ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಿಮ್ಮ ರೂಪ ಕಣ್ಣಲಿ ನಿಮ್ಮ ದನಿಯು ಕಿವಿಯಲಿ

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಕನ್ನಡ ಚಿತ್ರರಂಗಕ್ಕೆ 1680 ಸುಮಧುರ ಗೀತೆಗಳನ್ನು ನೀಡಿದ ಆರ್.ಎನ್.ಜಯಗೋಪಾಲ್, 123 ಚಿತ್ರಗಳಿಗೆ ಸಂಭಾಷಣೆಗಳನ್ನು ನೀಡಿದವರು. ಎಂಟು ಚಿತ್ರಗಳನ್ನೂ ಅವರು ನಿರ್ದೇಶಿಸಿದ್ದಾರೆ. –  ಆರ್‌ಎನ್‌ಜೆ ನೆನಪಿನಲ್ಲಿ ಲೇಖಕ ಎನ್.ಎಸ್.ಶ್ರೀಧರ ಮೂರ್ತಿ ಅವರ ಬರಹ.

ಒಂದಲ್ಲ ಎರಡಲ್ಲ ಇಪ್ಪತ್ತು ವರ್ಷಗಳ ಕಾಲ ನನ್ನ ಬದುಕಿನ ಭಾಗವೇ ಆಗಿ ಬಿಟ್ಟಿದ್ದವರು ಆರ್.ಎನ್.ಜಯಗೋಪಾಲ್. ಕೊನೆಯ ಹತ್ತು ವರ್ಷಗಳಲ್ಲಂತೂ ನನ್ನ ದಿನ ಶುರುವಾಗ್ತಾ ಇದ್ದಿದ್ದು ಅವರ ಜೊತೆಗಿನ ಮಾತಿನಿಂದ ಮುಕ್ತಾಯವಾಗುತ್ತಾ ಇದ್ದಿದ್ದೂ ಕೂಡ ಹಾಗೆಯೇ. ಒಂದೋ ಅವರು ಪೋನ್ ಮಾಡ್ತಾ ಇದ್ದರು. ಇಲ್ಲ ನಾನು ಮಾಡ್ತಾ ಇದ್ದೆ. ಅವರ ಆತ್ಮಕತೆ ಬರೆಯುವ ಕಾಯಕ ಶುರುವಾದ ಮೇಲೆಂತೂ ಇದು ಇನ್ನಷ್ಟು ನಿಕಟವಾಯಿತು. ಅವರು ಬರೆದ ಕಳುಹಿಸಿದ ಮಾಹಿತಿಗಳನ್ನು ಆಧರಿಸಿ ನಾನು ಆತ್ಮಕತೆ ವಿಸ್ತರಿಸುತ್ತಾ ಇದ್ದೆ. ಒಂದು ಸಲ ಕುಳಿತು ಎಲ್ಲವನ್ನೂ ಚರ್ಚೆ ಮಾಡ್ತಾ ಇದ್ದೆವು. ಹೀಗೆ ಅವರು ಏನಿಲ್ಲ ಎಂದರೂ 550 ಪುಟಗಳನ್ನು ನನ್ನಿಂದ ಬರೆಸಿದರು. ಕೊನೆಗೆ 288 ಪುಟಗಳ ‘ಪಲ್ಲವಿ ಅನುಪಲ್ಲವಿ’ ರೂಪುಗೊಂಡಿತು. ಇದರ ಎರಡನೇ ಭಾಗ ಎಂದು ಕೊಂಡಿದ್ದೆವು. ಆದರೆ ವಿಧಿ ಅದಕ್ಕೆ ಅವಕಾಶ ನೀಡಲೇ ಇಲ್ಲ.

ಶೇಕಡ ನೂರಕ್ಕೆ ನೂರರಷ್ಟು ಶಕ್ತರು ಎನ್ನಿಸಿಕೊಂಡಿದ್ದ ಜಯಗೋಪಾಲ್ ಎರಡೇ ತಿಂಗಳಲ್ಲಿ ಅದಕ್ಕೆ ವಿರುದ್ಧದ ದಿಕ್ಕಿನಲ್ಲಿ ನಡೆದರು. ಮೊದಲು ಗಂಟಲು ಕ್ಯಾನ್ಸರ್ ಕಾಣಿಸಿಕೊಂಡಿತು. ಅದಕ್ಕೆ ಮೊದಲ ಕಿಮೋಥೆರಪಿ ಪಡೆದು ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ’ದ  ‘ಸೀತಾ ಸ್ವಯಂವರ’ದ ಚಿತ್ರೀಕರಣಕ್ಕೆ ಎಂದು ಬೆಂಗಳೂರಿಗೆ ಬಂದರು. ಆಗ ಅವರಿಗೆ ಪಾಶ್ರ್ವವಾಯು ಕಾಣಿಸಿತು. ಹದಿನೈದೇ ದಿನಗಳಿಗೆ ಹೃದಯಾಘಾತವಾಗಿ ಅಸಂಖ್ಯ ನೆನಪುಗಳನ್ನು ನಮಗೆ ಕೊಟ್ಟು 2008ರ ಮೇ 19ರಂದು ನಮ್ಮನ್ನು ಅಗಲಿದರು.

