ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

ಪೋಸ್ಟ್ ಶೇರ್ ಮಾಡಿ

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ)

ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ ಶಂಕರ್‌ ಸಿಂಗ್‌ ಅವರನ್ನು ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ ಅವರು ಸ್ಮರಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಲವು ಹೊಸತನ್ನು ನೀಡಿ ಸ್ವಂತಿಕೆಯನ್ನು ಪಡೆಯುವಲ್ಲಿ ಶ್ರಮಿಸಿದ ಹಿರಿಯ ಸಾಧಕ ಡಿ.ಶಂಕರ್‌ಸಿಂಗ್‌ ಅವರ ಜನ್ಮದಿನವಿಂದು (ಜನನ 15, ಆಗಸ್ಟ್ 1921). ಶಂಕರ್‌ಸಿಂಗ್‌  ಅವರ ಹೆತ್ತವರಿಗೆ ಮಗ ವೈದ್ಯನಾಗಬೇಕು ಎನ್ನುವ ಹಂಬಲವಿತ್ತು. ಆದರೆ ಬದುಕು ಹಲವು ತಿರುವುಗಳನ್ನು ಪಡೆದು ಬ್ರ್ಯೂಕ್‌ ಬಾಂಡ್‌ ಟೀ ಏಜೆಂಟ್ ಆಗಬೇಕಾಯಿತು. ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡರು.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇದ್ದಾಗ ಅದಕ್ಕೆ ಒಂದು ನೆಲೆ ಎಂದು ಅರಸೀಕರೆಯಲ್ಲಿ ‘ಮಹಾತ್ಮ ಟೂರಿಂಗ್‌ ಟಾಕೀಸ್‌’ ಹುಟ್ಟಿಕೊಂಡಿತು. ಈ ಉದ್ಯಮ ಅನುಕೂಲ ತಂದುಕೊಟ್ಟಿದ್ದರಿಂದ ಇನ್ನೊಂದು ಚಿತ್ರಮಂದಿರ ಸ್ಥಾಪಿಸಿದರು. ಆಗ ಮೈಸೂರಿನಲ್ಲೇಕೆ ಚಿತ್ರಮಂದಿರ ಸ್ಥಾಪಿಸಬಾರದು ಎಂಬ ಕನಸಿನೊಂದಿಗೆ ಬಂದರು. ಚಿತ್ರಮಂದಿರ ಕೊಳ್ಳಲು ಬಂದವರು ಚಿತ್ರರಂಗದಲ್ಲಿಯೇ ಸೇರಿಹೋದರು. ಬಿ.ವಿಠಲಾಚಾರ್ಯ ಮತ್ತು ವಿಶ‍್ವನಾಥಶೆಟ್ಟರು ಅವರಿಗೆ ಜೊತೆಯಾದರು. ಸಿ.ವಿ.ರಾಜು ಅವರ ಪ್ರೇರಣೆಯಂತೆ 1947ರಲ್ಲಿ ‘ಕೃಷ್ಣಲೀಲಾ’ ಚಿತ್ರವನ್ನು ನಿರ್ಮಿಸಿದರು. ಆಗ ಕನ್ನಡ ಚಿತ್ರರಂಗ ಮದ್ರಾಸಿನಲ್ಲಿ ನೆಲೆ ನಿಂತಿತ್ತು. ಅದನ್ನು ಕರ್ನಾಟಕಕ್ಕೆ ತರಲು ಶಂಕರ್‌ಸಿಂಗ್‌ ಸಂಕಲ್ಪ ಮಾಡಿದರು.

‘ಚಂಚಲಕುಮಾರಿ’ (1953) ಚಿತ್ರದ ಮುಹೂರ್ತದ ಸಂದರ್ಭ. ಮಹಾತ್ಮಾ ಪಿಕ್ಚರ್ಸ್ ಬ್ಯಾನರ್‌ ಅಡಿ ಡಿ.ಶಂಕರ್‌ ಸಿಂಗ್‌ ಮತ್ತು ಬಿ.ವಿಠಲಾಚಾರ್ಯ ಅವರು ನಿರ್ಮಿಸಿದ ಚಿತ್ರವಿದು. ನಿರ್ದೇಶನ ಡಿ.ಶಂಕರ್‌ ಸಿಂಗ್ ಅವರದು.

