ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪಂಚಮದ ಕೋಗಿಲೆ ‘ಆರ್.ಡಿ.ಬರ್ಮನ್’

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಆಶಾ ಭೋಸ್ಲೆ ಅವರಿಗೆ ಇದ್ದ ವರ್ಸಟೈಲ್ ಸಿಂಗಿಂಗ್ ಕ್ವಾಲಿಟಿಯನ್ನು ಬಳಸಿ ರಾಕ್, ಡಿಸ್ಕೋ, ಗಜಲ್, ಕ್ಲಾಸಿಕಲ್ ಹೀಗೆ ಹಿಂದಿ ಚಿತ್ರರಂಗ ಬೆರಗಾಗುವ ಗೀತೆಗಳನ್ನು ಆರ್.ಡಿ.ಬರ್ಮನ್‌ ಕ್ರಿಯೇಟ್ ಮಾಡಿದರು.

ಮಗುವನ್ನು ತಾಯಿ ಪ್ರೀತಿಯಿಂದ ತಬಲು ಅಂತ ಕರೀತಾ ಇದ್ದರು. ಎರಡು ವರ್ಷದ ಮಗು ರಾಹುಲ್‌ಅತ್ತಾಗ ತಂದೆ ಓಡಿ ಬಂದರೆ ಮಗನ ಅಳುವನ್ನು ಕೇಳ್ತಾ ನಿಂತರು. ಏಕೆಂದರೆ ಅದು ಐದನೇ ಸ್ವರ ಪಂಚಮದ ಹಾಗೆಯೇ ಇತ್ತು. ಪಂಚಮದಲ್ಲಿ ಕೋಗಿಲೆ ಹಾಡುತ್ತೆ ಅನ್ನೋದು ನಂಬಿಕೆ. ಇಲ್ಲಿ ಹೀಗಾಗಿ ಪಂಚಮ್‌ಅAತ್ಲೇ ಕರೆಯೋಕೆ ಶುರು ಮಾಡಿದ್ದರು. ಅವರ ತಾಯಿಯ ಅಮ್ಮ ಅಂದರೆ ಅಜ್ಜಿ ಅಂತೂ ಮಗುವನ್ನು ಪಂಚಮ ಎಂದು ಎಲ್ಲರ ಬಳಿ ಹೇಳಿಕೊಂಡು ಬಂದು ಅವನು ಕೋಗಿಲೆ ತರಹ ಸಂಗೀತದಲ್ಲಿ ಹೆಸರು ಮಾಡ್ತಾನೆ ಅಂತ ಅಭಿಮಾನ ಪಟ್ಟರು. ದೊಡ್ಡವರಾದ ಮೇಲೆ ಕೂಡ ಆ ಮಗು ಆರ್.ಡಿ.ಬರ್ಮನ್‌ ಅವರಿಗೆ ಪಂಚಮ್‌ದಾ ಅನ್ನೋ ಹೆಸರು ಶಾಶ್ವತವಾಗಿ ಉಳಿದು ಕೊಂಡಿತು. ಪಂಚಮದಲ್ಲಿ ಅತ್ತ ಮಗು ಸಂಗೀತ ಕಲಿಯೋಕೆ ತಡವೇ ಆಗಲಿಲ್ಲ. ಐದನೇ ವರ್ಷಕ್ಕೆ ಸಂಗೀತದ ಸ್ವರಗಳ ಕಲಿತಿದ್ದು ಮಾತ್ರವಲ್ಲದೆ ರಾಗಗಳನ್ನೂ ಕೂಡ ಗುರುತಿಸ್ತಾ ಇದ್ದರು.

