ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪ್ರಬುದ್ಧ ಕಲಾವಿದರ ಅಪ್ಪಟ ಥ್ರಿಲ್ಲರ್ ‘ಖಾಮೋಷ್’

ಪೋಸ್ಟ್ ಶೇರ್ ಮಾಡಿ
ಸುಜೀತ್ ಕಾಮತ್‌
ಸಿನಿಮಾ ಬರಹಗಾರ

ವಿಧು ವಿನೋದ್ ಚೋಪ್ರಾ ನಿರ್ಮಾಣ, ನಿರ್ದೇಶನದ ಈ ಚಿತ್ರ ಬಿಡುಗಡೆ ಆದಾಗ ಹೆಚ್ಚು ಹೆಸರು ಮಾಡಿರಲಿಲ್ಲ. ಈಗ ಒಂದು ಅದ್ಬುತ ಥ್ರಿಲ್ಲರ್ ಅನಿಸುತ್ತದೆ. ಪ್ರಬುದ್ಧ ಕಲಾವಿದರ ಸಂಗಮವೇ ಇಲ್ಲಿದೆ.

ಕಲಾತ್ಮಕ, ಹೊಸ ಅಲೆಯ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ ನಟರು ಒಟ್ಟಾಗಿ ನಟಿಸಿದ್ದ ಪತ್ತೇದಾರಿ ಚಿತ್ರ ‘ಖಾಮೋಷ್‌’ (1985). ಈ ಚಿತ್ರದಲ್ಲಿ ಒಂದೇ ಒಂದು ಹಾಡು ಇಲ್ಲ. ಹೆಚ್ಚಿನ ನಟರು ತಮ್ಮ ಹೆಸರಿನಿಂದಲೇ ನಟಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೆಹೆಲ್ಗಂನಲ್ಲಿ ಸಿನಿಮಾ ಚಿತ್ರೀಕರಣ ತಂಡದ ಸುತ್ತ ನಡೆಯುವ ಸರಣಿ ಕೊಲೆಗಳ ಕಥೆ. ಅಮೋಲ್ ಪಾಲೇಕರ್ ನಟನಾಗಿ ಕಾಣಿಸಿಕೊಂಡ ಕೊನೆಯ ಚಿತ್ರಗಳಲ್ಲಿ ಒಂದು.

ಚಿತ್ರದಲ್ಲಿ ಅಮೋಲ್ ಪಾಲೇಕರ್ ಒಬ್ಬ ಖ್ಯಾತ ನಟ. ರಾಜಕೀಯ ಪ್ರವೇಶಕ್ಕೆ ಚುನಾವಣೆಗೆ ನಿಂತಿರುತ್ತಾನೆ. ಗೆದ್ದರೆ ಆತ ಮುಖ್ಯಮಂತ್ರಿ ಆಗಬಹುದು. ಸೋನಿ ರಾಜ್ದಾನ್ ಬಾಲಿವುಡ್ ನಲ್ಲಿ ಹೆಸರು ಮಾಡಲು ಹೆಣಗಾಡುತ್ತಿರುವ ನಟಿ . ಆಕೆಯ ಭವಿಷ್ಯ ಅಜಿತ್ ವಾಚ್ಚನಿ ತಯಾರಿಸುತ್ತಿರುವ ಚಿತ್ರದ ಮೇಲೆ ನಿಂತಿದೆ. ಪಂಕಜ್ ಕಪೂರ್, ಅಜಿತ್ ವಾಚ್ಚನಿಯ ಮಾನಸಿಕ ಅಸ್ವಸ್ಥ ತಮ್ಮ. ಚಿತ್ರತಂಡ ಚಿತ್ರೀಕರಣಕ್ಕಾಗಿ ಪೇಹೆಲ್ಗಂಗೆ ಬರುತ್ತದೆ.

ಸೋನಿ ರಾಜ್ದಾನ್‌ ಮತ್ತು ನಿರ್ದೇಶಕ ಅಜಿತ್ ವಾಚ್ಚನಿಗೆ ಜಗಳ ಆಗುತ್ತದೆ. ಅಮೋಲ್ ಪಾಲೇಕರ್ ಮಧ್ಯ ಪ್ರವೇಶಿಸಿ ಸಮಾಧಾನ ಮಾಡುತ್ತಾನೆ. ಆ ರಾತ್ರಿ ದೊಡ್ಡ ದ್ವನಿಯಲ್ಲಿ ಹೋಟೆಲ್ ಕೋಣೆಯಲ್ಲಿ ರಿಹರ್ಸಲ್ ಮಾಡುತ್ತಿದ್ದ ಸೋನಿ ಅನ್ನು ಅಮೋಲ್ ಪಾಲೇಕರ್ ಎಲ್ಲರಿಗೆ ತೊಂದರೆ ಆಗುತ್ತದೆ ಅಂತ ಹೇಳಿ ಸಮೀಪದ ಬೋಟ್ ಹೌಸ್ ಗೆ ಹೋಗಿ ಅಲ್ಲಿ ಮಾತನಾಡಲು ಹೇಳುತ್ತಾನೆ. ಆಕೆ ಒಪ್ಪಿ ಅಲ್ಲಿಗೆ ಹೋಗುತ್ತಾಳೆ. ಮರುದಿನ ಬೆಳಿಗ್ಗೆ ದೂರದ ಕಾಡಿನಲ್ಲಿ ಆಕೆಯ ಹೆಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗುತ್ತದೆ. ಪೊಲೀಸರಿಗೇ ಯಾವ ಸುಳಿವೂ ಸಿಗುವುದಿಲ್ಲ ಅದು ಆತ್ಮಹತ್ಯೆ ಎಂದು ಸಾಬೀತು ಆಗುತ್ತದೆ. ಚಿತ್ರೀಕರಣ ಮುಂದುವರಿಯುತ್ತದೆ.

