ಚಿಟ್ನಹಳ್ಳಿ ಸದಾಶಿವಯ್ಯನವರು ಕನ್ನಡ ಚಿತ್ರಸಾಹಿತ್ಯ ಕ್ಷೇತ್ರದಲ್ಲಿ ಚಿ.ಸದಾಶಿವಯ್ಯ ಎಂದೇ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿದ್ದ ಅವರಿಗೆ ಸಿನಿಮಾ ಬಗ್ಗೆ ಒಲವಿತ್ತು. ಅವರ ಸಿನಿಮಾ ನಂಟು ಶುರುವಾಗಿದ್ದು `ಮೊದಲ ತೇದಿ’ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರೊಂದಿಗೆ. ಮುಂದೆ ಅವಕಾಶಗಳು ಹೆಚ್ಚಾದಾಗ ಶಿಕ್ಷಕ ವೃತ್ತಿಗೆ ತಾತ್ಕಾಲಿಕ ವಿರಾಮ ನೀಡಿ ಮದರಾಸಿಗೆ ತೆರಳಿದರು. ಅಲ್ಲಿ ಚಿತ್ರಕರ್ಮಿ ಬಿ.ಎಸ್.ರಂಗಾ ಅವರ ವಿಕ್ರಂ ಸ್ಟುಡಿಯೋ ಸಂಸ್ಥೆಯೊಂದಿಗೆ ಗುರುತಿಸಿಕೊಂಡರು.

ರಂಗಾ ಅವರ ನಿರ್ಮಾಣ ಸಂಸ್ಥೆ ಸೇರಿದಂತೆ ಇತರ ಸಂಸ್ಥೆಗಳಡಿ ತಯಾರಾದ ಹಲವಾರು ಚಿತ್ರಗಳಿಗೆ ಸದಾಶಿವಯ್ಯನವರು ಹಾಡು, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಹತ್ತಾರು ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಭಕ್ತ ಮಾರ್ಕಾಂಡೇಯ, ಸಂತ ತುಕಾರಾಂ, ಮಹಿಷಾಸುರ ಮರ್ಧಿನಿ, ಪ್ರತಿಜ್ಞೆ, ಅಮರಶಿಲ್ಪಿ ಜಕಣಾಚಾರಿ, ಚಂದ್ರಹಾಸ, ಧರ್ಮವಿಜಯ, ಶಿವರಾತ್ರಿ ಮಹಾತ್ಮೆ, ಜಗಜ್ಯೋತಿ ಬಸವೇಶ್ವರ… ಅವರು ಚಿತ್ರಸಾಹಿತ್ಯ ಒದಗಿಸಿದ ಹಾಗೂ ನಟಿಸಿದ ಕೆಲವು ಪ್ರಮುಖ ಚಿತ್ರಗಳು. ಪುತ್ರ ಉದಯಶಂಕರ್ ಚಿತ್ರಸಾಹಿತ್ಯದಲ್ಲಿ ಪ್ರವರ್ಧಮಾನಕ್ಕೆ ಬಂದ ನಂತರ ಸದಾಶಿವಯ್ಯನವರು ಬೆಂಗಳೂರಿಗೆ ಮರಳಿದರು.