ಮೈಸೂರಿನಲ್ಲಿ ‘ನವಜ್ಯೋತಿ ಸ್ಟುಡಿಯೋ’ ರೂಪುಗೊಳ್ಳುವಲ್ಲಿ ಅವರದು ಮುಖ್ಯಪಾತ್ರ. ಮೈಸೂರನ್ನು ಕನ್ನಡ ಚಿತ್ರರಂಗದ ರಾಜಧಾನಿಯನ್ನಾಗಿಸಲು ಅವರು ನಿರ್ಧರಿಸಿದರು. ಈ  ಹಿನ್ನೆಲೆಯಲ್ಲಿ ‘ಭಕ್ತ ರಾಮದಾಸ’ ಬಹಳ ಮುಖ್ಯವಾದ ಚಿತ್ರ. ಈ ಚಿತ್ರಕ್ಕೆ ಮೊದಲು ನಾಯಕರಾಗಿ ಆಯ್ಕೆಯಾದವರು ಮುಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಹೆಸರು ಮಾಡಿದ್ದ ಡಿ.ದೇವರಾಜ್ ಅರಸ್‌. ಮುಂದೆ ಕಾರಣಾಂತರದಿಂದ ಅವರ ತಮ್ಮ ಕೆಂಪರಾಜ್ ಅರಸ್ ಈ ಪಾತ್ರವನ್ನು ಮಾಡಿದರು. ಮುಂದೆ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನೂ ಕೂಡ ಮಾಡಿದರು. ಈ ಚಿತ್ರಕ್ಕೆ ಪ್ರಸಿದ್ಧ ಬರಹಗಾರ ಚದುರಂಗ ಚಿತ್ರಸಾಹಿತ್ಯ ಬರೆದರೆ ಸುಗಮ ಸಂಗೀತದಲ್ಲಿ ಮುಂದೆ ಹೆಸರನ್ನು ಮಾಡಿದ ಪಿ.ಕಾಳಿಂಗರಾಯರು ಸಂಗೀತವನ್ನು ನೀಡಿದರು. ವರಕವಿ ಬೇಂದ್ರೆಯವರು ಎರಡು ಗೀತೆಯನ್ನೂ ಬರೆದುಕೊಟ್ಟರು. ಆದರೆ ಚಿತ್ರ ನಷ್ಟವನ್ನು ಅನುಭವಿಸಿತು. ಹೀಗಿದ್ದರೂ ಶಂಕರ್‌ಸಿಂಗ್‌ ಎದೆಗುಂದದೆ ಚಿತ್ರರಂಗದಲ್ಲಿಯೇ ಮುಂದುವರೆದರು.

ಶಂಕರ್‌ಸಿಂಗ್‌ ಅವರಿಗೆ ಚೇತರಿಕೆ ತಂದುಕೊಟ್ಟಂತಹ ಚಿತ್ರ ‘ನಾಗಕನ್ನಿಕಾ’ (1949). ಕನ್ನಡದ ಮೊದಲ ಜನಪದ ಚಿತ್ರ ಎನ್ನಿಸಿಕೊಂಡ ಇದು ಮಾಯಾಮಂತ್ರಗಳನ್ನು ಆ ಕಾಲಕ್ಕೇ ವಿಭಿನ್ನವಾಗಿ ತೋರಿಸಿತ್ತು. ಜಯಶ್ರೀಯವರ ಮೈಮಾಟದ ದೃಶ್ಯಗಳೂ ಪ್ರೇಕ್ಷಕರನ್ನು ಸೆಳೆದವು. ವೀರಭದ್ರಪ್ಪ ಮಂತ್ರವಾದಿಯ ಪಾತ್ರದಲ್ಲಿ ಗಮನ ಸೆಳೆದಿದ್ದರು. 1951ರಲ್ಲಿ ಶಂಕರ್‌ಸಿಂಗ್‌ ಅವರ ‘ಮಹಾತ್ಮ ಪಿಕ್ಚರ್ಸ್’ ಅವರ ಮೇರು ಚಿತ್ರ ಎನ್ನಿಸಿಕೊಂಡ ‘ಜಗನ್ಮೋಹಿನಿ’ ಬಂದಿತು. ಈ ಚಿತ್ರ ನೋಡಲು ಜನ ಹೊಲ, ಎಮ್ಮೆ, ಹಸುಗಳನ್ನು ಮಾರುತ್ತಿದ್ದಾರೆ ಎಂದು ಕೋರ್ಟ್‌ನಿಂದ ತಡೆಯಾಜ್ಞೆಯನ್ನು ಕೂಡ ತರಲಾಗಿತ್ತು. ಅದು ತೆರವಾದ ನಂತರ ಚಿತ್ರ ದಾವಣಗೆರೆಯಲ್ಲಿ 25 ವಾರಗಳ ಪ್ರದರ್ಶನ ಕಂಡಿತು. ಕನ್ನಡದಲ್ಲಿ ಈ ಸಾಧನೆ ಮಾಡಿದ ಮೊದಲ ಚಿತ್ರ ಕೂಡ ಆಯಿತು. ಹರಿಣಿ ಮತ್ತು ಪ್ರತಿಮಾದೇವಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದ್ದರು. ಈ ಚಿತ್ರದ ಮೂಲಕ ಪಿ.ಶಾಮಣ್ಣ ಸಂಗೀತ ನಿರ್ದೇಶಕರಾದರು. ಈ ಚಿತ್ರದ ‘ಎಂದೋ ಎಂದೋ’ ಸೂಪರ್‌ ಹಿಟ್‌ ಗೀತೆ ಎನ್ನಿಸಿಕೊಂಡಿತು.

