ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಷ್ಟ್ರಪ್ರೇಮ ಸಾರುವ ಪ್ರಮುಖ ಕನ್ನಡ ಸಿನಿಮಾಗಳು

ಪೋಸ್ಟ್ ಶೇರ್ ಮಾಡಿ

ಜನರಲ್ಲಿ ರಾಷ್ಟ್ರಾಭಿಮಾನದ ಕಿಚ್ಚು ಹೊತ್ತಿಸುವಲ್ಲಿ ಬೆಳ್ಳಿತೆರೆಯ ಪಾಲೂ ಇದೆ. ಆಗಿಂದಾಗ್ಗೆ ಇಲ್ಲಿ ದೇಶಭಕ್ತಿ ಸಾರುವ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಸಿನಿಮಾಗಳು ತಯಾರಾಗಿವೆ. ರಾಷ್ಟ್ರೀಯತೆ ಸಾರುವ ಪ್ರಮುಖ ಕನ್ನಡ ಸಿನಿಮಾಗಳ ಕುರಿತ ಒಂದು ಬರಹ ಇಲ್ಲಿದೆ.

ರಾಷ್ಟ್ರೀಯತೆ ಸಾರುವ ಹತ್ತಾರು ಶ್ರೇಷ್ಠ ಚಿತ್ರಗಳು ಕನ್ನಡದಲ್ಲಿ ತಯಾರಾಗಿವೆ. ಪ್ರಾದೇಶಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ದೇಶಭಕ್ತಿ ಚಿತ್ರಗಳು ದೊಡ್ಡ ಯಶಸ್ಸು ಕಂಡಿವೆ. ಬಿ.ಆರ್‌.ಪಂತುಲು ನಿರ್ದೇಶನದ ‘ಕಿತ್ತೂರು ರಾಣಿ ಚೆನ್ನಮ್ಮ’ (1962) ಈ ಹಾದಿಯಲ್ಲಿ ಪ್ರಮುಖ ಚಿತ್ರ. ಬ್ರಿಟಿಷರ ವಿರುದ್ಧ ಹೋರಾಡುವ ರಾಣಿ ಚೆನ್ನಮ್ಮಳಾಗಿ ನಟಿ ಬಿಸರೋಜಾದೇವಿ ನಟಿಸಿದ್ದರು. ಹತ್ತಾರು ಪುರಸ್ಕಾರಗಳಿಗೆ ಭಾಜನವಾದ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು.

‘ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿ ಬಿ.ಸರೋಜಾದೇವಿ

ಮಾಡಿ ಮಡಿದವರು | ಲೇಖಕ ಬಸವರಾಜು ಕಟ್ಟೀಮನಿ  ಕೃತಿಯನ್ನಾಧರಿಸಿದ ‘ಮಾಡಿ ಮಡಿದವರು’ (1974) ಸ್ವಾತಂತ್ರ್ಯ ಹೋರಾಟದ ಚಿತ್ರಣದ ಸಿನಿಮಾ. ಕೆಎಂಶಂಕರಪ್ಪ ನಿರ್ದೇಶನದ ಚಿತ್ರದಲ್ಲಿ ಶಿವಾನಂದ್, ಮಾನು, ಗಿರಿಜಾ ಲೋಕೇಶ್ ನಟಿಸಿದ್ದರು. ಡಾರಾಜಕುಮಾರ್‌, ಕಲ್ಪನಾ, ಅಶ್ವಥ್‌ ಅಭಿನಯದ ‘ಸರ್ವಮಂಗಳ’ (1968) ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಸ್ತಾಪವಿತ್ತು. ಇದು ಕಾದಂಬರಿಕಾರ ಚದುರಂಗರ ಪ್ರಮುಖ ಕೃತಿ. ಚಿತ್ರದ ನಿರ್ದೇಶಕರು ಕೂಡ ಅವರೇ ಎನ್ನುವುದು ವಿಶೇಷ.

