ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಬೆಳ್ಳಿತೆರೆಯ ಶ್ರೀಕೃಷ್ಣ

ಪೋಸ್ಟ್ ಶೇರ್ ಮಾಡಿ

(ಬರಹ: ಡಾ.ಕೆ.ಪುಟ್ಟಸ್ವಾಮಿ, ಲೇಖಕರು)

ಕೃಷ್ಣ ಎಂದರೆ ನೆನಪಾಗುವುದು ತೆಲುಗು/ತಮಿಳು ಚಿತ್ರಗಳಲ್ಲಿ ಕೃಷ್ಣನ ಪಾತ್ರ ವಹಿಸಿದ ಅಭಿಜಾತ ನಟ ನಂದಮೂರಿ ತಾರಕ ರಾಮಾರಾವ್ (ಎನ್‌ಟಿಆರ್) ಅವರ ಬಿಂಬ. ತೆಲುಗು ಮಾತನಾಡುವ ಜನರಂತೂ ಈಗ ಎನ್‌ಟಿಆರ್ ಹೊರತು ಶ್ರೀಕೃಷ್ಣನ ಯಾವ ರೂಪವನ್ನೂ ಒಪ್ಪುವವರಲ್ಲ. ‘ಮಾಯಾಬಜಾರ್’ (1957) ಚಿತ್ರ ಬಿಡುಗಡೆಯಾದ ನಂತರ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ ಎನ್‌ಟಿಆರ್ ಅವರ ಶ್ರೀಕೃಷ್ಣನ ಆ ಬಿಂಬವು ಜನರ ಭಾವಭಿತ್ತಿಯಲ್ಲಿ ಶಾಶ್ವತವಾಗಿ ನೆಲೆಯೂರಿತು. ಇದೊಂದು ಸಿನಿಮಾ ಸೃಷ್ಟಿಸಿದ ಪವಾಡ. ಜನರ ಮನಸ್ಸಿನಲ್ಲಿ ಅಮೂರ್ತವಾಗಿದ್ದ ಕೃಷ್ಣನ ಬಿಂಬವೊಂದು ಹಠಾತ್ತನೆ ಮೂರ್ತರೂಪ ಪಡೆದ ಪವಾಡ.

ಆದರೆ ಎನ್‌ಟಿಆರ್ ಅವರ ಪಾತ್ರವನ್ನು ಜನರೇನೂ ಸುಲಭವಾಗಿ ಸ್ವೀಕರಿಸಿದವರಲ್ಲ. ತನಗೆ ಶ್ರೀಕೃಷ್ಣನ ಪಾತ್ರವೇ ಬೇಡ ಎಂದು ನಿರಾಕರಿಸಿದ್ದ ಅವರನ್ನು ಒತ್ತಾಯದಿಂದ ಒಪ್ಪಿಸಿದವರು ನಿರ್ದೇಶಕ ಕೆ.ವಿ.ರೆಡ್ಡಿ. ಶ್ರೀಕೃಷ್ಣನ ಪಾತ್ರವನ್ನು ಎನ್‌ಟಿಆರ್ ಅವರು ನಿರಾಕರಿಸಲು ಕಾರಣವಿತ್ತು. ಕೆ ಚಂದ್ರಹಾಸ ಮತ್ತು ಕೆ. ಲಕ್ಷ್ಮಿನಾರಾಯಣ ಅವರು ಬರೆದಿರುವ NTR A Biography- ಎನ್‌ಟಿಆರ್ ಜೀವನಚರಿತ್ರೆಯಲ್ಲಿ ಲೇಖಕರು ಅದರ ಹಿನ್ನೆಲೆಯನ್ನು ನೀಡಿದ್ದಾರೆ.

ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅರಸಿ ಬಂದ ಎಲ್ಲ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದ ಎನ್‌ಟಿಆರ್ 1954ರಲ್ಲಿ ‘ಇದ್ದರು ಪಿಲ್ಲಲು’ ಚಿತ್ರದಲ್ಲಿ ನಟಿಸುತ್ತಾರೆ. ಆ ವೇಳೆಗೆ ಚಲನಚಿತ್ರರಂಗದ ನಟನಾಕ್ಷೇತ್ರದಲ್ಲಿ ಏಳು ವರ್ಷ ಅನುಭವವಿದ್ದು, ಲಕ್ಷಾಂತರ ಜನರ ಮನಸ್ಸನ್ನು ತಲುಪಿದ್ದ ಎನ್‌ಟಿಆರ್ ಆ ಚಿತ್ರದ ಕನಸಿನ ದೃಶ್ಯವೊಂದರಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಒಂದು ನಿಮಿಷ ಕಾಣಿಸಿಕೊಳ್ಳುತ್ತಾರೆ. ಆದರೆ ತೆರೆಯಮೇಲೆ ಆವರೆವಿಗೂ ರಘುರಾಮಯ್ಯ ಎಂಬ ನಟ ವಹಿಸುತ್ತಿದ್ದ ಶ್ರೀಕೃಷ್ಣನ ಪಾತ್ರವನ್ನು ಆರಾಧಿಸುತ್ತಿದ್ದ ಪ್ರೇಕ್ಷಕರಿಗೆ ಎನ್‌ಟಿಆರ್ ಪಾತ್ರ ಸಹನೆಯಾಗಲಿಲ್ಲ. ಆ ದೃಶ್ಯ ಬಂದಾಗ ದೈವನಿಂದನೆಯಾದಂತೆ ಪ್ರೇಕ್ಷಕರು ಥಿಯೇಟರಿನಲ್ಲಿ ಹುಯಿಲೆಬ್ಬಿಸುತ್ತಿದ್ದರು. ಕಲಾವಿದ ಎನ್‌ಟಿಆರ್ ಈ ಸುದ್ದಿಯಿಂದ ನೊಂದುಕೊಂಡರು. ಅದು ಅಲ್ಲಿಗೇ ನಿಲ್ಲಲಿಲ್ಲ.

‘ಶ್ರೀಕೃಷ್ಣ’ನ ಪಾತ್ರದಲ್ಲಿ ಈಲಪಾಟಿ ರಘುರಾಮಯ್ಯ

ಕಲ್ಯಾಣಂ ರಘುರಾಮಯ್ಯ ಅಥವಾ ಈಲಪಾಟ ರಘುರಾಮಯ್ಯ ತೆಲುಗು ರಂಗಭೂಮಿಯ ಅಭಿಜಾತ ನಟ, ಸಂಗೀತಗಾರ. ರವೀಂದ್ರನಾಥ ಠಾಕೂರ್ ಅವರಿಂದ ‘ರಂಗಭೂಮಿಯ ಕೋಗಿಲೆ’ ಎಂದು ಹೊಗಳಿಸಿಕೊಂಡವರು. ಆರಂಭದ ತೆಲುಗು ಚಿತ್ರರಂಗದಲ್ಲಿ ನಾಯಕನಟನಾಗಿ ಪ್ರವರ್ಧಮಾನಕ್ಕೆ ಬಂದವರು. ಪದ್ಮಶ್ರೀ ಪುರಸ್ಕೃತರು. ಪೌರಾಣಿಕ ಪಾತ್ರಗಳಾದ ಶ್ರೀಕೃಷ್ಣ, ಶ್ರೀರಾಮ, ದುಷ್ಯಂತ, ನಾರದ ಪಾತ್ರಗಳಲ್ಲಿ ಮನಸೂರೆಗೊಂಡವರು. ಅದರಲ್ಲೂ ಕೃಷ್ಣನ ಪಾತ್ರದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದರು. ಭಕ್ತ ಕುಚೇಲ, ರುಕ್ಮಿಣಿ ಕಲ್ಯಾಣಂ, ಶ್ರೀಕೃಷ್ಣರಾಯಭಾರಂ, ಶ್ರೀಕೃಷ್ಣ ಮಾಯ ಮೊದಲಾದ ಚಿತ್ರಗಳಲ್ಲಿ ಕೃಷ್ಣನ ಪಾತ್ರವಹಿಸಿ ಪ್ರೇಕ್ಷಕರ ಮನದಲ್ಲಿ ನೆಲೆಯಾಗಿದ್ದರು. ಮುಂದೆ ಅವರು ನಾರದ ಮುಂತಾದ ಪೋಷಕ ಪಾತ್ರಗಳಲ್ಲಿ ಎನ್‌ಟಿಆರ್ ಜೊತೆಗೂ ನಟಿಸಿದ್ದರು. ಕನ್ನಡದ ‘ವಾಲ್ಮೀಕಿ’ ಚಿತ್ರದಲ್ಲಿ ಅವರು ನಾರದನ ಪಾತ್ರದಲ್ಲಿ ರಾಜಕುಮಾರ್ ಜೊತೆ ನಟಿಸಿದ್ದಾರೆ ಅದರಲ್ಲಿ ಕನ್ನಡದಲ್ಲಿ ಕಂದ ಪದ್ಯ, ಸೀಸ ಪದ್ಯಗಳನ್ನು ಹಾಡಿದ್ದಾರೆ.