ಆರ್.ಡಿ.ಬರ್ಮನ್ ಜನಿಸಿದ್ದು 1939ರ ಜೂನ್ 27ರಂದು. ಅವರ ತಂದೆ ಸಚಿನ್‌ದೇವ್ ಬರ್ಮನ್‌ ಕೂಡ ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು. ಅವರು ಒಳ್ಳೆಯ ಗಾಯಕರೂ ಕೂಡ ಆಗಿದ್ದರು. ಆರ್.ಡಿ.ಬರ್ಮನ್‌ ಅವರಿಗೆ ಒಂಬತ್ತು ವರ್ಷ ಆಗಿದ್ದಾಗ ತಂದೆಯವರಿಗೆ ಬಂದಿದ್ದ ಒಂದು ಕಂಪೋಸಿಷನ್‌ಗೆ ಟ್ಯೂನ್ ಹಾಕಿದರು.  ಸ್ವಲ್ಪ ಫೈನ್‌ಟ್ಯೂನ್ ಮಾಡಿ 1956ರಲ್ಲಿ ತೆರೆಕಂಡ ‘ಫಂತೂಷ್‌’ ಚಿತ್ರದಲ್ಲಿ ಅಪ್ಪ ಬಳಸಿಕೊಂಡರು. ಹೀಗೆ ‘ಸರ್‌ಜೋತಾಪಿ ಪಾಲತ್ ಕಿ’ ಆರ್.ಡಿ.ಬರ್ಮನ್ ಸಂಗೀತ ಸಂಯೋಜನೆ ಮಾಡಿದ ಮೊದಲ ಗೀತೆಯಾಯಿತು. ತಂದೆಯ ಅಸಿಸ್ಟಂಟ್ ಆಗಿ ಆರ್.ಡಿ.ಬರ್ಮನ್ ಕೇವಲ ಸಂಗೀತ ಸಂಯೋಜನೆ ಮಾತ್ರ ಮಾಡ್ತಾ ಇರಲಿಲ್ಲ. ಅಗತ್ಯ ಬಿದ್ದಾಗ ಆರ್ಕೇಸ್ಟ್ರಾ ಜವಾಬ್ದಾರಿಯನ್ನು ನೋಡ್ಕೊಳ್ತಾ ಇದ್ದರು.  ಅವರು ಸಹಾಯಕರಾಗಿ ಕೆಲ್ಸ ಮಾಡಿದ ಚಲ್ತೀ ಕಾ ನಾಮ್‌ಗಾಡಿ, ಕಾಗಜ್ ಕೆ ಪೂಲ್, ತೇರಿಘರ್ ಕಿ ಸಾಮ್ನೆ, ಬಂಧಿನಿ, ಜಿದ್ದಿ, ಗೈಡ್, ತೀನ್‌ದೇವಿನ್ ಎಲ್ಲವೂ ಸೂಪರ್ ಹಿಟ್ ಸಿನಿಮಾಗಳೇ. ಆದರೆ ಸ್ವತಂತ್ರ ಸಂಗೀತ ನಿರ್ದೆಶಕರಾಗಬೇಕು ಅನ್ನೋ ಅವರ ಆಸೆ ಮಾತ್ರ ಬಹಳ ಬೇಗ ಈಡೇರಲಿಲ್ಲ. ತಂದೆಗೆ ಮಗನ ಮೇಲೆ ಎಷ್ಟೇ ಅಭಿಮಾನ ಇದ್ದರೂ ಅವನ ಟ್ಯಾಲೆಂಟ್‌ ಇಂದಲೇ ಮೇಲೆ ಬರಲಿ ಅನ್ನೋ ಹಠ. ಯಾರ ಬಳಿ ಕೂಡ ರೆಕಮಂಡೇಷನ್ ಮಾಡ್ತಾ ಇರಲಿಲ್ಲ.