ಕನ್ನಡ ಚಿತ್ರರಂಗಕ್ಕೆ 1680 ಸುಮಧುರ ಗೀತೆಗಳನ್ನು ನೀಡಿದ ಆರ್.ಎನ್.ಜಯಗೋಪಾಲ್, 123 ಚಿತ್ರಗಳಿಗೆ ಸಂಭಾಷಣೆಗಳನ್ನು ನೀಡಿದವರು. ಎಂಟು ಚಿತ್ರಗಳನ್ನೂ ಅವರು ನಿರ್ದೇಶಿಸಿದ್ದಾರೆ. “ಜನನಿ”ಮೂಲಕ ಕಿರುತೆರೆಯಲ್ಲಿ ಮೆಗಾ ಧಾರಾವಾಹಿಗಳ ಯುಗವನ್ನು ಆರಂಭಿಸಿದ ಅವರು ಇಪ್ಪತ್ತೆರಡು ಧಾರಾವಾಹಿಗಳನ್ನೂ ನಿರ್ದೇಶಿಸಿದ್ದಾರೆ. ಚೆನ್ನೈನಲ್ಲಿನ ಕನ್ನಡಿಗರ ಅನುಕೂಲಕ್ಕಾಗಿ ವಿದ್ಯಾ-ವಿನಯ-ವಿನೋದ ಶಾಲೆಯನ್ನು ಆರಂಭಿಸಿ 36 ವರ್ಷಗಳ ಕಾಲ ಅದನ್ನು ದಕ್ಷವಾಗಿ ನಡೆಸಿಕೊಂಡು ಬಂದವರು. “ಚೆನ್ನೈ ಕನ್ನಡ ಕೂಟ”ದ ಸ್ಥಾಪಕರಾದ ಅವರು ಗೀತ ರಚನೆಕಾರರ ಹಕ್ಕುಗಳಿಗೆ ಹೋರಾಡಿದ ಪ್ರಮುಖರು. ಹಕ್ಕುಗಳಿಗಾಗಿನ ಐ.ಪಿ.ಆರ್.ಎಸ್. ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರು ಕೂಡ ಆಗಿದ್ದರು. ನಾಲ್ಕು ವಿಶ್ವ ಸಂಗೀತ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಅವರದು. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಅತ್ಯುಚ್ಚ ನಾಗರೀಕ ಗೌರವವನ್ನು ಪಡೆದ ವಿರಳರಲ್ಲಿ ಒಬ್ಬರಾದ ಜಯಗೋಪಾಲ್ ಎರಡೂ ರಾಜ್ಯಗಳ ನಡುವೆ ಸೇತುವೆಯಾಗಿದ್ದವರು.

ಜಯಗೋಪಾಲ್ ಅವರ ತಂದೆ ಆರ್. ನಾಗೆಂದ್ರ ರಾಯರು ಕನ್ನಡ ಚಿತ್ರರಂಗದ ಭೀಷ್ಮ ಎಂದು ಕರೆಸಿಕೊಂಡಿದ್ದವರು. ಮೊದಲ ವಾಕ್ಚಿತ್ರ “ಸತಿ ಸುಲೋಚನ”ದ ನಿರ್ಮಾಪರಲ್ಲಿ ಒಬ್ಬರಾಗಿದ್ದ ಅವರು ಅದರಲ್ಲಿ ರಾವಣನ ಪಾತ್ರವನ್ನು ಮಾಡಿದ್ದಲ್ಲದೆ ಸಂಗೀತ ನಿರ್ದೇಶನ ಕೂಡ ಮಾಡಿದ್ದರು. ತಾಯಿ ರತ್ನಾಬಾಯಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದ ಮೊದಲ ಮಹಿಳೆ. ಈ ದಂಪತಿಗಳಿಗೆ ನಾಲ್ವರು ಗಂಡು ಮಕ್ಕಳು. ಅವರಲ್ಲಿ ಹಿರಿಯವರಾದ ಗುರುಪ್ರಸಾದ್ ಇಂಜಿನಿಯರ್ ಆಗಿ ಭಾಕ್ರ-ನಂಗಲ್ ಅಣೆಕಟ್ಟೆಯ ನಿರ್ಮಾಪಕರು ಎನ್ನಿಸಿಕೊಂಡರು. ಉಳಿದಂತೆ ಕೃಷ್ಣಪ್ರಸಾದ್ ಛಾಯಾಗ್ರಹಕರಾದರೆ ಸುದರ್ಶನ್ ಕಲಾವಿದರಾದರು. ಮೂವರೂ ಚಿತ್ರರಂಗದ ನಂಟಿನವರು. ಬಾಲಕ ಜಯಗೋಪಾಲ್‍ಗೆ ಐದು ವರ್ಷಗಳಾದಾಗ ಡಿಫ್ತೇರಿಯಾ ಆಯಿತು. ಆ ಕಾಲದಲ್ಲಿ ಅದು ಕಠಿಣ ಚಿಕಿತ್ಸೆಯ ಕಾಹಿಲೆಯಾಗಿತ್ತು. ಹೀಗಾಗಿ ಜಯಗೋಪಾಲ್ ಐದನೇ ತರಗತಿಯವರೆಗೆ ನೇರವಾಗಿ ಶಾಲೆಗೆ ಹೋಗಲಿಲ್ಲ. ಆದರೆ ಅವರ ತಾಯಿ ರತ್ನಬಾಯಿ ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದ ಪರಿಚಯವನ್ನು ಚೆನ್ನಾಗಿಯೇ ಮಗನಿಗೆ ಮನೆಯಲ್ಲಿಯೇ ಮಾಡಿಸಿದ್ದರು. ಹೈಸ್ಕೂಲಿಗೆ ಬರುವ ವೇಳೆಗೆ ಜಯಗೋಪಾಲ್ ಇಂಗ್ಲೀಷ್ ಸಾಹಿತ್ಯದ ಚಾರ್ಲ್ ಡಿಕನ್ಸ್, ಟಾಲ್‍ಸ್ಟಾಯ್, ಥಾಮಸ್ ಹಾರ್ಡಿಯವರನ್ನು ಓದಿದಂತೆ ಪಂಪನಿಂದ ಕುವೆಂಪುವರೆಗಿನ ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದರು. ಇದು ಅವರು ಗೀತ ರಚನೆಕಾರರಾಗಿ ಬೆಳೆಯಲು ಅಗತ್ಯವಾದ ಸಾಮಗ್ರಿಯನ್ನು ಒದಗಿಸಿತು.

