
ಲೇಖಕ
ತ್ರಿಕೋನ ಪ್ರೇಮ, ಪ್ರೀತಿಯನ್ನು ತ್ಯಾಗ ಮಾಡುವ ಪ್ರೇಮಿಗಳ ಕತೆ ಟ್ರೆಂಡ್ ಸೆಟರ್ ಎನಿಸಿಕೊಂಡಿತು. ಫಾಸ್ಟ್-ಫೇಸ್ಡ್ ಫಿಲ್ಮ್ ಮೇಕಿಂಗ್‌ನಲ್ಲೂ ಇಲ್ಲಿ ಪ್ರಯೋಗವಾಗಿದೆ ಎಂದು ಸಿನಿಮಾ ತಂತ್ರಜ್ಞರು ಗುರುತಿಸುತ್ತಾರೆ.
ಮಹಾನಟಿ ಸಾವಿತ್ರಿಯ ಅಮೋಘ ನಟನೆಯ ಚಿತ್ರ ‘ಮನಸೇ ಮಂದಿರಂ’ (1966). ನಾಗೇಶ್ವರರಾವ್‌ನನ್ನು ಪ್ರೇಮಿಸಿದ್ದ ಸಾವಿತ್ರಿ ಬಲವಾದ ಕಾರಣವೊಂದರಿಂದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಜಗ್ಗಯ್ಯನನ್ನು ಮದುವೆಯಾಗಬೇಕಾಗಿ ಬರುತ್ತದೆ. ಪತಿಗೆ ಆರಾಮಿಲ್ಲವೆಂದು ತಿಳಿದಾಗ ಅವನನ್ನು ನರ್ಸಿಂಗ್ ಹೋಂ ಒಂದಕ್ಕೆ ಕರೆತರುತ್ತಾಳೆ. ಅಲ್ಲಿ ಅವಳ ಪ್ರೇಮಿ ನಾಗೇಶ್ವರರಾವ್ ಡಾಕ್ಟರ್!
ಈಗ ತಾನೇನು ಮಾಡಬೇಕು? ತಾನು ಪ್ರೇಮಿಯನ್ನು ತ್ಯಜಿಸಿದಳೆಂದು ತನ್ನ ಪತಿಗೆ ಆರೋಗ್ಯ ಮರಳಿಸುವುದಿಲ್ಲವೇ ಎಂಬ ಅನುಮಾನ. ಪತಿಗೆ ತನ್ನ ಪತ್ನಿಯ ಪ್ರೇಮಿ ಈ ಡಾಕ್ಟರ್ ಎಂಬ ಸತ್ಯ ತಿಳಿಯುತ್ತದೆ. ಹೇಗಾದರೂ ಅವಳ ಪತಿಯನ್ನು ಉಳಿಸಬೇಕೆಂದು ಡಾಕ್ಟರ್ ಶತಪ್ರಯತ್ನ ಮಾಡುತ್ತಾನೆ. ಕೆಲವು ಮಧುರ ಹಾಡುಗಳಿವೆ. ಇಡೀ ಚಿತ್ರವು ಒಂದು ನರ್ಸಿಂಗ್ ಹೋಂನಲ್ಲಿ ನಡೆಯುತ್ತದೆ. ಕೇವಲ ಸಾವಿತ್ರಿ, ನಾಗೇಶ್ವರರಾವ್ ಇವರಿಬ್ಬರ ಒಂದು ಚಿಕ್ಕ ಪ್ರೇಮ ಸನ್ನಿವೇಶ ಹೊರಾಂಗಣದಲ್ಲಿ ನಡೆದಿದೆ. ಮಹಾನಟಿ ಸಾವಿತ್ರಿ ನಿಜಕ್ಕೂ ಮಹಾನಟಿಯೇ. ನಾಗೇಶ್ವರರಾವ್, ಜಗ್ಗಯ್ಯ ಕೂಡ ಹಿಂದೆ ಬಿದ್ದಿಲ್ಲ.