ಕೊನೆಗೆ 1959ರಲ್ಲಿ ತಂದೆಯ ಕ್ಲೋಸ್ ಫ್ರೆಂಡ್‌ ಗುರುದತ್‌ ಅವರ ಅಸಿಸ್ಟೆಂಟ್‌ ಆಗಿದ್ದ ನಿರಂಜನ್‌, ಅವರಿಗೆ ಸಂಗೀತ ನಿರ್ದೇಶಕರಾಗುವ ಅವಕಾಶ ಕೊಟ್ಟರು. ‘ರಾಜ್’ ಚಿತ್ರದ ಹೆಸರು. ಅವರ ದುರಾದೃಷ್ಟ, ಸಿನಿಮಾ ರಿಲೀಸ್‌ಆಗ್ಲೇ ಇಲ್ಲ. ಎರಡು ವರ್ಷದ ನಂತರ ತಂದೆಯ ಇನ್ನೊಬ್ಬ ಸ್ನೇಹಿತ ಮತ್ತು ಖ್ಯಾತ ಹಾಸ್ಯನಟ ಮೆಹಮೂದ್ ಮೂಲಕ ಆರ್.ಡಿ.ಬರ್ಮನ್‌ ಅವರ ಇನ್ನಿಂಗ್ಸ್ ಆರಂಭವಾಯಿತು. ಮುಂದೆ ಆರ್.ಡಿ.ಬರ್ಮನ್‌ ಅವರಿಗೆ ಸಿನಿಮಾಗಳು ಸಿಗುತ್ತಲೇ ಬಂದವು. ಸಂಗೀತ ನಿರ್ದೇಶಕರಾಗಿ ಅವರ ಮೊದಲ ಹಿಟ್ ಸಿನಿಮಾ ‘ತೀಸ್ರಿ ಮಂಜಿಲ್’ ಸ್ವತಂತ್ರ ಸಂಗೀತ ನಿರ್ದೇಶಕರಾಗಿದ್ದರೂ ಆರ್.ಡಿ.ಬರ್ಮನ್‌ ತಮ್ಮ ತಂದೆಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಲೇ ಇದ್ದರು. ಅಲ್ಲಿ ಕಲಿತಿದ್ದನ್ನು ತಮ್ಮ ಚಿತ್ರಗಳಲ್ಲಿ ಪ್ರಯೋಗಿಸ್ತಾ ಇದ್ದರು. ‘ಆರಾಧನಾ’ ಎಸ್.ಡಿ.ಬರ್ಮನ್‌ ಅವರಿಗೆ ಸಂಗೀತ ನಿರ್ದೇಶನಕ್ಕೆಂದು ಬಂದ ಚಿತ್ರ. ಈ ಚಿತ್ರಕ್ಕೆ ಆರ್.ಡಿ.ಬರ್ಮನ್ ಸಹಾಯಕರಾಗಿದ್ದರು. ಎಸ್.ಡಿ.ಬರ್ಮನ್ ‘ಕೋರಾ ಕಾಗಜ್‌ಯೆ ಮನ್ ಮೇರಾ’ ಗೀತೆಯನ್ನು ಕಂಪೋಸ್ ಮಾಡುವಾಗ ಅನಾರೋಗ್ಯಕ್ಕೆ ಒಳಗಾದರು. ಆರ್.ಡಿ.ಬರ್ಮನ್ ಸಂಗೀತ ಸಂಯೋಜನೆಯನ್ನು ತಂದೆಯ ಪರವಾಗಿ ಮುಂದುವರೆಸಿದರು. ಮೇರಿ ಸಪ್ನೊಂಕಿ ರಾಣಿ ಮತ್ತು ರೂಪು ತೇರಾ ಮಸ್ತಾನ ಗೀತೆಗಳನ್ನು ಕಂಪೋಸ್ ಮಾಡಿ ತಂದೆಯವರಿಗೆ ತೋರಿಸಿದರು. ಅವರ ಮೆಚ್ಚಿದ್ದು ಮಾತ್ರವಲ್ಲ ಇಡೀ ಚಿತ್ರವನ್ನೇ ಮಗನಿಗೆ ಬಿಟ್ಟುಕೊಟ್ಟರು.