ಚಿತ್ರಸಾಹಿತಿ, ನಿರ್ದೇಶಕ ಆರ್‌.ಎನ್‌.ಜಯಗೋಪಾಲ್ ಅವರೊಂದಿಗೆ ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ

ಜಯಗೋಪಾಲ್ ಪರಮೇಶ್ವರ ವಾದ್ಯರ್ ಬಳಿ ಸಂಗೀತ ಕಲಿತರು. ಬಳ್ಳಾರಿ ಭೀಮಸೇನಾಚಾರ್ ಅವರ ಬಳಿ ವಾಯಲಿನ್ ಕಲಿತರು. ಹಲವು ಹಿರಿಯ ಸಂಗೀತಗಾರರಿಗೆ ಪಕ್ಕ ವಾದ್ಯ ನಡಿಸುವಷ್ಟು ಪರಿಣಿತರೂ ಆದರು. ಸೆಂಟ್ರಲ್ ಕಾಲೇಜು ಓದುವಾಗ ವಿಜ್ಞಾನ ಸಂಘವನ್ನು ಕಟ್ಟಿದ್ದರು. ಅದರ ಉದ್ಘಾಟನೆಗೆ ನೋಬಲ್ ಪುರಸ್ಕಾರ ಪಡೆದ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರನ್ನೇ ಕರೆದಿದ್ದರು. ಕ್ರಿಕೆಟ್ ಆಟದಲ್ಲಿಯೂ ಹೆಸರು ಮಾಡಿದ್ದ ಜಯಗೋಪಾಲ್ ಉತ್ತಮ ಬಾಟ್ಸ್‍ಮೆನ್ ಎಂದು ಹೆಸರು ಮಾಡಿದ್ದರು. ಇವರ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಏ.ವಿ.ಜಯಪ್ರಕಾಶ್ ಮುಂದೆ ಪ್ರಸಿದ್ಧ ರಣಜಿ ಆಟಗಾರರಾಗಿದ್ದಲ್ಲದೆ ಅಂತರರಾಷ್ಟ್ರೀಯ ಅಂಪೈರ್ ಕೂಡ ಆಗಿ ಹೆಸರು ಮಾಡಿದ್ದರು. ಜಯಗೋಪಾಲ್ ಅವರಿಗೆ ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಜಿ.ಪಿ.ರಾಜರತ್ನಂ ಮತ್ತು ವಿ.ಸೀಯವರು ಗುರುಗಳಾಗಿದ್ದರು. ಇದರಿಂದ ಅವರ ಸಾಹಿತ್ಯಾಸಕ್ತಿ ತೀವ್ರವಾಗುವುದು ಸಾಧ್ಯವಾಯಿತು. ಆರ್.ನಾಗೇಂದ್ರ ರಾಯರಿಗೆ ಸ್ವಂತ ಸ್ಟುಡಿಯೋ ಸ್ಥಾಪಿಸುವ ಉದ್ದೇಶ ಇದ್ದಿದ್ದರಿಂದ ಬಿ.ಎಸ್.ಸಿಯ ನಂತರ ಜಯಗೋಪಾಲ್ ಅವರನ್ನು ಸೌಂಡ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮೋ ಕಲಿಯಲು ಸೇರಿಸಿದರು. ಮೊದಲ ವರ್ಷ ಡಿಪ್ಲೋಮೋದಲ್ಲಿ ಮೂವತ್ತು ವಿದ್ಯಾರ್ಥಿಗಳಿದ್ದರೆ ಅಂತಿಮ ವರ್ಷಕ್ಕೆ ಬರುವಾಗ ಜಯಗೋಪಾಲ್ ಅವರೊಬ್ಬರೇ ಉಳಿದುಕೊಂಡಿದ್ದರು. ಅವರು ಉತ್ತಮ ಸೌಂಡ್ ಇಂಜಿನಿಯರ್ ಆಗುವ ಎಲ್ಲಾ ಲಕ್ಷಣಗಳನ್ನೂ ತೋರಿಸಿದ್ದರು. ಆದರೆ ವಿಧಿ ಅದಕ್ಕೆ ಇನ್ನೊಂದು ತಿರುವನ್ನು ನೀಡಿತ್ತು.

ಜಿ.ಪಿ.ರಾಜರತ್ನಂ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಲು ಪ್ರತಿವರ್ಷವೇ ವಿದ್ಯಾರ್ಥಿಗಳೇ ರಚಿಸಿದ ಕವಿತೆಗಳ ಕಿರು ಪುಸ್ತಕವನ್ನು ಪ್ರಕಟಿಸುತ್ತಿದ್ದರು. ಇದಕ್ಕಾಗಿ ಆರ್.ಎನ್.ಜಯಗೋಪಾಲ್ ಬರೆದ “ನೀನದ್ದರೇನು ಹತ್ತಿರ, ಎಷ್ಟೊಂದು ನಡುವೆ ಅಂತರ”ಕವಿತೆ ಅವರ ಜೀವನವನ್ನೇ ಬದಲಾಯಿಸಿತು. ಈ ಕವಿತೆಯ ಭಾವವನ್ನು ರಾಜರತ್ನಂ ಬಹಳವಾಗಿ ಇಷ್ಟ ಪಟ್ಟಿದ್ದರು. ಕಾರ್ಯಕ್ರಮವೊಂದರಲ್ಲಿ ನಾಗೇಂದ್ರ ರಾಯರನ್ನು ಭೇಟಿ ಮಾಡಿದ ರಾಜರತ್ನಂ ಅವರು ಜಯಗೋಪಾಲ್ ರಚಿಸಿದ ಈ ಕವಿತೆಯ ಬಗ್ಗೆ ಬಹಳ ಮೆಚ್ಚಿಗೆಯ ಮಾತನ್ನಾಡಿದರು. ಅವರಂತಹ ಹಿರಿಯರ ಮೆಚ್ಚಿಗೆಯ ಮಾತುಗಳನ್ನು ಕೇಳಿದ ನಾಗೇಂದ್ರ ರಾಯರು ತಾವು ಆಗ ನಿರ್ಮಿಸಿ-ನಿರ್ದೇಶಿಸುತ್ತಿದ್ದ “ಪ್ರೇಮದ ಪುತ್ರಿ” ಚಿತ್ರದ ಸಾಹಿತ್ಯಿಕ ಜವಾಬ್ದಾರಿಯನ್ನು ವಹಿಸಿದರು. ಈ ಚಿತ್ರದಲ್ಲಿ “ತ್ರಿಭುವನ ಜನನಿ ಜಗನ್ಮೋಹಿನಿ”ಗೀತೆಯನ್ನು ಬರೆಯುವುದರ ಮೂಲಕ ಜಯಗೋಪಾಲ್ ಅವರ ಗೀತ ರಚನೆಯ ಯಾನ ಶುರುವಾಯಿತು. ಅವರು ವಿದ್ಯಾರ್ಥಿಯಾಗಿದ್ದಾಗ ಬರೆದಿದ್ದ “ನೀನಿದ್ದರೇನು ಹತ್ತಿರ”ಗೀತೆಯನ್ನು ಅವರ ಇನ್ನೊಬ್ಬ ಗುರುಗಳಾದ ದ್ವಾರಕಾನಾಥ್ ಹದಿನಾಲ್ಕುವರ್ಷದ ನಂತರ ನಿರ್ದೇಶಿಸಿದ “ಆನಂದ ಕಂದ”ಚಿತ್ರದಲ್ಲಿ ಬಳಸಿಕೊಂಡರು. “ಪ್ರೇಮದ ಪುತ್ರಿ”ಚಿತ್ರದಲ್ಲಿ ಚಿತ್ರಕಥೆ – ಸಂಭಾಷಣೆ ಮತ್ತು ಗೀತೆಗಳನ್ನು ಆರ್.ಎನ್.ಜಯಗೋಪಾಲ್ ಅವರು ಬರೆದಿದ್ದರು.