‘ಮಾಡಿ ಮಡಿದವರು’ ಚಿತ್ರದಲ್ಲಿ ಗಿರಿಜಾ ಲೋಕೇಶ್, ರಾಮ್‌ಗೋಪಾಲ್‌, ಸುಧೀರ್‌

ಸಂಗೊಳ್ಳಿ ರಾಯಣ್ಣ | ವೃತ್ತಿರಂಗಭೂಮಿ ಕಲಾವಿದರು ಸ್ವಾತಂತ್ರ್ಯ ಹೋರಾಟಗಾರರ ಜೀವನಕಥೆಗಳನ್ನು ಆಧರಿಸಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ರಂಗಕಲಾವಿದರೇ ನಟಿಸಿದ್ದ ‘ಸಂಗೊಳ್ಳಿ ರಾಯಣ್ಣ’ ಸಿನಿಮಾ 1967ರಲ್ಲಿ ತೆರೆಕಂಡಿತ್ತು. ಅನಂತ್ ಹಿರೇಗೌಡರ್ ಚಿತ್ರದ ನಿರ್ದೇಶಕ. ಹಿಂದಿ ಸಿನಿಮಾರಂಗದ ಮೇರು ಗಾಯಕಿ ಲತಾ ಮಂಗೇಶ್ಕರ್ ಈ ಚಿತ್ರದ ‘ಬೆಳ್ಳಾನೆ ಬೆಳಗಾಯಿತು…’ ಗೀತೆಗೆ ದನಿಯಾಗಿದ್ದರು. ಇದೇ ಸಂದರ್ಭದಲ್ಲಿ ರಂಗಕಲಾವಿದರೇ ಅಭಿನಯಿಸಿದ್ದ ಸ್ವಾತಂತ್ರ್ಯವೀರ ‘ಸಿಂಧೂರ ಲಕ್ಷ್ಮಣ’ ಚಿತ್ರ ತೆರೆಗೆ ಬಂದಿತ್ತು. ನಾಗಣ್ಣ ನಿರ್ದೇಶನದಲ್ಲಿ ದರ್ಶನ್ ಅಭಿನಯದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ (2012) ದೊಡ್ಡ ಬಜೆಟ್‌ನಲ್ಲಿ ತಯಾರಾಗಿತ್ತು.

‘ಸರ್ವಮಂಗಳ’ ಚಿತ್ರದಲ್ಲಿ ಕಲ್ಪನಾ, ರಾಜಕುಮಾರ್‌

ಮುತ್ತಿನ ಹಾರ | ದೇಶದ ಗಡಿಯ ಯುದ್ಧದ ಚಿತ್ರಣವಿದ್ದ ‘ಮುತ್ತಿನ ಹಾರ’ (1990) ಕನ್ನಡದ ಪ್ರಮುಖ ರಾಷ್ಟ್ರಪ್ರೇಮದ ಚಿತ್ರಗಳಲ್ಲೊಂದು. ಎಸ್‌.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಅಶ್ವಥ್‌ ಅಮೋಘ ಅಭಿನಯ ನೀಡಿದ್ದರು. ಟಿ.ಎಸ್‌.ನಾಗಾಭರಣ ನಿರ್ದೇಶನದ ‘ಮೈಸೂರು ಮಲ್ಲಿಗೆ’ (1991) ಕನ್ನಡದ ಮತ್ತೊಂದು ಪ್ರಮುಖ ಸಿನಿಮಾ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಪ್ರೇಮಕಥೆಯ ಸುಂದರ ನಿರೂಪಣೆಯಿತ್ತು. ಪ್ರಶಸ್ತಿ, ಪುರಸ್ಕಾರಗಳೊಂದಿಗೆ ಜನಮನ್ನಣೆಯನ್ನೂ ಗಳಿಸಿದ ಚಿತ್ರವಿದು. ಟಿ.ಎಸ್‌.ನಾಗಾಭರಣ ನಿರ್ದೇಶನದ ‘ಮೈಸೂರು ಮಲ್ಲಿಗೆ’ (1992) ಸ್ವಾಂತಂತ್ರ್ಯ ಹೋರಾಟ ಹಿನ್ನೆಲೆಯಲ್ಲಿ ಹೆಣೆದ ಯಶಸ್ವೀ ಪ್ರೇಮಕಥಾನಕ.

ವೀರಪ್ಪನಾಯ್ಕ | ವಿಷ್ಣುವರ್ಧನ್ ಅಭಿಯನದ ‘ವೀರಪ್ಪನಾಯ್ಕ’ (1999) ಚಿತ್ರದಲ್ಲಿ ಗಾಂಧೀವಾದ ಮತ್ತು ನಕ್ಸಲಿಸಂ ಸಂಘರ್ಷದ ಚಿತ್ರಣವಿತ್ತು. ಎಸ್‌.ನಾರಾಯಣ್‌ ಚಿತ್ರದ ನಿರ್ದೇಶಕ. ಶಿವರಾಜಕುಮಾರ್‌ ಅಭಿನಯದ ‘ಸಾರ್ವಭೌಮ’, ಯೋಗೀಶ್ವರ್ ಅವರ ‘ಸೈನಿಕ’ ಚಿತ್ರಗಳಲ್ಲಿ ಯೋಧರ ಕಥೆಗಳಿದ್ದವು. ‘ಜೈಹಿಂದ್’, ‘ಎಕೆ 47’ ‘ವಂದೇಮಾತರಂ’, ‘ಇಂಡಿಪೆಂಡೆನ್‌ಸ್‌ ಡೇ’ ಸೇರಿದಂತೆ ಹಲವು ಕಮರ್ಷಿಯಲ್ ಚಿತ್ರಗಳು ರಾಷ್ಟ್ರಪ್ರೇಮದ ಕಥಾಹಂದರ ಹೊಂದಿದ್ದವು.

‘ಮುತ್ತಿನ ಹಾರ’ ಚಿತ್ರದಲ್ಲಿ ಸುಹಾಸಿನಿ, ವಿಷ್ಣುವರ್ಧನ್‌

ಈ ಬರಹಗಳನ್ನೂ ಓದಿ