್ರಗಳು. ತಮ್ಮ ನಟನಾ ಬದುಕಿನಲ್ಲಿ ರತ್ನಾಕರ್ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡು ತಮಿಳು, ಒಂದು ತೆಲುಗು ಮತ್ತು ಒಂದು ಹಿಂದಿ (ಬುಲಂದಿ) ಚಿತ್ರವೂ ಇದೆ.
ರತ್ನಾಕರ್ | ಜನನ: 11/04/1931 | ನಿಧನ: 21/09/2010)
(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)