“ಪ್ರೇಮದ ಪುತ್ರಿ”ಚಿತ್ರ ಯಶಸ್ಸನ್ನು ಕಂಡಿದ್ದರೂ ಚಿತ್ರ ಸಾಹಿತಿಯಾಗುವುದೋ, ಶಬ್ದಗ್ರಾಹಕನಾಗುವುದೋ ಎನ್ನುವ ತೊಳಲಾಟದಲ್ಲಿ ಜಯಗೋಪಾಲ್ ಅವರಿದ್ದರು. ನಾಗೇಂದ್ರ ರಾಯರೇ ನಿರ್ಮಿಸಿ ನಿರ್ದೇಶಿಸಿದ ಮುಂದಿನ ಚಿತ್ರ “ವಿಜಯನಗರದ ವೀರಪುತ್ರ”ದಲ್ಲಿ ಕಥೆ-ಚಿತ್ರಕಥೆ-ಸಂಭಾಷಣೆ-ಗೀತೆಗಳನ್ನು ರಚಿಸಿದ್ದಲ್ಲದೆ ಶಬ್ದಗ್ರಹಣವನ್ನೂ ಮಾಡಿದರು. ಬೆಳಿಗ್ಗೆ ಸಾಹಿತ್ಯದ ಕೆಲಸ ಮಾಡಿದರೆ ರಾತ್ರಿ ಶೂಟಿಂಗ್ ಸಮಯದಲ್ಲಿ ತಮ್ಮ ಗುರುಗಳಾದ ಟಿ.ಎಸ್.ರಂಗಸ್ವಾಮಿಯವರ ಜೊತೆ ಶಬ್ದಗ್ರಹಣಕ್ಕೆ ಕುಳಿತುಕೊಳ್ಳುತ್ತಿದ್ದರು. ಚಿತ್ರ ಮುಗಿದ ಮೇಲೆ ರಂಗಸ್ವಾಮಿಯವರು ಜಯಗೋಪಾಲ್ ಅವರನ್ನು ಕರೆದು “ಶಬ್ದಗ್ರಹಣದಲ್ಲಿ ಪರಿಪೂರ್ಣತೆ ಪಡೆಯಲು ದಶಕಗಳೇ ಬೇಕು, ಇರುವ ಕೆಲವೇ ಸ್ಟುಡಿಯೋದಲ್ಲಿ ದೊರಕುವ ಅವಕಾಶಗಳೂ ಕಡಿಮೆ, ಇದರ ಬದಲು ಚಿತ್ರ ಸಾಹಿತಿಯಾಗುವುದೇ ಉತ್ತಮ” ಎಂದು ಉಪದೇಶಿಸಿದರು. ತಂದೆ ಕೂಡ ಹೀಗೆ ಎರಡು ದೋಣಿಗಳ ಮೇಲೆ ಕಾಲಿಡುವುದು ಸರಿಯಲ್ಲ ಎಂದರು. ಜಯಗೋಪಾಲ್ ಅವರಿಗೂ ಇದು ಸರಿಯೆನ್ನಿಸಿ ಮುಂದೆ ಚಿತ್ರಸಾಹಿತ್ಯಕ್ಕೇ ತಮ್ಮನ್ನು ಅರ್ಪಿಸಿಕೊಂಡರು. ಆದರೆ ಶಬ್ದಗ್ರಹಣದಲ್ಲಿ ಅವರು ಪಡೆದ ಅನುಭವ ವ್ಯರ್ಥವಾಗಲಿಲ್ಲ. “ಪಲ್ಲವಿ ಅನುಪಲ್ಲವಿ”ಚಿತ್ರದ “ನಗುವ ನಯನ”, “ಬೆಂಕಿಯ ಬಲೆ”ಚಿತ್ರದ “ಒಲಿದ ಜೀವ ಜೊತೆಯಲಿರಲು”ದಂತಹ ಪಿಸುಮಾತಿನ ಗೀತೆಗಳು ಮೂಡಿ ಬರಲು ಅವರಿಗಿದ್ದ ಶಬ್ದಗ್ರಹಣದ ಪರಿಣತಿಯೇ ಕಾರಣವಾಯಿತು.