ಪ್ರಸಿದ್ಧ ಗಾಯಕ ಘಂಟಸಾಲ ಅವರು ನಿರ್ಮಿಸಿದ ‘ಸೊಂತ ಊರು’(1956) ಚಿತ್ರದಲ್ಲೂ ಎನ್‌ಟಿಆರ್ ನಾಯಕನಟ. ಆ ಚಿತ್ರದ ನಾಟಕದ ಸನ್ನಿವೇಶವೊಂದರಲ್ಲಿ ಅವರು ಮತ್ತೆ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡರು. ಆಗಲೂ ಪ್ರೇಕ್ಷಕರ ಸಿಳ್ಳು, ಕೇಕೆ ಪುನಾರಾವರ್ತನೆಯಾಯಿತು. ‘ಇದ್ದರು ಪಿಲ್ಲಲು’ ಬಿಡುಗಡೆಯಾಗಿ ಮೂರು ವರ್ಷವಾದರೂ ಪ್ರೇಕ್ಷಕರು ಶ್ರೀಕೃಷ್ಣನ ಪಾತ್ರದಲ್ಲಿ ಎನ್‌ಟಿಆರ್‌ ಅವರನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ರಘುರಾಮಯ್ಯವರ ಬಿಂಬವೇ ಅವರಿಗೆ ಮುಖ್ಯವಾಗಿತ್ತು. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಟಿಆರ್ ಅವರು ಆ ವರ್ಷ ವಿಜಯಾ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿದ್ದ ‘ಮಾಯಾಬಜಾರ್’ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರಕ್ಕೆ ಆಹ್ವಾನ ನೀಡಿದಾಗ ನಯವಾಗಿಯೇ ತಿರಸ್ಕರಿಸಿದರು.

