ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ’ | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

ಪೋಸ್ಟ್ ಶೇರ್ ಮಾಡಿ
'ಅಕ್ಕ - ಸಿನಿಗನ್ನಡ ಚಲನಚಿತ್ರೋತ್ಸವ' | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

ಅಮೆರಿಕದಲ್ಲಿ ಸೆಪ್ಟೆಂಬರ್‌ನಲ್ಲಿ ಅಕ್ಕ ಸಮ್ಮೇಳನ ನಡೆಯಲಿದೆ. ಈ ಬಾರಿ 25ನೇ ಬೆಳ್ಳಿಹಬ್ಬದ ಸಂಭ್ರಮದ ಭಾಗವಾಗಿ ಅವರು ಸಿನಿಗನ್ನಡ ಚಲನಚಿತ್ರೋತ್ಸವ ಆಯೋಜಿಸುತ್ತಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಚಲನಚಿತ್ರೋತ್ಸವಕ್ಕೆ ಅಯ್ಕೆಯಾಗಿರುವ ಚಿತ್ರಗಳ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ಅಮೆರಿಕಾದ ಕನ್ನಡಿಗರ ಹೆಮ್ಮೆಯ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾದ ‘ಅಕ್ಕ’ (Association of Kannada Kootas of America), ತನ್ನ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಭಾಗವಾಗಿ ಈ ಬಾರಿ ‘ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ’ ಆಯೋಜಿಸಿದೆ. ಸೆಪ್ಟೆಂಬರ್ʼನಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಈ ಬಾರಿ ಆಯ್ಕೆಯಾಗಿರುವ ಹತ್ತು ಚಿತ್ರಗಳು ಪ್ರದರ್ಶನವಾಗಿಲಿದೆ. ಅದಕ್ಕೂ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಚಲನಚಿತ್ರೋತ್ಸವಕ್ಕೆ ಅಯ್ಕೆಯಾಗಿರುವ ಚಿತ್ರಗಳ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ.ಜಯಮಾಲ, ಸಾಹಿತಿ ಹಾಗೂ ಸಂಪಾದಕರಾದ ಜೋಗಿ, ಪತ್ರಕರ್ತ ರವಿಕುಮಾರ್, ನಟ ನಿರೂಪ್ ಭಂಡಾರಿ, ನಿರ್ದೇಶಕ ಮಂಸೋರೆ, ಅಕ್ಕ ಸಮ್ಮೇಳನದ ನಿರ್ದೇಶಕರಾದ ಯಮುನ ಹಾಗೂ ತಿಮ್ಮಪ್ಪಗೌಡ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಪ್ರಶಸ್ತಿ ವಿತರಣೆ ಮಾಡಿದರು. ಚಲನಚಿತ್ರೋತ್ಸವದ ನಿರ್ದೇಶಕರಾದ ಪಿ.ಶೇಷಾದ್ರಿ ಹಾಗೂ ಸಂಘಟಕರಾದ ಗೌರೀಶ್ ಅಕ್ಕಿ, ದೇವೇಂದ್ರ ಬಡಿಗೇರ್, ಪ್ರಾಯೋಜಕರು, ತೀರ್ಪುಗಾರರು, ಪ್ರಶಸ್ತಿ ಪುರಸ್ಕೃತರು ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾದ ಕಂದಯ್ಯ ಶೆಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

‘ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ’ ಆರಂಭವಾಗಿದ್ದು ಹೇಗೆ ಎಂದು ಸಂಘಟಕರಾದ ಗೌರೀಶ್ ಅಕ್ಕಿ ಹಾಗೂ ದೇವೇಂದ್ರ ಬಡಿಗೇರ್ ತಿಳಿಸಿದರು. ‘ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವಕ್ಕೆ ಒಟ್ಟು 51 ಚಿತ್ರಗಳು ಬಂದಿದ್ದವು. ಅದರಲ್ಲಿ ತೀರ್ಪಗಾರರು ಹತ್ತು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಈ ಹತ್ತು ಚಿತ್ರಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಆ ಚಿತ್ರಗಳಿಗೆ ಇಪ್ಪತ್ತೈದು ಸಾವಿರ, ಐವತ್ತು ಸಾವಿರ ಹಾಗೂ ಒಂದು ಲಕ್ಷದಂತೆ ನಗದು ಬಹುಮಾನವಿರುತ್ತದೆ. ಇದರ ಜೊತೆಗೆ ತೀರ್ಪುಗಾರರ ವಿಶೇಷ ಪ್ರಶಸ್ತಿಯ ಚಿತ್ರವೆಂದು ಸಹ ಪ್ರಶಸ್ತಿ ನೀಡಲಾಗುತ್ತಿದೆ ಮತ್ತು ಏಳು ವಿವಿಧ ವಿಭಾಗಗಳಲ್ಲಿ ಸಹ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಚಲನಚಿತ್ರೋತ್ಸವದ ರೂಪುರೇಷೆಗಳನ್ನು ಚಲನಚಿತ್ರೋತ್ಸವದ ನಿರ್ದೇಶಕರಾದ ಪಿ.ಶೇಷಾದ್ರಿ ತಿಳಿಸಿದರು.