ಸ್ವಲ್ಪ ದಿನದ ಬಳಿಕ ವಿಶೇಷ ತನಿಖಾ ಅಧಿಕಾರಿ ನಾಸಿರುದ್ದೀನ್ ಷಾ ಆಗಮನವಾಗುತ್ತದೆ. ಆದರೆ ಆತ ನಕಲಿ ಅಧಿಕಾರಿ! ಆತ ಸತ್ತ ಸೋನಿ ಅಣ್ಣ. ತಂಗಿ ಸಾವಿನ ಕುರಿತು ವಿಚಾರಿಸಲು ಬಂದಿರುತ್ತಾನೆ. ಸಹನಟಿ ಶಬಾನಾ ಆಜ್ಮಿ ಒಂದು ಅನುಮಾನಕ್ಕೆ ಒಳಗಾಗುತ್ತಾಳೆ. ಸೋನಿ ಪಾತ್ರ ಹಳ್ಳಿ ಹುಡುಗಿಯ ಪಾತ್ರ. ಶಬಾನಾ ಕೋಣೆ ಬೋಟ್ ಹೌಸ್ ಬಳಿಯಲ್ಲಿ ಇತ್ತು. ಆಕೆಗೆ ಸೋನಿ ಮಾತಾಡುವುದು ಕೇಳುತ್ತಿತ್ತು. ಕೊನೆಯದಾಗಿ ಆಕೆ ಕಾಪಾಡಿ ಎಂದು ಕಿರುಚಿದ್ದಳು. ಹಳ್ಳಿ ಹುಡುಗಿ ಸಂಭಾಷಣೆಯಲ್ಲಿ ಇಂಗ್ಲಿಷ್ ಹೇಗೆ!? ಆಕೆಯದ್ದು ಸಹಜ ಸಾವಲ್ಲ, ಕೊಲೆ ಎಂದು ಆಕೆ ನಾಸಿರುದ್ದೀನ್ ಶಾಗೆ ಹೇಳುತ್ತಾಳೆ. ಈ ಅವಧಿಯಲ್ಲಿ ಸರಣಿ ಕೊಲೆಗಳು ನಡೆಯುತ್ತವೆ. ಇದು ಮಾನಸಿಕ ರೋಗಿ ಮಾಡುತ್ತಿರುವ ಕೊಲೆಯೇ? ಇಲ್ಲ ಭೂತಪ್ರೇತದ ಚೇಷ್ಟೆಯೇ? ಬಿಡುಗಡೆ ಆದಾಗ ಈ ಚಿತ್ರ ಹೆಚ್ಚು ಹೆಸರು ಮಾಡಿರಲಿಲ್ಲ. ಈಗ ಒಂದು ಅದ್ಬುತ ಥ್ರಿಲ್ಲರ್ ಅನಿಸುತ್ತದೆ. ಪ್ರಬುದ್ಧ ಕಲಾವಿದರ ಸಂಗಮವೇ ಇಲ್ಲಿದೆ. ಚಿತ್ರ ಯೂಟ್ಯೂಬ್‌ನಲ್ಲಿ, ಆಸಕ್ತರು ಗಮನಿಸಿ.

ನಿರ್ಮಾಪಕ ಮತ್ತು ನಿರ್ದೇಶನ : ವಿಧು ವಿನೋದ್ ಚೋಪ್ರಾ | ತಾರಾಗಣ : ಅಮೋಲ್ ಪಾಲೇಕರ್ ಶಬಾನಾ ಆಜ್ಮಿ ನಾಸಿರುದ್ದೀನ್ ಷಾ , ಪಂಕಜ್ ಕಪೂರ್, ಸೋನಿ ರಾಜ್ದನ್ , ಸುಷ್ಮಾ ಸೇಠ್, ಅಜಿತ್ ವಚ್ಚನಿ ಮತ್ತಿತರರು.

ಈ ಬರಹಗಳನ್ನೂ ಓದಿ