ಆದರೆ ನಿರ್ದೇಶಕ ಕೆ.ವಿ.ರೆಡ್ಡಿ ಅವರು ಕೃಷ್ಣನ ಪಾತ್ರಕ್ಕೆ ಎನ್‌ಟಿಆರ್‌ ಹೊರತು ಬೇರೆ ಯಾರೂ ಸೂಕ್ತವಲ್ಲ ಎಂದು ಭಾವಿಸಿ ಒತ್ತಾಯಮಾಡಿ ಕರೆತಂದರು. ಪಾತ್ರಕ್ಕೆ ಒಪ್ಪುವಂಥ ಉಡುಪು, ಕಿರೀಟ ಮುಂತಾದವುಗಳ ಹಲವು ಮಾದರಿಗಳನ್ನು ವಿನ್ಯಾಸಗೊಳಿಸಿ ಕೊನೆಗೆ ಒಂದನ್ನು ಅರಿಸಿದರು. ಎನ್‌ಟಿಆರ್ ಉಡುಪುಗಳನ್ನು ಧರಿಸಿ ಮೇಕಪ್ ಮಾಡಿಸಿಕೊಂಡು ಕೊಳಲು ಹಿಡಿದು ಪ್ರಸಾಧನ ಗೃಹದಿಂದ ನಿಧಾನಗತಿಯಲ್ಲಿ ಮಂದಸ್ಮಿತನಾಗಿ ಹೊರಬಂದರು. ತುಂಟತನ ಮತ್ತು ಕರುಣೆಯನ್ನು ಸೂಸುವ ಹೊಳೆಯುವ ಕಣ್ಣು, ನಯವಾದ ಗಲ್ಲ, ತುಟಿಯಲ್ಲಿ ಮಂದಸ್ಮಿತ, ವಿಶಾಲವಾದ ಹಣೆ, ಒಪ್ಪುವ ಕಿರೀಟದ ನೆತ್ತಿಯಲ್ಲಿ ಹಾರಾಡುವ ನವಿಲುಗರಿ, ಶ್ರೀಕೃಷ್ಣನ ಪಾತ್ರಧಾರಿ ಎನ್‌ಟಿಆರ್‌ ಅವರನ್ನು ಕಂಡ ಲೈಟ್‌ಬಾಯ್ಸ್, ಸ್ಟುಡಿಯೋ ಕಾರ್ಮಿಕರು ಬಿಟ್ಟಕಣ್ಣಿನಿಂದ ಎನ್‌ಟಿಆರ್ ಅವರನ್ನು ನೋಡುತ್ತಾ ತಮಗರಿವಿಲ್ಲದಂತೆ ಕೈ ಜೋಡಿಸಿ ನಮಿಸಿ ನಿಂತರಂತೆ. ನಿರ್ಮಾಪಕ, ನಿರ್ದೇಶಕರೂ ಅಚ್ಚರಿಯಿಂದ ಕೈಜೋಡಿಸಿದರಂತೆ. ಈ ಪ್ರತಿಕ್ರಿಯೆ ಕಂಡ ಎನ್‌ಟಿಆರ್‌ ನಗುತ್ತಾ ಬಲಗೈ ಎತ್ತಿ ಆಶೀರ್ವಾದಿಸುವ ಭಂಗಿಯಲ್ಲಿ ನಿಂತರಂತೆ. ಅದಾಗಲೇ ಪಾತ್ರ ವಹಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿ ಅವರು ಪಾತ್ರಕ್ಕೆ ಪ್ರವೇಶ ಮಾಡಿದ್ದನ್ನು ಲೇಖಕರು ದಾಖಲಿಸುತ್ತಾರೆ. ಆದರೆ ಎನ್‌ಟಿಆರ್ ಅವರಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿಯೇ ನಿರ್ದೇಶಕ ಕೆ.ವಿ.ರೆಡ್ಡಿ, ನಿರ್ಮಾಪಕ ನಾಗಿರೆಡ್ಡಿ ಮತ್ತು ಚಕ್ರಪಾಣಿಯವರು ಸ್ಟುಡಿಯೋನಲ್ಲಿ ಈ ನಾಟಕವನ್ನು ಹೆಣೆದದ್ದು ಎನ್‌ಟಿಆರ್‌ ಅವರಿಗೆ ತಿಳಿದಿರಲಿಲ್ಲ.