ಮೂರು ಬಾರಿ ‘ಊರ್ವಶಿ’ಪ್ರಶಸ್ತಿ ಗಳಿಸಿದ ಶಾರದಾಗೆ ಬಹುಶಃ ಇದು ಮೊದಲ ಚಿತ್ರವಿರಬಹುದು. ನಿರ್ಮಲಮ್ಮ ಎನ್ನುವ ಜನಪ್ರಿಯ ‘ಅಜ್ಜಿ’ ಇದರಲ್ಲಿ ಚಿಕ್ಕ ಮಗುವಿನ ವಿಧವೆ ಯುವತಾಯಿಯ ಪಾತ್ರದಲ್ಲಿದ್ದಾರೆ. ರೇಲಂಗಿಯ ಹಾಸ್ಯ ಒಂದಿಷ್ಟು ಇದೆ. ಯಾವುದೂ ಹೆಚ್ಚು ಎನಿಸದು. ಗಟ್ಟಿ ಕಥಾನಕದ ಸಿನಿಮಾ. ಮೊದಲು ಈ ಸಿನಿಮಾ ಬಂದಿದ್ದು ತಮಿಳಿನಲ್ಲಿ. ಸಿ.ವಿ.ಶ್ರೀಧರ್ ಕತೆ ಬರೆದು ನಿರ್ದೇಶಿಸಿದ್ದ ‘ನೆಂಜಿಲ್ ಒರ್ ಆಲಯಂ’ (1962) ಚಿತ್ರದಲ್ಲಿ ಕಲ್ಯಾಣ್ ಕುಮಾರ್, ದೇವಿಕಾ ಮತ್ತು ಮುತ್ತುರಾಮನ್ ನಟಿಸಿದ್ದರು. ತ್ರಿಕೋನ ಪ್ರೇಮ, ಪ್ರೀತಿಯನ್ನು ತ್ಯಾಗ ಮಾಡುವ ಪ್ರೇಮಿಯ ಈ ಕತೆ ಟ್ರೆಂಡ್ ಸೆಟರ್ ಎನಿಸಿಕೊಂಡಿತು. ಫಾಸ್ಟ್-ಫೇಸ್ಡ್ ಫಿಲ್ಮ್ ಮೇಕಿಂಗ್‌ನಲ್ಲೂ ಇಲ್ಲಿ ಪ್ರಯೋಗವಾಗಿದೆ ಎಂದು ಸಿನಿಮಾ ತಂತ್ರಜ್ಞರು ಗುರುತಿಸುತ್ತಾರೆ. ಮುಂದೆ ಚಿತ್ರ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲೂ ರೀಮೇಕಾಯ್ತು. ಮೂಲ ಹಾಗೂ ರೀಮೇಕ್ ಚಿತ್ರಗಳ ಕುರಿತ ಫೋಟೊ – ಮಾಹಿತಿ ಇಲ್ಲಿದೆ.
ತಮಿಳು: ನೆಂಜಿಲ್ ಒರ್ ಆಲಯಂ (1962) | ನಿರ್ದೇಶನ: ಸಿ.ವಿ.ಶ್ರೀಧರ್ | ತಾರಾಗಣ: ಕಲ್ಯಾಣ್ ಕುಮಾರ್, ದೇವಿಕಾ, ಮುತ್ತುರಾಮನ್ ಹಿಂದಿ: ದಿಲ್ ಏಕ್ ಮಂದಿರ್ (1963) | ನಿರ್ದೇಶನ: ಸಿ.ವಿ.ಶ್ರೀಧರ್ | ತಾರಾಗಣ: ರಾಜೇಂದ್ರ ಕುಮಾರ್, ಮೀನಾಕುಮಾರಿ, ರಾಜ್ಕುಮಾರ್ ತೆಲುಗು: ಮನಸೇ ಮಂದಿರಂ (1966) | ನಿರ್ದೇಶನ: ಸಿ.ವಿ.ಶ್ರೀಧರ್ | ತಾರಾಗಣ: ಅಕ್ಕಿನೇನಿ ನಾಗೇಶ್ವರರಾವ್, ಸಾವಿತ್ರಿ, ಜಗ್ಗಯ್ಯ ಮಲಯಾಳಂ: ಹೃದಯಂ ಒರು ಕ್ಷೇತ್ರಂ (1976) | ನಿರ್ದೇಶನ: ಪಿ.ಸುಬ್ರಹ್ಮಣ್ಯಂ | ತಾರಾಗಣ: ಮಧು, ಶ್ರೀವಿದ್ಯಾ, ರಾಘವನ್ ಕನ್ನಡ: ಕುಂಕುಮ ರಕ್ಷೆ (1977) | ನಿರ್ದೇಶನ: ಎಸ್.ಕೆ.ಎ.ಚಾರಿ | ತಾರಾಗಣ: ರಜನೀಕಾಂತ್, ಮಂಜುಳಾ, ಅಶೋಕ್