
ಸಿನಿಮಾ ವಿಶ್ಲೇಷಕ
ರಾನ – ಅನಾಸ್‌ರ ಸಿನಿಮಾವು ಅರಬ್ ನಾಡಿನ ಸಂವೇದನೆಯಿಂದ ಬರುತ್ತಿರುವ ಹೊಸ ಸಿನಿಮಾಗಳಿಗೆ ಮೌಲ್ಯಯುತ ಸೇರ್ಪಡೆಯಾಗಿದ್ದರೆ, ಅಮೇರಿಸರ ಸಿನಿಮಾವು 1960ರ ದಶಕದ ‘ಫ್ರೆಂಚ್ ಹೊಸ ಅಲೆಯ’ ವ್ಯಾಕರಣವು ಮುಖ್ಯವಾಹಿನಿಯ ಫ್ರೆಂಚ್ ಸಿನಿಮಾಗಳನ್ನು ಪ್ರಭಾವಿಸಿರುವ ಬಗೆಗೆ ಉದಾಹರಣೆಯಾಗಿದೆ.
ರಾಜಕೀಯ ಸಿನಿಮಾವೆಂದರೆ ಏನು? ಪ್ರಭುತ್ವ – ಪಕ್ಷ ರಾಜಕೀಯಗಳಲ್ಲಿ ತೊಡಗಿರುವ ಪಾತ್ರಗಳನ್ನು ರಚಿಸಿ ಮಾಡಿದ ಸಿನಿಮಾವಾ? ಒಂದು ಕಾಲ – ನೆಲದ ರಾಜಕೀಯ ವಿದ್ಯಮಾನವನ್ನು ಆಧಾರಿಸಿ ರಚಿಸಿರುವ ಸಿನಿಮಾವಾ? ಅಥವಾ ಒಂದು ಕಾಲದ ಪ್ರಭುತ್ವ ರಾಜಕೀಯದ ಹಿನ್ನೆಲೆಯಲ್ಲಿ ನಾಗರಿಕ ಸಮಾಜದ ಸಂಸ್ಥೆಗಳಲ್ಲಿನ ವಿದ್ಯಮಾನ -ಘಟನಾವಳಿಗಳನ್ನು ವಸ್ತುವಾಗಿಸಿಕೊಂಡಿರುವ ಸಿನಿಮಾವಾ? ಪ್ರಭುತ್ವ -ಸಮಾಜಗಳನ್ನು ಪ್ರಭಾವಿಸುವ ಮತ ಸಿದ್ಧಾಂತಗಳ ಪರಾಮರ್ಶೆ ಮಾಡುವ ಸಿನಿಮಾವಾ? ರಾಜಕೀಯ ಸಿನೆಮಾವೆಂದರೆ ಇವೆಲ್ಲವೂ ಹೌದಾದರೂ, ನಾಲ್ಕು ಬಗೆಗಳಲ್ಲಿ ಕೊನೆಯ ಎರಡು ಬಗೆಯನ್ನು ರಾಜಕೀಯ ಸಿನಿಮಾಗಳೆಂದು ಗುರುತಿಸದೇ ಇರುವುದು ಸಾಮಾನ್ಯವಾಗಿದೆ.
ಹಾಗಾಗಿ, 21ನೇ ಶತಮಾನದ ಸಿರಿಯಾ ದೇಶದ ಪ್ರಭುತ್ವ ವಿರೋಧಿ ಹೋರಾಟವನ್ನು ವಸ್ತುವಾಗಿ ಉಳ್ಳ ‘ದಿ ಟ್ರಾನ್ಸ್‌ಲೇಟರ್’ (ನಿರ್ದೇಶನ: ರಾನ ಕಝಕ್, ಅನಾಸ್ ಕಝಾಕ್) ಚಿತ್ರವನ್ನು ‘ರಾಜಕೀಯ ನಾಟಕ’ದ ಪ್ರಕಾರಕ್ಕೆ ಸೇರಿಸುತ್ತಾರೆ; ಜೀನ್ ಪಿಯರ್ರೆ ಅಮೇರಿಸ್ ನಿರ್ದೇಶನದ ‘ಪ್ರೊಫೆಷನ್ ಡು ಪೆರೆ’ ಫ್ರೆಂಚ್ ಸಿನಿಮಾವನ್ನು ‘ಸಂಸಾರಿಕ ನಾಟಕ’ ಪ್ರಕಾರಕ್ಕೆ ಸೇರಿಸಲಾಗುತ್ತದೆ. ಮೊದಲನೆಯದು ರೋಚಕವಾಗಿಯೂ, ಎರಡನೆಯದು ಭಾವನೆಗಳ ಆಟವಾಗಿಯೂ ಇರಬೇಕು ಎಂಬ ನಿರೀಕ್ಷೆಯು ಪ್ರೇಕ್ಷಕರಲ್ಲಿ ರೂಢಿಯಾಗಿದೆ.