“ನಾಂದಿ”ಚಿತ್ರದ ಗೀತೆಗಳು ಜಯಗೋಪಾಲ್ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟವು. ಅದರಲ್ಲಿಯೂ “ಹಾಡೊಂದ ಹಾಡುವೆ ನೀ ಕೇಳೋ ಮಗುವೆ”ಗೀತೆಯಂತೂ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದೆ. “ಚಂದವಳ್ಳಿಯ ತೋಟ”ಮತ್ತು “ತೂಗುದೀಪ”ಚಿತ್ರಕ್ಕೆ ಬರೆದ ಗೀತೆಗಳು ಮತ್ತು ಸಂಭಾಷಣೆ ಗಮನ ಸೆಳೆಯಿತು. ಜಯಗೋಪಾಲ್ ಕ್ರಮೇಣ ಕನ್ನಡದ ಪ್ರಮುಖ ಗೀತರಚನೆಕಾರರಾಗಿ ಬೆಳೆದರು. ಪುಟ್ಟಣ್ಣ ಕಣಗಾಲ್ ಅವರ “ಬೆಳ್ಳಿಮೋಡ”ಚಿತ್ರದ ಸಂಪೂರ್ಣ ಸಾಹಿತ್ಯಿಕ ಜವಾಬ್ದಾರಿ ಜಯಗೋಪಾಲ್ ಅವರದ್ದೇ. ಈ ಚಿತ್ರದ ಯಶಸ್ಸು ಅವರ ಬೇಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿತು. ಎ.ಸಿ.ನರಸಿಂಹ ಮೂರ್ತಿಯವರ “ಕಲಾವತಿ”ಚಿತ್ರದಲ್ಲಿ ಜಯಗೋಪಾಲ್ “ರಾಜಾಧಿರಾಜ ವೀರಪ್ರತಾಪ ಶ್ರೀಕೃಷ್ಣದೇವರಾಯ ಭೂಪ”ಎನ್ನುವ ಜಾವಳಿ ಶೈಲಿಯ ಗೀತೆಯನ್ನು ಬರೆದರು. ಅದನ್ನು ಹಾಡಬೇಕಾದ ಗಾಯಕರಿಗೆ ಇಡೀ ದಿನ ಪ್ರಯತ್ನಿಸಿದರು ಕನ್ನಡದ ಉಚ್ಚಾರಣೆ ಸರಿ ಹೋಗಲೇ ಇಲ್ಲ. ಈ ಗೀತೆಯನ್ನು ಕೊನೆಗೆ ಜಯಗೋಪಾಲ್ ಅವರೇ ಹಾಡಿದ್ದಾರೆ. ಒಳ್ಳೇ ಗಾಯಕರೂ ಆಗಿರುವ ಜಯಗೋಪಾಲ್ ಬೆಳ್ಳಿಮೋಡ, ಕರುಳಿನ ಕರೆ, ಅರ್ಜುನ್ ಚಿತ್ರಗಳಲ್ಲಿ ಕೂಡ ಹಾಡಿದ್ದಾರೆ. ಅಲ್ಲದೆ ಅವರು ಉತ್ತಮ ಗಾಯಕರನ್ನು ಗುರುತಿಸಬಲ್ಲರು ಕೂಡ.

“ನಕ್ಕರದೇ ಸ್ವರ್ಗ”ಚಿತ್ರದ ಮೂಲಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ಜಯಗೋಪಾಲ್ ಅವರೇ. ಪೇಕೇಟಿ ಶಿವರಾಂ ನಿರ್ದೇಶನದ “ಚಕ್ರತೀರ್ಥ”ಚಿತ್ರಕ್ಕೆ ಮೂಲ ಕಾದಂಬರಿಕಾರರಾದ ತ.ರಾಸು.ಅವರೇ ಸಂಭಾಷಣೆ ಬರೆಯುತ್ತಿದ್ದರು. ಆದರೆ ಚಿತ್ರೀಕರಣದ ವೇಳೆ ಅದನ್ನು ಬದಲಾಯಿಸ ಬೇಕಾಗುತ್ತಿತ್ತು. ತ.ರಾ.ಸು ಗೀತೆಗಳನ್ನು ಬರೆಯುತ್ತಿದ್ದ ಜಯಗೋಪಾಲ್ ಅವರಿಗೇ ಈ ಹೊಣೆಗಾರಿಕೆ ಒಪ್ಪಿಸಿದರು. ಚಿತ್ರ ಮುಕ್ತಾಯದ ವೇಳೆಗೆ ನಿರ್ದೇಶಕ ಪೇಕೇಟಿ ಅವರು ಅನಾರೋಗ್ಯಕ್ಕೆ ಒಳಗಾದರು. ಡಬ್ಬಿಂಗ್ ರೀ-ರೆಕಾರ್ಡಿಂಗ್‍ನಂತಹ ಮಹತ್ವದ ಹೊಣೆಗಾರಿಕೆಯನ್ನು ಜಯಗೋಪಾಲ್ ಅವರೇ  ನಿರ್ವಹಿಸಿದರು. ಈ ಚಿತ್ರದ ನಿರ್ಮಾಪಕ ಎಸ್.ಎಸ್.ಪಾಲ್ ಅವರು “ಚಕ್ರತೀರ್ಥ”ಚಿತ್ರ ರೂಪುಗೊಂಡಿದ್ದೇ ಜಯಗೋಪಾಲ್ ಅವರ ಶ್ರಮದಿಂದ ಎಂದು ಅರಿತು ತಮ್ಮ ಮುಂದಿನ ಚಿತ್ರದ ನಿರ್ದೇಶನವನ್ನು ಅವರಿಗೇ ನೀಡಲು ನಿರ್ಧರಿಸಿದರು.

ಬೆಂಗಳೂರಿನಲ್ಲಿ ಈಗ ಮೆಜೆಸ್ಟಿಕ್ ಇರುವ ಜಾಗದಲ್ಲಿ ಆ ಕಾಲದಲ್ಲಿ ಸುಭಾಷ್ ನಗರದ ಮೈದಾನವಿತ್ತು. ಅಲ್ಲಿ ವಸ್ತು ಪ್ರದರ್ಶನ ನಡೆಯುತ್ತಿತ್ತು. ಜಯಗೋಪಾಲ್ ಚಿತ್ರ ರೂಪಿಸುವ ಕಾಲದಲ್ಲಿ ಆಗ ಭಾರತ್ ಸರ್ಕಸ್ ಕಂಪನಿಯವರ ಪ್ರದರ್ಶನ ನಡೆಯುತ್ತಿತ್ತು. ಇದನ್ನು ಬಳಸಿ ಜಯಗೋಪಾಲ್ ಕಥೆಯನ್ನು ರೂಪಿಸಿದರು. ಹೀಗೆ ರೂಪುಗೊಂಡ ಚಿತ್ರ “ಧೂಮಕೇತು”. ರಾಜ್ ಕುಮಾರ್ ಈ ಚಿತ್ರದ ನಾಯಕರು. ಅದು ಅವರ ನೂರಾ ಒಂದನೆ ಚಿತ್ರ. ಜಯಗೋಪಾಲ್ ಅವರು ಪಟ್ಟು ಹಿಡಿದಿದ್ದರ ಫಲವಾಗಿ ಈ ಚಿತ್ರದಲ್ಲಿ ರಾಜ್ ಕುಮಾರ್ ತಮ್ಮ ವೃತಿ ಜೀವನದಲ್ಲಿಯೇ ಮೊದಲ ಸಲ ಐದು ಸಂಖ್ಯೆಯ ಸಂಭಾವನೆಯನ್ನು ಪಡೆದರು. ಅವರು ಈ ಸಂಭಾವನೆ ಪಡೆಯಲು ನೂರು ಚಿತ್ರ ಕಾದಿದ್ದರು ಅಂದ್ರೆ ಇವತ್ತು ಆಶ್ಚರ್ಯ ಎನ್ನಿಸಿ ಬಹುದು. ಪಾಲ್ ನಿರ್ಮಾಣದ ಮುಂದಿನ ಚಿತ್ರ “ಸಿಪಾಯಿ ರಾಮು” ರೂಪುಗೊಳ್ಳುವಲ್ಲಿ ಕೂಡ ಜಯಗೋಪಾಲ್ ಮುಖ್ಯಪಾತ್ರವನ್ನು ವಹಿಸಿದ್ದರು.