ಪ್ರಶಸ್ತಿಗಳ ವಿವರ | ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನವಾಗುತ್ತಿರು’ವ ಹತ್ತು ಉತ್ತಮ ಚಿತ್ರಗಳು.
‘ಅಮರ ಪ್ರೇಮಿ ಅರುಣ್’, ‘ಏಳುಮಲೆ’, ‘ನಡುಬೆಟ್ಟು ಅಪ್ಪಣ್ಣ’, ‘ನಿಮ್ಮ ವಸ್ತುಗಳಿಗೆ ನೀವೆ ಜವಾಬದ್ದಾರರು’, ‘ಪಿದಾಯಿ’, ‘ಬೆಳ್ಳಿಚುಕ್ಕಿ ಹಳ್ಳಿಚುಕ್ಕಿ’, ‘ಮಹಿಮಾ’, ‘ಶ್ರೀಜಗನ್ನಾಥದಾಸರು ಭಾಗ 2’, ‘ಕ್ಷಮೆಯಿರಲಿ ತಂದೆ’ ಹಾಗೂ ‘4 ಬೈ 4’. ಮೊದಲ ಅತ್ಯುತ್ತಮ ಚಿತ್ರ ಏಳುಮಲೆ (ಒಂದು ಲಕ್ಷ ನಗದು ಹಾಗೂ ಪಾರಿತೋಷಕ), ದ್ವಿತೀಯ ಅತ್ಯುತ್ತಮ ಚಿತ್ರ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ತೃತೀಯ ಅತ್ಯುತ್ತಮ ಚಿತ್ರ ‘ಪಿದಾಯಿ’ ತುಳು ಚಿತ್ರ (ಇಪ್ಪತ್ತೈದು ಸಾವಿರ ನಗದು ಹಾಗೂ ಪಾರಿತೋಷಕ), ತೀರ್ಪುಗಾರರ ವಿಶೇಷ ಪ್ರಶಸ್ತಿ ‘ಬೆಳ್ಳಿಚುಕ್ಕಿ ಹಳ್ಳಿಹಕ್ಕಿ’.

ಶ್ರೇಷ್ಠ ಖಳನಟ ತೂಗುದೀಪ ಶ್ರೀನಿವಾಸ್ ಪ್ರಶಸ್ತಿ – ವೀಣಾ ಸುಂದರ್ (ಬೆಳ್ಳಿಚುಕ್ಕಿ ಹಳ್ಳಿಹಕ್ಕಿ), ಅತ್ಯುತ್ತಮ ಗಾಯಕಿ ಎಸ್.ಜಾನಕಿ ಪ್ರಶಸ್ತಿ – ಪದ್ಮಜಾ ಶ್ರೀನಿವಾಸ್ (ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು.), ಅತ್ಯುತ್ತಮ ಗಾಯಕ ಪಿ.ಬಿ. ಶ್ರೀನಿವಾಸ್ ಪ್ರಶಸ್ತಿ – ಮಹಾಲಿಂಗಂ (ಏಳುಮಲೆ), ಅತ್ಯುತ್ತಮ ಸಂಗೀತ ನಿರ್ದೇಶಕ ರಾಜನ್ – ನಾಗೇಂದ್ರ ಪ್ರಶಸ್ತಿ – ಡಿ ಇಮ್ಮಾನ್ (ಏಳುಮಲೆ) , ಅತ್ಯುತ್ತಮ ನಿರ್ದೇಶಕ ಶಂಕರ್ ನಾಗ್ ಪ್ರಶಸ್ತಿ – ಪುನೀತ್ ರಂಗಸ್ವಾಮಿ (ಏಳುಮಲೆ), ಅತ್ಯುತ್ತಮ ನಟಿ ಬಿ.ಸರೋಜಾದೇವಿ ಪ್ರಶಸ್ತಿ – ಶಿಲ್ಪಾ ಮಂಜುನಾಥ್ (ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು) ಹಾಗೂ ಅತ್ತ್ಯುತ್ತಮ ನಟ ಪ್ರಶಸ್ತಿ ದಿಲೀಪ್ ರಾಜ್ (ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು).

ಈ ಬರಹಗಳನ್ನೂ ಓದಿ