ಬಂಗಾರದ ಮನುಷ್ಯ, ಶರಪಂಜರ, ಬೂತಯ್ಯನ ಮಗ ಅಯ್ಯು, ದೂರದ ಬೆಟ್ಟ, ಗಂಧದ ಗುಡಿ, ಮುತ್ತಿನ ಹಾರ, ಬಂಧನ… ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಎನಿಸಿದ ಹತ್ತಾರು ಸಿನಿಮಾಗಳ ಛಾಯಾಗ್ರಾಹಕ ಡಿ.ವಿ.ರಾಜಾರಾಂ. ಆಗ ಥಿಯೇಟರ್‌ಗಳಲ್ಲಿ ಸಿನಿಮಾಭಿಮಾನಿಗಳು ಟೈಟಲ್ ಕಾರ್ಡನಲ್ಲಿ ಇವರು ಹೆಸರು ಕಾಣಿಸಿದಾಕ್ಷಣ ತೆರೆಯ ಮೇಲೆ ನಾಣ್ಯ ತೂರುತ್ತಿದ್ದರು ಎಂದು ಸಿನಿಮಾರಂಗದ ಹಿರಿಯ ತಂತ್ರಜ್ಞರು ಸ್ಮರಿಸುತ್ತಾರೆ.
ರಾಜಾರಾಂ ಜನಿಸಿದ್ದು ತಮಿಳುನಾಡಿನ ಧರ್ಮಪುರಿ ಜಿಲ್ಲೆಗೆ ಸೇರಿದ ಡಂಕಣಿಕೋಟೆಯಲ್ಲಿ 1930, ಆಗಸ್ಟ್ 18ರಂದು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿ ಹಳೆಯದೊಂದು ಕ್ಯಾಮರಾದಲ್ಲಿ ಅವರು ತೆಗೆದ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಛಾಯಾಗ್ರಾಹಕ ಆಗಬೇಕು ಎನ್ನುವ ಉಮೇದು ಅವರಿಗೆ ಶುರುವಾಗಿದ್ದು ಆಗಲೇ.

ಮುಂದೆ ಸಿನಿಮಾ ನಂಟಿದ್ದ ಸಂಬಂಧಿಯೊಬ್ಬರ ನೆರವಿನಿಂದ ಮದರಾಸಿನ ಸಿನಿಮಾ ಸ್ಟುಡಿಯೋ ಸೇರಿದರು (1952). ಸುಮಾರು ಹತ್ತು ವರ್ಷಗಳ ಕಾಲ ಫಿಲ್ಮ್ ಸೆಂಟರ್, ವಾಹಿನಿ ಸ್ಟುಡಿಯೋಗಳಲ್ಲಿ ದುಡಿದರು. ಭಾರತೀಯ ಸಿನಿಮಾ ಕಂಡ ಖ್ಯಾತ ಛಾಯಾಗ್ರಾಹಕ ಮಾರ್ಕಸ್ ಬಾರ್ಟ್ಲಿ, ಜೆ.ಜೆ.ವಿಜಯಂ, ಕೊಂಡಾರೆಡ್ಡಿ ಅವರ ಛಾಯಾಗ್ರಹಣ ಗುರುಗಳು. ರಾಜಾರಾಂ ಸ್ವತಂತ್ರವಾಗಿ ಛಾಯಾಗ್ರಹಣ ಮಾಡಿದ ಮೊದಲ ಸಿನಿಮಾ ಮಲಯಾಳಂನ ‘ಲೈಲಾ ಮಜ್ನು’. ಕನ್ನಡದಲ್ಲಿ ಅವರ ವೃತ್ತಿಜೀವನ ಆರಂಭವಾಗಿದ್ದು ರಾಜಕುಮಾರ್ ಅಭಿನಯದ ‘ಸಂತ ತುಕಾರಾಂ’ (1963) ಚಿತ್ರದೊಂದಿಗೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ 120ಕ್ಕೂ ಹೆಚ್ಚು ಸಿನಿಮಾಗಳಿಗೆ ಡಿವಿಆರ್ ಛಾಯಾಗ್ರಹಣ ಮಾಡಿದ್ದಾರೆ.

ಚಿತ್ರನಿರ್ದೇಶಕ ಭಾರ್ಗವ ಅವರೊಡಗೂಡಿ ‘ಕಲಾಕೃತಿ’ ಹೆಸರಿನ ಸಂಸ್ಥೆ ಆರಂಭಿಸಿ ಹತ್ತು ಚಿತ್ರಗಳನ್ನು ನಿರ್ಮಿಸಿದ್ದಾರೆ. ರಾಜಾರಾಂ ಛಾಯಾಗ್ರಹಣ ಮಾಡಿದ ಕೊನೆಯ ಸಿನಿಮಾ ‘ದೋಣಿ ಸಾಗಲಿ’. 1982ರಲ್ಲಿ ‘ಸೆನಿಟೆಕ್’ ಹೆಸರಿನಲ್ಲಿ ಔಟ್‌ಡೋರ್ ಯೂನಿಟ್ ಸ್ಥಾಪಿಸಿದರು. `ಬಂಗಾರದ ಮನುಷ್ಯ’, `ಮುತ್ತಿನ ಹಾರ’ ಮತ್ತು `ದೋಣಿ ಸಾಗಲಿ’ ಚಿತ್ರಗಳ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಜಾರಾಂಗೆ ಮೂರು ಬಾರಿ ರಾಜ್ಯ ಪ್ರಶಸ್ತಿ ಸಂದಿದೆ. ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ಇವರ ಪಟ್ಟ ಶಿಷ್ಯರಲ್ಲೊಬ್ಬರು. ರಾಜಾರಾಂ ಅವರ ಅಣ್ಣನ ಪುತ್ರ ಆರ್.ಮಂಜುನಾಥ್ ಅವರು ‘ಭಾಗ್ಯವಂತರು’ ಚಿತ್ರದೊಂದಿಗೆ ಛಾಯಾಗ್ರಹಣ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿ 25ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. (ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’)