ಜಯಗೋಪಾಲ್ ನಿರ್ದೇಶಿಸಿದ ಮುಂದಿನ ಚಿತ್ರ ವಾದಿರಾಜ್ ಅವರು ನಿರ್ಮಿಸಿದ “ನಾ ಮೆಚ್ಚಿದ ಹುಡುಗ” ತಾಯಿ ವೈದ್ಯೆ, ತಂದೆ ವಕೀಲ ಇಬ್ಬರಿಗೂ ತಮ್ಮ ಜ್ಯೂನಿಯರ್‍ಗಳನ್ನೇ ಮಗಳು ಮದುವೆಯಾಗಲಿ ಎಂಬ ಹಠ. ಇದರ ನಡುವೆ ಮಗಳ ಆಸೆಯ ಬಗ್ಗೆ ಗಮನವೇ ಇಲ್ಲ. ಕಾಮಿಡಿ ನೆಲೆಯಲ್ಲಿ ಬೆಳೆದ ಈ ಚಿತ್ರದಲ್ಲಿ ಅಶ್ವತ್ಥ್ ಮತ್ತು ಲೀಲಾವತಿ ಪೈಪೋಟಿಯ ಅಭಿನಯವನ್ನು ನೀಡಿದ್ದರು. ಆಗ ತಾನೆ ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ತಮ್ಮ ಚಿತ್ರದಲ್ಲಿ ತರಲು ಉದ್ದೇಶಿಸಿ “ಬೆಳದಿಂಗಳಿನಾ ನೊರೆಹಾಲು ಕೊಡದಲಿ ತುಂಬಿ ತಂದವಳೆ”ಎನ್ನುವ ಗೀತೆಯನ್ನು ಜಯಗೋಪಾಲ್ ಬರೆದು ಚಿತ್ರೀಕರಿಸಿದರು. “ಕೆಸರಿನ ಕಮಲ” ಜಯಗೋಪಾಲ್ ನಿರ್ದೇಶಿಸಿದ ಮುಂದಿನ ಚಿತ್ರ. ಮುಂಬೈ ರೆಡ್‍ಲೈಟ್ ಏರಿಯಾದಲ್ಲಿ ಚಿತ್ರಿಸಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆ ಅದಕ್ಕಿದೆ. ಶೃಂಗಾರ್ ನಾಗರಾಜ್ ಮತ್ತು ಕಲ್ಪನಾ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿದ್ದರು.  ಕೆ.ವಿ.ಶಂಕರೇ ಗೌಡರಿಗಾಗಿ ಜಯಗೋಪಾಲ್ ಮುತ್ತು ಒಂದು ಮುತ್ತು ಮತ್ತು ಮರೆಯದ ಹಾಡು ಚಿತ್ರಗಳನ್ನು ನಿರ್ದೇಶಿಸಿದರು. ಮಣಿರತ್ನಂ ತಮ್ಮ ಚಿತ್ರ ಜೀವನಯಾನವನ್ನು ಆರಂಭಿಸಿದ್ದು ಕನ್ನಡದ “ಪಲ್ಲವಿ ಅನುಪಲ್ಲವಿ” ಚಿತ್ರದಿಂದ. ಅನಿಲ್ ಕಪೂರ್, ಲಕ್ಷ್ಮಿ ಪ್ರಮುಖ ಪಾತ್ರದಲ್ಲಿದ್ದರು. ಬಾಲುಮಹೇಂದ್ರ ಕ್ಯಾಮರಾ, ಇಳಯ ರಾಜಾ ಅವರ ಸಂಗೀತ ಅವೆಲ್ಲವನ್ನೂ ಕನ್ನಡೀಕರಿಸಿದ್ದು ಜಯಗೋಪಾಲ್ ಅವರ ಸಾಹಿತ್ಯ ಮತ್ತು ಗೀತೆಗಳು.