ಶಂಕರ್‌ ಸಿಂಗ್ ನಿರ್ದೇಶನದ ‘ಜಗನ್ಮೋಹಿನಿ’ (1951) ಚಿತ್ರದಲ್ಲಿ ಹರಿಣಿ

1952ರಲ್ಲಿ  ‘ಶ್ರೀ ಶ್ರೀನಿವಾಸ ಕಲ್ಯಾಣ’ ಬಂದಿತು. ಈ ಚಿತ್ರದಲ್ಲಿ ಡಾ.ರಾಜಕುಮಾರ್‌ ಸಪ್ತ ಮಹರ್ಷಿಗಳಲ್ಲಿ ಒಬ್ಬರ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರಕ್ಕಾಗಿ ಆಗ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದ ಅಮೀರ್‌ಬಾಯಿ ಕರ್ನಾಟಕಿ ಅವರನ್ನು ಶಂಕರ್‌ ಸಿಂಗ್‌ ಕರೆತಂದರು. ಅವರ ಕೊರವಂಜಿಯ ಪಾತ್ರವನ್ನು ವಹಿಸಿದ್ದಲ್ಲದೆ ಎರಡು ಸೊಗಸಾದ ಗೀತೆಗಳನ್ನು ಹಾಡಿದರು. ಆ ಕಾಲಕ್ಕೆ ವಿಭಿನ್ನ ವಸ್ತುವನ್ನು ಹೊಂದಿದ್ದ  ‘ಚಂಚಲಕುಮಾರಿ’ ಚಿತ್ರದ ಮೂಲಕ ಅವರ ಮಗ ಮತ್ತು ಕನ್ನಡದ ಪ್ರಮುಖ ನಿರ್ದೇಶಕರಾಗಿ ಬೆಳೆದ ಎಸ್.ವಿ.ರಾಜೇಂದ್ರಸಿಂಗ್ (ಬಾಬು) ಚಿತ್ರರಂಗಕ್ಕೆ ಬಂದರು.