ಪಾತ್ರಕ್ಕೆ ನ್ಯಾಯ ಒದಗಿಸಲು ಎನ್‌ಟಿಆರ್ ಶ್ರಮ ವಹಿಸುತ್ತಿದ್ದರೆಂಬುದಕ್ಕೆ ಅನೇಕ ಪ್ರಕರಣಗಳಿವೆ. ‘ಪಾತಾಳ ಭೈರವಿ’ (1951) ಚಿತ್ರದಲ್ಲಿ ಖಳನಟ ಅಜಾನುಬಾಹು ಎಸ್‌.ವಿ. ರಂಗಾರಾವ್ ಅವರ ಎದುರಿಗೆ ಪೀಚಲು ದೇಹದ ನಾಯಕನಟನ ಇಮೇಜು ಸರಿಯಾಗಿ ಕಾಣುವುದಿಲ್ಲವೆಂದು ನಿರ್ದೇಶಕ ಕೆ.ವಿ.ರೆಡ್ಡಿ ಸಂದೇಹ ವ್ಯಕ್ತಪಡಿಸಿದಾಗ ಎನ್‌ಟಿಆರ್ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಸ್ಟುಡಿಯೋವರೆಗೂ ನಡೆದು ನಾಲ್ಕು ಗಂಟೆಯಿಂದ ಅಂಗಸಾಧನೆ ಮಾಡಿ, ಕತ್ತಿ ವರಸೆ, ದೊಣ್ಣೆವರಸೆಯಲ್ಲಿ ತರಬೇತಿ ಪಡೆದು ದೇಹವನ್ನು ಸಾಮುಗಟ್ಟಿಸಿದರಂತೆ. ಅನೇಕ ವರ್ಷ ಈ ಅಂಗಸಾಧನೆಯಿಂದ ಹುರಿಗಟ್ಟಿದ ದೇಹ, ಎದೆ, ಭುಜ, ತೋಳನ್ನು ಮುಚ್ಚದ ಕೃಷ್ಣನ ಪಾತ್ರಕ್ಕೆ ಸರಿಹೊಂದದು ಎಂದು ಭಾವಿಸಿ ಅಂಗಸಾಧನೆ ಬಿಟ್ಟು ಯೋಗ, ಪ್ರಾಣಯಾಮಕ್ಕೆ ಬದಲಾಯಿಸಿದರಂತೆ.

1957ರಲ್ಲಿ ಬಿಡುಗಡೆಯಾದ ‘ಮಾಯಾಬಜಾರ್’ ಚಲನಚಿತ್ರರಂಗದ ಒಂದು ಮೈಲಿಗಲ್ಲಾಯಿತು. ಆವರೆಗೂ ಯಾರೂ ಊಹಿಸದಿದ್ದ ರೀತಿಯಲ್ಲಿ ಯಶಸ್ಸು ಕಂಡಿತು. ನಿರ್ಮಾಪಕರಿಗೆ ಹಣದ ಹೊಳೆ ಹರಿದು ಬಂದರೆ ಕಲಾವಿದರಿಗೆ ಅದೃಷ್ಟದ ಬಾಗಿಲು ತೆರೆಯಿತು. ಮುಖ್ಯವಾಗಿ ಎಎನ್‌ಆರ್, ಎನ್‌ಟಿಆರ್, ಎಸ್‌ವಿಆರ್ ಮತ್ತು ಸಾವಿತ್ರಿ ಅವರು ಪ್ರಸಿದ್ಧಿಯ ಹೊಳೆಯಲ್ಲಿ ಕೊಚ್ಚಿಹೋದರು. ಮುಂದೊಂದು ದಿನ ನಡೆದ ಸಮಾರಂಭದಲ್ಲಿ ‘ಮಾಯಾಬಜಾರ್’ ಬಗ್ಗೆ ಮಾತನಾಡಿದ ಎಎನ್‌ಆರ್, ಚಿತ್ರದ ಪಾತ್ರಗಳಿಗೆಂದೇ ದೇವರು ಸೃಷ್ಟಿಸಿದ ಕಲಾವಿದರೇ ಆಯ್ಕೆಯಾದದ್ದು, ಕೆ.ವಿ.ರೆಡ್ಡಿ ಅವರ ದಾರ್ಶನಿಕ ಕಾಣ್ಕೆ ಮತ್ತು ತಂತ್ರಜ್ಞರ ಕ್ರಿಯಾಶೀಲತೆ ‘ಮಾಯಾಬಜಾರ್’ ಯಶಸ್ಸಿಗೆ ಕಾರಣ ಎಂದರಲ್ಲದೆ ಡುಯೆಟ್ ಹಾಡುವ ಕಾರಣಕ್ಕೆ ನಾನು, ಕಥೆಯನ್ನು ಮುನ್ನಡೆಸುವ ಕೃಷ್ಣನ ಪಾತ್ರ ಮುಖ್ಯವಾದ್ದರಿಂದ ಎನ್‌ಟಿಆರ್ ಚಿತ್ರದ ಹೀರೋಗಳೆಂದು ಕರೆಯಬಹುದಾದರೂ ಚಿತ್ರದ ನಿಜವಾದ ಹೀರೋಗಳೆಂದರೆ ಹೀರೋಯಿನ್ ಸಾವಿತ್ರಿ ಮತ್ತು ಎಸ್.ವಿ.ರಂಗಾರಾವ್ ಎಂದು ಗುಣಗಾನ ಮಾಡಿದ್ದರು.