“ಬಂಧನ” ಕನ್ನಡದಲ್ಲಿ ಸದಭಿರುಚಿಯ ಚಿತ್ರಗಳ ಪರಂಪರೆಗೆ ಮರು ಜೀವ ನೀಡಿದ ಚಿತ್ರ. ಈ ಚಿತ್ರಕ್ಕೆ ಜಯಗೋಪಾಲ್ ರಚಿಸಿದ ಎಲ್ಲಾ ಹಾಡುಗಳು ಜನಪ್ರಿಯವಾದವು. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಮುಂದಿನ ಚಿತ್ರಗಳಾದ ಮುತ್ತಿನ ಹಾರ, ಹಿಮಪಾತ, ಕಾಂಚನಗಂಗಾ ಚಿತ್ರಗಳಿಗೂ ಜಯಗೋಪಾಲ್ ಸಂಭಾಷಣೆ ಬರೆದು ಅವುಗಳ ಯಶಸ್ಸಿಗೆ ಕಾರಣರಾದರು. ಜಯಗೋಪಾಲ್ ಅವರು ನಿರ್ದೇಶಿಸಿದ ಚಿತ್ರಗಳಲ್ಲೆಲ್ಲಾ “ಅವಳ ಅಂತರಂಗ” ಬಹಳ ಜನಪ್ರಿಯವಾದ ಚಿತ್ರ. ಇದು ಮೈಸೂರಿನ ಒಲಂಪಿಯಾ ಚಿತ್ರಮಂದಿರದಲ್ಲಿ ಎಪ್ಪತ್ತೇಳು ವಾರಗಳ ಕಾಲ ಓಡಿ ದಾಖಲೆ ಸ್ಥಾಪಿಸಿತು. ದಾವಣಗೆರೆ, ಬಿಜಾಪುರ, ಗುಲ್ಬರ್ಗ, ಜಮಖಂಡಿಗಳಲ್ಲಿ ಶತದಿನೋತ್ಸವ ಕಂಡಿತು. ಆದರೆ ಈ ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆ ಕಾಣಲೇ ಇಲ್ಲ. ರೂಪಾದೇವಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. “ಹೃದಯ ಪಲ್ಲವಿ”ಜಯಗೋಪಾಲ್ ಅವರ ಇನ್ನೊಂದು ಜನಪ್ರಿಯ ಚಿತ್ರ. ಅವರು ನಿರ್ದೇಶಿಸಿದ “ಮಕ್ಕಳೇ ದೇವರು”ಚಿತ್ರದಲ್ಲಿ ಕ್ರಿಕೇಟ್ ತಾರೆ ಜಿ.ಆರ್.ವಿಶ್ವನಾಥ್ ಅಭಿನಯಿಸಿದ್ದರು. ಒಟ್ಟು ಎಂಟು ಚಿತ್ರಗಳನ್ನು ನಿರ್ದೇಶಿಸಿರುವ ಜಯಗೋಪಾಲ್ ಚಿತ್ರ ಸಾಹಿತಿಯಾಗುವ ಜೊತೆಗೆ ನಿರ್ದೇಶಕರಾಗಿ ಕೂಡ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಿದ್ದಾರೆ.

ಆಕಾಶವಾಣಿ ತನ್ನ ಪ್ರಸಾರ ಜಾಲದಲ್ಲಿ ಕನ್ನಡದ ಕವಿತೆಯನ್ನು ಭಾರತದ ಎಲ್ಲಾ ಭಾಷೆಯ ಕೇಂದ್ರಗಳಲ್ಲಿಯೂ ಮರುಪ್ರಸಾರ ಮಾಡುವ ಬಗ್ಗೆ ಕಾರ್ಯಕ್ರಮವನ್ನು ರೂಪಿಸಿತು. ಆಗ ಆಯ್ಕೆಯಾಗಿದ್ದು “ಈ ಮಣ್ಣು ನಮ್ಮದು ಈ ಗಾಳಿ ನಮ್ಮದು”ಎನ್ನುವ ಜಯಗೋಪಾಲ್ ಅವರ ಕವಿತೆ. ಈ ಗೀತೆಗೆ ಸಂಗೀತ ನೀಡಿದವರು ಎಂ.ಬಿ.ಶ್ರೀನಿವಾಸ್. ಈ ಒಡನಾಟ ಒಂದು ಹೋರಾಟಕ್ಕೂ ಕಾರಣವಾಯಿತು. ಗೀತ ರಚನೆಕಾರರು ಮತ್ತು ಸಂಗೀತ ನಿರ್ದೆಶಕರಿಗೂ ಹಕ್ಕುಗಳು ಸಿಗಬೇಕು ಎನ್ನುವುದೇ ಆ ಹೋರಾಟ. ಭಾರತದ ವಿವಿಧ ಭಾಷೆಯ ಗೀತ ರಚನೆಕಾರರು ಮತ್ತು ಸಂಗೀತ ನಿರ್ದೇಶಕರು ಇದಕ್ಕೆ ಜೊತೆ ನೀಡಿದರು. ಇದರಿಂದ ‘ಇಂಡಿಯನ್ ಪರ್‍ಫಾರ್ಮಿಂಗ್ ರೈಟ್ಸ್ ಸೊಸೈಟಿ”ರೂಪುಗೊಂಡಿತು. ಸ್ಪೇನಿನ ಮ್ಯಂಡ್ರೇಡ್, ನ್ಯೂಜಿಲೆಂಡ್‍ನ ಆಕ್ಲಂಡ್, ಅಮೆರಿಕಾದ ವಾಷಿಂಗ್‍ಟನ್ ಮತ್ತು ದಕ್ಷಿಣ ಆಫ್ರಿಕಾದ ಕಿಂಬಿಯರ್‍ನಲ್ಲಿ ನಡೆದ ವಿಶ್ವ ಗೀತರಚನೆಕಾರರ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಆರ್.ಎನ್.ಜಯಗೋಪಾಲ್ ಅವರದು. ವಿದೇಶಗಳಲ್ಲಿ ಕೂಡ ಭಾರತೀಯ ಚಿತ್ರ ಸಂಗೀತದ ವಿಶಿಷ್ಟತೆಯನ್ನು ವಿವರಿಸುವ ಉಪನ್ಯಾಸಗಳನ್ನು ಅವರು ನೀಡಿದ್ದಾರೆ. ಭಾರತೀಯ ಚಿತ್ರಗೀತೆಗಳನ್ನು ವಿಶ್ವಜಾಲಕ್ಕೆ ತರುವಲ್ಲಿ ಅವರು ನೀಡಿದ ಕೊಡುಗೆ ಅಪಾರವಾದದ್ದು.

