ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮರೆಯಲಾರೆ ಈ ಸುದಿನ…

ಪೋಸ್ಟ್ ಶೇರ್ ಮಾಡಿ

(ಬರಹ: ಗಾನಾಸುಮಾ ಪಟ್ಟಸೋಮನಹಳ್ಳಿ, ಗಾಯಕ)

ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಸಾಮಾಜಿಕ ನಾಟಕಗಳು ಬಹು ಜನಪ್ರಿಯವಾಗಿದ್ದವು. ಅಂತಹ ಹತ್ತಾರು ಪ್ರಮುಖ ನಾಟಕಗಳ ಪೈಕಿ ಬೇಲೂರು ಕೃಷ್ಣಮೂರ್ತಿ ಅವರ ‘ತ್ಯಾಗಿ’ ನಾಟಕವೂ ಒಂದು. ಹಾಸನದಲ್ಲಿ ಆಗಸ್ಟ್‌ 8, 1931ರಲ್ಲಿ ಜನಿಸಿದ ಬೇಲೂರು ಕೃಷ್ಣಮೂರ್ತಿಯವರು ನಾಟಕಕಾರರಾಗಿ ಹೆಸರು ಮಾಡಿದವರು. ಇವರು ರಚಿಸಿದ ಹಲವು ನಾಟಕಗಳು ರಂಗದ ಮೇಲೆ ಅಪಾರ ಜನಮೆಚ್ಚುಗೆ ಗಳಿಸಿವೆ. ಅವರ ‘ತ್ಯಾಗಿ’, ‘ಬಲಿದಾನ’, ‘ಭಂಡ ಬಾಳು’, ‘ಅಸಲಿ ನಕಲಿ’, ‘ಆಹುತಿ’, ‘ಸೇವೆ’, ‘ಬಲಿ’, ‘ಜ್ವಾಲೆ’, ‘ವಿಷ್ಣುವರ್ಧನ’ ಮುಂತಾದ ನಾಟಕಗಳು ರಾಜ್ಯದ ಹಲವೆಡೆ ಪ್ರದರ್ಶನಗೊಂಡಿವೆ. ದಾಹ, ಪುತ್ರವಾತ್ಸಲ್ಯ, ಬೆಟ್ಟದ ಭೈರಾಗಿ.. ಕೃಷ್ಣಮೂರ್ತಿಯವರು ರಚಿಸಿದ ಕಾದಂಬರಿಗಳು. ‘ವೈಕುಂಠ ಬೀದಿ’ ಅವರ ಆತ್ಮಕಥನ. ಬೇಲೂರು ಫಿಲಂಸ್ ಬ್ಯಾನರ್‌ನ ಅಡಿ ಇವರೇ ನಿರ್ಮಿಸಿದ ಕನ್ನಡ ಚಲನಚಿತ್ರ ‘ತೀರದ ಬಯಕೆ’ 1981ರಲ್ಲಿ ತೆರೆಕಂಡಿತ್ತು. ರಾಜು ನಿರ್ದೇಶಿಸಿದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಮಗೋಪಾಲ್ ಮತ್ತು ವಿಜಯಕಲಾ ಅಭಿನಯಿಸಿದ್ದರು.

ವಿಜಯಭಾಸ್ಕರ್ ಸಂಗೀತ ನಿರ್ದೇಶನದ ಚಿತ್ರದ ನಾಲ್ಕು ಹಾಡುಗಳು ಬಹು ಜನಪ್ರಿಯವಾಗಿದ್ದವು. ಜಯನಾರಸಿಂಹ, ರಾಜು, ಆರ್.ಎನ್.ಜಯಗೊಪಾಲ್, ಶ್ಯಾಂಸುಂದರ್ ಕುಲಕರ್ಣಿ ಹಾಡುಗಳಿಗೆ ಸಾಹಿತ್ಯ ನೀಡಿದ್ದರು. ಅದರಲ್ಲಿ ವಾಣಿ ಜಯರಾಮ್ ಹಾಡಿದ ಹಾಡೊಂದು ಕಾಡುವ ಗುಣ ಹೊಂದಿದೆ. ನಿರ್ದೇಶಕ ರಾಜು ಬರೆದ ಈ ಹಾಡಿನ ಆರಂಭದ ಆಲಾಪನೆಯ ಟ್ಯೂನ್ ಬಹಳ ವಿಶೇಷವಾಗಿದ್ದು, ವಾಣಿ ಕಂಠಸಿರಿಯಲ್ಲಿ ಹಾಡು ಚಿರಸ್ಮರಣೀಯವಾಗಿದೆ. ವಿಜಯ ಭಾಸ್ಕರ್ – ವಾಣಿ ಜಯರಾಂ ಕಾಂಬಿನೇಷನ್‌ನಲ್ಲಿನ ‘ಮಾಗಿಯ ಕನಸು’ ಚಿತ್ರದ ‘ಬಂದಿದೆ ಬದುಕಿನ ಬಂಗಾರದ ದಿನ..’ ಹಾಡನ್ನು ನೆನಪು ಮಾಡುವ ಈ ಗೀತೆ ಕೇಳುಗರ, ಸಂಗೀತಾಸಕ್ತರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಉತ್ತಮ ನಾಟಕಕಾರ, ಲೇಖಕ ಬೇಲೂರು ಕೃಷ್ಣಮೂರ್ತಿಯವರು ಕಳೆದ ವರ್ಷ ನಮ್ಮನ್ನು ಅಗಲಿದರು.

ಗಾಯಕಿ ವಾಣಿ ಜಯರಾಂ, ಚಿತ್ರದ ನಿರ್ಮಾಪಕ ಬೇಲೂರು ಕೃಷ್ಣಮೂರ್ತಿ

ಈ ಬರಹಗಳನ್ನೂ ಓದಿ