ಸತ್ಯಘಟನೆಯೊಂದನ್ನು ಆಧರಿಸಿದ್ದ ‘ದಳ್ಳಾಳಿ’ ಅವರ ಮುಂದಿನ ಚಿತ್ರ. ಗುಬ್ಬಿ ಕಂಪನಿಯ ಬಹು ಪ್ರಸಿದ್ಧ ನಾಟಕ ‘ಸಾಹುಕಾರ’ವನ್ನು ಶಂಕರ್‌ಸಿಂಗ್‌ ‘ಮುಟ್ಟಿದ್ದೆಲ್ಲ ಚಿನ್ನ’  ಹೆಸರಿನಲ್ಲಿ ಚಿತ್ರವನ್ನಾಗಿಸಿದರು. ಅವರ ಮುಂದಿನ ಪ್ರಯೋಗ ‘ಮಾಡಿದುಣ್ಣೋ ಮಹರಾಯ’ದಲ್ಲಿ ತಮ್ಮ ಸಂಸ್ಥೆಯ ಚಿತ್ರಸಾಹಿತಿ ಎನ್ನಿಸಿಕೊಂಡಿದ್ದ ಹುಣಸೂರು ಕೃಷ್ಣಮೂರ್ತಿಯವರನ್ನು ನಾಯಕರನ್ನಾಗಿ ಮಾಡಿದರು. ಈ ಚಿತ್ರದ ಮೂಲಕವೇ ಖ್ಯಾತ ಹಿನ್ನೆಲೆ ಗಾಯಕಿ ಪಿ.ಸುಶೀಲಾ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. 1955ರಲ್ಲಿ ತೆರೆಕಂಡ ‘ಆಷಾಢಭೂತಿ’ ಚಿತ್ರದ ಮೂಲಕ ಬಿ.ಸರೋಜಾದೇವಿ ಮತ್ತು ರಾಜಾಶಂಕರ್‌ ಚಿತ್ರರಂಗಕ್ಕೆ ಪರಿಚಿತರಾದರು. ಇದೇ ವರ್ಷ ಬಂದ ‘ಗಂಧರ್ವ ಕನ್ಯೆ’ ಸಾಹಸದ ದೃಶ್ಯಗಳಿಂದ ಜನಪ್ರಿಯವಾಯಿತು. ಹರಿಣಿಯವರು ಮೊಸಳೆಯ ಜೊತೆ ಮಾಡಿದ್ದ ಫೈಟಿಂಗ್‌ ದೃಶ್ಯವಂತೂ ವಿದೇಶಿ ಚಿತ್ರಗಳಿಗೆ ಸಮ ಎನ್ನುವಂತೆ ಇತ್ತು. ಇದೇ ವರ್ಷ ಒಂದು ಅಹಿತಕರ ಘಟನೆಯೂ ನಡೆಯಿತು. ಚಿತ್ರಸಾಹಿತಿ ಪಿ.ಗುಂಡೂರಾವ್ ಒಂದೇ ಕತೆಯನ್ನು ಶಂಕರ್‌ಸಿಂಗ್ ಮತ್ತು ಬಿ.ಆರ್.ಪಂತಲು ಇಬ್ಬರಿಗೂ ಕೊಟ್ಟುಬಿಟ್ಟಿದ್ದರು. ಚಿತ್ರೀಕರಣ ಆರಂಭಿಸಿದ ನಂತರ ಇಬ್ಬರಿಗೂ ಆದ ಮೋಸ ತಿಳಿದಿದ್ದು. ಅದನ್ನು ಸವಾಲಾಗಿ ಸ್ವೀಕರಿಸಿದ ಶಂಕರ್‌ ಕೇವಲ 28 ದಿನಗಳಲ್ಲಿ ‘ಶಿವಶರಣೆ ನಂಬಿಯಕ್ಕ’ ಚಿತ್ರವನ್ನು ತಯಾರಿಸಿ ಬಿಡುಗಡೆ ಮಾಡಿದರು. ಈ ಚಿತ್ರದಲ್ಲಿ ಮುಂದೆ ಖ್ಯಾತ ನಟರಾದ ವಿಷ್ಣುವರ್ಧನ್‌ ಕೂಡ ಬಾಲನಟರಾಗಿ ಕಾಣಿಸಿಕೊಂಡಿದ್ದಾರೆ.

ಡಿ.ಶಂಕರ್‌ ಸಿಂಗ್ ನಿರ್ಮಾಣದ ‘ಭಕ್ತ ಚೇತ’ (1961) ಚಿತ್ರದಲ್ಲಿ ರಾಜಕುಮಾರ್‌, ಬಾಲಕ ಎಸ್‌.ವಿ.ರಾಜೇಂದ್ರಸಿಂಗ್ ಬಾಬು, ಪ್ರತಿಮಾದೇವಿ