1976ರಲ್ಲಿ ಜಯಗೋಪಾಲ್ ಅವರ ಜೀವನದಲ್ಲಿ ಇನ್ನೊಂದು ತಿರುವು ಲಭಿಸಿತು. ಅವರು ಮದ್ರಾಸಿನಲ್ಲಿ ಬೆಸೆಂಟ್ ನಗರದಲ್ಲಿ ವಾಸಿಸುತ್ತಿದ್ದರು. ಅಲ್ಲಿ ಕನ್ನಡಿಗರ ನೂರಾರು ಕುಟುಂಬಗಳು ವಾಸಿಸುತ್ತಿದ್ದವು. ಅವರ ಮಕ್ಕಳು ಕ್ರಮೇಣ ಕನ್ನಡವನ್ನು ಮರೆತು ಬಿಡಬಹುದು ಎನ್ನುವ ಆತಂಕ ಸಹಜವಾಗಿಯೇ ಜಯಗೋಪಾಲ್ ಅವರನ್ನು ಕಾಡಿತು. ತಮ್ಮ ಅದುವರೆಗಿನ ಗಳಿಕೆಯಲ್ಲವನ್ನೂ ಸುರಿದು ಅವರು ನಿರ್ಮಿಸಿದ ಕನ್ನಡ ಶಾಲೆ “ವಿದ್ಯಾ ವಿನಯ ವಿನೋದ”. ಇದನ್ನವರು ಶಾಂತಿ ನಿಕೇತನದ ಮಾದರಿಯಲ್ಲಿ ಬೆಳೆಸಿದರು. ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಆರ್.ಗುಂಡೂರಾವ್, ಸಚಿವರಾಗಿದ್ದ ಎಂ.ಪಿ.ಪ್ರಕಾಶ್ ಈ ಶಾಲೆಗೆ ಸಹಾಯ ನೀಡಿದರು. ಪಿ.ಯು.ಸಿವರೆಗೆ ಶಿಕ್ಷಣ ನೀಡುತ್ತಿದ್ದ ಅದು ತಮಿಳುನಾಡಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಯಿತು. ಕೊನೆಯವರೆಗೂ ಅಲ್ಲಿ ಕನ್ನಡ ಮಾಧ್ಯಮವನ್ನು ಜಯಗೋಪಾಲ್ ಉಳಿಸಿಕೊಂಡು ಬಂದರು. ಇದು ಒಂದು ರೀತಿಯಲ್ಲಿ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಕಚೇರಿಯಾಯಿತು. 1984ರಿಂದ ಈ ಶಾಲೆಯಿಂದ ಜಯಗೋಪಾಲ್ ತಮ್ಮ ತಂದೆಯವರ ಹೆಸರಿನಲ್ಲಿ “ಅರ್.ಎನ್.ಆರ್.ಪುರಸ್ಕಾರ” ಸ್ಥಾಪಿಸಿದರು. ದಕ್ಷಿಣ ಭಾರತದ ದಿಗ್ಗಜರಿಂದ ಹಿಡಿದು  ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿದವರವರೆಗೆ 220 ಜನ ಸಾಧಕರನ್ನು ಜಯಗೋಪಾಲ್ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಸನ್ಮಾನಿಸಿದ್ದಾರೆ.

ಇವತ್ತು ಯಾವ ಟಿ.ವಿ.ಚಾನಲ್‍ಗಳನ್ನು ತಿರುಗಿಸಿದರೂ ಮೆಗಾ ಸೀರಿಯಲ್‍ಗಳದ್ದೇ ಕಾರುಬಾರು. ಇದಕ್ಕೆ ಚಾಲನೆ ನೀಡಿದವರೇ ಆರ್.ಎನ್.ಜಯಗೋಪಾಲ್. ಸೀರಿಯಲ್‍ಗಳು ಎಂದರೆ ಹದಿಮೂರು ಕಂತುಗಳಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಮೊದಲ ಮೆಗಾ ಧಾರವಾಹಿ “ಜನನಿ”ಯನ್ನು ಅವರು ನಿರ್ದೇಶಿಸಿದರು. ಭಾರತಿ ವಿಷ್ಣುವರ್ಧನ್ ಪ್ರಮುಖ ಪಾತ್ರದಲ್ಲಿದ್ದ ಈ ಧಾರಾವಾಹಿ ಬಹುಜನಪ್ರಿಯವಾಗಿ 430 ಕಂತುಗಳಲ್ಲಿ ಪ್ರಸಾರವಾಯಿತು. ಜನ ಈ ಧಾರಾವಾಹಿಗಾಗಿ ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ಒಬ್ಬ ವೈದ್ಯರಂತೂ ಈ ಧಾರಾವಾಹಿಗಾಗಿ ತಮ್ಮ ಕ್ಲಿನಿಕ್‍ನ ವೇಳೆಯನ್ನೇ ಬದಲಾಯಿಸಿದ್ದರು. ಇದಾದ ನಂತರ ಇತಿಹಾಸ, ಅಪರಾಜಿತೆ, ಹೃದಯಗೀತ, ಸ್ವಾತಿಮುತ್ತು ಹೀಗೆ ಇಪ್ಪತ್ತೆರಡು ಮೆಗಾ ಸೀರಿಯಲ್‍ಗಳನ್ನು ಜಯಗೋಪಾಲ್ ಅವರು ಡೈರೆಕ್ಟ್ ಮಾಡಿದರು. ಅವರ ಕೊನೆಯ ಧಾರಾವಾಹಿ “ರಾಮಾಯಣ”ಅಪೂರ್ಣವಾಯಿತು. ನಮ್ಮ ಮಕ್ಕಳು, ಪಲ್ಲವಿ ಅನುಪಲ್ಲವಿ, ಸ್ವಾಭಿಮಾನ ಚಿತ್ರಗಳಿಗಾಗಿ ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಜಯಗೋಪಾಲ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಮತ್ತು ತಮಿಳು ನಾಡು ಸರ್ಕಾರದ ಕಲೈಮಾಮಣಿ ಗೌರವ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಗೀತೆಗಳನ್ನು ಕನ್ನಡಿಗರು ಇಂದಿಗೂ ಕೇಳಿ ಸಂತೋಷ ಪಡುತ್ತಿದ್ದಾರೆ. 2008ರ ಮೇ 19ರಂದು ಅವರು ನಮ್ಮನ್ನು ಅಗಲಿದರೂ ಈ ಕಾರಣದಿಂದಲೇ ಗೀತೆಗಳ ಮೂಲಕ ಅಮರರಾಗಿದ್ದಾರೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪ್ರತಿಮ ನಾಟಕಕಾರ ಬಿ.ಪುಟ್ಟಸ್ವಾಮಯ್ಯ

ಪುಟ್ಟಸ್ವಾಮಿಯ್ಯನವರಿಗೂ ನಾಟಕರಂಗಕ್ಕೂ ನಿಕಟ ಬಾಂಧವ್ಯವಿತ್ತು. ಪತ್ರಿಕೋದ್ಯಮದಿಂದ ಬೇಸತ್ತ ಅವರು ನಾಟಕರಂಗಕ್ಕೆ ತಮ್ಮನ್ನು ತೊಡಗಿಸಿಕೊಂಡರು. ನಾಟಕ ಕ್ಷೇತ್ರದಲ್ಲಿ ಅವರು ಬಳಸಿಕೊಂಡ ವಸ್ತು