ಆಶಾ, ಅಕ್ಕ ಲತಾ ಮಂಗೇಶ್ಕರ್‌ ಅವರಿಗಿAತ ವಿಭಿನ್ನವಾದ ಶೈಲಿಯನ್ನು ಆಶಾ ರೂಪಿಸಿ ಕೊಳ್ಳೋಕೆ ಕಾರಣವಾದವರೇ ಓ.ಪಿ.ನಯ್ಯರ್. ಸರಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಆಶಾ ಭೋಂಸ್ಲೆಯವರ ಬೆಸ್ಟ್ ಸಾಂಗ್‌ಗಳು ಒ.ಪಿ.ನಯ್ಯರ್‌ ಅವರ ಕಂಪೋಸಿಷನ್‌ನಲ್ಲಿ ಬಂದಿದ್ದವು. ಆದರೆ ಸಣ್ಣ ವಿಷಯಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ದೂರವಾಗಿ ಬಿಟ್ಟರು. ಈ ಹಂತದಲ್ಲಿಯೇ ಆರ್.ಡಿ.ಬರ್ಮನ್‌ ಅವರು ಆಶಾ ಅವರ ಜೀವನವನ್ನು ಪ್ರವೇಶಿಸಿದರು. ಆಶಾ ಅವರಿಗೆ ಇದ್ದ ವರ್ಸಟೈಲ್ ಸಿಂಗಿಂಗ್ ಕ್ವಾಲಿಟಿಯನ್ನು ಬಳಸಿ ರಾಕ್, ಡಿಸ್ಕೋ, ಗಜಲ್, ಕ್ಲಾಸಿಕಲ್ ಹೀಗೆ ಹಿಂದಿ ಚಿತ್ರರಂಗ ಬೆರಗಾಗುವ ಗೀತೆಗಳನ್ನು ಆರ್.ಡಿ.ಬರ್ಮನ್‌ ಕ್ರಿಯೇಟ್ ಮಾಡ್ತಾನೆ ಹೋದರು. ಯಾದೋಂಕಿ ಬಾರಾತ್‌ ಚಿತ್ರದ ‘ಚುರಾಲಿಯಾ ಹೈ ತುಮ್ನೆ’, ಕ್ಯಾರವಾನ್‌ ಚಿತ್ರದ ‘ಪಿಯಾತೋ ಅಬ್‌ತೋ ಆಜಾ’ ಗೀತೆಗಳು ಯುವ ಪೀಳಿಗೆಯನ್ನು ಹೆಚ್ಚೆದ್ದು ಕುಣಿಯವಂತೆ ಮಾಡಿದವು.

ಆರ್.ಡಿ.ಬರ್ಮನ್‌ ಅವರ ಮೊದಲ ಹೆಂಡತಿ ರೀತಾ ಪಟೇಲ್. ರೀತಾ ಬರ್ಮನ್‌ ಅವರ ಹುಚ್ಚು ಫ್ಯಾನ್‌ಆಗಿದ್ದರು. 1966ರಲ್ಲಿ ಇಬ್ಬರೂ ವಿವಾಹವಾದರು. ಆದರೆ ಈ ಸಂಬಂಧ ಬಹಳ ಕಾಲ ಉಳಿಯಲಿಲ್ಲ. 1971ರಲ್ಲಿ ಇಬ್ಬರೂ ಬೇರೆಯಾದರು. ರೀತಾ ಡಿವೋರ್ಸ್‌ಗೆ ಅಪ್ಲಿಕೇಷನ್ ಹಾಕಿದಾಗ ಆರ್.ಡಿ.ಬರ್ಮನ್ ಪರಿಚಯ್ ಸಿನಿಮಾಕ್ಕೆ ಕಂಪೊಸ್ ಮಾಡುತ್ತಾ ಇದ್ದರು. ಅವರಿಗೆ ಹೆಂಡತಿ ಬೆಲೆ ಗೊತ್ತಾಗಿತ್ತು. ಆದರೆ ತುಂಬಾ ತಡವಾಗಿತ್ತು ‘ಮುಸಾಫಿರ್ ಹೂ ಯಾರೋ’ ಅನ್ನೋ ಅಮರಗೀತೆ ಕ್ರಿಯೇಟ್ ಮಾಡಿದ ನಂತರ ಡಿವೋರ್ಸ್‌ ಪೇಪರ್‌ಗಳಿಗೆ ಸಹಿ ಮಾಡಿದರು. ಮತ್ತೆ ಒಂಟಿಯಾಗಿ ಸಂಗೀತದ ಜೊತೆ ಸಾಕ್ತಾ ಇದ್ದ ಆರ್.