ಚಾಮರಸ ಕವಿಯ ‘ಪ್ರಭುಲಿಂಗಲೀಲೆ’  ಕಾವ್ಯವನ್ನು ಅದೇ ಹೆಸರಿನಲ್ಲಿ ಶಂಕರ್‌ಸಿಂಗ್‌ 1957ರಲ್ಲಿ ತೆರೆಗೆ ತಂದರು. ಕೆ.ಎಸ್.ಅಶ‍್ವತ್ಥ್ ಈ ಚಿತ್ರದಲ್ಲಿ ಅಲ್ಲಮ ಪ್ರಭುವಿನ ಪಾತ್ರವನ್ನು ಮಾಡಿದ್ದರು. ಧರ್ಮಸ್ಥಳ ಮಂಜುನಾಥನ ಅನನ್ಯ ಭಕ್ತರಾಗಿದ್ದ ಶಂಕರ್‌ಸಿಂಗ್‌ ಈ ಚಿತ್ರವನ್ನು ಶ್ರೀ ಮಂಜುನಾಥ ಹೆಸರಿನಲ್ಲಿ ನಿರ್ದೇಶಿಸಿದರು. ಮುಂದೆ ಬಂದ ‘ಮಂಗಳಸೂತ್ರ’ ಚಿತ್ರದ ವಿಶೇಷವೆಂದರೆ ದೊರೈ-ಭಗವಾನ್‌ ನಿರ್ದೇಶನ ಜೋಡಿಯ ಭಗವಾನ್ ಈ ಚಿತ್ರದ ನಾಯಕರು. ಈ ಚಿತ್ರವನ್ನು ಶಂಕರ್‌ಸಿಂಗ್‌  ಚಂದ್ರಮೋಹನ್ ಎನ್ನುವ ಹೆಸರಿನಲ್ಲಿ ನಿರ್ದೇಶಿಸಿದರು. ಚಮ್ಮಾರನೊಬ್ಬನ ಭಕ್ತಿಯ ಕಥೆ ಹೇಳುವ ‘ಭಕ್ತಚೇತ’ ಶಂಕರ್‌ಸಿಂಗ್‌ ಅವರ ಮಹತ್ವದ ಚಿತ್ರ ಎನ್ನಿಸಿಕೊಂಡಿದೆ. 1962ರಲ್ಲಿ ಶಂಕರ್‌ಸಿಂಗ್‌ ‘ಶ್ರೀ ಧರ್ಮಸ್ಥಳ ಮಹಾತ್ಮೆ’ ಚಿತ್ರವನ್ನು ತೆರೆಗೆ ತಂದರು. ಇದು ಧರ್ಮಸ್ಥಳದ ಮಹಿಮೆ ನಾಡಿನೆಲ್ಲೆಡೆ ಪಸರಿಸಲು ಕಾರಣವಾಯಿತು. ಈ ಚಿತ್ರದ ಮೂಲಕ ಅನಂತರಾಮ ಮಚ್ಚೇರಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು.

ಸದಾ ಸಮಾನತೆಯ ಕನಸನ್ನು ಕಾಣುತ್ತಾ ಬಂದಿದ್ದ ಶಂಕರ್‌ಸಿಂಗ್‌ ಸ್ವಾತಂತ್ರ್ಯದ ಆಶಯವನ್ನೂ ಬಿಂಬಿಸುವಂತೆ 1971ರಲ್ಲಿ ‘ಒಂದೇ ಕುಲ ಒಂದೇ ದೈವ’ ಎನ್ನುವ ಚಿತ್ರವನ್ನು ರೂಪಿಸಿದರು. ಈ ಚಿತ್ರದ ‘ಗಾಂಧಿತಾತನ ಸನ್ನಿಧಿಗೊಂದು’ ಇಂದಿಗೂ ಜನಪ್ರಿಯವಾದ ಗೀತೆಯಾಗಿದೆ. ಜಗನ್ಮೋಹಿನಿ ಚಿತ್ರದ ಆಧುನಿಕ ರೂಪ ಎನ್ನಿಸುವ ‘ಜ್ವಾಲಾಮೋಹಿನಿ’ 1973ರಲ್ಲಿ ತೆರೆಗೆಬಂದಿತು. ಸಂಪತ್ ಈ ಚಿತ್ರದ ಮುಖ್ಯಪಾತ್ರದಲ್ಲಿ ಇದ್ದರು. 1973ರಲ್ಲಿ ತೆರೆಕಂಡ ‘ಬಂಗಾರದ ಕಳ್ಳ’  ಅವರು ನಿರ್ದೇಶನ ಮಾಡಿದ ಕೊನೆಯ ಚಿತ್ರ ‘ನಾಗರಹಾವು’ ಚಿತ್ರಕ್ಕಿಂತಲೂ ಮೊದಲು ಇದು ಚಿತ್ರೀಕರಣ ಆರಂಭಿಸಿದ್ದರಿಂದ ಅಂಬರೀಷ್ ಅವರನ್ನು ತೆರೆಗೆ ತಂದ ಚಿತ್ರ ಇದು ಎಂದೂ ಕೂಡ ಹೇಳಬಹುದು.