ಸರಿ, ಈ ಸಾಧಾರಣ ಗುಣಗಳನ್ನು ಹೊಂದಿದ್ದೂ, ಅವು ಮನುಷ್ಯರ ಸಾಮಾಜಿಕ ಬದುಕಿನ ಗತಿ – ಸ್ಥಿತಿಗಳ ಹುಡುಕಾಟವಾಗಿದ್ದರೆ, ಕಣ್ಣಿಗೆ ಕಾಣುವ ವಾಸ್ತವದ ಒಳ ಪದರಗಳಲ್ಲಿರುವ ವ್ಯವಸ್ಥೆಯ ಗೋಜಲು, ವಿರೂಪಗಳನ್ನು ಮೇಲ್ಪದರ ಕತ್ತರಿಸಿ ತೋರಿದರೆ, ಪ್ರಕಾರಗಳಾಚೆಯೂ ಹೆಚ್ಚು ಮೌಲಿಕ ಸಿನಿಮಾಗಳಾಗುತ್ತವೆ. ಈ ಎರಡೂ ಸಿನಿಮಾಗಳೂ ಆ ಹೆಚ್ಚಿನ ಮೌಲಿಕತೆಯನ್ನು ಪಡೆದಿವೆ. ರೋಚಕತೆಯೂ, ಭಾವನೆಗಳ ಆಟವೂ, ಕಾಲ – ನೆಲದ ರಾಜಕೀಯವು ಮನುಷ್ಯ ಬದುಕಿನ ವಿಧಿಯಾಗುವ ಆತಂಕವನ್ನು ಪ್ರೇಕ್ಷಕರ ಅರಿವಿಗೆ ತರುವ ಬಗೆಯ ಕಲಾಕಟ್ಟನ್ನು ಪಡೆದಿವೆ.
ರಾನ – ಅನಾಸ್‌ರ ಸಿನಿಮಾವು ಅರಬ್ ನಾಡಿನ ಸಂವೇದನೆಯಿಂದ ಬರುತ್ತಿರುವ ಹೊಸ ಸಿನಿಮಾಗಳಿಗೆ ಮೌಲ್ಯಯುತ ಸೇರ್ಪಡೆಯಾಗಿದ್ದರೆ, ಅಮೇರಿಸರ ಸಿನಿಮಾವು 1960ರ ದಶಕದ ‘ಫ್ರೆಂಚ್ ಹೊಸ ಅಲೆಯ’ ವ್ಯಾಕರಣವು ಮುಖ್ಯವಾಹಿನಿಯ ಫ್ರೆಂಚ್ ಸಿನಿಮಾಗಳನ್ನು ಪ್ರಭಾವಿಸಿರುವ ಬಗೆಗೆ ಉದಾಹರಣೆಯಾಗಿದೆ. ಮುಖ್ಯವಾಗಿ, ಎರಡಕ್ಕೂ ತಾವು ಏನನ್ನು ಹೇಳಬೇಕು ಎಂಬುದರ ಖಚಿತತೆ ಇದ್ದು, ದೃಶ್ಯ ರಚನೆಯಲ್ಲಿ ಅದನ್ನು ಸಾಧಿಸುವ ಸೃಜನಶೀಲ ಕಾಯಕವು ಅವುಗಳನ್ನು ಸಾಧಾರಣತೆಯಿಂದ ಮೇಲೆತ್ತಿದೆ.