ಡಿ.ಬರ್ಮನ್‌ಅವರ ಜೀವನದಲ್ಲಿ ಬಂದೋರು ಆಶಾ ಭೋಂಸ್ಲೆ. ಇಬ್ಬರ ಕಾಂಬಿನೇಷನ್‌ನಲ್ಲಿ ಎವರ್‌ಗ್ರೀನ್ ಹಾಡುಗಳು ಮೂಡಿ ಬಂದವು. ಸಂಗೀತದ ಕುರಿತು ಇಬ್ಬರೂ ಸಾಕಷ್ಟು ಚರ್ಚಿಸ್ತಾ ಇದ್ದರು. ಆಶಾ ಅನೇಕ ಸಂದರ್ಭದಲ್ಲಿ ವಾದ ಕೂಡ ಮಾಡ್ತಾ ಇದ್ದರು. 1980ರಲ್ಲಿ ಇಬ್ಬರೂ ವಿವಾಹವಾದರು. ಕೊನೆಯವರೆಗೂ ಚೆನ್ನಾಗಿಯೇ ನಡೆದ ಈ ಸಂಬಂಧದಲ್ಲಿ ಒಂದು ಅಪಸ್ವರ ಕೂಡ ಇತ್ತು. ಆರ್.ಡಿ.ಬರ್ಮನ್‌ ಅವರ ತಾಯಿ ಮೀರಾ ಆಜಮೀರ್‌ಅವರ ಕುರಿತು ಆಶಾ ಅವರಿಗಿದ್ದ ಅಸಮಧಾನ.

1970ರ ದಶಕ ಆರ್.ಡಿ.ಬರ್ಮನ್‌, ಕಿಶೋರ್‌ಕುಮಾರ್ ಮತ್ತು ರಾಜೇಶ್‌ ಖನ್ನಾ ಅವರ ಜೋಡಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಕಾಲ. 32 ಸಿನಿಮಾಗಳನ್ನು ಈ ಮೂವರು ಸೇರಿ ರೂಪಿಸಿದರು. ಎಲ್ಲದರಲ್ಲೂ ಒಂದಕ್ಕಿಂತ ಒಂದು ಸುಂದರವಾದ ಗೀತೆಗಳು. ಕಟಿಪತಂಗ್, ಆರಾಧನಾ ಈ ಸರಣಿಯಲ್ಲಿ ಎವರ್‌ಗ್ರೀನ್ ಎನ್ನಿಸಿಕೊಂಡವು.  ಆರ್.ಡಿ.ಬರ್ಮನ್‌ ಅವರ ಹೆಸರನ್ನೂ ಇಂದಿಗೂ ಉಳಿಸಿರುವ ಚಿತ್ರಗಳ ಪೈಕಿ ದೇವಾನಂದ್‌ ಅವರ ‘ಹರೇರಾಮ ಹರೇ ಕೃಷ್ಣ’ ಬಹಳ ಮುಖ್ಯವಾದದ್ದು. ಆರ್.ಡಿ.ಬರ್ಮನ್ ಮುಂದೆ ಯಶಸ್ವಿ ಚಿತ್ರಗಳ ಸರೆಮಾಲೆಯನ್ನೇ ಕೊಟ್ಟರು ಸೀತಾ ಔರ್‌ ಗೀತಾ, ರಾಮ್‌ಪುರ್ ಕಾ ಲಕ್ಷ್ಮಣ್‌, ಮೇರಾ ಜೀವನ್ ಸಾಥಿ, ಯಾದೋಂಕಿ ಬಾರಾತ್‌, ಅಪ್ ಕಿ ಕಸಂ, ಶೋಲೆ, ಆಂಧಿ ಎಲ್ಲವೂ ಮೈಲ್ ಸ್ಟೋನ್ ಎನ್ನಿಸಿಕೊಂಡ ಚಿತ್ರಗಳೇ. ಎಲ್ಲದರ ಯಶಸ್ಸಿಗೆ ಆರ್.ಡಿ.ಬರ್ಮನ್‌ ಅವರ ಸಂಗೀತ ಕೂಡ ಮುಖ್ಯವಾದ ಕಾರಣವಾಗಿತ್ತು.