ಎನ್‌ಟಿಆರ್ ಅವರ ಪಾತ್ರ ಎಂಥ ಮೋಡಿ ಮಾಡಿತ್ತೆಂದರೆ ‘ಮಾಯಾ ಬಜಾರ್’ ಬಿಡುಗಡೆಯಾದ (27.3.1957) ನಂತರ ಬಂದ ಪ್ರತಿಕ್ರಿಯೆ ಕಂಡು ವಿಜಯಾ ಪ್ರೊಡಕ್ಷನ್ಸ್ ಸಂಸ್ಥೆಯು ಎನ್‌ಟಿಆರ್ ಅವರ ಶ್ರೀಕೃಷ್ಣನ ಚಿತ್ರವಿರುವ ನಲವತ್ತು ಸಾವಿರ ಬಣ್ಣದ ಕ್ಯಾಲೆಂಡರುಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚಿತು. ಇವು ತೆಲುಗು ಜನರ ಮನೆಯ ಗೋಡೆಗಳನ್ನು ಅಲಂಕರಿಸಿದವು. ಕೆಲವು ಕಟ್ಟು ಹಾಕಿಸಿಕೊಂಡು ವಿರಾಜಮಾನವಾದರೆ, ಹಲವು ದೇವರ ಕೋಣೆಗಳಿಗೂ ಪ್ರವೇಶಪಡೆದು ಪೂಜೆಗೊಳಗಾದವು. ಎನ್‌ಟಿಅರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಾಷಣವೊಂದರಲ್ಲಿ ಇದೇ ಎಎನ್‌ಆರ್ ಅವರು ತಮ್ಮ ತಾಯಿಗಾಗಿ ಕಟ್ಟಿಸಿದ ಮನೆಯಲ್ಲಿ ಪೂಜಿಸಲು ಕೃಷ್ಣನ ಫೋಟೋವೊಂದನ್ನು ತಂದುಕೊಟ್ಟಾಗ ತಾಯಿ ಅದು ಎನ್‌ಟಿಆರ್ ಅವರಂತಿಲ್ಲವೆಂದು ಆಕ್ಷೇಪಿಸಿದ್ದನ್ನು ನೆನಸಿಕೊಂಡಿದ್ದರು. ಹೀಗೆ ತಿರಸ್ಕರಿಸಿದ ಪಾತ್ರವೊಂದರಲ್ಲೆ ಮರುಹುಟ್ಟು ಪಡೆದಂತೆ ಶ್ರೀಕೃಷ್ಣನ ಪಾತ್ರ ವಹಿಸಿದ ಎನ್‌ಟಿಆರ್ ಜನರ ಮನಸ್ಸಿನಲ್ಲಿ ಕೃಷ್ಣನಾಗಿಯೇ ಉಳಿದುಹೋದದ್ದು ಸಿನಿಮಾ ಪವಾಡವಲ್ಲದೆ ಮತ್ತೇನು?

ಈ ಬರಹಗಳನ್ನೂ ಓದಿ