ಪ್ರತಿಮಾದೇವಿ, ಶಂಕರ್‌ ಸಿಂಗ್, ರಾಜೇಂದ್ರ ಸಿಂಗ್ ಬಾಬು

ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿ ನಾಡಿನ ಸೌಂಧರ್ಯವನ್ನು ತೆರದಿಟ್ಟ ಶಂಕರ್‌ ಸಿಂಗ್‌ ತಮ್ಮ ಚಿತ್ರಗಳಲ್ಲಿ ಸದಾ ಸ್ಥಳೀಯ ಕಲಾವಿದರಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಅಸಂಖ್ಯಾತ ಕಲಾವಿದರನ್ನು ಪರಿಚಯ ಕೂಡ ಮಾಡಿಕೊಟ್ಟರು. ಕನ್ನಡದ್ದೇ ವಾದ್ಯಗೋಷ್ಠಿ ರೂಪಿಸಿದ ಅವರು ಕನ್ನಡದ ಸಂಗೀತ ನಿರ್ದೇಶಕರಾದ ಪಿ.ಕಾಳಿಂಗರಾವ್, ಶಾಮಣ್ಣ, ರಾಜನ್-ನಾಗೇಂದ್ರ ಅವರಿಗೆ ಪ್ರೋತ್ಸಾಹ ನೀಡಿದರು. ಅವರ ಒತ್ತಾಸೆಯ ಫಲವಾಗಿಯೇ ಕರ್ನಾಟಕ ಸರ್ಕಾರ ಕರ್ನಾಟಕದಲ್ಲಿ ಚಿತ್ರೀಕರಣ ನಡೆಸಿದ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುವ ಯೋಜನೆಯನ್ನು ಜಾರಿಗೆ ತಂದಿತು. ಸದಾ ಸ್ವಾವಲಂಬನೆ ಕುರಿತು ಚಿಂತಿಸುತ್ತಾ ಬಂದ ಶಂಕರ್‌ಸಿಂಗ್‌ ನಮ್ಮನ್ನು ಅಗಲಿದ್ದು 1979ರ ಸೆಪ್ಟಂಬರ್‍ 9ರಂದು. ಶಂಕರ್‌ಸಿಂಗ್‌ ಅವರ ಕುಟುಂಬವೇ ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದೆ.ಅವರ ತಾರಾಪತ್ನಿ ಪ್ರತಿಮಾದೇವಿ ಕನ್ನಡದ ಪ್ರಮುಖ ಕಲಾವಿದೆಯರಲ್ಲಿ ಒಬ್ಬರು. ಮಕ್ಕಳಾದ ಎಸ್.ವಿ.ರಾಜೇಂದ್ರಸಿಂಗ್ (ಬಾಬು), ಸಂಗ್ರಾಮ ಸಿಂಗ್, ನಾಗರಾಜ ಸಿಂಗ್, ವಿಜಯಲಕ್ಷ್ಮಿಸಿಂಗ್ ಎಲ್ಲರೂ ಹೆಸರನ್ನು ಮಾಡಿದವರೇ.ಅವರ ಮೊಮ್ಮಕ್ಕಳಾದ ಆದಿತ್ಯ, ರಿಶಿಕಾ ಸಿಂಗ್‌ ಕೂಡ ಚಿತ್ರರಂಗದಲ್ಲಿ ಹೆಸರನ್ನುಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ ಶಂಕರ್‌ಸಿಂಗ್‌ ಅವರ ಜನ್ಮಶತಮಾನೋತ್ಸವದ ಆಚರಣೆ ಸರ್ಕಾರ ಮತ್ತು ಚಿತ್ರರಂಗ ಸೂಕ್ತ ಎನ್ನಿಸುವಂತೆ ಮಾಡಬೇಕು.

(ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ಪ್ರತಿಮಾದೇವಿ, ಶಂಕರ್‌ ಸಿಂಗ್‌, ಪುತ್ರಿ ವಿಜಯಲಕ್ಷ್ಮೀ ಸಿಂಗ್‌. ನಿಂತವರು – ಪುತ್ರರಾದ ಜೈರಾಜ್‌, ಚಿತ್ರನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಸಂಗ್ರಾಮ್ ಸಿಂಗ್‌.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಬಹುಮುಖ ಪ್ರತಿಭೆ ಕುಣಿಗಲ್ ನಾಗಭೂಷಣ್

ಕನ್ನಡದ ಪ್ರಮುಖ ಚಿತ್ರನಿರ್ದೇಶಕರಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಕುಣಿಗಲ್ ನಾಗಭೂಷಣ್‌ ಸ್ವತಂತ್ರ ನಿರ್ದೇಶಕರಾಗಿ ಯಶಸ್ಸು ಕಾಣಲಿಲ್ಲ. ಆದರೆ ಸಂಭಾಷಣೆಕಾರನಾಗಿ ಗೆದ್ದರು.