ಕಿಶೋರ್‌ಕುಮಾರ್‌ ಅವರಿಗೆ ಮಾತ್ರ ಒಳ್ಳೆಯ ಹಾಡುಗಳನ್ನು ಆರ್.ಡಿ.ಬರ್ಮನ್‌ ಕಂಪೋಸ್ ಮಾಡ್ತಾರೆ ಎಂದು ಮಹಮದ್‌ ರಫಿ ಪತ್ರಿಕಾಗೋಷ್ಟಿಯಲ್ಲಿ ನೇರವಾದ ಅಪಾದನೆ ಮಾಡಿದ್ದರು. ಮುಂದಿನ ಚಿತ್ರ ‘ಹಮ್ ಕಿಸೀಸೆ ಕಮ್ ನಹಿ’ ಚಿತ್ರದಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿದ ಆರ್.ಡಿ.ಬರ್ಮನ್‌ ಒಂದು ಹಾಡಿಗೆ ಉದ್ದೇಶ ಪೂರ್ವಕವಾಗಿ ಮಹಮದ್‌ ರಫಿಯವರನ್ನು ಆಯ್ಕೆ ಮಾಡಿಕೊಂಡರು. ರಫಿಯವರನ್ನು ಕರೆದು ‘ನಾನು ನಿಮಗೆ ನನ್ನ ಬೆಸ್ಟ್‌ ಟ್ಯೂನ್‌ ಕೊಡ್ತೀನಿ. ಇದಕ್ಕಾಗಿ ನಿಮಗೆ ನ್ಯಾಷನಲ್‌ ಅವಾರ್ಡ್ ಬರದಿದ್ದರೆ ಕೇಳಿ’ ಎಂದರು. ಟ್ಯೂನ್ ಕೇಳಿ ಖುಷಿಯಾದ ಮಹಮದ್‌ರಫಿ ‘ನನಗೆ ನ್ಯಾಷನಲ್‌ ಅವಾರ್ಡ್ ಬರೆದಿದ್ದರೂ ಪರವಾಗಿಲ್ಲ ಇಂತಹ ಸೊಗಸಾದ ಟ್ಯೂನ್‌ಗೆ ಹಾಡಿದ ತೃಪ್ತಿ ಸಿಕ್ಕಿದೆ’ ಎಂದರು. ವಿಶೇಷ ಎಂದರೆ ಈ ಗೀತೆ ‘ಕ್ಯಾ ಹುವಾ ತೇರೆ ವಾದಾ’ ಮಹಮದ್‌ ರಫಿಯವರಿಗೆ ನ್ಯಾಷನಲ್‌ ಆವಾರ್ಡ್‌ ತಂದುಕೊಟ್ಟತು. ಕೂಡ. ಹಿಂದಿ ಚಿತ್ರರಂಗದ ಅನಭಿಷಿಕ್ತ ದೊರೆಯ ತರಹ ಮೆರೆಯುತ್ತಿದ್ದ ಆರ್.ಡಿ.ಬರ್ಮನ್ 1980ರ ದಶಕದಲ್ಲಿ ಹಿನ್ನಡೆಯನ್ನು ಕಂಡರು. ಆಗ ಸವಾಲಾಗುವಂತೆ ‘ಇಜ್ಜತ್’ ಚಿತ್ರಕ್ಕೆ ಬರ್ಮನ್ ಸಂಗೀತ ನೀಡಿದರು. ಇದು ಅವರ ಶ್ರೇಷ್ಟ ಸಂಗೀತ ಸಂಯೋಜನೆಯ ಚಿತ್ರ ಎಂದು ಸಿನಿಮಾ ಇತಿಹಾಸಕಾರರು ಗುರುತಿಸುತ್ತಾರೆ. ಈ ಚಿತ್ರಕ್ಕೆ ಆಶಾ ಭೋಂಸ್ಲೆ ಮತ್ತು ಗುಲ್ಜಾರ್ ರಾಷ್ಟ್ರಪ್ರಶಸ್ತಿಯನ್ನು ಪಡೆದರು. ಆದರೆ ಬರ್ಮನ್‌ ಅವರಿಗೆ ಯಾವ ಪುರಸ್ಕಾರವೂ ದೊರಕಲಿಲ್ಲ.

1988ರಲ್ಲಿ ಆರ್.ಡಿ.ಬರ್ಮನ್ ಮೊದಲ ಸಲ ಹೃದಯಾಘಾತಕ್ಕೆ ಒಳಗಾದರು. ಸತತವಾದ ದುಡಿಮೆ, ಅವಕಾಶಗಳು ತಪ್ಪಿ ಹೋಗುತ್ತಿದ್ದ ಒತ್ತಡ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸಿದ್ದವು. ಲಂಡನ್‌ನ ಪ್ರಿನ್ಸಸ್‌ಗ್ರೇಸ್ ಹಾಸ್ಪಿಟಲ್‌ನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ಕೂಡ ಅವರು ಸಂಗೀತದ ಕುರಿತು ಯೋಚಿಸುತ್ತಾ ವೈದ್ಯರ ಸೂಚನೆಯನ್ನು ಮೀರಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಹೋದರು. ಕೇವಲ 55ನೇ ವರ್ಷದಲ್ಲಿ 1994ರ ಜನವರಿ ನಾಲ್ಕರಂದು ಎರಡನೇ ಹೃದಯಾಘಾತ ಅವರ ಬದುಕಿಗೆ ಕೊನೆಯನ್ನು ಹಾಡಿತು. ಅಪೂರ್ವವಾದ ಭಾವಗೀತೆ ಅಕಾಲದಲ್ಲೇ ಮುಗಿದುಹೋಯಿತು. ವಿಪರ್ಯಾಸವೆಂದರೆ ಅವರು ಸಂಗೀತ ನೀಡಿದ್ದ ಕೊನೆಯ ಚಿತ್ರಗಳಲ್ಲೊಂದಾದ ‘1942 ಎ ಲವ್ ಸ್ಟೋರಿ’ ಅದ್ಭುತ ಗೆಲುವನ್ನು ಪಡೆಯಿತು. ಅವರು ಕಂಪೋಸ್ ಮಾಡಿದ್ದ ಹಾಡುಗಳು ಜನಪ್ರಿಯತೆಯನ್ನೇ ಪಡೆದವು. ಇದಕ್ಕಾಗಿ ಅವರಿಗೆ ಮರಣೋತ್ತರ ಫಿಲಂಫೇರ್ ಬಹುಮಾನ ಕೂಡ ಬಂದಿತು. ಆಶಾ ಭೋಂಸ್ಲೆಯವರು ಗುರುತಿಸಿದಂತೆ ಈ ಗೆಲುವು ಅವರು ಬದುಕಿದ್ದಾಗಲೇ ದೊರಕಿದ್ದರೆ ಇನ್ನಷ್ಟು ವರ್ಷ ಅವರು ನಮ್ಮ ಜೊತೆ ಇರುತ್ತಿದ್ದರು.

ಈ ಬರಹಗಳನ್ನೂ ಓದಿ